ಗುರು ಪರಂಪರೆಯ ಸಂಗೀತ ಕಲೆ ಮತ್ತು ಶಿಷ್ಯ ವೃಂದ: ಅಮರ್ ದೀಪ್ ಪಿ. ಎಸ್.

"ಸ ರಿ ಗ ಮ ಪ ದ ನಿ  ಸಾವಿರದ ಶರಣು …… "ಎಂದು ಅಣ್ಣಾವ್ರು ಹಾಡುತ್ತಿದ್ದರೆ ನಾನು ಆ ಹಾಡನ್ನು ಬಹಳ ಇಷ್ಟಪಟ್ಟು ಕೇಳುತ್ತಿದ್ದೆ.  ಬರೀ  ಹಾಡಲ್ಲ, ಆ ಚಿತ್ರವನ್ನೂ ಅಷ್ಟೇ ಇಷ್ಟಪಟ್ಟು ನೋಡಿದ್ದೆ. ಅದು  ಅದ್ಭುತ ಸಂಗೀತ ಶಕ್ತಿ ಗಾಯಯೋಗಿ ಪಂಡಿತ್  ಶ್ರೀ ಪಂಚಾಕ್ಷರಿ ಗವಾಯಿಗಳ ಕುರಿತು ತಯಾರಿಸಿದ ಚಿತ್ರ. ಅವರ ಜೀವನಗಾಥೆಯ  ಒಂದು ಪವಾಡ ಸೃಷ್ಟಿ ಕಣ್ಣ ತುಂಬಿಕೊಳ್ಳುತ್ತದೆ. ಅದು ಚಲನಚಿತ್ರದ ಮಾತಾಯಿತು. ವಾಸ್ತವವಾಗಿ  ಈ ಮಾತು ಗದುಗಿನ ಶ್ರೀ ವೀರೇಶ್ವರ ಆಶ್ರಮದಲ್ಲಿ ಸಂಗೀತ ವಿದ್ಯಾ ದಾನ ಪಡೆದವರ ಬಾಯಲ್ಲಿ ಕೇಳುವಾಗ ಹೆಚ್ಚು ಆರ್ದ್ರವಾಗಿ, ಭಕ್ತಿಯಿಂದ ಮತ್ತು ತಮ್ಮ ಸಂಗೀತ, ಹಾಗೂ ಜೀವನ ಎರಡನ್ನು ಅಂಥ ಮಹಾನ್ ಗುರುವು ಮುನ್ನಡೆಸಿದ ಧನ್ಯತೆ ಕಾಣುತ್ತದೆ. ಪಂಡಿತ್  ಶ್ರೀ ಪಂಚಾಕ್ಷರಿ ಗವಾಯಿಗಳವರ ಶಿಷ್ಯರಾದ ಪಂಡಿತ್ ಶ್ರೀ ಪುಟ್ಟರಾಜ ಗವಾಯಿಗಳು ಸಹ ಅಂಧ, ಅನಾಥ ಮಕ್ಕಳಿಗೆ ಆಶ್ರಯ, ಅಕ್ಷರ ಹಾಗೂ  ಆಸ್ಥೆ ವಹಿಸಿ ಸಂಗೀತದಲ್ಲಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವಂಥ, ಹಿಂದೂಸ್ತಾನಿ ಸಂಗೀತ, ತಬಲಾ, ಹಾರ್ಮೋ ನಿಯಂ, ಇನ್ನು ಮುಂತಾದ ವಾದ್ಯ ಗಳಲ್ಲಿ ವಿದ್ಯಾದಾನ ಮಾಡಿ, ಪರಿಣಿತಿ ನೀಡಿ ನೂರಾರು ಶಿಷ್ಯಂದಿರನ್ನು ತಯಾರಿಸಿದ ಕೀರ್ತಿಗೆ, ಗೌರವಕ್ಕೆ ಪಾತ್ರರು. ದೇಶದಲ್ಲೆಡೆ ಅಸಂಖ್ಯಾತ  ಶಿಷ್ಯರನ್ನು ಹೊಂದಿರುವಂಥ ಖ್ಯಾತಿ ಅಕ್ಷರಶಃ  ಪಂಡಿತ್  ಶ್ರೀ ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ. ನನ್ನ ಚಿಕ್ಕ ವಯಸ್ಸಿನಲ್ಲಿ ನಮ್ಮೂರಿನ ಪುರಾಣ ಗಳಲ್ಲಿ ಅವರನ್ನು  ಗೌರವ ಪೂರ್ವಕವಾಗಿ ಕರೆ ತಂದಾಗ  ಬಹಳ ಹತ್ತಿರದಿಂದ, ಬೆರಗಿನಿಂದ ನೋಡಿದ್ದೇನೆ. ಅಂಥಹ ಗುರು ಶಿಷ್ಯ ಪರಂಪರೆಯ ಕೊಂಡಿಯೊಂದು ಈ ಭಾಗದಲ್ಲಿ ಬೇರೂರಿದೆ, ಮತ್ತದು ವಿಸ್ತರಿಸುತ್ತಲೂ ಇದೆ. 

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಪ್ರತಿ ವರ್ಷವೂ ಅದೊಂದು ಬರೀ ಜಾತ್ರೆಯಾಗಿರದೇ ಧಾರ್ಮಿಕ, ಆಧ್ಯಾತ್ಮ , ಸಂಗೀತ ಮತ್ತು ಸಂಸ್ಕೃತಿಯ ಪರಂಪರೆಯನ್ನು ಮುತುವರ್ಜಿಯಿಂದ  ಮುನ್ನಡೆಸುವಂಥ, ವೃದ್ಧಿಗೊಳಿಸುವಂಥ ಪದ್ಧತಿಯನ್ನು ಈಗಿನ ಶ್ರೀ ಗುರು ಅಭಿನವ ಗವಿಸಿದ್ದ್ಹೇಶ್ವರ ಸ್ವಾಮಿಜೀಯವರು ನಡೆಸಿಕೊಂಡು ಬಂದಿದ್ದಾರೆ. ಅದೇ ಮಠದ ಒಂದು ಪುಟ್ಟ ಕೋಣೆಯಲ್ಲಿ ಹಾರ್ಮೋ ನಿಯಂ ಹಿಡಿದು ಒಂದಿಷ್ಟು ವಿಧ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತವನ್ನು ಹೇಳಿಕೊಡುತ್ತಾ ತಮ್ಮ ಕಾಯಕವನ್ನು ನಿರ್ವಹಿಸುತ್ತಿರುವ ಪಂಡಿತ್  ಶ್ರೀ ಪುಟ್ಟರಾಜ ಗವಾಯಿಗಳ ವೀರೇಶ್ವರ ಆಶ್ರಮದ ಶಿಷ್ಯರೊಬ್ಬರಾದ ಶ್ರೀ ವೀರೇಶ್  ಹಿಟ್ನಾಳ್ ಇದ್ದಾರೆ. ಅವರು ಹಿಂದೂಸ್ತಾನಿ ಗಾಯನ, ತಬಲಾ, ಕೊಳಲು ವಾಧ್ಯಗಳಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ.

ಒಂದಿಷ್ಟು ವರ್ಷಗಳ ಹಿಂದೆ ಕೇವಲ ತಮ್ಮ ಸಂಗೀತ  ಜ್ಞಾನದ ಬುತ್ತಿ ಮಾತ್ರ ಹೊತ್ತುಕೊಂಡು ಬಂದ ಇವರಲ್ಲಿ  ಆರಂಭದಿಂದ ಇಲ್ಲಿವರೆಗೆ ಸುಮಾರು ವಿಧ್ಯಾರ್ಥಿಗಳು ಸಂಗೀತ ಕಲಿತು ಕೆಲವರು ಸಂಗೀತ ಶಿಕ್ಷಕರಾಗಿದ್ದಾರೆ. ಹಾಗೂ ಬೇರೆ ಬೇರೆ ಹೊಸದಾಗಿ ಕಲಿಕಾ ಕೇಂದ್ರಗಳನ್ನು ತೆರೆದು ಸಂಗೀತ ಹೇಳಿ ಕೊಡುತ್ತಿದ್ದಾರೆ. ಇನ್ನು ಕೆಲವರು ಸಂಗೀತದಲ್ಲಿ ಓಂ ಪ್ರಥಮದಿಂದ ವಿಧ್ವತ್  ಪರೀಕ್ಷೆವರೆಗೆ ಅಭ್ಯಾಸ ಮಾಡುತ್ತಿರುವ, ಪ್ರೈಮರಿ ಶಾಲೆಯಲ್ಲಿ ಕಲಿಯುತ್ತಿರುವ ಚಿಣ್ಣರಿಂದ ಹಿಡಿದು ಕಾಲೇಜಿನ ಓದು ಓದುತ್ತಿರು ವವರವರೆಗಿನ  ವಿಧ್ಯಾರ್ಥಿಗಳಿದ್ದಾರೆ.ಅದರಲ್ಲೂ ಇತ್ತೀಚಿನ ಚಿಣ್ಣರು ಆಂಗ್ಲ ಮಾಧ್ಯಮದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದರೂ ಸಂಗೀತ ಶಾಲೆಯಲ್ಲಿ ಸಂಗೀತದ ಅಭ್ಯಾಸದ ಜೊತೆಗೆ ಕನ್ನಡ ಭಾಷೆ ಬಳಕೆಯನ್ನು, ಓದನ್ನು ಸ್ಪಷ್ಟವಾಗಿ ಕಲಿಯುವಂತೆ ಪ್ರೋತ್ಸಾಹಿಸುತ್ತಾರೆ. ಇಲ್ಲಿಯವರೆಗೆ ನೂರಾರು ಸಂಗೀತ ಕಾರ್ಯ ಕ್ರಮಗಳನ್ನು ಹಳ್ಳಿ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ, ಕೇವಲ ವೇದಿಕೆಯೊಂದನ್ನು ಕಲ್ಪಿಸಿ, ಸಭಿಕ ರನ್ನು ಸೇರಿಸಿ  "ಪ್ರೋತ್ಸಾಹಿಸಿದರೂ"  ಸಾಕು, ಸಂಗೀತ ವಿದ್ಯಾಪೀಠದ  ವಿಧ್ಯಾರ್ಥಿಗಳನ್ನು ತಯಾರು ಗೊಳಿಸಿ ಉತ್ತಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ, ಮತ್ತು ನಡೆಸಿಕೊಡುತ್ತಾರೆ.   

ಇವರ ಆಸಕ್ತಿಗೆ ಮತ್ತು ಶ್ರೀ ಮಠದ ಅಭಿಮಾನದ ಫಲವಾಗಿ ಸಂಗೀತ ಕಾರ್ಯಕ್ರಮಕ್ಕೆ ಅಗತ್ಯವಿರುವ ವೇದಿಕೆಯ ಪರಿಕರಗಳೆಲ್ಲವನ್ನು ಒಟ್ಟುಗೂಡಿಸಿ, ವೇದಿಕೆ ಮಾತ್ರವಿದ್ದರೆ ಸಾಕು,  ದಾಸರ ಪದ, ತತ್ವ ಪದ ಭಕ್ತಿ ಗೀತೆ, ಜಾನಪದ ಗೀತೆ, ಭಾವ ಗೀತೆ ಹೀಗೆ ಹಲವು ಮಜಲುಗಳ ಭಾವವಿರುವ ಸಂಗೀತದ ಘಮಲು ಹರಡಲು ವಿಧ್ಯಾರ್ಥಿಗಳೊಂದಿಗೆ ಸಿದ್ಧವಾಗುತ್ತಾರೆ. ಉದ್ದೇಶ ಸ್ಪಷ್ಟ; ಸಂಗೀತ ಕಲಿಯುವ ವಿಧ್ಯಾರ್ಥಿಗಳಿಗೆ ವೇದಿಕೆಯಲ್ಲಿ ಹಾಡುವ ಕಲೆ ರೂಢಿಯಾಗಬೇಕು, ಸಂಗೀತದ ಕಲಿಕೆಗೆ ಆಸಕ್ತಿ, ಅನುಕೂಲ ಮತ್ತು ವ್ಯಾಪ್ತಿಯು ದೊರಕುವಂಥ ವಾತಾವರಣ ಸೃಷ್ಟಿಯಾಗುವುದೇ ಹೊರತು ಮತ್ಯಾ ವುದಲ್ಲವೆಂದು ಅವರ ವೈಯುಕ್ತಿಕ ಅಭಿಪ್ರಾಯವಾಗಿರಬಹುದು ಮತ್ತು ಸಾರ್ವಜನಿಕವಾದ ಕಳಕಳಿಯೂ ಸಹ.  ಅವರು ತಮ್ಮಲ್ಲಿ ಸಂಗೀತ ಕಲಿಯುವ ವಿಧ್ಯಾರ್ಥಿಗಳನ್ನು ಕೇವಲ ಸಂಗೀತ ಕಲಿಕೆಗೆ ಮಾತ್ರ ಸೀಮಿತಗೊಳಿಸದೇ ವೇದಿಕೆ ಸಿಧ್ದಗೊಳಿಸಲು,(back stage arrangements such as sound system, stage arrangements,etc)ವೇದಿಕೆಯಲ್ಲಿ ಕಾರ್ಯಕ್ರಮವನ್ನು ಪ್ರತಿ ಯೊಬ್ಬರೂ ನಿರೂಪಣೆಯನ್ನು ಕನ್ನಡದಲ್ಲಿ ಅತ್ಯಂತ ಸ್ವಚ್ಛವಾಗಿ ಆಕರ್ಷಣೀಯವಾಗಿ ಮಾತನಾಡಲು ಅವಕಾಶ ಮತ್ತು ಅವಶ್ಯವನ್ನು ಕಲ್ಪಿಸಿದ್ದಾರೆ. 

ಅವರ ಈ ಒಂದು ಕ್ರಮ ಸಂಗೀತ ಕಲಿಯುವ ವಿಧ್ಯಾರ್ಥಿಗಳಲ್ಲಿ ಸಂಗೀತದ ಜೊತೆ ಜೊತೆಯಲ್ಲಿಯೇ ಕನ್ನಡ ಭಾಷೆಯ ಮೇಲಿನ ಹಿಡಿತವನ್ನು ವೃದ್ಧಿಗೊಳಿಸಿಕೊಳ್ಳಬಹುದು.  ಒಂದು ಕಾರ್ಯಕ್ರಮಕ್ಕೆ ಬೇಕಾದ ತಯಾರಿಯನ್ನು ಅಚ್ಚುಕಟ್ಟಾಗಿ ಪಾಲಿಸುವ ಇವರ ಶಿಷ್ಯಂದಿರಾದ ಅಂಧ ಕಲಾವಿದ ಗೌಡೇಶ್ ಪವಾರ್, ಶಕುಂತಲಾ  ಬಿನ್ನಾಳ್, ಶಕುಂತಲಾ ಕಟ್ಟಿ, ಅನುಶ್ರೀ ಶೆಟ್ಟರ್, ವರ್ಷಿಣಿ ಸಂಕ್ಲಾಪುರ್, ಸಂಕಲ್ಪ್ ಅವರಾದಿ, ಇನ್ನು ಹಲವು ಚಿಕ್ಕ ಚಿಕ್ಕ ವಿಧ್ಯಾರ್ಥಿಗಳು ಉತ್ಸವಗಳಲ್ಲಿ, ಆಸಕ್ತರು ಆಹ್ವಾನಿಸಿದ ವೇದಿಕೆಯಲ್ಲಿ, ದೇಶದಲ್ಲಿ ಉತ್ತಮ ಸಾಧನೆ ಮಾಡಿದ ಸಂಗೀತಗಾರರು ಅಂದರೆ ಪಂಡಿತ್  ಶ್ರೀ.ವೆಂಕ ಟೇಶ್ ಕುಮಾರ್, ಶ್ರೀ ಪ್ರವೀಣ್ ಗೋಡ್ಖಿಂಡಿ, ಶ್ರೀ  ಹರಿಪ್ರಸಾದ್ ಚೌರಾಸಿಯ, ಪಂಡಿತ್  ಶ್ರೀ . ಡಿ. ಕುಮಾರ್ ದಾಸ್ ಇನ್ನು ಹಲವು ಖ್ಯಾತನಾಮರು ಕಲೆ ಪ್ರದರ್ಶಿಸಿದ ವೇದಿಕೆಯಲ್ಲೇ ಮೊನ್ನೆ ಮೊನ್ನೆ ಉತ್ತಮ ಸಂಗೀತ ಸುಧೆಯನ್ನು ಹರಿಸಿ ಮೆಚ್ಚುಗೆಯನ್ನು ಗಳಿಸಿ ಸಾಧನೆಯನ್ನು ಸಹ ತೋರಿದ್ದಾರೆ. 

ದೇಶಾದ್ಯಂತ ಪ್ರದರ್ಶನ ನೀಡುವ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಶ್ರೀ ವೆಂಕಟೇಶ್ಕುಮಾರ್ ಇವರಿಗೆ ಹಾರ್ಮೋನಿಯಂ ಸಾಥಿಯಾಗಿಯೂ ಸ್ವತಃ   ಶ್ರೀ ವೀರೇಶ್ ಹಿಟ್ನಾಳ್  ಇವರು ಸೇವೆ ನೀಡು ತ್ತಾರೆ. ಸಂಗೀತದ ಹಿನ್ನೆಲೆ ಇರುವ, ಇರದಿರುವ ಕುಟುಂಬಗಳಿಂದ ಬಂದ ಹಲವು ವಿಧ್ಯಾರ್ಥಿಗಳಿಗೆ ನೈಪುಣ್ಯತೆಯನ್ನು ಕಲಿಸುವ ಶ್ರೀ ವೀರೇಶ್ ಹಿಟ್ನಾಳ್ ಇವರು, ನಿಜಕ್ಕೂ ಅವರ ಶಿಷ್ಯರನ್ನು ತಿದ್ದುತ್ತಾರೆ. ಅದು ಕಲಿಸುವ ಗುರುವಿನ ಕೌಶಲ್ಯವೂ ಹೌದು, ಕಲಿಯುವವರ ಸೌಜನ್ಯವೂ ಹೌದು. ಬಳಸದ ಕತ್ತಿ ಇಟ್ಟಲ್ಲೇ ತುಕ್ಕು ಹಿಡಿಯುತ್ತದಂತೆ.  ಇವರ ಸಂಗೀತದ ಕಲೆಯಲ್ಲಿ  ಶಿಷ್ಯಂದಿರ ಕಲಿಕೆಯ ಕತ್ತಿಯನ್ನು ನಿರಂತರವಾಗಿ ಸಾಣೆ ಹಿಡಿಯುವ ಚಕ್ರಕಲ್ಲಿನಂತೆ ಹರಿತಗೊಳಿಸುತ್ತಲೇ ಇರುತ್ತಾರೆ. ಕಲಿಸುವ ಗುರು ವಿಗಿದ್ದಷ್ಟೇ ಆಶಯ ಸಂಗೀತ ಕಲಿಯುವ ವಿಧ್ಯಾರ್ಥಿಗಳ ಪೋಷಕರಿಗೂ ಇರಬೇಕು. ಅದಿಲ್ಲಿ ಪ್ರೋತ್ಸಾಹ ದಾಯಕವಾಗಿದೆ.  

ಕಳೆದ ವರ್ಷ್ಯಾಂತ್ಯದಲ್ಲಿ ಬೆಂಗಳೂರಿನಲ್ಲಿ  "ಮುಗುಳ್ನಗೆಯ ಸಂಗೀತ ಸಂಜೆ "ಎಂಬ ಕಾರ್ಯಕ್ರಮ ದಲ್ಲಿ ಹಾಡಿದ ಎನ್ನಲಾದ ಸಂಕಲ್ಪ ಅವರಾದಿ (ಹನ್ನೆರಡು ವರ್ಷ ) ಇದೇ ಸಂಗೀತ ವಿದ್ಯಾಪೀಠದ ವಿಧ್ಯಾರ್ಥಿ. ಅವರ ತಂದೆ ಶ್ರೀ ಸುಧೀರ್ ಅವರಾದಿ ನನ್ನ ಇತ್ತೀಚಿನ ಸ್ನೇಹಿತರು. ಉತ್ತಮ ಪ್ರದರ್ಶನ ನೀಡಿದ ಆ ಹುಡುಗನನ್ನು ಆ ಕಾರ್ಯಕ್ರಮಕ್ಕೆ ಬಂದಿದ್ದ ಕಿರುತೆರೆ "ಮಾಂತ್ರಿಕ" ಶ್ರೀ ಟಿ. ಎನ್. ಸೀತಾ ರಾಮ್ ರವರು, ಆ ಹುಡುಗನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರಂತೆ. ಬಹುಶಃ  ಸಾಸಿವೆ ತಂದವಳು ಪುಸ್ತಕ ಬರೆದ ಲೇಖಕಿ ಭಾರತಿ ಬಿ.ವಿ. ಯವರು ಸಹ ಹಾಜರಿದ್ದರೆಂದು ಭಾವಿಸುತ್ತೇನೆ. ಇಂದೊಂದು ಉದಾಹರಣೆ, ಇಂಥ ಅಥವಾ ಇದಕ್ಕಿಂತ ದೊಡ್ಡ ಮಟ್ಟದ ಸಭಿಕರಿದ್ದ ವೇದಿಕೆಯಲ್ಲೂ ಸಹ ಈ ಹುಡುಗ ಸಂಕಲ್ಪ ಅವರಾದಿ ಒಳಗೊಂಡಂತೆ ಸಂಗೀತ ವಿದ್ಯಾಪೀಠದ ವಿಧ್ಯಾರ್ಥಿಗಳಿಂದ ಉತ್ತಮ ಪ್ರದರ್ಶನ ಗಳನ್ನು ನೀಡಿ ಸಂಗೀತಾಸಕ್ತಿ ಮೂಡಿಸಲು ಬೆಳೆಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ತಮ್ಮ ಮಟ್ಟಿಗೆ ಶ್ರೀ ವೀರೇಶ್ ಹಿಟ್ನಾಳ್ ಇವರು ಶ್ರಮಿಸುತ್ತಿದ್ದಾರೆ.  ಆದರೆ, ಬೆಂಗಳೂರಿನಂಥ ಯಾಂತ್ರಿಕ ಬದುಕಿನಲ್ಲೂ ಆಗಾಗ  ಶ್ರೀ ಟಿ. ಎನ್. ಸೀತಾರಾಮ್  ರಂಥ ಖ್ಯಾತನಾಮರು ಹಾಗೂ  ಕಲಾವಿದರ ಬಳಗವು ಇಂಥ ಮನಸ್ಸೋಲ್ಲಾಸ ಹಾಗೂ ಪ್ರತಿಭೆಗಳನ್ನು ಓರೆಗೆ ಹಚ್ಚುವಂಥ ಕಾರ್ಯ  ಕ್ರಮವನ್ನು ಆಯೋಜಿಸುವುದು, ತಮ್ಮೆಲ್ಲಾ ದಿನನಿತ್ಯದ ಒತ್ತಡದ ಕೆಲಸದ ನಡುವೆಯೂ ಒಂದಿಷ್ಟು ಬಿಡುವು ಮಾಡಿಕೊಂಡು ವೀಕ್ಷಿಸುತ್ತಿರುವ ಬಗ್ಗೆ ನಾನು ಕೇಳಿ ಬಲ್ಲೆ. ಅಂತಹುದೇ ಒಂದು ಸಂಧರ್ಭದಲ್ಲಿ ಈ ಹುಡುಗ ಸಂಕಲ್ಪ ಅವರಾದಿ ಸಂಗೀತ ಕಲೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತೋಷ. ಅಂದ ಹಾಗೆ ಈ ಹುಡುಗ ಸಂಕಲ್ಪ ಅವರಾದಿ ಅಜ್ಜ ಅಂದರೆ ತಾಯಿಯ ತಂದೆ ಶ್ರೀ ಅಶೋಕ್ ಬಾದರದಿನ್ನಿ.  ಇವರ ಹೆಸರು ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ಪರಿಚಿತ. ಈಗೀಗ ಚಲನಚಿತ್ರಗಳಲ್ಲಿ ಪಾಲ್ಗೊಳ್ಳುವುದು ಕಡಿಮೆ ಆಗಿರಬಹುದು ಆದರೆ, ಸಕ್ರೀಯ ರಂಗಭೂಮಿ ಕರ್ಮಿ ಎಂದು ಸಹ ಕೇಳಿ ಬಲ್ಲೆ.  

ಉತ್ತರ ಕರ್ನಾಟಕದ ನೆಲವು ಈ ರಾಜ್ಯಕ್ಕೆ ಮತ್ತು ದೇಶಕ್ಕೆ ಅತ್ಯುತ್ತಮ ಸಂಗೀತದ ರತ್ನಗಳನ್ನು ಕೊಡುಗೆಯಾಗಿ ನೀಡಿದಂಥಹುದು. ಅದೇ ನೆಲದ ಸೋಗಡಿನಿಂದ ಶುರುವಾದ ಈ ಹೊಸ ತಲೆ ಮಾರಿನ  ಶಿಷ್ಯವೃಂದವು  ಹಳೇ ತಲೆಮಾರಿನ ಗುರು ಪರಂಪರೆಯ ನೆರಳಿನಲ್ಲಿ ಪ್ರತಿಭೆಯನ್ನು ಓರೆಗೆ ಹಚ್ಚಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳಕಿಗೆ ಬರಲಿ ಎಂದು ಹಾರೈಸೋಣ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
gaviswamy
10 years ago

ಸಂಗೀತ ದಿಗ್ಗಜ ಪುಟ್ಟರಾಜ ಗವಾಯಿಗಳ ಕಾರ್ಯವನ್ನು
ಅವರ ಉತ್ತರಾಧಿಕಾರಿಗಳೂ ಮುಂದುವರಿಸಿಕೊಂಡು
ಹೋಗುತ್ತಿರುವುದು ಸಂತಸದ ಮತ್ತು ಪ್ರಶಂಸಾರ್ಹ ವಿಷಯ .
ಲೇಖನ ಚೆನ್ನಾಗಿದೆ ಸರ್.

bharathi b v
bharathi b v
10 years ago

Shishyarannu vedikege sajjugolisalu kaaryakrama nadesikoduva vishya kushi annisithu. Intha guru-shishya parampare innoo beleyali. Baraha sundaravaagide …

Dr Vani Sundeep
Dr Vani Sundeep
10 years ago

guruvinante shishya.Tamma sangeeta jnaavavoo uttamavaagide, heege tamminda lekhanagalu horabaruttirali.

Kotraswamy M
Kotraswamy M
10 years ago

Veeresh Hitnal deserves all the appreciation for his work and commitment. Nevertheless Amar, you too rightly deserve appreciations for bringing to light the noble work and traditions of 'Gavi Matha' !

Santhoshkumar LM
10 years ago

ಚೆನ್ನಾಗಿದೆ ಸರ್.!

5
0
Would love your thoughts, please comment.x
()
x