”ಮುನ್ನೂರು ರೂಪಾಯಿ ಸಾರ್…”, ಅಂದಿದ್ದೆ ನಾನು.
ಪರಿಚಿತ ಹಿರಿಯರೊಬ್ಬರು ನನ್ನ ಈ ಮಾತನ್ನು ಕೇಳಿ ನಿಜಕ್ಕೂ ಹೌಹಾರಿಬಿಟ್ಟಿದ್ದರು. ಅಂದು ನಾವು ಮಾತನಾಡುತ್ತಿದ್ದಿದ್ದು ಕ್ಷೌರದ ಬಗ್ಗೆ. ಊರಿನಲ್ಲಿ ನಲವತ್ತು-ಐವತ್ತು ರೂಪಾಯಿಗಳಿಗೆ ಮುಗಿದುಹೋಗುತ್ತಿದ್ದ ಹೇರ್ ಕಟ್ಟಿಂಗಿಗೆ ಅಷ್ಟೊಂದು ಹಣ ಸುರಿಯುವಂಥದ್ದೇನಿದೆ ಎನ್ನುವ ಅಚ್ಚರಿ ಅವರದ್ದು. ‘ಇವೆಲ್ಲ ಬೇಕಾ ನಿಂಗೆ’ ಎಂದು ಕಣ್ಣಲ್ಲೇ ನುಂಗುವಂತೆ ನನ್ನನ್ನು ನೋಡಿದರು. ಎಲ್ಲರಿಗೂ ಈಗ ಶೋಕಿಯೇ ಬದುಕಾಗಿಬಿಟ್ಟಿದೆ ಎಂದು ಬೈದೂಬಿಟ್ಟರು. ಬೈದಿದ್ದು ನನಗೋ ಅಥವಾ ಕ್ಷೌರ ಮಾಡಿಸಿದವನಿಗೋ ಗೊತ್ತಾಗಲಿಲ್ಲ. ಆದರೆ ಭೌತಿಕವಾಗಿ ನಾನೇ ಅಲ್ಲಿ ಇದ್ದಿದ್ದರ ಪರಿಣಾಮವಾಗಿ ಬೈದಿದ್ದನ್ನು ಯಥಾವತ್ತಾಗಿ ಸ್ವೀಕರಿಸಿದೆ. ಅವರಿಗೆ ನನ್ನನ್ನು ನೋಡಿ ಅಯ್ಯೋ ಅನಿಸಿರಲೂಬಹುದು. ಅವರ ಅಂದಾಜಿನ ಪ್ರಕಾರ ಮುನ್ನೂರು ರೂಪಾಯಿಯ ಕ್ಷೌರದ ನಂತರ ಕ್ಷೌರಿಕ ಮಹಾಶಯನ ಕೈಚಳಕದಿಂದಾಗಿ ನಾನು ಸುರಸುಂದರಾಂಗನಾಗಿ ಬದಲಾಗಬೇಕಿತ್ತು. ಆದರೆ ಅಂಥದ್ದೇನೂ ಆಗಿರಲಿಲ್ಲ. ನಿರಾಶೆಯಾಗಿದ್ದು ಸಹಜವೇ ಅನ್ನಿ.
ಕ್ಷೌರದ ವಿಚಾರಕ್ಕೆ ಬಂದರೆ ತಮಾಷೆಯ ನೂರಾರು ಕಥೆಗಳು ಪ್ರಾಯಶಃ ಎಲ್ಲರಲ್ಲೂ ಇರುತ್ತವೆ. ನಾನು ಆಫ್ರಿಕಾದ ಅಂಗೋಲಾದಲ್ಲಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದ ಸ್ಪೇನ್ ಮೂಲದ ಅಧಿಕಾರಿಯೊಬ್ಬ ತನ್ನ ಕ್ಷೌರವನ್ನು ತಾನೇ ಮಾಡಿಕೊಳ್ಳುತ್ತಿದ್ದ. ಅಂಗೋಲನ್ ಕ್ಷೌರಿಕರಿಗೆ ಏಷ್ಯನ್ ಮತ್ತು ಯೂರೋಪಿಯನ್ ಕೇಶಶೈಲಿಗಳನ್ನು ಪರಿಣಾಮಕಾರಿಯಾಗಿ ಸಂಭಾಳಿಸುವ ತರಬೇತಿ ಮತ್ತು ಅನುಭವಗಳಿಲ್ಲದ ಪರಿಣಾಮವಾಗಿ ಎಡವಟ್ಟುಗಳಾಗುವುದು ಸಾಮಾನ್ಯವಾಗಿತ್ತು. ಪುರುಷರಿಗೆ ಇಂಥಾ ಎಡವಟ್ಟುಗಳ ಅಡ್ಡ ಪರಿಣಾಮಗಳು ಸರಿಸುಮಾರು ಒಂದು ತಿಂಗಳಿನ ಕಾಲ ಪ್ರತೀಕ್ಷಣವೂ ಕಾಡಿಸುವುದರಿಂದಾಗಿ ಇವೆಲ್ಲದರ ಗೋಜಿಗೆ ಹೋಗದೆ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಿದ್ದ ಈ ಪುಣ್ಯಾತ್ಮ.
ಹೀಗೆ ಅಂದು ಕ್ಷೌರದಿಂದ ಶುರುವಾಗಿದ್ದ ನಮ್ಮ ಚರ್ಚೆಯ ಮುಖ್ಯ ಅಜೆಂಡಾ ಮಾತ್ರ ಏಕಾಏಕಿ ಶೋಕಿಯತ್ತ ಹೊರಳಿತ್ತು. ”ಒಂದು ಹೇರ್ ಕಟ್ಟಿಂಗಿಗೆ ಮುನ್ನೂರು ರೂಪಾಯಿ ಕೊಡುವಂಥದ್ದೇನೆಲ್ಲಾ ಇತ್ತು ಹೇಳುವಂಥವನಾಗಪ್ಪಾ”, ಅಂದರು. ಕೇರಂ ಬೋರ್ಡಿನಷ್ಟು ದೊಡ್ಡ ಗಾತ್ರದ ಒಂದು ಟಿವಿ ಇತ್ತು ಅಂದೆ. ”ಕ್ಷೌರಿಕನೊಬ್ಬ ನಿನ್ನ ಕತ್ತನ್ನು ಮಸಾಲೆ ಅರಿಯೋ ಕಲ್ಲಿನಂತೆ ಬಳಸುತ್ತಿದ್ದರೆ ಅದ್ಹೇಗೋ ಟಿವಿ ನೊಡೋಕಾಗುತ್ತೆ?”, ಅಂದುಬಿಟ್ಟರು. ಹೌದೌದೆಂದು ತಲೆಯಾಡಿಸಿದೆ. ಆ ಹಿರಿಯರ ಮಾತಿನಲ್ಲಿ ಸತ್ಯವಿತ್ತು. ಎಷ್ಟಾದರೂ ಅನುಭವಿಗಳಲ್ಲವೇ. ಮೊದಲ ಸುತ್ತು ಅವರ ವಶವಾಗಿತ್ತು. ಅವರು – 1. ನಾನು – 0.
ಮುಂದೆ? ತಣ್ಣಗಿನ ಏರ್ ಕಂಡೀಷನರ್ ವ್ಯವಸ್ಥೆಯಿತ್ತು ಅಂದೆ. ಅಲ್ಲಿಯ ಬಿಸಿಗೆ ಈಗ ಏರ್ ಕಂಡೀಷನರ್ ಇಲ್ಲದ ಜಾಗವೆಲ್ಲಿದೆ ಅಂದರು. ನನ್ನಷ್ಟೇ ಎತ್ತರಕ್ಕಿರುವ ಭವ್ಯಗಾತ್ರದ ಕನ್ನಡಿಯಿತ್ತು ಅಂದೆ. ಕನ್ನಡಿ ಎಷ್ಟೇ ದೊಡ್ಡದಿದ್ದರೂ ನಿನ್ನ ಪ್ರತಿಬಿಂಬ ಬದಲಾಗಲ್ಲ ಮಾರಾಯ ಅಂದರು. ಸಲೂನ್ ನೋಡಲು ಪಂಚತಾರಾ ಹೋಟೆಲ್ಲಿನಂತಿತ್ತು ಎಂದೆ. ಕೇಶಮುಂಡನ ಮಾಡಿಸಿಕೊಳ್ಳಲು ಅರಮನೆಯಾದರೇನು, ತಿರುಪತಿಯಾದರೇನು ಎಂದರು. ಸದ್ಯಭಾರತದಲ್ಲಿ’ಚಾಯ್’ ಅಲೆಯು ಇನ್ನೂ ನಡೆಯುತ್ತಿರುವುದರಿಂದ ಪೇಪರ್ ಕಪ್ಪಿನಲ್ಲಿ ಚಹಾ ಕೊಟ್ಟರು ಎಂದೂ ಪಟ್ಟು ಹಿಡಿದೆ. ಆ ರೇಟಿಗೆ ಒಂದಿಡೀ ತಿಂಗಳು ನಾನೇ ಕೈಯಾರೆ ಟೀ ಕುಡಿಸುತ್ತಿದ್ದೆನಲ್ಲೋ ಎಂದು ಹಳಹಳಿಸಿದರು. ಹಿರಿಯರೊಂದಿಗೆ ಯಾವತ್ತಿಗೂ ಚರ್ಚೆ ಮಾಡಬೇಕೇ ಹೊರತು ವಾಗ್ವಾದಕ್ಕಿಳಿಯಬಾರದು. ನನ್ನೆದುರಿಗೆ ಅವರಿಗೀಗ ಕ್ಲೀನ್ ಸ್ವೀಪ್ ವಿಜಯ. ಅವರು – 5. ನಾನು – 0.
ಯಾರೇನೇ ಹೇಳಲಿ. ಪುರುಷನ ಕ್ಷೌರಲೋಕವು ಜಾಗತೀಕರಣದ ನಂತರದ ದಿನಗಳಲ್ಲಿ ಮಾತ್ರ ಸಾಕಷ್ಟು ಬದಲಾಗಿದೆ. ಹಿಂದೆಲ್ಲಾ ಒಂದು ಪುಟ್ಟ ಗೂಡಿನಂತಿರುವ ಕ್ಷೌರಿಕರ ಅಡ್ಡಾಗಳಿರುತ್ತಿದ್ದವು. ಹಳ್ಳಿಗಳಲ್ಲಿ ಈಗಲೂ ಇವುಗಳು ಕಾಣಸಿಗುತ್ತವೆ. ಊರಿನಲ್ಲಿರುವ ಸರಕಾರಿ ಬಾಬುಗಳಿಂದ ಹಿಡಿದು ಅಬ್ಬೇಪಾರಿಗಳವರೆಗೂ ಎಲ್ಲರೂ ಅಲ್ಲೇ ಬರುವುದು. ಮಾಡಲು ಬೇರೇನೂ ಕೆಲಸವಿಲ್ಲದ ಆಲಸಿಗರಿಗೆ ಅದು ಯಾವ ಸಂಸತ್ತಿಗೂ ಕಮ್ಮಿಯಿಲ್ಲ. ಹಿಂದಿನ ಪಂದ್ಯದಲ್ಲಿ ಸಚಿನ್ ಹೇಗೆ ಬ್ಯಾಟ್ ಬೀಸಬೇಕಿತ್ತು ಎಂಬುದರಿಂದ ಭಾರತ-ಪಾಕಿಸ್ತಾನ ಶಾಂತಿ ಮಾತುಕತೆಗಳು ಯಾಕೆ ವಿಫಲವಾಗುತ್ತಿವೆ ಎಂಬಂಥಾ ತೂಕದ ವಿಚಾರಗಳ ಬಗ್ಗೆ ತಮ್ಮ ಘನಾಭಿಪ್ರಾಯವನ್ನು ಮಂಡಿಸುವ, ಎಲ್ಲವನ್ನೂ ಬಲ್ಲ ತಜ್ಞರು ಇಲ್ಲಿ ಸಿಗುತ್ತಿದ್ದರು. ಈ ಸಲೂನುಗಳಲ್ಲಿ ಗ್ರಾಹಕರು ಓದಲೆಂದು ಇಡಲಾಗುತ್ತಿದ್ದ ದಿನಪತ್ರಿಕೆಗಳು ಅದೆಷ್ಟು ಜನರ ಕುಂಡೆಯ ದಬ್ಬಾಳಿಕೆಗೊಳಗಾಗಿದ್ದವು ಎಂಬುದನ್ನು ಆ ಪತ್ರಿಕೆಯು ನಜ್ಜುಗುಜ್ಜಾದ ಪರಿಯು ಹೇಳುತ್ತಿತ್ತು. ಅಂದಹಾಗೆ ಗಂಡಸರು ಗಾಸಿಪ್ ಮಾಡುವುದಿಲ್ಲ ಎಂಬುದು ಈ ಜಗತ್ತಿನ ಅತೀ ದೊಡ್ಡ ಸುಳ್ಳು. ಮಾಡಲು ಬೇರೇನೂ ಕೆಲಸವಿಲ್ಲವೆಂಬಂತೆ ಊಹಾಪೋಹಗಳನ್ನು ಹಬ್ಬಿಸುವ ಗಂಡಸರ ಪ್ರಭೇದವನ್ನು ಆಸಕ್ತರು ಇಂಥಾ ಸ್ಥಳಗಳಲ್ಲಿ ಇಂದಿಗೂ ಕಾಣಬಹುದು.
ಹೀಗೆ ಎಲ್ಲರ ಗುಟ್ಟುಗಳ ಇಷ್ಟಿಷ್ಟೇ ಪಾಲು ಕ್ಷೌರಿಕನದ್ದೂ ಆಗಿ ಆತ ಮಾಹಿತಿಗಳ ಭಂಡಾರವೇ ಆಗುತ್ತಿದ್ದ. ಅದಕ್ಕಿಂತಲೂ ಮೇಲಾಗಿ ಒಂದೇ ಸಂಗತಿಯ ಹಲವು ದೃಷ್ಟಿಕೋನಗಳೂ, ಅಭಿಪ್ರಾಯಗಳೂ ಕೂಡ ಆತನಿಗೆ ದಕ್ಕುತ್ತಿದ್ದವು. ಹೀಗಾಗಿ ಕತೆಯೊಂದಿದ್ದರೆ ಯಾರಿಗೋಸ್ಕರ, ಎಲ್ಲೆಲ್ಲಾ ‘ಕತ್ತರಿ ಪ್ರಯೋಗ’ ಮಾಡಬೇಕೆಂಬ ಸ್ಪಷ್ಟ ಚಿತ್ರಣವು ಆತನಿಗಿರುತ್ತಿತ್ತು. ಇನ್ನು ಆತ ವರ್ಷಕ್ಕೊಮ್ಮೆಯೋ, ಎರಡು ವರ್ಷಗಳಿಗೊಮ್ಮೆಯೋ ತನ್ನ ರೇಟನ್ನು ಒಂಚೂರು ಹೆಚ್ಚಿಸುತ್ತಿದ್ದ. ಗ್ರಾಹಕರು ಕಾಟಾಚಾರಕ್ಕೆಂಬಂತೆ ಒಂದಷ್ಟು ದಿನ ಗೊಣಗಿ ನಂತರ ಮರೆಯುತ್ತಿದ್ದರು. ಮತ್ತೆ ಅವನಲ್ಲಿಗೇ ಬರುತ್ತಿದ್ದರು. ಕ್ಷೌರಿಕನ ಪರ್ಮನೆಂಟ್ ಗಿರಾಕಿಗಳಿಗಂತೂ ಒಮ್ಮೊಮ್ಮೆ ಇಷ್ಟವಿಲ್ಲದಿದ್ದರೂ ಅಲ್ಲೇ ಹೋಗಬೇಕಾಗಿ ಬರುತ್ತಿತ್ತು. ಇಲ್ಲವಾದರೆ ”ಏನ್ಸಾರ್… ಇಷ್ಟು ದಿನ ಬರ್ಲೇ ಇಲ್ಲಾ… ಎಲ್ಲಿ ಮಾಡಿಸಿಕೊಂಡು ಬಂದಿರಿ?”, ಎಂಬ ಪ್ರಶ್ನೆಯನ್ನೆದುರಿಸಬೇಕಾಗಿತ್ತು. ಜೊತೆಗೇ ಜಗತ್ತಿನ ಅತ್ಯುತ್ತಮ ಕ್ಷೌರಿಕನು ಊರಿನಲ್ಲೇ ಇರುವಾಗ ಬೇರೆಯವರ ಬಳಿ ‘ತಲೆದಂಡ’ ಏಕೆ ಮಾಡಿಕೊಂಡಿರಿ ಎಂಬ ಸಮರ್ಥನೆಯನ್ನೂ ಕ್ಷೌರಿಕನಿಗೆ ನೀಡಬೇಕಿತ್ತು. ಹೀಗೆ ಇಲ್ಲೆಲ್ಲಾ ಗ್ರಾಹಕನಿಗೆ ಕ್ಷೌರಿಕನೆಂದರೆ ಓರ್ವ ಫ್ಯಾಮಿಲಿ ಡಾಕ್ಟರ್ ಇದ್ದಂತೆ.
ಬಾಲ್ಯದಲ್ಲಿ ನನ್ನ ಕ್ಷೌರ ಮಾಡುತ್ತಿದ್ದವನ ಬಗ್ಗೆ ನನಗೆ ವಿಚಿತ್ರವಾದ ದ್ವೇಷವಿತ್ತು. ನನ್ನಂಥಾ ಶಾಂತಮೂರ್ತಿಯೊಳಗಿದ್ದ ಆಂಗ್ರೀ ಯಂಗ್ ಮ್ಯಾನ್ ಅನ್ನು ರೊಚ್ಚಿಗೆಬ್ಬಿಸುವ ಸಾಹಸವು ಆತನಿಗೆ ಬಹಳ ಪ್ರಿಯವೆಂಬಂತೆ ಆತ ವ್ಯವಹರಿಸುತ್ತಿದ್ದ. ಪ್ರತೀಬಾರಿ ಹೋದಾಗಲೂ ಈ ಆಸಾಮಿ ನನ್ನನ್ನು ಗಾಯಾಳುವಾಗಿ ವಾಪಾಸು ಕಳಿಸುತ್ತಿದ್ದ. ಆತ ಕೈಯಾಡಿಸಿದ್ದಲ್ಲೆಲ್ಲಾ ರಕ್ತ ಸೋರುವುದು ಸಾಮಾನ್ಯವಾಗಿತ್ತು. ಬೆಳ್ಳಂಬೆಳಗ್ಗೆ ಕೊಂಚ ಗುಂಡು ಹಾಕಿಕೊಂಡೇ ಆತ ಕತ್ತರಿ-ಬ್ಲೇಡುಗಳನ್ನು ಹಿಡಿಯುತ್ತಿದ್ದನೆಂಬ ಮಂದ ನೆನಪು.
ಇನ್ನು ಹಳ್ಳಿಗಳಲ್ಲಿರುವ ಕ್ಷೌರಿಕ ಕಟ್ಟಿಂಗ್ ಮುಗಿಸಿದ ನಂತರ ಕೊನೆಯಲ್ಲಿ ಗ್ರಾಹಕನ ಮೈಕೈಯನ್ನೆಲ್ಲಾ ಬಲವಾಗಿ ಒತ್ತಿ, ಹಿಂಡಿ ಮಾಲೀಷನ್ನೂ ಮಾಡುತ್ತಿದ್ದ. ‘ಸ್ಪಾ’ ಎಂಬುದು ಅದಕ್ಕೆ ಈಚೆಗೆ ಸಿಕ್ಕ ಫ್ಯಾಷನೇಬಲ್ ಹೆಸರು. ಬಹಳಷ್ಟು ಮಂದಿ ಕ್ಷೌರಿಕರು ತಲೆಗೆ ಮಾಲೀಷು ಮಾಡುವ ಉತ್ಸಾಹದಲ್ಲಿ ನನ್ನ ತಲೆಯ ಕೂದಲನ್ನು ಕಿತ್ತೆಸೆಯುವಂತೆ ಎಳೆದಾಡಿದ್ದೂ, ತಲೆಯನ್ನು ತಬಲಾದ ರೇಂಜಿಗೆ ಬಡಿದಾಡಿದ್ದೂ ಇದೆ. ಈ ಸಂಪೂರ್ಣ ಕ್ಷೌರ ಪ್ರಕ್ರಿಯೆಯಲ್ಲಿ ಆತ ಗಾಸಿಪ್ ಲೇಪಿತ ಬಹಳಷ್ಟು ಸ್ವಾರಸ್ಯಕರ ಕತೆಗಳನ್ನೂ ಹೇಳುತ್ತಿದ್ದ. ಕೂತಿರುವವನು ಮಹಾಪ್ರವೀಣನೋ ಎಂಬಂತೆ ಗ್ರಾಹಕನ ಅಭಿಪ್ರಾಯವನ್ನೂ ಕೇಳುತ್ತಿದ್ದ. ಅಷ್ಟರಮಟ್ಟಿಗೆ ಕೂದಲಿನೊಂದಿಗೆ ಗ್ರಾಹಕನ ‘ಅಹಂ’ ಅನ್ನೂ ಕೂಡ ಪ್ರೀತಿಯಿಂದ ನೇವರಿಸಿದಂತಾಗುತ್ತಿತ್ತು. ಇವೆಲ್ಲಾ ಒಂದು ರೀತಿಯಲ್ಲಿ ನಿರುಪದ್ರವಿ ಪಿ.ಆರ್. ಸ್ಟಂಟ್ ಗಳೇ.
ಹಾಗೆಂದು ಪಟ್ಟಣ ಮತ್ತು ಮಹಾನಗರಿಗಳ ಕ್ಷೌರಲೋಕದ ಕಥೆಗಳು ಕಮ್ಮಿಯೇನಿಲ್ಲ. ”ಅಂಗಿ, ಪ್ಯಾಂಟು ಬಿಟ್ಟರೆ ಗಂಡಸರ ಲೋಕದ ಫ್ಯಾಷನ್ನಿನಲ್ಲೇನಿದೆ ಮಣ್ಣಾಂಗಟ್ಟಿ?”, ಎಂದು ಇತ್ತೀಚೆಗೆ ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ಹೇಳುತ್ತಿದ್ದರು. ”ಈ ಮಟ್ಟಿಗೆ ‘ಪದ್ಮಾವತ್’ ಮತ್ತು ‘ಬಾಜೀರಾವ್’ ಖ್ಯಾತಿಯ ನಟ ರಣಬೀರ್ ಸಿಂಗ್ ನನಗೆ ಕ್ರಾಂತಿಕಾರಿಯಾಗಿ ಕಾಣುತ್ತಾನೆ”, ಅಂದೆ. ಆತ ನಮ್ಮ ಹಿಂದಿ ಚಿತ್ರೋದ್ಯಮದ ಲೇಡಿ ಗಾಗಾ ಎಂಬಂತೆ ಅವರೂ ಒಪ್ಪಿದರು. ಅಂದಹಾಗೆ ಆಧುನಿಕ ಮಾರುಕಟ್ಟೆಯು ಮಹಾನಗರಿಗಳಲ್ಲಿ ಕ್ಷೌರಲೋಕವನ್ನು ಪುರುಷರಿಗಾಗಿ ಸರಳಗೊಳಿಸಿದ್ದಕ್ಕಿಂತ ಸಂಕೀರ್ಣಗೊಳಿಸಿದ್ದೇ ಹೆಚ್ಚು ಎನ್ನುವುದು ನನ್ನ ಭಾವನೆ. ರೂಪವೇ ಎಲ್ಲವೂ ಆಗಿರುವ ವ್ಯಕ್ತಿ ಮತ್ತು ಉದ್ಯಮಗಳ ಸಂಗತಿಗಳು ಬೇರೆಯೇ ಆಗಿರಬಹುದು. ಆದರೆ ಸಾಮಾನ್ಯ ಪುರುಷನೊಬ್ಬ ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಅಷ್ಟರಲ್ಲೇ ಇದೆ.
ಇಲ್ಲೆಲ್ಲಾ ಕ್ಷೌರಿಕನು ‘ಸ್ಟೈಲಿಸ್ಟ್’ ಎಂಬ ಬಿರುದಿನೊಂದಿಗೆ ಬಂದಿರುತ್ತಾನೆ. ತನ್ನ ವಿಚಿತ್ರ ಕೇಶಶೈಲಿ, ಟ್ಯಾಟೂಗಳೊಂದಿಗೆ ಎಂಟ್ರಿ ಕೊಡುವ ಆತನನ್ನು ಗುರುತಿಸುವುದು ಸುಲಭ. ನಂತರ ಕ್ರಿಕೆಟ್ ತಜ್ಞನೊಬ್ಬ ಪಿಚ್ ಪರೀಕ್ಷಿಸುವಂತೆ ನಮ್ಮ ಕೂದಲನ್ನು ಪರೀಕ್ಷಿಸುತ್ತಾ ಎಲ್ಲೆಲ್ಲಿ ಏನೆಲ್ಲಾ ಎಡವಟ್ಟಾಗಿದೆ ಎಂಬುದನ್ನು ನೀವು ಕೇಳದಿದ್ದರೂ ಆತ ಸವಿವರವಾಗಿ ಹೇಳುತ್ತಾನೆ. ‘ಛೇ… ನಾನು, ನನ್ನ ಕೇಶರಾಶಿಗಳು ಅದೆಷ್ಟು ಸಂಕಷ್ಟದ ಸ್ಥಿತಿಯಲ್ಲಿವೆ’, ಎಂಬ ವಿಚಿತ್ರ ಸಂಕಟವೊಂದು ಅಲ್ಲಿ ಎದುರಾಗಿ, ನಮ್ಮ ಬಗ್ಗೆಯೇ ನಮಗೆ ವ್ಯಥೆಯುಂಟಾಗಿ ಮೆಲ್ಲಮೆಲ್ಲಗೆ ಕೀಳರಿಮೆಯತ್ತ ಜಾರುತ್ತಿರುತ್ತೇವೆ. ”ಆದರೆ ಈ ಬಗ್ಗೆ ಚಿಂತಿಸೋದೇನೂ ಬೇಡ. ನಾನಿದ್ದೇನಲ್ವಾ…”, ಎನ್ನುವ ಸ್ಟೈಲಿಸ್ಟ್ ತನಗೆ ಗೊತ್ತಿರುವ ಆದರೆ ಗ್ರಾಹಕನಿಗೆ ತಿಳಿದಿಲ್ಲದ ಉಚ್ಚರಿಸಲಾಗದ ತರಹೇವಾರಿ ಹೆಸರುಗಳನ್ನೂ, ತಂತ್ರಗಳನ್ನೂ ಹೇಳಿ ಭರವಸೆಯನ್ನು ಮೂಡಿಸುತ್ತಾನೆ. ಈಗಂತೂ ಏಕಾಏಕಿ ಆತನೇ ಆಪತ್ಬಾಂಧವ ಎಂದೆನಿಸಿ ಆತನಿಗೆ ಪಾಹಿಮಾಂ ಅನ್ನುವ ಬಯಕೆಯುಂಟಾಗುತ್ತದೆ. ”ಹಾಗಂದ್ರೇನು… ಹೀಗಂದ್ರೇನು…”, ಎಂದು ಮೊದಮೊದಲಿಗೆ ಮೂರ್ನಾಲ್ಕು ಪ್ರಶ್ನೆಗಳನ್ನು ಹಾಕುವ ಪುರುಷ ಗ್ರಾಹಕ ಒಂದು ಹಂತದ ಬಳಿಕ ಪೆಚ್ಚಾಗಿ ”ಅದೇನು ಮಾಡ್ತೀಯೋ ಮಾಡಪ್ಪಾ…” ಎಂದು ತನ್ನ ತಲೆಯನ್ನು ಒಪ್ಪಿಸಿ ನಿರಾಳನಾಗುತ್ತಾನೆ.
ಆದರೆ ಅಚ್ಚರಿಗಳು ತನಗೆ ಮುಂದೆಯೂ ಕಾದಿದೆ ಎಂಬ ಅಂಶವು (ಕನಿಷ್ಠಪಕ್ಷ ಹೊಸದಾಗಿ) ಬಂದ ಗ್ರಾಹಕನಿಗಂತೂ ತಿಳಿದಿರುವುದಿಲ್ಲ. ಏರ್ ಕಂಡೀಷನರ್ ತಂಗಾಳಿ, ಮೆಲುವಾದ ಸಂಗೀತ, ಮಹಲ್ಲಿನ ಮೆಹಫಿಲ್ ಗಳ ನಡುವೆ ಸ್ಟೈಲಿಸ್ಟ್ ಕೇಶರಾಶಿಯೊಂದಿಗೆ ಪ್ರಯೋಗಗಳನ್ನು ಮಾಡುತ್ತಿರುವಂತೆಯೇ ಮೆತ್ತಗೆ ತನ್ನಲ್ಲಿರುವ ಹೊಸ ಉತ್ಪನ್ನಗಳ ಪ್ರಚಾರವನ್ನೂ ಮಾಡುತ್ತಾನೆ. ಅಗತ್ಯವಿಲ್ಲದಿದ್ದರೂ ಕೊಂಡುಕೊಳ್ಳುವಂತೆ ಗ್ರಾಹಕನನ್ನು ಪ್ರೇರೇಪಿಸುತ್ತಾನೆ. ಇನ್ನು ಪುರುಷ ಗ್ರಾಹಕನು ತೀರಾ ದಾಕ್ಷಿಣ್ಯದ ಮನುಷ್ಯನಾಗಿದ್ದರೆ ಮತ್ತು ಈ ಅಂಶವನ್ನು ನಮ್ಮ ಸ್ಟೈಲಿಸ್ಟ್ ಮಹಾಶಯನು ಗುರುತಿಸಿಬಿಟ್ಟರಂತೂ ಅಲ್ಲಿ ಡೀಲ್ ಕುದುರುವುದು ಗ್ಯಾರಂಟಿ. ಬಂದ ತಪ್ಪಿಗಾದರೂ ಇದನ್ನು ಖರೀದಿಸಿ ಇಲ್ಲಿಂದ ಕಾಲುಕೀಳುವ ದರ್ದಿಗೆ ಬೀಳುವ ಗ್ರಾಹಕ ಶಿಫಾರಸ್ಸು ಮಾಡಿದ ಉತ್ಪನ್ನವನ್ನು ಖರೀದಿಸಬೇಕಾಗುತ್ತದೆ. ಹೀಗೆ ಯಕಶ್ಚಿತ್ ಹೇರ್ ಕಟ್ಟಿಂಗಿಗೆಂದು ಬಂದ ಗ್ರಾಹಕ ಏನೇನೋ ಕೆಲಸಕ್ಕೆ ಬಾರದ ಕ್ರೀಮು, ಪೌಡರುಗಳೊಂದಿಗೆ ಮನೆಗೆ ಮರಳಿರುತ್ತಾನೆ. ಇವುಗಳೆಲ್ಲಾ ಮುಂದಿನ ಒಂದೆರಡು ದಿನಗಳಲ್ಲಿ ನೀರಸವೆನಿಸಿ ಮೂಲೆ ಸೇರಿದರೂ ಅಚ್ಚರಿಯಿಲ್ಲ. ಪುರುಷರ ಹಣೆಬರಹವೇ ಇಷ್ಟು.
ಇದು ಸತ್ಯವೂ ಹೌದು. ಪುರುಷರ ಹಣೆಬರಹವೇ ಇಷ್ಟು. ಜಗತ್ತಿನ ಯಾವ ಸಂಗತಿಯೂ ಕೂಡ ದೀರ್ಘಕಾಲದವರೆಗೆ ಅವರ ಆಸಕ್ತಿಯನ್ನು ಹಿಡಿದಿಡುವುದು ಕಮ್ಮಿ. ಉದಾಹರಣೆಗೆ ಕೂದಲಾಗಲೀ, ಮೀಸೆ-ಗಡ್ಡಗಳಾಗಲಿ ಒಂದು ಹಂತದವರೆಗೆ ಬೆಳೆದು ನಂತರ ಅಲ್ಲೇ ನಿಂತುಬಿಟ್ಟಿದ್ದರೆ ಪುರುಷರು ಅದರತ್ತ ಗಮನ ಹರಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಇಂದಿಗೂ ಬಹುತೇಕ ಪುರುಷರು ಸಲೂನಿನತ್ತ ಹೆಜ್ಜೆಹಾಕುವುದು ಬೆಳೆದಿರುವ ಫಸಲು ಕಿರಿಕಿರಿಯನ್ನುಂಟುಮಾಡಿದಾಗ ಮಾತ್ರ. ಸಲೂನಿಗೊಂದು ವಿಶೇಷವಾದ ಕರೆಯನ್ನು ಮಾಡಿ, ಸ್ಟೈಲಿಸ್ಟ್ ಬಳಿ ಸಮಯವನ್ನು ಕಾದಿರಿಸಿ, ಇದನ್ನೊಂದು ಗಂಭೀರ ಪ್ರಕ್ರಿಯೆಯೆಂಬಂತೆ ಪರಿಗಣಿಸುವ ಪುರುಷರ ಸಂಖ್ಯೆ ನಿಜಕ್ಕೂ ಕಮ್ಮಿ. ಪುರುಷರಿಗೆ ಕ್ಷೌರವೇನಿದ್ದರೂ ಸೈಡ್ ಬ್ಯುಸಿನೆಸ್ ಇದ್ದಂತೆ. ಬಿಡುವಾದಾಗ ಸೇದುವ ಸಿಗರೇಟಿದ್ದಂತೆ. ಕೊಂಚ ಬಿಡುವಾದಾಗ ಕೆಲಸ ಮುಗಿಸಿ ಕೈತೊಳೆದುಕೊಳ್ಳುವುದಷ್ಟೇ ಇಲ್ಲಿ ಮುಖ್ಯ ಅಜೆಂಡಾ.
ಈಚೆಗೆ ಗಡ್ಡ ಬೆಳೆಸುವ ಹೊಸ ಶೈಲಿಗಳು ಟ್ರೆಂಡ್ ಆದ ನಂತರವಂತೂ ಬಗೆಬಗೆಯ ‘ಬಿಯರ್ಡ್ ಕ್ರೀಮ್’ ಗಳೂ ಮಾರುಕಟ್ಟೆಗೆ ಕಾಲಿಟ್ಟಿವೆ. ಈ ಬಗ್ಗೆ ನಾನು ಆ ಹಿರಿಯರಲ್ಲಿ ಉದ್ದೇಶಪೂರ್ವಕವಾಗಿಯೇ ಹೇಳಲಿಲ್ಲ. ಹೇಳಿದ್ದರೆ ಇದೇನು ಗೊಬ್ಬರ ಹಾಕಿ ಬೆಳೆಸಬೇಕಾದ ಬೆಳೆಯೇ ಅನ್ನುತ್ತಿದ್ದರೇನೋ! ಗಡ್ಡ ಬೆಳೆಸುವುದರಲ್ಲೂ ಇಷ್ಟೆಲ್ಲಾ ಕಸರತ್ತಿದೆ ಎಂಬುದು ಯಾರಿಗಾದರೂ ತಿಳಿದಿತ್ತು. ಹಿಂದೆ ಗಡ್ಡಬಿಟ್ಟವರನ್ನೆಲ್ಲಾ ಭಗ್ನಪ್ರೇಮಿಗಳಂತೆ ಪರಿಗಣಿಸಿಕೊಂಡು ‘ದೇವದಾಸ್’ ಅನ್ನಿಸಿಕೊಳ್ಳುತ್ತಿದ್ದರು. ಅದೊಂದು ಮುಖಾರವಿಂದದಲ್ಲೇ ಸ್ಪಷ್ಟವಾಗಿ ಘೋಷಿಸಿರುವ ಶೋಕಾಚರಣೆಯಂತಿತ್ತು. ಗಡ್ಡ-ಮೀಸೆ ಬೋಳಿಸಿ ನುಣುಪುಕೆನ್ನೆಯಲ್ಲಿ ಪುರುಷನೊಬ್ಬ ನಿಂತನೆಂದರೆ ಜಳಕ ಮಾಡಿ ಶುದ್ಧವಾಗಿ ಎಲ್ಲಿಗೋ ಹೊರಟಲು ಸಿದ್ಧವಾದವನಂತಿನ ಅವತಾರವದು. ಏನಿಲ್ಲವೆಂದರೂ ಇದೀಗ ಪುರುಷ ಭಗ್ನಪ್ರೇಮಿಗಳ ಅಸ್ತಿತ್ವದ ಪ್ರಶ್ನೆ. ಭಗ್ನಪ್ರೇಮಿಗಳ ಲೋಕದಲ್ಲಿ ಹಲವು ಕಾಲದವರೆಗೂ ಅನಭಿಷಿಕ್ತ ರಾಜನಂತೆ ಮೆರೆದ ಗಡ್ಡದ ಚಕ್ರಾಧಿಪತ್ಯವು ಇಂದು ಕೊನೆಗೊಂಡಿದೆ. ಗಡ್ಡವನ್ನು ಇನ್ಯಾವ ತೋರಿಕೆಯು ಪ್ರತಿನಿಧಿಸಬಲ್ಲದು ಎಂಬುದನ್ನು ಕಾಲವೇ ಹೇಳಬೇಕು.
ಒಟ್ಟಿನಲ್ಲಿ ಹೇಗೋ ಇದ್ದ ಪುರುಷರ ಕೇಶಲೋಕವನ್ನು ಮತ್ತಷ್ಟು ಸಂಕೀರ್ಣಗೊಳಿಸಿ, ಅದನ್ನು ರಾಕೆಟ್ ಸೈನ್ಸ್ ರೂಪಕ್ಕಿಳಿಸಿ ಹೇಗ್ಹೇಗೋ ಮಾಡಿರುವ ಮಾರುಕಟ್ಟೆಯ ಮ್ಯಾಜಿಕ್ಕಿಗೆ ತಲೆದೂಗದಿರುವುದು ಕಷ್ಟ. ಇಂದು ಶಾಪಿಂಗ್ ಮಾಲ್ ಗಳ ಒಂದೇ ಮಹಡಿಯಲ್ಲಿ ಒಂದಕ್ಕೊಂದು ಮೀರಿಸುವಂತಿರುವ ನಾಲ್ಕೈದು ಲಕ್ಷುರಿ ಸಲೂನುಗಳು ಸಾಲುಗಟ್ಟಿರುತ್ತವೆ. ಎಡಭಾಗದಲ್ಲಿರುವ ಸಲೂನಿನಲ್ಲಿ ಒಂದು ಹೆಸರಿನಿಂದ ಕರೆಯಲ್ಪಡುವ ಹೇರ್ ಕಟ್ಟಿಂಗ್ ವಿಧಾನವೊಂದು ಮತ್ತೊಂದು ಸಲೂನಿನಲ್ಲಿ ಬೇರೆಯದೇ ಹೆಸರಿನಲ್ಲಿ ಇರಬಹುದು. ತಮ್ಮದೇ ಅತ್ಯುತ್ತಮವೆಂದು ಆಯಾ ಸ್ಟೈಲಿಸ್ಟ್ ಗಳು ಆಯಾ ಗ್ರಾಹಕರನ್ನು ಪುಸಲಾಯಿಸುತ್ತಲೂ ಇರಬಹುದು. ಚಹಾ ಲೋಕದಲ್ಲೇ ಇಂದು ‘ತಂದೂರಿ ಚಾಯ್’ಗಳು ಬರುವಷ್ಟರ ಮಟ್ಟಿಗೆ ವೈವಿಧ್ಯಗಳು ಬಂದಿವೆಯಂತೆ. ಹಾಗಿರುವಾಗ ಹೇರ್ ಕಟ್ಟಿಂಗ್ ಅನ್ನು ಈ ವಿಚಾರದಲ್ಲಿ ಕಡೆಗಣಿಸುವುದು ಅನ್ಯಾಯವೇ.
ಇಪ್ಪತ್ತೇಳು ಸಾವಿರ ಚಿಲ್ಲರೆ ಚದರಡಿ ವಿಸ್ತೀರ್ಣದಷ್ಟು ಆವರಿಸಿಕೊಂಡಿರುವ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ರವರ ‘ಧರ್ಮ ಪ್ರೊಡಕ್ಷನ್ಸ್’ ಕಚೇರಿಯಲ್ಲಿ ಆತನ ಕ್ಯಾಬಿನ್ನಿನ ಜೊತೆಗೇ ಹೊಂದಿಕೊಂಡಿರುವ ಒಂದು ಸುಸಜ್ಜಿತ ಮೇಕಪ್ ರೂಂ ಕೂಡ ಇದೆ. ಕರಣ್ ಖ್ಯಾತ ಪತ್ರಕರ್ತೆ ಅನುಪಮಾ ಚೋಪ್ರಾರಿಗೆ ನೀಡಿದ ಸಂದರ್ಶನವೊಂದರಲ್ಲಿ ಇದನ್ನು ನೋಡಬಹುದು. ಜೋಹರ್ ತಯಾರಾಗಲು ಸಾಮಾನ್ಯವಾಗಿ ಬಹಳಷ್ಟು ಸಮಯ ಮತ್ತು ಕಾಳಜಿಯನ್ನು ತೆಗೆದುಕೊಳ್ಳುತ್ತಾರಂತೆ. ಬಹುಷಃ ಲಕ್ಷುರಿ ಸಲೂನುಗಳು ಜನಸಾಮಾನ್ಯರಿಗೆ ನೀಡಲು ಪ್ರಯತ್ನಿಸುತ್ತಿರುವ ಕ್ಷಣಿಕ ವೈಭವವೂ ಕೂಡ ಈ ತರಹದ್ದೇ. ಕೆಲವರಿಗದು ಪ್ರಯೋಗ, ಇನ್ನು ಕೆಲವರಿಗದು ಶೋಕಿ. ಕೆಲವರಿಗೆ ಈ ಬಗ್ಗೆ ಒಣಜಂಭ, ಇನ್ನು ಕೆಲವರಿಗೆ ಶುದ್ಧ ಸಮಯ ಹಾಳೆಂಬ ಭಾವನೆ. ಒಟ್ಟಿನಲ್ಲಿ ಉದ್ಯಮಕ್ಕಂತೂ ಝಣಝಣ ಕಾಂಚಾಣ.
ಅಂತೂ ಜೇಬು ತುಂಬಿದ್ದರೆ ಅಪರೂಪಕ್ಕೊಮ್ಮೆ ಹೋಗಿಬಂದು ತಮ್ಮ ಸೌಂದರ್ಯವನ್ನೂ, `ಅಹಂ’ ಅನ್ನೂ ಮುದ್ದು ಮಾಡಿಸಿಕೊಂಡು ಕೆಲ ನಿಮಿಷಗಳ ಕಾಲ ವಿವಿಐಪಿ ಆತಿಥ್ಯವನ್ನು ಪಡೆದುಕೊಳ್ಳಲಡ್ಡಿಯಿಲ್ಲ. ಒಂದು ಪಕ್ಷ ಮೈಮರೆತುಬಿಟ್ಟಿರೋ ತಮ್ಮ ತಲೆ-ಮೀಸೆ-ಗಡ್ಡಗಳೊಂದಿಗೆ ಜೇಬನ್ನೂ ಬೋಳಿಸಿಕೊಂಡು ಬರುವುದರಲ್ಲಿ ಸಂದೇಹವಿಲ್ಲ.
–ಪ್ರಸಾದ್ ಕೆ.
********