ಧರ್ಮಸಂಕಟ: ಗಿರೀಶ ಜಕಾಪುರೆ


ಹಿಂದಿ ಮೂಲ – ಪ್ರೇಮಚಂದ
ಕನ್ನಡಕ್ಕೆ – ಗಿರೀಶ ಜಕಾಪುರೆ

1.
‘ಪುರುಷರಲ್ಲಿ ಸ್ತ್ರೀಯರಲ್ಲಿ ಬಹಳ ವ್ಯತ್ಯಾಸವಿರುತ್ತದೆ. ನಿಮ್ಮ ಮನಸ್ಸು ಕನ್ನಡಿಯಂತೆ ಕಠಿಣವಾಗಿರುತ್ತದೆ, ಮತ್ತೆ ನಮ್ಮದು ಹೂವಿನಂತೆ ಮೃದು. ಹೂಗಳು ವಿರಹದ ಶಾಖ ತಾಳಲಾರವು’
‘ಹರಳು ತಾಗಿದರೂ ಸಾಕು ಕನ್ನಡಿ ಚೂರಾಗುತ್ತದೆ. ಮೃದು ವಸ್ತುಗಳಲ್ಲಿ ಲೌಚಿಕತೆ ಇರುತ್ತದೆ’
‘ಬಿಡು, ಮಾತಲ್ಲಿ ಮರಳು ಮಾಡಬೇಡ. ದಿನವಿಡೀ ನೀ ಬರುವ ದಾರಿ ನೋಡುತ್ತೇನೆ, ರಾತ್ರಿಯಿಡಿ ಗಡಿಯಾರದ ಮುಳ್ಳುಗಳನ್ನು. ಇಷ್ಟಾದ ಮೇಲೆ ಹೇಗೋ ಕಷ್ಟಪಟ್ಟು ನಿನ್ನ ದರ್ಶನವಾಗುತ್ತದೆ’
‘ನಾನು ಸದಾಕಾಲ ನಿನ್ನನ್ನು ನನ್ನ ಮನಮಂದಿರದಲ್ಲಿ ಕಾಣುತ್ತೇನೆ’
‘ಚೆನ್ನಾಗಿದೆ, ಹೇಳು ಮತ್ತೆ ಯಾವಾಗ ಬರುವೆ’
‘ಹನ್ನೊಂದು ಗಂಟೆಗೆ, ಹಿಂಬಾಗಿಲು ತೆರೆದು ಇಡು’
‘ಬಾಗಿಲಲ್ಲ, ಅದು ನನ್ನ ಕಣ್ಣು..’
‘ಆಯ್ತು, ಹೋಗಿ ಬರುವೆ’

2.
ಪಂಡಿತ ಕೈಲಾಶನಾಥ ಲಖನೌ ಶಹರದಲ್ಲಿನ ಪ್ರತಿಷ್ಠಿತ ಬ್ಯಾರಿಸ್ಟರ್‍ಗಳಲ್ಲಿ ಒಬ್ಬರಾಗಿದ್ದರು. ಹಲವಾರು ಸಂಘಟನೆಗಳ ಪ್ರಮುಖರಾಗಿದ್ದರು, ವಿವಿಧ ಸಮಿತಿಗಳ ಸಭಾಪತಿಯಾಗಿದ್ದರು, ವೃತ್ತಪತ್ರಿಕೆಗಳಲ್ಲಿ ಒಳ್ಳೊಳ್ಳೆ ಲೇಖನ ಬರೆಯುತ್ತಿದ್ದರು, ಸಭೆ, ಸಮಾರಂಭಗಳಲ್ಲಿ ವೇದಿಕೆಯಿಂದ ಸಾರಗರ್ಭಿತ ಉಪನ್ಯಾಸ ನೀಡುತ್ತಿದ್ದರು. ಯುರೋಪ್‍ನಿಂದ ಮರಳಿದ್ದ ಮೊದಲ ದಿನಗಳಲ್ಲಿ ಅತ್ಯಂತ ಉತ್ಸಾಹಿಯಾಗಿದ್ದರು. ಅತ್ತ ವಕೀಲಿ ವೃತ್ತಿಯಲ್ಲಿ ಗಟ್ಟಿಯಾಗಿ ನೆಲೆಯೂರಿದಾಗ ಇದರಲ್ಲಿನ ಉತ್ಸಾಹ ಕಡಿಮೆಯಾಯಿತು. ಅದು ಉಚಿತವೂ ಇತ್ತು, ಸಮಯ ವ್ಯರ್ಥ ಮಾಡಲು ಈಗ ಅವರು ನಿರುದ್ಯೋಗಿಯಾಗಿರಲಿಲ್ಲ. ಆದರೆ, ಕ್ರಿಕೆಟ್‍ನ ಆಕರ್ಷಣೆ ಹೇಗಿತ್ತೋ ಹಾಗೇ ಉಳಿದುಕೊಂಡಿತ್ತು. ಅವರು ಕೈಸರ್ ಕ್ಲಬ್‍ನ ಸಂಸ್ಥಾಪಕರಾಗಿದ್ದರು, ಅಲ್ಲದೆ ಬಹಳ ಉತ್ತಮ ಆಟಗಾರ ಕೂಡ.

ಕೈಲಾಶರಿಗೆ ಕ್ರಿಕೆಟ್‍ನಲ್ಲಿ ಆಸಕ್ತಿ ಇತ್ತು, ಅವರ ತಂಗಿಗೆ ಟೆನಿಸ್ ಅಂದರೆ ಪ್ರಾಣ. ಅವರಿಬ್ಬರಿಗೂ ದಿನಾಲೂ ಏನಾದರೂ ವಿಶೇಷ ಮಾಡಬೇಕೆಂಬ ಇಚ್ಛೆ ಇದ್ದೇ ಇರುತ್ತಿತ್ತು. ಪಟ್ಟಣಕ್ಕೆ ಯಾವುದಾದರೂ ಕಂಪನಿ ನಾಟಕ, ಸರ್ಕಸ್ ಶೋ, ಥಿಯೇಟರ್ ಪ್ಲೆ ಅಥವಾ ಬೈಸ್ಕೋಪ್ ಶೋ ಬಂದಿದ್ದರೆ ಕಾಮಿನಿ ಅಲ್ಲಿ ಹೋಗದೇ ಇರುವುದು ಸಾಧ್ಯವೇ ಇರಲಿಲ್ಲ. ಅವಳ ಪಾಲಿಗೆ ಮನೋರಂಜನೆ ಎಂದರೆ ಗಾಳಿ, ಬೆಳಕಿನಷ್ಟು ಅತ್ಯಾವಶ್ಯಕ.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಲ್ಲಿ ಓದಿದ್ದ, ಪಶ್ಚಿಮದ ವಿಲಾಸಿ ದೇಶಗಳನ್ನು ಕಂಡಿದ್ದ ಕೈಲಾಶನಾಥರು ತಮ್ಮ ಇತರೆ ಸಹಪಾಠಿಗಳಂತೆಯೇ ಭಾರತೀಯ ಸಂಸ್ಕೃತಿ, ಇಲ್ಲಿನ ಸಂಸ್ಕಾರ, ಜಾತಿ, ಧರ್ಮ, ಭಾಷೆ ಹಾಗೂ ದೇಶವನ್ನೂ ಕಟುವಾಗಿ ವಿರೋಧಿಸುತ್ತಿದ್ದರು. ಅವರಿಗೆ ಭಾರತೀಯ ಜೀವನಪದ್ಧತಿ ಅತ್ಯಂತ ದೋಷಪೂರಿತವಾಗಿ ಕಾಣುತ್ತಿತ್ತು. ತನ್ನ ಈ ವಿಚಾರಗಳು ಅವರು ತಮ್ಮಷ್ಟಕ್ಕೆ ಸೀಮಿತವಾಗಿ ಇರಿಸಿಕೊಂಡಿರಲಿಲ್ಲ. ಬದಲಾಗಿ ಸಂದರ್ಭ ಒದಗಿಬಂದಾಗೆಲ್ಲ ಈ ಕುರಿತು ಪ್ರಖರವಾಗಿ ಮಾತಾಡುತ್ತಿದ್ದರು ಹಾಗೂ ಕಟುವಾಗಿ ಬರೆಯುತ್ತಿದ್ದರು. ಹಿಂದೂ ಸಂಸ್ಕøತಿಯ ಭಕ್ತರು ಕೈಲಾಶನಾಥರ ಮಾತುಗಳಿಗೆ ವಿವೇಕಶೂನ್ಯ ಹರಟೆ ಎಂದುಕೊಂಡು ನಗಾಡುತ್ತಿದ್ದರು. ಆದರೆ ಅಪಹಾಸ್ಯ, ಅಪಮಾನಗಳು ಪ್ರಗತಿಪರರಿಗೆ ಉಡುಗೊರೆಗಳಿದ್ದಂತೆ. ಕೈಲಾಶನಾಥ ಅದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ಬರೀ ಮಾತಿನ ಶೂರರಾಗಿರಲಿಲ್ಲ, ಕರ್ಮವೀರರೂ ಆಗಿದ್ದರು. ಕಾಮಿನಿಗೆ ದೊರಕಿರುವ ಸ್ವಾತಂತ್ರ್ಯವೇ ಅವರ ವಿಚಾರಗಳ ಪ್ರತ್ಯಕ್ಷ ನಿದರ್ಶನವಾಗಿತ್ತು. ಇನ್ನೂ ವಿಶೇಷವೆಂದರೆ ಕಾಮಿನಿಯ ಪತಿ ಗೋಪಾಲನಾರಾಯಣ ಅವರೂ ಕೂಡ ಇದೇ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು. ಅವರು ಒಂದು ವರ್ಷದಿಂದ ಅಮೇರಿಕಾದಲ್ಲಿದ್ದುಕೊಂಡು ಓದುತ್ತಿದ್ದರು. ತನ್ನ ಅಣ್ಣ ಹಾಗೂ ಪತಿಯ ವಿಚಾರಗಳಿಗೆ ತಕ್ಕಂತೆ ಕಾಮಿನಿಯೂ ಸಂಪೂರ್ಣ ಮುಕ್ತತೆಯನ್ನು ಅನುಭವಿಸುತ್ತಿದ್ದಳು.

3.
ಅಲ್ಫ್ರೆಢ್ ಥಿಯೆಟರ್ ಕಂಪನಿ ಲಖನೌ ನಗರದಲ್ಲಿ ತನ್ನ ಶೋ ಏರ್ಪಡಿಸಿತ್ತು. ನಗರದಲ್ಲಿ ನೋಡಿದಲ್ಲೆಲ್ಲ ಅದೇ ಶೋದ ಬಗ್ಗೆ ಚರ್ಚೆಯಿತ್ತು. ಕಾಮಿನಿಯ ಈ ದಿನಗಳು ಅತ್ಯಂತ ಆನಂದದಲ್ಲಿ ಕಳೆಯುತ್ತಿದ್ದವು. ರಾತ್ರಿಯಿಡಿ ಥಿಯೆಟರ್‍ನಲ್ಲಿ ಶೋ ನೋಡುತ್ತಿದ್ದಳು. ದಿನವಿಡಿ ಮಲಗುತ್ತಿದ್ದಳು, ಎಚ್ಚರಾದಾಗ ಅದೇ ಶೋದ ಬಗ್ಗೆ ಹರಟುತಿದ್ದಳು, ಸೌಂದರ್ಯ ಮತ್ತು ಪ್ರೇಮದ ರಮಣೀಯ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದಳು, ಆ ಲೋಕದ ಸುಖ, ದುಃಖಗಳು ಅವಳಿಗೆ ವಾಸ್ತವಕ್ಕಿಂತ ಹೆಚ್ಚು ಮನೋಹಾರಿ ಎಂದೆನಿಸಿದವು. ಈ ಮೂರು ತಿಂಗಳಲ್ಲಿ ಅವಳು ದಿನಾಲೂ ಪ್ರಣಯದ ಪಾಠದಲ್ಲಿ ಹಾಗೂ ಪ್ರೇಮಾಲಾಪದಲ್ಲಿ ಮುಳುಗಿದ್ದಳು. ಇದೆಲ್ಲದರ ಪರಿಣಾಮ ಹೃದಯದ ಮೇಲೆ ಆಗದೇ ಇದ್ದೀತೆ? ಅದು ಇಂತಹ ಉಕ್ಕುವ ಯೌವನದಲ್ಲಿ? ಪರಿಣಾಮ ಆಯಿತು, ಬಹುತೇಕ ಎಲ್ಲ ಕತೆಗಳಲ್ಲಿ ಆಗುವಂತೆಯೇ ಇಲ್ಲೂ ಆಯಿತು.

ಥಿಯೆಟರ್ ಹಾಲ್‍ನಲ್ಲಿ ಒಬ್ಬ ಸುಂದರ ಯುವಕನ ತೇಜಸ್ವಿ ಕಣ್ಣುಗಳು ಕಾಮಿನಿಯನ್ನು ದಿಟ್ಟಿಸಲಾರಂಭಿಸಿದವು. ಇವಳು ಸುಂದರಿಯಾಗಿದ್ದಳು, ತುಸು ಚಂಚಲೆಯೂ. ಮೊದಮೊದಲಿಗೆ ಆ ದೃಷ್ಟಿಯಲ್ಲಿ ಅವಳಿಗೆ ಯಾವುದೇ ವಿಶೇಷತೆ ಕಂಡಿರಲಿಲ್ಲ. ಆದರೆ ಕಣ್ಣುಗಳಿಗೂ ಮತ್ತು ಸೌಂದರ್ಯಕ್ಕೂ ಬಹುಬೇಗ ಮೈತ್ರಿಯಾಗುತ್ತದೆ. ದಿಟ್ಟಿಸುವುದು ಪುರುಷರ ಸ್ವಭಾವ ಹಾಗೂ ನಾಚಿಕೊಳುವುದು ಹೆಣ್ಣಿನ ಸ್ವಭಾವ. ಕೆಲವು ದಿನಗಳಲ್ಲಿಯೇ ಕಾಮಿನಿ ಆ ನೋಟದಲ್ಲಿನ ಗುಪ್ತಭಾವವನ್ನು ಅರಿತಳು, ಮುಂದೆ ಕಣ್ಣು ಕಣ್ಣು ಮಾತಾಡತೊಡಗಿದವು, ಪ್ರೀತಿ ಅಂಕುರಿಸಿತು. ಎಂದಾದರೂ ಕಾಮಿನಿ ಬೇರೆ ಎಲ್ಲೋ ಹೋದಳೆಂದರೆ ಅವಳಿಗೆ ಅಲ್ಲಿ ಕ್ಷಣವೂ ನಿಲ್ಲುವಂತಾಗುತ್ತಿರಲಿಲ್ಲ, ಮನಸ್ಸು ಚಡಪಡಿಸುತ್ತಿತ್ತು, ಕಣ್ಣಗಳು ಯಾರನ್ನೋ ಹುಡಕಲಾರಂಭಿಸುತ್ತಿದ್ದವು.

ಕೊನೆಗೂ ನಾಚಿಕೆಯ ಕಟ್ಟೆಯೊಡೆಯಿತು. ಮನದ ಮಾತುಗಳು ದನಿ ಕಂಡುಕೊಂಡವು. ಮೊದಲಿಗೆ ಪದ್ಯದಲ್ಲಿದ್ದ ಪ್ರೀತಿ ಗದ್ಯಕ್ಕೆ ಬಂತು. ಸ್ವಲ್ಪ ದಿನಗಳಲ್ಲಿಯೇ ಇಬ್ಬರೂ ಮಿಲನಮಂದಿರದ ದ್ವಾರಕ್ಕೆ ಬಂದು ತಲುಪಿದರು. ಇದಾದ ಮೇಲೆ ಏನಾಯಿತು ಎಂಬುದನ್ನು ಊಹಿಸಬಹುದು.

4.
ಆ ಯುವಕನ ಹೆಸರು ರೂಪಚಂದ. ಪಂಜಾಬಿನವನು. ಸಂಸ್ಕøತ, ಹಿಂದಿ, ಇಂಗ್ಲೀಷ್‍ನಲ್ಲಿ ಎಂ.ಎ. ಅಲ್ಲದೆ ಲಖನೌದಲ್ಲಿ ಕಬ್ಬಿಣದ ಫ್ಯಾಕ್ಟ್ರಿಯೊಂದರಲ್ಲಿ ಮ್ಯಾನೆಜರ್ ಆಗಿದ್ದ. ಮನೆಯಲ್ಲಿ ಸುಶೀಲೆ ಹೆಂಡತಿ ಮತ್ತು ಎರಡು ಮುದ್ದಾದ ಮಕ್ಕಳು. ಹಾಗೆ ನೋಡಿದರೆ, ಸ್ವಭಾವದಲ್ಲಿ ಗಂಭೀರನಾಗಿದ್ದ, ಯೌವನದಲ್ಲಿ ಕಾಲು ಜಾರುವವನಲ್ಲ, ಅಲ್ಲದೆ ಸಂಸಾರದಲ್ಲಿರುವ ಗೃಹಸ್ಥ. ಗೆಳೆಯರಲ್ಲಿ ತನ್ನ ಸದ್ವರ್ತನೆಗೆ ಪ್ರಸಿದ್ಧನಾಗಿದ್ದ. ಆದರೆ ಅದ್ಯಾವ ಮಾಯೆಯೋ ಅವನನ್ನು ಆವರಿಸಿಕೊಂಡು ಬಿಟ್ಟಿತ್ತು? ಅಲ್ಲಿ ನೆಲ, ಜಲವಿಲ್ಲ. ಅಗ್ನಿ, ವಾಯು, ಮುಗಿಲು ಇರಲಿಲ್ಲ. ಆದರೆ ಅಲ್ಲಿ ಪಾಪವಿತ್ತು. ಕಾಮಿನಿಯ ಬಗ್ಗೆ ಏನು ಹೇಳುವುದು, ಅವಳ ವಿವೇಕಬುದ್ಧಿ ಹಾಳಾಗಿ ಮೋಹಪ್ರವಾಹವಾಗಿ ಅವನ ಗುಡಿಸಲನ್ನು ಕೊಚ್ಚಿಕೊಂಡು ಹೋಯಿತು. ಇದೆಲ್ಲ ಅವಳ ಪೂರ್ವ ಸಂಸ್ಕಾರದ ಫಲ.

ರಾತ್ರಿಯ ಹತ್ತಾಗಿತ್ತು. ಟೆಬಲ್ ಲ್ಯಾಂಪ್‍ನ ಬೆಳಕಿನಲ್ಲಿ ಕಾಮಿನಿ ಪತ್ರ ಬರೆಯುತ್ತಿದ್ದಳು. ಮೊದಲ ಪತ್ರ ರೂಪಚಂದನ ಹೆಸರಿಗಿತ್ತು.
ಕೈಲಾಶ್ ಭವನ
ಲಖನೌ

ಪ್ರಾಣಸಖ,
ನಿನ್ನ ಪತ್ರ ಓದಿ ಜೀವ ಹೋದಂತಾಯಿತು. ಇನ್ನೂ ಒಂದು ತಿಂಗಳು ಬೇಕಾ? ಇಷ್ಟು ದಿನಗಳಲ್ಲಿ ಬಹುಶಃ ನಿನಗೆ ನನ್ನ ಬೂದಿಯೂ ಸಿಗಲಿಕ್ಕಿಲ್ಲ. ನನ್ನ ವ್ಯಥೆಯ ಬಗ್ಗೆ ಏನು ಹೇಳಲಿ? ಬರೀ ದೋಷಾರೋಪಣೆಯಾದೀತು? ಏನೆಲ್ಲ ಸಂಭವಿಸುತ್ತಿದೆ, ಎಂಬುದು ನಾನಷ್ಟೇ ಬಲ್ಲೆ. ಆದರೆ ವಿರಹಕಥೆ ಹೇಳದೆ ಎದೆಯುರಿ ಹೇಗೆ ಶಮನವಾದೀತು? ಪ್ರೀತಿ ಎಂಬುದು ಬೆಂಕಿಯ ನದಿ, ವಿರಹ ಅದರ ಅಲೆಗಳು ಎಂಬುದು ಈಗ ನಾನು ಅರಿತಿದ್ದೇನೆ. ಈಗಲೂ ಥಿಯೆಟರ್‍ಗೆ ಹೋಗುತ್ತೇನೆ, ಆದರೆ ಮನರಂಜನೆಗಲ್ಲ, ರೋಧಿಸಲು, ಪರಿತಪಿಸಲು. ಅಳುವಿನಲ್ಲಿಯೇ ಮನಸಿಗೆ ಕಿಂಚಿತ್ತು ಶಾಂತಿ ಲಭಿಸುತ್ತದೆ. ಇಡೀ ಜೀವನವೇ ನಿರಸವಾಗಿದೆ. ಯಾರೊಂದಿಗೂ ಮಾತಾಡಲು, ಭೇಟಿಯಾಗಲು ಮನಸಾಗದು. ಯಾವುದೇ ವಿಷಯದಲ್ಲೂ ಆಸಕ್ತಿ ಹುಟ್ಟದು. ಮೊನ್ನೆ ಡಾ. ಕೇಳಕರ್ ಅವರ ಉಪನ್ಯಾಸವಿತ್ತು. ಅಣ್ಣ ಬಹಳ ಒತ್ತಾಯಿಸಿದರೂ ನಾನು ಹೋಗಲಿಲ್ಲ. ಗೆಳೆಯ, ಸಾವಿಗೂ ಮುನ್ನ ಸಾಯಿಸಬೇಡ. ಉಳಿದಿರುವ ಕೆಲವೇ ಕೆಲವು ಆನಂದದಾಯಕ ಕ್ಷಣಗಳಲ್ಲೂ ವಿರಹದ ದುಃಖ ನೀಡಬೇಡ. ಬಂದು ಬಿಡು, ಎಷ್ಟು ಸಾಧ್ಯವೋ ಅಷ್ಟು ಬೇಗ. ಬಂದು ಒಮ್ಮೆ ಅಪ್ಪಿಕೊಂಡು ಹೃದಯಾಗ್ನಿಯನು ತಣಿಸು. ನೀನು ಬರುವಷ್ಟರಲ್ಲಿ ವಿರಹದ ಈ ಸಾಗರ ನನ್ನನ್ನು ನುಂಗಿದರೂ ಆಶ್ಚರ್ಯವೇನಿಲ್ಲ.
ಇಂತಿ ನಿನ್ನ
ಕಾಮಿನಿ

ಅದರ ನಂತರ ಇನ್ನೊಂದು ಪತ್ರ, ತನ್ನ ಪತಿಯ ಹೆಸರಿಗೆ.
ಕೈಲಾಶ್ ಭವನ
ಲಖನೌ

ಮೈ ಡಿಯರ್ ಗೋಪಾಲ,
ಇದುವರೆಗೆ ನಿನ್ನ ಎರಡು ಪತ್ರಗಳು ತಲುಪಿದವು. ಅವುಗಳಿಗೆ ಉತ್ತರಿಸಲಾಗಲಿಲ್ಲವೆಂಬ ಕೊರಗಿದೆ. ಎರಡು ವಾರಗಳಿಂದ ತಲೆನೋವಿನಿಂದ ಬಳಲುತ್ತಿದ್ದೇನೆ. ಏನೇ ಮಾಡಿದರೂ ಮನಸ್ಸಿಗೆ ಶಾಂತಿ ಸಿಗದಾಗಿತ್ತು. ಈಗ ಪರವಾಗಿಲ್ಲ. ಚಿಂತೆ ಬೇಡ. ನೀನು ಕಳಿಸಿದ ನಾಟಕಗಳಿಗಾಗಿ ಧನ್ಯವಾದಗಳು. ಸುಧಾರಿಸಿದ ಮೇಲೆ ಓದು ಆರಂಭಿಸುತ್ತೇನೆ. ನೀನು ಅಲ್ಲಿಯ ಸುಂದರ ಸ್ಥಳಗಳ ವರ್ಣನೆ ಮಾಡಬೇಡ, ನನಗೆ ನಿನ್ನ ಬಗೆಗಿನ ಹೊಟ್ಟೆಕಿಚ್ಚು ಇನ್ನೂ ಹೆಚ್ಚಾಗುತ್ತದೆ. ಒಂದು ವೇಳೆ ನಾನು ಕೇಳಿದರೆ ಅಣ್ಣ ನನ್ನನ್ನು ಅಲ್ಲಿಗೆ ಕಳಿಸುವ ವ್ಯವಸ್ಥೆ ಮಾಡುತ್ತಾರೆ, ಆದರೆ ಅವರ ವೆಚ್ಚ ಮೊದಲೇ ಹೆಚ್ಚಾಗಿರುವುದರಿಂದ ಇನ್ನೂ ಭಾರ ಹಾಕುವುದು ಯೋಗ್ಯವಲ್ಲ. ದೇವರು ಹರಸಿದರೆ, ನಾನು ನಿನ್ನ ಜೊತೆ ಅಲ್ಲಿ ಸುತ್ತಾಡಬಹುದಾದ ದಿನಗಳು ಬಂದೇ ಬರುತ್ತವೆ. ನಾನು ನಿನಗೆ ಈಗ ಹೆಚ್ಚು ತೊಂದರೆ ಕೊಡಬಯಸುವುದಿಲ್ಲ. ಆದರೆ ನನ್ನ ಅವಶ್ಯಕತೆಗಳನ್ನು ಯಾರಿಗೆ ಹೇಳಲಿ? ಈಗ ನನ್ನಲ್ಲಿ ಒಂದು ಒಳ್ಳೆಯ ಡ್ರೆಸ್ ಇಲ್ಲ. ಯಾವುದೇ ಸಮಾರಂಭಕ್ಕೆ ಹೋಗಲು ನಾಚಿಕೆಯಾಗುತ್ತಿದೆ. ಸಾಧ್ಯವಾದರೆ ಒಂದೊಳ್ಳೆ ಡ್ರೆಸ್ ಕಳಿಸಿಕೊಡು. ಹಾಗೆ ನೋಡಿದರೆ ಅವಶ್ಯಕತೆಗಳು ಬಹಳಷ್ಟಿವೆ. ಅದೆಲ್ಲ ಈಗ ಬೇಡ. ನೀನು ಸೌಖ್ಯದಿಂದಿರುವೆ ಎಂದು ಭಾವಿಸಿದ್ದೇನೆ.
ಇಂತಿ ನಿನ್ನ
ಕಾಮಿನಿ

5.

ಲಖನೌದ ಸೆಶನ್ ನ್ಯಾಯಾಲಯದಲ್ಲಿ ಜನ ಕಿಕ್ಕಿರಿದು ತುಂಬಿತ್ತು. ಗಾಳಿಗೂ ನುಸುಳಲು ಸ್ಥಳವಿರದಷ್ಟು ಜನದಟ್ಟಣೆ ಇತ್ತು. ನ್ಯಾಯಾಧೀಶರ ಎದುರು ಕಟಕಟೆಯಲ್ಲಿ ನಿಂತಿದ್ದ ಸುಂದರಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಬೇರೆ ಯಾರೂ ಅಲ್ಲ. ಅವಳು ಕಾಮಿನಿ. ಆಕೆಯ ಮುಖ ಇಳಿದಿತ್ತು, ಹಣೆಯ ಮೇಲೆ ಬೆವರಬಿಂದು ಸಾಲುಗಟ್ಟಿದ್ದವು. ನ್ಯಾಯಾಲಯದ ತುಂಬ ಕಡುಮೌನ ಪಸರಿಸಿತ್ತು. ವಕೀಲರ ನಡುವಿನ ಪಿಸುಮಾತುಗಳು ಆಗಾಗ ಈ ಸ್ತಬ್ಧತೆಯನ್ನು ಸೀಳಲೆತ್ನಿಸುತ್ತಿದ್ದವು. ಇಡಿ ಊರಿಗೆ ಊರೇ ಹರಿದುಬಂದಂತೆ ಆವರಣ ತುಂಬಿಹೋಗಿತ್ತು. ಆಗಿದ್ದೂ ಅದೇ. ಬಹುತೇಕ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ತೆರೆದಿದ್ದ ದುಕಾನುಗಳಲ್ಲಿ ಹುಡುಗರು ಕೂತು ಎಲೆ ಆಡುತಿದ್ದರು. ಗ್ರಾಹಕರಿಲ್ಲದ್ದೂ ಒಂದು ಕಾರಣವಿತ್ತು. ನ್ಯಾಯಾಲಯ ಮತ್ತು ಊರಿನ ನಡುವೆ ಜನರ ಓಡಾಟ ಎಂದಿಗಿಂತ ವಿಪರೀತ ಹೆಚ್ಚಾಗಿತ್ತು. ಕಾಮಿನಿಯನ್ನು ಒಂದುಬಾರಿ ನೋಡಲೆಂದು, ಅವಳ ಬಾಯಿಯಿಂದ ಬರುವ ಆ ಒಂದು ಮಾತನ್ನು ಕೇಳಲೆಂದು ಅಲ್ಲಿನ ಪ್ರತಿಯೊಬ್ಬನೂ ಉತ್ಸುಕನಾಗಿದ್ದ, ಸರ್ವಸ್ವವನ್ನೂ ತೊರೆಯಲು ಸಿದ್ಧನಾಗಿದ್ದ. ಪಂಡಿತ ದಾತಾದಯಾಲ ಶರ್ಮಾರವರ ಅತ್ಯಂತ ಉಪಯುಕ್ತ ಉಪನ್ಯಾಸ ಕೇಳಲು ಮನೆಯಿಂದ ಹೊರಬೀಳದ ಜನರೂ, ದಾರಿಬಿಟ್ಟ ತಮ್ಮ ಮಕ್ಕಳಿಗೆ ಅಲ್ಫ್ರೈಡ್ ಥಿಯೆಟರ್‍ನತ್ತ ಹೋಗದಿರುವಂತೆ ಆದೇಶಿಸದ ಮಹಾನುಭಾವರೂ, ವೈಸರಾಯ್‍ನ ಆಗಮನದ ಸುದ್ಧಿಯೂ ಕಿವಿಗೆ ಹಾಕಿಕೊಳ್ಳದೇ ಆರಾಮಾಗಿದ್ದ ಏಕಾಂತಪ್ರಿಯರೂ, ಮುಹರಮ್ ಹಬ್ಬದ ಉತ್ಸವವನ್ನು ನೋಡಲು ಮನೆಯಿಂದ ಹೊರಗೆ ಒಂದು ಹೆಜ್ಜೆಯನ್ನೂ ಇಡದ ನಿರುತ್ಸಾಹಿಗಳೂ ಇಂದು ಏಳುತ್ತ ಬೀಳುತ್ತ ಏದುಸಿರು ಬಿಡುತ್ತ ನ್ಯಾಯಾಲಯದತ್ತ ಧಾವಿಸುತ್ತಿದ್ದರು. ಪಾಪ, ಹೆಣ್ಣುಮಕ್ಕಳು ತಮ್ಮ ವಿಧಿಯನ್ನು ಶಪಿಸುತ್ತ ಮನೆಯ ಮಾಳಿಗೆ ಏರಿ ಅಸಹಾಯಕರಂತೆ ಆದರೆ ಉತ್ಸುಕತೆಯಿಂದ ಅತ್ತ ನೋಡುತ್ತಿದ್ದರು. ಅವರ ಚಿತ್ತವೆಲ್ಲ ನ್ಯಾಯಾಲಯದಲ್ಲಿಯೇ ಇತ್ತು, ಆದರೆ ಅಲ್ಲಿಗೆ ಹೋಗಲಾಗದ ಅವರ ಅಸಹಾಯಕ ದೃಷ್ಟಿಗಳು ವಾಡೆಗಳ ಗೋಡಗಳಿಗೆ ಅಪ್ಪಳಿಸಿ ಹಿಂದಿರುಗುತ್ತಿದ್ದವು. ಇದೆಲ್ಲ ಓಡಾಟ ಏಕೆಂದರೆ ಇಂದು ನ್ಯಾಯಾಲಯದಲ್ಲಿ ಒಂದು ಅದ್ಭುತ ಅಭಿನಯ ಪ್ರದರ್ಶನ ನಡೆಯಲಿತ್ತು, ಅದಕ್ಕೆ ಅಲ್ಫ್ರೈಡ್ ಥಿಯೆಟರ್‍ನ ಸಾವಿರ ಪ್ರಯೋಗಗಳೂ ಸಮವಾಗುವುದು ಸಾಧ್ಯವಿರಲಿಲ್ಲ. ಕತ್ತಲೆಯಲ್ಲಿ ಕಡ್ಡಿಯಷ್ಟು ಇರುವ ಬೆಳಕಿನಲ್ಲಿ ಗುಡ್ಡದಷ್ಟಾಗುವ ಗುಟ್ಟೊಂದು ಇಂದು ರಟ್ಟಾಗಲಿತ್ತು. ಈ ಬಗ್ಗೆ ಹಲವಾರು ಜನ ಆಡಿಕೊಳ್ಳುತ್ತಿದ್ದರು. ಅವರಲ್ಲೊಬ್ಬ ‘ಛೇ, ಅಸಂಭವ, ರೂಪಚಂದನಂತಹ ಸುಶಿಕ್ಷಿತ ವ್ಯಕ್ತಿ ಇಂತಹ ದುಷ್ಕರ್ಮ ಮಾಡುವುದು ಸಾಧ್ಯವಿಲ್ಲ, ಪೋಲಿಸರು ಹಾಗೆ ಹೇಳುತ್ತಾರಾದರೆ ಹೇಳಿಕೊಳ್ಳಲಿ, ಸಾಕ್ಷಿಗಳೂ ಅದಕ್ಕೆ ಪೂರಕವಾಗಿದ್ದರೂ ಇರಲಿ’ ಎನ್ನುತ್ತಿದ್ದ. ಇನ್ನೊಬ್ಬ ‘ಪೋಲಿಸರದ್ದು ಅತಿಯಾಯ್ತು. ಇದು ಶುದ್ಧ ಅನ್ಯಾಯ’ ಎನ್ನುತ್ತಿದ್ದ. ಮಗದೊಬ್ಬ ‘ಈ ರೂಪ-ಲಾವಣ್ಯ ಮಾಡಿರುವ ಆಟವೇನು ಕಡಿಮೆಯಿಲ್ಲ’ ಎನ್ನುತ್ತಿದ್ದ. ಆದರೆ ಕೇಳುಗರು ಇವೆಲ್ಲವನ್ನು ಆಕಾಶವಾಣಿ ಎಂಬಂತೆ ಆಶ್ಚರ್ಯಚಕಿತರಾಗಿ ಕೇಳುತ್ತಿದ್ದರು. ಎಲ್ಲರ ನಾಲಿಗೆಯಲ್ಲೂ ಇದೇ ವಿಷಯ ಹರಿದಾಡುತ್ತಿತ್ತು. ಎಲ್ಲರೂ ಇನ್ನೊಂದಿಷ್ಟು ಉಪ್ಪು-ಖಾರ ಹಚ್ಚುತ್ತಿದ್ದರು. ಆದರೆ ಈ ಎಲ್ಲ ಮಾತುಗಳಲ್ಲಿ ಅನುಕಂಪ, ಸಹಾನುಭೂತಿಗೆ ಕಿಂಚಿತ್ತೂ ಸ್ಥಾನವಿರಲಿಲ್ಲ.

6.

ಪಂಡಿತ ಕೈಲಾಶನಾಥರ ಸಾಕ್ಷಿ ಮುಗಿಯಿತು. ಕಾಮಿನಿಯ ಸಾಕ್ಷಿ ಅತ್ಯಂತ ಸಂಕ್ಷಿಪ್ತವಾಗಿತ್ತು. ಆ ರಾತ್ರಿ ನಾನು ನನ್ನ ಕೋಣೆಯಲ್ಲಿ ಮಲಗಿದ್ದೆ. ಒಂದು ಗಂಟೆಯ ಸುಮಾರಿಗೆ ಕಳ್ಳ-ಕಳ್ಳ ಎಂದು ಅರಚುವ ಧ್ವನಿ ಕೇಳಿ ಎದ್ದು ನೋಡಿದರೆ ನನ್ನ ಮಂಚದ ಬಳಿ ನಾಲ್ಕು ಜನ ಪುರುಷರು ಹೊಡೆದಾಡುತ್ತಿದ್ದರು. ನನ್ನ ಅಣ್ಣ ಹಾಗೂ ಇಬ್ಬರು ಕಾವಲುಗಾರರು ಸೇರಿ ಒಬ್ಬನನ್ನು ಗಟ್ಟಿಯಾಗಿ ಹಿಡಿದಿದ್ದರು ಮತ್ತು ಆತ ಓಡಿಹೋಗುವ ಯತ್ನ ಮಾಡುತ್ತಿದ್ದ. ನಾನು ಹೆದರಿ ಅಲ್ಲಿಂದ ಹೊರಟು ಪಡಸಾಲೆಗೆ ಬಂದೆ. ನಂತರ ಪೋಲಿಸರು ಬಂದು ಅವನನ್ನು ವಶಕ್ಕೆ ತೆಗೆದುಕೊಂಡು ಸ್ಟೇಷನ್‍ನತ್ತ ಹೋಗುತ್ತಿರುವುದನ್ನು ನೋಡಿದೆ.

ಕಾಮಿನಿಯ ಸಾಕ್ಷಿ ಕೇಳಿ ರೂಪಚಂದ ದೀರ್ಘ ನಿಟ್ಟುಸಿರುಬಿಟ್ಟು. ಮಂಕುಕವಿದಿದ್ದ ಕಣ್ಣುಗಳಲ್ಲಿ ಹನಿಗೂಡಿದವು. ಕಾಮಿನಿ, ನೀನೆಂಥ ಕೃತಘ್ನೆ, ಭಾವಶೂನ್ಯೆ, ಪಿಶಾಚಿ. ಇದೇ ನಿನ್ನ ಪ್ರೀತಿಯೇನು? ಆ ವಿರಹವೇದನೆ, ಆ ಪ್ರೇಮೋದ್ಗಾರ, ಎಲ್ಲವೂ ಮೋಸವೇ? ನೀನು ಅದೆಷ್ಟು ಬಾರಿ ಹೇಳಿದ್ದೆ, ನಂಬಿಕೆಯೇ ಪ್ರೇಮಮಂದಿರದ ಮೊದಲ ಮೆಟ್ಟಿಲು ಎಂದು? ಅದೆಷ್ಟು ಬಾರಿ ಕಣ್ತುಂಬಿಕೊಂಡು ನಾನು ಇನ್ನು ನಿನ್ನವಳು ಎಂದು ಹೇಳಿದ್ದೆ? ನನ್ನ ಮಾನ ಪ್ರಾಣ ಎಲ್ಲವೂ ನಿನ್ನ ಕೈಯಲಿದೆ ಎಂದಿದ್ದೆ. ಆದರೆ.. ಅಯ್ಯೋ ಇಂದು ಪ್ರೇಮಪರೀಕ್ಷೆಯ ಸಂದರ್ಭದಲ್ಲಿ ಎಲ್ಲವೂ ಸುಳ್ಳಾಯಿತಲ್ಲ. ಮೋಸ ಮಾಡಿದೆ, ನನ್ನ ಜೀವನ ಮಣ್ಣುಗೂಡಿಸಿದೆ.

ರೂಪಚಂದ ತನ್ನ ಮನೋಲಾಪದಲ್ಲಿ ಮುಳುಗಿದ್ದ. ಅತ್ತ ವಕೀಲ ಕಾಮಿನಿಗೆ ಕ್ರಾಸ್ ಮಾಡಲು ಪ್ರಾರಂಭಿಸಿದರು.
ವಕೀಲ – ಸತ್ಯ ಹೇಳು, ರೂಪಚಂದ ಆಗಾಗ ನಿಮ್ಮ ಮನೆಗೆ ಬರುತ್ತಿದ್ದನಲ್ಲವೆ?
ಕಾಮಿನಿ – ಇಲ್ಲ, ಅವನನ್ನು ನಮ್ಮ ಮನೆಯಲ್ಲಿ ನಾನು ಎಂದೂ ಕಂಡಿಲ್ಲ.
ವಕೀಲ – ಆಣೆ ಮಾಡಿ ಹೇಳು, ನೀನು ಎಂದೂ ಅವನ ಜೊತೆ ಥಿಯೆಟರ್ ನೋಡಲು ಹೋಗಿಲ್ಲವೆ?
ಕಾಮಿನಿ – ನಾನು ಅವನನ್ನು ಎಂದೂ ನೋಡಿಲ್ಲ.
ವಕೀಲ – ಧೃಢವಾಗಿ ಹೇಳುತ್ತೀಯಾ, ನೀನು ಎಂದೂ ಅವನಿಗೆ ಪ್ರೇಮಪತ್ರ ಬರೆದಿಲ್ಲವೆಂದು?

ಬೇಟೆಗಾರನ ಬಲೆಯಲ್ಲಿ ಸಿಕ್ಕ ಹಕ್ಕಿಯಂತೆ, ಪತ್ರದ ಉಲ್ಲೇಖವಾದ ಕೂಡಲೇ ಕಾಮಿನಿ ಕೈಕಾಲುಗಳಲ್ಲಿನ ಶಕ್ತಿ ಉಡುಗಿದಂತಾಯಿತು. ನಾಲಿಗೆ ಏಳಲಿಲ್ಲ. ಜಡ್ಜ್, ವಕೀಲ ಮತ್ತು ಊರಿನ ಸಹಸ್ರಾರು ಕಣ್ಣುಗಳು ಅವಳತ್ತ ಪ್ರಶ್ನಾರ್ಥಕವಾಗಿ ನೋಡಿದವು.

ರೂಪಚಂದನ ಮುಖದ ಮೇಲೆ ಕಳೆ ಬಂತು. ಎದೆಯ ಬಡಿತ ತುಸು ಸ್ಥಿಮಿತಕ್ಕೆ ಕಂಡಿತು. ಹೂವು ಇದ್ದಲ್ಲಿ ಮುಳ್ಳು ಹುಟ್ಟಿತು. ಪಾಪಿ, ಮೋಸಗಾತಿ ಎಂದು ಮನದಲ್ಲೇ ಶಪಿಸಿದ. ತನ್ನ ಸುಖ, ಮಾನ, ಮರ್ಯಾದೆಗಾಗಿ ನನ್ನನ್ನು, ನನ್ನ ಪರಿವಾರವನ್ನು ಮುಗಿಸಲು ಹೊಂಚುಹಾಕುತ್ತಿರುವ ಕೊಲೆಗಾತಿ. ನೀನು ಇನ್ನೂ ನನ್ನ ಮುಷ್ಠಿಯಲ್ಲಿರುವೆ. ನಾನು ಈಗಲೂ ನಿನ್ನ ಕೃತಘ್ನತೆಗೆ ಶಿಕ್ಷೆ ಕೊಡಬಲ್ಲೆ. ನೀನು ಮನಸಾರೆ ಬರೆದೆಯೋ ಹೇಗೋ ಗೊತ್ತಿಲ್ಲ, ಆದರೆ ನನ್ನ ಮನಮೋಹಗೊಂಡ ಆ ಪತ್ರಗಳು ಇನ್ನೂ ನನ್ನ ಬಳಿ ಇವೆ. ಅವೇ ಸಾಕು ನಿನ್ನ ಬಣ್ಣ ಬಯಲುಮಾಡಲು ಎಂದುಕೊಳ್ಳುತ್ತ ರೂಪಚಂದ ತನ್ನ ಕೋಟಿನ ಜೇಬಿಗೆ ಕೈಹಾಕಿದ. ಜಡ್ಜ್, ವಕೀಲ ಮತ್ತು ಸಹಸ್ರ ಕಣ್ಣುಗಳು ಚಾತಕದಂತೆ ಅತ್ತ ನೋಡಿದವು.

ಆಗ ಕಾಮಿನಿಯ ಕಂಗಾಲು ಕಣ್ಣುಗಳು ಹತಾಶೆಯಿಂದ ನರಳುತ್ತ ರೂಪಚಂದನ ಮೇಲೆ ನಿಂತವು. ಈಗ ಅವುಗಳಲ್ಲಿ ನಾಚಿಕೆ ಇತ್ತು, ದಯೆಯ ಬಿಕ್ಷಾಟನೆಯಿತ್ತು, ಪ್ರಾರ್ಥನೆಯಿತ್ತು, ವ್ಯಾಕುಲತೆಯಿತ್ತು ಹಾಗೂ ಅವು ಕೈಜೋಡಿಸಿ ‘ನಾನೊಬ್ಬ ಹೆಣ್ಣು, ಅಬಲೆ. ಆದರೆ ನೀನೊಬ್ಬ ಪುರುಷ, ಶಕ್ತಿವಂತ, ಸಾಹಸಿ. ಹೀಗೆ ಮಾಡುವುದು ನಿನ್ನ ಪರುಷತ್ವಕ್ಕೆ ಶೋಭಿಸುವಂತಹದ್ದಲ್ಲ. ನಾನು ನಿನ್ನವಳಾಗಿದ್ದೆ, ಈಗ ದೂರಾಗಿದ್ದರೂ ನನ್ನ ಮಾನ-ಪ್ರಾಣ ನಿನ್ನ ಕೈಲಿದೆ. ನೀನು ನನ್ನನ್ನು ರಕ್ಷಿಸಲೇಬೇಕು’. ಅವಳ ಕಣ್ಣಿಗೆ ಕಣ್ಣು ಸೇರುತ್ತಲೇ ಈ ಎಲ್ಲ ಮಾತುಗಳ ಅವನಲ್ಲಿ ಪ್ರವೇಶ ಪಡೆದವು. ಅವನಿಗೂ ಗೊತ್ತಿಲ್ಲದೇ ಅವನ ಕಣ್ಣುಗಳು ‘ನಿನ್ನ ಮಾನಕ್ಕೆ ಯಾವುದೇ ಧಕ್ಕೆಯಾಗಲು ಬಿಡುವುದಿಲ್ಲ. ನಿನ್ನ ಮರ್ಯಾದೆಯ ಸಲುವಾಗಿ ನನ್ನ ಸರ್ವಸ್ವವೂ ತ್ಯಜಿಸುವೆ’ ಎಂದು ಹೇಳಿದಂತಾಯಿತು.

ಸ್ಥಿತಿಯನ್ನು ವಶಕ್ಕೆ ತೆಗೆದುಕೊಳ್ಳುತ್ತ, ಮತ್ತೆ ವಕೀಲ ಕಾಮಿನಿಗೆ ಅದೇ ಪ್ರಶ್ನೆ ಕೇಳಿದ.
ವಕೀಲ – ಧೃಢವಾಗಿ ಹೇಳುತ್ತೀಯಾ, ನೀನು ಎಂದೂ ಅವನಿಗೆ ಪ್ರೇಮಪತ್ರ ಬರೆದಿಲ್ಲವೆಂದು?
ಕಾಮಿನಿ ಅತ್ಯಂತ ಕರುಣಾಜನಕ ದನಿಯಲ್ಲಿ – ದೇವರಾಣೆಗೂ, ನಾನು ಅವನಿಗೆ ಎಂದೂ ಯಾವ ಪತ್ರವನ್ನು ಬರೆದಿಲ್ಲ. ಅಲ್ಲದೆ ನ್ಯಾಯಾಲಯ ಇಂತಹ ಅಸಹ್ಯ ಅಪಾದನೆಯಿಂದ ನನ್ನನ್ನು ಕಾಪಾಡಬೇಕು ಎಂದು ವಿನಂತಿಸುವೆ ಎಂದಳು.

ವಾದವಿವಾದದ ಕಾರ್ಯಕಲಾಪ ಮುಗಿಯಿತು. ಈಗ ಅಪರಾಧಿಯಾಗಿದ್ದ ರೂಪಚಂದನ ಸಾಕ್ಷಿಯ ಸರದಿಯಿತ್ತು.
ಅವನ ಪರವಾಗಿ ಯಾವ ಸಾಕ್ಷಿಗಳೂ ಇರಲಿಲ್ಲ. ಆದರೆ ರೂಪಚಂದನ ಸಾಕ್ಷಿ ಕ್ಷಣದಲ್ಲಿಯೇ ಈ ಸುಳ್ಳಿನ ಮಹಲನು ಕೆಡುಹಲಿದೆ ಎಂದು ವಕೀಲರಿಗೆ, ನ್ಯಾಯಾಧೀಶರಿಗೆ ಮತ್ತು ಜನರಿಗೆ ಸಂಪೂರ್ಣ ವಿಶ್ವಾಸವಿತ್ತು. ರೂಪಚಂದ ಕಟಕಟೆಗೆ ಬಂದ. ಅವನ ಮುಖದಿಂದ ತೇಜಸ್ಸು ಮತ್ತು ಶಾಂತಿ ಹೊಮ್ಮುತ್ತಿತ್ತು. ದರ್ಶಕರು ಮುಂದಿನ ಕ್ಷಣಕ್ಕಾಗಿ ಕಾಯುತ್ತಿದ್ದರು. ಆದರೆ ಅತ್ಯಂತ ಶಾಂತಿಯಿಂದ ರೂಪಚಂದ ‘ಹೌದು, ನಾನು ಅಪರಾಧ ಮಾಡಿದ್ದೇನೆ’ ಎಂದು ಒಪ್ಪಿಕೊಂಡಾಗ ಎಲ್ಲರೂ ನಿಬ್ಬೆರಗಾಗಿ ಪರಸ್ಪರರ ಮುಖನೋಡಿಕೊಳ್ಳುವಂತಾಯಿತು. ಎಣಿಸಿದ್ದೇ ಬೇರೆ, ನಡೆದದ್ದೇ ಬೇರೆ..!

ಅಪರಾಧಿಯ ಸಾಕ್ಷಿ ಮುಗಿಯುತ್ತಲೇ ಗೊಂದಲ ಸೃಷ್ಟಿಯಾಯಿತು. ಜನರ ಏನೇನೋ ಆಡಿಕೊಳ್ಳತೊಡಗಿದರು. ಎಲ್ಲರಿಗೂ ಆಶ್ಚರ್ಯ, ಸಂಶಯ ಮತ್ತು ನಿರಾಶೆಯಾಗಿತ್ತು. ಕಾಮಿನಿಯ ಕೃತಘ್ನತೆಯ ಮೇಲೆ ಇನ್ನಷ್ಟು ಧಿಕ್ಕಾರ ಹುಟ್ಟಿಕೊಂಡಿತು. ಪ್ರತಿಯೊಬ್ಬನಿಗೂ ರೂಪಚಂದ ನಿರ್ದೋಷಿ ಎಂಬುದು ಗೊತ್ತಿತ್ತು. ಆದರೆ ಪ್ರೀತಿ ಅವನ ಬಾಯಿಯನ್ನು ಕಟ್ಟಿಹಾಕಿತ್ತು. ಪರರ ದುಃಖದಲ್ಲಿಯೂ ಸುಖ ಕಂಡುಕೊಳ್ಳುವ ಕೆಲವು ಜನರ ಈ ಬಗ್ಗೆ ನಗಾಡಿಕೊಳ್ಳುತ್ತಿದ್ದರು.

ಎರಡು ತಾಸು ಕಳೆದಿದ್ದವು. ನ್ಯಾಯಾಲಯದಲ್ಲಿ ಪುನಃ ಶಾಂತಿ ಪಸರಿಸಿತು. ನ್ಯಾಯಾಧೀಶರು ನಿರ್ಣಯ ಹೇಳಲಾರಂಭಿಸಿದರು. ‘ಅಪರಾಧಿ ಯುವಕನಾಗಿದ್ದಾನೆ, ಸುಶಿಕ್ಷಿತನೂ ಸಭ್ಯನೂ ಆಗಿರುವುದು ಕಂಡುಬಂದಿದೆ. ಆದರೆ ಆತ ಕಣ್ಣಿದ್ದೂ ಕುರುಡನಾಗಿದ್ದಾನೆ. ಈ ತಪ್ಪಿಗೆ ಶಿಕ್ಷೆ ನೀಡುವುದು ಅವಶ್ಯಕವಾಗಿದೆ. ಅಪರಾಧ ಸ್ವೀಕರಿಸಿದ ಮಾತ್ರಕ್ಕೆ ಶಿಕ್ಷೆ ಕಡಿಮೆಯಾಗುವುದಿಲ್ಲ. ನ್ಯಾಯಾಲಯ ಅಪರಾಧಿಗೆ ಐದು ವರ್ಷದ ಸಶ್ರಮ ಜೈಲುವಾಸದ ಶಿಕ್ಷೆ ವಿಧಿಸುತ್ತದೆ’ ಎಂದು ಇತಿಶ್ರೀ ಹಾಡಿದರು.

ಸಾವಿರಾರು ಜನ ಎದೆಗಟ್ಟಿಮಾಡಿಕೊಂಡು ನಿರ್ಣಯ ಆಲಿಸಿದರು. ಹೃದಯದಲ್ಲಿ ಈಟಿ ಹೊಕ್ಕ ಅನುಭವವಾಗುತ್ತಿತ್ತು. ಎಲ್ಲರ ಮುಖಗಳೂ ನಿರಾಶೆ ಹಾಗೂ ಕ್ರೋಧದಿಂದ ರಕ್ತವರ್ಣಕ್ಕೆ ತಿರುಗಿದ್ದವು. ಇದು ಅನ್ಯಾಯ, ಕಠೋರತೆ, ನಿರ್ದಯತೆ ಎಂದು ಜನ ಪಶ್ಚಾತ್ತಾಪ ಮಾಡಿಕೊಳ್ಳುತ್ತಿದ್ದರು. ಆದರೆ ರೂಪಚಂದನ ಮುಖ ಪ್ರಸನ್ನವಾಗಿತ್ತು, ಅಲ್ಲಿ ಶಾಂತಿ ನೆಲೆಯೂರಿತ್ತು.

ಗಿರೀಶ ಜಕಾಪುರೆ

* * * * *

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x