ಕಥಾಲೋಕ

ಸಮಾಧಾನ: ಗಿರಿಜಾ ಜ್ಞಾನಸುಂದರ್

ಘಂಟೆ ರಾತ್ರಿ 8.30 ಆಗಿತ್ತು. ಕುಮುದಳ ಶಿಫ್ಟ್ ಮುಗಿದು ಅವಳು ತನ್ನ ಕಂಪ್ಯೂಟರ್ ಮುಚ್ಚುತ್ತಿದ್ದಳು. ಅಷ್ಟರಲ್ಲಿ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಅವರ ಕರೆಯನ್ನು ಸ್ವೀಕರಿಸಲು ಮನಸ್ಸಿಲ್ಲ. ಹಾಗೆ ಸುಮ್ಮನೆ ಮೊಬೈಲ್ ಕಂಪಿಸುತ್ತಿತ್ತು. ತನ್ನ ಆಫೀಸ್ ನ ಕ್ಯಾಬ್ ಗಳು ನಿಲ್ಲುವ ಜಾಗಕ್ಕೆ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಳು. 15 ನಿಮಿಷದಲ್ಲಿ ಅವಳಿಗೆ ಅವಳ ಕ್ಯಾಬ್ ಹಿಡಿದು ಕೂರಬೇಕಿತ್ತು. ಮತ್ತೊಮ್ಮೆ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಇಷ್ಟವೇ ಇಲ್ಲದ ಕರೆ. ಸುಮ್ಮನಾದಳು. ಕ್ಯಾಬ್ ಹಿಡಿದು ಹಿಂಬದಿಯ ಸೀಟಿನಲ್ಲಿ ತಲೆಯೊರಗಿ ಕೂತಳು. ಅಂದು ಆಫೀಸ್ ನಲ್ಲಿ ತುಂಬ ಕೆಲಸ ಇದ್ದದರಿಂದ ದಣಿದಿದ್ದಳು. ಜೊತೆಗೆ ಅವಳ ಬೇಜಾರನ್ನು ಕೇಳಿ ಸಮಾಧಾನ ಮಾಡಲು ಅವಳ ಗೆಳತಿ ಆಫೀಸ್ ಗೆ ಬಂದಿರಲಿಲ್ಲ. ಯಾವುದೊ ಕಾರಣಕ್ಕೆ ರಜೆ ಹಾಕಿದ್ದಳು. ಕುಮುದಳಿಗೆ ಅದು ಇನ್ನಷ್ಟು ಬೇಸರ ತಂದಿತ್ತು. ಕಣ್ಣು ಮುಚ್ಚಿ ಸ್ವಲ್ಪ ಸುಧಾರಿಸಿಕೊಳ್ಳೋಣವೆಂದರೆ ಮತ್ತೊಮ್ಮೆ ಮೂರ್ತಿ ಅಂಕಲ್ ನ ಕರೆ. ಅಯ್ಯೋ ದೇವರೇ ಈ ಮನುಷ್ಯನಿಗೆ ನನ್ನ ನಂಬರ್ ಕೊಟ್ಟು ದೊಡ್ಡ ತಪ್ಪು ಮಾಡಿದೆ ಅನ್ನಿಸುತ್ತಿದೆ. ಈ ಸಲ ಕರೆ ಸ್ವೀಕರಿಸಿದಳು ” ಏನು ಪುಟ್ಟಿ, ತುಂಬ ಕೆಲಸ ಅನ್ಸುತ್ತೆ. ನನ್ನ ಫೋನ್ ರಿಸೀವ್ ಮಾಡೋಕು ಪುರ್ಸೊತ್ತಿಲ್ವಾ? ಇರ್ಲಿ ಬಿಡು. ಇವಾಗಾದ್ರು ಮಾತಾಡ್ತಿದ್ಯಲ್ಲ. ಆಯ್ತಾ ಡ್ಯೂಟಿ? ಕ್ಯಾಬ್ ಸಿಕ್ತ?” ಕುಮುದ ಇನ್ನು ಸಣ್ಣ ಮಗುವೇನಲ್ಲ. ಅವಳಿಗೆ ೧೦ ವರ್ಷದ ಮಗನಿದ್ದ. ಮೂರ್ತಿ ಅಂಕಲ್ ಕುಮುದಳ ಅಣ್ಣನ ಮಾವ. ಅಣ್ಣನಿಗೆ ಹೊಸದಾಗಿ ಮದುವೆಯಾಗಿದೆ. ಹೊಸ ಸಂಬಂಧ. ಅವರ ಮದುವೆಯಲ್ಲಿ ಬಹಳ ಸಂಭ್ರಮದಿಂದ ಓಡಾಡುತ್ತಿದ್ದ ಅವಳನ್ನು ಮೂರ್ತಿ ಬಹಳ ಹೊಗಳಿ ಕೊಂಡಾಡಿದ್ದರು. ಕುಮುದಳಿಗೆ ತನ್ನ ಮಾಡುವೆ ಆದ ಮೇಲೆ ತವರು ಮನೆಯೇ ಮರೀಚಿಕೆ ಆಗಿತ್ತು. ತಂದೆ ತಾಯಿಗೆ ಅವಳು ಬೇಡವಾಗಿದ್ದಳು. ಅಣ್ಣನ ಮದುವೆಗಾಗಿ ಅವರೊಡನೆ ಒಡನಾಟ ಅವಳಿಗೆ ಹಿತ ತಂದಿತ್ತು. ಎಷ್ಟಾದರೂ ಹೆಣ್ಣಿಗೆ ತವರಿನ ಮೇಲಿನ ಪ್ರೀತಿ ಕಡಿಮೆ ಆಗುವುದಿಲ್ಲವಲ್ಲ. ಮದುವೆಯಲ್ಲಿ ಅವಳನ್ನು ಮಾತನಾಡಿಸಿ ಅವಳ ನಂಬರ್ ತೆಗೆದುಕೊಂಡ ಮೂರ್ತಿ ಅಂಕಲ್ ಅವಳಿಗೆ ಆಗಾಗ ಫೋನ್ ಮಾಡುತ್ತಿದ್ದರು. ಅದು ಬರುಬರುತ್ತ ಎಷ್ಟು ಹೆಚ್ಚಾಗಿತ್ತೆಂದರೆ ಅವಳಿಗೆ ಫೋನ್ ಬೇಡವೇ ಬೇಡ ಅನ್ನಿಸಿತ್ತು. ” ಹೌದು ಅಂಕಲ್ ಕೆಲಸ ಜಾಸ್ತಿ ಇತ್ತು. ತುಂಬ ಸುಸ್ತಾಗಿದ್ದೀನಿ ನಾಳೆ ಮಾತಾಡ್ತಿನಿ ಪ್ಲೀಸ್… ಬೇಜಾರು ಮಾಡ್ಕೋಬೇಡಿ” “ಏನಾದ್ರು ಬೇಕಿದ್ರೆ ಕೇಳು ಪುಟ್ಟಿ, ಸಂಕೋಚ ಪಟ್ಕೊಬೇಡ. ನಾನಿದ್ದೀನಿ”. ಅವಳು ಕರೆಯನ್ನು ಕೊನೆಗೊಳಿಸಿದ್ದಳು. ದಿನವೂ ಹೀಗೆಯೇ ಏನಾದರೊಂದು ನೆಪ ಹಿಡಿದು “ನಾನಿದ್ದೀನಿ” ಅನ್ನೋ ಮುದುಕ. ಅತ್ತಿಗೆಯ ತಂದೆ. ನೋಡಲು ಬಹಳ ಸಭ್ಯನಂತಿದ್ದ ಮನುಷ್ಯ. ಅವನಿಗೂ ಒಬ್ಬಳೇ ಮಗಳು. ಅವಳನ್ನು ತನ್ನ ಅಣ್ಣನಿಗೆ ತಂದುಕೊಂಡಾಗಿದೆ. ದಿನವೂ ಕರೆ ಮಾಡುವ ಅವಶ್ಯಕತೆ ಏನಿದೆ.. ಇರಲಿ ಬಿಡು ಮನುಷ್ಯ ಇರುವುದೇ ಹೀಗೆ ಅನ್ನಿಸುತ್ತೆ ಅಂದುಕೊಂಡು ಸುಮ್ಮನಾದಳು.

ಕುಮುದಳ ಮನೆ ತುಂಬ ಚಿಕ್ಕದು. ಅವಳೊಬ್ಬಳ ಸಂಬಳದಿಂದ ಮನೆ ನಡೆಯುತ್ತಿತ್ತು. ಅವಳ ಗಂಡನ ಸಂಪಾದನೆಯೆಲ್ಲ ಬ್ಯಾಂಕ್ ಲೋನ್ ಗೆ ಹೋಗುತ್ತಿತ್ತು. ಮೂರು ಜನರ ಖರ್ಚು ಮತ್ತು ಮನೆ ಬಾಡಿಗೆ ಅವರಿಗೆ ಕಷ್ಟವೇ ಆಗಿತ್ತು. ಹೆಚ್ಚಾದ ಸಂಬಳವೇನು ಇರಲಿಲ್ಲವಾದ್ದರಿಂದ ಕುಂಟುತ್ತಾ ನಡೆಯುತ್ತಿದ್ದ ಜೀವನ. ಜೊತೆಯಲ್ಲಿ ಅವಳಿಗೆ ಸಹಾಯಕ್ಕೆ ಯಾರು ಇರಲಿಲ್ಲ. ತವರು ಮನೆಯವರು ಅವಳನ್ನು ಮರೆತು ಬಹಳ ವರ್ಷಗಳೇ ಆಗಿದ್ದವು. ಅದರಲ್ಲಿ ಮೂರ್ತಿ ಅಂಕಲ್ ಪ್ರತಿದಿನವೂ ಕರೆ ಮಾಡಿ ಮಾತನಾಡುವುದು ಅವಳಿಗೆ ಮೊದಮೊದಲು ಕಿರಿಕಿರಿ ಅನಿಸಿದರೂ ಬಹುಷಃ ಅವರು ಮಗಳಂತೆ ನನ್ನನ್ನು ನೋಡುತ್ತಿರಬಹುದು ಎಂದು ಸಂತೋಷಪಟ್ಟಳು. ಆದರೆ ಅಣ್ಣನ ಮದುವೆಯ ನಂತರ ಅವರ ಮನೆಗೆ ಹೋದಾಗ ಮೂರ್ತಿ ತನ್ನನ್ನು ಪ್ರೀತಿಯಿಂದ ಕರೆದು ಎಲ್ಲರ ಮುಂದೆ ಅಪ್ಪಿಕೊಂಡಾಗ ಇರುಸುಮುರುಸಾಗಿದ್ದು ನಿಜ. ಅಷ್ಟೊಂದು ಹತ್ತಿರದ ಅಪ್ಪುಗೆ ಜೊತೆಯಲ್ಲಿ ಆ ಸ್ಪರ್ಶ ಬೇರೆ ರೀತಿಯೇ ಇತ್ತು. ಅವಳು ಇದನ್ನೆಲ್ಲಾ ಯಾರಿಗೂ ಹೇಳಲಾರದೆ ತನ್ನೊಳಗೆ ಯೋಚಿಸಿ ನೊಂದುಕೊಳ್ಳುತ್ತಿದ್ದಳು. ಸುಮಾರು 30 ವರ್ಷದ ಹೆಣ್ಣು. ನೋಡಲು ಸಾಧಾರಣವಾಗಿದ್ದರು ತನ್ನ ಮಾತಿನಲ್ಲಿ ಚುರುಕಾಗಿದ್ದಳು. ಅದು ಬಹುಷಃ ಜನರನ್ನು ಆಕರ್ಷಿಸುತ್ತಿತ್ತು.

ಅಂದು ಮೂರ್ತಿ ಅಂಕಲ್ ಕುಮುದಳಿಗೆ ಒಂದೇ ಸಮನೆ ಕರೆ ಮಾಡುತ್ತಿದ್ದರು. ಅಂದು ಅವಳ ಆಫೀಸ್ ಗೆ ರಜೆಯೆಂದು ಮೊದಲೇ ಯಾವಾಗಲೋ ಹೇಳಿದ್ದಳು. ಅದನ್ನ ನೆನಪಿಟ್ಟು ಕೊಂಡು ಒಂದೇ ಸಮ ಕರೆ ಮಾಡುತ್ತಿದ್ದರು. ಅವರಿಗೂ ಗೊತ್ತು ಅವಳಿಗೆ ಇವರ ಕರೆ ಬಂದರೆ ಸ್ವೀಕರಿಸಲು ಇಷ್ಟವಿಲ್ಲ, ಅದಕ್ಕೆ ಮತ್ತೆ ಮತ್ತೆ ಮಾಡುತ್ತಿದ್ದರು. ಸುಮಾರು 6 ಸಾರಿ ಮಾಡಿದ ಮೇಲೆ ಏನೋ ವಿಷಯ ಇರಬೇಕೆಂದು ಮಾತನಾಡಿದಳು. “ಮನೇಲಿದ್ಯಾ ಪುಟ್ಟಿ.. ಇಲ್ಲೇ ಇದ್ದೆ. ನಿಮ್ಮನೆ ಎಲ್ಲಿ ಹೇಳು ಸರಿಯಾಗಿ… ಅಡ್ರೆಸ್ ಗೊತ್ತಾಗ್ಲಿಲ್ಲ. ನಾನು ಗಣೇಶ ದೇವಸ್ಥಾನದ ಹತ್ತಿರ ಇದ್ದೀನಿ” ” ಅಂಕಲ್. ಅಲ್ಲಿಂದ ಸೀದಾ ಬಂದರೆ ಎರಡನೇ ಬಲಕ್ಕೆ ಮೊದಲನೇ ಮನೆ. ಕೆಂಪು ಗೇಟ್ ಇದೆ. ಮುಂದೆ ಕಪ್ಪುಬಣ್ಣದ ಕಾರ್ ಇದೆ” ಮನೆಯಲ್ಲಿ ಹಾಲು ಇದೆಯಾ ಅಂತ ನೋಡಿದಳು. ಕಾಫಿ ಮಾಡಲು ಆಗುವಷ್ಟು ಹಾಲು ಇತ್ತು. ಸಂಜೆ ಹೊತ್ತು ಆದ್ದರಿಂದ ಕಾಫಿ ಜೊತೆ ಕೊಡಲು ಸ್ವಲ್ಪ ಬಿಸ್ಕತ್ ಇರುವುದನ್ನು ಕಂಡು ಸಮಾಧಾನ ಪಟ್ಟಳು. ಅಷ್ಟರಲ್ಲಿ ಮೂರ್ತಿ ಅಂಕಲ್ ಬಂದರು. ಕೈಯಲ್ಲಿ ಅವಳ ಮಗನಿಗೆ ಚಾಕಲೇಟ್, ಬಿಸ್ಕತ್ ಎಲ್ಲವು ಇದ್ದವು. ಅವಳಿಗಾಗಿ ಸಿಹಿಯ ಡಬ್ಬ ಮತ್ತು ಒಂದಾರು ಮೊಳ ಮಲ್ಲಿಗೆ ಹೂವು. “ಬನ್ನಿ ಅಂಕಲ್.. ಇದೆಲ್ಲ ಯಾಕೆ? ನಮ್ಮನೇಲಿ ಎರಡೇ ಕುರ್ಚಿ ಇರೋದು. ಬೇಜಾರು ಮಾಡ್ಕೋಬೇಡಿ. ಕೂತ್ಕೋಳಿ. ಆಂಟಿ ಬರ್ಲಿಲ್ವಾ?” “ಇಲ್ಲೇ ಕೆಲಸ ಇತ್ತು, ಅದಿಕ್ಕೆ ಅವಳನ್ನ ಕರ್ಕೊಂಡು ಬರ್ಲಿಲ್ಲ. ಬೇಜಾರು ಯಾಕೆ ಪುಟ್ಟಿ, ನಿಮ್ಮನೆ ಅಂದ್ರೆ ನಮ್ಮನೇನೇ ಅಲ್ವಾ…. ನಾನೇ ಒಂದು ಸೋಫಾ ತಂದುಕೊಡ್ತಿನಿ ಬಿಡು..ನಿಂಗೆ ಯಾವ ಥರದ್ದು ಇಷ್ಟ ಹೇಳು. ಅದೇ ಥರದ್ದು ತಂದುಕೊಡ್ತಿನಿ… ಬಾರೋ ಪಾಪು ಚಾಕಲೇಟ್ ತೊಗೊ” ಅವಳಿಗೆ ಏನು ಹೇಳುವುದೆಂದು ತಿಳಿಯಲಿಲ್ಲ. ಅವರೇಕೆ ನನಗೆ ಸೋಫಾ ತಂದುಕೊಡಬೇಕು… ಇರಲಿ ಬಿಡು. ಎಲ್ಲೋ ಮಾತಿಗೆ ಹೇಳಿರಬೇಕು…. ” ಅಂಕಲ್ ಕಾಫಿ ಕುಡಿತಿರೋ ಇಲ್ಲ ಟೀ ಕೊಡಲೋ. ನನ್ನ ಕೈಲಿ ಕಾಫಿ ಚೆನ್ನಾಗಿರುತ್ತೆ ಅಂತ ಹೇಳ್ತಾರೆ. ಕಾಫಿ ನೇ ಕೊಡ್ಲಾ?” “ಆಯಿತು, ನಿಂಗೇನು ಇಷ್ಟನೋ ಅದೇ” ಕುಮುದ ಪುಟ್ಟದಾದ ಅಡುಗೆ ಮನೆಯೊಳಗೇ ಹೋದಳು. ತೀರಾ ಕಿರಿದಾದ ಅಡುಗೆ ಮನೆ. ಒಬ್ಬರೇ ನಿಲ್ಲಬಹುದಾದ ಅಡುಗೆ ಕೋಣೆ. ಕಾಫಿ ಮಾಡಲು ತಯಾರು ಮಾಡುತ್ತಿದ್ದಳು. ಅಷ್ಟರಲ್ಲಿ ಮೂರ್ತಿ ಅಂಕಲ್ ಒಳಗೆ ಬಂದರು. ಅವಕ್ಕಾದ ಅವಳು “ಅಂಕಲ್ ನಮ್ಮನೆ ತುಂಬಾನೇ ಚಿಕ್ಕದು. ಅದರಲ್ಲೂ ಅಡುಗೆ ಮನೆ ಒಬ್ಬರಿಗಷ್ಟೇ ಜಾಗ” ಅನ್ನುತ್ತಾ ಸಕ್ಕರೆ ಹಾಕುತ್ತಿದ್ದಳು. “ನೀನು ಎಷ್ಟು ಚೆನ್ನಾಗಿದೀಯ ಕುಮುದ… ನಿನ್ನ ಕೆನ್ನೆ, ನಿನ್ನ ಕಣ್ಣು, ಓಹ್… ನಿನ್ನ ಸೊಂಟ ಎಷ್ಟು ಸಣ್ಣ” ಅನ್ನುತ್ತಾ ಕುಮುದಳ ಕೆನ್ನೆ ಸವರಿ ಅವಳ ಸೊಂಟ ಮುಟ್ಟುತ್ತಿದ್ದ ಮೂರ್ತಿ ಅಂಕಲ್ ಗೆ ಕಪಾಳಕ್ಕೆ ಬಾರಿಸಿದಳು. ಅವಳ ಮಗ ಗೇಟಿನ ಬಳಿ ಆಡುತ್ತಿದ್ದ. “ಪ್ರೀತು… ಬಾ ಮರಿ ಇಲ್ಲಿ” ಅಂತ ಜೋರಾಗಿ ಕೂಗಿ ಹೊರಗೆ ಬಂದಳು. ಅವಳ ಪ್ರತಿಕ್ರಿಯೆ ನೋಡಿ ಮೂರ್ತಿ ದಂಗಾಗಿದ್ದ. ಅವಳು ಒಂಟಿ ಹೆಣ್ಣೆಂದು ತಿಳಿದು ಅವಳೊಡನೆ ಹೀಗೆ ನಡೆದುಕೊಂಡಿದ್ದ. ಅಷ್ಟರಲ್ಲಿ ಅವಳ ಮನೆಯ ಮಾಲೀಕರು ಮಹಡಿಯ ಮೇಲಿಂದ ಮೆಟ್ಟಿಲಿಳಿದು ಬಂದರು. ಅದನ್ನೇ ಕಾಯುತ್ತಿದ್ದ ಕುಮುದ “ಸಾವಿತ್ರಕ್ಕ ಬನ್ನಿ ಕಾಫಿ ಕುಡಿದು ಹೋಗಿವರಂತೆ” ಎಂದು ಅವರನ್ನು ಒಳಗೆ ಕರೆದುಕೊಂಡು ಬಂದಳು. ಅವರಿಗೆ ಮೂರ್ತಿ ಅಂಕಲ್ ನ ಪರಿಚಯ ಮಾಡಿಕೊಟ್ಟು, ಕಾಫಿ ಕೊಟ್ಟು ಕೂರಿಸಿಕೊಂಡಳು. ಇನ್ನು ಮೂರ್ತಿಗೆ ಬೇರೆ ಏನು ತೋಚಲಿಲ್ಲ. ಒಂದೆರಡು ಲೋಕಾರೂಢಿ ಮಾತನ್ನಾಡಿ ಹೊರಟ.

ಕುಮುದಳಿಗೆ ರಾತ್ರಿಯೆಲ್ಲ ನಿದ್ದೆ ಹತ್ತಲಿಲ್ಲ. ಆ ಮುದುಕನಿಗೆ ಸರಿಯಾಗಿ ಬುದ್ದಿ ಕಲಿಸಬೇಕೆಂದು ಯೋಚಿಸುತ್ತಿದ್ದಳು. ಗಂಡನಿಗೆ ಹೇಳೋಣವೆಂದರೆ ಅವನಿಗೆ ಮೂಗಿನ ತುದಿಯಲ್ಲೇ ಕೋಪ. ಅವನೇನು ಮಾಡುವನೋ ಎಂದು ಭಯ. ಮತ್ಯಾರಿಗೆ ಹೇಳುವುದು. ತವರಿನವರಿಗೆ ಹೇಳಲು ಮುಜುಗರ. ಅವಳನ್ನು ಪ್ರೀತಿಯಿಂದ ನೋಡಿ, ಮಾತನಾಡಿ ಬಹಳ ದಿನಗಳಾಗಿದ್ದವು. ಇನ್ನು ಅವಳಿಗೆ ಮನಸ್ಸಾದರೂ ಹೇಗೆ ಬಂದೀತು? ಆದರೂ ಹೇಳೋಣವೆಂದರೆ ಮೂರ್ತಿ ಬೇರೆ ಯಾರು ಅಲ್ಲ ಅಣ್ಣನ ಮಾವ….. ಯಾರಿಗೂ ಹೇಳದೆ ಮನಸ್ಸಿನಲ್ಲೇ ನೊಂದು ಕಣ್ಣೀರು ಹಾಕಿದಳು. ರಾತ್ರಿ ಪೂರಾ ನಿದ್ದೆ ಇರಲಿಲ್ಲವಾದ್ದರಿಂದ ಕಣ್ಣುಗಳು ಊದಿಕೊಂಡು ಬೆಳಗ್ಗೆ ಹೊತ್ತಿಗೆ ಜ್ವರವು ಸಹ ಬಂದಿತ್ತು. ಒಂದೆರಡು ದಿನ ಮನಸ್ಸು ವಿಚಲಿತವಾಗಿತ್ತು. ಇಂತಹ ಪಾಪಿಗಳಿಗೆ ಏನಾದರು ಮಾಡಿ ಬುದ್ದಿ ಕಲಿಸಬೇಕು ಅನ್ನೋ ಮನಸ್ಸು. ಆದರೆ ಅವಳ ಜೀವನವೇ ಕಷ್ಟದಲ್ಲಿ ನಡೆಯುತ್ತಿದ್ದರಿಂದ ಸ್ವಲ್ಪ ದಿನಗಳಲ್ಲಿ ಅವಳ ಕೋಪ ಒಂದು ಹಂತಕ್ಕೆ ಕಡಿಮೆ ಆಗಿತ್ತು. ಒಂದು ತಿಂಗಳಾದ ಮೇಲೆ ಮತ್ತೆ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಮೈಯೆಲ್ಲಾ ಬೆಂಕಿ ಹಾಕಿದಷ್ಟು ಹಿಂಸೆ ಆಯಿತು “ಎಷ್ಟು ಧೈರ್ಯ ಈ ಮುದುಕನಿಗೆ.. ಇನ್ನು ಮತ್ತೆ ಕರೆ ಮಾಡುತ್ತಾನೆ…” ಎನ್ನುತ್ತಾ ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದಳು.

ಸುಮಾರು ಒಂದೆರಡು ವರ್ಷಗಳಾಗಿದ್ದವು. ಅತ್ತಿಗೆಯ ಸೀಮಂತ. ಮತ್ತೆ ಆ ದುಷ್ಟನ ಮುಖ ನೋಡಬೇಕಾಗಿ ಬಂತು. ಅವನಿಗೂ ಇರುಸುಮುರುಸು.. ಕುಮುದ ಎಲ್ಲಿ ಎಲ್ಲರಿಗು ಹೇಳಿದ್ದಾಳೋ ಅನ್ನುವ ಭಯ. ಆದರೆ ಎಲ್ಲರು ಅವನನ್ನು ಗೌರವದಿಂದ ಮಾತನಾಡಿಸುತ್ತಿದ್ದಾಗ ಅವಳು ಏನನ್ನು ಹೇಳಿಲ್ಲವೆಂದು ತಿಳಿಯಿತು. ಜೊತೆಗೆ ಧೈರ್ಯವು ಕೂಡ ಬಂದಿತು. ತನ್ನ ಆಟಕ್ಕೆ ಏನು ತೊಂದರೆ ಇಲ್ಲವೆಂದು ಮನಸ್ಸಿನಲ್ಲೇ ಸಂತೋಷ ಪಡುತ್ತಿದ್ದ. ಅದು ಅವಳ ಗಮನಕ್ಕೂ ಬಂದಿತು. ಇನ್ನು ಅವಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ತನ್ನ ಸಮಾಧಾನವನ್ನು ಅವನು ಸೋಲು ಎಂದು ತಿಳಿದಿದ್ದಾನೆ. ಅದು ಸಾಧ್ಯವಿಲ್ಲ. ಎರಡು ದಿನ ತವರಿನಲ್ಲಿ ಇರುವಂತೆ ವ್ಯವಸ್ಥೆ ಆಗಿತ್ತು. ತನ್ನ ತಂದೆಯ ಬಳಿ ಮಾತನಾಡುತ್ತ ಒಂದು ದಿನ ನಿಧಾನವಾಗಿ ಮೂರ್ತಿಯ ವಿಷಯ ಹೇಳಿದಳು. ಅವಳಿಗೆ ಅವಳ ತಂದೆ ಸಮಾಧಾನವನ್ನಾದರೂ ಮಾಡುತ್ತಾರೆಂಬ ಭರವಸೆ ಇತ್ತು. ಆದರೆ ಅವಳ ಆಶ್ಚರ್ಯಕ್ಕೆ ಅವರು “ನೀನ್ಯಾಕೆ ಅವರನ್ನು ಮನೆಗೆ ಬರಲು ಹೇಳಬೇಕಿತ್ತು? ನಿನ್ನದು ಏನೋ ತಪ್ಪು ಇರುವುದನ್ನು ಮುಚ್ಚಿ ಹಾಕಿ ಅವರದನ್ನು ಮಾತ್ರ ಹೇಳುತ್ತಿದ್ದೀಯ? ಅಷ್ಟೊಂದು ಸಲಿಗೆಯಿಂದ ಮಾತನಾಡುವ ಅವಶ್ಯಕತೆಯಾದರೂ ಏನು? ನಿನ್ನದೇ ಅಷ್ಟೊಂದು ತಪ್ಪು ಇರಬೇಕಾದರೆ ನಾವೇನು ಮಾಡೋದು?” ಅವಳ ಅಪ್ಪನ ಮಾತು ಅವಳ ಕಿವಿಗೆ ಸಿಡಿಲು ಬಡಿದಂತೆ ಆಗಿತ್ತು. ಮರುದಿನವೇ ಅಲ್ಲಿಂದ ಹೊರಟು ತನ್ನ ಮನೆಗೆ ಬಂದಿದ್ದಳು. ಮನಸ್ಸು ಘಾಸಿಗೊಂಡಿತ್ತು. ತನ್ನ ಪ್ರೀತಿಯ ಅಪ್ಪ, ಅವರಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲದಾಗಿದೆ. ಮೂರ್ತಿ ಅಂಕಲ್ ದೊಡ್ಡ ಜಮೀನ್ದಾರ. ಹಣ ಆಸ್ತಿ ಚೆನ್ನಾಗಿದ್ದು ಅವರ ಮಾತನ್ನು ಯಾರು ತಳ್ಳಿ ಹಾಕುತ್ತಿರಲಿಲ್ಲ. ಅದೆಲ್ಲದರ ಜೊತೆ ರಸಿಕ ಮಹಾಶಯ ಎಂದು ಎಲ್ಲರಿಗು ಗೊತ್ತಿತ್ತು. ಆದರೆ ಇವಳ ಸಹಾಯಕ್ಕೆ ಅಪ್ಪನು ಬರಲಿಲ್ಲ ಎನ್ನುವುದು ಇವಳ ಸಂಕಟದ ವಿಷಯ. ಒಂದು ವಾರವಾದರೂ ಇವಳ ಮನಸ್ಸು ಸಮಾಧಾನಗೊಳ್ಳಲಿಲ್ಲ. ಎಲ್ಲ ಗಂಡಸರು ಒಂದೆಯೇ? ಛೆ ಛೆ ಸಾಧ್ಯವೇ ಇಲ್ಲ. ಆದರೆ ಅಪ್ಪ? ನನ್ನನ್ನು ಅರ್ಥ ಮಾಡಿಕೊಳ್ಳದ ಅಪ್ಪ, ಇನ್ನು ಅಣ್ಣನ ಬಳಿ ಏನು ಹೇಳುವುದು…. ಎಷ್ಟಾದರೂ ಅವನ ಮಾವ ಮೂರ್ತಿ. ಅವನಿಗೆ ತಿಳಿಸುವುದೇ ಬೇಡ.. ಎಷ್ಟು ಒಂಟಿಯಾಗಿದ್ದೇನೆ ನಾನು ಏನು ಕಣ್ಣೀರು ಹಾಕಿದಳು. ಅವಳಿಗೆ ಯಾರು ಬೇಡವೆನಿಸಿತ್ತು.

4 ತಿಂಗಳು ಕಳೆದಿರಬಹುದು. ಅವಳ ಅಣ್ಣ ಕರೆಮಾಡಿದ್ದ” ಮೂರ್ತಿ ಅಂಕಲ್ ಆಕ್ಸಿಡೆಂಟ್ ಆಗಿ ರಾತ್ರಿ ತೀರಿಕೊಂಡರಂತೆ. ಮನೆಗೆ ಬಂದುಬಿಡು” ಅವಳ ನೋವಿಗೆ ಸಮಾಧಾನ ಸಿಕ್ಕಿತ್ತು. ನಮ್ಮವರು ನಮ್ಮವರಾಗಿದ್ದರೆ ಬೇರೆಯವರು ನಮ್ಮನ್ನು ಏನು ಮಾಡಲು ಆಗುವುದಿಲ್ಲ. ಅವರ ದುಸ್ಸಾಹಸಕ್ಕೆ ದಾರಿ ಇರುವುದಿಲ್ಲ.

– ಗಿರಿಜಾ ಜ್ಞಾನಸುಂದರ್


ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಸಮಾಧಾನ: ಗಿರಿಜಾ ಜ್ಞಾನಸುಂದರ್

  1. Really this type of People try to take advantage of people who trust and relay on them for a help but the take disadvantage and come out there true colors (disgusting People) Should understand if it happens to there own Sister her daughters they only they will realize

  2. ಇದು ಬಹಳ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ನಮ್ಮ ಹೆಣ್ಣು ಮಕ್ಕಳಿಗೆ ಇಂತಹ ಸಂದರ್ಭವನ್ನು ಹೇಗೆ ಎದುರಿಸಬೇಕೆಂದು ತಿಳಿದಿರುವುದಿಲ್ಲ ಜೊತೆಗೆ ಮನೆಯ ಜನರು ಧೈರ್ಯ ಕೊಡುವುದಿಲ್ಲ. ಅದು ಅವರನ್ನು ಒಂಟಿಯಾಗಿ ಕೊರಗುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *