ಅಜ್ಜನ ಹಲ್ಲು ಸೆಟ್ಟು ಮಕ್ಕಳಿಗಾಗಿ ಕವಿತೆಗಳು: ಸೂಗೂರೇಶ ಹಿರೇಮಠ

ಕವಿಗಳು: ಗುಂಡುರಾವ್ ದೇಸಾಯಿ
ಪ್ರಕಾಶಕರು: ಜಿ ಜಿ ದೇಸಾಯಿ ಮಸ್ಕಿ

ಅಜ್ಜನ ಹಲ್ಲು ಸೆಟ್ಟು

ಮಕ್ಕಳ‌ಸಾಹಿತ್ಯದ ಮೂಲ ಪುರುಷರೆಂದರೆ ಅಜ್ಜ ಅಜ್ಜಿ ಮೊಬೈಲ್ ಟೀವಿಗಳಿಲ್ಲ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಕತೆ ಹೇಳಿತ್ತಾ ಮಕ್ಕಳಿಗೆ ಮೌಲ್ಯಗಳನ್ನೂ ಹಾಗೂ ಮನರಂಜನೆಯನ್ನು ನೀಡುತ್ತಾ ಶಾಲೆಗಳು ಕಲಿಸದಂತಹ ಸೃಜನಾತ್ಮಕತೆಯನ್ನು ಅಜ್ಜ ಅಜ್ಜಿಯರು ಹೇಳಿಕೊಡುತ್ತಿದ್ದರು. ಹೀಗಿರುವಾಗ ಮಕ್ಕಳಿಗೆ ಅಜ್ಜನೆಂದರೆ ಹಿಗ್ಗೊಹಿಗ್ಗು ಅಂತಹ ಹಿಗ್ಗು ಕೊಡುವಂತಹ ಕೃತಿ ಅಜ್ಜನ ಹಲ್ಲು ಸೆಟ್ಟು.

ಸ್ವತಃ ಶಿಕ್ಷಕರಾಗಿರುವ ಹಾಸ್ಯ ಪ್ರಬಂಧಕಾರರಾಗಿರುವ ಶ್ರೀಯುತ ಗುಂಡುರಾವ್ ದೇಸಾಯಿ ಯವರು ಮಕ್ಕಳಿಗಾಗಿ ಕವಿತೆಗಳನ್ನು ಅತ್ಯಂತ ಲವಲವಿಕೆಯಿಂದ ಕಟ್ಟಿಕೊಟ್ಟಿದ್ದಾರೆ. ಸಂಕಲನದಲ್ಲಿ ಒಟ್ಟು ೪೫ ಕವಿತೆಗಳಿವೆ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ವಿಷಯಗಳನ್ನು ಓದುವ ಮಕ್ಕಳಿಗೆ ಕಟ್ಟಿಕೊಡಬಲ್ಲವು..
ಅಜ್ಜನ ಹಲ್ಲುಸೆಟ್ಟು ಪುಸ್ತಕದ ಮುಖಪುಟವು ಅತ್ಯಾಕರ್ಷಕ ವಾಗಿದ್ದು ಅಜ್ಜ ಮೊಮ್ಮಗನ ಸಂಭಾಷಣೆಯನ್ನು ತಿಳಿಸುತ್ತಿದೆ
ಅಜ್ಜ ಸದಾಕಾಲ ಮಕ್ಕಳಿಗೆ ಸಂತಸ ಕೊಡುವ ಹಾಗೆಯೆ ಈ ಪುಸ್ತಕವೂ ಮಕ್ಕಳಿಗೆ ಸಂತಸ ನೀಡುವುದರಲ್ಲಿ ಎರಡು ಮಾತಿಲ್ಲ.
ಒಳ ಪುಟಗಳಲ್ಲಿ ಪ್ರತಿ ಪದ್ಯಕ್ಕೊಂದು ಅರ್ಥವತ್ತಾದ ಚಿತ್ರಗಳು ಅತ್ಯಂತ ಸೂಕ್ತವಾಗಿವೆ. ಖ್ಯಾತ ಕಲಾವಿದರಾದ ಪಿಎಬಿ ಈಶ್ವರರವರು ಮುಖಪುಟ ಮತ್ತು ಒಳಪುಟಗಳ ಚಿತ್ರ ಬಿಡಿಸಿ ಕೊಟ್ಟು ಪುಸ್ತಕಕ್ಕೊಂದು ಹೊಸ ಹೊಳವನ್ನು ನೀಡಿದ್ದಾರೆ..

ಪುಸ್ತಕದ ಮೊದಲ ಪದ್ಯವು ‘ಚಂದಮಾಮ’ ಮುದನೀಡುವಂತಿದೆ ಮಗು ಚಂದಮಾಮನನ್ನ ಕರೆಯು ಪರಿ ಅನನ್ಯವಾದದ್ದು. ಎರಡನೆ ನುಡಿಯ ಸಾಲುಗಳಾದ

ನಿನ್ನಯ ಜೊತೆ ಆಡುವ ಹಂಬಲ
ಬಹಳ ನನಗೀಗ!
ಅಮ್ಮನ ಹತ್ತಿರ ತಿಂಡಿ ತರುವೆ
ಇಳಿಯೋ ಕೆಳಗೀಗ.

ಹೀಗೆ ಮಗು ಚಂದಮಾಮನೊಡನೆ ಮಾತಿಗಿಳಿದು ಮೈ ಮರೆಯುವಂತೆ ಮಾಡುತ್ತಾರೆ. ಹಾಗೆ ಮುಂದಿನ ಪದ್ಯ ವಾದ ಶೀರ್ಷಿಕೆಯ ಪದ್ಯ ವಾದ ಅಜ್ಜನ ಹಲ್ಲು ಸೆಟ್ಟು ಎಂಬ ಪದ್ಯದಲ್ಲಿ ಪುಟ್ಟುವಿನ ಎಡವಟ್ಟನ್ನು ಕಟ್ಟಿಕೊಡುತ್ತಾರೆ. ಸ್ವತಃ ಹಾಸ್ಯ ಪ್ರಬಂಧಕ ರಾಗಿರುವ ಕವಿಗಳು ಪದ್ಯದಲ್ಲಿ ಅಜ್ಜ ಮತ್ತು ಮೊಮ್ಮಗನ ನಡುವೆ ನಡೆದಿರುವಂತಹ ಸಂಗತಿಯನ್ನು ವರ್ಣಿಸುತ್ತಾರೆ.

ಬೆಳಿಗ್ಗೆ ಎದ್ದವ ಪುಟ್ಟು
ಬಚ್ಚಲಲ್ಲಿ ನೋಡಿದ ಹಲ್ಲು ಸೆಟ್ಟು
ಅಜ್ಜನ ಹಲ್ಲು ಬಿದ್ದಿದೆ ಎಂದು
ಸಂಭ್ರಮಿಸಿದ ತಿಪ್ಪೆಯಲಿ ಎಸೆದು ಬಂದು

ಹೀಗೆ ಅಜ್ಜನ ಹಲ್ಲಿನ ಸೆಟ್ಟನ್ನು ಮೊಮ್ಮಗ ಎಸೆದು ಬಂದಿದ್ದನ್ನು ಕವಿಗಳು ಸ್ವಾರಸ್ಯಕರವಾಗಿ ಹೇಳುತ್ತಾರೆ.

ಸೂರ್ಯ ಎಂಬ ಪದ್ಯದಲ್ಲಿ ಸೂರ್ಯನ ಸೊಕ್ಕನ್ನು ತಣಿಸಿದ ಸಣ್ಣ ದೀಪದ ಕುರಿತು ಹೇಳುತ್ತಾರೆ ಎಲ್ಲರಿಗೂ ಸಮತೆಯ ಕಾಣುವುದನ್ನು ಹೇಳುತ್ತಾರೆ.

ವಿಜ್ಞಾನ ಶಿಕ್ಷಕರಾಗಿರುವ ಕವಿಗಳು ಆ ಕ್ಷೇತ್ರದಲ್ಲಿಯೂ ಮಕ್ಕಳಿಗಾಗಿ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ.
ದೇಹದ ಕುರಿತು ಜೀರ್ಣಾಂಗವ್ಯೂಹದ ಕುರಿತು ಒಂದು ಪಾಠ ಹೇಳುವಷ್ಟನ್ನು ಒಂದು ಪದ್ಯದಲ್ಲಿ ಹಿಡಿದಿಟ್ಟಿದ್ದಾರೆ. ಹೀಗೆ ಮಕ್ಕಳಿಗೆ ಮನರಂಜನೆಯ ಜೊತೆಗೆ ಜ್ಞಾನವನ್ನೂ ಒದಗಿಸುತ್ತಾರೆ.

ಗುಮ್ಮ ಪದ್ಯದಲ್ಲಿ ಅಮ್ಮ ಊಟ ಮಾಡಿಸಲು ಮಾಡುವ ಪರಿಪಾಟಲನ್ನು ತಿಳಿಸುತ್ತಾರೆ.
ನಾಯಿ ಬೊಗಳಿತು ಪದ್ಯದಲ್ಲಿ ಎಲ್ಲ ಪ್ರಾಣಿಗಳ ಪಕ್ಷಿಗಳ ದ್ವನಿಯನ್ನು ಲಯಬದ್ದವಾಗಿ ಹೇಳುತ್ತಾ ಮಕ್ಕಳು ಹಾಡಿ ಸಂತಸಪಡುವುದಕ್ಕೆ ಅತ್ಯಂತ ಉತ್ತಮವಾಗಿದೆ.

ಸೌರವ್ಯೂಹ ಪದ್ಯದಲ್ಲಿ
ಸೌರವ್ಯೂಹದ ಎಲ್ಲಾಗ್ರಹಗಳ ಅವುಗಳ ಲಕ್ಷಣಗಳನ್ನು ಹಾಗೂ ಕಾರ್ಯಗಳನ್ನು ತಿಳಿಸುತ್ತಾರೆ ಈ ಪದ್ಯ ಮಕ್ಕಳಿಗಾಗಿ ಬರೆದಿದ್ದರೂ ಎಲ್ಲರ ಜ್ಞಾನಕ್ಕೆ ಅನುಕೂಲವಾಗಿದೆ.
ಕರಡಿ ಕುಣಿತ ಬೇಂದ್ರೆಯವರು ಮಕ್ಕಳಿಗಾಗಿ ಬರೆದಿದ್ದೋ ಹಿರಿಯರಿಗಾಗಿ ಬರೆದಿದ್ದೊ ಎಂಬ ಜಿಜ್ಞಾಸೆ ಇಂದಿಗೂ ಕಾಡುತ್ತಿದೆ. ಅದೆ ತರಹ ಈ ಸೌರವ್ಯೂಹವು ನೆನಪಾಯಿತು.

ಗಣಪ, ಕಲಿ, ಚಿಟ್ಟೆ ಕಾಗೆ ಇಂತಹ ಮಕ್ಕಳಿಗೆ ಮುದ ನೀಡುವ ಸಂಗತಿಯ ಪದ್ಯಗಳನ್ನು ಕವಿಗಳು ಉತ್ತಮವಾಗಿ ಒದಗಿಸಿದ್ದಾರೆ.

ರಜಾ ಮಜಾ ಪದ್ಯದಲ್ಲಿ

ಅಜ್ಜನೂರಿಗೆ ಹೋಗುವೆ
ಗೆಳೆಯರ ಜೊತೆ ಆಡುವೆ
ಮೊಬೈಲ್ ಕಂಪ್ಯೂಟರ್ ಬಿಟ್ಟು
ಗಿಲ್ಲಿ ದಾಂಡು ಆಡುವೆ.

ಹೀಗೆ ಮೊಬೈಲ್ ಗೀಳನ್ನು ಬಿಟ್ಟು ಮರೆಯಾದ ಹಳ್ಳಿಯ ಆಟೋಟಗಳಲ್ಲಿ ತೊಡಗುವಂತೆ ಪ್ರೇರೇಪಿಸುತ್ತಾರೆ.

ಅಮ್ಮ ಅಪ್ಪನ ಕುರಿತ ಪದ್ಯ ತಂದೆ ತಾಯಿಯರ ನಿಸ್ವಾರ್ಥ ಪ್ರೀತಿಯನ್ನು ತಿಳಿಸುತ್ತದೆ. ನಾವು ಎಂತವರು ಪದ್ಯವೂ ನಮ್ಮ ಆತ್ಮಾವಲೋಕನಕ್ಕೆ ಈಡುಮಾಡುತ್ತದೆ.

ಇಡೀ ಕವನ ಸಂಕಲನದಲ್ಲಿ ನನ್ನ ಅತ್ಯಂತ ಇಷ್ಟದ ಪದ್ಯ ಗಾಂಧಿತಾತ. ಗಾಂಧಿಯಷ್ಟೆ ಅತ್ಯಂತ ಸರಳವಾಗಿ ಚಿತ್ರಿಸಿಕೊಟ್ಟಿದ್ದಾರೆ.

ಗಾಂಧೀತಾತ
ರಾಷ್ಟ್ರದ ವಿಧಾತ
ಮೂರೆಗೆರೆಯಲ್ಲಿ ಮೂಡುವಾತ
ಎಂತಹ ಸರಳನೀತ.

ಅಂತಹ ಸರಳ ಜೀವಿಯನ್ನ ಪದ್ಯದುದ್ದಕ್ಕೂ ಸರಳವಾಗಿ ಹಿಡಿದಿಟ್ಟಿದ್ದಾರೆ. ನಾನು ಸೈನಿಕನಾಗುವೆ, ಕಟ್ಟೋಣ ದೇಶವಾ, ಬಾವುಟ ಕನ್ನಡ ಮಾಸಗಳು ಹೀಗೆ ವಿಭಿನ್ನ ವಿಷಯಗಳನ್ನು ಮಕ್ಕಳ ಪದ್ಯದಲ್ಲಿ ತೋರಿದ್ದಾರೆ. ಹನ್ನೆರಡು ಮಾಸಗಳು ಇಡಿ ಪದ್ಯದಲ್ಲಿ ಹೇಳುತ್ತಾ ಕಾಲಗಳನ್ನು ಆಯಾ ಕಾಲದ ಬದಲಾವಣೆಗಳನ್ನು ಹೇಳುತ್ತಾರೆ. ಈ ಪದ್ಯ ಓದಿದ ಮಗು ಕಾಲಗಳ ಕುರಿತ ಗೊಂದಲವು ಮತ್ತಿನ್ನೆಂದೂ ಕಾಣಲಾರದೆಂದೆ ನನ್ನ ಅನಿಸಿಕೆ.

ಗೆಳೆತನ ಪದ್ಯದಲ್ಲಿ ರಾಮು ಶಾಮುವಿನ ಕತೆಯನ್ನು ಕಥನ ಕವಿತೆ ಮಾದರಿಯಲ್ಲಿ ತೋರಿಸಿದ್ದಾರೆ. ಕನಸಿನ ಶಾಲೆ ಹಾಗೂ ಅಪ್ಪ ಕಳಿಸೂ ಶಾಲೆಗೆ ಕವಿತೆಗಳಲ್ಲಿ ಮಕ್ಕಳ ಶಾಲೆಯ ನಂಟನ್ನು ಹೇಳುತ್ತಾ ನಮ್ಮ ಬಾಲ್ಯವನ್ನು ನೆನಪಿಸುತ್ತಾರೆ.
ಹಾಗೆಯೇ ಪರಿಸರ, ಮುಂಜಾನೆಯ ಸೊಬಗು ಎಂದು ಪ್ರಕೃತಿಯನ್ನು ವರ್ಣಿಸುತ್ತಾ ಮಕ್ಕಳಿಗೆ ರಸಪೂರಿ ಓದನ್ನು ಒದಗಿಸಿದ್ದಾರೆ.
ಕೊನೆಯದಾಗಿ ಇಂದಿನ ಅಂತರ್ಜಾಲ ಜಮಾನದಲ್ಲಿ ಮರೆಯಾದ ಅಂಚೆಯಣ್ಣನ ಕೆಲಸದ ನೆನಪಿನೊಂದಿಗೆ
ಸಂಕಲದ ಪದ್ಯಗಳು ಸಮಾಪ್ತಿಗೊಳ್ಳುತ್ತವೆ.

ಹೀಗೆ ಕ್ರಿಯಾಶೀಲ ಶಿಕ್ಷಕರಾದ ಶ್ರೀಯುತ ಗುಂಡೂರಾವ್ ದೇಸಾಯಿಯವರು ಸದಾ ಮಕ್ಕಳೊಂದಿಗೆ ಇದ್ದು ಮಕ್ಕಳ ಮಟ್ಟಕ್ಕಿಳಿದು ಅವರ ಓದಿನ ಹವ್ಯಾಸವನ್ನು ಇಮ್ಮಡಿಗೊಳಿಸುವಂತಹ ಪದ್ಯ ಗುಚ್ಚವನ್ನು ನಮ್ಮೆಲ್ಲರಿಗೂ ನೀಡಿದ್ದಾರೆ.
ಅವರ ಈ ಪದ್ಯಗಳು ಮುಂದೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಬಂದರೂ ಅಚ್ಚರಿಯಿಲ್ಲ ಅಷ್ಟೊಂದು ಸೂಕ್ತವಾಗಿವೆ.

ಪುಸ್ತಕದ ಗುಣಮಟ್ಟದಲ್ಲಿ ಪ್ರಕಾಶಕರು ಯಾವುದೆ ರಾಜಿಯಾಗಿಲ್ಲ ಒಳ್ಳೊಳ್ಳೆಯ ಸಾಂದರ್ಭಿಕ ಚಿತ್ರಗಳು ಓದನ್ನು ಸುಂದರಗೊಳಿಸುತ್ತವೆ.
ಸಾಧ್ಯವಾದರೆ ಒಮ್ಮೆ ಓದಿ ಆನಂದಿಸಿ.

ಸೂಗೂರೇಶ ಹಿರೇಮಠ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x