ಅಂಗವಿಕಲತೆ ಎಂಬುದನ್ನು ಯಾವ ವ್ಯಕ್ತಿಯು ಪಡೆದುಕೊಂಡು ಬಂದುದಲ್ಲ. ಅದು ಆಕಸ್ಮಿತವಾಗಿ ಬರುವಂತದ್ದಾಗಿದೆ. ಅಂಗವಿಕಲತೆಯನ್ನು ಹೊಂದಿರುವ ವ್ಯಕ್ತಿಯು ತನ್ನ ವಿಕಲತೆಯ ಕಡೆಗೆ ಗಮನವನ್ನು ಹರಿಸದೇ ಸಾಧನೆಯನ್ನು ಮಾಡಿ ತೋರಿಸುವುದರ ಕಡೆಗೆ ಗಮನವನ್ನು ಹರಿಸುವರು. ಅಂಗವಿಕಲತೆಗೆ ಒಳಗಾದ ವ್ಯಕ್ತಿಯು ಸಾಧಾರಣ ವ್ಯಕ್ತಿಗಳಿಗಿಂತ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಅದಕ್ಕೆ ಉದಾಹರಣೆಯೆಂದರೆ ನಾನೇ. ನಾನು ಐದನೇ ವಯಸ್ಸಿನಲ್ಲಿ ಇರುವಾಗ ಪೋಲಿಯೋ ಲಸಿಕೆಯನ್ನು ಹಾಕಿಸಿಯೂ ಅಥವಾ ಹಾಕಿಸದೆಯೋ ನನ್ನ ಎಡಗಾಲು ಶಕ್ತಿಯನ್ನು ಕಳೆದುಕೊಂಡೆ. ಪ್ರಾಥಮಿಕ ಶಿಕ್ಷಣವನ್ನು ನನ್ನ ಸ್ವ ಗ್ರಾಮವಾದ ಕೊಪ್ಪಳ ತಾಲೂಕಿನ ಚಿಲವಾಡಗಿಯಲ್ಲಿ ಮುಗಿಸಿದೆ. ಮುಂದಿನ ಹಂತದ ಶಿಕ್ಷಣವನ್ನು ಪಡೆಯಲು ಕಲಬುರಗಿಗೆ 1997ರಲ್ಲಿ ಹೋದಾಗ ನಾನು ಶಾಲೆಗೆ ದಾರಿಯಲ್ಲಿ ಹೋಗುವಾಗ ದಾರಿಯಲ್ಲಿರುವ ಎಲ್ಲಾ ಜನರು ನನ್ನ ಕಡೆಗೆ ನೋಡುತ್ತಿದ್ದರು. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಆದರೆ ನಾನೂ ಹೆದರಲಿಲ್ಲ. ಆ ಒಂದು ಘಟನೆಯನ್ನು ಸವಾಲಾಗಿ ಸ್ವೀಕರಿಸುತ್ತಾ ಮುಂದೆ ನಾನು ‘ಅಂಗವಿಕಲ’ ಎಂಬ ಮನೋಭಾವನೆಯನ್ನು ಬಿಟ್ಟು ನಾನೂ ಕೂಡಾ ಸಮಾಜದಲ್ಲಿ ಸಾಮಾನ್ಯ ನಾಗರಿಕರಲ್ಲಿ ಒಬ್ಬ ಎಂಬ ಭಾವನೆಯನ್ನು ಬೆಳೆಸಿಕೊಂಡು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂಬ ಸಂಕಲ್ಪವನ್ನು ಮಾಡಿದೆ. 10ನೇ ತರಗತಿಯ ತನಕ ಕಲಬುರಗಿಯಲ್ಲಿ ಶಿಕ್ಷಣವನ್ನು ಪಡೆದು ನಂತರ ದ್ವಿತೀಯ ಪಿ.ಯು.ಸಿ.ಶಿಕ್ಷಣಕ್ಕಾಗಿ ಕೊಪ್ಪಳ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಅಂಗವಿಕಲತೆಯನ್ನು ಮೆಟ್ಟಿ ನಿಂತು ಅದೇ ಸಮಯದಲ್ಲಿ ನನ್ನ ಎಡಗಾಲಿನ ಶಸ್ತ್ರ ಚಿಕ್ಸತೆಗೆ ಒಳಗಾಗಿದ್ದರೂ ಕೂಡಾ ಎದೆಗುಂದದೇ ಶೇಕಡಾ 80 ರಷ್ಟು ಪಲಿತಾಂಶವನ್ನು ಪಡೆದೆನು. ಮುಂದೆ ಡಿ.ಇಡಿ.ಶಿಕ್ಷಣವನ್ನು ಪಡೆಯಲು ಬೆಂಗಳೂರು ನಗರದ ಕಾಲೇಜಿಗೆ ಸೇರಿಕೊಂಡ ನಂತರ ಸಾಮಾನ್ಯ ವ್ಯಕ್ತಿಗಳಿಗಿಂತ ಹೆಚ್ಚಿನ ರೀತಿಯಲ್ಲಿ ಕೆಲಸವನ್ನು ಮಾಡಿದೆ. ಆ ಕಾಲೇಜಿನ ಪ್ರತಿಯೊಂದು ಸಮಾರಂಭದ ಉಸ್ತುವಾರಿಯನ್ನು ವಹಿಸಿಕೊಂಡು ಸರಾಗವಾಗಿ ನಡೆಸಿಕೊಟ್ಟು ಎಲ್ಲರ ಪ್ರಿತಿಗೆ ಪಾತ್ರನಾದೆನಲ್ಲದೇ ಅಂಗವಿಕಲ ವ್ಯಕ್ತಿಯು ಕೂಡಾ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ರೀತಿಯಲ್ಲಿ ಕೆಲಸವನ್ನು ಮಾಡಬಹುದು, ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ತೊರಿಸಿಕೊಟ್ಟಿದ್ದೆ.
ಮುಂದೆ ನಾನೂ ಸಮಾಜ ಮುಖಿ ಕೆಲಸವಾದ ಶಿಕ್ಷಕನಾಗಿ ನೇಮಕವಾದ ಮೇಲೆ ಅಂಗವಿಕಲರ ಬಗ್ಗೆ ಹುಟ್ಟಿನಿಂದ ನೋಡುತ್ತಾ ಜೊತೆಗೆ ಅನುಭವಿಸುತ್ತಾ ಬಂದ ನನಗೆ ಉದ್ಯೋಗದಲ್ಲಿದ್ದವರು ಹಾಗೂ ನಿರುದ್ಯೋಗಿ ಅಂಗವಿಕಲರ ಬಗ್ಗೆ ಕಾಳಜಿಯನ್ನು ವಹಿಸುವ ಕಡೆಯಲ್ಲಿ ಹೆಚ್ಚು ಗಮನವನ್ನು ಹರಿಸಿದೆ. ಸರಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸುಮಾರು 3 ವರ್ಷಗಳ ಕಾಲ ಪ್ರತಿ ಭಾನುವಾರ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ಬೇಟಿ ನೀಡುತ್ತಾ ಅವರಲ್ಲಿ ನಮ್ಮ ಸಂಘದ ಪರಿಚಯ ಜೊತೆಗೆ ನಾವು ಈಡೇರಿಸಿಕೊಂಡ ಬೇಡಿಕೆ ಹಾಗೂ ಇನ್ನೂ ಈಡೇರಬೇಕಿರುವ ಬೇಡಿಕೆಗಳ ಕುರಿತಾಗಿ ಚರ್ಚೆಯನ್ನು ನಡೆಸಿ ಅವರಿಗೆ ಸರಿಯಾದ ಮಾಹಿತಿ ನೀಡುತ್ತಾ ನಮ್ಮ ಸಂಘವನ್ನು ಬಲಪಡಿಸುತ್ತಿದ್ದೇನೆ. ನಾವು ಕೇವಲ ಸಭೆ, ಸಮಾರಂಭಗಳನ್ನು ಮಾಡುತ್ತಾ ಸಂಘಟನೆಯನ್ನು ಬಲಪಡಿಸುತ್ತಿಲ್ಲ. ಬದಲಿಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಅವರ ಸಚಿವ ಸಂಪುಟದ ಸಚಿವರಿಗೆ ಸಂಬಂಧ ಪಟ್ಟ ವಿಷಯದ ಕುರಿತಾಗಿ ಮನವಿ ಪತ್ರ ನೀಡಿ ನಮ್ಮ ಸಂಘದ ಮೂಲಕ ಮೂಲಕ ಅವರಿಗೆ ಅಂಗವಿಕಲರ ಅನೇಕ ಸಮಸ್ಯೆಗಳ ಕಡೆ ಗಮನ ಸೆಳೆದು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನವನ್ನು ಕೂಡಾ ಮಾಡುತ್ತಿದ್ದೇವೆ. ನನ್ನ ಹೋರಾಟ ಕೇವಲ ಅಂಗವಿಕಲ ಸಂಘಕ್ಕೆ ಮಾತ್ರ ಸೀಮಿತವಾಗಿರದೇ ಅನೇಕ ವಿವಿಧ ಕ್ಷೇತ್ರದಲ್ಲಿ ಕೂಡಾ ನಾನೂ ಹೋರಾಟ ನಡೆಸಿದ್ದೇನೆ. ವಿಶೇಷವಾಗಿ ಶಿಕ್ಷಕರ ಸಮಸ್ಯೆಗಳ ಕುರಿತಾಗಿ ಹೋರಾಟವನ್ನು ಮಾಡಿದ್ದೇನೆ. ಅಂಗವಿಕಲರ ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನನ್ನ ಅಳಿಲು ಸೇವೆಯನ್ನು ಮಾಡುವ ಆಶೆ ನನಗೆ.
ಅಂಗವಿಕಲರು ಸಮಾಜದಲ್ಲಿ ಯಾವ ರೀತಿ ಘಟನೆಗಳನ್ನು ಎದುರಿಸುತ್ತಾರೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ. ನಾನೂ ಹಾಗೂ ನನ್ನ ಗೆಳೆಯ ಮಲ್ಲಪ್ಪ ಒಂದಿನ ಬೆಂಗಳೂರಿಗೆ ಹೋಗುತ್ತಿದ್ದ ಸಮಯ. ಕೊಪ್ಪಳದಿಂದ ರೈಲಿನಲ್ಲಿ ಹೋಗಲು ತಯಾರಾಗಿದ್ದೆವು. ಇನ್ನೇನು ರೈಲು ಬಂದು ಹೊರಡಬೇಕು ಎನ್ನುವಷ್ಟರಲ್ಲಿ ನಮಗೆ ಒಂದು ಆಘಾತ ಕಾದಿತ್ತು. ಅದೇನೆಂದರೆ ಅಂದು ರೈಲಿನಲ್ಲಿ ಅಂಗವಿಕಲರಿಗೆ ಇರುವ ಪ್ರತ್ಯೇಕ ಬೋಗಿ ಇಲ್ಲದಿರುವುದು. ಆ ಸಮಯಲ್ಲಿ ನನ್ನ ಗೆಳೆಯ ಕಡ್ಡಾಯವಾಗಿ ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಹಾಜರಾಗಬೇಕಾಗಿತ್ತು. ಅನಿವಾರ್ಯವಾಗಿ ಸಾಮಾನ್ಯ ಬೋಗಿಗಳನ್ನು ಹುಡಿಕಿಕೊಂಡು ಹೋದೆವು. ಆದರೆ ಅಲ್ಲಿಯ ಜನ ಜಂಗುಳಿಯನ್ನು ಕಂಡು ನಾವು ಅಲ್ಲಿ ಹತ್ತಲು ಸಾಧ್ಯವಿಲ್ಲದಾಗಿ ವಿಧಿಯಲ್ಲದೇ ಬಸ್ಸಿನಲ್ಲಿ ಪ್ರಯಾಣ ನಡೆಸಬೇಕಾಗಿತ್ತು. ಇದು ಅಂಗವಿಕಲ ನೈಜ ಸ್ಥಿತಿಯಾಗಿದೆ.
2013ರ ಡಿಸೆಂಬರ್ 28 ರಂದು ನಮ್ಮ ಸಂಘದ ಬೆಳ್ಳಿ ಹಬ್ಬದ ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಅದರ ಹಿಂದಿನ ದಿನ ನಾನೂ ಮತ್ತು ನಮ್ಮ ಸಂಘದ ರಾಜ್ಯಾಧ್ಯಕ್ಷರಾದ ಎಸ್.ರೇಣುಕಾರಾಧ್ಯರವರು ಹೋಗಿದ್ದ ಸಮಯದಲ್ಲಿ ಅವರು ಎರಡು ಕಾಲುಗಳ ಶಕ್ತಿಯನ್ನು ಕಳೆದುಕೊಂಡ ಸ್ಥಿತಿಯಲ್ಲಿ ತ್ರಿಚಕ್ರದಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಮುಂದೆ ಬಂದ ನಂತರ ವಿಧಾನಸೌಧದ ಬ್ಯಾಕ್ವೇಂಟ್ ಹಾಲ್ ಮೂಲೆಯಲ್ಲಿ ತ್ರಿಚಕ್ರದಲ್ಲಿ ಬಂದ ನಮ್ಮ ಸಂಘದ ಅಧ್ಯಕ್ಷರು ಗೋಡೆ ಹಿಡಿದು ಬರುವ ವೇಳೆ ಅವರು ಆಯಾ ತಪ್ಪಿ ಕೆಳಗಡೆಯಲ್ಲಿ ಬಿದ್ದರು. ಅಲ್ಲೇ ಇದ್ದ ಅಧಿಕಾರಿಗಳು ಅವರನ್ನು ಎತ್ತಲು ಓಡಿ ಬಂದರು. ಆದರೆ ಅಧಿಕಾರಿಗಳು ಕೆಳಗೆ ಬಿದ್ದ ಅಧ್ಯಕ್ಷರನ್ನು ಮೇಲೆತ್ತುವ ಬದಲು ಅಲ್ಲಿ ಅಂಗವಿಕಲರು ಸರಾಗವಾಗಿ ಓಡಾಡಲು ದಾರಿಯನ್ನು ಮಾಡಿದ್ದರೇ? ಅಲ್ಲಿ ನಮ್ಮ ಸಂಘದ ಅಧ್ಯಕ್ಷರು ಬೀಳುತ್ತಿದ್ದಿಲ್ಲ. ಜೊತೆಗೆ ಅಧಿಕಾರಿಗಳು ಬಿದ್ದವರನ್ನು ಮೇಲೆ ಎತ್ತುವ ಅವಶ್ಯಕತೇನೇ ಇರುತ್ತಿರಲ್ಲಿಲ್ಲವಲ್ಲ?. ಆಡಳಿತದ ಶಕ್ತಿ ಕೇಂದ್ರದಲ್ಲಿಯೇ ಈ ಪರಿಸ್ಥಿತಿಯಿರುವಾಗ ರಾಜ್ಯ ಇತರೆ ಕಡೆಯಲ್ಲಿ ಯಾವ ಪರಿಸ್ಥಿತಿ ಇದೇಯೋ? ಇದಕ್ಕೆ ಮೂಲ ಕಾರಣ ಅಂಗವಿಕಲರು ಎಂಬ ಅಸಡ್ಡೆ ಭಾವನೆ.
ಸರಕಾರವು ಅಂಗವಿಕಲರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದರೂ ಆ ಯೋಜನೆಗಳು ನೈಜ ಅಂಗವಿಕಲರಿಗೆ ತಲುಪುದು ತೀರಾ ಕಡಿಮೆಯಾಗಿದೆ. ನಮ್ಮ ಹಂಬಲ ಕೂಡಾ ಅಂಥ ಯೋಜನೆಗಳ ಸವಲತ್ತುಗಳು ಅಂಗವಿಕಲರಿಗೇ ಸಿಗಬೇಕೆನ್ನುವುದು ಮಾತ್ರ.
ವಿಕಲಚೇತನರು ಅಂದರೆ ವಿಶೇಷ ಕಲೆಯನ್ನು ಲಕ್ಷ, ಆಸ್ಥೆವಹಿಸಿ ಗಳಿಸಿಕೊಂಡು ನಾಡಿಗೆ ಚೈತನ್ಯವನ್ನು ಅರ್ಪಿಸುವವರು ಎಂದು ನಾನು ಭಾವಿಸುತ್ತೇನೆ.
ವಿಕಲಚೇತನರ ಹುಟ್ಟು ಶಾಪವಲ್ಲ. ಅವರು ದೇವರು ಕೊಟ್ಟ ವರವಾಗಿದ್ದಾರೆ. ವಿಕಲಚೇತನ ಮಕ್ಕಳನ್ನು ಪಡೆದ ತಂದೆ ತಾಯಿಗಳು ಪುಣ್ಯವಂತರು, ಭಾಗ್ಯಶಾಲಿಗಳು. ವಿಕಲಚೇತನ ಮಕ್ಕಳನ್ನು ಪಡೆದ ತಂದೆ ತಾಯಿಗಳು ಯಾವುದೇ ಕಾಲಕ್ಕೆ ಮನನೊಂದುಕೊಂಡು ದು:ಖಪಡಬಾರದು. ಆ ಮಕ್ಕಳು ತಮ್ಮ ಕುಟುಂಬದ ಭಾಗ್ಯದ ನಿಧಿ ಎಂದು ತಿಳಿದು ಅಭಿವೃದ್ಧಿಗೆ ಶ್ರಮಿಸಬೇಕು. ವಿಶೇಷವಾಗಿ ಅಂಥ ಮಕ್ಕಳಿಗೆ ತಾವು “ಅಂಗವಿಕಲರು” ಎಂಬ ಸಂಕುಚಿತ ಮನೋಭಾವನೆ ಬಾರದ ರೀತಿಯಲ್ಲಿ ಬೆಳೆಸಲು ಹೆಚ್ಚು ಲಕ್ಷ್ಯವಹಿಸಿ ಪ್ರೋತ್ಸಾಹಿಸಬೇಕು.
ತಂದೆ ತಾಯಿಗಳು ಈ ಮಕ್ಕಳಿಗೆ ಮೊದಲು ಶಿಕ್ಷಣವನ್ನು ಕೊಡಿಸಬೇಕು ನಂತರ ಅವರಲ್ಲಿರುವ ಕೌಶಲ್ಯವನ್ನು ಗುರುತಿಸಿ ಅವರಿಗೆ ಇಷ್ಟವಾದ ಪ್ರತಿಭೆಯಂತೆ ಅವರನ್ನು ಬೆಳೆಸಲು ಶಿಕ್ಷಣ ಕೊಡಿಸಲು ಪ್ರೋತ್ಸಾಹಿಸಬೇಕು. ಆಗ ವಿಕಲಚೇತರು ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿ ಸಾಮಾನ್ಯ ಜನರಿಗಿಂತ ತಾವು ಕಡಿಮೆ ಇಲ್ಲವೆನ್ನುವುದನ್ನು ತೋರಿಸುತ್ತಾರೆ. ಹಿಂದಿನಿಂದಲೂ ಪ್ರತಿಭೆ ತೋರಿದ ಮಹನೀಯರಿದ್ದಾರೆ. ಉದಾಹರಣೆಗೆ ಗದುಗಿನ ವೀರೇಶ್ವರ ಆಶ್ರಮದ ಮಹಾನ್ ಚೇತನ, ಸಾವಿರಾರು ಅಂಧ ಕಲಾವಿದರಿಗೆ ಕಲೆ, ವಿದ್ಯೆ, ಸಂಸ್ಕೃತಿ ಕಲಿಸಿದ ಪುಟ್ಟರಾಜ ಗವಾಯಿಗಳು, ಹಾಸನ ಗಿರೀಶ, ವಿಶ್ವ ಸಂಸ್ಥೆಯ ಯುವ ಪ್ರಶಸ್ತಿಯ ವಿಜೇತೆ ಅಶ್ವಿನಿ ಅಂಗಡಿ, ಕ್ರೀಡಾ ಕ್ಷೇತ್ರದಲ್ಲಿ ಮಾಲತಿ ಹೊಳ್ಳಾ ಮುಂತಾದವರು.
ನಮ್ಮ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿಯವರ ಅನುಭವದ ಮಾತು; ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಕಲಚೇತನ ಮಕ್ಕಳು ಹೋದಾಗ ಪುರುಷ ಮತ್ತು ಮಹಿಳಾ ವಿಕಲಚೇತನರನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಗುತ್ತದೆ. ಕಾರಣ, ರೂಪ, ಗುಣ, ಕರಕುಶಲತೆ, ಶಿಕ್ಷಣ, ಪ್ರತಿಭೆಗಳಲ್ಲಿ ಸಾಮಾನ್ಯ ಜನರಿಗಿಂತ ಹೆಚ್ಚಿನ ಮಟ್ಟದಲ್ಲಿ ವಿಶೇಷತೆಯನ್ನು ಹೊಂದಿರುವುದು ಕಂಡು ಬಂದಿದೆ. ಆದ್ದರಿಂದ ನಾವು ಮತ್ತು ಸಮಾಜ ವಿಕಲಚೇನರನ್ನು ಗೌರವದಿಂದ ಕಾಣಬೇಕು. ಹೌದಲ್ಲವೇ?
-ಬೀರಪ್ಪ ಅಂಡಗಿ ಚಿಲವಾಡಗಿ
ರಾಜ್ಯ ಸಂಘಟನಾ ಕಾರ್ಯದರ್ಶಿ,
ಸರ್ಕಾರಿ ಅಂಗವಿಕಲ ನೌಕರರ ಸಂಘ, ಬೆಂಗಳೂರು
*****
ನಿಮ್ಮ ಚಟುವಟಿಕೆ ಬಾಗ್ಗೆ ಓದಿ ತುಂಬಾ ಖುಷಿಯಾಯಿತು. ನಿಮ್ಮ ಕಾಲಮೇಲೆ ನಿಂತದ್ದಲ್ಲದೆ ಇತರರಿಗೂ ಸಹಾಯ ಮಾಡುವ ಗುಣ ಬಹಳ ದೊಡ್ಡದು. ಇತರರ ಮುಖದಲ್ಲಿ ನಗೆಯ ಕಾಣುವ ನಿಮ್ಮ ಕನಸು ಖಂಡಿತಾ ಈಡೆರುತ್ತಾ ಹೋಗಲಿ. ಒಂದು ದಿನ ನೀವೂ ಬಹಳ ಎತ್ತರಕ್ಕೆ ಬೆಳೆಯುವಿರಿ.
Yes. Totally agree with your point. Nice article 🙂
very good.