ಅರುಣ್ ಅಂತರಾಳದ ಮಾತು: ಅರುಣ್ ನಂದಗಿರಿ


ನಿನ್ನ ಭವಿಷ್ಯಕ್ಕೆ ನೀನೇ ಶಿಲ್ಪಿ ಇದು ಸ್ವಾಮಿ ವಿವೇಕಾನಂದರ ಮಾತು, ಈ ಸುಭಾಷಿತವನ್ನು ದಿನಪತ್ರಿಕೆಯೊಂದರಲ್ಲಿ ನೋಡಿದ್ದೆ. ಆಗ ನಾನಿನ್ನು ೮ ವರ್ಷದ ಬಾಲಕನಾಗಿದ್ದೆ. ಆದರೂ ಈ ಮಾತನ್ನು ಅರ್ಥಮಾಡಿಕೊಂಡಿದೆ! ಭವಿಷ್ಯದಲ್ಲಿ ನಾನೇನಾಗಬೇಕೋ ಅದನ್ನು ನಾನೇ ನಿರ್ಧರಿಸಬೇಕು. ಗುರಿ ಈಡೇರುವವರೆಗೂ ಛಲ ಬಿಡಬಾರದೆಂದು. ಆಗ ನಾವೆಲ್ಲ ಬೆಂಗಳೂರಿನಲ್ಲಿದ್ದೆವು. ಸುಮಾರು ೨೨ ವರ್ಷದಷ್ಟು ಹಳೆಯ ಬೆಂಗಳೂರದು. ಡಾ| ಲಕ್ಷ್ಮಿ ಡೇ ನಮ್ಮ ಮನೆಯ ಹತ್ತಿರವೇ ತಮ್ಮ ಕ್ಲಿನಿಕ್ ಇಟ್ಟಿದ್ದರು. ’ಆರೋಗ್ಯ ಧಾಮ’ ಅಂತ ಅದರ ಹೆಸರು ಅದರ ಒಂದು ಭಾಗದಲ್ಲಿ ಅವರೊಂದು ಅಂಗವಿಕಲರಿಗಾಗಿ ಶಾಲೆ ತೆರೆದರು. ಅಲ್ಲಿ ನಾನೂ ಸೇರಿಕೊಂಡೆ, ಅದು ಶಾಲೆಯೆಂದರೆ ಪೂರ್ಣ ಪ್ರಮಾಣದ ಶಾಲೆ ಎನ್ನಲಾಗದು. ಏಕೆಂದರೆ ಅಲ್ಲಿ ಬುದ್ಧಿಮಾಂದ್ಯ ಕಿವುಡು ಹಾಗು ಮೂಕ ವಿದ್ಯಾರ್ಥಿಗಳಿದ್ದರು. ಮಾತು ಬಾರದ ಒಂದು ಪುಟ್ಟ ಹುಡುಗಿಗೆ ಶಿಕ್ಷಕಿಯರು ಮಾತು ಕಲಿಸಲು ದಿನವೂ ಶತಪ್ರಯತ್ನ ಮಾಡುತ್ತಿದ್ದುದ್ದನ್ನು ಕಂಡು ನನ್ನ ಎಳೆಯ ಮನಸ್ಸು ಮಮ್ಮುಲ ಮರುಗುತ್ತಿತ್ತು. ಶಿಕ್ಷಕಿ ಹೇಳಿದಂತೆ ಅನ್ನಲು ಆ ಹುಡುಗಿಗೆ ಆಗದಿದ್ದಾಗ ಆ ಪುಟ್ಟ ಕಂಗಳಲ್ಲಿ ನೀರಾಡುತ್ತಿತ್ತು. ನಾನೂ ಒಮ್ಮೆ ಹೀಗೆ, ೪ ವರ್ಷದವನಿದ್ದಾಗ ನನಗೆ ಚಪ್ಪಲಿಗಳು ಬೇಕೆಂದು ಹಠ ಹಿಡಿದಿದ್ದೆ. ಚಪ್ಪಲಿ ತೊಗೊಂಡು  ಏನ್ ಮಾಡ್ತಿಯಾ ? ಎಂದು ಅಮ್ಮ ಬೈದಿದ್ದಳು! ತುಂಬಾ ಹೊತ್ತು ಅತ್ತಿದೆ ನಾನು ೪ ವರ್ಷದ ಪುಟ್ಟ ಹುಡುಗನಿಗೆ ಹೇಗೆ ಅರ್ಥವಾಗಬೇಕು ತನಗೆ ನಡೆಯಲಾಗದೆಂದು ಚಪ್ಪಲಿಗಳನ್ನು ಧರಿಸುವುದರಿಂದ ಯಾವ ಪ್ರಯೋಜನವು ಇಲ್ಲವೆಂದು. 

ಆರೋಗ್ಯ ಧಾಮ ಶಾಲೆ ನಡೆದಿದ್ದೇ ಬರೀ ೩ ತಿಂಗಳು ! ಆ ೩ ತಿಂಗಳಲ್ಲೇ ನಾನು ಇಂಗ್ಲಿಷ, ಕನ್ನಡ ಗಣಿತನ್ನು ಸಾಕಷ್ಟು ಕಲಿತಿದ್ದೆ ಅಮ್ಮ ಅಲ್ಲಿಗೆ ನನ್ನ ಎತ್ತಿಕೊಂಡೇ ಹೋಗುತ್ತಿದ್ದಳು. ಡಾ| ಲಕ್ಷ್ಮಿ ಡೇ ಯವರು ಅಮ್ಮನ ಗೆಳತಿಯಂತೆಯೇ ಆಗಿದ್ದರು. ೩ ತಿಂಗಳಾದ ಮೇಲೆ ನಮಗೆಲ್ಲ ಪರೀಕ್ಷೆಗಳಿಟ್ಟರು. ಉತ್ಸಾಹದಿಂದಲೇ ಪರೀಕ್ಷೆ ಬರೆದೆವು. ಇನ್ನೇನು ಮುಂದಿನ ತರಗತಿಗೆ ಹೋಗುತ್ತೇನೆಂದು ನಾನು ತುಂಬಾ ಖುಷಿಯಾಗಿದ್ದೆ. ಪರೀಕ್ಷೆ ಯಲ್ಲಿ ನಾನು ಫಸ್ಟ್ ಬಂದಿದ್ದೆ. ಬೇರೆ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಸಿಕ್ಕಿದ್ದವು. ಎಲ್ಲ ಮಕ್ಕಳಂತೆ  ನಾನೂ ಶಾಲೆಗೆ  ಹೋಗುತ್ತೇನೆಂದು  ಸಂತೋಷವಾಗಿದ್ದೆ. ಆದರೆ ನನಗೊಂದು ಆಘಾತ ಕಾದಿತ್ತು! ಪರೀಕ್ಷೆಗಳು ಮುಗಿದ ಮೇಲೆ ಆ ಶಾಲೆ ಯನ್ನು ಮುಚ್ಚಿದರು!! ಶಾಲೆ ಏಕೆ ಮುಚ್ಚಿಹೋಯಿತೆಂದು ಯಾರು ಸ್ಪಷ್ಟೀಕರಣ ನೀಡಲಿಲ್ಲ.

ಇದರಿಂದ ನಾನು ತೀರಾ  ನೊಂದೆ, ೩ ತಿಂಗಳ ಅವಧಿಯಲ್ಲಿ ಕೊನೆಗೂ ಆ ಪುಟ್ಟ ಹುಡುಗಿಗೆ ಮಾತು ಬರಲಿಲ್ಲ. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿನ ಶಿಕ್ಷಕಿಯರು ಎಲ್ಲೋ ಮಾಯವಾದರೂ! ಡಾ ಲಕ್ಷ್ಮಿ ಡೇಯವರು ನನ್ನನ್ನು ಮನೆಯಲ್ಲಿ ಓದಿಕೊಳ್ಳಲು ೫-೬ ನೇ ತರಗತಿಯ ಪುಸ್ತಕಗಳನ್ನು ಕೊಟ್ಟು ಅಮೆರಿಕಕ್ಕೆ ಹಾರಿದರು. ಹೀಗೆ ನಿಂತೇ ಬಿಟ್ಟಿತು. 

ನನ್ನ ವಿದ್ಯಾರ್ಥಿ ಜೀವನ ! ಪಾಲಕರೆಲ್ಲ ಸೇರಿ ಡಾ| ಲಕ್ಷ್ಮಿ ಡೇ, ಹಾಗೂ ಶಿಕ್ಷಕಿಯರ ಮೇಲೆ ಒತ್ತಡ ತಂದು, ಧರಣಿ ಒಂದು ವೇಳೆ ನಡೆಸಿದ್ದರೆ. ನಮ್ಮ ಶಾಲೆ ಮತ್ತೆ ಪ್ರಾರಂಭವಾಗುತ್ತಿತ್ತೇನೋ ಆದರೆ ನಮ್ಮ ನಮ್ಮ ತಂದೆ ತಾಯಿಗಳು ಆಸಕ್ತಿ ತೋರಲಿಲ್ಲ! ಅದರಲ್ಲೂ ನಮ್ಮದು ದೊಡ್ಡ ಕುಟುಂಬ, ನಮ್ಮ ತಂದೆ -ತಾಯಿಗಳಿಗೆ ನಾವು ೬ ಜನ ಮಕ್ಕಳು ನಮ್ಮ ತಂದೆ, ತಮ್ಮ ತಂಗಿಯರ ಮಕ್ಕಳು ಭಾಳಾ ಕಿಲಾಡಿಗಳು, ನನ್ನನ್ನು ನೋಯಿಸಲೆಂದೇ ನಿನ್ನ ಶಾಲೆ ಪ್ರಾರಂಭವಾಗೋದ್ಯಾವಾಗ? ನಿನ್ನ ಪರೀಕ್ಷೆಗಳು ಯಾವಾಗ? ಎಂದುಕೇಳಿ ನಗುತ್ತಿದ್ದರು! ಅವರುಗಳು ಹೀಗೆ ಗೇಲಿ ಮಾಡಿದಾಗಲೆಲ್ಲ ತುಂಬಾ ನೊಂದುಕೊಳ್ಳತ್ತಿದೆ. ರಾತ್ರಿಯಲ್ಲ ಅತ್ತಿದ್ದಿದೆ, ಸಮಾಧಾನ ಮಾಡಲು ಅಣ್ಣ-ಅಕ್ಕಂದಿಗೆ ಸಮಯವೂ ಎಲ್ಲಿತ್ತು!

ಆಗ ಟಿ.ವಿ. ಯಲ್ಲಿ ದೂರದರ್ಶನದ ಒಂದೇ ಚಾನೆಲ್ ಬರುತ್ತಿತ್ತು. ಆಗ ಈಗಿನಂತೆ ಕೇಬಲ್ ಇರಲಿಲ್ಲ. ಹಾಗೂ ಆಗ ತುಂಬಾ ಆರೋಗ್ಯಕರ ಕಾರ್ಯಕ್ರಮಗಳನ್ನು ಪ್ರಸಾರವಾಗುತ್ತಿದ್ದವು! ವಯಸ್ಕರ ಶಿಕ್ಷಣದ ಬಗ್ಗೆ ಕಾರ್ಯಕ್ರಮಗಳನ್ನು ನಾನು ನೋಡುತ್ತಿದ್ದೆ! ಅದರಲ್ಲಿ ತೋರಿಸಿದಂತೆ ಬರೆದು ಅಕ್ಷರಾಭ್ಯಾಸವನ್ನು ಮಾಡಿದೆ. ಹೀಗೆ ಟಿ.ವಿ. ನೋಡಿಯೇ ಕನ್ನಡ, ಹಿಂದಿ ಕಲಿತೆ ಕಾಮಿಕ್ಸ್ ತರಿಸಿಕೊಂಡು ಓದಿ ಇಂಗ್ಲೀಷ ಅನ್ನೂ ಜೀರ್ಣಸಿಕೊಂಡೆ, ೧೧ನೇ ವಯಸ್ಸಿನಲ್ಲೆ ಕಾದಂಬರಿಗಳನ್ನು ಓದುತ್ತಿದೆ. ಪ್ರಸಿದ್ದವಾರ ಪತ್ರಿಕೆಯಲ್ಲಿ ’ಆಚಾರ್ಯ ಚಿತ್ರಕಲಾ ಭವನದ’ ಅಂಚೆ ಮೂಲಕ ಕಲಾಶಿಕ್ಷಣದ ಕುರಿತು ಜಾಹೀರಾತೊಂದು ನನ್ನ ಗಮನಸೆಳೆಯಿತು. ಮುಂಚಿನಿಂದಲೇ ನನಗೆ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ಈ ಜಾಹೀರಾತನ್ನು ನೋಡಿ ಮುಂದೆ ದೊಡ್ಡ ಚಿತ್ರಕಲಾವಿದನಾಗುವ ಕನಸು ಕಂಡೆ ! ಅಪ್ಪನಿಗೆ ದುಂಬಾಲುಬಿದ್ದು ಈ ಕೋರ್ಸ್ ಮಾಡಿದೆ. ಕನ್ನಡದಲ್ಲಿ ಪಾಠಗಳು ಅಂಚೆಯಲ್ಲಿ ಬರುತ್ತಿದ್ದವು. ಅವರಸರದಲ್ಲೇ ಕಲಾಪರೀಕ್ಷೇಗಳನ್ನು ಬರೆದಿದ್ದಕ್ಕೆ ದ್ವಿತೀಯ ದರ್ಜೆಯಲ್ಲಿ ಪಾಸಾದೆ! ಎಲ್ಲ ಮಕ್ಕಳು ಶಾಲೆಗೆ ಹೋಗುವಂತೆ ನಾನು ಹೋಗಲಾಗಲೇಯಿಲ್ಲ ಎಂಬ ಕೊರಗು ನನ್ನಲ್ಲಿ ಇದ್ದೇಯಿತ್ತು. ಆದರೆ ಯಾರ್ ಮುಂದೆಯೂ ನನ್ನ ದುಖ:ವನ್ನು ತೋರಿಸುತ್ತಿರಲಿಲ್ಲ ನಾನು ಏಕೆಂದರೆ ಮನೆಯವರೂ ದುಖಿ:ಸುತ್ತಾರೆಂದು ಹಾಗಾಗಬಾರದೆಂದು ನಮ್ಮ ತಂದೆ ತಾಯಿಗಳೂ ಅಷ್ಟೇ ಎಂದೂ ನನ್ನನ್ನು ವಿಶೇಷ ಮಗು ವೆಂದು ಪರಿಗಣಿಸದೆ ಸಾಕಿದರು. ೬ ಜನ ಮಕ್ಕಳೂ ಅವರಿಗೆ ವಿಶೇಷ ಮಕ್ಕಳೇ ಅವರೆಂದೂ ಬೇಧಭಾವ ಮಾಡಲಿಲ್ಲ. ಹೀಗಾಗಿ ನನಗೂ ನಾನು ಅಂಗವಿಕಲ ಎಂದು ಅನ್ನಿಸಲೇಯಿಲ್ಲ. ಅಂಚೆ ಮೂಲಕ ಕಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ನಾವೆಲ್ಲ ರಾಯಚೂರಿನಲ್ಲಿಯೇ ಇದ್ದೆವು. ಕೋಸ್ ಮುಗಿದ ಮೇಲೆ ನಾನು ಆಗ ದೊಡ್ಡ ದೊಡ್ಡ ಪೇಂಟಿಂಗ್ಸ್ ಮಾಡುತ್ತಿದೆ. ಇಲ್ಲಿನ ಹಿರಿಯ ಚಿತ್ರಕಲಾವಿದರಿಗೆ  ನನ್ನ ಕಲಾಕೃತಿಗಳನ್ನು ತೋರಿಸಿದಾಗ ಅವರೆಲ್ಲ ಮನೆಗೇ ಬಂದು ಮಲಗಿದಲ್ಲೇ ಚಿತ್ರಬಿಡಿಸುವ ನೀನು. ಒಬ್ಬ ಅದ್ಭುತ ಕಲಾವಿದನಾಗಿದ್ದಿಯಾ, ಒಂದು ದಿನ ನೀನು ನಮ್ಮನ್ನೂ ಮೀರಿಸಿ ನಮಗೇ ಚಿತ್ರಕಲೆಯನ್ನು ಕಲಿಸುತ್ತಿ! ಎಂದು ಆರ್ಶೀವದಿಸಿದರು.

ಆಗಷ್ಟೆ ಹರೆಯಕ್ಕೆ ಕಾಲಿಟ್ಟಿದ್ದ ನಾನು, ಎಲ್ಲರಂತೆಯೇ ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಿದ್ದೆ.! ಆದರೆ, ಕನಸು ಮನಸು ಬೆಳೆಯಿತೆ ಹೊರತು. ದೇಹಬೆಳೆಯಲಿಲ್ಲ. ಅಷ್ಟು ದಿನ ಅಣ್ಣನ ಹೆಗಲ ಮೇಲೆ ಪ್ರಪಂಚ ನೋಡಿದ್ದೇನೆ. ನನಗೆ ಹಾಸಿಗೆಬಿಟ್ಟೇಳಲಾಗದ ಪರಿಸ್ಥಿತಿ ಬಂತು. ವೈದ್ಯರಿಗೆ ತೋರಿಸಿದರೆ  ’ಆಸ್ಟ್ರೋಜೆನಿಟಿಕ್ ಇಂಪರಫೇಕ್ಟ್’ ಎಂಬುದು ಹಾಗೆ ವಯಸ್ಸು ಬೆಳೆದಂತೆಲ್ಲ ಎಲುಬುಗಳು ಬೆಳೆಯದೇ ಎಲುಬುಲುಗಳು ಸಣ್ಣ ಸ್ಪರ್ಶಕ್ಕೂ ಮುರಿದುಕೊಳ್ಳತ್ತವೆ. ಇದಕ್ಕೆ  ಪರಿಹಾರವೇ ಇಲ್ಲ! ನೋವನ್ನು ತಡೆದುಕೊಳ್ಳಬೇಕೆಷ್ಟೆ ಎಂದು ಬಿಟ್ಟಿರು. ೧೬ ರಿಂದ ೨೬ ರರವರೆಗೆ ಅಂದರೆ ೧೦ ವರ್ಷಗಳವರೆಗೂ ಕೈ ಕಾಲುಗಳಿಗೆ ಅಸಾಧ್ಯ ನೋವು ಅನುಭವಿಸಿದೆ. ಚಿತ್ರಬಿಡಿಸಲು, ಪೇಟಿಂಗ್ ಮಾಡಲು ಸಾಧ್ಯವಾಗಲೇಯಿಲ್ಲ. ಅಕ್ಕ, ಅಣ್ಣಂದಿರೆಲ್ಲ  ತಮ್ಮ ತಮ್ಮ ಕೆಲಸಗಳಿಗೆ  ಹೋಗುತ್ತಿದ್ದರಿಂದ ಮತ್ತು ನನಗೆ ಯಾರೂ ಗೆಳೆಯರೂ ಇಲ್ಲದ್ದಿದ್ದುರಿಂದ ಕ್ರಮೇಣ ನನಗೆ ಖಿನ್ನತೆ ಶುರುವಾಯಿತು. ಕಷ್ಟಗಳು ಬಂದಾಗ ಒಂದರ ಹಿಂದೆ ಒಂದು ಬರುತ್ತವೆಯಂತೆ ಈ ಮಾತು ನನ್ನ ಬಾಳಲ್ಲೂ ನಿಜವಾಯಿತು. ಅಪ್ಪ ಎರಡು ಸಲ  ಆರೋಗ್ಯ ಕೆಟ್ಟು  ಆಸ್ಪತ್ರೆ ಸೇರಿದರು. ಅಮ್ಮನೂ ಈ ಎರಡು ವರ್ಷಗಳ ಆರೋಗ್ಯವಿಲ್ಲದಂತಾಯಿತು ಎಂದು ಅಕ್ಕ ಅಣ್ಣಂದಿರು ನನ್ನ ಮೇಲೆ ಆರೋಪ ಬೇರೆ ಹೊರೆಸಿದರು! ಆದರಿದು ಸತ್ಯವಾಗಿರಲ್ಲಿಲ್ಲ. ಅಮ್ಮ, ಅಕ್ಕಂದಿರ ಮದುವೆ ಮತ್ತು ಒಂದರ ಹಿಂದೊಂದು ಬಾಣಂತನಗಳನ್ನು ಒಬ್ಬಳೇ ಮಾಡಿ ಬಳಲಿದ್ದಳು. ೧೯೯೫ ರಲ್ಲಿ ನಮ್ಮ ರಾಯಚೂರಿನಲ್ಲಿ ವ್ಯಂಗ್ಯಚಿತ್ರ ಸ್ಪರ್ಧೆ ಏರ್ಪಡಿಸಿದ್ದಂತೆ ಅದೃಷ್ಟವಶಾತ ಆಗ ನನಗೆ ಕೈ, ಕಾಲು, ನೋವು ತಕ್ಕ ಮಟ್ಟಿಗೆ ವಾಸಿಯಾಗಿತ್ತು. ನಾನೂ ವ್ಯಂಗ್ಯ ಚಿತ್ರ ಸ್ಫರ್ಧೆಯಲ್ಲಿ ಭಾಗವಹಿಸಿದೆ. ನನ್ನ ವ್ಯಂಗ್ಯಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿತು! ಕರ್ನಾಟಕ ಸಂಘದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಬಹುಮಾನ ವಿತರಣೆ ಸಮಾರಂಭವೂ ಇತ್ತು. ಅಣ್ಣ ನನ್ನನ್ನು ಎಂದಿನಂತೆ ಎತ್ತಿಕೊಂಡು ಸಮಾರಂಭಕ್ಕೆ ಕರೆದುಕೊಂಡು ಹೋದ. ಅಲ್ಲಿ ರಾಯಚೂರವಾಣಿಯ ಆಗಿನ ಸಂಪಾದಕರಾಗಿದ್ದ ಎನ್.ಕೆ.ಕುಲಕರ್ಣಿಯವರ ಪರಿಚಯವಾಯಿತು. ಅವರು ವೇದಿಕೆಯಲ್ಲಿ ನನ್ನ ಕುರಿತೇ ಮಾತನಾಡಿದರು! ಬಹಳ ಹೊಗಳಿದರು ನನ್ನ ಎಂದು ಬೇರೆ ಹೇಳಬೇಕಾಗಿಲ್ಲ! ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅವರು ನಮ್ಮ ರಾಯಚೂರವಾಣಿಯನ್ನು ಸೇರಿಕೊಳ್ಳಿ ನಿಮಗಾಗೇ ಕಾರ್ಟೂನ್ ಕಾಲಂನ್ನು  ಪ್ರಾರಂಬಿಸುತ್ತೇನೆ. ನಿಮ್ಮ ವ್ಯಂಗ್ಯ ಚಿತ್ರಗಳನ್ನು ನಮಗೆ ಕೊಡಿ, ವ್ಯಂಗ್ಯಚಿತ್ರಗಳನ್ನು ಕೊಂಡೊಯ್ಯಲು ಆಫೀಸ್ ಬಾಯ್ ನನ್ನು ಕಳಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು!. ಹೀಗೆ ನನಗೆ ವ್ಯಂಗ್ಯಚಿತ್ರ ಬರೆಯುವ ಉತ್ಸಾಹ ಬಂದಿತು. ಏಕೆಂದರೆ ಆಗಲೂ ನಾನು ಪೇಂಟಿಂಗಗಳನ್ನು ಮಾಡಲು ಅಸಮರ್ಥನಾಗಿದ್ದೆ! (ಕೈಗಳಲ್ಲಿ ನೋವಿದ್ದುದರಿಂದ) ಪಾಕೆಟ್ ಕಾರ್ಟೂನ್‌ಗಳನ್ನು ಹೆಸರೇ ಸೂಚಿಸುವಂತೆ ಪಾಕೆಟ್ ಗಾತ್ರದ್ದು ಇರುತ್ತವೆ. ಹೆಚ್ಚು ಶ್ರಮವಿಲ್ಲದೆ ಬರೆಯಬಹುದು! ಶ್ರೀ ಎನ್.ಕೆಯವರು ನುಡಿದಂತೆ ನಡೆಯುವವರು ಪ್ರತಿ ಶುಕ್ರವಾರ ಆಫೀಸ್ ಜವಾನ್ ತೆಗೆದುಕೊಂಡು ಹೋಗುತ್ತಿದ್ದ, ನನ್ನ ವ್ಯಂಗ್ಯಚಿತ್ರಗಳು ರಾಯಚೂರ ವಾಣಿಯ ಭಾನುವಾರದ ಸಾಪ್ತಾಹಿಕಸಂಪದದಲ್ಲಿ ಕಾರ್ಟೂನ್ ಕಾಲಂ ಅಡಿಯಲ್ಲಿ ಪ್ರಕಟವಾಗತೊಡಗಿದವು!

ಆಗ ನನಗೆ ಪತ್ರ ಮಿತ್ರರಿದ್ದರು, ಅವರಿಗೆಲ್ಲ ನಿತ್ಯ ಪತ್ರಗಳನ್ನು ಬರೆಯುವುದೇ ನನ್ನ ಕೆಲಸವಾಗಿತ್ತು! ಪತ್ರ ಮಿತ್ರರಲ್ಲಿ ಹಲವರು ಹಿರಿಯ ವ್ಯಂಗ್ಯಚಿತ್ರಕಾರರೂ ಇದ್ದರು, ಇವರಲ್ಲಿ ನನ್ನನ್ನು ಚೆನ್ನಾಗಿ ಬಲ್ಲ ಖ್ಯಾತ ವ್ಯಂಗ್ಯ ಚಿತ್ರಕಾರ ಮಿತ್ರ ಜಿ.ಎಂ. ಬೊಮ್ನಳ್ಳಿಯವರು ಒಂದು ಸಲ ಪತ್ರ ಬರೆದು ನಿವ್ಯಾಕೇ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನಿಮ್ಮ ವ್ಯಂಗ್ಯಚಿತ್ರಗಳನ್ನು ಕಳಿಸಬಾರದು? ಎಂದರು ಹಾಗೂ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಹೇಗೆ ಕಳಿಸುವುದೆಂಬುದರ ಬಗ್ಗೆ ಮಾರ್ಗದರ್ಶನವನ್ನೂ ನೀಡಿದರು.

ಅವರ ಮಾರ್ಗದರ್ಶನದಂತೆ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಕಳಿಸತೊಡಗಿದೆ ನನ್ನ ವ್ಯಂಗ್ಯ ಚಿತ್ರಗಳು ಮೊದಮೊದಲು ವಿಷಾದ ಪತ್ರದೊಂದಿಗೆ ಹಿಂತಿರುಗಿ ಬಂದವು !  ಆದರೂ ನಾನು ನಿರಾಶನಾಗಲಿಲ್ಲ. ವ್ಯಂಗ್ಯಚಿತ್ರಗಳನ್ನು ಸತತವಾಗಿಯೇ ಕಳಿಸತೊಡಗಿದೆ. ಕೊನೆಗೊಂದು ದಿನ ನನ್ನ ಪ್ರಯತ್ನಕ್ಕೆ ಫಲ ಸಿಕ್ಕೇಬಿಟ್ಟಿತು. ಸುಧಾ ವಾರಪತ್ರಿಕೆ, ಮಂಗಳ ಸಾಪ್ತಾಹಿಕಗಳಲ್ಲಿ ನನ್ನ ಪ್ರಥಮ ಎರಡು ವ್ಯಂಗ್ಯಚಿತ್ರಗಳು ಪ್ರಕಟವಾದವು! ಆಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ನನಗೆ ಮೊದಲು ಬಂದ ಸಂಬಾವನೆ ೨೫ ರೂ !

ಅಂದಿನಿಂದ ಇಂದಿನವರೆಗೂ ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳಲ್ಲಿ ೨೦೦೦ಕ್ಕೂ ಹೆಚ್ಚು ವ್ಯಂಗ್ಯ ಚಿತ್ರಗಳು ಪ್ರಕಟವಾಗಿದೆ. ಈಗಲೂ ಈ ವ್ಯಂಗ್ಯಚಿತ್ರ ಕೃಷಿಯನ್ನು ಮುಂದುವರೆಸಿದ್ದೇನೆ. ಇದರಿಂದ ನನಗೆ ಆತ್ಮ ಸಂತೋಷ, ಆತ್ಮ ವಿಶ್ವಾಸ ಮೂಡಿದೆ. ಅಲ್ಪ ಸಂಪಾದನೆಯೂ  ಇದೆ.

ನನ್ನಂತೆ ವಿಕಲ ಚೇತನನಾಗಿರುವ ಶಿರಸಿಯ ರಮೇಶ ಹೆಗಡೆ ನನ್ನ ಆತ್ಮೀಯ ಮಿತ್ರ. ಆತನ ಕಷ್ಟಗಳನ್ನು ನಾನು ಸಮಾನ ಬಂಧು ವಾಗಿ ಅರ್ಥ ಮಾಡಿಕೊಂಡು ಸ್ಪಂದಿಸುತ್ತ ಜಗತ್ತಿನಲ್ಲಿ ನನಗಿಂತಲೂ ಕಷ್ಟದಿಂದ ಜೀವನ ಸಾಗಿಸುವವರಿದ್ದಾರೆ ಎಂದು ಅರಿತ್ತಿದ್ದೇನೆ. ಮುಂದೊಂದು ದಿನ ಪತ್ರಿಕೆಯೊಂದರಲ್ಲಿ ಖಾಯಂ ಸಿಬ್ಬಂದಿ ವ್ಯಂಗ್ಯಚಿತ್ರಕಾರನಾಗಿ, ಕಥಾ ಸಂದರ್ಭ ಚಿತ್ರಕಾರನಾಗಿ ಕೆಲಸ ಮಾಡಬೇಕೆಂದು ಕನಸೊಂದು ಇಟ್ಟುಕೊಂಡಿದ್ದೇನೆ, ಕೆಲಸಕ್ಕೆ ಸೇರುವ ಆ ಶುಭದಿನಕ್ಕಾಗಿ  ಕಾಯುತ್ತಿದ್ದೇನೆ.

******

(ಆಕರ: ವ್ಯಂಗ್ಯ ಚಿತ್ರಕಾರನಾಗಿ ಅರುಣ್ ನಂದಗಿರಿ: ಒಂದು ವಿಶ್ಲೇಷಣಾತ್ಮಕ ಅಧ್ಯಯನ: ರಾಜು ಬಿ. ಆರ್.)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Rajendra B. Shetty
9 years ago

ನಿಮ್ಮ ವ್ಯಂಗ್ಯ ಚಿತ್ರಗಳನ್ನು ನೋಡುತ್ತಿದ್ದೆ, ಆದರೆ ನಿಮ್ಮ ಕಥೆ ಗೊತ್ತಿರಲಿಲ್ಲ. ನಿಮ್ಮ ಛಲ ಮತ್ತು ಧೈರ್ಯಕ್ಕೆ ನನ್ನದೊಂದು ಸಲಾಂ. ನಿಮಗೆ ದೇವರು ಒಳ್ಳೆಯದು ಮಾದಲಿ ಮತ್ತು ನಿಮ್ಮ ಕೆಲಸ ಸಿಗುವ ನಿರೀ‍‍ಕ್ಷೆ ನೆರವೇರಲಿ

ವನಸುಮ
9 years ago

ನಮೋ ನಮಃ… ಅನಂತ ವಂದನೆಗಳು.

ಈ ಬರಹ ಓದಿ ಕಣ್ಣುಗಳು ಒದ್ದೆಯಾದವು, ಎಲ್ಲ ಅಂಗಗಳು ಸರಿ ಇದ್ದು ವಿಕಲರಂತೆ ಇರುವ ನಮ್ಮಂಥವರ ಬಾಳಿಗಿಂತ, ವಿಕಲತೆ ಇದ್ದಾಗಲೂ ಅದೇಷ್ಟೋ ವ್ಯಂಗ್ಯ ಚಿತ್ರಗಳನ್ನು ಬಿಡಿಸಿ ಸಾಧನೆಗೈಯ್ಯುತ್ತಿರುವ ನಿಮ್ಮ ಬದುಕೇ ಶ್ರೇಷ್ಟ. ಈಗ ಹೇಳಿ ಯಾರು ವಿಕಲರು. ಬೇಸರಿಸದಿರಿ ಅರುಣ್, ನಿಮ್ಮ ಪ್ರತಿಭೆ ಅವಿಸ್ಮರಣೀಯವಾದದ್ದು, ಒಂದು ದಿನ ಅತ್ಯುತ್ತಮ ಕಲಾವಿದರು ಎನ್ನುವ ಬಿರುದು ನಿಮ್ಮದಾಗುವುದರಲ್ಲಿ ಸಂದೇಹವಿಲ್ಲ (ಈಗಲೂ ನೀವು ಅತ್ಯುತ್ತಮ ಕಲಾವಿದರೇ, ಆದರೆ ಇನ್ನೂ ಜನರ ಕಣ್ಣಿಗೆ ಬಿದ್ದಿಲ್ಲವಷ್ಟೇ) "ನಿನ್ನ ಭವಿಷ್ಯಕ್ಕೇ ನೀನೆ ಶಿಲ್ಪಿ" ಅನ್ನುವುದನ್ನ ನೀವು ಸಾಬಿತುಪಡಿಸಿದ್ದೀರ. ನಾನು ನನ್ನ ಜೀವನದಲ್ಲಿ ಕಂಡ ಶ್ರೇಷ್ಟ ವ್ಯಕ್ತಿಗಳ ಸಾಲಿನಲ್ಲಿ ಇಂದಿನಿಂದ ನೀವೂ ಸೇರ್ಪಡೆಯಾಗಿದ್ದೀರ.

ಶುಭವಾಗಲಿ ಅರುಣ್.

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಅರುಣ್ ನಿಜಕ್ಕೂ ನೀನು ನೆಟ್ಟಗಿರುವ ನಮ್ಮಂಥವರಿಗೆ ಸ್ಪೂರ್ತಿ…ಮತ್ತು ಅನುಕರಣೀಯ.. ಗ್ರೇಟ್..

ಶ್ರೀನಿವಾಸ್ ಪ್ರಭು

ಅರುಣ್ ನಿಮ್ಮ ಚಿಕ್ಕ ಬಯೋಗ್ರಫಿ ಓದಿ ಹೃದಯ ತುಂಬಿ ಬಂತು. ನಿಮ್ಮಂತಹ ಕಲಾವಿದರಿಗೆ ನಿಜವಾಗಿಯೂ ಪತ್ರಿಕೆಗಳು ಪ್ರಚಾರ ಕೊಡಬೇಕು. ನಮಗೂ ನೀವು ಅನುಕರಣೀಯರಾಗಿದ್ದಿರಿ. ಪ್ರಯತ್ನ ಬಿಡಬೇಡಿ. ಒಂದು ದಿನ ಖಂಡಿತಾ ನೀವು ಹಿಮಾಲಯದ ತುತ್ತ ತುದಿ ಏರಿದಷ್ಟು ಸಂತಸ ಪಡುವಿರಿ. ನಿಮ್ಮಿಂದ ಯುವ ಜನಾಂಗ ಕಲಿಯುವುದು ಬಹಳಷ್ಟಿದೆ. ಆ ಗುರುರಾಯರು ಸದಾ ನಿಮ್ಮ ಮೇಲೆ ಗುರು ಶಕ್ತಿ ತುಂಬಿ ಹರಸಲಿ!

prashasti.p
9 years ago

Nice ! and Congrats 🙂 Baraha odutta kannu tumbi bantu.. nimma aase ederali endu prarthane

krishnaveni.kidoor
krishnaveni.kidoor
9 years ago

Arun,you are genius.keep it.

santhoshkumar LM
santhoshkumar LM
9 years ago

ಅಸಹಾಯಕತೆಯನ್ನು ಮೀರಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದೀರ.
ಶಹಬ್ಬಾಷ್ ಅನ್ನುವುದನ್ನು ಬಿಟ್ಟರೆ ಬೇರೆ ಮಾತಿಲ್ಲ.
ಮನಮುಟ್ಟಿದ ಲೇಖನ..

7
0
Would love your thoughts, please comment.x
()
x