ಸಡಿಲವಾಗುತ್ತಿರುವ ಸಂಬಂಧಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ


ಬದಲಾವಣೆ ಜಗದ ನಿಯಮ! ಪ್ರಕೃತಿ ನಿತ್ಯನೂತನ. ನವನವೀನ! ಬದಲಾಗದಿದ್ದರೆ ಏಕತಾನತೆ ಉಂಟಾಗಿ ಬೇಸರ ಆವರಿಸಿ ಬದುಕಾಗುವುದು ಯಾತನಾಮಯ! ಬದಲಾವಣೆಯ ಗಾಳಿ ತರುವುದು ಉತ್ಸಾಹ. ನವ ಚೇತನ !ಹೊಸ ಚಿಗುರು ಹೂವು ಹಣ್ಣು! ಹೊಸತನ ತುಂಬಿ ಬದುಕಾಗುವುದು ನೂತನ! ಬದಲಾವಣೆಯೇ ಜೀವನಕೆ ಆಗುವುದು ಟಾನಿಕ್ !

ಅವಿಭಕ್ತಕುಟುಂಬಗಳು ಮಾಯವಾಗಿ ವಿಬಕ್ತಕುಟುಂಬಗಳು ಉಂಟಾಗಿರುವುದರಿಂದ, ಜಾತಿ ಧರ್ಮಗಳ ಕಪಿ ಮುಷ್ಟಿಯಿಂದ ಮಾನವ ಮುಕ್ತನಾಗುತ್ತಿರುವುದರಿಂದ, ಆಧುನಿಕ ಬದಲಾದ ಬದುಕಿನಿಂದ, ತಾಂತ್ರಿಕತೆ ಹೆಚ್ಚಾಗಿರುವುದರಿಂದ, ಶಿಕ್ಷಣಕ್ಕೆ, ಹಣಕ್ಕೆ ಪ್ರಾಧಾನ್ಯತೆ ಬಂದುದರಿಂದ, ವೈಯುಕ್ತಿಕ ಸ್ವಾತಂತ್ರ್ಯ ಅತಿಯಾಗಿರುವುದರಿಂದ, ಪಾಶ್ಚಿಮಾತ್ಯರ ಮತ್ತು ಮಾಧ್ಯಮಗಳ ಪ್ರಭಾವದಿಂದ, ಸಮಾಜ ಬದಲಾದುದರಿಂದ ಸಂಬಂಧಗಳು ಸಡಿಲಗೊಂಡು ಬದಲಾಗುವಂತಾಗಿವೆ!

ಇಂದು ಕುಟುಂಬದ ಸದಸ್ಯರೆಲ್ಲಾ ದುಡಿದರೂ ಬದುಕಲು ಬೇಕಾಗುವಷ್ಟು ಹಣ ದೊರೆಯದ ಪರಿಸ್ಥಿತಿ ಇರುವುದರಿಂದ, ತಂದೆ ಒಂದು ಕಡೆ ತಾಯಿ ಮತ್ತೊಂದು ಕಡೆ ಉದ್ಯೋಗ ಮಾಡುವಂತಾಗಿ ಪರಸ್ಪರರು ಅರ್ಥ ಮಾಡಿಕೊಂಡು ಅನ್ಯೋನ್ಯವಾಗಿರಲು ಸಾಧ್ಯವಾಗದೆ ಇರುವಾಗ ಆ ಉದ್ಯೋಗಿಗಳ ತಂದೆ ತಾಯಿ ತಮ್ಮ ಮಕ್ಕಳ ಜತೆಗೆ ಇನ್ನೆಷ್ಟರಮಟ್ಟಿಗೆ ಅನ್ಯೋನ್ಯತೆ ಸಾಧಿಸಲು ಸಾಧ್ಯವಾದೀತು? ಇವರಿಗೆ ಇವರ ತಂದೆ ತಾಯಿಗಳೂ ಇವರಿಗೆ ಹೊರೆಯಾದರೆ ಹೇಗೆ ಸಂಬಂಧಗಳ ಕಾಪಾಡಿಕೊಂಡಾರು? ಅದು ಸಾಧ್ಯವಾದೀತು?

ಮೂರು ವರ್ಷದ ಅತಿ ಚಿಕ್ಕ ಮಗುವನ್ನೇ ನಿರಂತರವಾಗಿ ನರ್ಸರಿಗೆ ಕಳುಹಿಸುತ್ತಿರುವುದರಿಂದ ಆ ಮಗು ಮನೆಗಿಂತ ಶಾಲೆಯಲ್ಲೇ ಹೆಚ್ಚು ಕಾಲ ಕಳೆಯುವುದರಿಂದ, ಮನೆಗೆ ಬಂದಾಗಲೂ, ತಾಯಿ ಅಡುಗೆ ಮನೆಯ ಕೆಲಸದಲ್ಲಿ ಮುಳುಗಿರುವುದರಿಂದ, ಅಜ್ಜಿ ಇಲ್ಲದಿರುವುದರಿಂದ, ಇದ್ದರೂ ಅಜ್ಜಿ ಕತೆಗಳಿಗೆ ಪ್ರಾಮುಖ್ಯತೆ ಕೊಡದೆ ಮೊಬೈಲ್, ಗೇಮು, ಟಿ ವಿ ಗಳ ಮಕ್ಕಳು ಇಷ್ಟಪಡುವುದರಿಂದ, ಅವುಗಳಲ್ಲಿ ಮಕ್ಕಳು ಮುಳುಗುವುದರಿಂದ ಮತ್ತು ಅವು ಆಕರ್ಷಿಸುವುದರಿಂದ ತಂದೆ, ತಾಯಿ, ಅಜ್ಜ, ಅಜ್ಜಿಯವರೊಂದಿಗೆ ಒಡನಾಡುವ ಅವಕಾಶ ಕಡಿಮೆಯಾದುದರಿಂದ ಇವರಲ್ಲಿ ಅನ್ಯೋನ್ಯತೆ ಉಂಟಾಗುತ್ತಿಲ್ಲ! ಈ ಸಂಬಂಧಗಳು ಬಿಗಿಗೊಳ್ಳುತ್ತಿಲ್ಲ!ಿ ಅಜ್ಜ ಅಜ್ಜಿಯರು ಬರುತ್ತಾರೆಂಬ ಸಂಭ್ರಮ ಇಂದಿಲ್ಲ! ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳು ಬೇಸರವಿಲ್ಲದಂತೆ ಮಾಡುತ್ತಿರುವ, ಖುಷಿ ನೀಡುತ್ತಿದ್ದ ದಿನಗಳು ಕನಸಾಗಿ ಅವರೂ ಟಿ ವಿ ಆಶ್ರಯಿಸುವಂತಾಗಿದೆ. ಸಹಜ ಸಂತಸ ಸಿಗದಾಗಿದೆ. ಒಮ್ಮೆಗೆ ಮಕ್ಕಳು ಮೊಮ್ಮಕ್ಕಳ ಕಳೆದುಕೊಂಡ ಯಾತನೆಯನ್ನು ಟಿವಿ ನೋಡುತ್ತಾ ಕಳೆಯುವಂತಾಗಿದೆ!

ಬಹಳಷ್ಟು ಹಬ್ಬ, ಹರಿದಿನ, ಜಾತ್ರೆ, ಶುಭ ಸಮಾರಂಭಗಳ ಆಚರಣೆಗಳಂದು ಮಕ್ಕಳು ಶಾಲೆ, ಟ್ಯೂಷನ್ ಅಂತ ಹೋಗುವುರಿಂದ ಅಂದು ದೂರ ದೂರದ ಊರಿನಿಂದ ಆಗಮಿಸುವ ಬಂಧುಗಳ ಪರಿಚಯ ಮಾಡಿಕೊಂಡು ಸಂಬಂಧ ಬೆಸೆಯುವ ಅವಕಾಶ ಇಲ್ಲದಂತಾಗುವುದು! ಹಾಗೆ ಇತ್ತೀಚೆಗೆ ಇಂತಹ ಹಬ್ಬ ಹರಿದಿನ, ಶುಭ ಸಮಾರಂಭಗಳಿಗೆ ಬಂಧು ಬಾಂಧವರು ಅನೇಕ ಕಾರಣಗಳಿಂದ ಭಾಗವಹಿಸುವುದು ಅಪರೂಪವಾಗುತ್ತಿರುವುದರಿಂದ … ಸಂಬಂಧಿಕರೊಂದಿಗೆ ಒಡನಾಟ ಕಡಿಮೆ ಆಗುತ್ತಿರುವುದರಿಂದ, ಆತ್ಮೀಯತೆಯನ್ನು ವ್ಯಕ್ತಪಡಿಸಲು ಅವಕಾಶಗಳಿಲ್ಲವಾಗಿ ಚಿಕ್ಕಪ್ಪ , ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಮಾವ, ಅತ್ತೆ … ಮುಂತಾದ ಆತ್ಮೀಯತೆಯ ಉದ್ದೇಶಿಸುವಿಕೆಗಳು ಇಲ್ಲವಾಗಿವೆ! ಮತ್ತೆ ಮತ್ತೆ ಸೇರುವ ಅವಕಾಶಗಳು ಹಿಂದಿನಂತೆ ಇಲ್ಲದ ಪ್ರಯುಕ್ತ ಆತ್ಮೀಯತೆ ಹೊರಟು ಹೋಗುವಂತಾಗಿದೆ! ನಾನು ನನ್ನವರೆಂಬ ಭಾವ ಬೆಳೆಯದಾಗಿ ಸಂಬಂಧಗಳು, ಆತ್ಮೀಯತೆಗಳು ವೃದ್ದಿಸಲು ಇಲ್ಲೂ ಅವಕಾಶಗಳು ಇಲ್ಲವಾಗಿವೆ!

ಉತ್ತಮ, ಉನ್ನತ ಶಿಕ್ಷಣ ಕೊಡಿಸಬೇಕೆಂದು ಪೋಷಕರು ಹಂಬಲಿಸಿ ಮಕ್ಕಳನ್ನು ತಮ್ಮ ಬಳಿ ಇಟ್ಟುಕೊಳ್ಳದೆ ದೂರ ದೂರದ ವಸತಿಯುತ ಶಾಲಾ – ಕಾಲೇಜುಗಳಿಗೆ ಸೇರಿಸುತ್ತಾರೆ. ಮನೆಯಲ್ಲಿನ ಸಂಬಂಧಗಳ ಬೆಸೆಯುವ ಕಾರ್ಯಕ್ರಮಗಳಿಗೆ ಮಕ್ಕಳು ಬರುವುದು ಮತ್ತೆ ಹಿಂದಿರುಗುವುದು ತೊಂದರೆಯಾಗುವುದೆಂದು ಕರೆಕಳಿಸುವುದಿಲ್ಲ, ಅವರು ಆಗಮಿಸುವುದಿಲ್ಲ. ಇದರಿಂದ ಸಂಬಂಧಿಕರೊಡನೆ ಬೆರೆತು ಸಂಬಂಧ ವೃದ್ದಿಸುವ ಅವಕಾಶಗಳು ಇಲ್ಲವಾಗುತ್ತವೆ! ಸಂಬಂಧಿಕರಷ್ಟೇ ಅಲ್ಲ ಮಾತಾ ಪಿತೃಗಳ ಜತೆಗೂ ಅನ್ಯೋನ್ಯತೆ ಬೆಳೆಯದಾಗುತ್ತದೆ. ಎಲ್ಲ ತಂದೆತಾಯಿಗಳ ಕರ್ತವ್ಯ ಮಕ್ಕಳ ಪಾಲನೆ ಪೋಷಣೆ ಮಾಡಿ ಉತ್ತಮ ಶಿಕ್ಷಣ, ವಡವೆ, ವಸ್ತು ಕೊಡಿಸುವುದಾಗಿರುತ್ತದೆ. ಹಾಗೆ ತಮ್ಮ ಪೋಷಕರೂ ಮಾಡುತ್ತಿದ್ದಾರೆ ಎಂಬ ಕರ್ತವ್ಯಭಾವ ದೃಷ್ಟಿ ಮಕ್ಕಳಲ್ಲಿ ತಲೆಯೆತ್ತುತ್ತದೆ! ಹೀಗೆ ಸಂಬಂಧಗಳು ಸಡಿಲವಾಗಿ ಮಹತ್ವ ಕಳೆದುಕೊಳ್ಳುವುದು ಸಹಜವೂ ಅನಿವಾರ್ಯವಾಗುತ್ತಿದೆ! ಅದಕ್ಕೆ ಇಂದು ಮಕ್ಕಳು ಸಂಬಂಧಿಕರನ್ನು ಮತ್ತು ಸಂಬಂಧಿಕರಲ್ಲದವರನ್ನೂ ಅಂಕಲ್ ಆಂಟಿ ಎಂದು ಕರೆಯುತ್ತಿರುವುದು. ಅಲ್ಲಿ ಯಾವ ಭಾವ ವ್ಯತ್ಯಾಸಗಳು ಆಗದೆ ಇರುವುದು ಕಾಣುತ್ತೇವೆ.

ಯಾವ ಸಂಬಂಧ ಬೇಕಾದರೂ ಸಿಗುತ್ತದೆ ಅಕ್ಕನ ಮಗಳು ಸಿಕ್ಕಾಳೆ? ಈ ಬಾಂಧವ್ಯ ಸಿಕ್ಕೀತೆ? ಅಂತ ಅಕ್ಕನ ಮಗಳನ್ನೇ ಕಾದು ಮದುವೆ ಮಾಡಿಕೊಳ್ಳುವಂತಹ ಕಾಲವೊಂದಿತ್ತು. ಆಗ ಸಂಬಂಧಗಳು ಬಿಗಿಯಾಗುತ್ತಿದ್ದವು. ವೈಜ್ಞಾನಿಕವಾಗಿ ಅದು ಸೂಕ್ತವಲ್ಲ ಅಂತ ತಿಳಿದುದರಿಂದ ಹಣದ ಬೆಲೆ ಹೆಚ್ಚಾದುದರಿಂದ ಅದು ಅಸಾಧ್ಯವಾಯಿತು! ಹೀಗೆ ಅನೇಕ ಕಾರಣಗಳು ಸಂಬಂಧಗಳು ಸಡಿಲಗೊಂಡು ಬದಲಾಗಲು ಕಾರಣಗಳಾಗಿವೆ!

ಶಿಕ್ಷಣ ಸಂಸ್ಥೆಗಳು ಹಣಗಳಿಸುವ ದಂಧೆಗಿಳಿದಿರುವುದರಿಂದ ಅವು ಹೇಗೆ ಹಣ ಗಳಿಸಬೇಕೆಂದು ಯೋಚಿಸಯತ್ತವೆ ವಿನಃ ಸಂಬಂಧಗಳನ್ನು ಹೇಗೆ ಬೆಸೆಯಿಬೇಕೆಂದು ಚಿಂತಿಸುತ್ತಿಲ್ಲ! ತಾವು ಹಣ ಗಳಿಸಲು ಮಕ್ಕಳು ತಮ್ಮ ಶಾಲೆಗೆ ಹರಿದು ಬರಬೇಕು! ಮಕ್ಕಳು ಹರಿದು ಬರಬೇಕೆಂದರೆ ತಮ್ಮ ಶಾಲೆ ತಾಲ್ಲೂಕು, ಜಿಲ್ಲೆ, ರಾಜ್ಯ, ಮತ್ತು ರಾಷ್ಟ ಮಟ್ಟದಲ್ಲಿ ಹೆಸರು ಮಾಡಬೇಕು! ಹೆಸರುಗಳಿಸಲು ತಮ್ಮ ಶಾಲೆ ಮಕ್ಕಳು ಹೆಚ್ಚು ಹೆಚ್ಚು ಅಂಕಗಳಿಸುವಂತಾಗಬೇಕು. ಅದಕ್ಕೆ ಹೆಚ್ಚು ಹೆಚ್ಚು ಅಂಕಗಳಿಸುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ! ಅಂಕಗಳಷ್ಟೆ ಎಷ್ಟು ಬೇಕೋ ಅಷ್ಟನ್ನು ಬೋಧಿಸುತ್ತಿದ್ದಾರೆ! ಅಂಕ ಗಳಿಕೆಯೇ ಜೀವನದ ಪರಮ ಗುರಿ ಎಂದು ಬೋಧಿಸುತ್ತಿದ್ದಾರೆ. ಹೆಚ್ಚು ಅಂಕ ಗಳಿಸುವುದರಿಂದ ಉತ್ತಮ ಉದ್ಯೋಗ ಪ್ರಾಪ್ತಿಯಾಗುತ್ತದೆ. ಅದರಿಂದ ಬೇಕಾದಷ್ಟು ಸಂಬಳ ಬರುತ್ತದೆ. ಅದರಿಂದ ಬೇಕಾದುದ ಪಡೆದು ಸುಖವಾಗಿರಬಹುದು ಎಂದು ಬೋಧಿಸಿ ಹೆಚ್ಚು ಹೆಚ್ಚು ಅಂಕ ಗಳಿಸುವಂತೆ ಒತ್ತಡ ತರುತ್ತಿವೆ ಹೊರತು ಸಂಬಂಧಗಳ ಮಹತ್ವ ಹೇಳಿಕೊಡುತ್ತಿಲ್ಲ! ತಂದೆ ತಾಯಿಗಳು ಇವರಿಗೆ ಈ ರೀತಿಯ ಶಿಕ್ಷಣ ಕೊಡಿಸಲು ಎಷ್ಟು ಶ್ರಮಿಸುತ್ತಿದ್ದಾರೆಂದು ತಿಳಿಸಿ ಅವರ ಶ್ರಮದ ಮಹತ್ವ ತಿಳಿಸಿ ಸಂಬಂಧಗಳ ಬೆಸೆಯಲು ಕಾರಣವಾಗುತ್ತಿಲ್ಲ! ಸಮಾಜಕ್ಕೂ ಸಂಬಂಧಗಳ ಬೆಸೆಯುವುದು ಬೇಕಿದ್ದರೂ ಉನ್ನತ ಶಿಕ್ಷಣ, ಉನ್ನತ ಉದ್ಯೋಗ ಬಯಸುತ್ತಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ! ಅದಕ್ಕೇ ಅವರೂ ಮಕ್ಕಳ ದೂರ ಇಟ್ಟು ಕಲಿಸಲು, ಗಳಿಸಲು ಪ್ರೋತ್ಸಹಿಸುತ್ತಿದ್ದಾರೆ! ಸಂಬಂಧಗಳು ಜಾಳಾಗಲು ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ! ವ್ಯವಸ್ಥೆಯೇ ಸಂಬಂಧಗಳ ಜಾಳಾಗಲು ಕಾರಣವಾಗುತ್ತಿದೆ.

ಉನ್ನತ ಶಿಕ್ಷಣ ಅರಸಿ, ಉತ್ತಮ ಉದ್ಯೋಗ ಅರಸಿ ಎಲ್ಲೆಲ್ಲಿ ಮಕ್ಕಳು ಹೋಗುತ್ತಾರೋ ಅಲ್ಲಲ್ಲಿ ಮನೆಯ ಒಡೆಯ – ಬಾಡಿಗೆದಾರ, ಗೆಳೆಯ – ಗೆಳತಿ, ವಿದ್ಯಾರ್ಥಿ – ಶಿಕ್ಷಕ ಮುಂತಾದವರು ನಿತ್ಯ ಬೇಟಿಯಾಗುವುದು, ಮಾತನಾಡುವುದು, ಒಡನಾಡುವುದು, ಸಂತೋಷ ಸಮಾರಂಭಗಳಲ್ಲಿ ಪರಸ್ಪರರು ಭಾಗವಹಿಸುವುದು ಸಹಜವಾಗುತ್ತದೆ. ಶುಭಾಷಯಗಳ, ಉಡುಗೊರೆಗಳ ವಿನಿಮಯ ಮಾಡಿಕೊಳ್ಳುವುದು, ಶಾಲಾ ಕಾರ್ಯಕ್ರಮಗಳಲಿ ಜತೆಯಾಗಿ ಕಲೆ ಪ್ರದರ್ಶಿಸಲು ಹೋಗುವುದು ಹೀಗೇ ಮಾಡುವುದರಿಂದ ಅವರ ಆ ಸಂಬಂಧಗಳು ಹತ್ತಿರವಾಗುವಂತಾಗಿ ಗಾಢ ಸ್ನೇಹವಾಗಿ, ಪ್ರೀತಿಯಾಗಿ ಬದಲಾಗುವುದು ಸಹಜ! ಅವು ವೈವಾಹಿಕ ಸಂಬಂಧದಲ್ಲಿ ಕೊನೆಗೊಳ್ಳಬಹುದು! ಈ ರೀತಿ ಈ ತರಹದ ಸಂಬಂಧಗಳು ವೃದ್ದಿಸಿ ಜಾತಿ, ಧರ್ಮ, ಭಾಷೆ, ದೇಶಗಳ ಗಡಿ ದಾಟುತ್ತಿರುವುದು ಇಂದು ಸಹಜವಾಗುತ್ತಿದೆ! ಹಾಗೆ ಇಂಥಾ ಸಂಬಂಧಗಳು ವೃದ್ದಿಸಲು ಆಧುನಿಕ ಬದುಕು ಅವಕಾಶ ಮಾಡಿಕೊಡುತ್ತಿದೆ! ಪ್ರಯುಕ್ತ ಇರುವ ಸಂಬಂಧಗಳು ಸಡಿಲವಾಗುತ್ತಿರುವುದು ದು:ಖದ ವಿಚಾರವಾದರೂ ಇಲ್ಲದ ಹೊಸ ಸಂಬಂಧಗಳು ಸೃಷ್ಟಿಯಾಗಿ ಸಮಾಜ ವಸುದೈವ ಕುಟುಂಬಕಂ ಆಗುತ್ತಿರುವುದು ಸಂತಸದ ವಿಚಾರ! ತಂದೆ ತಾಯಿ ಸಂಬಂಧಗಳ ಉಳಿಸಿಕೊಂಡು ಹೊಸ ಸಂಬಂಧಗಳನೂ ಬೆಳೆಸುವ ಪ್ರಯತ್ನ ಕೆಲವು ಮಕ್ಕಳು ಮಾಡುತ್ತಾರೆ. ಇಂತಹ ಪ್ರಯತ್ನವನ್ನು ಕೆಲವು ಪೋಷಕರೂ ಮಾಡುತ್ತಾರೆ. ಇದು ಎಲ್ಲರುಗೂ ಸಾಧ್ಯವಿಲ್ಲ! ಆದರೆ ಇವು ಶ್ರೇಷ್ಠ ಪ್ರಯತ್ನಗಳು!

* ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
venkatesh
5 years ago

We say often, without taking into our mind, that these areas are just they were. But really speaking it is not so. More development means, more pollutions, and the natural resources are slowly depleting. The human relationship is slowly diminishing. We are more materialistic and do not care for values. etc etc. This may not be true for every one/everything. But majority responds to this sentiments!

1
0
Would love your thoughts, please comment.x
()
x