ಟಚ್ ಸ್ಕ್ರೀನ್: ಸುದರ್ಶನ್.ವಿ

 

“ಹಲೋ ಎಲ್ಲಿದ್ದಿಯೋ? ಎಷ್ಟು ವರ್ಷ ಆಯ್ತು ನಿನ್ನ ನೋಡಿ, ಯಾವಾಗ ಸಿಗೋಣ?” “ಹ್ಯಾಟ್ಸ್ ಆಫ್ ಫೇಸ್ ಬುಕ್‍ಗೆ. ನಿನ್ನ ನಂಬರ್ ಸಿಕ್ತು. ನಿಜಕ್ಕೂ ಥ್ಯಾಂಕ್ಸ್ ಈ ಟೆಕ್ನಾಲಜಿಗೆ” … ಈ ಕಡೆ ಒಂದು ಕ್ಷಣ ಮೌನ. ಹೀಗೆ ಅಚಾನಕ್ಕಾಗಿ ಬಂದ ಹಳೆಯ ಗೆಳೆಯನ ಕರೆ ಕೊಂಚ ನನ್ನನ್ನು ಪಾಪ ಪ್ರಜ್ಞೆ ಗೆ ದೂಡಿತು. ಛೇ ನಾನೆಂಥ ಮನುಷ್ಯ…? ಡಿಗ್ರಿ ಮುಗಿದ ನಂತರ ಎಲ್ಲರ ಜೊತೆಗೂ ಸಂಬಂಧ ಕಡಿದುಕೊಂಡು ಬದುಕುತ್ತಿದ್ದೆನಲ್ಲಾ… ಬಾಲ್ಯದ ಗೆಳೆಯರು ಜಯನಗರದ ಮನೆಯನ್ನು ಬಿಟ್ಟು ಬೇರೆ ಕಡೆ ಬಂದ ಮೇಲೆ ಕಾಣೆಯಾದರು. ಪಿ.ಯು ಕಾಲೇಜಿನ ಗೆಳೆಯರು … ಗೊತ್ತಿಲ್ಲ! ಕೊನೆ ಪಕ್ಷ ಡಿಗ್ರಿಯ ಜೊತೆಗಿನ ಗೆಳೆಯರು… ಹೀಗೆ ಒಂದಾದ ಮೇಲೊಂದರಂತೆ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಿದ್ದರೆ “ಒಮ್ಮೆ ಸಿಗೋಣವೇ” ಎಂದು ಜೋರಾಗಿ ಹೇಳಿದ ಗೆಳೆಯ ಮತ್ತೆ ಈ ಲೋಕಕ್ಕೆ ಕರೆತಂದಿದ್ದ. ನಾನು ಉತ್ಸಾಹ ದಿಂದ “ಆಗಲಿ” ಎಂದೆ. ಫೋನಿಟ್ಟೆ.

ಅದೇ ಗುಂಗಿನಲ್ಲಿ ಕಂಪ್ಯೂಟರ್ ಕೀ ಬೋರ್ಡ್‍ಮೇಲೆ ಬೆರಳಾಡಿಸುತ್ತಾ ಅಂದು ಮನಸ್ಸು ಸ್ವಲ್ಪ (ಬಹಳ!!) ಹಿಂದಕ್ಕೆ ಜಾರಿತು.
ಆ ಕಾಲದಲ್ಲಿ ಏನಾದರೂ ವಿಷಯ ತಿಳಿಸಲು, ಕೇಳಲು ಸೈಕಲ್ ಏರಿಕೊಂಡು ಸ್ನೇಹಿತರ ಮನೆಗೆ ಹೋಗುವ ವಯಸ್ಸು ಮತ್ತು ಹುಮ್ಮಸ್ಸು. ಆಗಷ್ಟೇ ‘ಕಾದಲ್ ದೇಶಂ’ ಚಿತ್ರ ಬಿಡುಗಡೆ ಯಾಗಿತ್ತು. “ಮುಸ್ತಫಾ, ಮುಸ್ತಫಾ, ಡೌಂಟ್ ವರಿ ಮುಸ್ತಫಾ , ಮುಳುಗಾದ ಶಿಪ್ಪೆ ಫ್ರೆಂಡ್ ಶಿಪ್ಪಾ ದಾ…” ಎನ್ನುವ ತಮಿಳು ಹಾಡು ಹಿಟ್ಟಾಗಿತ್ತು. “ಎರಡು ಟಿಕೆಟ್ಟಿದೆ, ಬರುತ್ತಿಯಾ?” ಎಂದ ಸ್ನೇಹಿತ”. “ಊರ್ವಶಿ” ಥಿಯೇಟರ್ ನಲ್ಲಿ ನೋಡಿದ ಆ ಸಿನಿಮಾ ನಮ್ಮ ಸ್ನೇಹದ ಮೇಲೆ ಪ್ರಭಾವ ಬೀರಿತ್ತು. ಮುಂದಿನ ಕೆಲವು ದಿನಗಳ ಕಾಲ ನಾನೇ ವಿನೀತ್!! ಅವನೇ ಅಬ್ಬಾಸ್!! ಜಯನಗರ, ತ್ಯಾಗರಾಜನಗರ, ಗಾಂಧೀ ಬಜಾರ್, ಗವಿಪುರಂ, ಎಂ.ಜಿ.ರೋಡ್, ಬ್ರಿಗೇಡ್ ರೋಡ್… ಹೀಗೆ ನಾವು ಸುತ್ತಾಡದ ಜಾಗವಿಲ್ಲ. ಒಮ್ಮೆ ಕಾಲೇಜಿನ ಒಳಾಂಗಣದಲ್ಲಿ ನಾವಿಬ್ಬರು ಜೋರಾಗಿ ಈ ಹಾಡನ್ನು ಹಾಡು (ಕಿರುಚು)ತ್ತಿದ್ದಾಗ ನಮ್ಮ ಹಿಂದೆ ನಮ್ಮ ಗುರುಗಳಾದ ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ಬೆನ್ನ ಮೇಲೆ ಹೊಡೆದು “ಮುಸ್ತಾಫ ನೀಡ್ ನಾಟ್ ವರಿ. ಬಟ್ ಯೂ ನೀಡ್ ಟು ವರಿ ಗಯ್ಸ್” ಅಂದದ್ದು ಈಗಲೂ ನೆನಪಿದೆ. ಚಿಕ್ಕ ವಯಸ್ಸಿನಲ್ಲಿ ಅಂದರೆ ಏಳನೆಯ ತರಗತಿಯಲ್ಲಿ ಕಪ್ಪೆ ರೇಸ್ ನಲ್ಲಿ ಗೆದ್ದಿದ್ದಕ್ಕೆ ಮುಖ್ಯ ಅತಿಥಿಯಾಗಿದ್ದ ನಟ ಶಿವರಾಂ ನಿಂದ ಪದಕ ಪಡೆಯಲು ಸ್ಟೇಜ್ ಹತ್ತಿದ್ದು ಬಿಟ್ಟರೇ ಬೇರೆ ಯಾವುದಕ್ಕೂ ಅದರ ಹತ್ತಿರ ಸುಳಿದೇ ಇರಲಿಲ್ಲ. ಈಗಲೂ ಯಾವುದೇ ಕಾರ್ಯಕ್ರಮವಾದರೂ ಏನಾದರೂ ನೆಪಒಡ್ಡಿ ತಪ್ಪಸಿಕೊಳ್ಳುವ , ಆಗದಿದ್ದರೆ ಕೊನೆಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅಭ್ಯಾಸ ನನಗೆ. ಇಂಥವನಿಗೆ ಸ್ಟೇಜ್ ಹತ್ತಿಸಿದ (ಕು) ಖ್ಯಾತಿ ಆ ನನ್ನ ಗೆಳೆಯನಿಗೆ ಸಲ್ಲಬೇಕು. ಆಗೆಲ್ಲಾ ನನಗೆ ಎನ್‍ರಿಕೆ ಇಗ್ಲೀಸಿಯಸ್ ನ ಹಾಡುಗಳೆಂದರೆ ಬಹಳ ಇಷ್ಷವಾಗುತ್ತಿದ್ದ ಕಾಲ. ಆತನ ಮೇಲೆ ಆಣೆ ಪ್ರಮಾಣ ಮಾಡಿಸಿ, ಸ್ಟೇಜ್ ಹತ್ತಿಸಿ ಆತನ “ರಿದಮ್ ಡಿವೈನ್” ಹಾಡಿಗೆ ಹೆಜ್ಜೆ ಹಾಕಿಸಿಯೇ ಬಿಟ್ಟ. ಹೀಗೆ ಸಾಗಿತ್ತು ಜೀವನ…

ಒಂದು ದಿನ ಮುಂಜಾನೆಯೇ ಏದುಸಿರು ಬಿಡುತ್ತಾ ಬಂದ ಗೆಳೆಯ ತನ್ನ ತಂದೆ ಈ ಊರನ್ನೇ ಬಿಡುವ ನಿರ್ಧಾರ ಕೈಗೊಂಡಿರಿವುದನ್ನು ಹೇಳಿದ. ಕಾರಣ ಕೇಳುವ ವಯಸ್ಸು ನಮ್ಮದು. ಕಾರಣ ಹೇಳದ ವಯಸ್ಸು ದೊಡ್ಡವರದು. ಎಲ್ಲವನ್ನು ಮರೆಯಲು ಬಹಳ ದಿನಗಳೇ ಹಿಡಿದವು. ಇತ್ತ ನಾನು ಡಿಗ್ರಿ ಮುಗಿಸಿ, ಎಂ.ಕಾಂ ಮಾಡುವ ಆಸೆ ಚಿಗುರೊಡೆದಾಗ ತಂದೆಯ ರಿಟೈರ್‍ಮೆಂಟ್ , ತಂಗಿಯ ಮದುವೆ, ನಾನು ಕೆಲಸ ಹುಡುಕಬೇಕಾದ ಅನಿವಾರ್ಯತೆ… ಮುಂದೆ ಕೆಲಸದ ಹುಡುಕಾಟ. ಒಂದು ಕೆಲಸ… ನಂತರ ಮತ್ತೊಂದು ಕೆಲಸ… ಸರಿ ಬರಲಿಲ್ಲ… ಬಿಟ್ಟೆ. ಮುಂದೆ… ಜ್ಞಾನಭಾರತಿ ಕ್ಯಾಂಪಸ್ ಹತ್ತಿರದ ವಿದ್ಯಾನಿಕೇತನ್ ಶಾಲೆಯಲ್ಲಿ ಕೆಲಸ…

ಇವೆಲ್ಲದರ ನಡುವೆ ಯಾವಾಗಲೋ ಒಮ್ಮೆ ನೆನಪಾಗುತ್ತಿದ್ದ ಆ ಗೆಳೆಯ ಮತ್ತೆ ಸಿಕ್ಕಿದ್ದು ಹೀಗೆ… “ದಿಲ್ ಚಾಹತಾ ಹೈ ಹಮ್ ನಾ ರಹೇ ಕಬೀ ಯಾರೋಂಕೆ ಬಿನ್” ಕಂಪ್ಯೂಟರ್ ಸ್ಪೀಕರ್ ಹಾಡುತ್ತಿತ್ತು. ಎಷ್ಟು ನಿಜ ಎಂಬಂತೆ ಮನಸ್ಸು ಉಲ್ಲಾಸಗೊಂಡಿತು. ಸಂಜೆ ಐದಾಗಿತ್ತು. ಆಫೀಸಿನಿಂದ ಮನೆ ಕಡೆಗೆ ಹೊರಟೆ.

ಬಂದಿತು ಆದಿನ… ನಾವು ಸುತ್ತಾಡಿದ ಜಯನಗರದಲ್ಲೇ ಸಿಗುವುದೆಂದು ತೀರ್ಮಾನಿಸಿ ಕಾಂಪ್ಲೆಕ್ಸ್‍ನ ಮುಂಭಾಗದಲ್ಲಿ ನಾವಿಬ್ಬರು ಸೇರಿದೆವು. ವರ್ಷಗಳ ನಂತರ ನೋಡಿದ ನಾವು ಯಾವುದರ ಪರಿವೆಯೂ ಇಲ್ಲದೆಯೇ ಒಬ್ಬರೊನೊಬ್ಬರು ತಬ್ಬಿಕೊಂಡೆವು. ಹಾಗೆಯೇ ನಡೆದು ಕೊಂಡು ಹೋಗುತ್ತಾ ಕೇಳಿದೆ “ಹೇಗಿದ್ದೀಯಾ ? ಈಗ ಎಲ್ಲಿದ್ದೀಯಾ? ಅವನು ಇನ್ನೇನು ಉತ್ತರಿಸಬೇಕು, ನನ್ನ ಸ್ನೇಹಿತನ ಜೇಬಿನಲ್ಲಿನ ಮೊಬೈಲ್ ಕರೆಯುತ್ತಿತ್ತು. ಅದು ಅವನ ಪತ್ನಿಯ ಕರೆ “ಹೋ.. ಈಗತಾನೇ ಬಂದೆ, ಗೆಳೆಯ ಸಿಕ್ಕಿದ್ದಾನೆ. ಬಹಳ ಖುಷಿಯಾಗಿದೆ” ಅಂದ. ಹಾಗೆಯೇ ಮಾತಾಡುತ್ತಾ , ಅಲ್ಲೇ ಇದ್ದ ಹೋಟೆಲ್ ಗೆ ನುಗ್ಗಿದೆವು. “ಏನು ಬೇಕೋ ಆರ್ಡರ್ ಮಾಡು”ಎಂದು ಅಪ್ಪಣೆ ಕೊಟ್ಟ. ಇಷ್ಟು ವರ್ಷದಲ್ಲಿ ಏನಾಯಿತು ಎಂದು ತಿಳಿದುಕೊಳ್ಳುವ ಆಸಕ್ತಿಯಿಂದ ಮತ್ತೆ ಮಾತು ಮುಂದುವರಿಸಿದೆ. ಅಷ್ಟರಲ್ಲಿ ಮತ್ತೆ ಆತನ ಫೋನ್ ರಿಂಗಣಿಸಿತು. ಈ ಸಲ ಗೆಳೆಯ ಬಹಳ ಖುಷಿಯಿಂದ “ಹಲೋ ನೀನಾ! ಗಿರಿನೂ ಇಲ್ಲಿದ್ದಾನೆ ! ಯಾವಾಗ ಸಿಗುತ್ತಿಯೋ? ನಾವಿಬ್ಬರು ಇಲ್ಲಿ ಎಂಜಾಯ್ ಮಾಡುತ್ತಿದ್ದೀವಿ.” ನನ್ನ ಮುಖದಲ್ಲಿನ ಪ್ರಶ್ನಾರ್ಥಕ ಚಿಹ್ನೆ ಆತನಿಗೆ ಕಾಣಿಸಲ್ಲಿಲ್ಲ. ಆಮೇಲೆ ಏನೋ ಜ್ಞಾಪಿಸಿಕೊಂಡವನಂತೆ ಇ ಮೇಲ್ ಮಾಡಲು ತೊಡಗಿದ. ಮತ್ತೆ ತನ್ನ ಮೊಬೈಲ್ ಪರದೆ ಮೇಲೆ ಬೆರಳಾಡಿಸುತ್ತಾ ತನ್ನ ಪತ್ನಿಯ, ಮಕ್ಕಳ ಪೋಟೋ ತೋರಿಸಿ ಅವರ ಬಗ್ಗೆ ಹೇಳುತ್ತಾ ಹೋದ. ಮತ್ತೆ ಅವನ ಫೋನ್ ರಿಂಗಣ. ಈ ಸಲವಂತೂ ನನ್ನನ್ನು ಅಲ್ಲೇ ಕೂಡಿಸಿ ಪಕ್ಕಕ್ಕೆ ಹೋಗಿ ಮಾತನಾಡಲು ಆರಂಭಿಸಿದ. ಹೀಗೆಯೇ ತುಂಬ ಹೊತ್ತು ಕಳೆದು ಬಂದ. ಊಟವಾಯಿತು. ಒಂದು ಕೈಯಲ್ಲಿ ಪೋನ್ ಹಿಡಿದೇ ತಾನೇ ಬಿಲ್ಲು ಕೊಡುವುದಾಗಿ ಹೇಳಿದ. ಮತ್ತೆ ಕೃಪೆ ತೋರಿ ಬಿಡುವುಮಾಡಿಕೊಂಡು”ತುಂಬಾ ಖುಷಿಯಾಯಿತು ಇನ್ನೊಮ್ಮೆ ಸಿಗೋಣ ಎಂದ”.

ನಾನು ಮನೆಯ ಕಡೆ ಡ್ರೈವ್ ಮಾಡಲು ಶುರುಮಾಡಿದೆ. ಫೋನಿನಲ್ಲಿ ಒಂದು ಘಂಟೆಗೂ ಹೆಚ್ಚು ಮಾತನಾಡುವ, ಎಲ್ಲಾ ವಿಚಾರಿಸುವ ನಾವು ಎದುರುಗಡೆ ಬಂದಾಗ ಏನೂ ಮಾತನಾಡದೇ ಫೋನಿನಲ್ಲಿ ಮತ್ತೊಬ್ಬರ ಜೊತೆ ಹರಟುವುದು ಎಷ್ಷು ಸರಿ? ನಾವು ಟಚ್ ಸ್ಕ್ರೀನ್ ಬಳಸಿ ಬರೀ ಪರದೆ ಮೇಲೆ ಬೆರಳಾಡಿಸುತ್ತಿದ್ದೇವೆಯೇ ಹೊರತು, ಹೃದಯವನ್ನು ತಟ್ಟಿ , ಮನಸ್ಸನ್ನು ಮುಟ್ಟುವುದನ್ನು ಮರೆತ್ತಿದ್ದೇವೆ. ಹೀಗೇ… ಏನೇನೋ ಅನ್ನಿಸತೊಡಗಿತು.

ಮನೆಗೆ ಬಂದರೆ ಎಂದಿನಂತೆ ಮಗಳ ಭವ್ಯ ಸ್ವಾಗತ. ತಂದೆ ಎಲ್ಲೇ ಜೀರೋ ಆದರೂ ತನ್ನ ಮಕ್ಕಳ ಮುಂದೇ ಯಾವತ್ತೂ ಹೀರೋನೆ! ನನ್ನ ಪತ್ನಿಯ ಮುಖದಲ್ಲಿ ಸಂತೋಷ ತೇಲಾಡುತ್ತಿತ್ತು.”ಈ ದಿನ ಬಹಳ ಖುಷಿಯಾದ ವಿಚಾರ ಇದೆ” ಎಂದಳು. “ಇವತ್ತು ನಿಮ್ಮ ಮಗಳು ಟಚ್ ಸ್ಕ್ರೀನ್ ಆಪರೇಟ್ ಮಾಡಲು ಕಲಿತಳು, ಗೊತ್ತಾ!” ಹೌದಾ! ಎಂದೆ ಹೆಮ್ಮೆಯಿಂದ!

ಸುದರ್ಶನ್.ವಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x