ಯಾವುದೇ ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳೆಂದರೆ ಒಂದು ನೈಸರ್ಗಿಕ ಸಂಪನ್ಮೂಲ ಇನ್ನೊಂದು ಮಾನವ ಸಂಪನ್ಮೂಲ. ಯಾವ ದೇಶದಲ್ಲಿ ವಿಪುಲವಾಗಿ ನೈಸರ್ಗಿಕ ಸಂಪನ್ಮೂಲವಿದೆಯೋ ಆ ದೇಶವು ಅಭಿವೃದ್ಧಿಶೀಲ ದೇಶವೆಂದು ಹೇಳಲು ಸಾಧ್ಯವಿಲ್ಲ, ಆ ನೈಸರ್ಗಿಕ ಸಂಪನ್ಮೂಲವನ್ನು ಅಲ್ಲಿನ ಮಾನವ ಸಂಪನ್ಮೂಲವು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆಯೋ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಹಾಗಾಗಿ ನೈಸರ್ಗಿಕ ಸಂಪನ್ಮೂಲವನ್ನು ಮಿತವ್ಯಯವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಾನವ ಸಂಪನ್ಮೂಲವು ಈ ದೇಶಕ್ಕೆ ಬೇಕಾಗಿದೆ. ಅದು ಅಲ್ಲದೆ ಇಂದು ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ಮಾನವೀಯತೆಯ ನೆಲೆಗಟ್ಟಿನಲ್ಲಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳುವ ಮಾನವ ಸಂಪನ್ಮೂಲ ಬೇಕಾಗಿದೆ. ಇಂತಹ ಮಾನವ ಸಂಪನ್ಮೂಲವನ್ನು ನಿರ್ಮಾಣ ಮಾಡುವ ಜವಾಬ್ದಾರಿಯು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ನೀಡುವ ಶಾಲೆ, ಕುಟುಂಬ ಹಾಗೂ ಸಮುದಾಯದ ಮೇಲಿದೆ. ಜೀವಜಗತ್ತಿನ ಪ್ರತಿಯೊಂದು ಜೀವಿಗೂ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಜವಾಬ್ದಾರಿಯೊಂದಿಗೆ ನೈಸರ್ಗಿಕ ಸಂಪನ್ಮೂಲವನ್ನು ಉಳಿಸಿಕೊಳ್ಳುವುದರೊಂದಿಗೆ ಅದನ್ನು ಸಂರಕ್ಷಿಸುವದರ ಬಗ್ಗೆ ಅರಿವು ಮೂಡಿಸಬೇಕಾಗಿದೆ.
ಏಕೆಂದರೆ ಇಂದು ಜೀವಜಗತ್ತಿನಲ್ಲಿ ಶ್ರೇಷ್ಠನಾದ ಮಾನವನ ಸ್ವಾರ್ಥತೆಯು ಹೆಚ್ಚಾಗಿದೆ. ವಿಫುಲ ಸಂಪನ್ಮೂಲಗಳಿಂದ ತುಂಬಿದ್ದ ವಸುಂಧರೆಯನ್ನು “ಹೇ ವಸುಂಧರೆ ನೀನೆಷ್ಟು ಸುಂದರೆ” ಎಂದು ಹಾಡಿ ಹೊಗಳಿದವರು, ಇಂದು ಅದೇ ವಸುಂಧರೆಯನ್ನು ನೋಡಿ “ಹೇ ವಸುಂಧರೆ ನೀನೆನಾ ಆ ಸುಂದರೆ” ? ಎಂದು ಹೇಳುವಷ್ಟರ ಮಟ್ಟಿಗೆ ಭೂಮಿಯ ಒಡಲನ್ನು ಬಗೆದು ಭೂತಾಯಿಗೆ ದ್ರೋಹ ಬಗೆಯುತ್ತಿದ್ದಾನೆ. ತಾನು ನೆಮ್ಮದಿಯಿಂದ ಬದುಕದೆ, ಇತರರಿಗೂ ನೆಮ್ಮದಿಯನ್ನು ನೀಡದೆ ಮಾನವನಾಗಬೇಕಾದವನು ದಾನವನಾಗಿ ಜೀವ ಜಗತ್ತಿಗೆ ಸಂಚಕಾರ ತಂದಿದ್ದಾನೆ. ಮಾನವ ಪದದ ಅರ್ಥ ಬಹಳ ಶ್ರೇಷ್ಠವಾದುದು. ‘ಮಾ’ ಎಂದರೆ ಸೌಜನ್ಯಯುತವಾಗಿ ಮಾತನಾಡುವುದು, ‘ನ’ ಎಂದರೆ ‘ತುಸು ನಗುತ ಬಂದೇವ ತುಸು ನಗುತ ಬಾಳೋಣ’ ಎಂಬಂತೆ ನಗುವುದು, ‘ವ’ ಎಂದರೆ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬಂತೆ ಹಿರಿಯರು ಕಿರಿಯರೆಲ್ಲರನ್ನು ಗೌರವದಿಂದ ನಡೆದುಕೊಂಡು ವಂದಿಸುವುದು. ಈ ಗುಣ ಸ್ವಭಾವ ಮಾನವನಿಗಲ್ಲದೆ ಮತ್ತಾವ ಜೀವಿಗಳಿಗೆ ಇದೆ ಹೇಳಿ. ಆದರೆ ಇಂದಿನ ಆಧುನಿಕ ‘ಮಾನವ’ ಪದವು ಅರ್ಥ ಕಳೆದುಕೊಂಡಿದೆ, ‘ಮಾ’ ಎಂದರೆ ಮಾನವೀಯತೆ ಹೀನನಾದವನು, ‘ನ’ ಎಂದರೆ ನಗುವುದರ ಬದಲು ನರಕ ಸೃಷ್ಟಿಸುವವನು, ‘ವ’ ಎಂದರೆ ವಂದಿಸುವ ಬದಲು ವಧಿಸುವವನಾಗಿದ್ದಾನೆ. ಈ ರೀತಿಯ ಮಾನವನ ವರ್ತನೆಯಲ್ಲಾದ ಬದಲಾವಣೆಯನ್ನು ಕಂಡ ಡಿವ್ಹಿಜಿಯವರ ಕಗ್ಗದ ಸಾಲುಗಳನ್ನು ನೆನಪಿಸಿಕೊಳ್ಳುವುದಾದರೆ.
ಮಾನವರೋ ದಾನವರೋ ಭೂಮಾತೆಯನು ತಣಿಸೆ |
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ ? ||
ಏನು ಹಗೆ ! ಏನು ದಗೆ ! ಏನು ಹೊಗೆ ! ಯೀ ಧರಣಿ ! |
ಸೌನಿಕನ ಕಟ್ಟೆಯೇಂ – ಮಂಕುತಿಮ್ಮ ||
ಜೀವಜಂತುಗಳಲ್ಲಿಯೇ ಶ್ರೇಷ್ಠ ಹಾಗೂ ಬುದ್ಧಿವಂತನೆಂದು ಗುರುತಿಸಲ್ಪಟ್ಟ ಮಾನವನು ತನ್ನ ಅಸಹ್ಯ ವ್ಯಕ್ತಿತ್ವದ ಮೂಲಕ ಮನುಷ್ಯತ್ವ ಬದಲಾಗಿ ರಾಕ್ಷಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು, ಈ ಭೂಮಾತೆಯನ್ನು ತೃಪ್ತಿಪಡಿಸಲು, ಕಣ್ಣೀರು ಸುರಿಸುವ ಬದಲಾಗಿ, ರಕ್ತವನ್ನು ಸುರಿಸುತ್ತಿದ್ದಾನೆ. ಈ ಪ್ರಪಂಚದಲ್ಲಿರುವ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇದು ಕಟುಕನ ಜಗಲಿಯಂತೆ ಕಾಣುತ್ತದೆ. ದಯಾಗುಣದ ದಾರಿಹಿಡಿದು ಅಪರಾಧ ಕೃತ್ಯಗಳನ್ನು ತಗ್ಗಿಸಬೇಕಾದ ಶುಶಿಕ್ಷಿತರೆನಿಸಿಕೊಂಡವರೆ ಅತಿ ಹೆಚ್ಚು ಅಪರಾಧ ಕೃತ್ಯವನ್ನೆಸಗುತ್ತಿದ್ದಾರೆ. ಕೊಲೆ, ಸುಲಿಗೆ, ಅನ್ಯಾಯ, ಅತ್ಯಾಚಾರ, ಅನೀತಿ, ಭ್ರಷ್ಟಾಚಾರ, ಭಯೋತ್ಪಾದನೆಗಳಂತಹ ಕೃತ್ಯಗಳು ನಿರಂತರ ನಡೆಯುತ್ತಿರುವುದು ತುಂಬಾ ಖೇದಕರ ಎನಿಸುತ್ತದೆ. ಅವಿದ್ಯಾವಂತರಿಗಿಂತ ವಿದ್ಯಾವಂತರ ಪಾತ್ರವೇ ಇದರಲ್ಲಿ ಹೆಚ್ಚಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಅಂತೆಯೇ ಸಂಸ್ಕøತದಲ್ಲಿ ಹೇಳುವಂತೆ ಇಂದಿನ ವಿದ್ಯಾವಂತರು ಹೇಗಿದ್ದಾರೆ ಎಂದರೆ “ಸಾಕ್ಷರೋ ವಿಪರಿತೇಶ್ಚ ರಾಕ್ಷಸೋ ಭವೆಯಂ” ಎನ್ನುವಂತೆ ಸಾಕ್ಷರಾ ಅನ್ನುವ ಪದವನ್ನು ವಿಲೋಮ ಮಾಡಿ ಓದಿ ನೋಡಿ, ಏನಾಯಿತು ? ಅದು ರಾಕ್ಷಸಾ ಎಂದಾಗುತ್ತದಲ್ಲವೆ.
ಹೀಗಾಗಿ ವಿದ್ಯಾವಂತರೆ ಇಂದು ರಾಕ್ಷಸೀಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಹೀನ ಕೃತ್ಯಗಳನ್ನು ಮಾಡುತ್ತ ಅಮಾಯಕ ಜೀವಿಗಳ ದೃಷ್ಟಿಯಲ್ಲಿ ಕಟುಕರಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ದಯೆ, ಪ್ರೀತಿ, ಕರುಣೆ, ಶಾಂತಿ, ಸಹನೆ, ವಿನಯ, ಪ್ರಾಮಾಣಿಕತೆ, ಮಾನವೀಯತೆಯಂತಹ ಮೌಲ್ಯಗಳು ಕುಸಿದು ಹೋಗಿವೆ. ಇವುಗಳ ಬದಲಾಗಿ ಎಲ್ಲೆಲ್ಲೂ ಅಶಾಂತಿಯ ವಾತಾವರಣ ನಿರ್ಮಿಸಿದ್ದಾರೆ. ದ್ವೇಷ ದಳ್ಳುರಿಯಲ್ಲಿ ಬೆಂದು ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಿದ್ಧಯ್ಯ ಪುರಾಣಿಕರು ಹೇಳುವಂತೆ ಇಂದಿನ ಆಧುನಿಕ ಜಗತ್ತು ತುಂಬಾ ಬದಲಾವಣೆಯನ್ನು ಕಂಡಿದೆ ನಿಜ, ಆದರೆ ಅದು ನಮ್ಮಲ್ಲಿ ಎಂತಹ ಬದಲಾವಣೆ ತಂದಿದೆಯೆಂದರೆ, ವಿದ್ಯೆ ಬಂತು ವಿನಯ ಹೋಯಿತು, ಬುದ್ಧಿ ಬಂತು ಶ್ರದ್ಧೆ ಹೋಯಿತು, ಸಮೃದ್ಧಿ ಬಂತು ಸಂಸ್ಕøತಿ ಹೋಯಿತು, ವಿಜ್ಞಾನ ಬಂತು ಸಮಾಧಾನ ಹೋಯಿತು, ದೀರ್ಘಾಯುಷ್ಯ ಬಂತು ಜೀವನ ಸ್ವಾರಸ್ಯ ಹೋಯಿತು, ಬೋಧನೆ ಬಂತು ಸಾಧನೆ ಹೋಯಿತು, ಮಾತು ಬಂತು ಕೃತಿ ಹೋಯಿತು, ಜಾತಿ ಬಂತು ಪ್ರೀತಿ ಹೋಯಿತು,ಸ್ವಾತಂತ್ರ್ಯ ಬಂತು ಸೌಜನ್ಯ ಹೋಯಿತು ಎಂದು ಹೇಳುವ ಅವರ ಧ್ವನಿಯಲ್ಲಿನ ನೋವು ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಆಧುನಿಕತೆಯ ಸೋಗಿನಲ್ಲಿ ಬದಲಾವಣೆಯ ಗಾಳಿ ಬೀಸಿದರೂ ಸಹ ಹಳೆಯ ನೀರು ಹೋಗಿ ಹೊಸ ನೀರು ಬಂದಂತೆ ಒಂದು ಸಿಕ್ಕಿದೆಯೆಂದರೆ ಮತ್ತೊಂದನ್ನು ಕಳೆದುಕೊಂಡು ಧಾವಂತದ ಬದುಕು ಸಾಗಿಸುತ್ತಿದ್ದೇವೆ. ಇಂತಹ ಬದುಕು ಕೊನೆಯಾಗಿ ಭಾವೈಕ್ಯತಾ ಬದುಕು ನಮ್ಮದಾಗ ಬೇಕಾದರೆ ? ಭೂಮಾತೆಯನ್ನು ಸಂರಕ್ಷಿಸಬೇಕಾದರೆ ? ಮಾನವೀಯ ಮೌಲ್ಯಗಳ ಪುನರ್ಜನ್ಮವಾಗಬೇಕಾದರೆ ? ನಾವೇನು ಮಾಡಲು ಸಾಧ್ಯ ? ಎಂದು ಕೈಕಟ್ಟಿ ಕುಳಿತುಕೊಂಡರೆ ಬದಲಾವಣೆ ಸಾಧ್ಯವಿಲ್ಲ. ಇದಕ್ಕೆಲ್ಲ ಕಾರಣಗಳನ್ನು ಕಂಡುಕೊಳ್ಳಬೇಕು.
ನಮ್ಮ ಮಕ್ಕಳಿಗೆ ಇಂದು ಯಾವ ರೀತಿಯ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂಬುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಭವ್ಯ ಭಾರತದ ಭವಿಷ್ಯದ ರೂವಾರಿಗಳಾದ ನಮ್ಮ ಮಕ್ಕಳಿಗೆ ಕೇವಲ ಪುಸ್ತಕ ಜ್ಞಾನ ಪಡೆದು ನೂರಕ್ಕೆ ನೂರು ಅಂಕ ಸಂಪಾದಿಸಿ, ದೊಡ್ಡ ದೊಡ್ಡ ಉದ್ಯೋಗ ಪಡೆದುಕೊಳ್ಳುವ ಶಿಕ್ಷಣದ ಬೆನ್ನು ಹತ್ತಿದ್ದೇವೆ. ಶಿಕ್ಷಣಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡಿ ಅದನ್ನು ಬಡ್ಡಿ ಸಮೇತ ಪಡೆಯುವುದು ಹೇಗೆಂದು ಯೋಚಿಸುತ್ತಿದ್ದೇವೆ ವಿನಃ, ನಮ್ಮ ಮಕ್ಕಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರೋಪಕಾರದಿ ಬದುಕುವ ಕಲೆಯನ್ನು ಕಲಿಯುತ್ತಿದ್ದಾರೆಯೇ?.ಎಂದು ಯೋಚಿಸುವುದಿಲ್ಲ. ಅದು ನಮಗೆ ಬೇಕಾಗಿಲ್ಲ ಅಲ್ಲವೆ ?. ಅನ್ಯಾಯ ಮಾರ್ಗದಿ ನಮ್ಮ ಬದುಕಿನ ಬಂಡಿಯನ್ನು ಎಳೆಯುತ್ತಿದ್ದೇವೆ ಎಂಬುದು ನಮಗೆ ಅರಿವಾಗುವುದರಲ್ಲಿ ಈ ಜಗತ್ತು ವಿನಾಶದ ಅಂಚಿಗೆ ಬಂದು ಬಿಡುತ್ತದೆ. ತಮ್ಮ ಮಕ್ಕಳನ್ನು ಏನನ್ನಾದರೂ ಮಾಡಿ, ಆದರೆ ಮೊದಲು ಮಾನವರನ್ನಾಗಿ ಮಾಡಿ, ಮಾನವ ಮಾನವನಾಗಿ ಬದುಕಲು ಅಗತ್ಯವಾದ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಿ. ಈ ದೇಶದ ಭವಿಷ್ಯವು ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ ಎಂಬುದನ್ನು ಅರಿತಿರುವ ನಾವು ನಮ್ಮ ಮಕ್ಕಳಿಗೆ ಪುಸ್ತಕದ ಜ್ಞಾನದೊಂದಿಗೆ ವಾಸ್ತವಿಕ ಜ್ಞಾನವನ್ನು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಬೇಕಾಗಿದೆ. ಕೇವಲ ಅಂಕಗಳೇ ಜೀವನದ ಭವಿಷ್ಯವನ್ನು ರೂಪಿಸುತ್ತವೆ ಎಂಬ ಭ್ರಮೆಯ ಪರದೆಯನ್ನು ಕಳಚಿ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಬೇಕು. ಮಕ್ಕಳನ್ನು ರೋಬೋಟ್ ಯಂತ್ರದಂತೆ ಮಾಡದೆ ಅವರನ್ನು ದೈಹಿಕವಾಗಿ, ಭೌದ್ಧಿಕವಾಗಿ ಮಾನಸಿಕವಾಗಿ, ಭಾವನಾತ್ಮಕವಾಗಿ, ಹಾಗೂ ಸಾಮಾಜಿಕವಾಗಿ ಬಲಾಢ್ಯರನ್ನಾಗಿ ಮಾಡಲು ಬೇಕಾದ ಪೂರಕ ಶಿಕ್ಷಣವು ಕುಟುಂಬ, ಶಾಲೆ ಮತ್ತು ಪರಿಸರದಿಂದ ದೊರೆಯಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರಯುತ ಶಿಕ್ಷಣವನ್ನು ಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಾಲಕ, ಪಾಲಕ, ಶಿಕ್ಷಕ ಮತ್ತು ಸಮುದಾಯವು ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸುವ ಶಿಕ್ಷಕರ ಕರೆಗೆ ಕಿವಿಯಾಗಿ, ಮಕ್ಕಳ ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ಸಂಸ್ಕಾರವನ್ನು ಮಕ್ಕಳಿಗೆ ಹೇಳುವ ಮೊದಲು ನಾವೆಲ್ಲರೂ ಸಂಸ್ಕಾರಯುತ ಬದುಕಿನಲಿ ಸಾಗುತ್ತ ಸಂಸ್ಕಾರದ ಜ್ಞಾನವನ್ನು ಸಂಸಾರದ ಪ್ರಾಣವೆಂದು ಅರಿಯೋಣ.
“ವಿದ್ಯಾ ದದಾತಿ ವಿನಯಂ,
ವಿನಯಾದ್ಯಾತಿ ಪಾತ್ರತಾಂ
ಪಾತ್ರತ್ವಾತ್ ಧನಮಾಪ್ನೋತಿ
ಧನಾತ್ ಧರ್ಮಂ ತತಃ ಸುಖಂ||
ಎಂಬಂತೆ ವಿದ್ಯೆಯೊಂದಿಗೆ ವಿನಯವು ಎಳೆಯ ಮಕ್ಕಳಲಿ ಎಳೆ ಎಳೆಯಾಗಿ ಬಂದು ಸಂಸ್ಕಾರಯುತ ಅರಿವು ಮೊಳೆತು ಬೆಳೆಯುವುದನು ನೋಡಿ ಸಂತೋಷ ಪಡೋಣ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ.
-ರವಿ ರಾ ಕಂಗಳ