”ಸಂಬಂಧಗಳು ನಮಗೆಷ್ಟು ಮುಖ್ಯ?”: ಪೂಜ ಗುಜಾರನ್‌

ಸಂಬಂಧಗಳು ನಮಗೆಷ್ಟು ಮುಖ್ಯ? ಯಾವ ಸಂಬಂಧಗಳು ನಮ್ಮನ್ನು ತುಂಬಾ ಭಾವನಾತ್ಮಕವಾಗಿ ಕಾಡುತ್ತದೆ.? ಯಾವ ಸಂಬಂಧಗಳನ್ನು ನಾವು ಯಾವತ್ತು ಬಿಟ್ಟು ಹೋಗುವುದಿಲ್ಲ.?ಯಾರು ನಮ್ಮನ್ನು ಅತಿಯಾಗಿ ಕಾಡುತ್ತಾರೆ.? ಇಲ್ಲಿ ಸಂಬಂಧಗಳನ್ನು ಬೆಳೆಸಲು ಯಾವ ಮಾನದಂಡಗಳ ಅಗತ್ಯವಿದೆ.?
ಪ್ರಶ್ನೆಗಳು ಮುಗಿಯಲಾರದಷ್ಟಿವೆ.. ಉತ್ತರಗಳನ್ನು ನಾವು ಹುಡುಕಬೇಕಷ್ಟೆ..

ನಮ್ಮ ಬದುಕಿನಲ್ಲಿ ಬರುವ ಸಂಬಂಧಗಳು ಅರಿತೋ ಅರಿಯದೆನೋ ನಮ್ಮನ್ನು ಗಾಢವಾಗಿ ತನ್ನ ಬಾಹುಗಳಲ್ಲಿ ಬಂಧಿಸಿರುತ್ತದೆ. ಮಾನವ ಸಂಬಂಧಗಳೆ ಹೀಗೆ ಹುಟ್ಟಿದ ಕೂಡಲೇ ಸಂಬಂಧಗಳ ಸಂಕೋಲೆಯೊಳಗೆ ಬಂಧಿಯಾಗಿರುತ್ತಾನೆ. ತನ್ನ ತಾಯಿ ಜೊತೆ ಶುರುವಾದ ಈ ಸಂಬಂಧ ಇನ್ನಷ್ಟು ಬೆಳೆಯುತ್ತ ಉದ್ದವಾಗುತ್ತ ಹೋಗುತ್ತದೆ.ಅಪ್ಪ ಅಜ್ಜ ಅಜ್ಜಿ ತಮ್ಮ ತಂಗಿ ಹೀಗೆ ಜೀವನದ ಹಲವಾರು ತಿರುವುಗಳಲ್ಲಿ ಬಿಟ್ಟು ಬಿಡದಂತೆ ಕಾಡುವ ಕಾಡಿಸುವ ಸಂಬಂಧದೊಳಗೆ ನಮ್ಮನ್ನು ನಾವು ಬಂಧಿಸುತ್ತ ಸಾಗುತ್ತೇವೆ.. ಹಾಗಂತ ಎಲ್ಲ ಸಂಬಂಧಗಳು ಕೊನೆವರೆಗೂ ಜೊತೆಯಿರುತ್ತದಾ? ಖಂಡಿತ ಇಲ್ಲ..

ಹುಟ್ಟಿದಾಗ ಜೊತೆಯಾದ ಮನೆಯೊಳಗಿನ ಸಂಬಂಧವೂ ನಾವು ಬೆಳೆದಂತೆ ದೊಡ್ಡದಾಗುತ್ತ ಹೋಗುತ್ತದೆ. ಗೆಳೆಯರು ಬಂಧುಗಳು,ಹಿತೈಷಿಗಳು, ಅನ್ನುವ ಭಾವನಾತ್ಮಕ ಸಂಬಂಧವೂ ಒಂದು ಕಡೆ ಹುಟ್ಟುತ್ತದೆ. ಮನುಷ್ಯ ಬರಿ ಸ್ನೇಹಜೀವಿ ಆಗಿದ್ದರೆ ಸ್ನೇಹಗಳಷ್ಟೆ ಇರಬಹುದು. ಆದರೆ ನಾವು ಹುಟ್ಟುವಾಗಲೇ ಆರಿಷಡ್ವವರ್ಗಗಳನ್ನು ಹೊತ್ತುಕೊಂಡು ಬಂದಿರುತ್ತೇವೆ. ಹಾಗಂತ ಈ ಗುಣಗಳು ಬದುಕಿನ ಶತೃಗಳ? ಖಂಡಿತ ಅಲ್ಲ..ಇದನ್ನೆಲ್ಲ ಆಯಾ ಸಂದರ್ಭಗಳಲ್ಲಿ ಮಾತ್ರ ಕ್ರಿಯಾಶೀಲವಾಗಿ ಬಳಸಬೇಕಾಗುತ್ತದೆ. ಆದರೆ ನಾವು ಕೋಪದ ಕೈಗೆ ಬುದ್ಧಿಯನ್ನು ಕೊಡುವುದೇ ಹೆಚ್ಚು. ಕೋಪ ಅಸೂಯೆಗಳು ನಮ್ಮ ಜೊತೆಯೇ ಬಂದಾಗ ಶತ್ರುಗಳು ಕೂಡ ಹುಟ್ಟುತ್ತಾರೆ. ಆಗ ಮನುಷ್ಯ ಬರಿ ಸ್ನೇಹಜೀವಿಯಾಗಿ ಬದುಕಿನ ಉದ್ದಕ್ಕೂ ಬೆಳೆಯಾಲಾರ. ನಮ್ಮ ಗುಣ ಅವಗುಣಗಳ ಜೊತೆ ನಾನಾ ರೀತಿಯ ಸಂಬಂಧಗಳು ನಮ್ಮನ್ನು ಬೆಳೆಸುತ್ತದೆ. ಸುತ್ತಮುತ್ತ ಹಲವಾರು ವ್ಯಕ್ತಿಗಳ ಜೊತೆ ನಾವು ಬದುಕಲು ಕಲಿಯುತ್ತೇವೆ.

ಜೀವನ ನಾವು ಅಂದುಕೊಂಡಂತೆ ಇದ್ದರೆ ಎಷ್ಟು ಚೆಂದ ಅನಿಸುತ್ತದೆ. ಬದುಕನ್ನು ನಮಗೆ ಬೇಕಾದಾಗೇ ಬೇಕಾದವರ ಜೊತೆ ಖುಲ್ಲಂ ಖುಲ್ಲ ಬದುಕಿಬಿಡಬಹುದು ಅಂದುಕೊಳ್ಳುತ್ತೇವೆ. ಆದರೆ ಇದೆಲ್ಲ ಬರಿ ಕಲ್ಪನೆಗಳಷ್ಟೆ. ಒಂದು ಎರಡು ದಿನಾ ನಮಗೆ ಬೇಕಾದಾಗೇ ಒಬ್ಬರ ಜೊತೆ ಇರಬಹುದೇ ಹೊರತು ಜೀವನ ಪೂರ್ತಿ ಅದು ಸಾಧ್ಯವಿಲ್ಲ. ಮನುಷ್ಯ ನಾನ ಗುಣಗಳುಲ್ಲವನು. ಒಂದೇ ತರ ಎಲ್ಲರೂ ಇರಲಾರರು. ಇಲ್ಲಿ ಹೊಂದಾಣಿಕೆಯ ಜೊತೆ ನಾವು ಬದುಕ ಕಟ್ಟಿಕೊಳ್ಳುತ್ತೇವೆ. ಯಾವಾಗ ನಮ್ಮೊಳಗಿನ ಅಹಂ ಜಾಗೃತವಾಗುತ್ತದೋ ಅಲ್ಲಿ ಸಂಬಂಧಗಳಲ್ಲಿ ಬಿರುಕು ಕಾಣಲು ಶುರುವಾಗುತ್ತದೆ.

ಇಲ್ಲಿ ಸಂಬಂಧಗಳಲ್ಲಿ ಪವಿತ್ರತೆ ಹುಡುಕುವುದು ಎಷ್ಟು ಸಮಂಜಸ ಅನಿಸಿಬಿಡುತ್ತದೆ. ಈ ಸಮಾಜವೆಂಬ ಕ್ರೂರ ಮುಖದ ಹೊಟ್ಟೆಯಲ್ಲಿ ಮನುಷ್ಯ ಹುಟ್ಟಿದರೂ ಜಾತಿಯೆಂಬ ಸುಳಿಯೊಳಗೆ ತನ್ನನ್ನು ತಾನು ಸುತ್ತಿಸುತ್ತ ಎಲ್ಲರನ್ನೂ ಜಾತಿ ಬಲೆಯೊಳಗೆ ಕೆಡವುತ್ತಾ ಸಾಗುತ್ತಾನೆ. ಈ ಜಾತಿಯೆಂಬ ಎರಡಕ್ಷರದ ಎಳೆಯಲ್ಲಿ ಎಲ್ಲರನ್ನೂ ಕಟ್ಟಿ ಹಾಕಲು ಪ್ರಯತ್ನಿಸುತ್ತಾನೆ. ಜಾತಿಯೆಂಬ ಕತ್ತಿಯ ಅಲುಗಿನಲ್ಲಿ ಸಿಕ್ಕವರೆಷ್ಟು ಜನರೋ.?ಈ ಕ್ರೂರ ಸಮಾಜ ಸೃಷ್ಟಿಸಿದ ಜಾತಿಯಲ್ಲಿ ಅದೆಷ್ಟೋ ಸಂಬಂಧಗಳು ಸೂತ್ರ ಕಡಿದ ಗಾಳಿಪಟದಂತೆ ಅರ್ಥ ಕಳೆದುಕೊಂಡು ಹರಿದು ಛಿಧ್ರವಾಗಿ ಹೋಗಿವೆ.

ಒಂದು ಒಳ್ಳೆಯ ಸಂಬಂಧಗಳು ಸತ್ತು ಹೋದ ಉದಾಹರಣೆಗಳು ತುಂಬಾ ಇದೆ. ಇವತ್ತಿನ ಪರಿಸ್ಥಿತಿಯಲ್ಲಿ ಇಬ್ಬರು ದುಡಿಯುವಾಗ ಒಬ್ಬರಿಗೊಬ್ಬರ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಸಮಯವಿರುವುದಿಲ್ಲ. ಈ ಸಮಯಾವಕಾಶದ ಕೊರತೆಯಲ್ಲಿ ಮನಸ್ಸು ಇನ್ನಷ್ಟು ಕುಸಿಯುತ್ತಿರುತ್ತದೆ. ಸಿಗುವ ಸ್ವಲ್ಪ ಸಮಯದಲ್ಲಿ ಮನಸ್ಸು ನಿರಾಳತೆಯನ್ನು ಬಯಸುತ್ತದೆ. ಈ ನಿರಾಳತೆ ಸಿಕ್ಕಿದಾಗ ಒಂಟಿತನದ ವೇದನೆ ಕಾಡುತ್ತದೆ. ಹೌದು ನನ್ನ ಸಂಗಾತಿ ನನ್ನನ್ನು ವಿಚಾರಿಸುತ್ತಿಲ್ಲ ನನ್ನ ಬಗ್ಗೆ ವಿಚಾರಿಸುವಷ್ಟು ಸಮಯವಾಗಲಿ ಮನಸ್ಸಾಗಲಿ ಇವರಿಗಿಲ್ಲ ಅನಿಸಲು ಶುರುವಾಗುತ್ತದೆ.
ಈ ಎಲ್ಲ ಒತ್ತಡಗಳು ಮನಸ್ಸಿನ ಮೇಲೆ ಗಾಢವಾದ ಪ್ರಭಾವನ್ನು ಬೀರುತ್ತದೆ. ಕೋಪ ಅಸಹನೆಗಳು ಹೆಚ್ಚಾದಾಗ ಮಾನಸಿಕ ಸ್ಥಿತಿಗಳು ಬದಲಾಗುತ್ತವೆ.ಆವಾಗಲೇ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.

ಇಲ್ಲಸಲ್ಲದ ಕಾರಣಗಳು ದೊಡ್ಡದಾಗಿ ಕಾಣಲು ಶುರುವಾಗುತ್ತದೆ. ಯಾವಾಗ ಸಂಬಂಧಗಳು ಅಳಿಸುತ್ತವೆಯೋ ಆಗ ನಕಾರಾತ್ಮಕ ಪ್ರತಿಕ್ರಿಯೆಗಳು ಅಧಿಕವಾಗುತ್ತದೆ.. ಇಲ್ಲಿವರೆಗೂ ಇಷ್ಟವಾಗಿದ್ದ ಗುಣಗಳು ಕಷ್ಟವಾಗುತ್ತದೆ. ಸುಂದರವಾದ ಸಂಬಂಧವೊಂದು ಚಿಕ್ಕಪುಟ್ಟ ವಿಷಯಗಳಲ್ಲಿ ಬದುಕಿನ ಸಂಬಂಧವನ್ನೆ ಕಡಿದುಕೊಳ್ಳುತ್ತದೆ.

ಇವತ್ತು ಯಾರಿಗೂ ಕೂತು ಮಾತಾಡಿ ಪರಿಹರಿಸಿಕೊಳ್ಳುವಷ್ಟು ತಾಳ್ಮೆಯಾಗಲಿ ಸಮಯವಾಗಲಿ ಇಲ್ಲ. ತಮ್ಮ ತಮ್ಮ ಮನಸ್ಸಿಗನಿಸಿದ್ದನ್ನು ಮಾಡುತ್ತ ಬದುಕಿನ ಅಮೂಲ್ಯತೆಯನ್ನು ಬರಿದಾಗಿಸುತ್ತಾರೆ.

ಓಶೋ ಹೇಳುತ್ತಾರೆ.. ಹತಾಶೆ ನಿರೀಕ್ಷೆಯ ನೆರಳೇ ಆಗಿದೆ.. ನಿಜ ನಾವು ನಿರೀಕ್ಷೆಗಳನ್ನು ತುಂಬಾ ಮಾಡುತ್ತೇವೆ. ಯಾವಾಗ ನಮ್ಮ ನಿರೀಕ್ಷೆಗಳು ಪೂರೈಸುವುದಿಲ್ಲವೋ ಅಲ್ಲಿ ಸಂಬಂಧಗಳು ಹಳಸಲು ಶುರುವಾಗುತ್ತದೆ. ಒಂದೇ ತರದ ಅಭಿರುಚಿಗಳು ವಿಭಿನ್ನ ದಿಕ್ಕಿನತ್ತ ಸಂಚರಿಸಲು ಶುರುವಾಗುತ್ತದೆ. ತನ್ನ ವಾದವೇ ಸರಿ ಎಂಬ ಅಹಂಕಾರ ಇಬ್ಬರಲ್ಲೂ ಗೋಚರಿಸುತ್ತದೆ. ಇಷ್ಟು ದಿನ ಜೊತೆ ಇದ್ದವರು ಇನ್ನೆಂದೂ ಜೊತೆ ಇರಲಾರೆವೂ ಅನ್ನುವಷ್ಟರ ಮಟ್ಟಿಗೆ ಸಂಬಂಧಗಳ ಮೇಲೆ ಅಪನಂಬಿಕೆ ತಾಂಡವಾಡತ್ತದೆ. ನಿನ್ನನು ಅತಿಯಾಗಿ ನಂಬಿ ಕೆಟ್ಟೆ ಅನ್ನುವ ಹತಾಷೆಯ ಮಾತುಗಳು ಮೇಲೈಸುತ್ತವೆ.

ಜೀವನವೆಂಬ ಶಿಖರವನ್ನು ಏರುವಾಗ ನಾವು ನಿರೀಕ್ಷೆಯ ಪ್ರತಿಫಲಗಳನಷ್ಟೆ ಹೊತ್ತುಕೊಂಡು ನಡೆದರೆ ಬದುಕು ಹತಾಶೆಯ ಕೂಪದೊಳಗೆ ಬಿದ್ದು ಮರಣವನ್ನಪ್ಪುತ್ತದೆ. ಬದುಕನ್ನು ಭಿನ್ನವಾಗಿಸಿದಷ್ಟು ರಮ್ಯವಾಗಿಸುವ ಕಲೆಯೂ ನಮಗೆ ತಿಳಿದಿರಬೇಕು.
ಮನುಷ್ಯ ಭಾವಜೀವಿ.. ಒಬ್ಬರಿಂದ ಒಬ್ಬರೊಡನೆ ಭಾವನಾತ್ಮಕವಾದ ಸಂಬಂಧಗಳನ್ನು ಬೆಳೆಸಿಕೊಂಡು ಬದುಕುತ್ತಾನೆ. ಹಾಗೇ ಬದುಕಿದಾಗಲೇ ಈ ಸಂಬಂಧಗಳಿಗೂ ಒಂದು ಬೆಲೆಯಿರುತ್ತದೆ. ಹತಾಶೆ, ನಿರಾಶೆಯ, ಗುಂಗಿನಲ್ಲಿ ಸಾಯುತ್ತಿರುವ ಅದೆಷ್ಟೋ ಸಂಬಂಧಗಳು ಮತ್ತೆ ಮರುಜೀವವನ್ನು ಪಡೆದು ಉಸಿರಾಡುವಂತಾಗಲಿ.

-ಪೂಜ ಗುಜಾರನ್‌


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x