ವಾರಕ್ಕೊಮ್ಮೆ ಆಗೋ ಸಂತೆ ಗೊತ್ತು. ,ಸಂತಾ-ಬಂತಾ ಜೋಕುಗಳಲ್ಲಿಯ ಸಂತಾ ಗೊತ್ತು. ಕ್ರಿಸ್ಮಸ್ಸಿನಲ್ಲಿ ಗಿಫ್ಟ್ ಕೊಡ್ತಾನೆ ಅಂತ ಮಕ್ಕಳು ಕಾಯೋ ಸಂತಾ ಕ್ಲಾಸೂ ಗೊತ್ತು. ಇದೇನಿದು ಸಂತಾ ರನ್ ಅಂದ್ರಾ ? ಮೆಕ್ಸಿಕೋದಲ್ಲಿ ವರ್ಷಕ್ಕೊಮ್ಮೆ ಕ್ರಿಸ್ಮಸ್ ಸಮಯದಲ್ಲಿ ಆಗೋ ಓಟದ ಸ್ಪರ್ಧೆಯೇ "ಸಂತಾ ರನ್". ನಮ್ಮ ಬೆಂಗಳೂರಲ್ಲೂ ತಿಂಗಳಿಗೊಂದರಂತೆ ಓಟಗಳು ನಡೀತಿರತ್ತೆ. ನೈಸ್ ರೋಡ್ ಮ್ಯಾರಥಾನ್, ಟಿಸಿಎಸ್ ೧೦ಕೆ ಓಟಕ್ಕೆ ವಿದೇಶೀ ಅಥ್ಲೀಟುಗಳೂ ಬರುತ್ತಾರೆ ಇದ್ರಲ್ಲೇನು ವಿಶೇಷ ಅಂದ್ರಾ ? ಹೆಸರೇ ಹೇಳುವಂತೆ ಓಟಕ್ಕೆ ಬರೋ ಎಲ್ಲಾ ಸ್ಪರ್ಧಿಗಳೂ ಸಂತಾ ಕ್ಲಾಸನ ಡ್ರೆಸ್ ಹಾಕಿಕೊಂಡು ಓಡಬೇಕಾಗಿರೋದೇ ಇಲ್ಲಿನ ವಿಶೇಷ !
ಬೆಂಗಳೂರಿನ ಟಿಸಿಎಸ್ ೧೦ಕೆ ಸಮಯದಲ್ಲೇ "ಮಜ್ಜಾ ರನ್" ಅಂತೊಂದು ವಿಭಾಗ ಇರುತ್ತೆ. ಅದರಲ್ಲಿ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಹೀಗೆ ಹಲವಿಧದ ಕಾಸ್ಟ್ಯೂಮುಗಳನ್ನು ಹಾಕಿಕೊಂಡು ಓಡುತ್ತಾರೆ. ಚೆಂದದ ಕಾಸ್ಟ್ಯೂಮುಗಳಿಗೆ ಇಲ್ಲಿ ಪ್ರಶಸ್ತಿಗಳನ್ನೂ ಕೊಡಲಾಗುತ್ತೆ. ನೋಡೋಕೆ ಒಂಥರಾ ಮಜಾ ಇರೊ ಇಲ್ಲಿ ಹಲವು ವೈವಿಧ್ಯಗಳನ್ನು ಕಾಣಬಹುದು. ಆದರೆ ಸುಮಾರು ಸಾವಿರ ಜನ ಓಟಕ್ಕಾಗಿ ಸೇರಿರುವಾಗ, ಅವರೆಲ್ಲಾ ಸಂತಾ ಕ್ಲಾಸಿನ ಪ್ಯಾಂಟು, ಶರ್ಟು, ಟೋಪಿ, ಗಡ್ಡ ಧರಿಸಿ ಬಂದರೆ ನೋಡೋಕೆ ಹೇಗಿರುತ್ತೆ ? ರಸ್ತೆಯೆಲ್ಲಾ ಕೆಂಪಿನೋಕುಳಿ, ಕಣ್ಣು ಹಾಯಿಸಿದತ್ತೆಲ್ಲಾ ಕೆಂಪು ಬಟ್ಟೆ, ಟೋಪಿಗಳೇ ಕಾಣುತ್ತಿರುತ್ತೆ ! ಅಂತದ್ದೊಂದು ಐಡಿಯಾದೊಂದಿಗೆ ಶುರುವಾಗಿದ್ದೇ "ಸಂತಾ ರನ್"
ಸಂತಾ ರನ್ ಎಲ್ಲೆಲ್ಲಿ ನಡೆಯುತ್ತೆ ?
ಮೆಕ್ಸಿಕೋದ ಮಾಂಟೆರೆರಿಯಲ್ಲಿ ಇಂದು "ಸಂತಾ ರನ್ ೨೦೧೭, ಮಾಂಟೆರೆರಿ" ನಡೆಯಿತು. ಅದೇ ತರ ಡಿಸೆಂಬರ್ ೨ನೇ ತಾರೀಖು ಅಮೇರಿಕಾದ ಕ್ಯಾಪಿಟಲ್ ಸ್ಕಾರ್ , ಮಾಡಿಸನ್ ಅಲ್ಲಿ ನಡೆದಿತ್ತು.ದೇ ತರ ಸ್ಯಾನ್ ಫ್ರಾಸಿಸ್ಕೋನಲ್ಲಿ ಡಿಸಂಬರ್ ಹತ್ತಕ್ಕೆ, ಬರ್ಮಿಂಗ್ ಹ್ಯಾಮಿನಲ್ಲಿ, ಲಂಡನ್ನಿನಲ್ಲಿ, ಆಸ್ಟ್ರೇಲಿಯಾದಲ್ಲೂ ಡಿಸೆಂಬರಿನ ಬೇರೆ ಬೇರೆ ದಿನಗಳಲ್ಲಿ ಸಂತಾ ರನ್ ನಡೆಯುತ್ತೆ.
ಇಲ್ಲಿ ಕೆಂಪು ಬಟ್ಟೆಯ ಸಂತಾ ಕ್ಲಾಸಾಗಿ ಮಾತ್ರ ಓಡಬಹುದಾ ?
ಹಾಗೇನಿಲ್ಲ. ಮಾಂಟೆರೆರಿಯ ಓಟದಲ್ಲಿ ಕೆಂಪು ಸಾಂತಾಕ್ಲಾಸ್ ಡ್ರೆಸ್ ಇರೋ ತರಹ , ಹಸಿರು ಬಣ್ಣದ "ಎಲ್ಫ್" ಕಾಸ್ಟ್ಯೂಮಿನಲ್ಲೂ ಓಡಬಹುದು. ಮ್ಯಾಡಿಸನ್ನಿನ ಓಟದಲ್ಲಿ ಇವೆರಡರ ಜೊತೆಗೆ ಬಿಳಿಯ ಬಣ್ಣದ ಮರ ಮತ್ತು ಕಂದು ಬಣ್ಣದ ಕ್ರಿಸ್ಮಸ್ ಜಿಂಕೆ(ರೈನ್ ಡೀರ್) ವೇಷದಲ್ಲಿಯೂ ಓಡಬಹುದು. ಓಟದಲ್ಲಿ ಹೆಚ್ಚಿನವರು ಸಂತಾ ಕ್ಲಾಸಾಗೇ ಬಂದರೂ ಉಳಿದ ಬಣ್ಣದ ಸಾಮಾನ್ಯ ಓಟದ ಡ್ರೆಸ್ಸಿನಲ್ಲಿ ಓಡುವವರೂ ಸಿಗುತ್ತಾರೆ.
ಬೇರೆ ಓಟಕ್ಕೂ ಈ ಓಟಕ್ಕೂ ಏನು ವ್ಯತ್ಯಾಸ:
ಸಂತಾ ಕಾಸ್ಟೂಮಿನೊಂದಿಗೆ ಓಡೋದೇ ಒಂದು ಸವಾಲು. ಮೆಕ್ಸಿಕೋ, ಅಮೇರಿಕಾ, ಆಸ್ಟ್ರೇಲಿಯಾ, ಲಂಡನ್ನುಗಳಲ್ಲಿ ಡಿಸೆಂಬರ್ ಅಂದರೆ ಸಖತ್ ಛಳಿ. ಮಾಂಟೆರೆರಿಯಲ್ಲಿ ಇಂದು ಓಟದ ಸಮಯದಲ್ಲಿ ಇದ್ದ ತಾಪಮಾನ ೭ ಡಿಗ್ರಿ ಸೆಲ್ಸಿಯಸ್. ಬೆಳಬೆಳಗ್ಗೆ ಮನೆಯಿಂದ ಹೊರಡೋ ಹೊತ್ತಿಗೆ ಒಂದು ಥರ್ಮಲ್ ವೇರ್, ಅದರ ಮೇಲೊಂದು ಉದ್ದ ತೋಳಿನ ಅಂಗಿ ತೊಟ್ಟು, ಅದರ ಮೇಲೆ ಸಮ್ತಾ ಕ್ಲಾಸಿನ ಗೌನು ತೊಟ್ಟು ಹೊರಟಿದ್ದರೂ ಚಳಿ ಚಳಿ ಅನಿಸುತ್ತಿತ್ತು. ಆದರೆ ಓಟ ಪ್ರಾರಂಭವಾದಾಗ ಅಷ್ಟು ಬಟ್ಟೆ ತೊಟ್ಟ ತಪ್ಪು ಅರಿವಾಗೋಕೆ ಶುರುವಾಯ್ತು. ಮೂರು ಕಿ.ಮೀ ಓಡುವ ಹೊತ್ತಿಗೇ ಮೇಲಿನ ಟೋಪಿ, ಬಟ್ಟೆಯೆಲ್ಲಾ ಬೆವರ ಮುದ್ದೆಯಾಗಿ ಮುಂದೆ ಓಡೋಕೆ ಸಾಧ್ಯವಿಲ್ಲವೇನೋ ಅನ್ನಿಸೋಕೆ ಶುರುವಾಗಿತ್ತು ನನಗೆ. ಜೊತೆಗೆ ತೆಳ್ಳಗಿದ್ದ ಸಾಂತಾ ಕ್ಲಾಸಿನ ಪ್ಯಾಂಟು ಸಾಕಾಗೋಲ್ಲವೆಂದು ತೊಟ್ಟ ದಪ್ಪ ಚಡ್ಡಿಯ ಪ್ರಭಾವ ಬೇರೆ. ಡಿಸೆಂಬರ್ ಮೊದಲ ವಾರದವರೆಗೂ ಸಾಮಾನ್ಯವಾಗಿದ್ದ ತಾಪಮಾನದಲ್ಲಿ ಓಡಿ ಅಭ್ಯಾಸವಿದ್ದಿದ್ದಕ್ಕೂ , ನಂತರದ ವಾರಗಳಲ್ಲಿ ಇದ್ದಕ್ಕಿದ್ದಂತೆ ಇಳಿದ ತಾಪಮಾನದಲ್ಲಿ ಓಡಿ ಅಭ್ಯಾಸ ಮಾಡದೇ ಇದ್ದಿದ್ದು, ಓಟಕ್ಕೆ ಎರಡು ವಾರಗಳಿದ್ದಾಗ ಹಿಮದಲ್ಲಿ ಆಟವಾಡೋಕೆ ಹೋಗಿ ಹಿಮ್ಮಡಿ ಕೆತ್ತಿಕೊಂಡಿದ್ದು, ಹಿಂದಿನ ರಾತ್ರಿ ಸರಿಯಾಗಿ ನಿದ್ದೆಯಾಗದ್ದು ಎಲ್ಲಾ ಇಂದಿನ ಓಟದಲ್ಲಿ ಪ್ರಭಾವ ಬೀರಿತ್ತು ! ಓಟದಲ್ಲಿ ಎಲ್ಲಕ್ಕಿಂತಾ ಮುಖ್ಯ ನಿರಂತರ ಅಭ್ಯಾಸ ಮತ್ತು ಅಂದಿನ ವಾತಾವರಣಕ್ಕೆ ಚುರುಕಾಗಿ ಹೊಂದಿಕೊಳ್ಳುವಿಕೆ. ಅವೆರಡರಲ್ಲೂ ನಿಧಾನವಾದ ಕಾರಣ ಬೆಂಗಳೂರಿನಲ್ಲಿ ೫೨ ನಿಮಿಷಕ್ಕೆ ೧೦ಕಿ.ಮೀ ಓಡಿದ್ದ ನನಗೆ ಇಲ್ಲಿನ ೧೦ಕಿ.ಮೀ ಮುಗಿಸೋಕೆ ೫೮ ನಿಮಿಷ ಬೇಕಾಗಿತ್ತು 🙁 ಕಮ್ಮಿ ಬಟ್ಟೆಗಳೊಂದಿಗೆ , ಒಂದಿಷ್ಟು ಉತ್ತಮ ತಯಾರಿಯೊಂದಿಗೆ ಬಂದಿದ್ದರೆ ಬೇಗನೇ ಮುಗಿಸಬಹುದಿತ್ತು ಅನ್ನೋದನ್ನು ಗೆಳೆಯ ಅಮನ್ ಸಾಧ್ಯವಾಗಿಸಿದ್ದ. ಬೆಂಗಳೂರಿನಲ್ಲಿ ೫೮ ನಿಮಿಷದಲ್ಲಿ ಮುಗಿಸಿದ್ದ ಆತ ಇಲ್ಲಿ ೫೬ ನಿಮಿಷದಲ್ಲಿ ಓಟ ಮುಗಿಸಿ ಮುಂದಿನ ಒಟಕ್ಕೆ ನನಗೆ ಏನೇನು ಮಾಡಬಾರದೆಂಬ ಟಿಪ್ಸ್ ಕೊಟ್ಟಿದ್ದ 🙂
ಚಳಿಯ ಪ್ರದೇಶಗಳಲ್ಲಿ ಇನ್ನೇನೇನು ಸಮಸ್ಯೆಗಳಾಗುತ್ತೆ:
ಮೇಲೆ ತಿಳಿಸಿದ ತಪ್ಪುಗಳ ಜೊತೆಗೆ ಚಳಿಯ ಪ್ರದೇಶಗಳಲ್ಲಿ ತೆಗೆದುಕೊಳ್ಳಲೇಬೇಕಾದ ನಿರ್ಧಾರ ಅಂದರೆ ಹಿಮ್ಮಡಿಯ ಆರೋಗ್ಯ ರಕ್ಷಣೆ. ಇಲ್ಲಿ ಗಾಯವಾದರೆ ಬೇಗ ವಾಸಿಯಾಗೋಲ್ಲ. ಹಿಮ್ಮಡಿ ನೋವಾದರೂ ಬೇಗ ಗುಣವಾಗೋಲ್ಲ. ಚಳಿಗೆ ಜರ್ಕೀನು ಹೊದ್ದು, ಟೋಪಿ ಹಾಕಿ ಕೂತರೂ ಹಿಮ್ಮಡಿಗಳನ್ನು ಸಾಕ್ಸುಗಳಿಂದ ಮುಚ್ಚದೇ ನಿರ್ಲಕ್ಶ್ಯಿಸುತ್ತಿರುತ್ತೇವೆ. ಅದೆಷ್ಟು ತಪ್ಪು ಅನ್ನೋದನ್ನು ಇಂತಹ ಓಟಗಳು ಎತ್ತಿ ತೋರಿಸುತ್ತವೆ. ಮಾಂಸಾಹಾರಿಗಳಿಗೆ ಅವರ ಆಹಾರದಲ್ಲಿನ ವಿಟಮಿನ್ ಡಿ ಮತ್ತು ಸೋಡಿಯಂ ಮುಂತಾದ ಅಂಶಗಳಿಂದ ಚಳಿಯಿಂದ ಅವರ ಓಟದ ಮೇಲೆ ಹೆಚ್ಚಿನ ಪರಿಣಾಮಗಳಾಗೋದಿಲ್ಲ. ಆದರೆ ಪೂರ್ಣ ಸಸ್ಯಾಹಾರಿಗಳಾಗಿದ್ದರೆ ಬಾಳೇಹಣ್ಣು ಮುಂತಾದ ಸೋಡಿಯಂನಿಂದ ತುಂಬಿದ ಫಲಾಹಾರಗಳನ್ನು ನಿಯಮಿತವಾಗಿ ತಿನ್ನೋದು ಅತೀ ಅವಶ್ಯಕ. ಇಲ್ಲಿನ ಹಾಲು, ಪನ್ನೀರು ಮುಂತಾದ ಕ್ಯಾಲ್ಸಿಯಂಯುಕ್ತ ಪದಾರ್ಥಗಳನ್ನು ಸೇವಿಸಿದರೂ ಚಳಿಗಾಲದಲ್ಲಿ ಸೂರ್ಯನ ದರ್ಶನವಾಗೋದೇ ಕಮ್ಮಿಯಾಗಿ ತಿಂದ ಆಹಾರದಿಂದ ವಿಟಮಿನ್ ಡಿ ಸಿಗೋದು ಕಮ್ಮಿಯಾಗುತ್ತದೆ. ಹಾಗಾಗಿ ಬೆಳಗ್ಗಿನ ಅಥವಾ ಸಂಜೆಯ ಸೂರ್ಯರಶ್ಮಿಯಲ್ಲಿನ ಓಡಾಟ ದೇಹಕ್ಕೆ ಅತೀ ಅವಶ್ಯಕವಾದ ವಿಟಮಿನ್ ಡಿ ಪೂರೈಕೆಯಲ್ಲಿ ನೆರವಾಗುತ್ತೆ. ಇಂತಹ ಸಣ್ಣ ಸಣ್ಣ ಅಂಶಗಳನ್ನು ನಿರ್ಲಕ್ಷಿಸೋದು ದೈನಂದಿನ ಜೀವನದಲ್ಲಿ ಮಹತ್ವದ್ದೆನಿಸದೇ ಇದ್ದರೂ ಮಹತ್ವದ ಓಟದ ಸಮಯದಲ್ಲಿ ಕೈಕೊಡೋ ದೇಹದೊಂದಿಗೆ ಇವೆಲ್ಲಾ ನೆನಪಾಗುತ್ತೆ 🙂
ವಾರಂತ್ಯದಲ್ಲಿ ಬೆಚ್ಚಗೆ ಹೊದ್ದು ಮಲಗೋ ಬದಲು ದೇಹಕ್ಕೆ ತ್ರಾಸು ಕೊಡೋ ಇಂತದ್ದು ಬೇಕಾ ?
೧೦ ಕಿ.ಮೀ, ೨೧ ಕಿ.ಮೀ ಓಡಿದ ಮೇಲೆ ಒಂದೆರಡು ದಿನವಾದರೂ ಕೈಕಾಲು ನೋವಿರುತ್ತೆ. ಭಾರತದಲ್ಲಿ ಮುಂಬೈ ಮ್ಯಾರಥಾನ್ ಅಂತ ೪೧ ಕಿ.ಮೀ ಇರೋ ತರಹ ಮೆಕ್ಸಿಕೋದಲ್ಲೂ ೪೧ಕಿ.ಮೀ, ಅಲ್ಟ್ರಾ ಮ್ಯಾರಥಾನ್ ಅನ್ನೋ ೫೦,೮೦, ೧೦೦ ಕಿ.ಮೀ ಓಟದ ಸ್ಪರ್ಧೆಗಳೂ ನಡೆಯುತ್ತೆ ! ವಾರಾಂತ್ಯದಲ್ಲಿ ಬೆಚ್ಚಗೆ ಹೊದ್ದು ಮಲಗೋ ಬದಲು ಏಳೆಂಟು ಡಿಗ್ರಿ ಚಳಿಯಲ್ಲಿೋಡುತ್ತಾ, ಆಮೇಲೆ ಕೆಲ ದಿನ ನೋವು ಅನುಭವಿಸೋದು ಬೇಕಾ ಅನ್ನೋದು ಯಾರೇ ಆದರೂ ಕೇಳುವಂತಹ ಪ್ರಶ್ನೆಯೇ. ಆದರೆ ಓಟ ಅನ್ನೋದು ಒಂದಿನದ ಸಂಭ್ರಮವಲ್ಲ. ಅದೊಂದು ಜೀವನ ಶೈಲಿ. ಬೆಳಗ್ಗೆಯೋ, ಸಂಜೆಯೂ ದಿನನಿತ್ಯದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಅರ್ಧ ಘಂಟೆಯೋ, ಒಂದು ಘಂಟೆಯೋ ಓಡೋದಕ್ಕೆ ಸಮಯ ಕೊಡುವುದಿದೆಯಲ್ಲ, ಆ ತಾದ್ಯಾತ್ಮವೇ ಒಂದು ಸಾಧನೆಯೆನಿಸುತ್ತೆ. ಆ ಕೊರೆಯುವ ಚಳಿಯಲ್ಲೂ ಮನೆಯಿಂದ ಹೊರಗೆ ಹೊರಟು ಜಿಮ್ಮಿಗೋ, ಓಡೋಕೋ ಹೊರಡುವಂತೆ ದೇಹವನ್ನು ತಯಾರು ಮಾಡುವುದೇ ಒಂದು ಸ್ಪರ್ಧೆಯಲ್ಲಿ ಗೆದ್ದಂತಹ ಭಾವ. ಚಳಿಗಾಲ ಅಂದಾಕ್ಷಣ ಉಸಿರಾಟದ ಸಮಸ್ಯೆಗಳು, ಮಂಡಿ ನೋವು, ಕೈಕಾಲು ನೋವುಗಳಂತಹ ಸಮಸ್ಯೆಗಳು ಕಾಡುತ್ತಿರುತ್ತೆ. ಚಳಿಯ ಪ್ರದೇಶಗಳಲ್ಲಿ ದೇಹವನ್ನು ಬೆಚ್ಚಗಿಡೋಕೆ ಏನು ತಿನ್ನೋದು ಅಥವಾ ತಿಂದದ್ದನ್ನು ಹೇಗೆ ಅರಗಿಸೋದು ಅನ್ನೋದೇ ಒಂದು ಸಮಸ್ಯೆ. ದಿನನಿತ್ಯದ ಓಟ ಮತ್ತು ಜಿಮ್ಮಿನಂತಹ ವ್ಯಾಯಾಮಗಳು ಅಂತಹ ಸಮಸ್ಯೆಗಳಿಂದ ನಮ್ಮನ್ನು ದೂರವಿಟ್ಟು ದೇಹವನ್ನು ಆರೋಗ್ಯವಾಗಿಟ್ಟಿರುತ್ತದೆ. ಬೆಚ್ಚಗಿನ ಪ್ರದೇಶ, ಥಂಡಿಯ ಜಾಗಗಳು ಹೀಗೆ ಎಲ್ಲೇ ಹೋದರೂ ವ್ಯಾಯಾಮ ಮಾಡಿ ಅಭ್ಯಾಸವಿದ್ದವರಿಗೆ ಹೆಚ್ಚಿನ ಸಮಸ್ಯೆಯಾಗೋದಿಲ್ಲ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳೋ ಮನಸ್ಥಿತಿಯಿರಬೇಕಷ್ಟೆ.
ಓಟ ಮತ್ತು ಮನೋಬಲ :
ಕೈಕಾಲು ಗಟ್ಟಿಯಿದ್ದೋರು, ಚೆನ್ನಾಗಿ ಅಭ್ಯಾಸ ಮಾಡಿದ್ದೋರು ಓಡ್ತಾರೆ. ಮಾಡದಿದ್ದೋರು ಓಡಕ್ಕಾಗೋಲ್ಲ. ಓಟಕ್ಕೂ ಮನೋಬಲಕ್ಕೂ ಏನು ಸಂಬಂಧವಯ್ಯಾ ಅಂತಿರಾ ? ಖಂಡಿತಾ ಇದೆ. ಅಭ್ಯಾಸ ಬಿಟ್ಟುಹೋಗಿದ್ದಾಗ ಅಥವಾ ಅಭ್ಯಾಸವಿಲ್ಲದಂತಹ ವಾತಾವರಣಗಳಲ್ಲಿ ಓಡುವಾಗ ದೇಹ ಹೀಗೇ ವರ್ತಿಸುತ್ತೆ ಅಂತ ಹೇಳೋದು ಕಷ್ಟ. ಕೆಲವೊಮ್ಮೆ ಇದು ನನ್ನಿಂದಾಗದ ಕೆಲಸ ಅಂತ ದೇಹ ಸೋಲೊಪ್ಪಿಕೊಳ್ಳೋಕೆ ರೆಡಿಯಾಗಿರುತ್ತೆ. ಆಗ ಇನ್ನೊಂದೇ ಕಿ.ಮೀ, ಇನ್ನರ್ಧ, ಇನ್ನೊಂದಿಷ್ಟು ಜೋರು, ಮುಟ್ಟೆಬಿಟ್ಟಿವಿ ಅಂತ ನಮಗೆ ನಾವೇ ಸ್ಪೂರ್ತಿ ತುಂಬಿಕೊಳ್ಳುತ್ತಾ ಓಡೋದಿದೆಯಲ್ಲ, ಅದು ಕೊಡುವಂತಹ ಕಿಕ್ ಇನ್ನೊಂದಿಲ್ಲ. ಮೂರೂವರೆ ಕಿ.ಮೀ ಹೊತ್ತಿಗೇ ದೇಹವೆಲ್ಲಾ ಬೆವರ ಮುದ್ದೆಯಾಗಿ ಇನ್ನು ನನ್ನಿಂದಾಗೋಲ್ಲ ಅನ್ನುವಂತಹ ದೇಹಕ್ಕೆ ಸ್ಪೂರ್ತಿ ತುಂಬಿ ಐದು, ಆರು ಅನ್ನುತ್ತಾ ಮೊದಲೈದು ಕಿ.ಮೀಗೆ ತೆಗೆದುಕೊಂಡ ಸಮಯಕ್ಕಿಂತಾ ಮೂರ್ನಾಲ್ಕು ನಿಮಿಷ ಕಡಿಮೆ ಸಮಯದೊಂದಿಗೆ ಕೊನೆಯ ಐದು ಕಿ.ಮೀ ಓಡಿದ್ದೇವೆ ಅನ್ನೋದನ್ನ ನೆನೆಸಿಕೊಂಡರೆ ಒಮ್ಮೆ ಹೌದಾ ಅನಿಸುತ್ತೆ. ಸಾಧ್ಯ ಅಂದುಕೊಂಡರೆ ಎಲ್ಲವೂ ಸಾಧ್ಯ. ಅಭ್ಯಾಸ ಚೆನ್ನಾಗಿದ್ದಾಗ ನಾಲ್ಕೂವರೆ ನಿಮಿಷಗಳಲ್ಲಿ ಒಂದು ಕಿ.ಮೀ ಮುಗಿಸೋದೂ ಸಾಧ್ಯ. ಚೆನ್ನಾಗಿಲ್ಲದಿದ್ದಾಗ ಒಂದೆರಡು ಕಿ.ಮೀಗಳ ವೇಗ ೬ ಕಿ.ಮೀ ದಾಟಿದ್ದರೂ ಉಳಿದವುಗಳಲ್ಲಿ ಸ್ಪೂರ್ತಿ ತುಂಬಿಕೊಳ್ಳುತ್ತಾ ಎಲ್ಲಾ ಐದೂವರೆಯ ಆಸುಪಾಸಿನಲ್ಲಿಟ್ಟು ಒಂದು ಘಂಟೆಯ ಒಳಗೆ ೧೦ ಕಿ.ಮೀ ಮುಗಿಸೋದೂ ಸಾಧ್ಯ. ಮೂರಕ್ಕೇ ಮುಕ್ತಾಯವಾಗಬೇಕಿದ್ದ ಓಟವನ್ನು ಹತ್ತು ದಾಟಿಸೋದು, ಪ್ರೊಫೆಷನಲ್ ಅಥ್ಲೀಟುಗಳಲ್ಲದವರನ್ನೂ ೪೨ ಕಿ.ಮೀ ಓಡುವಂತೆ ಪ್ರೇರೇಪಿಸೋದು ಮನೋಬಲವೇ ಸರಿ. ಓಟದಲ್ಲಿ ಯಾರೋ ಒಬ್ಬರಿಗೆ ಪ್ರಶಸ್ತಿ ಸಿಕ್ಕಬಹುದು , ಉಳಿದ ಸಾವಿರಾರು ಜನರಿಗೆ ಏನೂ ಸಿಕ್ಕದೆಯೂ ಇರಬಹುದು. ಆದರೆ ಪ್ರತಿಯೊಬ್ಬರಿಗೂ ಸ್ವಂತದ ಸಾಮರ್ಥ್ಯಗಳ ಅರಿವಿದ್ದೇ ಇರುತ್ತೆ. ಆ ದಿನದ ಪರಿಸ್ಥಿತಿಗಳೆದುರು ತಮ್ಮ ಸಾಮರ್ಥ್ಯ ಒರೆಹಚ್ಚಿದ, ಸವಾಲುಗಳ ಎದುರಿಸಿದ ಖುಷಿಯೇ ದಿನತುಂಬುತ್ತೆ. ಅಂದಿನ ಖುಷಿಗಳ ಮೂಟೆಗಟ್ಟಿ, ಸೋಲುಗಳಿಂದ ಹೊಸ ಪಾಠ ಕಲಿತು ಹೊಸ ಹೊಸ ಸವಾಲುಗಳ ಎದುರಿಸೋಕೆ ಸ್ಪೂರ್ತಿಯಾಗುತ್ತೆ.