ಶಿಕ್ಷಕರಿಗೊಂದು ಸೆಲ್ಯೂಟ್: ಪ್ರಜ್ವಲ್ ಕುಮಾರ್

 
 
 
 
 
 
 
 
ಶಿಕ್ಷಕರು ಅಂದ್ರೆ ದೇವರಿದ್ದಂತೆ, ಶಿಕ್ಷಕರು ಎಷ್ಟು ಒಳ್ಳೆಯವರಾಗಿರ್ತಾರೋ ಅವರ ವಿದ್ಯಾರ್ಥಿಗಳೂ ಅಷ್ಟೇ ಒಳ್ಳೆಯವರಾಗಿರ್ತಾರೆ ಅಂತೆಲ್ಲಾ ಕೊರೀತಾ ಕೂತ್ರೆ ಒಂದು ನಕ್ಷತ್ರ ಹುಟ್ಟಿ ಅದು ಕಪ್ಪು ರಂಧ್ರ ಸ್ಥಿತಿ ತಲುಪುವವರೆಗೂ ಕೊರೀಬಹುದು. ಇಂಥವೆಲ್ಲಾ ಬಿಟ್ಟು ಬೇರೆ ಏನಾದ್ರೂ ಹೇಳೋಣಾ ಅಂದ್ರೆ ಅವರನ್ನು ಬಯ್ಯೋದೋ, ಹೊಗಳೋದೋ ಅಥವಾ ಹೀಗೇ ನೆನಪು ಮಾಡ್ಕೊಳ್ತಾ ಇರೋದೋ ಗೊತ್ತಾಗ್ತಿಲ್ಲ.
 
ಒಂದು ಕಡೆಯಿಂದ ಶುರು ಮಾಡುವುದಾದರೆ ನಾವೆಲ್ಲಾ ಅಂಗನವಾಡಿ ಅಥವಾ ಶಿಶುವಾರಕ್ಕೆ ಹೋಗುವಾಗ ಅಲ್ಲಿದ್ದ ಲಕ್ಷ್ಮೀದೇವಿ ಟೀಚರ್ ನಮ್ಮಂಥ ಚಿಕ್ಕ ಮ(೦ಗಗ)ಕ್ಕಳ ಗುಂಪನ್ನು ಹೇಗೆ ಸಹಿಸಿಕೊಳ್ತಿದ್ರೋ ನಾ ಕಾಣೆ. ಇವತ್ತಿಗೂ ಸಿಕ್ಕಿದಾಗ "ಹೇಗಿದ್ಯಪ್ಪಾ? ಏನ್ ಮಾಡ್ತಾ ಇದೀಯ ಈಗ? ಅಪ್ಪ, ಅಮ್ಮ ಚೆನಾಗಿದಾರ?" ಅಂತ ನೂರೆಂಟು ಪ್ರಶ್ನೆ ಕೇಳೋ ಲಕ್ಷ್ಮೀದೇವಿ ಟೀಚರ್ ನಾ ಚಿಕ್ಕವನಿದ್ದಾಗ ಅತ್ತರೆ ಸಮಾಧಾನ ಮಾಡಿ, ತಪ್ಪು ಮಾಡಿದಾಗ ನನ್ನಂಡಿನ ಮೇಲೆ ನಾಲ್ಕು ಬಾರಿಸಿ ಕೂರಿಸುತ್ತಿದ್ದರೇನೋ!
 
ಇನ್ನು ನಾಲ್ಕನೇ ತರಗತಿಯವರೆಗೆ ಕಲಿಸಿದ ಶಂಕ್ರಯ್ಯ ಮಾಷ್ಟ್ರು, ಆರತಿ ಟೀಚರ್ ಈಗಲೂ ಆಗಾಗ ಕನಸಲ್ಲಿ ಕೋಲು ಹಿಡ್ಕೊಂಡು ಕಾಣಿಸುತ್ತಾರೆ. ಇತ್ತೀಚೆಗೆ ಸಿಕ್ಕಾಗ ನೋಡಿದಂತೆ ಆರತಿ ಟೀಚರ್ ಆಗಿಗಿಂತ ಸ್ವಲ್ಪ ದಪ್ಪ ಆದಂತೆ ಕಂಡರೂ ನಮ್ಮ ಶಂಕ್ರಯ್ಯ ಮಾಷ್ಟ್ರು ಮಾತ್ರ ಹಾಗೇ ಇದಾರೆ. ಒಂದೇ ಬದಲಾವಣೆ ಅಂದ್ರೆ ಅವರು ಸ್ಟೈಲಾಗಿ ತೆಗೀತಾ ಇದ್ದ ತಲೆಕೂದಲ ಸೈಡ್ ಕ್ರಾಪಿನಲ್ಲಿ ಅಲ್ಲಲ್ಲಿ ಒಂದೆರಡು ಬಿಳಿ ಕೂದಲು ಕಾಣುತ್ತಿವೆಯಷ್ಟೆ. ಅದ್ಯಾಕೋ ಆಗ ಶಿಕ್ಷಕರು ಗಂಡಸಾಗಿದ್ದರೆ 'ಸರ್' ಅಂತಲೂ ಹೆಂಗಸಾಗಿದ್ದರೆ 'ಟೀಚರ್' ಅಂತಲೂ ಕರೆಯಬೇಕೆಂದುಕೊಂಡಿದ್ದೆವು. ಕ್ಲಾಸಿನಲ್ಲಿ ಎರಡು ನಿಮಿಷಕ್ಕೊಬ್ಬರಂತೆ ಎದ್ದು 'ಒಂದಕ್ಕೆ ಹೋಗದಾ ಸಾ…/ಟೀಚಾ…' ಅಂತ ಕೇಳಿ ಬೈಸಿಕೊಂಡಿದ್ದು ಈಗ ಒಂಥರಾ ಮಜಾ ಅನ್ನಿಸ್ತಿದೆ!
 
ಐದರಿಂದ ಏಳರವರೆಗೆ ಓದಿದ ಸ್ಕೂಲಿನಲ್ಲಿ ಬಹಳಷ್ಟು ಜನ ಶಿಕ್ಷಕರಿದ್ದರು. ಆದಷ್ಟು ಜನರನ್ನ ನೆನಪು ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ಕನ್ನಡಕ ಹಾಕ್ಕೊತಾ ಇದ್ದ ರೋಜಾಮಣಿ ಟೀಚರ್. ನನ್ನ ಕ್ಲೋಸ್ ಫ್ರೆಂಡಿನ ತಂದೆ ಚನ್ನಕೇಶವ ಮೇಷ್ಟ್ರು. 'ತಪ್ಪಾ ಮಾಡಿದ ಮ್ಯಾಲೆ, ಶಿಕ್ಷೆ ಅನುಭವಿಸಲೇ ಬೇಕು' ಅಂತ ಹೇಳ್ತಾ ಸಿಕ್ಕಾಪಟ್ಟೆ ಹೊಡೀತಾ ಇದ್ದ ಗೋಪಾಲ್ ಮಾಷ್ಟ್ರು. ಬೆಲ್ ಹೊಡೆದ ಕೂಡ್ಲೇ 'ಕನ್ನಡದಾ ಮಕ್ಕಳೆಲ್ಲ ಒಂದಕ್ಕೋಗಿ ಬನ್ನಿ' ಅಂತ ರಾಗವಾಗಿ ಹೇಳಿ ಹೊರಗೆ ಕಳಿಸುತ್ತಿದ್ದ ಓಂಕಾರಪ್ಪ ಮಾಷ್ಟ್ರು. ಶಾಲೆಯಲ್ಲಿ ಯಾವುದೇ ಸಮಾರಂಭ ಇದ್ದರೂ ಹಾಡು, ಡ್ಯಾನ್ಸ್, ನಾಟಕ, ಭಾಷಣ ಎಲ್ಲಾ ಹೇಳಿ ಕೊಟ್ಟು ಸಮಾರಂಭಕ್ಕೆ ಡ್ರೆಸ್ ಮಾಡಿಸಿ ಕಳಿಸುತ್ತಿದ್ದ ನಾಗರತ್ನ ಟೀಚರ್, ಶೈಲಜಾ ಟೀಚರ್. ನಮಗೆಲ್ಲ ಖೋ ಖೋ, ಕಬಡ್ಡಿ, ವಾಲಿಬಾಲ್, ಅದೂ, ಇದೂ, ಮತ್ತೊಂದು ಅಂತ ನಮಗೆ ಗೊತ್ತಿಲ್ದೇ ಇರೋ ಆಟವನ್ನೆಲ್ಲ ಕಲಿಸಿದ ರೇವತಿ ಟೀಚರ್. ಹೆಡ್ ಮಾಷ್ಟ್ರ ಕುರ್ಚಿಯಲ್ಲಿ ಕೂರುವ, ರೂಲರ್ ದೊಣ್ಣೆಯಲ್ಲಿ ಮಾತ್ರ ಹೊಡೆಯುವ ನಾಗರಾಜ್ ಮೇಷ್ಟ್ರು. ಇದೇ ರೀತಿ ಹೈಸ್ಕೂಲು, ಕಾಲೇಜಿನ ಶಿಕ್ಷಕರನ್ನೆಲ್ಲಾ ನೆನಪಿಸಿಕೊಂಡರೆ ನಮ್ಮ ಭೂಮಿಯ ಮೇಲಿರೋ ಜನಸಂಖ್ಯೆಯಷ್ಟು ನೆನಪುಗಳು ತಲೆಗೆ ಬರ್ತವೆ.
 
ಇನ್ನು ಇವೆಲ್ಲಾ ಶಾಲೆಗಳಲ್ಲೂ ಇದ್ದ ಸಾಮ್ಯತೆ ಏನಪ್ಪಾ ಅಂದ್ರೆ, ಶಿಕ್ಷಕರ ದಿನಾಚರಣೆಯ ಎರಡ್ಮೂರು ದಿನ ಮೊದಲು ನಮಗೆಲ್ಲಾ ಕೊಡ್ತಾ ಇದ್ದ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಸ್ಟಿಕ್ಕರ್! ಒಂದೋ ಎರಡೋ ರೂಪಾಯಿ ಇರುತ್ತಿದ್ದ ಆ ಸ್ಟಿಕ್ಕರನ್ನು ನಮ್ಮ ನೋಟ್ ಬುಕ್ಕು, ಜಾಮಿಟ್ರಿ, ಬ್ಯಾಗಿನ ಮೇಲೆಲ್ಲಾದರೂ ಅಂಟಿಸಿಕೊಳ್ತಾ ಇದ್ವಿ.
 
ನೀವು ಏನೇ ಹೇಳಿ, ಈ ಶಿಕ್ಷಕರು ಮಾಡೋ ಕೆಲಸ, ಅವರಿಗಿರುವ ತಾಳ್ಮೆ ಅಷ್ಟಿಷ್ಟಲ್ಲ. ತನ್ನ ವಿದ್ಯಾರ್ಥಿ ಗೆಲ್ಲಲಿ ಅಂತ ಶಿಕ್ಷಕರು ಪಡುವ ಶ್ರಮ ಬಹುಶಃ ಕೆಲವು ತಂದೆ ತಾಯಂದಿರೂ ಪಟ್ಟಿರಲಾರ್ರು. ಇವತ್ತು ನಾನು ಏನೋ ಬರೆದಿದ್ದೀನಿ, ನೀವು ಏನೋ ಓದ್ತಿದೀರಿ ಅಂದ್ರೆ ಅದಕ್ಕೆಲ್ಲ ನಮಗೆ ಇಲ್ಲಿಯ ತನಕ ಕಲಿಸಿದ, ಇನ್ನೂ ಕಲಿಸುತ್ತಿರುವ, ಮುಂದೆಯೂ ಕಲಿಸುವ ನಮ್ಮೆಲ್ಲ ಶಿಕ್ಷಕರೇ ಕಾರಣ.
 
ನಮ್ಮ ಶಿಕ್ಷಕರು ನಾವು ತಪ್ಪು ಮಾಡಿದಾಗ ಬೈದಿದ್ದಾರೆ, ಹೊಡೆದಿದ್ದಾರೆ, ನಮ್ಮ ಕಿವಿ ಹಿಂಡಿದ್ದಾರೆ. ನಾವು ಒಳ್ಳೇ ಮಾರ್ಕ್ಸ್ ತೆಗೆದಾಗಲೋ, ಚೆನ್ನಾಗಿ ಭಾಷಣ ಮಾಡಿದಾಗಲೋ, ಚೆನ್ನಾಗಿ ಆಟವಾಡಿದಾಗಲೋ ನಮಗೆ ಶಭಾಷ್ ಹೇಳಿ ಉಳಿದವರ ಎದುರಿಗೆ ಹೊಗಳಿ ಚಪ್ಪಾಳೆ ತಟ್ಟಿಸಿದ್ದಾರೆ. ಪುರಸೊತ್ತಾದಾಗೆಲ್ಲಾ ಆ ನಮ್ಮ ಶಿಕ್ಷಕರನ್ನ ನೆನಪು ಮಾಡ್ಕೊತಾ ಇರೋಣ. ನಾವು ನಾವಾಗಲು ಕಾರಣರಾದ ನಮ್ಮ ಎಲ್ಲಾ ಶಿಕ್ಷಕರಿಗೆ ಕೈ ಎತ್ತಿ ತಲೆಯ ಮೇಲಿಟ್ಟು ಒಂದು ಸೆಲ್ಯೂಟ್ ಮಾಡೋಣ.
 
ನಿಮ್ಮವ 
– ಪ್ರಜ್ವಲ್ ಕುಮಾರ್ 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Nagendra C.S.
Nagendra C.S.
10 years ago

Chennagide…………. adru Nimma college Gurugala baggenu barediddare chennagrtittu………..     

trackback

[…] ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ https://www.panjumagazine.com/?p=4499 ~ ಶಿಕ್ಷಕರಿಗೊಂದು ಸೆಲ್ಯೂಟ್ […]

trackback

[…] ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ https://www.panjumagazine.com/?p=4499 ~ ಶಿಕ್ಷಕರಿಗೊಂದು ಸೆಲ್ಯೂಟ್ […]

3
0
Would love your thoughts, please comment.x
()
x