ಸಾವಿನ ವ್ಯಾಖ್ಯಾನ: ಅಜ್ಜಿಮನೆ ಗಣೇಶ್

ಅಪರೂಪಕ್ಕೆ ಎಂಬಂತೆ ಈ ವರ್ಷ ಶರಾವತಿ ಲಿಂಗನಮಕ್ಕಿ ಅಣೆಕಟ್ಟೆಯನ್ನ ದಾಟಿ ಹರಿಯುತ್ತಿದ್ದಾಳೆ. ಬೇಸಿಗೆಯಲ್ಲಿ ತನ್ನ ಪಾಲಿನ ಹದಿನೈದು ಪರ್ಸೆಂಟ್ ವಿದ್ಯುತ್ ನ್ನ ಶರಾವತಿ ಖಂಡಿತಾ ಕೊಡುತ್ತಾಳೆ. ಇದಕ್ಕೆ ಪೂರಕವಾಗಿ ಕಣಿವೆ ಪ್ರದೇಶದ ವಿದ್ಯುತ್ ತಯಾರಿಕಾ ಯಂತ್ರಗಳು ಸಹ ಕೆಲಸ ಶುರುವಿಟ್ಟುಕೊಡಿದೆ. ನಾಡು ಸಂತೋಷದಲ್ಲಿದೆ, ಸರ್ಕಾರ ತೃಪ್ತಿಯಾಗಿದೆ. ಆದರೆ ಶರಾವತಿಯ ಮಡಿಲಲ್ಲಿ ನಡೆದ ಘಟನೆಯೊಂದು ಮಾತ್ರ ನನ್ನನ್ನ, ಕಳೆದೊಂದು ತಿಂಗಳಿನಿಂದಲೂ, ಬಿಡದೆ ಕಾಡುತ್ತಿದೆ.ಅಲ್ಲಿ ನಡೆದ ಸಾವಿನ ಘಟನೆಯೊಂದು, ನನ್ನನ್ನ ಮರಣ ಚಿಂತನೆಯಲ್ಲಿ ತೊಡಗಿಸಿದೆ.  ಮನಸ್ಸಿನ ಗೂಗಲ್ ನಲ್ಲಿ ಮೃತ್ಯು ಸಂಬಂಧಿತ ಚರ್ಚೆ ನಡೆಸುತ್ತಿದೆ….ನಿಜಕ್ಕೂ ಆ ಸಾವಿಗೆ ಅರ್ಥ ಇರಲಿಲ್ವ ?, ಅವರ ಸಾವಿಗೊಂದು ನೆಗಟಿವ್ ವ್ಯಾಖ್ಯಾನ ಬೇಕಾಗಿತ್ತಾ?. ಇಂತಹುದೆ ಹತ್ತಾರು ಪ್ರಶ್ನೆಗಳು, ನನ್ನ ಆಲೋಚನ ಲಹರಿಯ ನೆಟ್‍ವರ್ಕ್ ನ್ನೆ ಬುಡಮೇಲು ಮಾಡಿಟ್ಟಿದೆ … ಆ ಮೂವರ ಸಾವು…

 ಸಾವಿಗೆ ಸಾವಿರ ದಾರಿ, ಅದರ ತುದಿ ಮೊದಲನ್ನು ತಿಳಿದವರ್ಯಾರು. ದೂರ ದೇಶದ ವಿಜ್ಞಾನಿಗಳು ಸಾವಿನ ರಹಸ್ಯವನ್ನ ರಕ್ತದಲ್ಲಿ ಕಂಡಿದ್ದಾರಂತೆ. ಆ ರಹಸ್ಯ ಸಾಮಾನ್ಯನನ್ನ ತಲುಪವಷ್ಟರಲ್ಲಿ ಮೃತ್ಯು ಮತ್ತಷ್ಟು ಗೌಪ್ಯವಾಗಿರುತ್ತೆ ಬಿಡಿ. ಆದರೆ ಅಂದು ಶರಾವತಿಯನ್ನ ಹತ್ತಿರದಿಂದ ನೋಡ ಹೊರಟ ಹುಬ್ಬಳ್ಳಿಯ ಮೂವರು ಯುವಕರಿಗೆಮ, ಸಾವಿನ ಕೂಪಕ್ಕೆ ತೆರಳುತ್ತಿದ್ದೇವಾ ?, ಅನ್ನುವ ಸೂಕ್ಷ್ಮ ಕೂಡ ಸಿಕ್ಕಿರಲಿಲ್ಲ. ಶರಾವತಿ ದುಮ್ಮಿಕ್ಕುವ ಸ್ಥಳಕ್ಕೆ,ಸಂಭ್ರಮಿಸುತ್ತಲೆ ಹೋಗಿದ್ದರು. ಅಷ್ಟೆಅಲ್ಲ ಮುಂಗಾರು ಮಳೆಯ ಸ್ಪಾಟ್ ನೋಡಲೆ ಬೇಕೆನ್ನುವ ಬಯಕೆಯೊಂದಿಗೆ ಕಷ್ಟಪಟ್ಟು, ಜೋಗದ ರಾಜಪಾಲ್ಸ್ ತುದಿಯನ್ನು ತಲುಪಿದ್ದರು. ಪ್ರಯಾಸದ ಪ್ರವಾಸ ಮುಗಿಸಿ ನಿಂದವರಿಗೆ, ಮೌಂಟ್ ಎವೆರೆಸ್ಟ್ ಏರಿದಷ್ಟೆ ದಣಿವಾಗಿತ್ತು.

ಇನ್ನೇನು ಸಾಧಿಸಿದ ಘಳಿಗೆ, ಕ್ಯಾಮರಾ ಕಣ್ಣಲ್ಲಿ ಕ್ಲಿಕ್ಕಿಸಿಕೊಳ್ಳಬೇಕಿತ್ತು. ದುರದೃಷ್ಟ ವಿಧಿ ಬೇರೆಯದ್ದನ್ನೆ ಆಶಿಸಿತ್ತು . ಸ್ನೇಹಿತರೆಲ್ಲ ಕೂತು ಸುಧಾರಿಸಿಕೊಳ್ಳುತ್ತಿರುವಾಗಲೆ, ಯುವಕನೊಬ್ಬನನ್ನ ಶರಾವತಿ ಸೆಳದಿದ್ದಾಳೆ. ಇತ್ತ ಸಾಹಸಕ್ಕೆ ತೆರೆದುಕೊಂಡ ಮನಸ್ಸಿನೊಂದಿಗೆ ಯುವಕನೊಬ್ಬ ನೀರಿಗೆ ಇಳಿದ. ದುರ್ಘಃಟನೆಯೊಂದು ನಡೆದೆ ಹೊಯಿತು. ಬಿರುಸಿದ್ದ ನೀರಲ್ಲಿ ಆ ಯುವಕ ಕಾಲುಜಾರಿದ. ಆತನನ್ನ ಹಿಡಿದುಕೊಳ್ಲಲು ಹೋಗಿ ಇನ್ನಿಬ್ಬರು ನೀರಿಗೆ ಬಿದ್ದರು. ಅಲ್ಲಿದ್ದವರೆಲ್ಲ ಎನಾಯಿತೋ ಎನ್ನತ್ತಲೆ ಗಾಬರಿ ಬಿದ್ದರು. ನೋಡನೋಡುತ್ತಲೆ ಶರಾವತಿ ಮೂವರನ್ನ ಸೇರಿಕೊಂಡೆ ದುಮ್ಮುಕ್ಕಿದಳು. ಜೋಗದ ಗುಂಡಿಯಲಿ ಬಿದ್ದ ಆ ಮೂವರ ಪ್ರಾಣ, ಗಾಳಿಯಲ್ಲಿ ಹೋಯಿತಾ, ಬಂಡೆಯ ಕೊರಕಲಿನ ಮೇಲೆ ಉರುಳಿತಾ ಗೊತ್ತಿಲ್ಲ. ಮೂವರ ಆಯುಷ್ಯವಂತು ಮುಗಿದಿತ್ತು. ಮೃತ್ಯು ಆ ಮೂವರನ್ನ ಬಗಲಲ್ಲೆ ಎತ್ತೊಯ್ಯಿದಿತ್ತು.

ನಿಜಕ್ಕೂ ಈ ಸಾವು ನ್ಯಾಯವೆ? ಆಗಲೆ ಇಂತಹದೊಂದು ಪ್ರಶ್ನೆ ಕಾಡಲು ಆರಂಭಿಸಿದ್ದು .. 

ಸತ್ತವನ ಆತ್ಮಕ್ಕೆ ಮುಕ್ತಿ ಕೊಡಲು ಸಂಸ್ಕಾರವನ್ನಾದರೂ ಮಾಡಬೇಕಲ್ಲ. ಆದರೆ ಬೋರ್ಗೆರವ ಶರಾವತಿಯ ಹಾಲ್ನೊರೆಯ ಮಧ್ಯೆ, ಕಳೆದು ಹೋದ ಶವಗಳು ಎಲ್ಲಿದೆ ಯಾರಿಗೆ ಗೋತ್ತು. ನಿಘೂಡ ಕಗ್ಗಲ್ಲ ಬಂಡೆಯೊಳಗೆ ಇಳಿಯೋದು ಸಾದ್ಯವಾ. ಇದು ಸಾದ್ಯವಾಗದ ಕೆಲಸ ಬಿಡಿ ಬಿಡಿ ,ಎನ್ನುವ ವರಾತದ ನಡುವೆಯೆ ಶುರುವಾಯಿತು, ಹೆಣ ಎತ್ತುವ ಕಾರ್ಯ. ಕೋತಿರಾಜನು ಬಂದು ಉತ್ಸಾಹದಿಂದಲೆ ಕೈಜೋಡಿಸಿದ. ಆದರೆ ಅವನೊಂದಿಗೆ ಹೋರಟವರಿಗೆ ಮಾತ್ರ ಸಮದಾನವಿರಲಿಲ್ಲ. ಹೋದವರು ಹೋದರು ಇದ್ದವರಿಗೆ ಪರದಾಟ ತಂದಿಟ್ಟು, ಹೀಗೆ ಕೊಸರುತ್ತಲೆ ಅಗ್ನಿಶಾಮಕ ದಳದವರು ಶವ ಹುಡುಕೋಕೆ ಇಳಿದರು. ಯಾರ್ಯಾರೋ ಇಲ್ಲಿ ಬಂದು ಸಾಯುತ್ತಾರೆ ಅಂತ, ನಾವು ಅವರೊಟ್ಟಿಗೆ ಸಾಯೋಕಾಗುತ್ತಾ ನೋ ವೇ ಎನ್ನುವಂತ ಮನಸ್ಥಿತಿ ಅಲ್ಲಿ ನಿಂತಿದ್ದ ಅಧಿಕಾರಿಗಳದ್ದಾಗಿತ್ತು.

ಮತ್ತೆ ಕೆಲ ಪ್ರವಾಸಿಗರು, ಮು….., ಮಕ್ಕಳಿಗೆ ಬೇರೆಲ್ಲು ಸಿಗಲಿಲ್ಲ ಅಂತ ಸಾಯೋಕೆ, ಅಲ್ಲೆ ಹೋಗಿದ್ದರಾ ಅಂತ ಬೈದರೆ ವಿನಃ ಸಹಾನುಬೂತಿಯನ್ನಂತು ತೋರಿಸಲಿಲ್ಲ.ಮತ್ತೊಂದಿಷ್ಟು ಬುದ್ದಿವಂತರು ಹಾಗೆ ಆಗಬೇಕು ಆಗಲೆ ಬುದ್ದಿ ಬರೋದು ಅಂದರು, ಬುದ್ದಿ ಬರಬೇಕಾಗಿದ್ದು, ಸತ್ತವರಿಗೋ ಬದುಕಿದ್ದವರಿಗೋ ಗೊತ್ತಾಗಲಿಲ್ಲ.  ಇನ್ನು ಘಟನೆಯನ್ನ ನೋಡಿಯೋ, ಕೇಳಿಯೋ, ತಿಳಿದುಕೊಂಡವರು ಹೇಳಿದ್ದು ಕೂಡ ಬಹುತೇಕ ಇದೆ ಮಾತು. ಪಾಪ ಅನ್ಯಾಯ ಕಂಡ್ರಿ ಅಂತಂದವರು ಬೆರಳೆಣಿಕೆಷ್ಟು ಮಾತ್ರ. ಅವರಿವರ ನಾಲಿಗೆ ಹೊರಳಾಟದ ಶಬ್ದಗಳನ್ನ ಕೇಳುತ್ತಾ ಕುಳಿತಿದ್ದ ನನಗೆ ಕಸಿವಿಸಿ ಆರಂಭವಾಯಿತು. ಜೊತೆಯಲ್ಲಿಯೆ ಹುಟ್ಟಿಕೊಂಡವು ಹತ್ತಾರು ಪ್ರಶ್ನೆಗಳು. ಅವರ ಸಾವಿಗೆ ಅರ್ಥವೆ ಇಲ್ವೆ. ಅವರದ್ದು ದೂಷಿಸುವಂತಹ ಸಾವಾ ? ಅವರ ಸಾವಿಗೆ ನಕರಾತ್ಮಕ ಪ್ರತಿಕ್ರಿಯೆಯೆ ವ್ಯಾಖ್ಯಾನವೆ ಕೊನೆಯೆ ? ಹಾಗಾದ್ರೆ ಒಳ್ಳೇ ಸಾವು ಕೆಟ್ಟ ಸಾವು ಅನ್ನೊದು ಇದಕ್ಕೇನಾ ?

 ಸಾಮಾನ್ಯವಾಗಿ ಎಲ್ಲ ರೀತಿಯ ಸಾವಿನಲ್ಲು ಇಂತಹ ಮಾತುಗಳು ಕೇಳೊದಿಲ್ಲ, ಸಹಜವಲ್ಲದ ಸಾವುಗಳಲ್ಲಿ ಮಾತ್ರ ಈ ಮಾತುಗಳ ಅಸ್ತಿತ್ವ ಇರುತ್ತದೆ. ಯಾರಾದರೂ ಕೈ ಯಾರೆ ಪ್ರಾಣ ತೆಗೆದುಕೊಂಡಾಗ ಅನರ್ಥ ಸಾವಿನ ವ್ಯಾಖ್ಯಾನಗಳು ತುಸು ಜಾಸ್ತಿ. ಆತ್ಮಹತ್ಯೆ ಮಾಡಿಕೊಂಡರ ಶವದೆದುರು, ಬೇರೆದಾರಿ ಇರಲಿಲ್ವ, ಸಾಯೋದೆ ಪರಿಹಾರವ ಅಂತ ಪ್ರಶ್ನಿಸುತ್ತಾರೆ. ಸಾಲಮಾಡಿಯೋ ಅಥವಾ ಮಾಡಬಾರದನ್ನ ಮಾಡಿ ಆತ್ಮಹತ್ಯೆ ಮಾಡಿಕೊಂಡರೆ ಮುಗಿದೆ ಹೋಯಿತು. ಹೋದ ಜೀವದ ಮರ್ಯಾದೆಯನ್ನು ಕಳೆಯುತ್ತಾರೆ. ಅವನಿಗೆ ಸಂಬಂಧವಿತ್ತಂತೆ ಅದು ಗೊತ್ತಾಗಿ ಹೋದ, ಸಾಲ ತೀರಿಸದೇನೆ ಸತ್ತ ನರಕಕ್ಕೆ ಹೋಗಲಿ, ಮಾಡಬಾರದನ್ನ ಮಾಡಿದರೆ ಆಗಬಾರದ್ದೆ ಆಗೋದು. ಹೀಗೆ ಸತ್ತ ಹೆಣದ ಸುತ್ತ ನೆರದವರ ,ಸಾವಿನ ಮನೆಯಲ್ಲಿ ಸದ್ದಿಲ್ಲದೆ ಸುಳಿದಾಡುವ ಬಾಯಲ್ಲಿ ಕೇಳುವ ಆಕ್ಷೇಪಾರ್ಹ ಅಭಿಪ್ರಾಯಗಳು ಕುತೂಹಲದ ಜೊತೆಯಲ್ಲಿ, ಸತ್ತವನ ಬಗ್ಗೆ ಜಿಗುಪ್ಸೆಯನ್ನು ಹುಟ್ಟಿಸುತ್ತದೆ.

ಇನ್ನು ವಾಸಿಯಾಗದ, ಬರಬಾರದ ಕಾಯಿಲೆ ಬಂದು ಸತ್ತರೆ ಕೇಳಿಬರುವ ಮಾತು ಇನ್ನಷ್ಟು ವಿಚಿತ್ರವಾಗಿರುತ್ತದೆ. ಕೊಲೆ ಮಾಡಿದ ಆರೋಪಕ್ಕಿಂತಲು ಹೀಗೆ ಸಾಯೋದು ಕೆಟ್ಟದು ಎನ್ನುವಷ್ಟರ ಮಟ್ಟಿಗೆ ಬದುಕಿದ್ದವರು ಸತ್ತವನ ಎದುರು ಮಾತನಾಡಿರುತ್ತಾರೆ. ಸತ್ತವ ಎದ್ದು ಬರಲಾರ ಅನ್ನುವ ಖಾತ್ರಿಯಿಂದಲೊ ಏನೊ, ಕೆಲ ಜಾತಿ ಜನ ಒಂದಷ್ಟು ಇಲ್ಲದನ್ನ ಸೃಷ್ಟಿಸಿ ಕೂಡ ಸತ್ತವನ ಬಗ್ಗೆ ಅಪಶ್ರುತಿ ಹಾಡುತ್ತಾರೆ. ರೌಡಿಯೊಬ್ಬ ಬೀದಿ ಹೆಣವಾದರೂ ಇದೆ ಗತಿ, ಕಳ್ಳನ ಹೆಂಡತಿ ಯಾವತ್ತಿದ್ದರೂ ಮು….. . ಅನ್ನುವ ಮಾತು ಸರಾಗವಾಗಿ ನಾಲಿಗೆಗಳಲ್ಲಿ ತೇಲಾಡಿಬಿಡುತ್ತೆ. ಕುಡಿದು ಸತ್ತರೆ, ಕಳ್ಳನೊಬ್ಬ ಕೊಲೆಯಾದರೆ, ಪ್ರೀತಿಸಿ ಮಡಿದರೆ, ಅನಾಥ ಶವವಾದರೆ, ಮೈಯೆಲ್ಲ ಹುಳುಹಿಡಿದು ಮರಣ ಹೊಂದಿದರೆ, ಸತ್ತವರು ಮತ್ತು ಸತ್ತವರ ಕುಟುಂಬ, ವಿನಾಕಾರಣ ಸಂಬಂಧಿಕರು ಸೇರಿದಂತೆ, ನೆರೆಹೊರೆ ಪರಿಚಿತರಿಂದ ಇವುಗಳನ್ನ ಕೇಳಬೇಕಾಗುತ್ತದೆ. ದುರದೃಷ್ಟವೆಂದರೆ ಇಂತಹ ಪರಿಸ್ಥಿತಿಯೆನ್ನೆದುರಿಸುವುದು ಸತ್ತವನ ಕುಟುಂಬಕ್ಕೆ ಅನಿವಾರ್ಯ ಕರ್ಮ, ಸಂಬಂಧಿಕರಿಗೆ ತಪ್ಪದ ಮುಜುಗರ. ಕಳೆದು ಹೋದ ಜೀವ ಮಾತ್ರ ಎಲ್ಲದರಿಂದ, ಎಲ್ಲರಿಂದಲೂ ತಪ್ಪಿಸಿಕೊಂಡು ಶಾಂತವಾಗಿ ಮಲಗಿರುತ್ತೆ. 

ಕೆಲವೊಮ್ಮೆ ಸಾವಾದ ಮನೆಯಲ್ಲಿ ಉತ್ತಮ ಮಾತುಗಳು ಕೇಳುವುದುಂಟು, ಸತ್ತವನು ಬಡಪಾಯಿ ಆಗಿದ್ದರೆ, ಸುತ್ತಮುತ್ತಲಿನ ಪರಿಸರದಲ್ಲಿ ಒಳ್ಳೆಯವನೆಸಿದ್ದರೆ ,ಒಂದಿಷ್ಟು ಹೇಸರು ಮಾಡಿದ್ದರೆ, ಅಯ್ಯೊ ಪಾಪ ಹೀಗಾಗಬಾರದಿತ್ತು ಎಂಬ ವಿಶೆಷಣಗಳೊಂದಿಗೆ ಅನುಕಂಪ ವ್ಯಕ್ತವಾಗುತ್ತದೆ. ಮತ್ತೆ ಕೆಲ ವಿಶೇಷವ್ಯಕ್ತಿಗಳು ಸಹ  ಈ ಸಾವಿನ ವ್ಯಂಗ್ಯೋಕ್ತಿಯಿಂದ ಪಾರಾಗಿ ಸ್ವರ್ಗ ಸೇರಿಕೊಳ್ಳುತ್ತಾರೆ. ಸಾಧನೆಗೆ ತಕ್ಕ ಗೌರವವನ್ನ , ಸಾಧಕರು ಸಾವಿನ ನಂತರವೂ ಪಡೆದುಕೊಳ್ಳುವುದರಿಂದ ಅವರು ಸಹ ಟೀಕಾ ನಾಲಿಗೆಯಿಂದ ಮುಕ್ತ ಮುಕ್ತ. ಉಳಿದಂತೆ ಪಾಪ ಕಂಡ್ರಿ ಹೀಗಾಯಿತಲ್ಲಾ ಅನ್ನುವ ಪೀಠಿಕೆಯಿಂದಲೆ ಮರಣ ವಿಮರ್ಶೆಗಳು ಆರಂಭಗೊಂಡಿರುತ್ತದೆ . ಸಂಬಂಧದ ಸರಪಳಿಗಳು, ಇಂತಹ ಸಾವುಗಳು ಸಂಭವಿಸದಾಗೆಲೆಲ್ಲ, ತಮ್ಮ ಮೂಗಿನ ನೇರದ ಥಿಸೀಸನ್ನ ಮಂಡಿಸಿ ಪಕ್ಕಕ್ಕೆ ಸರಿದುಬಿಟ್ಟಿರುತ್ತವೆ. ಮತ್ತೆ ಅದರ ಗುನಗಾಟ ಆರಂಭಗೊಳ್ಳುವುದು ಮತ್ತೊಂದು ಕೆಟ್ಟ ಸಾವು ಆದಾಗಲೆ.

ಸಾವು ಎಲ್ಲರಿಗೂ ಒಂದೆಯಾಗಿರುತ್ತೆ ಅನ್ನೊದು ಸಾರ್ವಕಾಲಿಕ ಸತ್ಯ. ಸ್ವರ್ಗ ನರಕಗಳ ಕಲ್ಪನೆಯಿದೆಯಾದರೂ ಸಾವು ಮಾತ್ರ ಉಸಿರು ನಿಲ್ಲಿಸಿಯೆ ಸಾಯುತ್ತದೆ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರ ಸಾವನ್ನ ವ್ಯಾಖ್ಯಾನಿಸುತ್ತದೆ, ತನ್ನದೆ ರೀತಿಯಲ್ಲಿ ಅರ್ಥೈಯಿಸುತ್ತದೆ, ಕೆಟ್ಟ ಸಾವನ್ನ ಟೀಕಿಸುತ್ತದೆ, ಕಣ್ಣೀರ ಕರೆದು ಸಿಂಪತಿ ಮೂಡಿಸುತ್ತದೆ. ಬದುಕಿದ್ದವರ ದೃಷ್ಟಿಯಲ್ಲಿ, ನಿರ್ಯಾತ ಸಾವಿಗೊಂದು ಅರ್ಥ ಬರೋದು ಅಂತ ಆಗಲೆ ಅಂತ ಕಾಣುತ್ತೆ. ಒಳ್ಳೆಯ ಗುಣವಾಚಕಗಳನ್ನ ಕೇಳುವಷ್ಟು ಕೆಲಸವನ್ನ ಸಾವಿಗೆ ಮೊದಲು ಮಾಡಿದ್ದರೆ ಓಕೆ, ದುರ್ಬುದ್ದಿಯ ದ್ಯೋತಕನಿಗೆ ತೆಗಳಿಕೆಯೆ ಗಟ್ಟಿ. ಇನ್ನು ಸಮಾಜದಲ್ಲಿ ಸತ್ತವರ ಮನೆಯ ದುಃಖ ಹಂಚಿಕೊಳ್ಳಲು ಆಗದಿದ್ದರೂ, ಸತ್ತವನ ಸಾವಿಗೆ ಮತ್ತು ಆತ್ಮಕ್ಕೆ ಹೀಗೀಗೆ ಅಂತ ಸರ್ಟಿಪಿಕೆಟ್ ಕೊಟ್ಟು ಮಾಯವಾಗುವ ಜನರನ್ನ ಗುರುತಿಸೋದು ಕೂಡ ಕಷ್ಟ. ಅವರ ಸ್ವಭಾವ ಎಲ್ಲೆಡೆ ಒಂದೆ ರೀತಿಯಾಗಿರುವುದಿಲ್ಲ. ಅಷ್ಟೆ ಯಾಕೆ, ಏಕೆ ಸತ್ತವರ ಹೀಗಳೆಯುತ್ತಿರಿ ಅಂದರೆ, ಮೃತ್ಯು ವಿಮರ್ಶಕರಿಂದ ಉತ್ತರವು ಸಿಗುವುದಿಲ್ಲ. ಸತ್ತ ದೇಹಕ್ಕೆ ಮುಕ್ತಿ ಕಾಣಿಸೋವರೆಗೆ ಕೇಳಿಸಿಕೊಂಡು ಸುಮ್ಮನಾಗಬೇಕಷ್ಟೆ.

ಇವೆಲ್ಲದರ ಮದ್ಯೆ ಒಮ್ಮೊಮ್ಮೆ ತಮ್ಮದಲ್ಲದ ತಪ್ಪಿಗೆ ತಮ್ಮ ಸಾವನ್ನ ಹೀಗೆ ಟೀಕಾಕಾರರ ಕೈಯಲ್ಲಿ ಕೊಡುವವರ ಕಂಡಾಗ ಮನಸ್ಸಿಗೆ ಕೊಂಚ ಬೇಸರವಾಗುತ್ತದೆ. ಜೋಗದಲ್ಲಿ ಬಿದ್ದು ಸತ್ತವರದ್ದು ಇದೆ ಪರಿಸ್ಥಿತಿ, ವಿನಾಕಾರಣ ಅವರ ತಪ್ಪನ್ನ ಎಣಿಸಿ ಸತ್ತವರನ್ನ ದೋಷಿಯನ್ನಾಗಿಸಿದೆ ಈ ಬದುಕ್ಕಿದ್ದವರ ಪ್ರಪಂಚ. ಆದರೆ ಬಿದ್ದಗುಂಡಿಯಿಂದ ಎದ್ದು ಬಂದು ನಮ್ಮದು ತಪ್ಪಿಲ್ಲ ಅನ್ನೊಕೆ ಅವರಲ್ಲಿ ಪ್ರಾಣವಿಲ್ಲ. ಅಲ್ಲಿ ಸಾವಿದೆ ಅನ್ನೊದು ಅವರಿಗೂ ಗೊತ್ತಿತ್ತು ನಿಜ, ಆದರೆ ಅದು ತಮ್ಮನ್ನೆ ಎಳೆದು ಬೀಳಿಸುತ್ತೆ ಅನ್ನೊದು ಅವರಿಗೂ ಗೊತ್ತಿರಲಿಲ್ಲ, ಗೊತ್ತಿರಲು ಸಾದ್ಯವು ಇಲ್ಲ ಬಿಡಿ. ಇವೆಲ್ಲಾ ಗೊತ್ತಿದ್ದೂ ಟೀಕಿಸುತ್ತೇವೆ. ನಮ್ಮ ಬುದ್ದಿಗೆ  ಏನನ್ನಬೇಕು . ಸಿಕ್ಕ ಸಿಕ್ಕಲ್ಲಿ ಹೊಂಚುಹಾಕಿ, ಕೊರಳಿಗೆ ಬಳ್ಳಿ ಸುತ್ತಿ ಎಳೆಯುವ ವಿಧಿಯೆ, ಸ್ಪಷ್ಟವಾಗಿ ಉತ್ತರಿಸಬೇಕು .  

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
prashasti
10 years ago

🙁 ಹೀಗೆ ಕಾರಣವಿಲ್ಲದೇ ಸಾಯೋರ ಕಂಡ್ರೆ ಅಯ್ಯೋ ಅನಿಸೋದು ಬಿಟ್ರೆ ಬೇರೇನೂ ಹೇಳೋಕಾಗದೇ ಮಾತು ಮೂಕವಾಗುತ್ತೆ 🙁

amardeep.p.s.
amardeep.p.s.
10 years ago

ಸಾಯೋದಕ್ಕೂ ಒಂದು ಕಾರಣ ಅಂತ ಇರುವುದಿಲ್ಲ. ಆದರೆ, ಸಾವು ಸಂಭವಿಸಿದಾಗಲೇ ಅದಕ್ಕೆ ಕಾರಣ ಕೆಟ್ಟದ್ದೋ ಒಳ್ಳೇಯದೋ ಎಂಬುದಕ್ಕೆ ಹೆಸರಿಟ್ಟು ಸಾಗುತ್ತಾರೆ.  ಆದರೆ, ಸಾಯೋರು ತಮ್ಮ ಸಾವು ಮುಂದಿದೆ ಅಂತಾಗಲಿ, ಸಾವು ಬಯಸಿ ಕಾಯುವುದಾಗಲೀ ಮಾಡುವುದಿಲ್ಲ. ಅವರು ಸತ್ತ ಮೇಲೆ ಅವರ ಬಗ್ಗೆ ಒಂದಷ್ಟ ಒಳ್ಳೆ ಅಭಿಪ್ರಾಯ ತೋರಿಸುವುದು ದೂರದ ಮಾತು,ಕನಿಷ್ಟ ಸಹಾನುಭೂತಿಯಿಂದ ಇರಬೇಕು.

2
0
Would love your thoughts, please comment.x
()
x