ಶಾಲೆಯಲ್ಲಿನ ಶಿಕ್ಷೆಯೂ ದೌರ್ಜನ್ಯವೇ: ಡಾ. ಚೈತ್ರ ಕೆ.ಎಸ್.

ಎಂಟು ವರ್ಷದ ವರುಣ್‍ಗೆ ಎರಡು ದಿನದಿಂದ ಕೈ ಬೆರಳು ಊದಿ ಕೆಂಪಾಗಿದೆ. ಬರೆಯಲು, ತಿನ್ನಲು ಬೆರಳು ಮಡಚಲಾಗದ ಸ್ಥಿತಿ. ಕಾರಣ, ಹೋಂ ವರ್ಕ್ ಮಾಡಿಲ್ಲ ಎಂದು ಡಸ್ಟರ್‍ನಿಂದ ಟೀಚರ್ ಹೊಡೆದಿದ್ದು.

ಆರು ವರ್ಷದ ಭಾವನಾ, ಶಾಲೆ ಎಂದರೆ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾಳೆ. ಎದ್ದೊಡನೆ ಗಲಾಟೆ-ಕಿರುಚಾಟ -ಹಠ. ಅವಳ ಎಲ್ಲಾ ತೊಂದರೆಗೆ ಮೂಲ ಶಾಲೆಯಲ್ಲಿ ಪದೇ ಪದೇ `ನೋಡೋಕೆ ಕರಿತಿಮ್ಮಿ, ಓದೋದ್ರಲ್ಲೂ ದಡ್ಡಿ' ಎಂದು ಹಂಗಿಸುವ ಟೀಚರ್.

ಕೆಳಜಾತಿಗೆ ಸೇರಿದ ಹತ್ತು ವರ್ಷದ ರಂಗಿಗೆ ಶಾಲೆ ಬಿಟ್ಟ ನಂತರ ದಿನನಿತ್ಯ ಕೆಲಸ ಇದ್ದದ್ದೇ. ಜಾತಿಯ ಕಾರಣಕ್ಕೆ ಶೌಚಾಲಯ ಶುಚಿಗೊಳಿಸುವ ಜವಾಬ್ದಾರಿ ಅವಳಿಗೆ. ಪುಟ್ಟ ಕೈಗಳಿಂದ ತಿಕ್ಕಿ ತೊಳೆಯುವಾಗ ನೀರಿನೊಂದಿಗೆ ಕಣ್ಣೀರೂ ಹರಿಯುತ್ತದೆ.

ಇವೆಲ್ಲವೂ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಶಿಕ್ಷೆಯ ವಿವಿಧ ರೀತಿಗಳು. ಶಾಲೆಯಲ್ಲಿ ಮಕ್ಕಳನ್ನು ಸರಿದಾರಿಗೆ ತರಲು ಶಿಕ್ಷೆ ನೀಡುವುದು ಅತ್ಯಂತ ಸಹಜ ಎಂದು ಭಾವಿಸಿರುವ ನಮಗೆ ಅದು ಮಕ್ಕಳ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯ ಎಂಬ ಅರಿವಿದೆಯೇ? ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಏನೂ ಅರಿಯದ ಹಸಿ ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ರೂಪಿಸಿ ಸುಂದರ ಮೂರ್ತಿಯನ್ನಾಗಿಸುವ ಹೊಣೆ ಪೋಷಕರು ಹಾಗೂ ಶಿಕ್ಷಕರದ್ದು. ಭವಿಷ್ಯದ ಜೀವನ ರೂಪಿಸುವ ಪ್ರಮುಖ ಕಾಲಘಟ್ಟವಾದ ಬಾಲ್ಯದಲ್ಲಿ ಮಕ್ಕಳ ಸರ್ವಾಂಗೀಣ ಪ್ರಗತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಅತ್ಯಗತ್ಯ. ಓದು-ಬರಹದ ಜತೆ ಹೊರ ಪ್ರಪಂಚದ ಜ್ಞಾನ, ಜೀವನಕೌಶಲ್ಯ, ಸಹಬಾಳ್ವೆ ಈ ಎಲ್ಲಾ ಗುಣಗಳನ್ನು ಕಲಿಸುವ ಜ್ಞಾನಮಂದಿರ ಶಾಲೆಗಳು. ಆದರೆ ಶಿಕ್ಷಣ-ಶಿಕ್ಷೆ ಒಟ್ಟಿಗೆ ಸಾಗಬೇಕು ಎಂದು ದೃಢವಾಗಿ ನಂಬಿ-ನಡೆಯುವ ನಮ್ಮಲ್ಲಿ ನಿಜವಾದ ಶಿಕ್ಷಣ ಸಿಗುತ್ತಿದೆಯೇ ? `ದಂಡಂ ದಶಗುಣಂ' ಎಂಬ ಅಂದಕಾಲತ್ತಿಲ್ ವಿಧಾನ ದೋಷ  ಪೂರಿತವಾದದ್ದು ಎಂದು ಶಿಕ್ಷಣ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಭಾರತದಲ್ಲಿ ಸುಮಾರು ಹದಿನೇಳು ರಾಜ್ಯಗಳು ಶಾಲೆಯಲ್ಲಿ ಶಿಕ್ಷೆಯನ್ನು ನಿಷೇಧಿಸಿವೆ. ಆದರೂ ಶಾಲೆಗಳಲ್ಲಿ ಶಿಕ್ಷೆ ನಿರಂತರವಾಗಿ ಮುಂದುವರಿದಿದೆ. 

ಶಾಲೆಯಲ್ಲಿ ನಿಷೇದಿಸಲಾದ ಶಿಕ್ಷೆಯನ್ನು ಸ್ಥೂಲವಾಗಿ ಈ ರೀತಿ ವಿಂಗಡಿಸಬಹುದು;

ದೈಹಿಕ ಶಿಕ್ಷೆ :  ಮಕ್ಕಳಿಗೆ ಹೊಡೆಯುವುದು, ಹಿಂಡುವುದು, ಕೂದಲು ಎಳೆಯುವುದು, ಕಷ್ಟಕರ ಭಂಗಿಯಲ್ಲಿ ನಿಲ್ಲಿಸುವುದು, ಬಲವಂತವಾಗಿ ತಿನ್ನಬಾರದ, ತಿನ್ನಲಾಗದ ವಸ್ತು ತಿನ್ನಿಸುವುದು, ಬಿಸಿಲಲ್ಲಿ ನಿಲ್ಲಿಸುವುದು, ಒಂಟಿಯಾಗಿ ಕೂಡಿ ಹಾಕುವುದು.

ಮಾನಸಿಕ ಶೋಷಣೆ : ಮಕ್ಕಳಿಗೆ ಕೆಟ್ಟ /ಅಡ್ಡ ಹೆಸರಿನ ಬಳಕೆ,  ಜಾತಿ ವಿಷಯಕ್ಕೆ ಹೀಯಾಳಿಕೆ,ದೈಹಿಕ ನ್ಯೂನತೆ ಇರುವ ಮಕ್ಕಳಿಗೆ ಅಪಮಾನ ಅಥವಾ ಪಕ್ಷಪಾತ ಮಾಡುವುದು, ಜಾತಿ/ಲಿಂಗ/ಆರ್ಥಿಕ ಸ್ಥಿತಿ ಗತಿಗಳನ್ನು ಆಧರಿಸಿ ತಾರತಮ್ಯ ಮಾಡುವುದು, ಪ್ರಜ್ಞಾಪೂರ್ವಕವಾಗಿ ಅಸಡ್ಡೆ -ಅನಾದರ ತೋರುವುದು, ದೈಹಿಕ ನ್ಯೂನತೆಯುಳ್ಳ ಮಕ್ಕಳನ್ನು ಕಳಂಕಿತರಂತೆ ಕಾಣುವುದು.

ಪರಿಣಾಮ : ಬೆಳೆಯುವ ಮಕ್ಕಳ ದೇಹ ಮತ್ತು ಮನಸ್ಸು ಅತ್ಯಂತ ಸೂಕ್ಷ್ಮವಾದದ್ದು. ಶಿಕ್ಷಣದಲ್ಲಿ ಶಿಸ್ತು ಬೇಕು, ಶಿಕ್ಷೆಯಲ್ಲ. ಏಕೆಂದರೆ ಈ ಬಗ್ಗೆ ಜಗತ್ತಿನಾದ್ಯಂತ ನಡೆದ ಚರ್ಚೆ-ಸಂಶೋಧನೆಗಳಿಂದ ಶಿಕ್ಷೆಯಿಂದ ಹಾನಿಯೇ ಹೆಚ್ಚು ಎಂದು ಸಾಬೀತಾಗಿದೆ. ದೈಹಿಕ ಶಿಕ್ಷೆ ದೇಹದ ಅಂಗಾಂಗಗಳ ಮೇಲೆ ಪ್ರಭಾವ ಬೀರಿದರೆ ಮಾನಸಿಕ ಶಿಕ್ಷೆ ಮೃದು ಮನಸ್ಸನ್ನು ಘಾಸಿಗೊಳಿಸುತ್ತವೆ. ಶಿಕ್ಷೆಯಿಂದ ಉಂಟಾದ ಆಘಾತ-ನೋವಿನಿಂದ ಮಾನಸಿಕ ಸಮಸ್ಯೆಗಳು ಸರ್ವೇಸಾಮಾನ್ಯ. ಸತತವಾಗಿ ಶಿಕ್ಷೆ ಅನುಭವಿಸಿದ ಮಕ್ಕಳಲ್ಲಿ ವರ್ತನಾ ದೋಷಗಳು, ಆಕ್ರಮಣಶೀಲತೆ, ಖಿನ್ನತೆ, ಒಂಟಿತನ ಮುಂತಾದ ತೊಂದರೆಗಳು ಕಾಣಿಸಬಹುದು. ಅನೇಕ ಬಾರಿ ಅಪಮಾನದಿಂದ ನೊಂದು ಆತ್ಮಹತ್ಯೆಗೆ ಯತ್ನ, ಮನೆ ಬಿಟ್ಟು ಓಡಿಹೋಗುವುದು ಇವೂ ಮಕ್ಕಳಲ್ಲಿ ಕಂಡುಬರುತ್ತವೆ. ಅದೇ ರೀತಿ ಅನುಕರಣಾಶೀಲರಾದ ಮಕ್ಕಳು ಈ ರೀತಿ ಶಿಕ್ಷೆ ನೀಡುವುದು ಸರಿಯಾದ ವರ್ತನೆ ಎಂದು ತಿಳಿದು ಶಿಕ್ಷಕರಿಂದ ಕಲಿತು ತಾವೂ ಪ್ರಯೋಗಿಸಬಹುದು. 6-14 ವರ್ಷಗಳ ಮಕ್ಕಳಿಗೆ `ಉಚಿತ ಮತ್ತು ಕಡ್ಡಾಯ ಶಿಕ್ಷಣ' ಅವರ ಹಕ್ಕು. ಹಾಗೆಯೇ ಮಕ್ಕಳ ಮೇಲಿನ ದೈಹಿಕ ಮತ್ತು ಮಾನಸಿಕ ಶಿಕ್ಷೆ ಶಿಕ್ಷಾರ್ಹ ಅಪರಾಧ. ಆದರೆ ಸರಿ-ತಪ್ಪು ತಿಳಿಯದ ಮಕ್ಕಳ ಮುಗ್ಧತೆ, ಸಂವಹನದ ಕೊರತೆ, ಹೆದರಿಕೆ, ಪೋಷಕರ  ನಿರ್ಲಕ್ಷ್ಯ, ಕಾನೂನು/ಹಕ್ಕುಗಳ ಬಗ್ಗೆ ಅಜ್ಞಾನ ಇವೆಲ್ಲವೂ ಶಾಲೆಯ ಶಿಕ್ಷೆಯನ್ನು ಗಂಭೀರವಾಗಿ ಪರಿಗಣಿಸದಿರಲು ಮುಖ್ಯ ಕಾರಣಗಳು. 

ಸರ್ಕಾರ, ಕಾನೂನು -ಕಾಯಿದೆಗಳ ಮೂಲಕ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಹಾಗೂ ರಾಜ್ಯ ಆಯೋಗಗಳ ಮುಖಾಂತರ ಕಾರ್ಯಪ್ರವೃತ್ತವಾಗಿದೆ. ಆದರೂ ಪ್ರಾಯೋಗಿಕವಾಗಿ ಯಶಸ್ವಿಯಾಗಲು ಪಾಲಿಸಬಹುದಾದ ಕೆಲವು ಸಲಹೆಗಳು. ಪೋಷಕರು -ಶಿಕ್ಷಕರು-ಮಕ್ಕಳ ನಡುವೆ ನೇರ ಸಂಪರ್ಕ, ಮುಕ್ತ ಮಾತುಕತೆ ಏರ್ಪಾಡು ಮಾಡುವುದು. 

• ಶಿಕ್ಷಕರಿಗೆ ಮಕ್ಕಳನ್ನು ನಿಭಾಯಿಸುವಲ್ಲಿ ಬಳಸಬಹುದಾದ ವಿವಿಧ ವಿಧಾನಗಳ ಬಳಕೆಯ ಅರಿವು ಮೂಡಿಸುವುದು. 

• ಮಕ್ಕಳ ಕಲಿಕೆ -ನಡವಳಿಕೆ ಬಗ್ಗೆ ಶಿಕ್ಷಕರಿಗೆ ವಿಶೇಷ ತರಬೇತಿ ನೀಡುವುದು. ಶಾಲೆಯಲ್ಲಿ ಆಪ್ತಸಮಾಲೋಚಕರ ನೇಮಕಾತಿ ಮಾಡುವುದು. 

• ಕಾನೂನು ತಜ್ಞರು, ಶಿಕ್ಷಣ ತಜ್ಞರಿಂದ ಶಾಲೆಯಲ್ಲಿ ಕಾರ್ಯಾಗಾರ ನಡೆಸಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡುವುದು. 

ಮಕ್ಕಳು ಕುಟುಂಬ ಮತ್ತು ಸಮಾಜದ ಸಂಪತ್ತು. `ಮುಂದಿನ ಪ್ರಜೆ'ಗಳನ್ನು ರೂಪಿಸುವ ಗುರುತರ ಹೊಣೆ ನಿರ್ವಹಿಸುವಾಗ ಪ್ರೀತಿ-ನಂಬಿಕೆಯ ಜತೆ ಸಹನೆ-ಎಚ್ಚರ ಬೇಕೇ ಬೇಕು. ಸರ್ಕಾರದೊಂದಿಗೆ ಪೋಷಕರು  ಹಾಗೂ ಶಿಕ್ಷಕರು ಒಗ್ಗಟ್ಟಾಗಿ ಶ್ರಮಿಸಿದಾಗ ಮಕ್ಕಳ ಹಕ್ಕುಗಳು ಯಶಸ್ವಿಯಾಗಿ ದೃಢ ದೇಹ-ಸ್ವಸ್ಥ ಮನಸ್ಸಿನ ಆರೋಗ್ಯವಂತ ಪ್ರಜೆಗಳನ್ನು ರೂಪಿಸಲು ಸಾಧ್ಯ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Manjunatha g sonu
Manjunatha g sonu
9 years ago

ಮಕ್ಕಳ ಮನೋವಿಜ್ಞಾನದ ಚೈಲ್ಡ್ ಸೈಕಾಲಜಿ ಕನಿಷ್ಟ ಅರಿವಿದವರು ಶಿಕ್ಷಕ/ಕಿಯರಾಗಿದ್ದಾರೆ ಅದು ವಿಪರ್ಯಾಸ

1
0
Would love your thoughts, please comment.x
()
x