ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸುವಲ್ಲಿ ನಮ್ಮದಿರಲಿ ಜವಾಬ್ದಾರಿ !: ವಿದ್ಯಾಶಂಕರ ಹರಪನಹಳ್ಳಿ

"ಅಪ್ಪಾ! ರೆಡ್ ಸಿಗ್ನಲ್… ನೀ ಗಾಡಿ ನಿಲ್ಸ್ಲೇ ಇಲ್ಲಾ!", "ಅಪ್ಪಾ ರಸ್ತೆ ಮಧ್ಯದಲ್ಲಿ ಕ್ರಾಸ್ ಮಾಡಬೇಡ… ಝಿಬ್ರಾ ಕ್ರಾಸಿಂಗ್ ಬಳಸಬೇಕು…", "ಅಮ್ಮಾ! ಕಸ ಪಕ್ಕದ ಖಾಲಿ ಸೈಟಿಗೆ ಹಾಕಬಾರದು, ನಮ್ ಟೀಚರ್ ಹೇಳಿದ್ದಾರೆ ಡಸ್ಟ್ ಬಿನ್ನಲ್ಲಿ ಹಾಕು!", "ಟಿವಿ ನೋಡಬೇಡ ಅಂತಿರಾ, ಮತ್ತೆ ನೀವು ಮಾತ್ರ ನೋಡಬಹುದಾ?", "ಅಪ್ಪಾ ಹೆಲ್ಮೆಟ್ ಹಾಕ್ಕೋ… ಪೊಲೀಸ್ ಹಿಡಿತಾರೆ!"… ಹೀಗೆ ಮಕ್ಕಳ ಪ್ರಶ್ನೆಗಳು ಮುಗಿಯುವುದೇ ಇಲ್ಲ. ಅವರ ಬಹುತೇಕ ಪ್ರಶ್ನೆಗಳು ದೊಡ್ಡವರ, ತಂದೆತಾಯಂದಿರ ನಿರ್ಲಕ್ಷಕ್ಕೆ ಒಳಗಾಗುವುದೇ ಹೆಚ್ಚು.

ವಸ್ತುಸ್ಥಿತಿ ಹೀಗಿರುವಾಗ ಮಕ್ಕಳಲ್ಲಿ ಸಾಮಾಜಿಕ ಅರಿವು ಮತ್ತು ಜವಾಬ್ದಾರಿ ಮೂಡಿಸುವುದು ಹೇಗೆ? ಮಕ್ಕಳಲ್ಲಿ ಯಾವುದೇ ವಿಷಯದ ಬಗ್ಗೆ ಅರಿವು ಮತ್ತು ಜವಾಬ್ದಾರಿ ಮೂಡಿಸುವ ಕೆಲಸ ಬಹಳ ಕಷ್ಟವೇನಲ್ಲ. ಆದರೆ ನಮ್ಮ ನಡುವಳಿಕೆಯಲ್ಲಿ ನಾವು ಮೂಡಿಸುವ ಅರಿವಿನ ಬಗ್ಗೆ ನಿಷ್ಠುರವಾಗಿರುವುದು, ಬದ್ಧರಾಗಿರುವುದು ಕಷ್ಟ ! ನಮ್ಮ ಬದ್ಧತೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಮಕ್ಕಳು ಥಟ್ಟನೆ ಗಮನಿಸುತ್ತಾರೆ, ಗುರುತಿಸುತ್ತಾರೆ ಮತ್ತು ಮುಖ್ಯವಾಗಿ ಪ್ರಶ್ನಿಸುತ್ತಾರೆ. ಮಕ್ಕಳು ಪ್ರಶ್ನಿಸಿದಾಗ ನೀವು ಉತ್ತರಿಸದಿದ್ದರೆ, ಸರಿಯಾದ ಸಮಾಧಾನ ಹೇಳದೆ ಹೋದರೆ ಮಕ್ಕಳು ಗೊಂದಲಗೊಳ್ಳುತ್ತಾರೆ. ಹದಿವಯಸ್ಸಿಗೆ ಬರುತ್ತಿದಂತೆ ಪ್ರತಿಭಟಿಸುತ್ತಾರೆ, ತಿರುಗಿ ಬೀಳುತ್ತಾರೆ. "ಅಯ್ಯೋ ಈ ಟೀನೇಜ್ ಮಕ್ಕಳ ನಿಭಾಯಿಸುವುದು ಕಷ್ಟ ಕಣ್ರೀ…" ಇದು ಬಹುತೇಕ ತಂದೆತಾಯಂದಿರ ದೂರು. ಮಕ್ಕಳಿಗೆ ಸಾಮಾಜಿಕ ಅರಿವು ಮತ್ತು ಜವಾಬ್ದಾರಿ ಮೂಡಿಸುವ ಮುನ್ನ ತಂದೆತಾಯಂದಿರು ಮಕ್ಕಳಿಗೆ 'ಉತ್ತಮ ರೋಲ್ ಮಾಡೆಲ್' ಆಗುವುದು ಅವಶ್ಯಕ.  ಮನೆಯೇ ಮೊದಲ ಪಾಠಶಾಲೆ. ನಮ್ಮ ನಡುವಳಿಕೆಯಲ್ಲಿ, ಮಾತಿನಲ್ಲಿ ವ್ಯತ್ಯಾಸವಿದ್ದರೆ ಮಕ್ಕಳು ಬಹುಬೇಗ ಪತ್ತೆ ಹಚ್ಚುತ್ತಾರೆ. 'ಈ ಊರ ಉಸಾಬರಿ ನಮಗೇಕೆ..?!' ಎಂಬ ಉಡಾಫೆಯ ನಡುವಳಿಕೆ ನಮ್ಮಲ್ಲಿದ್ದರೆ, ಅದನ್ನೇ ಅವರು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುತ್ತಾರೆ. ಹಾಗಾಗಿ ಮಕ್ಕಳಿಗಿಂತ ಪೋಷಕರಿಗೆ ಹೆಚ್ಚಿನ ಶಿಕ್ಷಣ ಮತ್ತು ಅರಿವು ಮೂಡಿಸುವುದು ಅಗತ್ಯ.

ಪೋಷಕರಿಗೆ ಕೆಲವು ಸಲಹೆಗಳು:    
೧. ಮಕ್ಕಳಿಗೆ ಪರಿಸರ, ಸಮುದಾಯ, ಸಮಾಜ ಮತ್ತು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯದ ಬಗ್ಗೆ  ಕತೆಗಳ ಮೂಲಕ, ನಿಮ್ಮ ಕೃತಿಗಳ ಮೂಲಕ ಅರಿವು ಮೂಡಿಸಿ.

೨. ನೀವು ಭಾಗವಹಿಸುವ ಸಮಾಜ ಸೇವೆಯ ಕೆಲಸದಲ್ಲಿ ಅವರನ್ನು ತೊಡಗಿಸಿ. (ಯಾವುದೇ ಸಾಮಾಜಿಕ ಕೆಲಸದಲ್ಲಿ ಕ್ರಿಯಾಶೀಲವಾಗಿಲ್ಲದಿದ್ದರೆ, ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವ ಕಾರ್ಯದಲ್ಲಿ ತೊಡಗಿಸಿಕೊಳ್ಳಿ)

೩. ಸಮಾಜದ ಅಭಾಗ್ಯತರ ಬಗ್ಗೆ ಸೌಜನ್ಯ ಮತ್ತು ಕರುಣೆಯಿಂದ ವರ್ತಿಸಿ, ನಿಮ್ಮನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಕಲಿಯುತ್ತಿಲ್ಲವಾದರೆ ಸಹನೆಯಿಂದ ಹೇಳಿಕೊಡಿ.

೪. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಹೇಗೆ ಎಲ್ಲರ ಜವಾಬ್ದಾರಿ ಮತ್ತು ಎಲ್ಲರಿಗೂ ಪ್ರಯೋಜನಕರ ಎಂದು ತಿಳಿಸಿ ಹೇಳಿ.

೫. ಸಮಾಜದ ಒಳಿತಿಗೆ ದುಡಿದ ಮಹನೀಯರ, ಮಹಿಳೆಯರ ಕತೆಗಳನ್ನು, ಘಟನೆಗಳನ್ನು ಮಕ್ಕಳಿಗೆ ತಿಳಿಸಿ ಕೊಡಿ.

೬. ಮಕ್ಕಳ ಮುಂದೆ ನಿಷೇದಾತ್ಮಕ ಧೋರಣೆಯನ್ನೋ ಅಥವಾ ನಿರಾಸಾದಾಯಕ ಮನೋಭಾವವನ್ನು ಪ್ರದರ್ಶಿಸಬೇಡಿ ಮತ್ತು ಪ್ರೋತ್ಸಹಿಸಬೇಡಿ.

೭. ಮಕ್ಕಳಿಗೆ ಸಣ್ಣ ವಯಸ್ಸಿಂದಲೇ ಹಂಚಿಕೊಳ್ಳುವ (ಆಟಿಕೆಗಳನ್ನ, ತಿಂಡಿ ತಿನಿಸುಗಳನ್ನ, ಪುಸ್ತಕಗಳನ್ನ ಇತ್ಯಾದಿ ) ಸ್ವಭಾವ ರೂಪಿಸಿ ಮತ್ತು ಪ್ರೋತ್ಸಾಹಿಸಿ.

೮. ಬೇರೆ ಭಾಷೆ, ದೇಶ, ಧರ್ಮ, ಜಾತಿ, ಲಿಂಗಬೇಧ, ಜೀವನ ಪದ್ಧತಿ, ಆಹಾರ ಪದ್ಧತಿ ಬಗ್ಗೆ ಅಸಹನೆ, ನಿಷೇದಾತ್ಮಕ ಧೋರಣೆಯನ್ನು ರೂಪಿಸಿಬೇಡಿ. ಸಾಧ್ಯವಾದಷ್ಟು ಪರಧರ್ಮ ಸಹಿಷ್ಣತೆ, ಸಹನೆ, ಗೌರವ, ತಿಳುವಳಿಕೆ ಹೇಳಿಕೊಡಿ.

೯. ಸತ್ಯವನ್ನು ಹೇಳುವ, ಆಚಾರ-ವಿಚಾರದಲ್ಲಿ ಪಾರದರ್ಶಕತೆ, ನಮ್ಮ ವರ್ತನೆಯ ಬಗ್ಗೆ ಜವಾಬ್ದಾರಿ ಹೊರುವ ಬಗ್ಗೆ ಹೇಳಿಕೊಡಿ. ಹೇಳಿಕೊಡಲು ಸುಲಭ ಮಾರ್ಗವೆಂದರೆ ನಿಮ್ಮಲ್ಲಿ ಅಳವಡಿಸಿಕೊಂಡು ಅನುಕರಣೀಯ ವ್ಯಕ್ತಿಯಾಗಿ. ಮಕ್ಕಳು ಅನುಕರಣೆಯಿಂದಲೇ ಕಲಿಯುವುದು ಹೆಚ್ಚು.

೧೦. ಶಿಸ್ತುಬದ್ಧ ಜೀವನವನ್ನು ರೂಪಿಸಿ ಉದಾಹರಣೆಗೆ : ಊಟಕ್ಕೆ ಮುನ್ನ ಕೈ ತೊಳೆಯುವುದು, ಮನೆಯ ಚಿಕ್ಕ ಪುಟ್ಟ ಕೆಲಸ ಮಾಡುವುದು, ದಿನಕ್ಕೆ ಎರಡು ಸಾರಿ ಹಲ್ಲುಜ್ಜುವುದು, ಶುಚಿತ್ವ, ಕೊಳೆಯಾದ ವಸ್ತುಗಳನ್ನ, ಬಟ್ಟೆಗಳನ್ನ ಅದರದೇ ಆದ ಜಾಗದಲ್ಲಿ ಹಾಕುವುದು, ತಮ್ಮ ಕೋಣೆಯನ್ನು ಅವರೇ (ನಿಮ್ಮ ಮೇಲ್ವಿಚಾರಣೆಯಲ್ಲಿ) ಶುಚಿಗೊಳಿಸುವುದು. ಚಿಕ್ಕ ವಯಸ್ಸಿನಲ್ಲಿ ರೂಢಿಸಿಕೊಂಡಿದ್ದು ಕೊನೆತನಕ ಅವರ ವ್ಯಕ್ತಿತ್ವದ ಭಾಗವಾಗಿರುತ್ತದೆ ಮತ್ತು ಅವರನ್ನು ಕಾಪಾಡುತ್ತದೆ.  

ಒಟ್ಟಿನಲ್ಲಿ ಮಕ್ಕಳು ನಿಮ್ಮೊಂದಿಗೆ ಬೆಳೆಯುತ್ತಾರೆ, ಈ ವಿಷಯವನ್ನು ಸದಾ ನೆನಪಿಡಿ.  ನಿಮ್ಮ  ನಡುವಳಿಕೆಯೇ ಅವರ ಭವಿಷ್ಯದ ವ್ಯಕ್ತಿತ್ವ ರೂಪಿಸುತ್ತದೆ. ಕೊನೆತನಕ ನಾವು ಮಕ್ಕಳ ಜೊತೆಯಲ್ಲಿಯೇ ಇರಲು ಸಾಧ್ಯವಿಲ್ಲ. ಎಲ್ಲಾ ಸಂದರ್ಭಗಳಲ್ಲೂ ಅವರುಗಳನ್ನು ನಾವೇ ಖುದ್ದಾಗಿ ಕಾಪಾಡಲು ಆಗುವುದಿಲ್ಲ. ಆದರೆ ನೀವು ರೂಪಿಸುವ ವ್ಯಕ್ತಿತ್ವ, ಮೂಡಿಸುವ ಅರಿವು ಮತ್ತು ಸಾಮಾಜಿಕ ಜವಾಬ್ದಾರಿ ಅವರನ್ನು ಉನ್ನತಿಯೆಡೆಗೆ ಕರೆದೊಯ್ಯಬಲ್ಲದು. ಮುಖ್ಯವಾಗಿ ಮಕ್ಕಳನ್ನು ಉಗ್ರವಾದದಿಂದ, ಕೇಡುಕಿನಿಂದ ಕಾಪಾಡಬಲ್ಲದು. ಪ್ರಖ್ಯಾತ  ಮಕ್ಕಳ ತಜ್ಞನೊಬ್ಬ ಹೇಳಿದಂತೆ 'ಮಕ್ಕಳಿಗಿಂತ ತಂದೆತಾಯಂದಿರಿಗೆ  ಶಿಕ್ಷಣದ ಹೆಚ್ಚಿನ ಅವಶ್ಯಕತೆಯಿದೆ. ಶಿಕ್ಷಣವೆಂದರೆ ಬರೀ ಅಕ್ಷರ ಜ್ಞಾನವಲ್ಲ'. ನಿಜವಲ್ಲವೇ? ನಾವು, ಪೋಷಕರು ಕಲಿತರೆ ನಮ್ಮ ಮಕ್ಕಳಿಗೆ ನಾವು ಹೇಳಿಕೊಡಬಹುದು. ಮಕ್ಕಳ ಜೊತೆ ನಿಮ್ಮ ಬೆಳವಣಿಗೆಯಾಗಲಿ. ಇನ್ನು ತಡವೇಕೆ? ಶುಭಾರಂಭವಾಗಲಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
amardeep.p.s.
amardeep.p.s.
9 years ago

ಚೊಕ್ಕ ಸಲಹೆಗಳು…..ಚೆನ್ನಾಗಿವೆ ಸರ್…

1
0
Would love your thoughts, please comment.x
()
x