ಮಂದಾರ್ತಿ ಎಂದಾಕ್ಷಣ ಕುಂದ ಮಂದಾರಾದಿಗಳ ಗಂಧ ಮಕರಂದವನ್ನು ಆಗ್ರಾಣಿಸುವ ಆಸ್ವಾದಿಸುವ ವೃಂದಾರಕ ವೃಂದವೇ ಬಂದು ನೆಲೆಸಿರುವ ಪುಣ್ಯಭೂಮಿಯೇ ಮಂದಾರ್ತಿ ಎಂದು ಯಕ್ಷಗಾನದಲ್ಲಿ ಕೇಳಿದ ಮಾತು ನಮಗೆ ನೆನಪಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಹಿಂದೂ ದೇವಳಗಳಲ್ಲಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವು ಬಹಳ ವಿಶಿಷ್ಟವಾದುದು. ಸರ್ವಮುನಿಜನ ಪೂಜಿತೆ, ಸಂಕಷ್ಟ ಕಳೆಯುವ ಅಂಬಿಕೆ ಶಕ್ತಿಸ್ವರೂಪಿಣಿ ಸನ್ನದಿಗೆ ರಾಜ್ಯ ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಶ್ರೀಕ್ಷೇತ್ರ ಮಂದಾರ್ತಿಗೆ ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ. ನಮ್ಮ ಕರ್ನಾಟಕದ ರಮ್ಯಮನೋಹರ ತಾಣ ಮಂದಾರ್ತಿಯ ಕಿರು ಪರಿಚಯ ಈ ಲೇಖನದ ಉದ್ಧೇಶ.
ಮಂದಾರ್ತಿಯ ಕ್ಷೇತ್ರ ಮಹಾತ್ಮೆ
ನಾಗಲೋಕದ ಶಂಖಚೂಡನು ಪರಮೇಶ್ವರನನ್ನು ಕುರಿತು ಘೋರ ತಪವ ಮಾಡಲು, ತ್ರಿನೇತ್ರಧಾರಿಯು ಭಕ್ತ ಶಂಖಚೂಡನ ತಪಸಿಗೆ ಮೆಚ್ಚಿ ಪ್ರತ್ಯಕ್ಷನಾದನು. ಶಂಖಚೂಡನ ಇಚ್ಛೆಯೇನೆಂದು ಶಂಕರ ಕೇಳಲು, “ಶಂಕರಾ ಭಸ್ಮಾಂಬರಧಾರಿಯೇ ಹಲವು ವರ್ಷಗಳಿಂದ ಮಕ್ಕಳಿಲ್ಲದ ಕೊರಗಿನಲ್ಲಿರುವೆ. ನನಗೆ ಮಕ್ಕಳನ್ನು ಅನುಗ್ರಹಿಸು ದೇವಾ” ಎಂದು ಶಂಖಚೂಡ ತನ್ನ ಮನದಿಂಗಿತವನ್ನು ತಿಳಿಸಿದನು. ಆಗ ಶಿವನು, “ಭಕ್ತ ಶಂಖಚೂಡಾ ನನಗೆ ಸಂತೋಷವಾಯಿತು. ನೀನು ನನ್ನ ಭಕ್ತರಲ್ಲೇ ಶ್ರೇಷ್ಠನಾಗಿದ್ದಿಯಾ. ನೀನು ನಾಗಲೋಕಕ್ಕೇ ದೀಶನಾಗಿದ್ದಿಯಾ. ಭೂಲೋಕದಲ್ಲಿ ನಿನ್ನನ್ನು ಪೂಜಿಸಿದ ಮಾನವರಿಗೆ ಸಂತಾನ-ಸಂಪತ್ತನ್ನು ಕೊಡುವ ಯೋಗ್ಯತೆ ನಿನಗುಂಟು. ನಿನಗೆ ಸುತರ ಯೋಗವಿಲ್ಲವಾದರೂ ನಾನು ನಿನಗೆ ಐದು ಜನ ಹೆಣ್ಣು ಮಕ್ಕಳನ್ನು ಕರುಣಿಸುವೆ.” ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿಯರೆಂಬರೈವರೇ ಶಿವನು ಕರುಣಿಸಿದ ಆ ಹೆಣ್ಣು ಮಕ್ಕಳು. ಈ ಐವರೂ ರಾಜಕುವರಿಯರು ಬೆಳೆದು ದೊಡ್ಡವರಾದ ಮೇಲೆ ಕೈಲಾಸದಲ್ಲಿರುವ ಶಿವನ ಸುಪುತ್ರನಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ವಿವಾಹವಾಗಲು ಬಯಸಿದರು. ಈ ಬಯಕೆಯಂತೆ ಅವರು ಕೈಲಾಸಗಿರಿ ಕಡೆಗೆ ಪ್ರಯಾಣ ಬೆಳೆಸಿದರು. ಕೈಲಾಸ ಪರ್ವತಕ್ಕೆ ಬಂದಾಗ ಇವರನ್ನು ನಂದಿಯು ತಡೆದನು. ಈ ಐವರ ಬಯಕೆಯನ್ನರಿತ ನಂದಿಯು, “ ನಿಮ್ಮ ಬಯಕೆ ಫಲಿಸದೇ ಹೋಗಲಿ. ನೀವು ಐದು ಜನ ಅಕ್ಕತಂಗಿಯರು ಒಟ್ಟಾಗಿ ಇದ್ದವರು, ಇನ್ಮುಂದೆ ಒಟ್ಟಾಗಿ ಇರಕೂಡದು. ಭೂಲೋಕದಲ್ಲಿ ಬೇರೆ ಬೇರೆ ಸ್ಥಳದಲ್ಲಿ ಸರ್ಪಗಳಾಗಿ ಬಿದ್ದಿರಿ.” ಎಂದು ಶಾಪ ಕೊಟ್ಟನು. ನಂದಿಯಿಂದ ಶಾಪಗ್ರಸ್ಥರಾದ ಈ ಐವರೂ ಸರ್ಪಕನ್ನಿಕೆಯರು ಸರ್ಪಗಳಾಗಿ ಭುವಿಗೆ ಬಿದ್ದರು. ಅರಣ್ಯದ ದಳ್ಳುರಿಯಲ್ಲಿ ಈ ಐದೂ ನಾಗಸರ್ಪಗಳು ನರಕಯಾತನೆ ಅನುಭವಿಸುತ್ತಿರಲು ಆ ಪಶ್ಚಿಮ ಘಟ್ಟದ ಸಹ್ಯಾದ್ರಿಯಲ್ಲಿ ತಿರುಗಾಡುತ್ತಿದ್ದ ವ್ಯಾಘ್ರಪಾದ ಮಹರ್ಷಿಗಳಿಂದ ಮರುಶಾಪಕ್ಕೆ ಗುರಿಯಾದರು.
ಮಹರ್ಷಿಗಳು ತಮ್ಮ ಜ್ಞಾನದೃಷ್ಟಿಯಿಂದ ಈ ನಾಗಸರ್ಪಗಳ ವೃತ್ತಾಂತವನ್ನರಿತ ಇವರು ನಾಗಸರ್ಪಗಳ ಶಾಪ ವಿಮೋಚನೆಯು ಮುಂದೊಂದು ದಿನ ರಾಜ್ಯವನ್ನು ಕಳೆದುಕೊಂಡ ನೃಪನೋರ್ವನಿಂದಾಗುವುದೆಂದು ಅಭಯ ನೀಡಿದರು. ನಂತರದಲ್ಲಿ ಆವಂತಿಯ ರಾಜ ದೇವವರ್ಮನು ವೈರಿಗಳಿಂದ ತನ್ನ ರಾಜ್ಯವನ್ನು ಕಳೆದುಕೊಂಡು ಸಾಮಾನ್ಯನಂತೆ ಸಹ್ಯಾದ್ರಿಯ ಬೆಟ್ಟದಲ್ಲಿ ನಡೆದು ಹೊರಟಿದ್ದ. ಆಗ ಯಾರದೋ ಆರ್ತಸ್ವರ ಕೇಳಿ ನಾಗಸರ್ಪಗಳಿದ್ದ ಕಡೆಗೆ ಬಂದನು. ಈ ನಾಗಸರ್ಪಗಳನ್ನು ನೋಡಿದ ದೇವವರ್ಮನು ತನ್ನಲ್ಲಿರುವ ವಸ್ತ್ರದಿಂದ ಆ ದಳ್ಳುರಿಯನ್ನು ನಂದಿಸಿ ನಾಗಗಳನ್ನು ವಸ್ತ್ರದಿಂದ ಸುತ್ತಿ ಎತ್ತಿಕೊಂಡು ಮುಂದೆ ಹೊರಟ. ನಂತರ ಈ ನಾಗಗಳು ವಸ್ತ್ರದಿಂದ ಹೊರಬಂದು ಗೆದ್ದಲು ಹುತ್ತವಿರುವ ಬೆಟ್ಟಗಳನ್ನು ಅರಸಿ ಹೊರಟವು. ದೇವರತಿ ಸೇರಿಕೊಂಡ ಪ್ರದೇಶ ಅರಸಿಕಾನು/ಅರಸಮ್ಮ ಕಾನು ಎಂಬುದಾಯಿತು. ನಾಗರತಿ ಸೇರಿಕೊಂಡ ಪ್ರದೇಶ ನಾಗೇರ್ತಿಕಾನು, ಚಾರುರತಿ ಸೇರಿಕೊಂಡ ಪ್ರದೇಶ ಚಾರುಹಾಡಿ/ಚೋರಾಡಿ ಎಂದು ಕರೆಸಿಕೊಂಡವು. ಮಂದರತಿ ಬಂದು ಸೇರಿದ ಅರಣ್ಯಪ್ರದೇಶವು ಮಂದಾರ್ತಿ ಎಂದು ನೀಲರತಿ ಸೇರದ ಪ್ರದೇಶವು ನೀಲಾವರವೆಂದು ಪ್ರಸಿದ್ಧಿಯಾದವು.
ಈ ನಾಗಗಳನ್ನು ರಕ್ಷಿಸಿದ ದೇವವರ್ಮನಿಗೆ, “ಹೇಮಾದ್ರಿಯ ರಾಜಾದಿತ್ಯನ ಮಗಳು ಜಲಜಾಕ್ಷಿಯನ್ನು ನಾವು ಕಚ್ಚುತ್ತೇವೆ, ನೀನು ವಿಷವೈದ್ಯನಾಗಿ ಹೋಗಿ ಅವಳನ್ನು ನಮ್ಮ ಅನುಗ್ರಹದಿಂದ ರಕ್ಷಿಸು.” ಎಂದು ಈ ಐದು ನಾಗಗಳು ಕನಸಿನಲ್ಲಿ ತಿಳಿಸಿದವು. ನಾಗಕನ್ಯೆಯರ ಅಣತಿಯಂತೆ ದೇವವರ್ಮನು ಸರ್ಪಕಚ್ಚಿದ ಜಲಜಾಕ್ಷಿಗೆ ಔಷದ ನೀಡಿ ಗುಣಮುಖಳಾಗುವಂತೆ ಮಾಡಿದನು. ಆಗ ರಾಜಾದಿತ್ಯನು ಇದರಿಂದ ಸಂತುಷ್ಟನಾಗಿ ತನ್ನ ಮಗಳನ್ನು ದೇವವರ್ಮನಿಗೆ ಕೊಟ್ಟು ವಿವಾಹಮಾಡಿ ತನ್ನ ರಾಜ್ಯವನ್ನೇ ಅವನಿಗೆ ಧಾರೆಯೆರೆದು ಕೊಡುತ್ತಾನೆ. ಹೀಗೆ ನಾಗಸರ್ಪಗಳನ್ನು ರಕ್ಷಿಸಿದ್ದಕ್ಕಾಗಿ ರಾಜ್ಯ ಕಳೆದುಕೊಂಡು ಸಾಮಾನ್ಯನಾಗಿದ್ದ ದೇವವರ್ಮನು ಮತ್ತೆ ರಾಜನಾಗಿ ನಾಗಸರ್ಪಗಳಿಂದ ಅನುಗ್ರಹ ಪಡೆಯುತ್ತಾನೆ. ರಾಜಾದಿತ್ಯನ ನೆರವಿನಿಂದ ಕಳೆದುಕೊಂಡ ಆವಂತಿಯನ್ನೂ ಪಡೆಯುತ್ತಾನೆ.
ಮುಂದೆ ಮಹಿಷಾಕ್ಯನೆಂಬ ದೈತ್ಯನು ಜಲಜಾಕ್ಷಿಯನ್ನು ನೋಡಿ ಮೋಹಿತನಾಗಿ ಅವಳನ್ನು ವಿವಾಹವಾಗುವಂತೆ ಒತ್ತಾಯಿಸುತ್ತಾನೆ. ಈ ಮಹಿಷಾಕ್ಯನು ಬೇಡರ ಕನ್ಯೆಯಾದ ಮಾಲಿನಿಗೆ ವ್ಯಾಘ್ರಪಾದರಿಂದ ಜನಿಸಿದ ಕಿರಾತಕನಾಗಿದ್ದನು. ಇವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಸ್ವರ್ಗ ಮತ್ತು ಪಾತಾಳದಲ್ಲಿ ಧರ್ಮನಿಷ್ಠನಾಗಿರುವವರೆಗೆ ಯಾರಿಂದಲೂ ಮರಣ ಬಾರದಿರಲಿ ತನಗೆ ಎಂದು ವರವ ಪಡೆದಿದ್ದ. ಅವಳು ಈ ವಿಷಯವನ್ನು ತನ್ನ ಪತಿಗೆ ತಿಳಿಸಿದಾಗ ಅವರಿಬ್ಬರೂ ಇದರಿಂದ ದುಃಖಿತರಾಗುತ್ತಾರೆ. ಇಬ್ಬರೂ ಮಂದಾರ್ತಿಯಲ್ಲಿರುವ ಸುದೇವಮುನಿಯೆಂಬ ಮಹರ್ಷಿಯ ಆಶ್ರಮಕ್ಕೆ ಆಶ್ರಯ ಬಯಸಿ ಬರುತ್ತಾರೆ. ಇದರಿಂದ ಮಹಿಷಾಕ್ಯನು ಸುದೇವಮುನಿಗಳ ಮೇಲೆ ಕೋಪಗೊಂಡು ತನ್ನ ಸಹಚರ ಮಹೋದರನ್ನು ಕಳಿಸಿ ಆಶ್ರಮವನ್ನು ನಾಶಮಾಡಿ ಬರಲು ಹೇಳಿದನು. ಆಗ ಸುದೇವಮುನಿಗಳು ದೇವಿ ದುರ್ಗೆಯನ್ನು ಪ್ರಾರ್ಥಿಸಿ ರಕ್ಷಿಸುವಂತೆ ಮೊರೆಹೋದರು. ಆಗ ಬೃಹತ್ತಾದ ವಲ್ಮೀಕವೊಂದು ಉದ್ಭವಿಸಿ ಆ ದೈತ್ಯನ ಅಸ್ತ್ರಗಳನ್ನೆಲ್ಲಾ ನುಂಗಿಹಾಕಿ ಅವರನ್ನು ರಕ್ಷಿಸಿತು. ನಂತರ ಮಹಿಷಾಕ್ಯನೆ ಸ್ವತಃ ತಾನೇ ಸುದೇವಮುನಿಗಳನ್ನು ಎದುರಿಸಲು ಬಂದಾಗ ಮುನಿಗಳು, ದೇವವರ್ಮ ಮತ್ತು ಜಲಜಾಕ್ಷಿಯರು ದೇವಿದುರ್ಗೆಯನ್ನು ಪ್ರಾರ್ಥಿಸಿ ರಕ್ಷಣೆಗೆ ಮೊರೆಹೋದರು. ಆಗ ತಾಯಿ ದುರ್ಗೆ ಪ್ರತ್ಯಕ್ಷಳಾಗಿ ತನ್ನ ಭೂತಗಣಗಳಾದ ವೀರಭದ್ರ, ಹೈಗುಳಿ, ಕಲ್ಲುಕುಟ್ಟಿಗ ಮತ್ತು ಬೊಬ್ಬಾರ್ಯರನ್ನು ಕರೆದು ಈ ದೈತ್ಯ ಮಹಿಷನನು ನಾಶ ಮಾಡಲು ಆಜ್ಞೆನೀಡಿದಳು. ಆಗ ಮಹಿಷಾಕ್ಯನು ತಾಯಿ ದುರ್ಗೆಯ ಶಕ್ತಿಗೆ ಶರಣಾಗಿ ಪಾದಕ್ಕೆರಗಿದನು. ಮಹಿಷಾಕ್ಯನು ಭೂಲೋಕದಲ್ಲಿ ತನ್ನನ್ನು ಪೂಜಿಸುವಂತೆ ಹಾಗೂ ಮಂದಾರ್ತಿಯಲ್ಲಿ ಕೆಂಡಸೇವೆಗೈದವರಿಗೆ ಇಷ್ಟಾರ್ಥ ನೆರವೇರಿಸಬೇಕೆಂದು ವರವ ಬೇಡಿ ತನ್ನ ಪ್ರಾಣವನ್ನು ತಾಯಿಗೆ ಅರ್ಪಿಸಿದನು.
ಮಾತೆ ದುರ್ಗೆಯಿಂದ ರಕ್ಷಿತರಾದ ದೇವವರ್ಮ-ಜಲಜಾಕ್ಷಿಯರಿಗೆ ತಾಯಿ ಅಭಯರಕ್ಷೆ ನೀಡಿದಳು. ಅಲ್ಲದೇ ತಾನು ಈ ಮಂದಾರ್ತಿಯಲ್ಲೇ ಸದಾ ದುರ್ಗಾಪರಮೇಶ್ವರಿಯಾಗಿ ನೆಲೆಸುತ್ತೇನೆಂದು ವರವ ನೀಡಿದಳು. ಮುಂದೊಮ್ಮೆ ದೇವವರ್ಮನು ತನಗೆ ಸಂತಾನವಿಲ್ಲವೆಂದು ಕೊರಗಿಹೋದನು. ಆಗ ದೇವವರ್ಮನ ಕನಸಿನಲ್ಲಿ ವಟು ಅಂದರೆ ಶ್ರೀ ಆದಿ ಸುಬ್ರಹ್ಮಣ್ಯನೇ ಕಾಣಿಸಿಕೊಂಡು, “ ದೇವವರ್ಮ, ಸಂತಾನವಿಲ್ಲವೆಂದು ಚಿಂತಿಸಬೇಡ. ವಾರಾಹಿ ನದಿಮೂಲದಲ್ಲಿ ತಾಯಿ ದುರ್ಗೆಯ ವಿಗ್ರಹವೊಂದಿದೆ. ಅದನ್ನು ತಂದು ಮಂದಾರ್ತಿಯಲ್ಲಿ ಪ್ರತಿಷ್ಠಾಪಿಸಿದ್ದಾದರೆ ನಿನಗೆ ಸಂತಾನ ಪ್ರಾಪ್ತಿಯಾಗುತ್ತದೆ.” ಎಂದು ಹೇಳಿ ಅದೃಶ್ಯನಾದನು. ದೇವವರ್ಮನು ಸುಬ್ರಹ್ಮಣ್ಯ ಸ್ವಾಮಿಯ ಅಣತಿಯಂತೆ ವಾರಾಹಿ ನದಿಗೆ ಹೋಗಿ ತಾಯಿ ದುರ್ಗೆಯ ದಿವ್ಯಮೂರ್ತಿಯನ್ನು ತಂದು ಮಂದಾರ್ತಿಯಲ್ಲಿ ಪ್ರತಿಷ್ಠಾಪಿಸಿ ಸಂತಾನ ಭಾಗ್ಯ ಪಡೆದನು. ಹೀಗೆ ಹೇಮಾದ್ರಿ ರಾಜ ದೇವವರ್ಮನಿಂದ ಪ್ರತಿಷ್ಠಾಪಿತ ದುರ್ಗಾಪರಮೇಶ್ವರಿ ಅಮ್ಮನವರ ದೇವಳ ಇಂದಿಗೂ ಭಕ್ತರ ಪಾಲಿನ ಕೈಲಾಸವಾಗಿದೆ.
ದೇವಳದ ಪೂಜಾಸೇವೆಗಳು ಹಾಗೂ ಹಬ್ಬದ ದಿನಗಳು.
ಪ್ರತಿವರ್ಷ ಕುಂಭ ಸಂಕ್ರಮಣದಂದು ಬಹಳ ವಿಜೃಂಭನೆಯಿಂದ ಜಾತ್ರೆ ನಡೆಯುತ್ತದೆ. ಪೆಬ್ರುವರಿಯಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಜರುಗುವುದು. ನಾಗಾರಾಧನೆ ಇಲ್ಲಿ ಬಹಳ ಮಹತ್ವದ ಪೂಜಾ ಕೈಂಕರ್ಯ. ಜಾತ್ರೆಯ ದಿನಗಳಂದು ಸುಮಾರು ಮೂರರಿಂದ ನಾಲ್ಕು ಲಕ್ಷ ಜನರು ಮಂದಾರ್ತಿಗೆ ಬೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಶರನ್ನವರಾತ್ರಿ ಅಥವಾ ದಸರೆಯ ಹಬ್ಬ ಇಲ್ಲಿ ಬಹಳ ಉತ್ಸಾಹದಿಂದ ಸಡಗರದಿಂದ ಆಚರಿಸಲಾಗುತ್ತದೆ. ನವರಾತ್ರಿಯ ಪ್ರತಿದಿನವೂ ಇಲ್ಲಿ ಚಂಡಿಕಾ ಶಾಂತಿ ಹೋಮ ಮತ್ತು ವೇದ ಪಾರಾಯಣಗಳು ಜರುಗುತ್ತವೆ. ರಾತ್ರಯಿಡೀ ಯಕ್ಷಗಾನ, ನಾಟಕ ಮತ್ತು ನೃತ್ಯಗಳಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಳ್ಳುತ್ತವೆ. ಇಲ್ಲಿಯ ಮುಖ್ಯ ಹರಕೆ ಸೇವೆ ಯಕ್ಷಗಾನವಾಗಿದೆ. ಈಗ ಸಧ್ಯ ಐದು ಯಕ್ಷಗಾನ ಮೇಳಗಳಿಂದ ಯಕ್ಷಗಾನ ಸೇವೆ ಜರುಗುತ್ತಿದೆ. ಹರಿವಾಣ ನೈವೇಧ್ಯ, ಕುಂಕುಮ ಅರ್ಚನೆ, ಷಷ್ಠಿ ಮಹೋತ್ಸವ, ಕೆಂಡ ಸೇವೆ, ರಂಗಪೂಜೆ, ಮಾತೋತ್ಸವ, ತುಲಾಭಾರ ಸೇವೆ, ಪಲ್ಲಕ್ಕಿ ಉತ್ಸವ, ಸುರ್ಗಿಕಟ್ಟೆ ಪೂಜೆ, ಕೆರೆ ದೀಪೋತ್ಸವದಂತಹ ಹಬ್ಬದ ದಿನಗಳು ಇಲ್ಲಿ ವಿಶೇಷವಾಗಿವೆ. ನಾಗಪಂಚಮಿಯಂದು ಆದಿಸುಬ್ರಹ್ಮಣ್ಯ ಸಹಿತ ನಾಗಪೂಜೆ ಇಲ್ಲಿ ಬಹಳ ಸಡಗರದಿಂದಾಚರಿಸಲಾಗುವುದು. ಭಕ್ತಯಿಂದ ನಾಗತೀರ್ಥದಲ್ಲಿ ಮಿಂದು ಆದಿಸುಬ್ರಹ್ಮಣ್ಯನನ್ನು ಪೂಜಿಸಿ ಹರಕೆ ಕೊಡುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುವುದೆಂದು ಪ್ರತಿತಿ. ಪ್ರತಿ ಮಂಗಳವಾರ ಶುಕ್ರವಾರಗಳಂದು ದೇವಸ್ಥಾನಕ್ಕೆ ಬಹಳಷ್ಟು ಭಕ್ತರು ದೌಡಾಯಿಸುತ್ತಾರೆ. ಅಲ್ಲದೇ ದಿನಂಪ್ರತಿ ಎರಡು ಸಾವಿರಕ್ಕಿಂತ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಬೇಟಿ ನೀಡುವರು. ನಿತ್ಯ ಅನ್ನ ಸಂತರ್ಪಣೆ ಕೂಡಾ ಇಲ್ಲಿ ಇರುವುದು. ಮಂದಾರ್ತಿಯ ಹತ್ತಿರದಲ್ಲೇ ಇನ್ನೂ ಅನೇಕ ದೇವಾಲಯಗಳ ದರ್ಶನಮಾಡಿಕೊಳ್ಳಬಹುದು.
ಮಂದಾರ್ತಿಗೆ ಬರುವುದು ಹೇಗೆ?
ಮಂದಾರ್ತಿ ಬೆಂಗಳೂರಿನಿಂದ 450 ಕಿ.ಮೀ, ಮಂಗಳೂರಿನಿಂದ 85 ಕಿ.ಮೀ, ಧರ್ಮಸ್ಥಳದಿಂದ 135 ಕಿ.ಮೀ, ಕುಂದಾಪುರದಿಂದ 29 ಕಿ.ಮೀ, ಶಿವಮೊಗ್ಗದಿಂದ 140 ಕಿ.ಮೀ, ಕೊಲ್ಲೂರಿನಿಂದ 60 ಕಿ.ಮೀ, ಕಮಲಶಿಲೆಯಿಂದ 40 ಕಿ.ಮೀ ದೂರವಿದೆ. ಮಂದಾರ್ತಿಗೆ ಬರಲು ಉಡುಪಿ, ಕುಂದಾಪುರ, ಬ್ರಹ್ಮಾವರ, ಹೆಬ್ರಯಿಂದ ಸುವ್ಯವಸ್ಥಿತ ರಸ್ತೆಯಿದೆ. ಉಡುಪಿಯಿಂದ ಮಂದಾರ್ತಿಗೆ ಬರುವುದಾದರೆ ಬ್ರಹ್ಮಾವರ ಬಾರ್ಕೂರ ಮಾರ್ಗವಾಗಿ 25 ಕಿ.ಮೀ ಕ್ರಮಿಸಿದರೆ ದೇವಸ್ಥಾನ ತಲುಪಬಹುದು. ಬ್ರಹ್ಮಾವರದಿಂದ 13 ಕಿ.ಮೀ, ಬಾರ್ಕೂರನಿಂದ 8 ಕಿ.ಮೀ ದೂರವಿದೆ. ಇನ್ನು ಆಗುಂಬೆ ಮಾರ್ಗವಾಗಿ ಬರುವವರು ಹೆಬ್ರಿಗೆ ಬರಬೇಕು. ಅಲ್ಲಿಂದ ಸಾಕಷ್ಟು ಬಸ್ಸಿನ ವ್ಯವಸ್ಥೆ ಇದೆ. ರೈಲು ಮಾರ್ಗವಾಗಿ ಬರುವವರು ಉಡುಪಿ ಇಲ್ಲವೇ ಕುಂದಾಪುರ ಇಲ್ಲವೇ ಬಾರ್ಕೂರಿಗೆ ಬರಬೇಕು. ಅಲ್ಲಿಂದ ಮಂದಾರ್ತಿಗೆ ಬಸ್ಸುಗಳ ವ್ಯವಸ್ಥೆ ಇದೆ. ದೇವಸ್ಥಾನಕ್ಕೆ ಹತ್ತಿರದ ವಿಮಾನ ತಾಣವೆಂದರೆ ಬಜಪೆ(ಮಂಗಳೂರು) ವಿಮಾಣ ನಿಲ್ದಾಣ.
ಮಂದಾರ್ತಿಗೆ ಬರಲು ಯೋಜಿಸಿದ್ದಾದರೆ ಅಲ್ಲೇ ಹತ್ತಿರವಿರುವ ಪ್ರವಾಸಿ ಸ್ಥಳಗಳನ್ನು ನೋಡಬಹುದು. ಅವುಗಳೆಂದರೆ ಉಡುಪಿ ಶ್ರೀ ಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕೆ, ಮಲ್ಪೆ ಬಂದರು, ಆಗುಂಬೆ, ಆನೆಗುಡ್ಡೆಯ ವಿನಾಯಕ ದೇವಳ, ಕಾರ್ಕಳ-ಮೂಡುಬಿದಿರೆ, ಮರವಂತೆ-ಕಾಪು-ಪಡುಬಿದ್ರಿ-ಸೋಮೇಶ್ವರ ಸಮುದ್ರಕಿನಾರೆಗಳು ನಯನ ಮನೋಹರವಾಗಿವೆ. ವಾಸ್ತವ್ಯಕ್ಕೆ ಸುಸಜ್ಜಿತ ವಸತಿಗೃಹಗಳಿವೆ. ಊಟ ತಿಂಡಿಗಾಗಿ ಶುಚಿಯಾದ ಉತ್ತಮ ಹೊಟೇಲುಗಳಿವೆ. ನಿಗದಿತ ವೇಳೆಯಲ್ಲಿ ದೇವಸ್ಥಾನಗಳಲ್ಲಿದ್ದರೆ ದೇವಳದ ಪ್ರಸಾದರೂಪದ ಊಟ ಕೂಡಾ ಲಭ್ಯವಾಗುತ್ತದೆ.
-ಶ್ರೀ ಜಗದೀಶ ಸಂ.ಗೊರೋಬಾಳ