ಅಸಹಾಯಕತೆ: ನಾವೆ

ಅದೊಂದು ದಿನ ಮಟ ಮಟ ಮಧ್ಯಾಹ್ನ. ಸೂರ್ಯ ನೆತ್ತಿಯ ಮೇಲೆ ಪ್ರಖರ ಕಿರಣಗಳಿಂದ ಸುಡುತ್ತಿದ್ದ. ಗ್ರಾಮೀಣ ಪ್ರದೇಶವಾದ್ದರಿಂದ ಅದಾಗಲೇ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಹೊರಬಾಗಿಲುಗಳೆಲ್ಲ ಮುಚ್ಚಲ್ಪಟ್ಟಿದ್ದವು. ಅಂಗಡಿ ಮಾಲಿಕರು, ಕಾರ್ಮಿಕರೆಲ್ಲ ಹಸಿವೆಂಬ ರಕ್ಕಸನ ಅಬ್ಬರ ತಣಿಸಲು ಅವರವರ ಮನೆಯತ್ತ ಪಯಣಿಸಿಯಾಗಿತ್ತು. ಹಾಗಾಗಿ ಆ ಸಮಯದಲ್ಲಿ ಮನೆಗೆ ಹೋಗದೇ ಊಟ ಹೊತ್ತು ತರುವ ನನ್ನ ಅಂಗಡಿಯೊಂದೇ ತೆರೆದಿತ್ತು.ಊಟದ ಸಮಯದಲ್ಲಿಯೂ ಅಂಗಡಿಯು ತೆರೆದೇ ಇರುತ್ತಾದ್ದರಿಂದ ಅದರ ಗೋಜಿಗೆ ಹೋಗದೆ ನಾನೂ ಕೂಡ ಊಟದ ತಯಾರಿ ನಡೆಸುತ್ತಿದ್ದೆ. ಹಸಿವೆಂಬ ಬ್ರಹ್ಮರಾಕ್ಷಸನ ತೃಪ್ತಿ ಪಡಿಸಲೇ ಬೇಕಲ್ಲ.. !!!!!

ಇನ್ನೇನು ಅರ್ಧ ಊಟ ಆಗಿತ್ತು. ಉದರವೂ ಕೂಡ ಅರಚುವುದು ನಿಲ್ಲಿಸಿ ಸ್ವಲ್ಪ ಶಾಂತವಾಗಿತ್ತು. ಅಷ್ಟರಲ್ಲಿ ಒಂದು ಸ್ವರ ಕೇಳಿಸಿತು. “ಅಮ್ಮಾ ಯಾರೂ ಇಲ್ವಾ.? ಎಲ್ಲರೂ ಬಾಗಿಲು ಮುಚ್ಚಿದ್ದಾರೆ” ಎಂದು.ಮರೆಯಿಂದ ಎರಗಿ ನೋಡಿದೆ. ಒಬ್ಬ ಮಧ್ಯವಯಸ್ಸು ಅನ್ನಬೇಕೋ ಇಳಿವಯಸ್ಸು ಅನ್ನಬೇಕೋ ನಾನರಿಯೆ, ಒಟ್ಟಿನಲ್ಲಿ ಅರವತ್ತರಿಂದ ಅರವತ್ತೈದು ವಯಸ್ಸಿನವನೊಬ್ಬ ಜೋಳಿಗೆ ಹೊತ್ತು ನಿಂತಿದ್ದ.

ನನ್ನ ಪರಿಸ್ಥಿತಿ ನೋಡಿ.!!! ಒಬ್ಬಳೇ ಒಬ್ಬಳಿರುವೆ ಆ ಸಮಯದಲ್ಲಿ. ಅದರಲ್ಲೂ “ಇತ್ತೀಚೆಗೆ ಉಗ್ರರು ಏನೇನೋ ಸೋಗು ಹಾಕಿಕೊಂಡು ಬರುತ್ತಿದ್ದಾರಂತೆ,ಮೊನ್ನೆ ಮೊನ್ನೆ ಇಬ್ಬರು ಗಂಡ ಹೆಂಡತಿ ಎಂದುಕೊಂಡು ಬಂದವರನ್ನು ‘ಅವರು ಗಂಡ ಹೆಂಡತಿ ಅಲ್ಲ..ಅವರು ಉಗ್ರರು’ ಎಂದು ಪೋಲೀಸರು ಕಂಡುಹಿಡಿದು ಎಳೆದೊಯ್ದಿದ್ದಾರಂತೆ ” ಎಂದು ಮುನ್ನಾದಿನವಷ್ಟೆ ಪಕ್ಕದ ಹೊಟೆಲ್ ನ ಬಾಗಿಲಿನಲ್ಲಿ ನಿಂತು ಜನರು ಮಾತನಾಡುತ್ತಿದ್ದುದ್ದನ್ನು ಈ ಕಿವಿಯಾರೆ ಕೇಳಿದ್ದೆ.

ಆ ಕ್ಷಣಕ್ಕೆ ನನಗೆ ಅದೇ ನೆನಪಾಗಬೇಕೆ..!! “ಹೌದು,ಅವರೆಲ್ಲ ಹೋಗಿದ್ದಾರೆ.ನಾನು ಒಬ್ಬಳೇ ” ಎನ್ನಲೂ ಭಯ.. ಆದರೂ ಧೈರ್ಯಮಾಡಿ “ಯಾಕಪ್ಪಾ ” ಎಂದೆ.
“ಸ್ವಲ್ಪ ಕುಡಿಯಲು ನೀರು ಕೊಡಿ ” ಎಂದ.

ನನಗೆ ಪೇಚಿಗಿಟ್ಟುಕೊಂಡಿತು. ಬಾಯಾರಿದವನಿಗೆ ನೀರಿಲ್ಲವೆಂದು ಹೇಗೆ ಹೇಳಲಿ. ಸರಿ,ಕೊಡೋಣವೆಂದುಕೊಂಡರೆ ಕೊಡುವುದಾದರೂ ಹೇಗೆ..? ಹೇಗೂ ನಾನೊಬ್ಬಳೇ ನೀರು ಕುಡಿಯುವವಳಲ್ಲವೇ ಎಂದುಕೊಂಡು ದೊಡ್ಡ ಬಾಟಲಿಯಲ್ಲಿ ನೀರು ಒಯ್ಯುತ್ತಿದ್ದೆ.ಬಾಟಲಿಯಿಂದಲೇ ನೇರವಾಗಿ ನನ್ನ ಗಂಟಲಿಗೆ ಸುರಿಯುತ್ತಿದ್ದೆ. ಈಗ ಅವನಿಗೆ ನೀರು ಕೊಡಲು ಯಾವ ಪಾತ್ರೆಯೂ ಇಲ್ಲವಲ್ಲ ಎಂದು ಯೋಚಿಸಿ ” ಈಗ ನಾ ಹೇಗೆ ನೀರು ಕೊಡಲಪ್ಪ, ಪಕ್ಕದಲ್ಲಿ ಮನೆ ಇದೆ.ಅವರು ಕೊಡುತ್ತಾರೆ ಹೋಗಪ್ಪಾ” ಎಂದು ನಾಲ್ಕು ಅಂಗಡಿ ಕಳೆದ ಮೇಲೆ ಇರುವ ಪಕ್ಕದ ಮನೆಯನ್ನು ತೋರಿಸಿದೆ.ಅವನು ಅಲ್ಲಿವರೆಗೆ ಹೋಗಿ ಮುಚ್ಚಿದ ಅಂಗಡಿಗಳ ಸಾಲನ್ನೇ ನೋಡಿ ಮತ್ತೆ ಬಂದ.”ಎಲ್ಲ ಬಾಗಿಲು ಮುಚ್ಚಿದೆ” ಎಂದ.”ಪಕ್ಕದ ಕಂಪೌಂಡ್ ಒಳಗೆ ಹೋಗಪ್ಪಾ ,ಅದೇ ಮನೆ..ಇವೆಲ್ಲ ಅಂಗಡಿಗಳು” ಎಂದು ಹೇಳುತ್ತ ‘ಇರಲಿ, ನಿಜಕ್ಕೂ ದಣಿದವನೇ ಅನ್ನಿಸುತ್ತಿದೆ. ನನ್ನ ಊಟದ ಡಬ್ಬಿಯಲ್ಲಿನ ಒಂದು ಪಾತ್ರೆಯನ್ನು ಸ್ವಚ್ಚ ಮಾಡಿಯಾದರೂ ನೀರು ಕೊಡೋಣ’ ಎಂದು ಯೋಚಿಸಿ “ಸ್ವಲ್ಪ ನಿಲ್ಲಪ್ಪ,ಊಟದ ಕೈ ತೊಳೆದು ಬರುವೆ” ಎಂದು ನನ್ನ ಮಾತು ಮುಗಿಯುವಷ್ಟರಲ್ಲಿ ಅವನು ಪಕ್ಕದ ಮನೆಯತ್ತ ಪಾದ ಬೆಳೆಸಿಯಾಗಿತ್ತು.ಮತ್ತೆ ನನ್ನ ಅಂಗಡಿಯೆದುರು ಸುಳಿಯಲೇ ಇಲ್ಲ ಆ ಮನುಷ್ಯ.ಎತ್ತ ಹೋದನೋ ನಾಕಾಣೆ..

ಆ ಕ್ಷಣ ನನ್ನ ಮನ ವಿಚಲಿತಗೊಂಡಿತು. ಯಾರೋ ಏನೋ , ನಿಜಕ್ಕೂ ದಣಿವಾದವನನ್ನೂ ಅನುಮಾನಿಸುವಂತಾಗಿದೆ ಇಂದಿನ ಪರಿಸ್ಥಿತಿ. ಆ ಸಮಯದಲ್ಲಿ ಬಾಟಲಿಯ ನೀರನ್ನು ಅವನ ಬೊಗಸೆಗೆ ಸುರಿದಿದ್ದರೂ ಅವನು ನೀರು ಕುಡಿಯುತ್ತಿದ್ದನೋ ಎನೋ,ಬಾಯಾರಿದವನ ದಣಿವಾರುತ್ತಿತ್ತೋ ಏನೋ.. ಈ ಮಂದಬುದ್ದಿಯ ತಲೆಗದು ಹೊಳೆಯಲೇ ಇಲ್ಲ.
ಏಕೆಂದರೆ ಭಯವೊಂದು ಮನದ ಮೂಲೆಯಲ್ಲಿ ಸುಪ್ತವಾಗಿ ಕುಳಿತಿತ್ತಲ್ಲ.!!

ಆದರೆ ಇಂದಿಗೂ ನನ್ನೊಳಗಿನ ನಾನು ನನ್ನ ಮನಸ್ಸನ್ನು ” ಬಾಯಾರಿ ಬಂದವನಿಗೆ ನೀರು ಕೊಡದಷ್ಟು ಪಾಪಿಯಾಗಿಬಿಟ್ಟೆಯಲ್ಲೇ” ಎಂದು ಶಪಿಸುತ್ತಲೇ ಇದೆ.ಸುಪ್ತ ಮನಸ್ಸು ಈ ಪಾಪಕ್ಕಾಗಿ ಪಶ್ಚಾತ್ತಾಪದಿ ಬೆಂದು ಕೊರಗುತ್ತಲೇ ಇದೆ.ಒಂದು ಹೆಣ್ಣು ಕೆಲವು ಸಂದರ್ಭಗಳಲ್ಲಿ ಎಷ್ಟು ಅಸಹಾಯಕಳಾಗುತ್ತಾಳಲ್ಲವೇ ಎಂದು ಮರುಗುತ್ತಲೇ ಇದೆ. ಎಷ್ಟು ಸಮಾನತೆ ಸಮಾನತೆ ಎಂದರೂ ಕೆಲವು ಸಲ ಒಬ್ಬ ಗಂಡಿನ ಸಮಕ್ಕೆ ಹೆಣ್ಣು ನಿಲ್ಲಲಾರಳು ಎಂದು ಅಣಕಿಸುತ್ತಲೇ ಇದೆ.

ಎಲ್ಲಿ ಎಷ್ಟೇ ಅಭಿವೃದ್ದಿಯಾದರೂ, ಹೆಣ್ಣು ಎಷ್ಟೇ ಧೈರ್ಯಶಾಲಿಯೆನಿಸಿದರೂ, ಗಂಡಿನಷ್ಟೇ ಎದೆಗಾರಿಕೆಯಿದ್ದರೂ ಕೆಲವೊಮ್ಮೆ ಬರುವ ಅಸಹಾಯಕತೆಯೆದುರು ಆಕೆ ಸೋಲುವುದಿದೆಯಲ್ಲ ಇದೇ ನಿಸರ್ಗ ನಿಯಮವಿರಬೇಕು…ಎಂದೆನಿಸುತ್ತದೆ..

ನಾವೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x