
ಭುವನೇಶ್ವರದಿಂದ ಇನ್ನೂರೈವತ್ತು ಮೈಲು ದೂರದಲ್ಲಿ ವ್ಯಾಘ್ರತೀರ್ಥವೆಂಬ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಇರುವುದೇ ಬೆರಳೆಣಿಕೆಯಷ್ಟು ಮನೆಗಳು. ಇರುವ ಮನೆಗಳಲ್ಲೂ ದುಡಿವ ಶಕ್ತಿ ಇರುವವರೆಲ್ಲ ಸಮೀಪದ ನಗರಗಳಿಗೆ ವಲಸೆ ಹೋಗಿದ್ದರು. ಬರಗಾಲದ ಬಾದೆಯಿಂದ ಬೆಂದ ಕುಟುಂಬಗಳು ಇತ್ತ ಹಳ್ಳಿಯನ್ನೂ ಬಿಡದೆ ಗತಕಾಲದ ವೈಭವವನ್ನು ನೆನೆಯುತ್ತಾ ದಿನಕಳೆಯುತ್ತಿದ್ದವು. “ಹಿಂದೆ ಈ ಊರಲ್ಲಿ ಭಯಂಕರವಾದ ಕಾಡಿತ್ತು. ಕಾಡಿನಲ್ಲಿ ಕ್ರೂರಮೃಗಗಳಿದ್ದವು. ಅಲ್ಲಲ್ಲಿ ನೀರಿನ ಹೊಂಡಗಳೂ ಸಾಕಷ್ಟಿದ್ದವು. ಊರಾಚೆ ಇರುವ ದೊಡ್ಡ ಹೊಂಡವೇ ವ್ಯಾಘ್ರತೀರ್ಥ. ಇದಕ್ಕ ಆ ಹೆಸರು ಬರಲು ಕಾರಣ ಯಾವಾಗಲೂ ಈ ಹೊಂಡದಲ್ಲಿ ಹುಲಿಗಳು ನೀರು ಕುಡಿದು ಆಟವಾಡಿ ಹೋಗುತ್ತಿದ್ದವು. ಅಲ್ಲಿಗೆ ಬೇರೆ ಪ್ರಾಣಿಗಳು ಬರಲು ಧೈರ್ಯಮಾಡುತ್ತಿರಲಿಲ್ಲ” ಎಂದು ಇಳಿವಯಸ್ಸಿನ ಮುದುಕನೊಬ್ಬ ತನ್ನ ಮೊಮ್ಮಕ್ಕಳ ವಯಸ್ಸಿನ ಮಕ್ಕಳಿಗೆ ಹೇಳುತ್ತಿದ್ದ. ಮಕ್ಕಳೆಲ್ಲಾ ಅಜ್ಜನ ಮಾತುಗಳನ್ನು ಕೂತೂಹಲದಿಂದ ಆಲಿಸುತ್ತಿದ್ದರು. ಅದರಲ್ಲೊಬ್ಬ ಹುಡುಗ, “ಅಜ್ಜ, ಹುಲಿ ಕೆಟ್ಟ ಪ್ರಾಣಿ ಅಲ್ವಾ?” ಎಂದು ಕೇಳಿದನು. ಹುಡುಗನ ಪ್ರಶ್ನೆಗೆ ಅಜ್ಜ ನಸುನಕ್ಕು, “ಮಗಾ, ಹುಲಿ ಕೆಟ್ಟ ಪ್ರಾಣಿ ಅಲ್ಲ. ಅದಕ್ಕೆ ಹಸಿವಾದರೆ ಮಾತ್ರ ಅದು ತನ್ನೆದುರಿಗಿರುವ ಯಾವುದೇ ಪ್ರಾಣಿಯಿದ್ದರೂ ಅದನ್ನು ಕೊಂದು ತಿನ್ನುತ್ತದೆ. ಇದು ಕಾಡಿನ ನಿಯಮ ಕೂಡಾ ಹೌದು” ಎಂದು ಉತ್ತರಿಸಿದ. “ಅಜ್ಜ ನೀನು ಹುಲಿ ಕಂಡಿದ್ಯಾ?” ಎಂದ ಹುಡುಗನ ಪ್ರಶ್ನೆಗೆ ಅಜ್ಜ ತಲೆಯಾಡಿಸಿ, “ನಾನು ನಿಮ್ಮಷ್ಟಿದ್ದಾಗ ನನ್ನ ಅಪ್ಪಯ್ಯ ದೂರದಿಂದ ಹುಲಿಗಳಾಡೋದನ್ನು ಒಂದೆರಡ ಸಾರಿ ತೋರಿಸಿದ್ದರು” ಎಂದನು. “ಈಗ ಹುಲಿಗಳು ಏಕಿಲ್ಲ ಅಜ್ಜ?”ಎಂದಾಗ ಹಾಲಜ್ಜನು ಭಾವುಕನಾದ. “ಈ ವ್ಯಾಘ್ರತೀರ್ಥದಲ್ಲಿ ಹುಲಿಗಳಿಗಿಂತ ಕೆಟ್ಟ ಮನುಷ್ಯರ ದುರಾಸೆಯಿಂದ ಕಾಡು ಕಣ್ಮರೆಯಾಯಿತು.ಸೂರ್ಯನ ಕಿರಣಗಳು ನೆಲಕ್ಕೆ ತಾಕದಷ್ಟು ದಟ್ಟ ಅರಣ್ಯವಿದ್ದ ಈ ವ್ಯಾಘ್ರತೀರ್ಥವನ್ನು ಕಾಡುಗಳ್ಳರಾದ ಕೆಲವು ಕೆಟ್ಟ ಮನುಷ್ಯರು ಬಟ್ಟ ಬರಿದು ಮಾಡಿದರು. ಕಾಡೆಲ್ಲಾ ನಾಶವಾದ್ದರಿಂದ ನೀರಿನ ಹೊಂಡಗಳೆಲ್ಲ ಬತ್ತಿಹೋದವು. ಅದೇ ಸಮಯಕ್ಕೇನೊ ಎನ್ನುವಂತೆ ಕ್ಷಾಮದ ಬಿಸಿಯೂ ಹೆಚ್ಚಾಯಿತು. ಹುಲಿಗಳೆಲ್ಲ ಆಹಾರ ಅರಸಿ ಬೇರೆ ಕಡೆ ಹೋದವು. ಅದರಲ್ಲಿ ಕೆಲವು ಬೇಟೆಗಾರರ ಕ್ರೌರ್ಯಕ್ಕೆ ಬಲಿಯಾದವು” ಎನ್ನುತ್ತಾ ಹಾಲಜ್ಜ ತನ್ನ ಊರುಗೋಲನ್ನು ಹಿಡಿದು ಮುರಿದ ಗುಡಿಸಲಿನ ಕಡೆಗೆ ಹೆಜ್ಜೆಹಾಕಿದನು.
ಒಮ್ಮೆ ಅಂಚೆಯವನೊಬ್ಬ ಬಂದು ಹಾಲಜ್ಜನನ್ನು ಹುಡುಕುತ್ತಾ ಆ ಮುರುಕು ಗುಡಿಸಲಿನ ಬಳಿ ಬಂದು ಹಾಲಜ್ಜನನ್ನು ಕರೆದು ಆತನಿಗೊಂದು ತಂತಿ ಬಂದಿರುವ ವಿಷಯವನ್ನು ತಿಳಿಸುತ್ತಾನೆ. ಅಜ್ಜನಿಗೆ ಏನೂ ಗೊತ್ತಾಗದೆ ಅಂಚೆಯವನಿಗೆ ಓದಿ ಹೇಳಲು ಸನ್ನೆ ಮಾಡಿದನು. ತಂತಿ ಓದಿದ ಅಂಚೆಯವನು ಹಾಲಜ್ಜನಿಗೆ ಬೇಸಿಗೆ ರಜೆಗೆ ಆತನ ಮಗ ಸೊಸೆ ಪಟ್ಟಣದಿಂದ ಬರುವ ವಿಷಯವನ್ನು ತಿಳಿಸಿ ಹೋದನು. ಹಾಲಜ್ಜನಿಗೆ ಮಗ ಸೊಸೆ ಮೊಮ್ಮಕ್ಕಳು ಬರುತ್ತಿರುವುದು ಸಂತಸ ತಂದರೂ ಒಂದೆಡೆ ಬೇಸರವಿತ್ತು. ಕಾರಣ ಮಗ ಊರಿಗೆ ಬಂದಾಗಲೊಮ್ಮೆ ಹಾಲಜ್ಜನನ್ನು ಜೊತೆಗೆ ಪಟ್ಟಣಕ್ಕೆ ಕರೆದೊಯ್ಯಲು ಹಾತೊರೆಯುತ್ತಿದ್ದ. ಆದರೆ ಹಾಲಜ್ಜನಿಗೆ ತಾನು ಹುಟ್ಟಿ ಬೆಳೆದ ವ್ಯಾಘ್ರತೀರ್ಥ ಬಿಟ್ಟು ಹೋಗಲು ಸುತಾರಾಂ ಮನಸ್ಸಿರಲಿಲ್ಲ. ಆ ಊರಿನ ಹಳಿಯರಲ್ಲೆ ಹಳಿಯ ಈ ಹಾಲಜ್ಜ. ಬಹಳ ಮೃದು ಸ್ವಭಾವದ ಭಾವುಕ ವ್ಯಕ್ತಿ ಹಾಲಜ್ಜನಿಗೂ ವ್ಯಾಘ್ರತೀರ್ಥಕ್ಕೂ ಇರುವ ಸಂಬಂಧ ಎಂತಹುದು ಎಂದರೆ ಅದು ತಾಯಿಗೂ ಮಗುವಿಗೂ ಇರುವ ಸಂಬಂಧದ ತೆರನಿರಬಹುದೇನೊ. ಅಷ್ಟಕ್ಕೂ ಹಾಲಜ್ಜನೇನೂ ನಿರ್ಗತಿಕನಾಗಿರಲಿಲ್ಲ. ವ್ಯಾಘ್ರತೀರ್ಥದಲ್ಲಿ ಸಾಕಷ್ಟು ಭೂಮಿ ಹಾಲಜ್ಜನಿಗಿತ್ತು. ಆದರೆ ಆ ಭೂಮಿಯಲ್ಲಿ ಕಸ ಕೂಡಾ ಬೆಳೆಯುತ್ತಿರಲಿಲ್ಲ. ಹಾಲಜ್ಜನ ಮಗ ಶಾಲೆ ಕಲಿತು ಪಟ್ಟಣ ಸೇರಿದ್ದರಿಂದ ಊಟಕ್ಕೇನೂ ತೊಂದ್ರೆಯಿರಲಿಲ್ಲ. ಆ ವ್ಯಾಘ್ರತೀರ್ಥದಲ್ಲಿ ನೀರಿನ ಮೂಲಗಳೆಲ್ಲ ಒಣಗಿ ಹೋಗಿದ್ದರಿಂದ ವಾರಕ್ಕೊಮ್ಮೆ ಪಂಚಾಯಿತಿ ಕಡೆಯಿಂದ ಜನರಿಗೆಲ್ಲ ಒಂದು ಟ್ಯಾಂಕರ್ ನೀರು ಸಿಗುತ್ತಿತ್ತು. ಅದೇ ಅವರಿಗೆಲ್ಲ ಜೀವಜಲವಾಗಿತ್ತು. ಪಂಚಾಯಿತಿ ಅಧಿಕಾರಿಗಳು ಹಲವು ಭಾರಿ ವ್ಯಾಘ್ರತೀರ್ಥ ಬಿಟ್ಟು ಬನ್ನಿ, ಇಲ್ಲಿಂದ ಮೂವತ್ತು ಮೈಲು ದೂರದಲ್ಲಿ ಅವರಿಗೆಲ್ಲ ಮನೆಗಳನ್ನು ಸರ್ಕಾರದಿಂದ ಕಟ್ಟಿಸಿಕೊಡುತ್ತೇವೆಂದು ತಿಳಿಸಿಹೇಳಿದ್ದರು. ಆದರೆ ಯಾರೂ ಕೂಡಾ ಗ್ರಾಮ ಬಿಡಲು ಒಪ್ಪಿರಲಿಲ್ಲ. ಕೆಲವರು ಹೋದರು. ಆದರೆ ಹಾಲಜ್ಜನಂತಹ ಹಳಿಯರು ಹುಟ್ಟಿದೂರಿನ ಬಗ್ಗೆ ಇಟ್ಟುಕೊಂಡ ಭಾವುಕತೆ ಅವರನ್ನು ಕಟ್ಟಿಹಾಕಿತು.
ಇತ್ತೀಚೆಗೆ ವ್ಯಾಘ್ರತೀರ್ಥದಲ್ಲಿ ಕೆಂಚಿಕಟ್ಟೆಯ ಸುದ್ಧಿ ಬಹಳ ಸದ್ದು ಮಾಡಿತು. ಸ್ವಲ್ಪ ವರ್ಷಗಳ ಕಾಲ ಈ ಕೆಂಚಿಕಟ್ಟೆಯನ್ನೆ ಜನರು ಮರೆತುಬಿಟ್ಟಂತಿದ್ದರು. ಆದರೀಗ ಕೆಂಚಿಕಟ್ಟೆಯ ಸುತ್ತ ಹತ್ತಾರು ಅನುಮಾನಗಳು ಅದರಲ್ಲೂ ಟಿ.ವಿ ಚಾನೆಲ್ ನಲ್ಲಿ ಈ ಸುದ್ದಿ ಬಂದಮೇಲಂತೂ ಕೆಂಚಿಕಟ್ಟೆ ಜಗಜ್ಜಾಹಿರವಾಹಿತು. ವ್ಯಾಘ್ರತೀರ್ಥದಲ್ಲಿ ಆಲದ ಮರಗಳ ತೋಪಿನ ಕೆಳಗೆ ಕೆಂಚಿಕಟ್ಟೆ ಎಂಬ ಹೆಸರಿನ ಕಟ್ಟೆಯೊಂದಿತ್ತು. ವ್ಯಾಘ್ರತೀರ್ಥದ ಜನರು ಈಗಲೂ ಆ ಕಟ್ಟೆಯ ಸನಿಹ ಹೋಗಲು ಭಯಬೀಳುತ್ತಿದ್ದರು. ಈ ವಿಷಯ ಊರಿನ ಮಕ್ಕಳಿಗೂ ಗೊತ್ತಾಯ್ತು. ಒಮ್ಮೆ ಮಕ್ಕಳು ಕೂತೂಹಲ ತಡೆಯದೆ ಹಾಲಜ್ಜನ ಬಳಿಬಂದು, “ಕೆಂಚಿಕಟ್ಟೆಯ ಕಡೆಗೆ ಹೋಗಲು ಎಲ್ಲರೂ ಭಯ ಬೀಳ್ತಾರಲ್ಲ ಕಾರಣವೇನಜ್ಜ?” ಎಂದು ಕೇಳಿದರು. ಆಗ ಹಾಲಜ್ಜನು ಮಕ್ಕಳಿಗೆ ಕೆಂಚಿಕಟ್ಟೆಯ ಕಥೆ ಹೇಳಬೇಕು ಅಂತ ತನ್ನ ಗುಡಿಸಲಿನ ಅಂಗಳದಲ್ಲಿ ಮಕ್ಕಳನ್ನು ಕೂರಿಸಿ ತಾನೂ ಅವರೊಟ್ಟಿಗೆ ಕುಳಿತು ಕಥೆ ಹೇಳಲು ಆರಂಭಿಸಿದನು.
ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಈ ವ್ಯಾಘ್ರತೀರ್ಥದಲ್ಲಿ ಕೆಂಚಮ್ಮ ಎಂಬ ಹೆಸರಿನ ಹೆಂಗಸಿದ್ದಳು. ಆಗವಳಿಗೆ ಇಪ್ಪತ್ತರ ಹರೆಯ. ಕೆಂಚಮ್ಮ ನೋಡಲು ಸುಂದರವಾಗಿ ದಂತದ ಗೊಂಬೆಯ ಹಾಗಿದ್ದಳು. ಅವಳಿಗೆ ತಂದೆ ಇರಲಿಲ್ಲ, ತಾಯಿಯೇ ಅವಳಿಗಿರುವ ಏಕೈಕ ಸಂಬಂಧಿ. ಕೆಂಚಮ್ಮನ ಸ್ವಭಾವ ಜನರಿಗೆ ಗಯ್ಯಾಳಿ ತರಹ ಎನಿಸಿದರೂ ಅವಳದು ಮಗುವಿನಂತಹ ಮನಸ್ಸು. ತನ್ನ ರಕ್ಷಣೆಗೆ ಅವಳು ಗಯ್ಯಾಳಿಯ ಬೇಲಿ ಹಾಕಿಕೊಂಡಿದ್ದಳು. ಊರಲ್ಲೆಲ್ಲಾ ಅವಳು ಕೆಂಚಿ ಎಂದೆ ಮನೆಮಾತಾಗಿದ್ದಳು. ಕೆಂಚಿಯ ತಾಯಿಗೆ ಮಗಳ ಮದುವೆಯ ಚಿಂತೆ ಬಹಳ ಕಾಡಿತು. ಕೆಂಚಿಗೊಬ್ಬ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಿಕೊಟ್ಟರೇ ತಾನು ನಿಶ್ಚಿಂತೆಯಾಗಿರಬಹುದೆಂದು ಲೆಕ್ಕ ಹಾಕಿದ್ದಳು ಕೆಂಚಿಯ ತಾಯಿ. ನಾಲ್ಕಾರು ಕಡೆಯಿಂದ ಸಂಬಂಧಗಳು ಬಂದರೂ ಊರಿನ ಹಣವಂತನೊಬ್ಬನ ಕುತಂತ್ರಕ್ಕೆ ಆ ಸಂಬಂಧಗಳು ಕೂಡಿ ಬರಲಿಲ್ಲ. ಕರಿಬೆಕ್ಕೊಂದು ಕೋಳಿಮರಿಗೆ ಹೊಂಚು ಹಾಕಿ ಕುಳಿತಂತೆ ಊರಿನ ಹಣವಂತನೊಬ್ಬ ಕೆಂಚಿಯ ಮೇಲೆ ಕಣ್ಣು ಹಾಕಿದ್ದ. ಸಮಯ ನೋಡಿ ಕೆಂಚಿಯೊಬ್ಬಳೆ ಮನೆಯಲ್ಲಿರುವಾಗ ಕೆಂಚಿಯ ಶೀಲಭಂಗ ಮಾಡಿಬಿಟ್ಟ. ಕೆಂಚಿಯು ಅಸಹಾಯಕಳಾಗಿ ಹಣವಂತನ ಕ್ರೌರ್ಯಕ್ಕೆ ಬಲಿಯಾದಳು. ಕೆಂಚಿಯ ತಾಯಿಗೆ ಈ ವಿಷಯ ಗೊತ್ತಾಗಿ ಕುಸಿದು ಬಿದ್ದವಳು ಮತ್ತೇಳಲೇ ಇಲ್ಲ. ಕೆಂಚಿ ಈಗ ಒಂಟಿಯಾದಳು. ತನ್ನ ಉಸಿರಾಗಿದ್ದ ಜೀವದ ತಾಯಿ ತೀರಿದ ಮೇಲೆ ಕೆಂಚಿಗೆ ಜೀವನವೇ ಶಾಪವೆನಿಸಿತು. ಈಗಂತೂ ಕೆಂಚಿಯನ್ನು ಕಾಮುಕರು ನಿರ್ಭಯದಿಂದ ಬೆನ್ನುಬಿದ್ದರು.
ಅದೊಂದು ರಾತ್ರಿ ಕಾಮುಕರಿಬ್ಬರು ಅವಳ ಮನೆಗೆ ಬಂದಿದ್ದರು ನಶೆಯ ಮತ್ತಿನಲ್ಲಿದ್ದ ಅವರಿಗೆ ಕೆಂಚಿ ಎಷ್ಟೇ ಕೈಮುಗಿದು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಕಟುಕರ ಕೈಯಲ್ಲಿ ಸಿಕ್ಕ ಮೇಕೆಯಂತಾದಳು ಕೆಂಚಿ.ಇದಾದ ಸ್ವಲ್ಪ ಹೊತ್ತಿನ ಬಳಿಕ ಕೆಂಚಿ ಮನೆಯ ಬಾಗಿಲು ತೆರದು ಸಿಟ್ಟಿನಿಂದ ಹಿಡಿ ಮಣ್ಣು ಹಿಡಿದು , “ ನೀವೆಲ್ಲ ಸರ್ವನಾಶ ಆಗರಿ, ನಿಮ್ಮನೆ ಹೆಣ್ಮಕ್ಕಳಿಗೂ ನನಗಾದಂತಾಗಲಿ, ಮುಂಡೆ ಮಕ್ಕಳಾ, ನನ್ನವ್ವನ್ನೂ ಸಾಯಿಸಿ ಈಗ ನನ್ನನ್ನೂ ಸಾಯಿಸಕ್ಕೆ ಬಂದೀರಿ. ಈ ಊರಲ್ಲಿ ನನ್ನನ್ನ ಕಾಪಾಡೋರು ಯಾರೂ ಇಲ್ವೇ, ಅಯ್ಯೋ! ದೇವರೇ, ನಾನೇನ್ ತೆಪ್ಪ ಮಾಡಿದಿನಿ ಅಂತ ನನಗೀ ನಾಯಿ ಪಾಡು. ನನಗೆ ರಕ್ಷಣೆ ಕೊಡದ ಈ ಊರು ಸುಡುಗಾಡಾಗಲಿ. ನಾನು ಸತ್ತರೂ ನಿಮ್ಮನ್ನು ಸುಮ್ಮನೆ ಬಿಡೊಲ್ಲ, ಇನ್ನ ಮೇಲೆ ನನ್ನ ಮನೆ ಕಡೆ ಬಂದ್ರೇ ನೀವು ಸತ್ತ ಹೋಗತಿರಿ ಕಣ್ರೋ, ಜೊಲ್ಲ ನಾಯಿಗಳಾ” ಶಾಪ ಹಾಕಿ ಮನೆಯೊಳಗೆ ಬಂದು ಕಣ್ಣಿರಿಡುತ್ತಾ ಅವ್ವನ ಪೋಟೋ ಎದುರಿಗೆ ನಿಂತು, “ಅವ್ವ, ನಾನೂ ನಿನ್ನ ಜೊತೆ ಬರತೇನವ್ವ! ನನ್ನನ್ನು ಕರಕೋಳವ್ವ ನಿನ್ನ ಹತ್ರ” ಎಂದವಳೆ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಕಂದೀಲನ್ನು ಹಿಡಿದು ಬೆಂಕಿಹಚ್ಚಿಕೊಂಢಳು. ಕೆಂಚಿಮನೆಯ ಹತ್ತಿರದ ಮನೆಯವರೆಲ್ಲ ಗಾಢನಿದ್ರೆಯಲ್ಲಿರುವಾಗ ಕೆಂಚಿನ ಆರ್ತನಾದ ಯಾರಿಗೂ ಕೇಳಿಸಲಿಲ್ಲ. ಬೆಂಕಿ ತಗುಲಿದ ಕೆಂಚಿ ಮನೆಯಿಂದ ಹೊರಬಂದು ಅಲ್ಲೇ ಮನೆಯೆದುರಿಗಿನ ಕಟ್ಟೆಯ ಮೇಲೆ ಬಿದ್ದು ನರಳಾಡಿ ಪ್ರಾಣಬಿಟ್ಟಳು. ನೋಡುವವರ ಕಣ್ಣು ಕುಕ್ಕುತ್ತಿದ್ದ ದಂತದ ಗೊಂಬೆ ಅರ್ಧಂಬರ್ಧ ಸುಟ್ಟು ಅನಾಥ ಶವವಾಗಿದ್ದಳು. ಮರುದಿನ ಬೆಳೆಗ್ಗೆ ಅನಾಹುತ ಕಂಡವರೆಲ್ಲ ಮರುಗಿ ಭಯಪಟ್ಟರು. ರಾತ್ರಿ ಅವಳಾಡಿದ ಕೆಲ ಮಾತುಗಳನ್ನು ಕೇಳಿಸಿಕೊಂಡ ಕೆಲವರಿಗೆ ಆಶ್ಚರ್ಯವೂ ಆಯಿತು. ಆದರೆ ಯಾರೂ ಆ ದೇಹವನ್ನು ಮುಟ್ಟುವ ಧೈರ್ಯವಿರಲಿ ಕನಿಷ್ಟ ಸಂಸ್ಕಾರವನ್ನೂ ಮಾಡುವ ಗೋಜಿಗೆ ಹೋಗಲಿಲ್ಲ. ಎಷ್ಟೂ ದಿನಗಳ ಕಾಲ ಯಾರೂ ಕೆಂಚಿಮನೆ ಕಡೆ ಸುಳಿಯಲಿಲ್ಲ.
ಅವಳ ದೇಹ ಕ್ರಿಮಿಕೀಟಗಳಿಗೆ ಆಹಾರವಾಗಿ ಕೊಳೆತುಹೋಯಿತು. ಕೆಂಚಿ ದೆವ್ವವಾಗಿದ್ದಾಳೆಂದು ಸುದ್ದಿ ಹರಡಿತು. ಅದೂ ಅಲ್ಲದೇ ಅವಳು ಸಾಯುವ ಮುನ್ನ ಆಡಿದ ಶಾಪದ ಮಾತುಗಳನ್ನು ನೆನೆದು ಕೆಲವರು ಅಲ್ಲಿ ಹೋಗಲು ಹೆದರುತ್ತಿದ್ದರು. ಕೆಲವು ವರ್ಷಗಳ ಬಳಿಕ ಅಲ್ಲಿದ್ದ ಕೆಂಚಿಯ ಗುಡಿಸಲು ನಾಶವಾಗಿ ಕೇವಲ ಮನೆಯ ಕಟ್ಟೆ ಅದೇ ಕೆಂಚಿ ಪ್ರಾಣ ಬಿಟ್ಟು ಸತ್ತಿರುವ ಕಟ್ಟೆ ಮಾತ್ರ ಉಳಿದಿತ್ತು. ಆ ಕಟ್ಟೆಯನ್ನೇ ಊರಿನ ಜನರು ಕೆಂಚಿಕಟ್ಟೆ ಎಂದು ಕರೆಯಲಾರಂಭಿಸಿದರು.ಕೆಂಚಿಕಟ್ಟೆಯ ಬಗೆಗೆ ಊರವರಿಗೆ ಬಹಳ ಭಯವಿತ್ತು. ಹಾಲಜ್ಜನ ಕಥೆಯನ್ನು ಮಕ್ಕಳು ಕಣ್ಣು ಮಿಟುಕಿಸದೇ ಕೇಳುತ್ತಿದ್ದರು. ಅದರಲ್ಲೊಬ್ಬ ಹುಡುಗ ಕೂತೂಹಲ ತಡೆಯಲಾರದೆ, “ ಅಜ್ಜ ನೀನು ಕೆಂಚಿಯನ್ನು ನೋಡಿದ್ದಿಯಾ?” ಎಂದಾಗ ಹಾಲಜ್ಜ, “ನಾನು ಕೆಂಚಿಯನ್ನು ನೋಡಿರುವುದು ಅಷ್ಟೇ ಅಲ್ಲ, ಅವಳು ಸತ್ತು ಹೆಣವಾಗಿದ್ದನ್ನೂ ಕಂಡಿದ್ದೇನೆ. ಆಗ ನಾನು ನಿನ್ನಷ್ಟಿದ್ದೆ.” ಎಂದು ಹೇಳಿದನು. ಐದು ವರ್ಷದ ಹುಡುಗಿಯೊಬ್ಬಳು ಹಾಲಜ್ಜನನ್ನು, “ಮುಂದೇನಾಯ್ತಜ್ಜ?” ಎಂದು ಕೇಳಿದಾಗ ಹಾಲಜ್ಜ ನಿಟ್ಟುಸಿರು ಬಿಟ್ಟು, “ಕೆಂಚಿಯ ಶಾಪವೋ? ಕೆಂಚಿಯ ಆರ್ತನಾದ ಪ್ರಕೃತಿಗೆ ಕೇಳಿತೋ ಏನೋ ಕೆಂಚಿ ಸತ್ತ ಮೇಲೆ ವ್ಯಾಘ್ರತೀರ್ಥದ ಸ್ಥಿತಿಯೇ ಕೆಟ್ಟಿತು. ಮಳೆಬಾರದೇ ಕ್ಷಾಮ ತಲೆದೋರಿ ಕಾಡೆಲ್ಲಾ ನಾಶವಾಗಿ ಬರಬೀಡುಬಿಟ್ಟಿತು. ಕುಡಿವ ನೀರೂ ಸಿಗದಂತಾಗಿ ಊರೇ ಸ್ಮಶಾನವಾಯಿತು. ಊರಿನ ಜನರೆಲ್ಲಾ ಈ ಪರಿಸ್ಥಿಗೆ ಕೆಂಚಿಯ ಶಾಪವೇ ಕಾರಣವೆಂದು ಬಗೆದರು. ಬಹುತೇಕ ಜನರು ಹಳ್ಳಿ ಬಿಟ್ಟು ಹೋದರು.” ಎಂದು ಹೇಳಿ ಮಕ್ಕಳನ್ನು ಮನೆಗೆ ಕಳಿಸಿ ತಾನೂ ಮನೆಯೊಳಗೆ ಬಂದನು.
ಮರುದಿನ ಬೆಳಗಾಗುತ್ತಲೆ ಹಾಲಜ್ಜನ ಮನೆಗೆ ಬಿಳಿ ಕಾರೊಂದು ಬಂದಿತು. ಆ ಕಾರಿನಿಂದ ಹಾಲಜ್ಜನ ಮಗ ಶ್ರೀಧರ, ಸೊಸೆ ಹಾಗೂ ಮೊಮ್ಮಕ್ಕಳು ಇಳಿದರು. ಹಾಲಜ್ಜನು ಸಂತೋಷದಿಂದ ನಗುತ್ತಾ ಅವರನ್ನು ಬರಮಾಡಿಕೊಂಡನು. ಮಗ ಸೊಸೆ ಹಾಲಜ್ಜನ ಕ್ಷೇಮವನ್ನು ವಿಚಾರಿಸಿದರು. ಹಾಲಜ್ಜ ತಾನು ಸುಖಿಯಾಗಿರದಿದ್ದರೂ ಕ್ಷೇಮವೆಂದೇ ಉತ್ತರಿಸಿದನು. ಶ್ರೀಧರನಿಗೆ ಗ್ರಾಮದ ಸ್ಥಿತಿ ನೋಡಿ ಬಹಳ ಬೇಸರವಾಯಿತು.ಕಳೆದ ಐದು ವರ್ಷಗಳಿಂದ ಶ್ರೀಧರ ಹಳ್ಳಿಗೆ ಬಂದಿರಲಿಲ್ಲ. ಯಾವ ಸಂತೋಷಕ್ಕಾಗಿ ಜನ ಇನ್ನೂ ಈ ಹಳ್ಳಿಯಲ್ಲೇ ಉಳಿದಿರುವರೋ ಎಂದು ಗುಣುಗಿದನು. ಏನೆ ಆಗಲಿ ಈ ಭಾರಿ ಅಪ್ಪಯ್ಯನನ್ನು ಕರೆದುಕೊಂಡೆ ಹೋಗಬೇಕು ಎಂದುಕೊಂಡನು. ತನ್ನ ಹೆಂಡತಿಗೆ ಶ್ರೀಧರ ಹಳ್ಳಿಯ ಗತವೈಭವವನ್ನು ಹೇಳಿದನು. ಬಹಳ ವರ್ಷಗಳ ಬಳಿಕ ಮೊಮ್ಮಕ್ಕಳನ್ನು ನೋಡಿದ ಹಾಲಜ್ಜನಿಗೆ ಖುಷಿಯೋ ಖುಷಿ. ಹಾಲಜ್ಜ ಹೇಳಿದ ಕಥೆಗಳನ್ನು ಕೇಳಿ ಮೊಮ್ಮಕ್ಕಳು ಸಂತಸಪಟ್ಟರು. ಶ್ರೀಧರನ ರಜಾ ದಿನಗಳು ಮುಗಿಯುತ್ತಿದ್ದಂತೆ, “ಅಪ್ಪಯ್ಯ, ನಾಳೆ ನಾವೆಲ್ಲ ಹೊರಡಬೇಕು. ತಯಾರಿ ಮಾಡ್ಕೊಳ್ಳಿ.” ಎಂದು ಹಾಲಜ್ಜನಿಗೆ ಹೇಳಿದನು. ಹಾಲಜ್ಜನಿಗೆ ಮಗನ ಮಾತಿನ ಅರ್ಥ ತಿಳಿಯಿತು. ಹಾಲಜ್ಜ ಮಗನೊಟ್ಟಿಗೆ ಹೋಗಲು ಒಪ್ಪಲಿಲ್ಲ. ಸೊಸೆ ಕೂಡಾ, “ಮಾವಯ್ಯ, ಈ ಹಾಳಾದ ಊರಲ್ಲೇನಿದೆ? ನಿಮ್ಮನ್ನೊಬ್ಬರನ್ನೆ ಬಿಟ್ಟು ಅಲ್ಲಿ ನಾವು ಸಂತೋಷವಾಗಿರಲಿಕ್ಕಾಗ್ತದಾ? ಊರ ಜನಾ ಏನ್ ಮಾತಾಡಿಯಾರು? ವಯಸ್ಸಾದ ತಂದೇನ ಹಳ್ಳೀಲಿ ಬಿಟ್ಟು ಮಗ ಹೇಗಿದಾನ ನೋಡಿ ಹಾಯಾಗಿ ಪಟ್ಟಣದಲ್ಲಿ. ಅಂತ ನಿಮ್ಮಗನನ್ನೆ ಜನ ಛೀಮಾರಿ ಹಾಕತಾರೆ. ಅದಕ್ಕೇ ಹೊರಡಿ ನಮ್ಮ ಜೊತೆ” ಎಂದು ತಾಯಿ ಮಗುವನ್ನು ಗದರುವಂತೆ ಸೊಸೆ ಮಾವಯ್ಯನನ್ನು ಗದರಿದಳು. ಅದಕ್ಕೆ ಹಾಲಜ್ಜ, “ಮಗಾ, ಈ ನನ್ನೂರಲ್ಲಿ ನನ್ನ ಪಿರಾಣ ಮಡಿಕ್ಕೊಂಡಿವ್ನಿ. ಈ ಮಣ್ಣಿನ ನಂಟು ಇಂದು ನೆನ್ನೆದಲ್ಲ. ನನ್ನ ತಾತ ಮುತ್ತಾತರು ಬಾಳಿ ಬದುಕಿದ ಮಡಿಲಿದು. ಅಲ್ಲದೇ ವ್ಯಾಘ್ರತೀರ್ಥದ ವೈಭವ ಕಂಡವ ನಾನು. ಕೆಂಚಿಕಟ್ಟೆಯ ಸಾಕ್ಷಿ ಬಲ್ಲವ ಈ ಹಾಲಜ್ಜ. ಬದುಕಿರೋವರೆಗೂ ಈ ನೆಲದಲ್ಲೆ ಇರುವೆ. ಈ ನೆಲದಲ್ಲಿದ್ದೇನಂತ ನಾನು ಬದುಕಿರುವೆ. ಈ ನೆಲಬಿಟ್ಟ ಘಳಿಗೆಯೇ ನನಗೆ ಬದುಕಿಲ್ಲ. ನಾ ಬರಲಾರೆ ನಿಮ್ಮ ಜೊತೆ. ನೀವು ಹೊರಡಿ, ನನ್ನ ಚಿಂತೆ ಮಾಡಬೇಡಿ” ಎಂದು ಗೋಡೆ ಕಡೆಗೆ ತಿರುಗಿ ನಿಷ್ಠುರವಾಗಿ ಹೇಳಿಬಿಟ್ಟನು. ಅಪ್ಪಯ್ಯ ಹೀಗೆ ಹೇಳುವಾಗಿನ ಧ್ವನಿಯ ವ್ಯತ್ಯಾಸವನ್ನರಿತ ಶ್ರೀಧರ ಅವನನ್ನು ತಮ್ಮ ಜೊತೆ ಕರೆದೊಯ್ಯುವ ವಿಚಾರವನ್ನು ಕೈಬಿಟ್ಟನು. ಮರುದಿನ ಬೆಳೆಗ್ಗೆ ಬೇಗ ಎದ್ದು ಕಾರನ್ನು ಸಿದ್ದಗೊಳಿಸಿದ ಶ್ರೀಧರ ಹಾಲಜ್ಜನ ಕಾಲಿಗೆ ನಮಸ್ಕರಿಸಿ ಹೋಗುವುದಾಗಿ ಹೇಳಿ ಸ್ವಲ್ಪ ಹಣ ಕೊಟ್ಟ ಕಾರು ಏರಿದನು. ಕಾರು ಏರಿದ ಮೊಮ್ಮಗಳು ಕಿಟಕಿಯಿಂದ ಹಾಲಜ್ಜನನ್ನು ಕರೆದು, “ಅಜ್ಜ, ಕೆಂಚಿಕಟ್ಟೆ ಹತ್ತಿರ ಹೋಗಬೇಡ. ಹುಷಾರು!” ಎಂದು ಅಜ್ಜನ ಕೈಕುಲುಕಿದಳು. ಆಗ ಅಜ್ಜ ನಸುನಕ್ಕು ಸರಿ ಎನ್ನುತ್ತಾ ತಲೆ ಅಲ್ಲಾಡಿಸಿ ಮೊಮ್ಮಗಳ ಕೈಹಿಡಿದು ಮುತ್ತಿಕ್ಕಿ ಕಣ್ಣಿಗೊತ್ತಿಕೊಂಡಾಗ ಹಾಲಜ್ಜನಿಗೆ ತನ್ನವ್ವನ ನೆನಪಾಗಿತ್ತು.
-ಜಗದೀಶ ಸಂ.ಗೊರೋಬಾಳ