-೧೨-
ಚಿನ್ನಪ್ಪ ಮತ್ತು ಅಯ್ಯರ್ ಮುಂಜಾನೆ ಬೇಗನೆದ್ದು ನಿತ್ಯಕರ್ಮಗಳನ್ನು ಮುಗಿಸಿ ಉಪಹಾರ ಸೇವಿಸಿ ಗೂಡೂರಿಗೆ ಹೊರಟಾಗ ಅಯ್ಯರ್ ಭಾವುಕರಾದರು. ಅಯ್ಯರ್ ಕಣ್ಣಲ್ಲಿ ನೀರಾಡಿದ್ದು ಕಂಡು ಚಿನ್ನಪ್ಪನ ಹೆಂಡತಿಗೆ ಮುಜುಗರವಾಗಿ ಕಸಿವಿಸಿಗೊಂಡಳು. ಅಯ್ಯರ್ ಚಿನ್ನಪ್ಪನ ಮಗುವನ್ನೆತ್ತಿಕೊಂಡು ಮುತ್ತಿಕ್ಕಿ ತಮ್ಮ ಮನದಾಳದಿಂದ ಒಮ್ಮೆ ಹೆಂಡತಿ ಮಗುವಿನೊಂದಿಗೆ ತಮ್ಮ ಮನೆಗೆ ಬರಬೇಕೆಂದು ಚಿನ್ನಪ್ಪನಿಗೆ ಆಗ್ರಹಮಾಡಿ ಹೇಳಿದರು. ರಾತ್ರಿ ಚಿನ್ನಪ್ಪನ ಋಣ ತೀರಿಸಲಾಗದಿದ್ದರೂ ಪಡೆದ ಉಪಕಾರಕ್ಕೆ ಪ್ರತಿಯಾಗಿ ಏನಾದರೂ ಮಾಡಬೇಕೆಂದುಕೊಂಡದ್ದು ನೆನಪಾಗಿ ಒಂದು ಕಾಗದದಲ್ಲಿ ಅವನ ವಿಳಾಸ ಬರೆದುಕೊಡುವಂತೆ ಚಿನ್ನಪ್ಪನಿಗೆ ಹೇಳಿದರು. ಅದರಂತೆ ಚಿನ್ನಪ್ಪ ಒಂದು ಕಾಗದದಲ್ಲಿ ತನ್ನ ವಿಳಾಸ ಬರೆದು ಅಯ್ಯರಿಗೆ ಕೊಟ್ಟ ನಂತರ ಇಬ್ಬರೂ ಗೂಡೂರಿಗೆ ಹೊರಟರು.
ಬಸ್ಸಿನಲ್ಲಿ ಗೂಡೂರು ತಲುಪಿದಾಗ ಸಮಯ ಒಂಭತ್ತಾಗಿತ್ತು. ಪೋಸ್ಟಾಫೀಸ್ ತೆಗೆಯಲು ಇನ್ನೂ ಸಮಯವಿತ್ತು. ಅಯ್ಯರನ್ನು ಬಸ್ ನಿಲ್ದಾಣದಲ್ಲಿ ಕುಳ್ಳಿರಿಸಿ ಹತ್ತುನಿಮಿಷದಲ್ಲಿ ವಾಪಸ್ಸಾಗಿವುದಾಗಿ ಹೇಳಿ ಚಿನ್ನಪ್ಪ ಎಲ್ಲಿಗೋ ಹೋದ. ಹಿಂತಿರುಗಿದವನ ಕೈಯಲ್ಲಿ ಎರಡು ಕವರುಗಳಿದ್ದವು. ಸಂಕೋಚದಿಂದ “ಸಾವ್ಕಾರ್ರೇ ತಪ್ತಿಳೀಬಾರ್ದು, ಏನೋ ಈ ಬಡ್ವನ್ಕೈಲಾದ್ದು” ಎಂದು ಹೇಳಿ ಕವರುಗಳನ್ನು ಅಯ್ಯರ್ ಕೈಗಿತ್ತ. ತಗೆದು ನೋಡಿದಾಗ ಒಂದರಲ್ಲಿ ಒಂದು ಅಗ್ಗದ ಕಾಟನ್ ಅಂಗಿಯೂ ಇನ್ನೊಂದರಲ್ಲಿ ಒಂದು ಜೊತೆ ಹವಾಯಿ ಚಪ್ಪಲಿಗಳೂ ಇದ್ದುವು. ಅಯ್ಯರಿಗೆ ಕಣ್ತುಂಬಿಬಂದು ಕಣ್ಣೀರಕಟ್ಟೆ ಒಡೆದಂತೆ ಅತ್ತುಬಿಟ್ಟರು. ಚಿನ್ನಪ್ಪ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ “ನಡೀರಿ ಸಾವ್ಕಾರ್ರೇ ನೀವೇನ್ನೀವು ಎಳೇಮಕ್ಳಂಗೆ, ಬನ್ನೀ ಹೋಗಣ ಪೋಸ್ಟಾಫೀಸ್ ತೆಗ್ಯೋ ಟೈಮಾಯ್ತು” ಎಂದು ಅಯ್ಯರಿಗೆ ಬೆನ್ನುತಿರುಗಿಸಿ ನಿಂತ. ಶರ್ಟು ಮತ್ತು ಚಪ್ಪಲಿ ಹಾಕಿಕೊಂಡು ಅಯ್ಯರ್ “ನಡ್ಯಪ್ಪ ಹೋಗಣ” ಅಂದರು. ಅಲ್ಲಿಂದ ಇಬ್ಬರೂ ಪೋಸ್ಟಾಫೀಸಿಗೆ ಹೋದರು.
ಅಯ್ಯರ್ ಪೋಸ್ಟಾಫೀಸಿನ ಕೌಂಟರಿನಬಳಿ ಹೋಗಿ ಅಲ್ಲಿದ್ದ ಪೋಸ್ಟ್ ಮಾಸ್ಟರಿಗೆ ಕೃಷ್ಣಯ್ಯರ್ ಎಂಬ ಹೆಸರಿಗೆ ವಿಶಾಖಪಟ್ಟಣದ ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿ ವಿಳಾಸಕ್ಕೊಂದು ಟೆಲಿಗ್ರಾಂ ಕಳಿಸಬೇಕೆಂದು ಹೇಳಿದರು. ಅವರು ಒಂದು ಫಾರಂ ಕೊಟ್ಟು ವಿಷಯವನ್ನು ಬರೆದುಕೊಡುವಂತೆ ತಿಳಿಸಿದರು. ಚಿನ್ನಪ್ಪನಿಗಾಗಲೀ ಅಯ್ಯರಿಗಾಗಲೀ ಅಷ್ಟಾಗಿ ಇಂಗ್ಲೀಷ್ ಗೊತ್ತಿರದಿದ್ದ ಕಾರಣ ಪೋಸ್ಟ್ ಮಾಸ್ಟರಿಗೆ ಟೆಲಿಗ್ರಾಂ ಮಾಡಬೇಕಿದ್ದ ವಿಷಯ ತಿಳಿಸಿ ಅವರನ್ನೇ ಫಾರಂ ತುಂಬುವಂತೆ ವಿನಂತಿಸಿಕೊಂಡರು. ಅವರು ಚಿನ್ನಪ್ಪ ಮತ್ತು ಅಯ್ಯರೊಂದಿಗೆ ಸಮಾಲೋಚಿಸಿ ಫಾರಂನಲ್ಲಿ I am safe, Going to Tirupati, Proceed with the wedding, I bless the couple ಎಂದು ಬರೆದು ಅಯ್ಯರಿಗೆ ತೋರಿಸಿದರು. ಅಯ್ಯರ್ ವಿಷಯವನ್ನು ನಿಧಾನಕ್ಕೆ ಕೂಡಿಸಿಕೊಂಡು ಓದಿ ಹಾಗೇ ಟೆಲಿಗ್ರಾಂ ಕಳಿಸಲು ತಿಳಿಸಿದರು. ಪೋಸ್ಟ್ ಮಾಸ್ಟರ್ ಅಕ್ಷರಗಳನ್ನು ಲೆಕ್ಕಮಾಡಿ ಹದಿನಾಲ್ಕು ರೂಪಾಯಿಗಳಾಗುವುದೆಂದು ತಿಳಿಸಿದರು. ಚಿನ್ನಪ್ಪನೇ ಹಣಕೊಟ್ಟ. ಪೋಸ್ಟ್ ಮಾಸ್ಟರಿಗೆ ತುರ್ತಾಗಿ ಟೆಲಿಗ್ರಾಂ ಕಳಿಸಿಕೊಡಬೇಕೆಂದು ಕೋರಿಕೊಂಡು ಧನ್ಯವಾದ ತಿಳಿಸಿ ಇಬ್ಬರೂ ಅಲ್ಲಿಂದ ಬಸ್ ನಿಲ್ದಾಣಕ್ಕೆ ಹೊರಟರು.
ಬಸ್ ನಿಲ್ದಾಣ ತಲುಪುತ್ತಿದ್ದಂತೆಯೇ ಅಲ್ಲಿ ತಿರುಪತಿಗೆ ಹೋಗುವ ಬಸ್ಸು ಹೊರಡಲು ಸಿದ್ಧವಾಗಿ ನಿಂತಿತ್ತು. ಚಿನ್ನಪ್ಪ “ಸಾವ್ಕಾರ್ರೇ ತಿರುಪ್ತೀ ಟಿಕೆಟ್ಗೆ ಇಪ್ಪತ್ರುಪಾಯಿ, ಒಂದೈವತ್ರುಪಾಯ್ ನಿಮ್ಕರ್ಚ್ಗಿಟ್ಕಳಿ” ಅಂದು ಎಪ್ಪತ್ತು ರೂಪಾಯಿ ಕಿಸೆಯಿಂದ ತೆಗದು ಅಯ್ಯರ್ ಕೈಯಲ್ಲಿಟ್ಟ. ಅಯ್ಯರಿಗೆ ಗಂಟಲುಬ್ಬಿಬಂದು ಮಾತು ಹೊರಡಲಿಲ್ಲ. ಚಿನ್ನಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡರು. “ಬಸ್ಸತ್ಕಳಿ ಹೊರಡ್ತಿದೆ” ಅಂದ ಚಿನ್ನಪ್ಪ ಅಯ್ಯರ್ ಅಪ್ಪುಗೆಯಿಂದ ಕೊಸರಿಕೊಳ್ಳುತ್ತಾ. ಅಯ್ಯರ್ ಬಸ್ಸೇರಿ ಕುಳಿತುಕೊಳ್ಳುತ್ತಿದ್ದಂತೆಯೇ ಬಸ್ಸು ನಿಧಾನಕ್ಕೆ ನಿಲ್ದಾಣ ಬಿಟ್ಟು ಹೊರಟಿತು. ಅಯ್ಯರ್ ತಮ್ಮ ಮಂಜಾದ ಕಣ್ಣುಗಳನ್ನೊರೆಸಿಕೊಳ್ಳುವಷ್ಟರಲ್ಲಿ ಕಿಟಕಿಯಿಂದಾಚೆ ನಗುತ್ತಾ ಕೈಬೀಸುತ್ತಿದ್ದ ಚಿನ್ನಪ್ಪ ಮರೆಯಾಗಿ ಬಸ್ಸು ಅಂಗಡಿ ಮುಂಗಟ್ಟುಗಳಿದ್ದ ಮುಖ್ಯರಸ್ತೆಯಲ್ಲಿ ಚಲಿಸುತ್ತಿತ್ತು.
ಹೊರಗಡೆ ಅಂಗಡಿಯೊಂದರಲ್ಲಿ ತೂಗಿಹಾಕಿದ್ದ ಗಡಿಯಾರದಲ್ಲಿ ಸಮಯ ಹನ್ನೊಂದೂವರೆ ತೋರುತ್ತಿದ್ದುದನ್ನು ಕಂಡೊಡನೆ ಅಯ್ಯರಿಗೆ ಆಗಲೇ ಮುಹೂರ್ತದ ವೇಳೆಯಾಗಿದ್ದುದು ನೆನಪಾಯಿತು. ಒಂದು ಘಳಿಗೆ ಹಿರಿಮಗನ ಮದುವೆಯ ಮುಹೂರ್ತವನ್ನೇ ಮರೆತು ಕುಳಿತದ್ದು ಕಂಡು ಅಚ್ಚರಿಯಾಯಿತು. ಆ ಭಗವಂತನ ಆಣತಿಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗುವುದಿಲ್ಲವೆನ್ನುವುದು ಸುಮ್ಮನೆ ಅಲ್ಲ, ಇಲ್ಲದಿದ್ದರೆ ವಿಶಾಖಪಟ್ಟಣದ ಗ್ರ್ಯಾಂಡ್ ರೆಸಿಡೆನ್ಸಿಯಲ್ಲಿ ಮಗನ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಬೇಕಾಗಿದ್ದ ಹೊತ್ತಿನಲ್ಲಿ ಹೀಗೆ ಗೂಡೂರಿನಿಂದ ತಿರುಪತಿಗೆ ಹೋಗುವ ಬಸ್ಸಿನಲ್ಲೇಕೆ ಕುಳಿತಿರುತ್ತಿದ್ದೆ ಅಂದುಕೊಂಡರು. ಮನಸ್ಸು ಒಂದು ರೀತಿ ನಿರುಮ್ಮಳವಾಗಿತ್ತು. ಸಣ್ಣ ಸಣ್ಣ ವಿಚಾರಕ್ಕೂ ಆತಂಕದಿಂದ ಉದ್ವೇಗಗೊಳ್ಳುತ್ತಿದ್ದ ತಾವು ಇಂತಹ ಸಂದರ್ಭದಲ್ಲೂ ಸಮಚಿತ್ತದಿಂದಿರುವುದು ಕಂಡು ಅವರಿಗೇ ಅಚ್ಚರಿಯೆನಿಸುತ್ತಿತ್ತು. ತಾವಿಲ್ಲದಿದ್ದರೇನಂತೆ ಮಗನ ಮದುವೆಯೊಂದು ಸಾಂಗವಾಗಿ ನೆರವೇರಿದರೆ ಸಾಕೆನಿಸಿತು. ಹಿಂದೆಯೇ ಎಲ್ಲವೂ ಆ ಭಗವಂತ ನೋಡಿಕೊಳ್ಳುತ್ತಾನೆ, ಹುಲುಮಾನವರೇನು ಮಾಡಲಾದೀತೆನಿಸಿ ನಿರಾಳರಾದರು.
ತಿರುಪತಿಗೆ ಹೊರಟಿದ್ದ ಬಸ್ಸಿನಲ್ಲಿ ಇನ್ನೂ ಸಾಕಷ್ಟು ಸೀಟುಗಳು ಖಾಲಿಯಿದ್ದುವು. ಬಸ್ಸಿನ ಕಂಡಕ್ಟರ್ ಬಸ್ಸನ್ನು ಗೂಡೂರಿನ ರೈಲ್ವೇಸ್ಟೇಷನ್ ಎದುರಿನ ಬಸ್ ಸ್ಟಾಪಿನಲ್ಲಿ ನಿಲ್ಲಿಸಿಬಿಟ್ಟ. ಸುಮಾರು ಕಾಲು ಘಂಟೆಯಾದರೂ ಬಸ್ಸು ಅಲ್ಲಿಂದ ಹೊರಡಲೇ ಇಲ್ಲ. ಖಾಲಿ ಸೀಟು ತುಂಬಿಸುವ ಇರಾದೆಯಿಂದ “ತಿರುಪ್ತೀ…ತಿರುಪ್ತೀ… ಯಾರ್ರೀ…ತಿರುಪ್ತೀ” ಎಂದು ಕೂಗುತ್ತಲೇ ಇದ್ದ ಕಂಡಕ್ಟರಿಗೆ ಅಯ್ಯರ್ ಪಕ್ಕದಲ್ಲಿ ಕುಳಿತಿದ್ದವ “ಅಯ್ಯೋ ನಡ್ಯಪ್ಪಾ ಸಾಕು ಲೇಟಾಯ್ತಾದೆ… ಅದೆಷ್ಟ್ ಹೊತ್ತೂಂತ ಕಿರುಚ್ಕೋತಿ” ಅಂದ. ಅಯ್ಯರಿಗೂ ಬಸ್ಸು ಅಲ್ಲಿಂದ ಹೊರಟರೆ ಸಾಕೆನಿಸಿತ್ತು. ಕೇವಲ ನೂರುಮೀಟರಿನಾಚೆ ಗೂಡೂರು ರೈಲ್ವೇಸ್ಟೇಷನ್ನಿನಲ್ಲಿ ಅಯ್ಯರಿಗಾಗಿ ಹುಡುಕಾಟ ನಡೆಸಿದ್ದ ವೇಲು ಮತ್ತು ತಂಗಮಣಿಯವರಿಗೆ ಅಷ್ಟು ಸಮೀಪದಲ್ಲಿ ತಮ್ಮ ಯಜಮಾನರು ಬಸ್ಸಿನಲ್ಲಿ ಕುಳಿತಿದ್ದರೆಂಬ ಅರಿವಿರಲಿಲ್ಲ.
ಸುಮಾರು ಹನ್ನೆರಡರ ಹೊತ್ತಿಗೆ ಗೂಡೂರನ್ನು ಬಿಟ್ಟು ಹೊರಟ ಬಸ್ಸು ಹತ್ತುಹಲವು ಸ್ಟಾಪುಗಳಲ್ಲಿ ನಿಂತು ತಿರುಪತಿ ಬಸ್ ನಿಲ್ದಾಣ ತಲುಪುವಷ್ಟರಲ್ಲಿ ಸಮಯ ಎರಡೂವರೆ ಸಮೀಪಿಸಿತ್ತು. ಅಲ್ಲಿಂದ ತಿಮ್ಮಪ್ಪನ ಸನ್ನಿಧಾನಕ್ಕೆ ಹೋಗಲು ಇನ್ನೊಂದು ತಾಸಿನ ಪಯಣ. ಅಯ್ಯರಿಗೆ ತಿರುಪತಿಯ ಪರಿಚಯ ಸಾಕಷ್ಟಿತ್ತು. ತಿರುಪತಿ ಬಸ್ ಸ್ಟ್ಯಾಂಡಿನಿಂದ ಅಲ್ಲೇ ಅಶೋಕನಗರದಲ್ಲಿದ್ದ ಮಗಳ ಮನೆಗೆ ಕೇವಲ ಹತ್ತುನಿಮಿಷಗಳ ನಡಿಗೆಯಾದರೂ ಇಷ್ಟುಹೊತ್ತಿಗೇ ಸೀನ ಕಾಲೇಜಿನಿಂದ ಹಿಂತಿರುಗಿರುವ ಸಾಧ್ಯತೆಯಿರಲಿಲ್ಲ. ಆದರೆ ಅಯ್ಯರಿಗಾಗಲೇ ಹಸಿವಾಗುತ್ತಿತ್ತು. ಹಾಗಾಗಿ ಬಸ್ ನಿಲ್ದಾಣದ ಬಳಿಯಲ್ಲಿದ್ದ ಹೋಟೆಲೊಂದಕ್ಕೆ ಹೋಗಿ ಒಂದಷ್ಟು ತಿಂದು ಹಸಿವು ನೀಗಿಸಿಕೊಂಡರು. ಬಸ್ಸುಹಿಡಿದು ತಿರುಮಲಕ್ಕೆ ಹೊರಟಾಗ ಮನಸ್ಸು ಮತ್ತೆ ವಿಶಾಖಪಟ್ಟಣ ತಲುಪಿತ್ತು. ತಮ್ಮ ಅನುಪಸ್ಥಿತಿಯನ್ನೇ ನೆಪ ಮಾಡಿಕೊಂಡು ಮದುವೆ ರದ್ದುಗೊಳಿಸಿರದಿದ್ದರೆ ಸಾಕೆನಿಸಿತು. ಅಲ್ಲಿ ಸುಬ್ಬುವಿನ ಮದುವೆ ನಿರ್ವಿಘ್ನವಾಗಿ ನಡೆದಿದ್ದರೆ ಶೀಘ್ರದಲ್ಲೇ ಪರಿವಾರ ಸಮೇತರಾಗಿ ಬಂದು ದೇವರ ದರ್ಶನ ಪಡೆದು ತಿಮ್ಮಪ್ಪನಿಗೆ ಸಹಸ್ರಕಲಶಾಭಿಷೇಕ ಸೇವೆ ಮಾಡಿಸುವುದಾಗಿ ಹರಸಿಕೊಂಡರು.
ತಿರುಮಲದಲ್ಲಿ ಬಸ್ಸಿಳಿದು ಸಾಂಗವಾಗಿ ವೆಂಕಟರಮಣನ ದರ್ಶನ ಮಾಡಿದರು. ತಿಮ್ಮಪ್ಪನಿಗೆ ನಮಿಸಿ ಜೀವನದಲ್ಲಿ ಇನ್ನೆಂದೂ ಕೆಟ್ಟ ಯೋಚನೆಗಳನ್ನು ತಲೆಯಲ್ಲಿ ಸುಳಿಯಗೊಡದೆ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಹೊಸ ಮನುಷ್ಯನಾಗಿ ಬಾಳುವುದಾಗಿ ಸಂಕಲ್ಪಮಾಡಿಕೊಂಡರು. ನವ ವಧೂವರರ ಹೆಸರಿನಲ್ಲಿ ಏನಾದರೂ ಸೇವೆ ಮಾಡಿಸುವ ಮನಸ್ಸಾಯಿತು. ಆದರೆ ಮದುವೆ ನಡೆದಿರುವ ಖಾತ್ರಿಯಿರಲಿಲ್ಲದ ಕಾರಣಕ್ಕೆ ಹಿಂಜರಿಕೆಯೂ ಆಯಿತು. ಕೈಯಲ್ಲಿ ಹೆಚ್ಚು ಹಣವಿಲ್ಲದಿದ್ದರೂ ಹುಂಡಿಗೆ ಹತ್ತು ರೂಪಾಯಿ ಹಾಕಿ ವಧೂವರರ ಕ್ಷೇಮಾಭಿವೃದ್ಧಿಗಾಗಿ ದೇವರಲ್ಲಿ ಬೇಡಿಕೊಂಡರು. ದೇವಸ್ಥಾನದಿಂದ ಹೊರಬಂದು ಒಂದು ಕಡೆ ಕುಳಿತು ಪ್ರಸಾದವೆಂದು ಕೊಟ್ಟಿದ್ದ ಒಂದು ದೊನ್ನೆ ಮೊಸರನ್ನ ಮತ್ತು ಲಾಡು ಸೇವಿಸಿದರು. ದೇಹಕ್ಕೂ ಮನಸ್ಸಿಗೂ ಸಮಾಧಾನ ಸಿಕ್ಕಂತಾಯಿತು. ನೆಮ್ಮದಿಯಿಂದ ತಿರುಪತಿಗೆ ಬಸ್ಸು ಹತ್ತಿದರು.
ತಿರುಪತಿ ತಲುಪಿದಾಗ ಇನ್ನೂ ಕತ್ತಲಾಗಿರಲಿಲ್ಲ. ಹತ್ತಿರದಲ್ಲೇ ಇದ್ದ ಮಗಳ ಮನೆಯ ರಸ್ತೆಯ ಪರಿಚಯವಿತ್ತು. ನೇರವಾಗಿ ಅಲ್ಲಿಗೆ ಹೆಜ್ಜೆಹಾಕಿದರು. ಇವರ ಅದೃಷ್ಟಕ್ಕೆ ಅಯ್ಯರ್ ಮಗಳ ಮನೆ ತಲುಪಿ ಬಾಗಿಲು ಬಡಿದಾಗ ಮಗಳ ಮೈದುನ ಸೀನ ಕಾಲೇಜಿನಿಂದ ಹಿಂತಿರುಗಿ ಮನೆಯಲ್ಲೇ ಇದ್ದ. ಬಾಗಿಲು ತೆಗೆದೊಡನೆ ಧುತ್ತೆಂದು ಎದುರಾದ ಅಯ್ಯರನ್ನು ಕಂಡು ಸೀನನಿಗಾದ ಅಚ್ಚರಿ ಅಷ್ಟಿಟ್ಟಲ್ಲ. “ಇದೇನ್ಮಾವ ಇಲ್ಲೀ?! ಯಾಕೆ… ಮದುವೇಗೆ ಹೋಗ್ಲಿಲ್ವೇ?! ಒಬ್ರೇ ಬಂದಿದೀರೀ…ಉಳ್ದೋರೆಲ್ಲ ಎಲ್ಮಾವಾ?!” ಮನೆಯೊಳಗೂ ಕರೆಯದೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ. “ಅಯ್ಯೋ ಅದನ್ನ್ಯಾಕ್ ಕೇಳ್ತೀಯಪ್ಪಾ? ಅದೊಂದೊಡ್ಕತೆ, ಮೊದ್ಲು ಒಂದ್ಲೋಟ ನೀರ್ಕೊಡೋ ಮಾರಾಯ” ಎಂದು ಮನೆಯೊಳಗೆ ಹೋಗಿ ಅಲ್ಲಿದ್ದ ಕುರ್ಚಿಯಲ್ಲಿ ಕುಳಿತರು.
-೧೩-
ರೋಚಕ ಕ್ರಿಕೆಟ್ ಪಂದ್ಯಕ್ಕೆ ಮೊದಲು ದಟ್ಟವಾಗಿ ಕವಿದ ಮೋಡ ಮೂಡಿಸುವ ಆತಂಕ ಅಂದು ಗ್ರ್ಯಾಂಡ್ ರೆಸಿಡೆನ್ಸಿಯಲ್ಲಿ ಮನೆಮಾಡಿತ್ತು. ನಸುಕಿಗೆ ಮುಂಚೆಯೇ ಚಟುವಟಿಕೆಗಳು ಪ್ರಾರಂಭವಾಗಿತ್ತಾದರೂ ಮದುವೆ ನಡೆಯುವ ಕುರಿತು ಅನುಮಾನಗಳಿದ್ದೇ ಇದ್ದುವು. ಆದರೂ ಧೃತಿಗೆಡದೆ ಒಂದೊಂದೇ ಸಿದ್ಧತೆಗಳಲ್ಲಿ ತೊಡಗಿದ್ದ ಹೆಣ್ಣಿನ ಮನೆಯವರ ಮನದಲ್ಲಿನ್ನೂ ಆಶಾಭಾವನೆ ಬತ್ತಿರಲಿಲ್ಲ. ಗಂಡಿನ ಮನೆಯವರಿದ್ದ ಮೂರನೇ ಮಹಡಿಯಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿತ್ತು. ನಿದ್ದೆಯಿಂದ ಎಚ್ಚರಗೊಂಡಿದ್ದ ಕೆಲವರಿಗೆ ಇನ್ನೂ ಹಾಸಿಗೆ ಬಿಟ್ಟೇಳುವ ಮನಸ್ಸಿದ್ದಂತಿರಲಿಲ್ಲ. ಅಗಲವಾಗಿ ತೆರೆದಿದ್ದ ಸುಬ್ಬುವಿನ ದೊಡ್ಡ ಕಣ್ಣುಗಳು ಮಾಡು ನೋಡುತ್ತಿದ್ದುವು. ಸೀತಮ್ಮನವರಿಗಿನ್ನೂ ಎಚ್ಚರವಾದಂತಿರಲಿಲ್ಲ. ಕಾರಿಡಾರಿನಲ್ಲಿ ಯಾಂತ್ರಿಕವಾಗಿ ಶತಪಥ ಹಾಕುತ್ತಿದ್ದ ಮುರಳಿಯವರು ಮಾತ್ರ ಯಾವುದೋ ಯೋಚನೆಯಲ್ಲಿ ಕಳೆದು ಹೋದಂತಿತ್ತು. ಅಷ್ಟರಲ್ಲಿ ಒಂದು ಕೈಲಿ ಲೋಟಗಳನ್ನೂ ಇನ್ನೊಂದು ಕೈಲಿ ಕಾಫಿ ಕೆಟಲನ್ನೂ ಹಿಡಿದುಬಂದ ಹುಡುಗ ಮುರಳಿಯವರೆದುದುರು ನಿಂತು “ಸರ್, ಕಾಫೀ…” ಅಂದ. ಅವನಿಂದ ಕಾಫಿ ಪಡೆದ ಮುರಳಿ “ನೋಡಪ್ಪಾ ರೂಮ್ ಬಾಗ್ಲು ಮೆಲ್ಲಗೆ ಬಡಿದು ಕಾಫೀ ಬೇಕಾ ಕೇಳು, ಇನ್ನೂ ಮಲ್ಗಿರೋರ್ಗೆ ಡಿಸ್ಟರ್ಬಾಗ್ದಂಗೆ” ಎಂದು ಕಾರಿಡಾರಿನಂಚಿಗಿದ್ದ ಬಾಲ್ಕನಿಯಲ್ಲಿ ಕಾಫಿಯೊಂದಿಗೆ ಎದುರಿಗಿದ್ದ ಗಾರ್ಡನ್ನಿನ ಸೌಂದರ್ಯ ಹೀರುತ್ತಾ ನಿಂತರು.
ನಿಧಾನಕ್ಕೆ ಒಬ್ಬೊಬ್ಬರೇ ಎದ್ದು ಹುಡುಗರು ತಂದಿದ್ದ ಕಾಫಿ, ಟೀ ಸೇವಿಸಲಾರಂಭಿಸುತ್ತಿದ್ದರು. ಸೀತಮ್ಮನವರಿಗೂ ಎಚ್ಚರವಾಯಿತು. ಕೊಠಡಿಗೆ ಬಂದು ಸೀತಮ್ಮನವರ ಆರೋಗ್ಯ ವಿಚಾರಿಸಿದ ಸುಬ್ಬು ಮತ್ತು ಮುರಳಿಯವರಿಗೂ ಅವರ ಸ್ಥಿತಿ ಸುಧಾಸಿದ್ದು ಕಂಡು ಸಮಾಧಾನವಾಯಿತು. ಅಷ್ಟರಲ್ಲಿ ಕೃಷ್ಣಯ್ಯರ್ ಪರಿವಾರ ಆ ಕೊಠಡಿಯ ಬಾಗಲಿನಲ್ಲಿ ನಿಂತಿದ್ದರು. ಮೋಹನನ ಕೈಲಿದ್ದ ಹರಿವಾಣದಲ್ಲಿ ಸ್ವಲ್ಪ ಎಣ್ಣೆ, ಸೋಪು, ಬಾಚಣಿಗೆ, ಶ್ಯಾಂಪೂ, ಶೇವಿಂಗ್ ಸಲಕರಣೆಗಳು ಮುಂತಾದುವಿದ್ದುವು. ಕೃಷ್ಣಯ್ಯರ್ ಸೀತಮ್ಮನವರ ಆರೋಗ್ಯದ ಬಗ್ಗೆ ವಿಚಾರಿಸಿ ಮದುಮಗನ ಅಭ್ಯಂಜನಕ್ಕೆ ಸಾಮಗ್ರಿಗಳನ್ನು ತಂದಿರುವುದಾಗಿ ತಿಳಿಸಿದರು. ಇದರಿಂದ ಬೇಸರಗೊಂಡ ಮುರಳಿಯವರು “ಇದೇನ್ಮಾವಾ ನೀವು, ಸ್ವಲ್ಪನಾದ್ರೂ ಪರಿಸ್ಥಿತಿ ಪ್ರಜ್ಞೆ ಬೇಡ್ವೇ…ಅಭ್ಯಂಜನಕ್ಕೀಗೇನಾತ್ರ ಸೀತಕ್ಕ ಈಗಿನ್ನೂ ಏಳ್ಲೋ ಬೇಡ್ವೋಂತ ಎದ್ಕೂತಿದಾರೆ. ಅವ್ರನ್ನೋಡಕ್ ಒಬ್ರು ಡಾಕ್ಟ್ರು ಕರ್ಸೋ ಕಳ್ಕಳಿ ಇಲ್ಲ ನಿಮ್ಗೆ….ಅಭ್ಯಂಜನಾನಂತೆ ಅಭ್ಯಂಜನ” ಎಂದು ರೇಗಿದರು. ಹಿಂದಿನ ರಾತ್ರಿಯಷ್ಟೇ ಅಷ್ಟು ಪ್ರೀತಿಯಿಂದ ಇಂದಿನ ಯೋಜನೆಗಳ ತಯಾರಿ ನಡೆಸಿದ್ದ ಮುರಳಿಯವರು ಬೆಳಗಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರಂತೆ ಎಗರಾಡುತ್ತಿದ್ದುದು ಕಂಡು ಮೋಹನನಿಗೆ ಅಚ್ಚರಿಯಾಯಿತು. ಆದರೆ ಮುರಳಿಯವರ ತಂತ್ರಗಾರಿಕೆಯನ್ನು ಗ್ರಹಿಸಿದ ಕೃಷ್ಣಯ್ಯರ್ ತಾಳ್ಮೆಯಿಂದ “ಅದ್ಯಾಕಪ್ಪ ಮುರ್ಳೀ ಹಾಗಂತೀಯ, ನಂಗಷ್ಟೂ ತಿಳ್ಯಲ್ವೇ ನಾನಾಗ್ಲೇ ಡಾಕ್ಟ್ರಿಗ್ ಫೋನ್ಮಾಡಿದೀನಪ್ಪಾ… ಇನ್ನೇನ್ಬಂದ್ಬಿಡ್ತಾರೆ” ಎಂದು ಹೇಳಿ ಬಾಯ್ಮುಚ್ಚುವುದರೊಳಗೆ ಬ್ಯಾಗೂ ಮತ್ತು ಸ್ಟೆಥ್ ಹಿಡಿದ ಡಾಕ್ಟರ್ ಬಂದರು.
ಸೀತಮ್ಮನವರನ್ನು ಪರೀಕ್ಷಿಸಿದ ಡಾಕ್ಟರ್ ಅವರ ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿರುವುದಾಗಿ ಹೇಳಿ ನಿಶ್ಶಕ್ತಿಗೆ ಟಾನಿಕ್ ಬರೆದು ಕೊಟ್ಟು ಇನ್ನು ಚಿಂತೆಗೆ ಕಾರಣವಿಲ್ಲವೆಂದು ತಿಳಿಸಿದರು. ಶೇಖರನಿಗೆ ಡಾಕ್ಟರ ಫೀಸುಕೊಟ್ಟು ಅವರನ್ನು ಬೀಳ್ಕೊಟ್ಟು ಬರಲು ಹೇಳಿದ ಕೃಷ್ಣಯ್ಯರ್ “ಈಗ್ಲಾದ್ರೂ ಈ ಅಭ್ಯಂಜನದ ಸಾಮಗ್ರಿಗಳ್ನ ಸ್ವೀಕರಿಸ್ಬೋದೇನಪ್ಪ ಮುರಳೀ” ಅಂದರು. ಮೋಹನ ಸಾಮಗ್ರಿಗಳಿದ್ದ ಹರಿವಾಣವನ್ನು ಸುಬ್ಬುವಿಗಿತ್ತು ಕೈಮುಗಿದು ಅಭ್ಯಂಜನ ಮುಗಿಸಿ ಉಪಹಾರಕ್ಕೆ ಬ್ಯಾಂಕ್ವೆಟ್ ಹಾಲಿಗೆ ಬರಬೇಕೆಂದು ವಿನಂತಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಹೋಟೆಲ್ ನೌಕರ ರಿಸೆಪ್ಷನ್ನಿಗೆ ಶರವಣ ಎಂಬುವರ ಕರೆ ಬಂದಿತ್ತೆಂದೂ ಕಾವಲಿಯಲ್ಲಿ ದೊರೆತ ಶವವನ್ನು ಈಗಾಗಲೇ ಬೇರೆಯಾರೋ ಕ್ಲೈಮ್ ಮಾಡಿರುವುದಾಗಿ ತಿಳಿಸಿದ ಶರವಣ ಯಜಮಾನರನ್ನು ಹುಡುಕಿಕೊಂಡು ಮುಂದೆ ಹೋಗುವುದಾಗಿ ಹೇಳಿದ್ದಾಗಿಯೂ ತಿಳಿಸಿದ. ವಿಷಯ ಕೇಳಿದ ಸೀತಮ್ಮ ಕಣ್ಮುಚ್ಚಿ ಕೈಮುಗಿದು “ಕೃಷ್ಣಾ…ಗುರುವಾಯೂರಪ್ಪಾ” ಎಂದು ನಿರಾಳರಾದರು. ಮುರಳಿಯವರು “ನೆನ್ನೆ ರಾತ್ರೀನೆ ವಿಜಯ್ವಾಡಾ ರೈಲ್ವೇ ಪೋಲೀಸ್ಚೌಕಿಯಿಂದ ಫೋನ್ಬಂದಿತ್ತಕ್ಕಾ… ನೀವೊಳ್ಳೆ ನಿದ್ದೇಲಿದ್ರಿದ್ದಿಂದ ತಿಳ್ಸಕ್ಕಾಗ್ಲಿಲ್ಲ. ಚಿಂತಿಸ್ಬೇಡಿ ಭಾವ್ನೋರ ಆಯಸ್ಸು ಗಟ್ಟಿಯಿದೆ” ಎಂದಾಗ “ನಿಮ್ ಬಾಯ್ಹರ್ಕೆಯಿಂದ ಹಾಗೇ ಆಗ್ಲಿ” ಅಂದ ಸೀತಮ್ಮನವರ ಮುಖದಲ್ಲಿ ಎರಡು ದಿನದ ಬಳಿಕ ಪುಟ್ಟನಗೆಯೊಂದು ಇಣುಕಿತ್ತು. ವಾತಾವರಣ ತಿಳಿಗೊಂಡಿದ್ದನ್ನು ಕಂಡ ಕೃಷ್ಣಯ್ಯರ್ “ಹಾಗಿದ್ರೆ ನಾನಿನ್ಬರ್ಲೇ…ಎಲ್ರೂ ಸ್ನಾನ ಮಾಡಿ ತಿಂಡೀಗೆ ಬ್ಯಾಂಕ್ವೆಟ್ ಹಾಲಿಗ್ಬಂದ್ಬಿಡಿ, ನಾನ್ಕೆಳಗ್ಹೋಗಿ ಇನ್ನೊಂದ್ ರೌಂಡ್ ಕಾಫಿ ಕಳಸ್ತೀನಿ” ಎಂದು ಹೊರಡಲನುವಾದರು. ಅದಕ್ಕೆ ಮುರಳಿಯವರು “ಸ್ವಲ್ಪ ನಿಲ್ಲಿ ಮಾವ ಒಂದ್ಚೂರು ಮಾತಾಡೋದಿದೆ” ಅಂದು ಸೀತಕ್ಕನತ್ತ ತಿರುಗಿ “ಸುಬ್ಬೂ ಎಲ್ಹೋದ…ಯಾರಾರೂ ಸ್ವಲ್ಪ ಸುಬ್ಬೂನ್ಕರೀರಿ, ಸೀತಕ್ಕಾ ನಿಮ್ಮ ಮಕ್ಳು ಅಳಿಯಂದ್ರನ್ನೂ ಎಲ್ಲಾ ಸ್ವಲ್ಪ ಬರ್ಹೇಳ್ಬುಡ್ತೀನಿ. ಎಲ್ರೂ ಬರ್ಲಿ ಸ್ವಲ್ಪ ಮಾತಾಡ್ಬೇಕು ಉಳ್ದೋರು ಒಬ್ಬೊಬ್ರೇ ಸ್ನಾನಕ್ ಹೋಗ್ಬೋದು” ಎಂದು ಒಂದು ಪುಟ್ಟ ಸಭೆ ಸೇರಿಸಲನುವಾದರು.
ಸೀತಮ್ಮನವರಿದ್ದ ರೂಮಿನಲ್ಲೇ ಮನೆಯವರೆಲ್ಲಾ ಸೇರಿದರು. ಒಮ್ಮೆ ಸುತ್ತಲೂ ಕಣ್ಣು ಹಾಯಿಸಿ ಮುಖ್ಯವಾಗಿ ಅಲ್ಲಿರಬೇಕಿದ್ದವರೆಲ್ಲಾ ಬಂದಿರುವುದನ್ನು ಖಾತ್ರಿಪಡಿಸಿಕೊಂಡ ಮುರಳಿಯವರು “ಮೊದ್ಲು ನಾನು ನನಗನ್ಸಿದ್ ನಾಕ್ಮಾತಾಡ್ಬುಡ್ತೀನಿ, ಆಮೇಲೆ ಯಾರ್ಗೇನನ್ಸುತ್ತೇ ಹೇಳೋರಂತೆ, ಆಗ್ಬೋದೇ” ಅಂದರು. ಎಲ್ಲರೂ ಆಗಬಹುದೆಂಬಂತೆ ತಲೆಯಲ್ಲಾಡಿಸಿದಾಗ ಕೃಷ್ಣಯ್ಯರ್ “ನೀ ಮಾತಾಡಪ್ಪ ಇಂಥ ಸಂದಿಗ್ಧದಲ್ಲಿ ನಿನ್ನಂತ ಅನುಭವಸ್ಥರೇ ಮುಂದೆ ನಿಂತು ಸಮಸ್ಯೆಗಳ್ಗೆ ಪರಿಹಾರ ಹುಡುಕ್ಬೇಕು” ಎಂದು ಮುರಳಿಯತ್ತ ಕೈಮುಗಿದು ಹೇಳಿದರು. ಮುಗುಳ್ನಕ್ಕು ಪ್ರತಿನಮಸ್ಕರಿಸಿದ ಮುರಳಿ “ನೋಡೀ… ಜೀವನ್ದಲ್ಲಿ ಕೆಲ್ವೊಂದ್ಸಲ ಅನಿರೀಕ್ಷಿತವಾಗಿ ಎದುರಾಗೋ ಸವಾಲುಗಳು ನಮ್ಮ ಕಣ್ಕಟ್ಟಿ ಕತ್ಲೇಲಿ ಬಿಟ್ಬಿಡತ್ವೆ. ಏನ್ಮಾಡೋದೂಂತ ತೋಚದೆ ಗೊಂದ್ಲ ಆಗತ್ತೆ. ಉದಾಹರಣೇಗೆ ನಾವೀಗಿರೋ ಪರಿಸ್ಥಿತೀನೇ ತಗೋಬೋದು. ಇನ್ಕೆಲವೇ ಘಂಟೆಗಳಲ್ಲಿ ಮದ್ವೆ ಅನ್ನೋ ಹೊತ್ನಲ್ಲೂ ಇನ್ನೂ ಮದ್ವೆ ನಡೀಬೇಕೋ ನಡೀಬಾರ್ದೊ ಅನ್ನೋ ಗೊಂದ್ಲ. ಇಂಥ ಪರಿಸ್ಥಿತಿ ನಮ್ಮ ಶತ್ರೂಗೂ ಬರಬಾರ್ದು. ಇಂಥಾ ಹೊತ್ನಲ್ಲಿ ನಾವು ಸಂಯಮ ಕಳ್ಕೊಳ್ದೆ ಜಾಣ್ತನದಿಂದ ನಡ್ಕೋಳೋದೇ ಮುಖ್ಯ. ಈಗ ಆತುರ್ದಲ್ಲಿ ಮದ್ವೆ ಕ್ಯಾನ್ಸಲ್ ಮಾಡಿ ಸಂಜೆ ಹೊತ್ಗೆ ಭಾವ್ನೋರು ಎಲ್ಲೋ ಒಂದ್ಕಡೆ ಚೆನ್ನಾಗಿರೋದ್ಗೊತ್ತಾದ್ರೆ ಆಮೇಲೆ ತಪ್ಮಾಡಿದ್ವೇನೋ ಅನ್ಸತ್ತೆ. ಹಾಗಂತ ಗಟ್ಟಿ ಮನಸ್ಮಾಡಿ ಮದ್ವೆ ನಡ್ಸೋಕೂ ಭಯ್ವಾಗತ್ತೆ. ನಾನೂ ರಾತ್ರಿಯೆಲ್ಲಾ ಯೋಚ್ನೆ ಮಾಡ್ದೆ. ಭಾವ್ನೋರು ಚೆನ್ನಾಗಿದಾರೇಂತ ಒಂದು ಭರ್ವಸೆ ಸಿಕ್ಕಿದ್ರೆ ನಿರ್ಧಾರ ಸುಲ್ಭಾನ್ನುಸ್ತು. ನೆನ್ನೆ ಮಧ್ಯಾಹ್ನ ಹಾಗೇ ವಿಶಾಖಪಟ್ನದ ಸಿಟಿ ಬ್ರಾಂಚಿಗೆ ಫೋನ್ಮಾಡಿ ಅಲ್ಲಿ ಮ್ಯಾನೆಜರಾಗಿರೋ ನನ್ಕಲೀಗು ಶ್ರೀಧರಮೂರ್ತಿ ಹತ್ರ ಮಾತಾಡ್ತಿದ್ದಾಗ ಅವನು ಇಲ್ಯಾರೋ ಸರ್ವೋತ್ತಮಾನಂದ ಸ್ವಾಮ್ಗಳೂ ಅನ್ನೋ ತ್ರಿಕಾಲ ಜ್ಞಾನಿಗಳಿದಾರೆ ಅಂತಿದ್ದಿದ್ದು ನೆನ್ಪಾಯ್ತು. ಅವ್ರನ್ನ ಒಂದ್ಮಾತ್ಕೇಳಿ ಭಾವ್ನೋರು ಕ್ಷೇಮದಿಂದಿದಾರೇಂತ ತಿಳಿದ್ರೆ ಮದ್ವೆ ಮಾಡೋದ್ರಲ್ಲೇನೂ ತಪ್ಪಿಲ್ಲಾಂತ ನನ್ನಭಿಪ್ರಾಯ. ಇದಕ್ಮೇಲೆ ನೀವು ದೊಡ್ಡೋರೆಲ್ಲಾ ಸೇರಿ ನಿಮ್ಗೆಲ್ಲಾ ಸರೀ ಅನ್ಸಿದ್ದು ಮಾಡ್ಬೋದು.” ಎಂದು ಮಾತು ಮುಗಿಸಿದರು.
ಸ್ವಾಮಿ ಸರ್ವೋತ್ತಮಾನಂದರ ಹೆಸರನ್ನೂ ತಮ್ಮದೇ ಮೂಲದಿಂದ ಪಡೆದವರಂತೆ ವಿಷಯವನ್ನು ಪ್ರಸ್ತುತಪಡಿಸಿದ ಮುರಳಿಯ ಜಾಣ್ಮೆಗೆ ಮನಸೋತ ಕೃಷ್ಣಯ್ಯರ್ “ಸ್ವಾಮಿ ಸರ್ವೋತ್ಮಾನಂದ್ರೂ ಅಂದ್ರೆ ಇಡೀ ವಿಶಾಕ್ಪಟ್ನಕ್ಕೇ ಹೆಸ್ರುವಾಸಿ, ಮಹಾನುಭಾವ್ರು, ತ್ರಿಕಾಲ ಜ್ಞಾನಿಗ್ಳು ಅವರಾಶೀರ್ವಾದ ತಗೊಂಡ್ಮದ್ವೆ ಮಾಡುದ್ರೆ ನಂಗೂ ಸಮಾಧಾನ, ಮದ್ವೆಯಾಗೋ ಮಕ್ಳಿಗೂ ಶ್ರೇಯಸ್ಸು” ಎಂದರು. “ನೀವೇನಂತೀರ ಸೀತಕ್ಕಾ?” ಎಂದು ಮುರಳಿ ಕೇಳಿದ್ದಕ್ಕೆ ಸೀತಮ್ಮನವರು “ತ್ರಿಕಾಲ ಜ್ಞಾನಿಗಳೂಂತೀರ, ಸಾಧುಮಹಾತ್ಮರೂಂತೀರ ಅವರ್ಮಾತಿಗ್ಬೆಲೆ ಕೊಡ್ದೆ ನಾನ್ಯಾವ್ನರ್ಕಕ್ ಹೋಗ್ಲಿ? ನಂಗೊಪ್ಗೆ ಇದ್ಯಪ್ಪಾ” ಅಂದರು ವಿಶ್ವಾಸದಿಂದ. “ಸುಬ್ಬೂ ನೀನೆನಂತೀಯಪ್ಪಾ…. ನಿನ್ನಭಿಪ್ರಾಯ ಮುಖ್ಯ” ಮುರಳಿ ಕೇಳಿದರು. ಸಾಧುಸಂತರೆಂದರೆ ಸುಬ್ಬುವಿಗೆ ವಿಶೇಷ ಒಲವೇನಿರಲಿಲ್ಲದಿದ್ದರೂ ಅಲ್ಲಿದ್ದ ಹಿರಿಯರಿಗೆ ಎದುರಾಡುವ ಧೈರ್ಯ ಸಾಲದೆ “ನೀವೆಲ್ಲಾ ಒಪ್ಕೊಂಡ್ಮೇಲೆ ನಂದೇನಿದೆ ಚಿಕ್ಕಪ್ಪ” ಎಂದ. ಮುರಳಿ ಕೃಷ್ಣಯ್ಯರತ್ತ ನೋಡಿ “ಹಾಗಿದ್ರೆ ತಿಂಡಿ ಮುಗುಸ್ಕೊಂಡು ಸ್ವಾಮ್ಗಳ ಆಶ್ರಮಕ್ಕೆ ಹೋಗೋ ವ್ಯವಸ್ಥೆ ಮಾಡಿ ಮಾವ, ಆದ್ರೆ ಒಂದು… ಸ್ವಾಮ್ಗಳ ಬಾಯಲ್ಲಿ ಭಾವ್ನೋರು ಚೆನ್ನಾಗಿದಾರೆ ಅನ್ನೋ ಮಾತ್ಬಂದ್ರೆ ಮಾತ್ರ ಮದ್ವೆ ಈಗ್ಲೇ ಹೇಳ್ಬುಟ್ಟಿದೀನೀ…” ಎಂದು ಹೇಳಿದರು. ಅದಕ್ಕೆ ನೀ ನನಗೆ ಶರತ್ಹಾಕ್ಬೇಕೆ? ನಾನೇನು ಹೆಡ್ಡಾನೇ ಸ್ವಾಮಿಗಳ್ಮಾತ್ಮೀರಿ ಮಗಳ ಮದ್ವೆ ಮಾಡಕ್ಕೇ? ಸ್ವಾಮಿಗಳ್ಹೇಳ್ದಾಗೇ ಆಗ್ಲಿ, ನೀವೆಲ್ರೂ ಬೇಗ್ಬೇಗ ಸ್ನಾನ ಮುಗ್ಸಿ ರೆಡಿಯಾಗಿ ತಿಂಡೀಗೆ ಬ್ಯಾಂಕ್ವೆಟ್ ಹಾಲಿಗ್ಬಂದ್ಬಿಡಿ. ಅಷ್ಟ್ರಲ್ಲಿ ನಾನು ಆಶ್ರಮಕ್ಕೆ ಹೋಗೋ ವ್ಯವಸ್ಥೆ ಮಾಡಿರ್ತೀನಿ” ಎಂದು ಹೊರಟಾಗ ಅವರ ಮನದಲ್ಲಿ ಮದುವೆ ನಡೆಯುವ ಬಗ್ಗೆ ವಿಶ್ವಾಸ ಮೂಡಿತ್ತು.
–ನಾರಾಯಣ ಎಮ್ ಎಸ್
ಮುಂದುವರೆಯುವುದು…
[…] ಇಲ್ಲಿಯವರೆಗೆ […]