ವಿಷಾದ ನೋವು ಘರ್ಷಣೆ ಸಂಘರ್ಷ ತೊಳಲಾಟ ತಾಕಲಾಟದ ಒಳಗುದಿ ಹೇಳುವ ಕಥೆಗಳು: ಎಂ.ಜವರಾಜ್

“ನಿರುದ್ಯೋಗಕ್ಕೆ ಹೆಣವಾದ ಅಪ್ಪ” ಇದು ಆನಂದ್‌ ಎಸ್. ಗೊಬ್ಬಿ ಅವರ ಚೊಚ್ಚಲ ಕಥಾ ಸಂಕಲನ.

“ನನ್ನೊಳಗಿನ ಒಬ್ಬ ಕಥೆಗಾರ ಹೊರಗೆ ಬರಲು ತುಂಬ ತಡಕಾಡಿದ. ಅಲ್ಲಿಂದ ಒಂದು ಘಳಿಗೆಗಾಗಿ ರಮಿಸಿಕೊಂಡು ಬಂದೆ. ಬೆಳಿತಾ ಬೆಳಿತಾ ನನಗೆ ನನ್ನ ಊರಿನ ಪರಿಸರ ಹೇಗಿದೆ, ನನ್ನ ಸ್ನೇಹಿತರು ಹೇಗಿದ್ದಾರೆ ಎಂಬುದು ಸ್ಪಷ್ಟವಾಗಿ ಅರಿವಿಗೆ ಬಂತು. “ನೊಂದವರ ನೋವು ನೊಂದವರೇ ಬರೆದರೆ ಗಟ್ಟಿಯಾಗಿರುತ್ತದೆ” ಎಂಬ ದೊಡ್ಡವರ ಮಾತನ್ನು ಕೇಳಿದ್ದೆ ಮತ್ತು ಅನುಭವಿಸಿದ್ದೆ” ಎಂದು ಲೇಖಕ ಆನಂದ್ ಎಸ್. ಗೊಬ್ಬಿ ತಮ್ಮ ಕಥಾಲೋಕ ಪ್ರವೇಶದ ಕುರಿತು ತುಂಬ ಆಪ್ತವಾಗಿ ಹೇಳಿಕೊಂಡಿದ್ದಾರೆ.

ಹಾಗೆ ಇವರ ದನಿಗೆ ಪೂರಕವೆಂಬಂತೆ,

“ಸುತ್ತಲೂ ಕತ್ತಲೇ ತುಂಬಿರುವ ನಡುರಾತ್ರಿಯಲ್ಲಿ ಎಚ್ಚರಗೊಂಡವ ಭಯದಿಂದ ಸಂಕಟಗೊಳ್ಳುತ್ತಾನೆ. ಇಲ್ಲಿನ ಕಥೆಗಾರ ಕೂಡ ತನ್ನ ಸಮುದಾಯದ ಮೇಲಾಗುತ್ತಿರುವ ಜಾತಿಯತೆ, ಅಸಮಾನತೆ ಮೌಢ್ಯಗಳ ಹೇರಿಕೆ, ಲಿಂಗ ತಾರತಮ್ಯ ಇತ್ಯಾದಿ ಸಾಮಾಜಿಕ ಕತ್ತಲೆಗಳೇ ತುಂಬಿರುವ ನಡುರಾತ್ರಿಯಲ್ಲಿ ಎಚ್ಚರಗೊಂಡವನು” ಎಂದು ಕಥೆಗಾರ ರಂಗಕರ್ಮಿ ಹನುಮಂತ ಹಾಲಗೇರಿ ಇಲ್ಲಿನ ಕಥೆಗಳು ಮತ್ತು ಕಥೆಗಾರ ಆನಂದ್ ಎಸ್.ಗೊಬ್ಬಿ ಬಗ್ಗೆ ತಮ್ಮ ಅನುಭವಪೂರ್ಣ ಬೆನ್ನುಡಿ ಬರಹದಲ್ಲಿ ಗ್ರಹಿಸಿದ್ದಾರೆ.

ಅಂತೆಯೇ ಈ ಸಂಕಲನದಲ್ಲಿ ದೇವಿಪುರದ ಗ್ರಾಮ ಪಂಚಾಯಿತಿ, ಆಲದ ಮರ, ಗಿರಿಕನ್ಯೆ, ಹುಳಿ ಮೊಸರು, ಒಂದು ಸಾವಿನ ಸುತ್ತ, ವ್ಯಕ್ತಿತ್ವದ ಒಳಸಾರ, ನಿರುದ್ಯೋಗಕ್ಕೆ ಹೆಣವಾದ ಅಪ್ಪ, ನಿಜ ಬದುಕಿನ ಪ್ರೀತಿ ಪಯಣ – ಹೀಗೆ ಒಟ್ಟು ಎಂಟು ಕಥೆಗಳಿವೆ.

ಈ ಕಥೆಗಳಲ್ಲೆಲ್ಲ ಒಂದು ವಿಷಾದವಿದೆ ನೋವಿದೆ ಘರ್ಷಣೆಯಿದೆ ಸಂಘರ್ಷವಿದೆ ತೊಳಲಾಟವಿದೆ ತಾಕಲಾಟಗಳಿವೆ.

ಇಲ್ಲಿನ ‘ಆಲದ ಮರ’ ಕಥೆ ಹೊಸ ವಸ್ತು ವಿಷಯ. ಗೊಬ್ಬಿ ಒಬ್ಬ ಸೃಜನಶೀಲ ಕಥೆಗಾರ ಎನಿಸಿಕೊಳ್ಳಲು ಈ ಕಥೆ ಸಾಕ್ಷೀಕರಿಸುತ್ತದೆ. ಎಲ್ಲದರಲ್ಲು ಜಾತಿ ಹುಡುಕುವ ವ್ಯವಸ್ಥೆ ನೋಡಿದ್ದೇವೆ. ಹಾಗೆ ಸಹಜವಾಗಿ ಮನುಷ್ಯ, ಅದರಲ್ಲು ತಳವರ್ಗ ಅನುಭವಿಸುತ್ತ ಮುಖ್ಯವಾಹಿನಿಯಲ್ಲಿ ಬದುಕು ಮಾಡಿಕೊಂಡಿರುವುದು ಇದುವರೆಗೂ ಇದ್ದಂಥಹ ಅಥವಾ ಈಗಲೂ ಇರುವಂಥದ್ದು. ಆದರೆ ನಮ್ಮ ಜೊತೆಜೊತೆಗೆ ಬದುಕಿನ ಎಲ್ಲ ಸಂದರ್ಭಗಳಲ್ಲು ಕಾಣ ಬರುವ ಪ್ರಾಣಿಗಳೂ ಈ ಪಟ್ಟಿಯಲ್ಲಿರುವುದು ಈ ಕಥೆಯ ಪ್ರಮುಖಾಂಶ.

ರಾಮಯ್ಯನ ಕುಲ ಕಸುಬು ವ್ಯವಸಾಯ. ವ್ಯವಸಾಯದ ಅವನ ಒಂದು ಎತ್ತು ಉಳುಮೆಗೆ ಸರಿ ಹೊಂದದೆ ಹೆಂಡತಿ ನಿಂಗಿಯ ಸಲಹೆಯಂತೆ ಆ ಎತ್ತನ್ನು ಮಾರಿ ಅದೇ ದುಡ್ಡಲ್ಲಿ ಅದಕ್ಕಿಂತ ಕಡಿಮೆ ದುಡ್ಡಿನಲ್ಲಿ ಒಂದು ಚೆನ್ನಾದ ಎತ್ತು ಕೊಂಡು, ಅದರಲ್ಲೆ ಒಂದಷ್ಟು ದುಡ್ಡನ್ನೂ ಮಿಗಿಸಿದ್ದು ಸ್ವರ್ಗಕ್ಕೆ ಮೂರೇ ಗೇಣು ಅವನಿಗೆ. ಒಂದರೆಡು ದಿನಗಳಲ್ಲೆ, “ಅದೊಂದು ಹೊಲೇರ ಎತ್ತು. ಅದನ್ನು ರಾಮಯ್ಯ ತಂದು ಕುಲ, ಜಾತಿ ಕೆಡಿಸಿದ” ಎಂದು ಊರು ಆಡಿಕೊಳ್ಳುತ್ತಿರುವ ಬಗ್ಗೆ ಹೆಂಡತಿ ನಿಂಗಿ, ಆ ‘ಹೊಲೇರ ಜಾತಿ ಎತ್ತನ್ನು ಮನೆಯಿಂದ ಹೊರಗಟ್ಟಿ ಸಂತೆಯಲ್ಲಿ ಮಾರಿ ಬಾ’ ಅಂತ ರಾಮಯ್ಯನಿಗೆ ತಾಕೀತು ಮಾಡುತ್ತಾಳೆ. ಚೆಂದಾಗಿ ಹೊಂದಿಕೊಂಡ ಎತ್ತನ್ನು ಮಾರಲು ಇಷ್ಟವಿಲ್ಲದ ರಾಮಯ್ಯ ಹೆಂಡತಿ ಮತ್ತು ಊರ ಕುಲೊಸ್ತರ ತಾಕೀತಿಗೆ ಕಟ್ಟು ಬಿದ್ದು ‘ಹೊಲೇರ ಜಾತಿ’ ಎತ್ತನ್ನು ಹೋದಷ್ಟಿಗೆ ಕೊಟ್ಟು ಬೇರೊಂದು ಎತ್ತನ್ನು ತರುತ್ತಾನೆ. ಅದು ರಾತ್ರೊರಾತ್ರಿ ಕಾಣೆಯಾಗಿರುತ್ತದೆ. ಇದರಿಂದ ರಾಮಯ್ಯ ಚಿಂತೆಗೆ ಬೀಳುತ್ತಾನೆ. ಇರುವ ಒಂಟಿ ಎತ್ತಿನಲ್ಲಿ ವ್ಯವಸಾಯ ಮಾಡಲಾಗದೆ, ಯಾರಾದರು ಅದರೊಂದಿಗೆ ಊರೊಟ್ಟವರಿಂದ ಇನ್ನೊಂದು ಎತ್ತು ದಿನದ ಸಾಲಕ್ಕೆ ಪಡೆದು ವ್ಯವಸಾಯ ಮಾಡಲು ಯಾರೂ ಕೊಡುವವರಿಲ್ಲದೆ ಯೋಚಿಸುತ್ತಾನೆ. ಇದರೊಂದಿಗೆ ಇದ್ದೊಬ್ಬ ಮಗ ಕಾಯಿಲೆಗೆ ಬಿದ್ದಿರುವುದು ಹಾಗು ಕೈಯಲ್ಲಿ ಮೂರು ಕಾಸಿಲ್ಲದೆ ಕೈಚೆಲ್ಲಿ ಆತಂಕ ಮನೆ ಮಾಡುತ್ತದೆ. ಈ ನಡುವೆ ಸಿದ್ದಣ್ಣನೆಂಬ ಚಾಲಾಕಿ ಮನುಷ್ಯನ ಪ್ರವೇಶವಾಗಿ ರಾಮಯ್ಯನ ಕಷ್ಟ ಕಳೆಯಲು ಅವನ ಸಲಹೆಯಂತೆ ಸ್ವಾಮೀಜಿ ಕರೆಸಿ ಪೂಜೆ, ಮಾಟ ಮಾಡಿಸಿ ಇದ್ದೊಂದು ಎತ್ತನ್ನು ಮಾರಿಸುತ್ತಾನೆ. ಕಡೆಗೆ ಸಿದ್ದಣ್ಣ ಮತ್ತು ಸ್ವಾಮೀಜಿ ಇಲ್ಲದ ನಿಧಿ‌ ಆಸೆ ಹುಟ್ಟಿಸುತ್ತಾರೆ. ನಿಧಿಗೆ ಆಸೆ ಪಟ್ಟ ಕಾರಣವಾಗಿ ಇದ್ದೊಬ್ಬ ಮಗನೂ ಬಲಿಯಾಗುವ ಪ್ರಸಂಗವೇ ‘ಆಲದ ಮರ’ದ ಕತೆಯ ಒಟ್ಟು ಸಾರ.

ಗೊಬ್ಬಿ ಅವರ ಈ ಕತೆ‌ ಜಾತೀಯತೆ ಎಷ್ಟು ಬೇರು ಬಿಟ್ಟಿದೆ ಎಂಬುದನ್ನು ಸೂಚ್ಯವಾಗಿ ನಮೂದಿಸುತ್ತದೆ. ಹಾಗೆ ರಾಮಯ್ಯನೊಳಗೆ ಅದು ಗೇಯುವ ಎತ್ತಷ್ಟೆ ಆಗಿರುತ್ತದೆ. ಅದರ ಹೊರತು ಅದು ಹೊಲೇರ ಜಾತಿ ಎಂಬುದಾಗಿರಲಿಲ್ಲ. ಆಗಿದ್ದೂ ಆ ಮನಸ್ಸಿನ ಮೇಲೆ ಆಗುವ ಒತ್ತಡ. ಆ ಒತ್ತಡದ ಮನಸ್ಸು ಹೇಗೆ ವ್ಯವಸ್ಥೆಯ ಮಗ್ಗುಲಿಗೇ ಬದಲಾಗುವ ರೀತಿಯಲ್ಲಿ ಜಾತಿಯ ಬೇರು ಮತ್ತಷ್ಟು ಬಲಿಯುವುದರ ಸಂಕೇತವಾಗಿ ಕಥೆಗಾರ ಆನಂದ್ ಎಸ್.ಗೊಬ್ಬಿ , ಬೇರು ಬಿಟ್ಟ ‘ಆಲದ ಮರ’ ಹೇಗೆ ತನ್ನ ಕೆಳ ಹಾಸಿನ ಮಣ್ಣಿನಲಿ ಬಿದ್ದ ಯಾವ‌ ಬೀಜವನ್ನೂ ಮೊಳಕೆಯೊಡೆಯಲು ಬಿಡದೆ ತಾನೇ ಆವರಿಸುವ ಹಾಗೆ ಒಂದು ಲಯದಲ್ಲಿ ಕಥೆಯನ್ನು ಕಟ್ಟಿದ್ದಾರೆ.

ಗ್ರಾಮ ರಾಜಕಾರಣದ ಕುಟಿಲತೆಗಳನ್ನು ತೆರೆದಿಡುವ “ದೇವಿಪುರದ ಗ್ರಾಮ ಪಂಚಾಯಿತಿ” ಕಥೆ, ಇಲ್ಲಿರುವ ದೇವಿಪುರ ಮಾತ್ರವಲ್ಲ ಈ ದೇಶದ ಪ್ರತಿ ಗ್ರಾಮಗಳ ರಾಜಕಾರಣದ ಒಟ್ಟು ಚಿತ್ರಣವೇ ಆಗಿದೆ. ಊರ ಗೌಡಿಕೆಯ ದಬ್ಬಾಳಿಕೆಯಲ್ಲಿ ನಲುಗುವ ದೇವಿಪುರ ಗೌಡ, ಹೊಲೆಯ, ಮಾದಿಗ, ಹೀಗೆ ವಿವಿಧ ಜನವರ್ಗ ವಾಸಿಸುವ ಗ್ರಾಮದಲ್ಲಿ ಅವರದೇ ಆದ ಮೂಲ ವೃತ್ತಿ ಕಸುಬುಗಾರಿಕೆಯನ್ನು ಗೊಬ್ಬಿ ನಿರೂಪಿಸಿದ್ದಾರೆ.

ಮಲಗಿದ್ದೆದ್ದು ತನ್ನ ಕಾಯಕ ಸ್ಥಾನದಲ್ಲಿ ಕೆರ ಹದ ಮಾಡುತ್ತ ಊರ ಮಾಸ್ತರೊಂದಿಗೆ, ಹಾಗೆ ಊರ ಅವರಿವರೊಂದಿಗೆ ಗ್ರಾಮ ರಾಜಕಾರಣದ ಕುರಿತು ಲೋಕಾರೂಢಿ ಮಾತಾಡುತ್ತ ಶಿರಬಾಗಿ ರಂಪಿಯಿಂದ ಚರ್ಮ ಕುಯ್ಯುವ ಚೆನ್ನನ ಕಾಯಕ ಚಿತ್ರದ ಮೂಲಕ ‘ದೇವಿಪುರದ ಗ್ರಾಮ ಪಂಚಾಯಿತಿ’ ಕಥೆ ತನ್ನ ಆರಂಭಿಕ ಖಾತೆ ತೆರೆಯುತ್ತದೆ.

ಇಲ್ಲಿನ ಗೌಡ ಇಡಿ ಗ್ರಾಮವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಎಲೆಕ್ಷನ್ ಹೊತ್ತಲ್ಲಿ ಅವಿರೋಧವಾಗಿ ಪಂಚಾಯಿತಿ ಮೆಂಬರ್ ಆಯ್ಕೆ ಮಾಡುವಲ್ಲೂ ಪಾರಮ್ಯ ಮೆರೆಯುತ್ತಾನೆ. ಗ್ರಾಮಾಭಿವೃದ್ದಿಗೆ ಬಳಸಬೇಕಾಗಿದ್ದ ಅನುದಾನವನ್ನು ತಾನೆ ಆರಿಸಿ ಇಟ್ಟುಕೊಂಡಿದ್ದ ಮೆಂಬರ್ ಗಳ ಮೂಲಕ ಲೂಟಿ ಹೊಡೆದು ಗ್ರಾಮಕ್ಕೆ ಗ್ರಾಮದ ಜನಕ್ಕೆ ವಂಚಿಸುತ್ತಾನೆ. ಅಕ್ಷರಸ್ಥರಲ್ಲದ ಮುಗ್ದ ಜನರು ಗೌಡನ ಮಾತಿಗೆ ಮರುಳಾಗಿರುವಾಗ ಸ್ಕೂಲ್ ಮಾಸ್ತರ ಗೌಡನ ಹಿಕಮತ್ತನ್ನು ಪ್ರಶ್ನಿಸುತ್ತರಾದರು ಅವರನ್ನು ನಂಬುವ ಸ್ಥಿತಿ ಹಳ್ಳಿಗರಲ್ಲಿ ಇಲ್ಲದೆ ಮಾಸ್ತರ ಚಿಂತೆಗೆ ಬೀಳುತ್ತಾರೆ. ಗೌಡ ಮಾಸ್ತರನ್ನು ಕಂಟ್ರೋಲ್ ಮಾಡಲು ತನ್ನದೇ ಗತ್ತು ಗೈರತ್ತು ಪ್ರದರ್ಶಿಸಿದರು ಮಾಸ್ತರ ಬಗ್ಗುವುದಿಲ್ಲ. ಅದೇ ಹೊತ್ತಿಗೆ ದೇವಿಪುರಕ್ಕೆ ಮಲೇರಿಯಾ ಆವರಿಸಿ ಜನ ಕಂಗಾಲಾಗುತ್ತಾರೆ. ಅಭಿವೃದ್ದಿ ಕಾಣದ ಗ್ರಾಮದಲ್ಲಿ ಡಾಕ್ಟರಿಲ್ಲದೆ, ಆರೊಗ್ಯ ಕೇಂದ್ರವಿಲ್ಲದೆ ಜನ ಕಾಯಿಲೆಗೆ ತುತ್ತಾಗುತ್ತಾರೆ. ಆಗಲು ಮಾಸ್ತರ ಗೌಡನನ್ನು ಪ್ರಶ್ನಿಸಿದರು ಗೌಡ ಊರ ದೇವರ ಗುಡ್ಡಪ್ಪನ ಮೂಲಕ ಚಾಣಾಕ್ಷತನ ಮೆರೆಯುತ್ತಾನೆ. ಮೌಢ್ಯದ ಮಾತಿಗೆ ಮರುಳಾದ ಜನ ಮಾಸ್ತರನ ನಿಜ ಕಾಳಜಿಯನ್ನು ತಿರಸ್ಕರಿಸಿ ಊರ ದೇವಿಗೆ ಕೋಣ ಬಲಿ ನೀಡುವ ಮೂಲಕ ಮೌಢ್ಯದತ್ತ ವಾಲುತ್ತಾರೆ. ಈ ನಡುವೆ ದೇವಿಪುರ ಗ್ರಾಮ ಪಂಚಾಯಿತಿ ಗೌಡನ ಹಿಂಬಾಲಕ ಮೆಂಬರ್ ಮಗ ಮಲೇರಿಯಾಕ್ಕೆ ಸಿಲುಕಿ , ಮಗನ ಪ್ರಾಣ ರಕ್ಷಣೆಗೆ ಆ ಮೆಂಬರ ಗೌಡನಲ್ಲಿ ಮೊರೆ ಇಡುತ್ತಾನೆ. ಆದರೆ ಗೌಡ ‘ನಿನ್ ತಾಯ್ನಾಡ ಸೂಳೆಮಕ್ಳ ಹೊಗ್ರೊ’ ಎಂದು ಗದರಿಸಿದಾಗ ಇಡಿ ಊರಿಗೆ ಗೌಡನ ಹಿಕ್ಮತ್ ಗೊತ್ತಾಗುತ್ತದೆ. ಜನ ರೋಗದಿಂದ ಮುಕ್ತಿ ಹೊಂದಲು ಗ್ರಾಮ ಬಿಡಲು ಮುಂದಾದಾಗುತ್ತಾರೆ. ಮಾಸ್ತರರ ಪ್ರವೇಶದ ಮೂಲಕ ಗೌಡನ ವಿರುದ್ದ ಇಡೀ ಊರು ತಮ್ಮ ಹಕ್ಕುಗಳನ್ನು ಪಡೆಯಲು ಸೆಟೆದು ನಿಲ್ಲುವಲ್ಲಿ ಕಥೆ ತನ್ನ ತಾರ್ಕಿಕ ಅಂತ್ಯವನ್ನು ಕಾಣುತ್ತದೆ.

ಈ ಕಥೆಯಲ್ಲಿ ಕಥೆಗಾರ ಆನಂದ್ ಎಸ್. ಗೊಬ್ಬಿ ನುರಿತ ಕಥೆಗಾರಿಕೆಯನ್ನು ಪ್ರದರ್ಶಿಸಿದ್ದಾರೆ. ಹಾಗೆ ಈ ಕಥೆ ಓದುವಾಗ ಯಾರೋ ಹಿರಿಯ ಅನುಭವಿ ಕಥೆ ಇರಬಹುದೆಂದು ಭಾಸವಾಗುತ್ತದೆ. ಅಷ್ಟು ಗಂಭೀರವಾಗಿ ಇಡೀ ಕಥೆಯ ಚೌಕಟ್ಟನ್ನು ಎಲ್ಲೂ ಹಳಿ ತಪ್ಪದ ಹಾಗೆ ಒಂದು ಹದವಾಗಿ ಬಸಿದು ನಿರೂಪಿಸಿದ್ದಾರೆ.

ಒಂದು ರಾತ್ರಿ ಒಂದು ಹಗಲಿನಲ್ಲಿ ಜರುಗುವ “ಒಂದು ಸಾವಿನ ಸುತ್ತ” ಕಥೆ ಒಂದಿಡೀ ಕೌಟುಂಬಿಕ ಚಿತ್ರದ ವಾತಾವರಣವನ್ನು ಚಿತ್ರಚಿತ್ರವಾಗಿ ಬಿಚ್ಚಿಡುತ್ತದೆ. ಸತ್ತು ಮಲಗಿದ ಭೀಮವ್ವನ ಹೆಣದ ಸುತ್ತ ಬಿಚ್ಚಿಕೊಳ್ಳುವ ಮಾತುಕತೆಗಳು ಬಾಳಿ ಬದುಕಿದ ಮನೆಯಲ್ಲಿ,‌ ಹಿರಿ ಮಗನು ಹೆಂಡತಿ ಮಾತು ಕೇಳಿಕೊಂಡು ಹೆಂಡತಿ ಮನೆಗೇ ಸೇರಿಕೊಂಡದ್ದು. ಉಳಿದ ಕಿರಿ ಮಗ ಮತ್ತು ಅವನ ಹೆಂಡತಿ ಬೀಮವ್ವನೊಂದಿಗಿನ ಪ್ರತಿದಿನದ ಕಲಹ. ಈ ಎಲ್ಲವನ್ನು ಕಂಡೂ ಕಾಣದ ದಿನನಿತ್ಯದ ಆಗುಹೋಗನ್ನು ನಿರ್ಲಕ್ಷ್ಯವೊ ಅಸ್ಸಹಾಯಕವೋ ಆದ ಗಂಡನ ಸ್ಥಿತಿ. ಈ ವಾಸ್ತವದಲ್ಲೆ ಗಂಡ ಭೀಮವ್ವನಿಗೆ ಬೆಳಗಿನ ಜಾವ ಊರಂಗಡಿಯಲಿ ಟೀ ತಂದುಕೊಟ್ಟು ತೋರುವ ಸಹಜ ಕ್ರಿಯೆ. ಆದರೆ ಇದೆಲ್ಲವೂ ಭೀಮವ್ವನ ಹೆಣದ ಮುಂದೆ ಅನಾವರಣವಾಗುತ್ತ ಸಹಜವೊ ಅಸಹಜವೋ ಆದ ದುಃಖಿತ ಮನಸ್ಥಿತಿಯಲ್ಲಿ ಹಾಡಾಡಿ ಅಳುವಲ್ಲಿ ನಾಟಕೀಯವಾದ ದೃಶ್ಯವೊಂದು ಓದುಗನಲ್ಲಿ ಎದ್ದು ನಿಲ್ಲುತ್ತದೆ. ಇಲ್ಲಿ ಸತ್ತು ಹೋದ ಭೀಮವ್ವಳನ್ನು ಸಂಸ್ಕಾರ ಮಾಡಲು ಅವಳ ಗಂಡನಲ್ಲಿ ದುಡ್ಡಿಲ್ಲ. ಹೆಂಡತಿ ಮಾತು ಕೇಳಿಕೊಂಡು ಹೆಂಡತಿ ಮನೆಯಲ್ಲೆ ಸೇರಿಕೊಂಡ ಹಿರಿ ಮಗನಿಗೆ ಸಾವಿನ ಸುದ್ದಿ ತಲುಪಿಸಬಾರದು ಎನುವ ಒಂದು ಸಂಗತವೊ ಅಸಂಗತವೊ ಆದ ಒಂದು ಪೂರಕ ಸನ್ನಿವೇಶವೂ ಜರುಗುತ್ತದೆ. ಆದರೆ ದಫನ್ ಮಾಡುವ ಆಸುಪಾಸು ಸಮಯದಲ್ಲಿ ಬರುವ ಹಿರಿಮಗ ಹಿರಿ ಸೊಸೆಯೂ ಕಿರಿ ಸೊಸೆಯ ರಾಗದಲ್ಲೆ ಹಾಡಾಡಿಕೊಂಡು ಅಳುತ್ತಾಳೆ. ಈ ಹೊತ್ತಲ್ಲಿ ಭೀಮವ್ವನ ಕೊರಳಲ್ಲಿದ್ದ ಚಿನ್ನದ ಮೇಲೆ ಕಣ್ಣಾಡುತ್ತವೆ. ಹೀಗೆ ನಾಟಕೀಯವಾದ ಸನ್ನಿವೇಶಗಳು ಒಂದರ ಹಿಂದೊಂದು ಸರಣಿಯೋಪಾದಿಯಲ್ಲಿ ಬಂದು ಸೇರುತ್ತ ಅಲ್ಲಿ ಸತ್ತು ಹೋದ ಭೀಮವ್ವನ ಚಿಂತೆ ಹೋಗಿ ಅವಳ ಕೊರಳಿನ ಚಿನ್ನದ ಮೇಲಿನ ಮಾತುಕತೆಗಳೇ ಮೇಲುಗೈ ಸಾಧಿಸುತ್ತವೆ. ಈ ಕಥೆ ವ್ಯವಸ್ಥೆಯ ವಾಸ್ತವಿಕ ನೆಲೆಗಟ್ಟಿನ ಸ್ಥಿತಿಗತಿಯನ್ನು ಗಟ್ಟಿಯಾಗಿ ತನ್ನದೇ ಧಾಟಿಯಲ್ಲಿ ಪ್ರಸ್ತುತಪಡಿಸುತ್ತದೆ.ಇಲ್ಲಿನ ಪಾತ್ರಗಳು ಕುಂತು ನಿಂತು ಬಿಕ್ಕುತ್ತ ಪದರು ಪದರಾಗಿ ಅವವೇ ಎದುರಾ ಎದುರು ಸಂಭಾಷಿಸುತ್ತ ಕಥೆಯನ್ನು ಲಂಘಿಸುತ್ತವೆ.

ಕಾಶೀನಾಥ್- ಸುಧಾರಾಣಿ ಅಭಿನಯದ ‘ಅವನೇ ನನ್ನ ಗಂಡ’ ಸಿನಿಮಾದಲ್ಲಿ , ಮನೆಯವರ ಒತ್ತಾಸೆಗೆ ಕಟ್ಟುಬಿದ್ದು ಪಾರ್ಶ್ವವಾಯು ಪೀಡಿತ ಅಂಗವಿಕಲನೊಂದಿಗೆ ಮದುವೆಯಾದ ನಾಯಕಿ ಆತನೊಂದಿಗೆ ದೇಹ ಹಂಚಿಕೊಂಡು ಬಾಳುವೆ ಮಾಡಲಾರದೆ ಮೊದಲರಾತ್ರಿಯೇ ಆತನನ್ನು ತಿರಸ್ಕರಿಸುತ್ತಾಳೆ. ಕುಪಿತಗೊಂಡ ಪಾರ್ಶ್ವವಾಯು ಪೀಡಿತ ಅಂಗವಿಕಲ ಗಂಡ ಕಾಮೋದ್ರೇಕಗೊಂಡು ಅವಳನ್ನು ಭೋಗಿಸಲೇಬೇಕೆಂದು ಶಕ್ತ್ಯಾನುಸಾರ ಪ್ರಯತ್ನಿಸಿ ವಿಫಲನಾಗುತ್ತಾನೆ. ಈ ವಿಕಲಾಂಗ ಗಂಡಿನ ಕಥೆಯಂತೆ ಆನಂದ ಎಸ್. ಗೊಬ್ಬಿ ಅವರ ‘ಹುಳಿ ಮೊಸರು’ ಕಥೆ ಹೇಳುತ್ತದೆ. ಆದರೆ ಇಲ್ಲಿ ಆ ಚಿತ್ರದಲ್ಲಿದ್ದಂತೆ ಹೆಣ್ಣಿನ ನಡಾವಳಿ ಬೇರೆಯದೇ ಆದ ಸಂದೇಶ ರವಾನೆ ಮಾಡುತ್ತದೆ. ಇಲ್ಲಿ ಚಿಕ್ಕ ಮಲ್ಲಪ್ಪ ಅಂಗವಿಕಲ ಅಲ್ಲದಿದ್ದರು ದೈಹಿಕವಾಗಿ ಆಕರ್ಷಿತನಲ್ಲದ ಶಕ್ತಿಹೀನ. ಹಾಗಾಗಿ ಹೆಂಡತಿ ಶಾಂತಿ ಈ ಒಣಕಲು ದೇಹದ ಚಿಕ್ಕ ಮಲ್ಲಪನನ್ನು ಮೊದಲ ರಾತ್ರಿಯೇ ಅವನ ದೇಹದ ಓರೆಕೋರೆ ಬಗ್ಗೆ ಅಣಕಿಸಿ ತಿರಸ್ಕರಿಸುತ್ತಾಳೆ. ಇಡೀ ರಾತ್ರಿ ತನ್ನ ಸೌಂದರ್ಯವತಿ ಹೆಂಡತಿಯನ್ನು ಭೋಗಿಸಬೇಕೆಂದುಕೊಂಡಿದ್ದ ಚಿಕ್ಕ ಮಲ್ಲಪ್ಪನಿಗೆ ನಿರಾಶೆಯಾಗುವುದರೊಂದಿಗೆ ಹೆಂಡತಿಯ ಅಣಕು ಮಾತಿಗೆ ಅಪಮಾನಗೊಳ್ಳುತ್ತಾನೆ. ಶಾಂತಿ ಬಂದ ಮನೆಯಲ್ಲಿ ಹೊಂದಿಕೊಂಡು ಹೋಗುವ ಮಾತೇ ಇಲ್ಲ. ಇದು ಹೀಗೆ ಸಾಗಿ ಹೇಗಾದರು ಈ ದೈಹಿಕ ಹೀನ ಗಂಡನಿಂದ ಮುಕ್ತಿ ಪಡೆಯಲು ಚಿಕ್ಕಮಲ್ಲಪ್ಪನೊಂದಿಗೆ ಆಕರ್ಷಿತ ಮಾತಾಡುತ್ತಾ ಅವನಲ್ಲಿ ಆಸೆ ಹುಟ್ಟಿಸುತ್ತಾಳೆ. ಈ ನಾಟಕೀಯ ಬೆಳವಣಿಗೆ ಒಂದು ದುರಂತದತ್ತ ಕೊಂಡೊಯ್ಯುತ್ತದೆ. ಆಕೆಗೆ ಅವನನ್ನು ಕೊಲ್ಲುವ ಉದ್ದೇಶವಿತ್ತೇ? ಆಕೆಗೆ ಚಿಕ್ಕಮಲ್ಲನನ್ನು ಮದುವೆಗೂ ಮುನ್ನ ಮತ್ತೊಬ್ವ ಗೆಳೆಯನೊಂದಿಗೆ ಪ್ರೇಮಾಂಕುರವಾಗಿತ್ತೇ? ಅದೊಂದು ವಿಷಯ ಕೊನೆಯಲ್ಲಿ ಊರ ಪಂಚಾಯ್ತಿ ಕಟ್ಟೆಯಲ್ಲಿ ಶಾಂತಿ, ಚಿಕ್ಕಮಲ್ಲಪ್ಲನ ಅವ್ವಳಿಗೆ ಎಗರಿ‌ ಜಾಡಿಸಿ ಒದ್ದು ಕೆಳಕ್ಕೆ ಬೀಳಿಸಿ ನ್ಯಾಯ ತೀರ್ಮಾನದ ಕುಲೊಸ್ತರಿರುವ ಜನ ಜಂಗುಳಿಯ ನಡುವೇ ಪಕ್ಕದಲ್ಲೆ ಇದ್ದ ಕೆಂಪ ಎನುವ ಯುವಕನೊಂದಿಗೆ ಪರಾರಿಯಾಗುತ್ತಾಳೆ.

ಏನಾದರು ಆಗಲು ಒಂದು ವಿಧಾನ, ನಿಯಮ, ಪರಿಪಕ್ವ ಸಮಯವಿದೆ. ಆ ನಿಯಮ ಪಾಲನೆ ಅದರ ಹುಟ್ಟಿನ ಮೂಲದಲ್ಲಿ ಅಡಗಿದೆ. ಪ್ರತಿದಿನ ಮಿಗುವ ಅಥವ ಅದಕಾಗೇ ಮಿಗಿಸುವ ಶುದ್ಧವಾದ ಹಾಲಿಗೆ ಒಂದೆರಡು ತೊಟ್ಟು ಕೆನೆ ಮೊಸರಿನ ಹೆಪ್ಪು ಹಾಕಿದರೆ ಒಡೆದು ಹುಳಿಯಾಗುತ್ತದೆ. ನಂತರದ್ದು ಬಳಕೆಯ ಸರದಿ. ಅದರ ಸ್ವಾದ ಸವಿಯುವ ಬಗೆ. ಎಲ್ಲ ಕಾಲದಲ್ಲು ಸವಿಯುವ ಗುಣ ಸ್ವಭಾವ, ಮನುಷ್ಯನೊಳಗೆ ಅಡಗಿರುತ್ತದೆ. ಇದು ನಿಯಮ. ಅಥವಾ ಪ್ರತಿ ಜೀವಿಯೊಳಕ್ಕೆ ಏನಾದರೊಂದು ಇಳಿದು ಅದರಿಂದ ಆಗುವ ಪರಿವರ್ತನೆ (ಇದರಲ್ಲಿ ಗುಣ ಮತ್ತು ದೋಷ ಎರಡರ ಮಿಳಿತ) ಅಥವಾ ಒಳಗೇ ಹುದುಗಿರುವ ಅಥವಾ ಹುಟ್ಟುವ ಕಾಮ, ಪ್ರೇಮ, ಭೋಗ ಇವು ಸಹಜ ಕ್ರಿಯೆಗಳು. ಇವು ಸಹಜ ಕ್ರಿಯೆಗಳಾದರು ಅನೈತಿಕವಾದ ಒಪ್ಪಿಗೆಗಳು, ಒಳ ಆಸೆಗಳು, ಹುಟ್ಟು ಹಾಕುವ ಪರಿಣಾಮಗಳು ಊಹಿಸಲಸಾಧ್ಯ. ಅಂಥ ಪರಿಣಾಮಕಾರಿ ಸಾಧ್ಯತೆಯನ್ನು ಕಥೆಗಾರ ಆನಂದ ಎಸ್. ಗೊಬ್ಬಿ ‘ಶಾಂತಿ’ಯ ಚಂಚಲತೆ, ಅವಳ ಮನಸ್ಸಿನ ಮಡುಗಟ್ಟಿದ ಭಾವನೆ,‌ ಅದು ಅತಿರೇಕದಲ್ಲಿ ತಾರ್ಕಿಕ ಅಂತ್ಯ ಕಾಣುವ ಬಗೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ‘ಹುಳಿ ಮೊಸರು’ ಕಥೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಬಹುಹಿಂದಿನಿಂದಲೂ ರೂಢಿಗತವಾಗಿ ಬಂದಿರುವ ಜನಪ್ರಿಯ ಮಾತಿದು.
ಈ ಜನಪ್ರಿಯ ಮಾತು ಸತ್ಯವೊ ಅಸತ್ಯವೊ? ಈ ಮಾತನ್ನು ಯಾವ ಮಾನದಂಡ ಇಟ್ಟು ನೋಡಬೇಕು? ಆನಂದ ಎಸ್.ಗೊಬ್ಬಿ ಅವರ ‘ಗಿರಿಕನ್ಯೆ’ ಕಥೆಯಲ್ಲಿ ಈ ಬಗೆಯ ಒಂದು ಪ್ರಶ್ನೆ ಹುಟ್ಟುತ್ತದೆ. ತಂದೆ ತಾಯಿ ಅತ್ತೆ ಮಾವ ಗಂಡ ಎಲ್ಲರನ್ನು ಕಳೆದುಕೊಂಡ ಕಮಲಮ್ಮ ತುಂಬಾ ಚೆಲುವೆ. ಸುಖ ಕಾಣಬೇಕಾದ ವಯಸ್ಸಲ್ಲಿ ಮಿಲಿಟರಿ ಸೇವೆಯಲ್ಲಿದ್ದ ಗಂಡ ತೀರಿಕೊಳ್ಳುತ್ತಾನೆ. ಆಗಿನ್ನು ತುಂಬು ಗರ್ಭಿಣಿಯಾಗಿದ್ದ ಕಮಲಮ್ಮ ಲಕ್ಷ್ಮೀಗೆ ಜನ್ಮ ನೀಡುತ್ತಾಳೆ. ನಡುವೆ ನಾಟಿ ಔಷಧಿ ನೀಡುವ ಶಿವಯ್ಯನೆಂಬ ವೈದ್ಯನ ಸ್ನೇಹ. ಅವರ ಸ್ನೇಹ ಎಂಥದ್ದು? ಬಿಟ್ಟೂ ಬಿಡದ ಸ್ನೇಹ. ಇದನ್ನು ನೋಡಿ ಆಡಿಕೊಳ್ಳುವ ಊರು. ಈ ನಡುವೆ ಮುದ್ದಾದ ಮಗಳನ್ನು ಯಾವ ಕಾಮಪಿಪಾಸುಗಳ ಕಣ್ಣು ಬೀಳದ ಹಾಗೆ ಬೆಳೆಸಿ ಒಂದೊಳ್ಳೆ ಮನೆಗೆ ಸೇರಿಸುವ ಇರಾದೆ. ಅದರ ಬೆನ್ನತ್ತಿ ಮಗಳಿಗೆ ಬುದ್ದಿವಾದದ ಮಾತು. ಇಷ್ಟೆಲ್ಲ ಆಗಿ ಮದುವೆ ಮಾಡಿದ್ದಾಯ್ತು. ಈಗ ನೆಮ್ಮದಿಯ ಗೋಡೆಗೆ ಒರಗಿ ಕುಂತ ಕಮಲಮ್ಮನ ಕಣ್ಣಿಗೆ ಮಗಳು ಅಳಿಯ ಮನೆಗೆ ಬಂದದ್ದು ಗಾಬರಿಯೇ ಸರಿ. ಇದರಿಂದ ಚಿಂತಾಕ್ರಾಂತಳಾದ ಕಮಲಮ್ಮ ಅಳಿಯನಲ್ಲಿ ಕೇಳುತ್ತಾಳೆ, ‘ಅವಳೇನು ತಪ್ಪು ಮಾಡಿದಾಳೆ’? ಬುಸುಗುಡುವ ಅಳಿಯ ಕೆಂಗಣ್ಣು ಬೀರಿ ಅವಳನ್ನೆ ಕೇಳಿ ಎನ್ನುತ್ತಾನೆ. ಕಮಲಮ್ಮ ಕೇಳಲಾಗಿ
“ನೀನೆ ಹೇಳಿದ್ದಿಯಲ್ಲವ್ವಾ ಗಂಡ್ಸರಿಂದ ದೂರ ಇರಬೇಕು. ಹಂಗ ಮಾಡಿದಾಗ ಚೀರಬೇಕು ತಳ್ಳಬೇಕು ಅಂತ ಹೇಳಿದಿ ಅಲಾ, ಹಂಗ ಮಾಡಿದೆ”
ಅಂತ ಲಕ್ಷ್ಮಿ, ತನ್ನ ತಾಯಿ ಕಮಲಮ್ಮಳಿಗೆ ಹೇಳುತ್ತಾಳೆ. ಸೆಟಗೊಂಟ ಅಳಿಯ ಅಲ್ಲಿಂದ ಕಾಲ್ಕೀಳುತ್ತಾನೆ. ಮತ್ತೆ ಹೇಗಾದರು ಮಾಡಿ ಮಗಳನ್ನು ಗಂಡನೊಂದಿಗೆ ಸೇರಿಸಬೇಕೆಂದು ಮತ್ತೆ ಉಪಾಯದ ಮಾತು ಮತ್ತು ದಾರಿ ಹುಡುಕುತ್ತಾಳೆ. ಶಿವಯ್ಯ ಕಾಮಾಶಕ್ತಿ ಹೆಚ್ಚಿಸುವ ಔಷಧಿ ತಯಾರಿಸಿ ಕಮಲಮ್ಮಳಿಗೆ ಕೊಡುತ್ತಾನೆ. ಕಮಲಮ್ಮ ಮಗಳು ಲಕ್ಷ್ಮಿಗೆ ಕೊಡುತ್ತಾಳೆ.ದಿನ ರಾತ್ರಿ ಔಷಧಿ ಸೇವಿಸಿ ಸೇವಿಸಿ ದೇಹ ಕಾವಾಗುತ್ತದೆ. ಕಾಮಾಶಕ್ತಿ ಹೆಚ್ಚಿಕೊಂಡಂತೆ ಕಂಡ ಮಗಳು, ಗಂಡನ ಮನೆಗೆ ಹೋಗಲು ಆಸಕ್ತಿ ಹೊಂದುತ್ತಾಳೆ. ಅತ್ತ ಅಳಿಯನಿಗೆ ಎರಡನೇ ಮದುವೆಯ ಸುದ್ದಿ ಹರಿದಾಡುತ್ತದೆ. ಇಷ್ಟಾಗಿ, ಮಗಳನ್ನು ಅಳಿಯನ ಸಂಗಡ ಸೇರಿಸಲು ಶಿವಯ್ಯನ ಜೊತೆ ಲಕ್ಷ್ಮಿಯನ್ನು ಕಳುಹಿಸುತ್ತಾಳೆ. ಶಿವಯ್ಯನೊಂದಿಗಿನ ಲಕ್ಷ್ಮಿ ಇಟ್ಟ ಹೆಜ್ಜೆಗಳು ಬಿರುಸುಗೊಳ್ಳುತ್ತವೆ.

ಹೀಗೆ ಬಿರುಸುಗೊಂಡ ‘ಗಿರಿಕನ್ಯೆ’ ಒಳಗಿನ ನೋವು ಓದುಗನ ಆಳದಲ್ಲಿ ಹಾಗೇ ಉಳಿದು ಬಿಡುವಂತಿಲ್ಲ. ಈ ಕಥೆಯ ಕೊನೆ ಸಾಲುಗಳು ಹೀಗಿವೆ:
“ಪ್ಯಾಟಿಗೆ ಹೋಗಿ ಹೊಸ ಸೀರಿ ಒಪ್ಪುವಂತ ಕುಪ್ಪಸ ಬಳೆ ತಂದಳು. ಬೆಲ್ಲ ಬ್ಯಾಳಿ, ಕಾಯಿ, ಕರ್ಪೂರ ತಂದು ಹೋಳಿಗೆ ಮಾಡಿದಳು. ಹಣಮಪ್ಪಗ ಲೋಭಾನ ಹಾಕಿ, ಕಾಯಿ ಕೊಟ್ಟಳು. ಭಾಳ ಖುಷಿಯಿಂದ ಶಿವಯ್ಯನನ್ನು ದಿಟ್ಟಿಸಿ ನೋಡಿ ತುಸು ನಕ್ಕಳು. ಮಗಳನ್ನು ಶಿವಯ್ಯನ ಜೊತೆ ಕಳಿಸಿ ಗಂಡನ ಜೋಡಿ ಸುಖವಾಗಿ ಬಾಳ್ರಿಯೆಂದು ಹರಸಿ ಕಣ್ತುಂಬಿಕೊಂಡಳು” ಎನ್ನುವ ಈ ಸಾಲುಗಳು ಪರದೆ ಮೇಲಿನ ಚಲಿಸುವ ಚಿತ್ರಗಳಂತೆ ದೃಶ್ಯರೂಪ ಪಡೆದುಕೊಂಡಿವೆ.

ಹಾಗೆ ಈ ಸಂಕಲನದ “ವ್ಯಕ್ತಿತ್ವದ ಒಳಸಾರ”, “ನಿಜ ಬದುಕಿನ ಪ್ರೀತಿ ಪಯಣ”, “ನಿರುದ್ಯೋಗಕ್ಕೆ ಹೆಣವಾದ ಅಪ್ಪ” ಕಥೆಗಳು ಆನಂದ ಎಸ್.ಗೊಬ್ಬಿ ಅವರ ಪ್ರಯತ್ನದಲ್ಲಿ ಕಥೆಗಳಾಗಲು ಹೆಣಗಿವೆ ಎಂದರೆ ಅಥವಾ ಕಥೆ ಆಯಾ ತಪ್ಪಿ, ಆ ತಪ್ಪಿನ ಸೂಕ್ಷ್ಮತೆ ಗುರುತಿಸಿದ ಸಾಮಾನ್ಯ ಓದುಗ ತನ್ನ ಒಳಗಿನ ವಿದ್ವತ್ತಿನ ಅಹಂ ಪ್ರದರ್ಶಿಸಿದನಾ ಅನ್ನೊ ಪ್ರಶ್ನೆ ಕಾಡುವುದುಂಟು. ಈ ಕಾಡುವಿಕೆ ಯಾವಾಗಲೂ ಲೇಖಕನಿಗೆ ಮತ್ತು ಓದುಗನಿಗೆ ಇದ್ದರೆ ಬರೆದದ್ದೆಲ್ಲ ಕಥೆ ಅಂದುಕೊಳ್ಳಲಾರ.

“ದೇವಿಪುರದ ಗ್ರಾಮ ಪಂಚಾಯತಿ”, “ಆಲದ ಮರ”, “ಒಂದು ಸಾವಿನ ಸುತ್ತ” ತರದ ಶಕ್ತ ಕಥೆಗಳನ್ನು ಪ್ರಯತ್ನಪೂರ್ವಕವಾಗಿ ನೀಡಿದ ಗೊಬ್ಬಿ ಈ ಸಂಕಲನದ ಶೀರ್ಷಿಕೆ ಕಥೆ ‘ನಿರುದ್ಯೋಗಕ್ಕೆ ಹೆಣವಾದ ಅಪ್ಪ’ ನೊಳಗೆ ವಿಶೇಷ ಒಳನೋಟವಿದ್ದಾಗ್ಯೂ ಇದನ್ನು ಒಂದು ಪರಿಪೂರ್ಣ ಕಥೆಯಾಗಿಸುವಲ್ಲಿ ವಿಫಲರಾದರಾ? ಉದ್ಯೋಗದಾತ ಮರಣಿಸಿದರೆ ಆದ್ಯತೆ ಮೇರೆಗೆ ಕೆಲವು ನಿಯಮಾವಳಿ ಅನುಸಾರ ಮಕ್ಕಳಿಗೋ ಹೆಂಡತಿಗೋ ಉದ್ಯೋಗ ನೀಡುವ ಅವಕಾಶವಿದೆ. ಅದರ ಒಂದು ಕೋಡನ್ನು ಗೊಬ್ಬಿ ಈ ಕಥೆಯಲ್ಲಿ ದಾಖಲಿಸಿತ್ತಾರೆ. ಹಾಗೆ ಎಲ್ಲವನ್ನು ಅರಿತ ಬುದ್ದಿಜೀವಿಯೂ ಆಗಿರುವ ಪ್ರಾಂಶುಪಾಲ, ಆತ್ಮಹತ್ಯೆಗು ಮುನ್ನ ಒಂದು ಪತ್ರ ಬರೆದಿರುತ್ತಾನೆ. ಆ ಪತ್ರದಲ್ಲಿ “ಕ್ಷಮಿಸಿ, ನನ್ನ ಸಾವಿಗೆ ಕಾರಣ ಉದ್ಯೋಗ. ನನ್ನ ಮರಣದ ನಂತರ ನನ್ನ ಕೆಲಸ ನನ್ನ ಹೊಟ್ಟ್ಯಾಗ ಹುಟ್ಟಿದ ಮಗನಿಗೆ ನೀಡಿ” ಎಂದಿರುತ್ತದೆ. ಈ ಪತ್ರದ ಮೊದಲ ಸಾಲು ಅನುಸರಿಸಿ ಮಗನಿಗೆ ಕೆಲಸ ನೀಡಬಹುದಾ? ಇರಲಿ, ಮಕ್ಕಳ ನಿರುದ್ಯೋಗ ನಿವಾರಣೆಗೆ ಕೆಲಸದಲ್ಲಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿನಾ? ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪ್ರಾಂಶುಪಾಲನಾಗಿದ್ದೂ ಯಾಕೆ ಇಂಥ ಬಾಲಿಶತನದ ಪತ್ರ ಬರೆದ? ಹೀಗೆ ಒಂದು ವಿಚಾರ ಬಹಿರಂಗಕ್ಕೆ ಬಂದರೆ ಕಾನೂನು ಸುಮ್ಮನಿರುತ್ತದೆಯೇ? ಸಂಶಯಪೂರ್ಣ ಪತ್ರವೇ ಮಗನನ್ನು ಅನುಮಾನಿಸಿ ಕತ್ತಲಕೋಣೆಗೆ ತಳ್ಳಬಹುದಲ್ಲವೇ? ಈ ಬಗ್ಗೆ ಯಾಕೆ ಆತ್ಮಹತ್ಯೆ ಮಾಡಿಕೊಂಡ ಪ್ರಾಂಶುಪಾಲ ಯೋಚಿಸಲಿಲ್ಲ? ಮಗ ಸೊಸೆ ತಮ್ಮ ಕೆಲಸದ ಆಸೆಗೆ ತನ್ನನ್ನು ಕೊಂದು ಅಪರಾಧಿಗಳಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬ “ಹೊಟ್ಟ್ಯಾಗ ಹುಟ್ಟಿದ” ಮಗನ ಮೇಲಿನ ಮಮಕಾರ ಹೀಗೆ ಆತುರದ ನಿರ್ಧಾರ ಮಾಡಿತಾ? ಹೀಗೆ ಕಥೆ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕುತ್ತ ‘ತನ್ನನ್ನು ತಾನು ಆತ್ಮಹತ್ಯೆ ಮಾಡಿಕೊಂಡು’ ಕೊನೆ ಮುಟ್ಟುತ್ತದೆ.

ಹಂಪಿ ಕನ್ನಡ ವಿ.ವಿ ಯ ಸೂಕ್ಷ್ಮ ಸಂವೇದನಾಶೀಲ ಲೇಖಕ ಅಮರೇಶ ನುಗಡೋಣಿ “ದೇಸಿತನದ ಸಿಹಿಯ ಹೂರಣ”ದ ತಮ್ಮ ಮುನ್ನುಡಿಯಲ್ಲಿ “ಪ್ರಾದೇಶಿಕತೆಯಿಂದ ಕೂಡಿದ ಆಡುಭಾಷೆ ಕಥೆಗಳಿಗೆ ಸಹಜವಾಗಿ ಒಗ್ಗಿಕೊಂಡಿದೆ. ಅಲ್ಲಿ ಬಳಸುವ ಪದಗಳು ಮತ್ತು ಬೈಗುಳಗಳು ಸಹಜವಾಗಿ ಪಾತ್ರಗಳ ಮೂಲಕ ಮೈತಾಳಿವೆ” ಎಂದು ಸಂಕಲನದ ಒಟ್ಟು ಕಥೆಗಳಿಗೆ ಪೂರಕವಾಗಿ ತಮ್ಮ ಅಭಿಪ್ರಾಯ ದಾಖಲಿಸಿರುವುದು ಆನಂದ ಎಸ್.ಗೊಬ್ಬಿ ಅವರ ಸಾರ್ಥಕತೆಯನ್ನು ಹೇಳುತ್ತದೆ.

ಈ ಕೃತಿಯ ಹೆಚ್ಚುಗಾರಿಕೆ ಭಾಷಾ ಸೊಗಡು. ಈ ಭಾಷಾ ಸೊಗಡಿಂದ ಸಾಮಾನ್ಯ ಓದುಗನಿಗೆ ಸುಲಭವಾಗಿ ದಕ್ಕಲಾರದ ಕಥೆಗಳಾಗಿ ಉಳಿದಿವೆ. ಇಲ್ಲಿನ ಕಥೆಗಳೊಳಗೆ ಬಳಸಿರುವ ಗ್ರಾಮ್ಯ ಭಾಷೆ ಸರಾಗವಾಗಿ ಕಥೆಗಳನ್ನು ಓದಲು ಅರ್ಥೈಸಿಕೊಳಲು ಹೆಣಗಬೇಕಾಯ್ತು. ಹಾಗಾಗಿ ಇಲ್ಲಿನ ಎಲ್ಲ ಕಥೆಗಳು ಒಂದು ರೀತಿಯಲ್ಲಿ ‘ಕಷ್ಟದ ಮತ್ತು ಕ್ಲಿಷ್ಟದ’ ಕಥೆಗಳಾಗಿ, ಎರಡೆರಡು ಸಲ ಓದಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದವು.

“ಹ್ಞೂಂ ಎಣ್ಣಾ ಯಾವಾಗ ಹೊಲೇರ ಎತ್ತು ತಗೊಂಡೆ.ಅದ್ ಮನಿಗಿ ಬಂದು ಹೊಯ್ತು ಅಲ್ಲಿಂದ ಹತ್ಯಾದ ಪೀಡ. ಹೊಲೇರ ಎತ್ತು ಮ್ಯಾಗ ಬ್ಯಾರೆದು ತಗೊಂಡೆ, ತಗಂದು ಮೂರ ದಿನಕ ಕಳವು ಆಗ್ಯಾದ. ಇನ್ನ ಪಾರಾದ ಅದಕ ತಲಿ ಎಡಕ್ ಬ್ಯಾನಿ ಅಂತಾದ ಹ್ಯಾಂಗ ಮಾಡ್ಲಿ ಹೇಳು”
“ಏನ್ ಪುಣ್ಯಾಕ್ ನೋಡಿರೇನ್, ಮನ್ಯಾಗ ಇದಿರಿ ನೋಡಿಕಂಡಿರಿ. ಏ ರೊಕ್ಕ ಕೊಡಬ್ಯಾಡ ರೂಪಾಯಿ ಕೊಡಬ್ಯಾಡ. ಹ್ಯಾಂಗಾನ ಮಾಡಕ್ಯಾಲಾಕ”
“ಹಾದರಗಿತ್ತಿ ಸೂಳಿ ಹ್ಯಾಂಗ ಕೊಲ್ಲಾಕ ನಿಂತಾಳ ನೋಡು. ಬಂಗಾರದಂತ ಮಗನ”
“ಯಂಕಣ್ಣಗ ಏನ ಗೊತ್ತಾದ ಪಾಪ. ಚೊಲಾ ಮಾಡಿಕೊಂಡು ತಿಂತಾಳಂತ ಕೊಡಿಶ್ಯಾನ. ಬಸವಿಯಾಟ ಮಾಡ್ತಳಂತ ಯಾರಿಗಿ ಗೊತ್ತು. ನ್ಯಾಯಕ ಇಟ್ಟಾಗ ದೈವದ ಮಂದಿ ಏನ ಅಂತಾರೋ ಎನೋ ಹೆಣ್ಣಿನ ಕಡೆನೇ ಬಾಳ ಮಂದಿ ಮಾತ್ತಾಡತ್ತಾರ”

ಹೀಗೆ ಭಾಷೆ ಇಡೀ ಸಂಕಲದಲ್ಲಿ ಹಾಸು ಹೊದ್ದಿದೆ. ಈ ಹಾಸು ಹೊದ್ದ ಕಥೆಗಳು ಮೊದಲ ಓದಿಗೆ ದಕ್ಕದಾದವು. ಹಾಗೆ ಮರು ಓದಿನ ಅನಿವಾರ್ಯತೆಗೆ ಕಾರಣವಾದವು.

ಒಂದು ಕೃತಿಯ ಮರು ಓದಿನ ಅನಿವಾರ್ಯತೆಯ ಓದು, ಗೊಬ್ಬಿ ಅವರ ಕಥನ ತಂತ್ರವೂ ಹೌದು. ಈ ಕಥನ ತಂತ್ರ ಈಗಾಗಲೇ ಸಾಕಷ್ಟು ದಲಿತ ಲೇಖಕರ ಕಥೆಗಳಲ್ಲಿ ಬಂದಿರುವುದನ್ನು ಕಾಣಬಹುದು. ನನ್ನ ಬಹುತೇಕ ಕಥೆಗಳಲ್ಲಿ ಹಾಗು ಈಗ ನಾನು ಬರೆಯುತ್ತಿರುವ ಕಥನ ಕಾವ್ಯದಲ್ಲು ಈತರದ ಆಡುಭಾಷಾ ಪ್ರಯೋಗವಿದೆ. ಆದರೆ ನನ್ನ ಓದಿನ ಗ್ರಹಿಕೆಯಲ್ಲಿ ಇಲ್ಲಿನ ಯಾವ ಕಥೆಯೂ ಇನ್ನೊಬ್ಬ ಲೇಖಕರ ಯಾವ ಕಥೆಯ ಅಥವಾ ಕಾದಂಬರಿ ಅನುಕರಣೆ ಇಲ್ಲದ ಹೊಸತನದ ಕಥೆಗಳು. ಹಾಗೆ ಗೊಬ್ಬಿ ಅವರಲ್ಲೊಬ್ಬ ತುಡಿತದ ನಾಯಕನಿದ್ದಾನೆ. ಅದು ಈ ಸಂಕಲನದ ಕಥೆಗಳೊಳಗೆ ಅಲ್ಲಲ್ಲಿ ನಿರೂಪಣೆಗೊಂಡಿದೆ. ಹಾಗೆ ನಿರೂಪಣೆಗೊಂಡರು ಆ ನಿರೂಪಕ ಸಾವಕಾಶವಾಗಿ ಮತ್ತೆ ಪ್ರವೇಶ ಪಡೆಯದಿರುವುದು. ಈ ಪ್ರವೇಶಿಕೆ ಲೇಖಕನ ಸೃಜನಶೀಲ ವ್ಯೂಹವೂ ಹೌದು. ಅಂದರೆ ಕಥೆಗಾರ ಕಥೆಗಳೊಳಗೆ ಸುತ್ತುವುದು. ಈ ಸುತ್ತುವಿಕೆ, ಕಥೆಗಳ ಬಿಗಿ ಹೆಣಿಗೆಗೆ ಪೂರಕವಾಗಿಯೇ ನಿರೂಪಣೆಗೊಂಡು ತನ್ನ ಆಸ್ಮಿತೆ ಉಳಿಸಿಕೊಳ್ಳುತ್ತದೆ.
ಅದು,
“…’ದೇಶದ ಕತೆ ಯಾರ್ ಕೈಯಾಗ್ ಅದೋ, ಅಂಗಳದಾಗ ಆಡುವ ಕೂಸಿಗೆ ರಕುತದ ಕಲಿ ನೋಡೋ. ಬೀದ್ಯಾನ ನಾಯಿಗೆ ರುಚಿ ಅತ್ತ್ಯಾದ ನೋಡೋ’… ಎಂದು ತನಗೆ ದೋಚಿದಂಗ ಹೊದ್ರಿ ಡನ್, ಡನ್,ಡನ್, ಡಂಕಣಕ್ ಎಂದು ಮುದುಕ ಬಾರಿಸಿದ ಶಬುದ ನನ್ನ ಕಿವಿಗೆ ಬಡಿದು ಮಕ್ಕಂಡವನ ಎಬ್ಬಿಸಿತು” ಎಂದು ‘ಒಂದು ಸಾವಿನ ಸುತ್ತ’ ಕಥೆಯಲ್ಲಿ ಪ್ರವೇಶ ಪಡೆವ ನಿರೂಪಕ ಕಥೆ ಅಂತ್ಯದಲ್ಲಿ ಕಾಣ ಸಿಗುವುದೇ ಇಲ್ಲ.

ಹೀಗೆ ಗೊಬ್ಬಿ ಅವರ ದೇವಿಪುರದ ಜಡ್ಡುಗಟ್ಟಿದ ಜನರನ್ನು ಎಚ್ಚರಸುವ ಮಾಸ್ತರನ ಹೋರಾಟದ ತಾರ್ಕಿಕತೆ, ಆಲದ ಮರದ ರಾಮಯ್ಯನ ದುರಂತದ ಹಿಂದೆ- ಎತ್ತೊಂದಕ್ಕೆ ಅಂಟಿಕೊಂಡ ಜಾತೀಯತೆ, ಗಿರಿಕನ್ಯೆಯ ಪಾವಿತ್ರ್ಯತೆ ಮತ್ತು ಕೊನೆಗೂ ಸಂಶಯಾತ್ಮಕವಾಗಿ ಉಳಿದು ಬಿಡುವ ಕಮಲಿಯ ಲಕ್ಷ್ಯ ಮತ್ತು ಲಕ್ಷ್ಮಿಯ ಬಾಳುವೆ, ಹುಳಿ ಮೊಸರು ಕದಡುವ ಶಾಂತಿ ಮತ್ತು ಶಾಂತಿಯ ಒಂದು ಅವ್ಯಕ್ತವಾದ ಭಾವನೆ ವ್ಯಕ್ತವಾಗುವಲ್ಲಿ ಗೋಚರವಾಗುವ ಸ್ಪಷ್ಟತೆ, ಒಂದು ಸಾವಿನ ಸುತ್ತದಲ್ಲಿ ಅನಾವರಣಗೊಳ್ಳುವ ದೃಶ್ಯರೂಪ, ಸಂಕಲನದ ಶೀರ್ಷಿಕೆ ಕಥೆಯಲ್ಲಿನ ಸಮತೋಲಿತ ಪಾತ್ರಗಳ ಒಂದು ಅಸಮತೋಲಿತ ಕಥಾ ನಿರೂಪಣೆಯನ್ನು ಕಾಣಬಹುದು.

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x