ರಾಷ್ಟ್ರೀಯ ವಿಜ್ಞಾನ ದಿನ: ಡಾ.ಅವರೆಕಾಡು ವಿಜಯ ಕುಮಾರ್

1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಶನ್(ಎನ್. ಸಿ. ಎಸ್. ಟಿ. ಸಿ.) ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ‘ ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲು ಮನವಿಯನ್ನು ಸಲ್ಲಿಸಿತ್ತು.ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು.ಮೊದಲ ಬಾರಿಗೆ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು 28 ಫೆಬ್ರುವರಿ 1987 ರಂದು ಆಚರಣೆಗೆ ತರಲಾಯಿತು.ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಪ್ರಮುಖ ಉದ್ದೇಶವಾಗಿದೆ.ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಉಪನ್ಯಾಸಗಳು,ಚರ್ಚಾ ಸ್ಪರ್ಧೆಗಳು,ರಸಪ್ರಶ್ನೆ,ವಸ್ತು ಪ್ರದರ್ಶನ, ಹೀಗೆ ವಿವಿಧ ರೀತಿಯ ಚಟುವಟಿಕೆಗಳು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಡೆಸಲಾಗುತ್ತದೆ. ವಿಜ್ಞಾನ,ಅದರ ಪ್ರಾಮುಖ್ಯತೆ ಪ್ರತಿಯೊಬ್ಬರಿಗೂ ತಿಳಿದಿರಬೇಕು.ಇದರ ಮಹತ್ವವನ್ನು ನೆನಪಿಸಿಲೆಂದೇ ಪ್ರತಿವರ್ಷವೂ ಈ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ಜಾರಿಯಲ್ಲಿದೆ.

ಇಂದು 28 ಫೆಬ್ರವರಿ ಭಾರತದಲ್ಲಿ’ ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಲಾಗುತ್ತಿದೆ.ವಿಪರ್ಯಾಸವೆಂದರೆ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಸ್ರೋ, ಬಾರ್ಕ್,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಟಾಟಾ ಇನ್ಸ್ಟಿಟ್ಯೂಟ್,ಇತ್ಯಾದಿ ಸಂಸ್ಥೆಗಳನ್ನು ಹೊರತುಪಡಿಸಿದರೆ, ಸಾಮಾನ್ಯವಾಗಿ ಎಷ್ಟು ಜನರಿಗೆ ಈ ದಿನದ ವಿಶೇಷತೆ ಮತ್ತು ಅದರ ಮಹತ್ವ ತಿಳಿದಿದೆಯೋ ಗೊತ್ತಿಲ್ಲ.ಶ್ರೀಸಾಮಾನ್ಯರ ಜೀವನ ಯಾನದಲ್ಲಿ ‘ಪ್ರೇಮಿಗಳ ದಿನ’ ನೆನಪಿರುತ್ತದೆ ಹೊರತು ವಿಜ್ಞಾನದ ದಿನ ಮಾತ್ರ ಕೆಲವು ಭಾಷಣಗಳಿಗೆ, ವಿಚಾರಗೋಷ್ಠಿಗಳಿಗೆ, ಕೆಲವು ಆಸನಗಳು ಮಾತ್ರ ಸೀಮಿತವಾಗಿರುತ್ತವೆ. ಬದಲಾಗಿ ಶ್ರೀಸಾಮಾನ್ಯ ಎಲ್ಲರೂ ವಿಜ್ಞಾನ-ತಂತ್ರಜ್ಞಾನದ ಕುತೂಹಲಕ್ಕೆ,ಜ್ಞಾನಾರ್ಜನೆಗೆ ಮನಸು ಮಾಡುವುದು ಅತ್ಯವಶ್ಯಕವಾಗಿದೆ.

ಈ ದಿನದ ಪ್ರಮುಖ ವಿಶೇಷತೆಯೆಂದರೆ ಭಾರತದ ಪ್ರಖ್ಯಾತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ವಿಶ್ವಕ್ಕೆ ‘ರಾಮನ್ ಎಫೆಕ್ಟ್’ ಎಂಬ ಸಿದ್ಧಾಂತವನ್ನು ಪರಿಚಯಿಸಿದ ದಿನ.ವಿಜ್ಞಾನ ನಿಕಾಯದಿಂದ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪ್ರಶಸ್ತಿ ಪಡೆದ. ವಿಜ್ಞಾನಿ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಇವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್.ಇವರು 07 ನವಂಬರ್ 1888 ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು.ಇವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು.1904 ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ರಾಮನ್ ಅವರು,ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಗಳಿಸುವ ಮೂಲಕ ಕಲ್ಕತ್ತೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ 1907ರಲ್ಲಿ ನೇಮಕಗೊಂಡರು.ವಿದ್ಯಾರ್ಥಿ ದೆಸೆಯಿಂದ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ವೃತ್ತಿ ನಿರತರಾಗಿದ್ದಾಗಲು ಮುಂದುವರೆಸಿಕೊಂಡು ಬಂದರು.1907ರಲ್ಲಿ ಎಂ. ಎಸ್ಸಿ.,ಪದವೀಧರರಾದರು.16 ಮಾರ್ಚ್ 1907 ಸಂಗೀತಗಾರ್ತಿ,ವೀಣಾವಾದಕಿ ಲೋಕ ಸುಂದರಿ ಎಂಬುವರೊಂದಿಗೆ ವಿವಾಹ. ಈ ದಂಪತಿಗಳಿಗೆ ಚಂದ್ರಶೇಖರ ಮತ್ತು ರಾಧಾಕೃಷ್ಣನ್ ಎಂಬ ಇಬ್ಬರು ಗಂಡು ಮಕ್ಕಳು.1917 ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡರು.1924 ರಲ್ಲಿ ಲಂಡನ್ನಿನ ಫೆಲೋ ಆಫ್ ರಾಯಲ್ ಸೊಸೈಟಿಗೆ ಆಯ್ಕೆಯಾದರು.16 ಮಾರ್ಚ್ 1928ರಲ್ಲಿ ತಮ್ಮ ಸಂಶೋಧನೆ ರಾಮನ್ ಎಫೆಕ್ಟ್ ಅನ್ನ ಬೆಂಗಳೂರಿನಲ್ಲಿ ಬಹಿರಂಗಪಡಿಸಿದರು.ಇದಕ್ಕೆ ನೊಬೆಲ್ ಪ್ರಶಸ್ತಿ ಕೂಡ ದೊರೆಯಿತು.

ಕಲ್ಕತ್ತದ ಇಂಡಿಯನ್ ಅಸೋಶಿಯೇಶನ್ ಫಾರ್ ಕಲ್ಟಿವೇಶನ್ ಅಫ್ ಸೈನ್ಸ್ ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ನಡೆಸಿದ ಸಂಶೋಧನೆಗಳ ಪರಿಣಾಮವೇ ಈ ‘ ರಾಮನ್ ಎಫೆಕ್ಟ್’.1921ರಲ್ಲಿ ರಾಮನ್ ಅವರು ಮೊಟ್ಟಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡರು. ಯುರೋಪ್ನಲ್ಲಿ ನಡೆದ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಮ್ಮೇಳನದಲ್ಲಿ ಕಲ್ಕತ್ತ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದರು. ವಿಷ ಯಾತ್ರೆಯಿಂದ ಭಾರತಕ್ಕೆ ಮರಳುವಾಗ ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ಅವರಿಗೆ ಸಮುದ್ರ ದೂರದವರೆಗೂ ನೀಲಿ ಬಣ್ಣದಲ್ಲಿ ಕಾಣುವುದು, ಅದು ಬಣ್ಣದ ಪ್ರತಿಫಲನ ಆಗಿರುವುದೇ ಅಥವಾ ಬೇರೆ ಏನಾದರೂ ನಿಗೂಢ ಇದೆಯೇ ಎಂಬ ಕುತೂಹಲ ಕೆರಳಿತು. ಆ ಕುತೂಹಲದಿಂದ ಮುಂದುವರಿಸಿದ ಸಂಶೋಧನೆಯ ಪರಿಣಾಮ ‘ರಾಮನ್ ಪರಿಣಾಮ’.1934ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ 1943ರಲ್ಲಿ ರಾಮನ್ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ತಮ್ಮ ಸಂಶೋಧನೆಗಾಗಿ ಬೆಂಗಳೂರು ನಗರವನ್ನು ಕಾರ್ಯಕ್ಷೇತ್ರವನ್ನಾಗಿ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ವಿಜ್ಞಾನ ಸಂಶೋಧನ ಸಂಸ್ಥೆಯನ್ನು ತಮ್ಮ ಅವಧಿಯಲ್ಲಿಯೇ ಸ್ಥಾಪಿಸಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿದರು.ಯುವ ಸಂಶೋಧಕರಿಗೆ ಬೌತಶಾಸ್ತ್ರದ ಪ್ರಮುಖ ಸಂಶೋಧನೆ ಸಂಸ್ಥೆಯಾಗಿದೆ ಇದು.

ರಾಮನ್ ಅವರು ನೀಡಿದ ವಿಜ್ಞಾನ ಉಪನ್ಯಾಸಗಳು ಜನಮಾನಸದಲ್ಲಿ ಅಚ್ಚಳಿಯದೇ ನಿಂತಿವೆ.ಸಾಮಾನ್ಯವಾಗಿ ಅವರ ಉಪನ್ಯಾಸಗಳನ್ನು ಕೇಳಿದವರು ಅದರಲ್ಲೊಂದು ವಿಶೇಷ ಶಕ್ತಿ ಒಂದನ್ನು ಅನುಭವಿಸಿದ್ದರು.ಎಂತಹ ವಿಜ್ಞಾನದ ಜಟಿಲ ಪ್ರಶ್ನೆಗಳಿದ್ದರೂ ಅವುಗಳಿಗೆ ಸರಳವಾಗಿ ವ್ಯಾಖ್ಯಾನಿಸುತ್ತಿದ್ದರು.ಜಗತ್ತು ಕಂಡ ಮೇಧಾವಿ ವಿಜ್ಞಾನಿಗಳಲ್ಲಿ ರಾಮನ್ ಕೂಡ ಒಬ್ಬರು.ಸದಾ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಸರಳತೆ, ಸೌಹಾರ್ದತೆ ಹಾಗೂ ಹಾಸ್ಯಪ್ರಜ್ಞೆ ಅವರಲ್ಲಿ ಮನೆಮಾಡಿತ್ತು. ನಮ್ಮ ಬದುಕಿಗೆ ಮತ್ತು ರಾಷ್ಟ್ರದ ಪ್ರಗತಿಗೆ ಆಧಾರವಾದ ವಿಜ್ಞಾನದ ಅದ್ಭುತ ವ್ಯಕ್ತಿಗಳನ್ನು ಗೌರವಿಸುವುದು ಈ ದಿನದ ವಿಶೇಷತೆ ಕೂಡ ಹೌದು. ಜಗತ್ತಿನ ವಿಜ್ಞಾನ ಕ್ಷೇತ್ರದಲ್ಲಿ ಪರಿಣಾಮಕಾರಿ ಸಂಶೋಧನೆಯಿಂದ ನಡೆಸಿದ 7 ಪ್ರಮುಖ ಭಾರತೀಯ ವಿಜ್ಞಾನಿಗಳೆಂದರೆ ಸಿ. ವಿ. ರಾಮನ್,ಹೋಮಿ ಜೆ. ಬಾಬಾ,ಸರ್ ಎಂ. ವಿಶ್ವೇಶ್ವರಯ್ಯ,ಎಸ್.ಚಂದ್ರಶೇಖರ್, ಶ್ರೀನಿವಾಸನ್ ರಾಮಾನುಜನ್,ಜಗದೀಶ ಚಂದ್ರ ಬೋಸ್,ಎ. ಪಿ. ಜೆ. ಅಬ್ದುಲ್ ಕಲಾಂ. ಸಿ. ವಿ.ರಾಮನ್ ಅವರು ಫೇಲೋ ಅಪ್ ರಾಯಲ್ ಸೊಸೈಟಿ ಸದಸ್ಯತ್ವ, ನೈಟ್ವುಡ್ ಪ್ರಶಸ್ತಿ, ಮೈಸೂರು ಮಹಾರಾಜರಿಂದ ‘ ರಾಜ ಸಭಾ ಭೂಷಣ ಗೌರವ’, 1954 ‘ಭಾರತ ರತ್ನ ಪ್ರಶಸ್ತಿ’,1957 ‘ ಲೆನಿನ್ ಶಾಂತಿ ಪ್ರಶಸ್ತಿ, ಹೀಗೆ ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದರು.21 ನವಂಬರ್ 1970 ರಲ್ಲಿ ಬೆಂಗಳೂರಿನಲ್ಲಿಯೇ ಇಹಲೋಕ ತ್ಯಜಿಸಿದರು.ಇಂತಹ ಅಗ್ರಮಾನ್ಯ ಭಾರತದ ವಿಜ್ಞಾನಿಯನ್ನು,ಅವರ ಸಂಶೋಧನೆಯನ್ನು, ಅವರ ಕೊಡುಗೆಯನ್ನು ಯುವ ಸಮುದಾಯಕ್ಕೆ ರಾಷ್ಟ್ರೀಯ ವಿಜ್ಞಾನ ದಿನದ ಮೂಲಕ ತಿಳಿಸುವುದು ಅರ್ಥಪೂರ್ಣವಾಗಿದೆ. ಪ್ರಾಯಶಃ ಪ್ರತಿಯೊಬ್ಬ ಜೀವಿಯ ಬದುಕಿನಲ್ಲೂ ನಾವು ಗಮನಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಜ್ಞಾನದ ಪಾತ್ರವಿರುತ್ತದೆ.ಅದು ಸಾಮಾನ್ಯವಾಗಿ ದಿನಬಳಕೆಯ ವಸ್ತುಗಳಿಂದ ಆರಂಭಗೊಂಡು ಉನ್ನತ ತಂತ್ರಜ್ಞಾನದವರೆಗೂ ಕರೆದೊಯ್ಯುತ್ತದೆ. ವಿಜ್ಞಾನದ ನೆರವಿಲ್ಲದೆ ಒಂದು ಕ್ಷಣವೂ ಜೀವಿಸಲು ಸಾಧ್ಯವಿಲ್ಲ ಎಂಬಂತೆ ಪರಿಸ್ಥಿತಿಯನ್ನು ನಿರ್ಮಿಸಿಕೊಂಡಿದ್ದೇವೆ.ಈ ನಿಟ್ಟಿನಲ್ಲಿ ವಿಜ್ಞಾನದ ಅವಶ್ಯಕತೆ, ಮೇಲಾಗಿ ಅನಿವಾರ್ಯತೆ ಹೆಚ್ಚಾಗಿದೆ.ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಪ್ರಸ್ತುತ ದಿನ ಸಂಪೂರ್ಣ ವಿಜ್ಞಾನಮಯವಾಗಿದೆ.

-ಡಾ.ಅವರೆಕಾಡು ವಿಜಯ ಕುಮಾರ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x