ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನಾ … ಎಂಬ ಮಂತ್ರೋಚ್ಛಾರಣೆಯೊಂದಿಗೆ ಸಾವಿರಾರು ಗುರು ಹಿರಿಯರು, ಬಂಧು ಮಿತ್ರರು ಆಶೀರ್ವಾದ ಮಾಡಿಕೊಟ್ಟ ಪವಿತ್ರ ಮಾಂಗಲ್ಯ ಧಾರಣೆ ಮಾಡುವ ವಿವಾಹ ಎಂಬ ಏಳೇಳು ಜನುಮದ ಸಂಬಂಧ ಎಂಬ ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ – ಎಂದು ಪತಿ ಪತ್ನಿಗೆ ಮಾತು ಕೊಟ್ಟು, ಅಗ್ನೀ ಸಾಕ್ಷಿಯಾಗಿಸಿ ಸಪ್ತಪದಿ ತುಳಿಯುವ ಮದುವೆಗಳು ಸ್ವರ್ಗದಲ್ಲಿ ನಿರ್ಣಯಾವಾಗಿರತ್ತವೆಂದು ಬಿಡಿಸಿಕೊಳ್ಳಲಾಗದಂತೆ ಬಿಗಿಯಾಗಿ ಸಂಬಂಧವನ್ನು ಬೆಸೆದು ಅಕ್ರಮ ಸಂಬಂಧಗಳ ತಡೆಯುವ, ಸಂಗಾತಿಯನ್ನು ಅರ್ಧ ನಾರೀಶ್ವರರಂತೆ ಬೆಸೆಯುವ ಅಧ್ಭತ ಕಲ್ಪನೆ, ಪತಿ ಪತ್ನಿ ಮಕ್ಕಳು ಎಂಬ ಕೌಟುಂಭಿಕ ನಂದನವನವೆಂಬ ಸುಂದರ ವ್ಯವಸ್ಥೆ ನಶಿಸುವ ಕಾಲ ದೂರವಿದೆ ಅನಿಸದು! ಏಕೆಂದರೆ ಇತ್ತೀಚಿಗೆ ಯುವಕರು ಲಿವಿಂಗ್ ಟುಗೆದರ್ ಎಂಬ ಹೊಸ ಸಂಬಂಧದ ಕಡೆಗೆ ವಾಲುತ್ತಿರುವುದು, ಯುವಕ ಯುವತಿಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗುತ್ತಿರುವುದು, ಯುವಕರು ಜಾತಿ, ಮತ, ಧರ್ಮ, ಭಾಷೆ, ದೇಶಗಳ ಗಡಿಗಳ ಸಲೀಸಾಗಿ ಮೀರುತ್ತಿರುವುದು, ನ್ಯಾಯಾಲಯಗಳು ಅದಕ್ಕೇ ಪ್ರೋತ್ಸಾಹಿಸುವಂತೆ ತೀರ್ಪುಗಳ ಕೊಡುತ್ತಿರುವುದು ಸಾಕ್ಷಿಯಾಗಿದೆ.
ಮದುವೆಯಾಗದ ಯುವಕ ಯುವತಿಯರು ವಿವಾಹವೆಂಬ ಯಾವುದೇ ಬಂಧನವಿಲ್ಲದೆ, ನೊಂದಣಿಯ ಧಾಖಲೆಯಿಲ್ಲದೆ ವಿವಾಹಿತರಂತೆ ಒಂದೇ ಸೂರಿನಡಿ ಜತೆಯಾಗಿಯೇ ಬದುಕುವ ಸಂಬಂಧವನ್ನು ಸಹಜೀವನವನ್ನು ‘ ಲಿವಿಂಗ್ ಟುಗೆದರ್ ‘ ಎನ್ನುವರು! ಈ ಜೋಡಿ ತಮ್ಮಿಬ್ಬರಲ್ಲಿ ಹೊಂದಾಣಿಕೆ ಇರುವವರೆಗೆ ಜತೆಯಲ್ಲಿ ಇರಬಹುದು! ಅವಿಶ್ವಾಸ ಅಪನಂಬಿಕೆ ಎಡೆ ಎತ್ತಿದಾಗ, ವೈಮನಸ್ಸು ತಲೆದೋರಲು ಯಾರ ಬಯವಿಲ್ಲದೆ, ಯಾವುದೇ ಬಂಧನದ ಭೀತಿಯಿಲ್ಲದೆ ಪರಸ್ಪರ ಬೇರೆಯಾಗಿ ಬದುಕಬಹುದು! ಕೋರ್ಟಿಗಲೆಯದೆ ವಕೀಲರಿಗೆ ಸಂಭಾವನೆ ಕೊಡದೆ, ಡೈವರ್ಸ್ ಪಡೆಯದೆ ಬೇರೆಯಾಗಬಹುದು! ಮತ್ತೊಬ್ಬರ ಆಕರ್ಷಣೆಗೆ ಒಳಗಾದಾಗ ಅವರೊಂದಿಗೆ ಲಿವಿಂಗ್ ಟುಗೆದರ್ ಎಂಬ ಬಂಧನವಲ್ಲದ ಬಂಧನದಲ್ಲಿ ಜತೆಯಾಗಿರಬಹುದು! ಇಲ್ಲಿ ಇಬ್ಬರ ಮಧ್ಯ ಆಕರ್ಷಣೆ, ಹೊಂದಾಣಿಕೆ, ನಂಬಿಕೆ, ಪ್ರೀತಿಯನ್ನು ಈ ಬಂಧ ಅವಲಂಭಿಸಿರುತ್ತದೆ. ಇದು ಸಾಮಾಜದ ಒಪ್ಪಿತ ವ್ಯವಸ್ಥೆಯಲ್ಲ! ಅಷ್ಟೇ ಅಲ್ಲ ಇಂತಹ ಸಂಬಂಧವನ್ನು ಸಮಾಜ ಇದುವರೆವಿಗೂ ಕೆಟ್ಟದ್ದು ಎಂದು ತುಚ್ಛೀಕರಿಸಲ್ಪಟ್ಟಿತ್ತು. ಇಂದು ಸಹ ಸಮಾಜದ ಒಪ್ಪಿತ ವ್ಯವಸ್ಥೆಯೇನೂ ಆಗಿಲ್ಲ! ಹಾಗೇ ತುಚ್ಛೀಕರಿಸಲಾಗುತ್ತಿದೆ. ಆದರೆ ಇಂದು ಇದು ಕಾನೂನಿನ ಬಲ ಪಡೆದಿದೆ! ಪ್ರಯುಕ್ತ ಸಹಜೀವನ ನಡೆಸುವವರಿಗೆ ಬೇರೆಯವರು ತೊಂದರೆ ಕೊಡಲಾಗದು. ಮದುವೆ ವಯಸ್ಸಿನ ಪರಸ್ಪರ ಆಕರ್ಷಿತರಾದ ಗಂಡು ಹೆಣ್ಣು ಸಮಾಜಕ್ಕೆ ಅಂಜದೆ ಸಹಜೀವನ ನಡೆಸಲು ರಹದಾರಿಯಾಗಿದೆ! ಇದು ಮುಂದೆ ಎಗ್ಗಿಲ್ಲದೆ ಹೆಚ್ಚುವಂತಾಗಬಹುದು! ಹೆಚ್ಚಬಾರದು ಎಂದೇನೂ ಇಲ್ಲ! ಬದಲಾವಣೆಯೇ ಜಗದ ನಿಯಮ! ಸಮಾಜ ನಿಂತ ನೀರಲ್ಲ! ಆದರೆ ಬದಲಾವಣೆ ನಿಧಾನ! ಲಿವಿಂಗ್ ಟುಗೆದರ್ ದೊಡ್ಡ ದೊಡ್ಡ ನಗರಗಳಲ್ಲಿ ಸದ್ದಿಲ್ಲದೆ ಹೆಚ್ಚುತ್ತಿದೆ! ಹಿಂದೆ ಇಂಥವರಿಗೆ ಬಾಡಿಗೆಗೆ ಯಾರೂ ಮನೆಗಳನ್ನು ಕೊಡುತ್ತಿರಲಿಲ್ಲ! ಆದರೆ ಇತ್ತೀಚೆಗೆ ಇವುಗಳನ್ನು ಪ್ರೋತ್ಸಾಹಿಸಲೆಂಬಂತೆ ಕೆಲವರು ಇವರಿಗೆ ಅನುಕೂಲವಾಗುವಂತೆ ಮನೆಗಳ ಬಾಡಿಗೆಗೆ ಕಟ್ಟಿಸಿಕೊಟ್ಟು ಹಣ ಮಾಡುವ ದಂದೆಗೂ ಇಳಿದಿದ್ದಾರೆ! ಈ ಜೋಡಿ ಆಕರ್ಷಣೆ ಕಳೆದುಕೊಂಡು ಬೇರೆಯವರ ಆಕರ್ಷಣೆಗೆ ಒಳಗಾಗಿ ಆಕರ್ಷಣೆಗೆ ಒಳಗಾದವರ ಜತೆಗೆ ವಾಸಿಸಬಹುದು! ಇದರಿಂದ ಮಕ್ಕಳನ್ನು ಮಾಡಿಕೊಂಡರೆ ಮಾಡಿಕೊಳ್ಳಬಹುದು. ಇಲ್ಲವೆ ಇಲ್ಲ! ಮಕ್ಕಳನ್ನು ಮಾಡಿಕೊಂಡನಂತರ ಬೇರೆಯಾದರೆ ಇಂತಹವರ ಮಕ್ಕಳು ಅನಾಥರಾಗಬಹುದು! ಆಗ ಅವರಿಗಾಗಿ ಪ್ರತ್ಯೇಕ ವಾಸಸ್ಥಳಗಳ ಸರಕಾರ ಆರಂಭಿಸಿ ಅವರ ಎಲ್ಲಾ ಜವಾಬ್ದಾರಿ ಸರಕಾರ ಆರಂಭಿಸಿದ ಆ ಸಂಸ್ಥೆಯದೇ ಆಗಿ ಆ ಮಕ್ಕಳು ತಾಯಿ ತಂದೆಯರಿಲ್ಲದೆ ಬದುಕಬೇಕಾಗಬಹುದು. ಹಾಗೇ ಅವರ ವಿವಾಹಗಳು ಅಥವಾ ಲಿವಿಂಗ್ ಟುಗೆದರ್ ಯಾರೊಂದಿಗೆ ಬೇಕಾದರೂ ನಡೆಯಬಹುದು.
ಹಿರಿಯ ತಲೆಮಾರಿನವರು ಹೆದರಬೇಡಿ ಇಂದು ನಾಳೆ ಇದು ಅಗದು. ಇದಕ್ಕೆ ಸಾಕಷ್ಟು ಸಮಯ ಬೇಕಾಗಬಹುದು. ಆದರೆ ಇದರ ಆರಂಭ ಈಗಾಗಲೇ ನಗರಗಳಲ್ಲಿ ಆಗಿದೆ. ಎಲ್ಲಿಯವರೆಗೆ ಯುವ ಜನ ವಿವಾಹಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ. ಇದು ಏಳೇಳು ಜನ್ಮದ ಪವಿತ್ರ ಸಂಬಂಧ ಅನುಬಂಧ, ಬ್ರಹ್ಮಗಂಟು ಎಂದು ಭಾವಿಸುವರೋ, ಅಣ್ಣ ತಮ್ಮ, ಅಕ್ಕ ತಂಗಿ, ಅತ್ತೆ ಮಾವ, ಅತ್ತೆ ಸೊಸೆ ಮುಂತಾದ ಸಂಬಂಧಗಳಿಗೆ ಗೌರವ ಕೊಡುವರೋ ಹಾಗೆ ಭಾವಿಸುವವರು ಹೆಚ್ಚಾಗಿ ಇರುವರೋ ಅಲ್ಲಿಯವರೆಗೆ ವಿವಾಹ ಎಂಬ ವ್ಯವಸ್ಥೆಗೆ ಭಂಗವಿಲ್ಲ! ಅದು ಸುಲಬವಾಗಿ ನಶಿಸದಾದರೂ ಕರಗಿಹೋಗುವುದನ್ನು ತಡೆಯಲಾಗದು. ಹಾಗೆ ಇದರಿಂದ ಹಿರಿಯ ತಲೆಮಾರಿನವರಿಗೆ ದುಃಖ ಉಂಟಾಗುವುದನ್ನು ತಡೆಯಲಾಗದು! ಲಿವಿಂಗ್ ಟುಗೆದರ್ ಸರ್ವಾಂತರ್ಯಾಮಿಯಾಗುತಿದ್ದಂತೆ ಮಕ್ಕಳ ಪಾಲನೆ ಪೋಷಣೆ, ದುಡಿಮೆ, ಆಸ್ತಿ ಸಂಪಾದನೆ, ಆಸ್ತಿ ವರ್ಗಾವಣೆ, ಹಕ್ಕುದಾರಿಕೆ ಮುಂತಾದ ಸಾಮಾಜಿಕ ವ್ಯವಸ್ಥೆಯೇ ಪೂರ್ತಿ ಬದಲಾಗುತ್ತದೆ. ಬದಲಾಗಬೇಕಾಗುತ್ತದೆ. ತಂದೆ, ತಾಯಿ ಎರಡು ಸಂಬಂಧಗಳು ಉಳಿದು ಸಹೋದರರು, ಸಹೋದರಿಯರು, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ಮಾವ, ನೆಂಟ – ಬಂಟ, ಮಗಳು ಅಳಿಯ, ಮಗ ಸೊಸೆ ಎಂಬ ಸಂಬಂಧಗಳೇ ಇಲ್ಲವಾಗುಬಹುದು. ವಾರಸುದಾರರ ಸಮಸ್ಯೆ ತಲೆದೋರುವುದು. ವಂಶ, ಸಂತಾನ ಎಂಬ ನಂಬಿಕೆಗಳು ಇಲ್ಲವಾಗುವುವು. ಭ್ರಷ್ಟಚಾರ ಇಲ್ಲವಾಗಬಹುದು! ಇದ್ದರೂ ತುಂಬಾ ಕಡಿಮೆಯಾಗಬಹುದು! ವಿವಾಹ ಎಂಬ ಸಂಬಂಧವಿರಲಿ ಆ ಪದವೇ ಇರದು! ಊಹಿಸಲಾಗದ ರೀತಿ ಸಮಾಜ ಬದಲಾಗಬಹುದು.
ಲಿವಿಂಗ ಟುಗೆದರ್ಗೆ ಸುಪ್ರಿಂ ಕೋರ್ಟೇ ಅನುಮತಿ ನೀಡಿದೆ. ವಿವಾಹವಾದವರಿಗಿರುವಂತೆ ಇವರ ಸಂಬಂಧಕ್ಕೆ ಬೆಲೆ ಇದೆ ಎಂದಿದೆ. ಇದು ಆರಂಭದಲ್ಲಿ ಅವ್ಯವಸ್ಥೆಗೆ ಅವಕಾಶವಾಗಿ ಇದೇ ಮತ್ತೊಂದು ವ್ಯವಸ್ಥೆಯಾಗಿ ಸ್ಥಿರವಾಗುವವರೆಗೂ ಅನಿಶ್ಚಿತತೆ ಉಂಟಾಗಿ ತೊಳಲಾಟಗಳು ಮೈದೋರಿ ಸಮಾಜದಲ್ಲಿ ವಿಚಿತ್ರ ಸಮಸ್ಯೆಗಳು ಸೃಷ್ಟಿಯಾಗಿ ಕಾನೂನುಗಳಷ್ಟೇ ಅಲ್ಲದೆ ಎಲ್ಲವನ್ನು ಲಿವಿಂಗ್ ಟುಗೆದರ್ ಗೆ ಪೂರಕವಾಗುವಂತೆ ಮರು ಪರಿಶೀಲಿಸಿ ನಿಯಮ, ಕಾನೂನುಗಳ ರೂಪಿಸಬೇಕಾಗಬಹುದು! ಸಾಮಾಜಿಕ ಸಂಬಂಧಗಳಂತಹ ವ್ಯವಸ್ಥೆಗಳ ಬಗ್ಗೆ ಸುಪ್ರಿಂ ಕೋರ್ಟುಗಳ ತೀರ್ಮಾನಗಳು ಅಪಾರ ಬದಲಾವಣೆಗೆ ಆಹ್ವಾನವಿತ್ತರೂ ಮೊದಮೊದಲು ಅದ್ವಾನಕ್ಕೆ ಕಾರಣವಾಗಬಹುದು. ಈಗ ಆರಂಭವಾಗಿದೆ ಅದರ ಪ್ರಮಾಣ ಹೆಚ್ಚುತ್ತಿದ್ದಂತೆ ಅದ್ವಾನದ ಸರಣಿ ಅರಂಭವಾಗುತ್ತದೆ. ಊಹೆಗೂ ನಿಲುಕದ್ದು! ಅದು ಸುಧಾರಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಪ್ರಯುಕ್ತ ಈ ತೀರ್ಪುಗಳನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ವಿವಾಹದ ಸಂಬಂಧದ ಅಳಿವು ಉಳಿವಿನ ಅಷ್ಟೇ ಅಲ್ಲದೆ ಸಾಮಾಜಿಕ ಈಗಿನ ವ್ಯವಸ್ಥೆಯ ಅಳಿವು ಉಳಿವು ನಿಂತಿದೆ. ಕೋರ್ಟಿನ ಪ್ರಕಾರ ಅದು ಸರಿ! ಆದರೆ ಇಂದಿನ ಸಾಮಾಜದ ಬಹು ಜನರ ಪ್ರಕಾರ ಅಸಾಧು! ಆದರೆ ಈ ಪೀಳಿಗೆ ನಂತರವೋ ಅದರ ನಂತರವೋ ಸಾಧ್ಯವಾಗಬಹುದು. ಅದರ ಅಸ್ಥಿತ್ವ ಯುವ ಜನತೆಯ ನಡೆಯನ್ನು ಅವಲಂಭಿಸಿದೆ. ಇದರಲ್ಲಿ ಯುವ ಜನತೆಯ ನಿಲವು – ಒಲವು ಮುಖ್ಯವಾಗಲಿದೆ! ಅದರಲ್ಲೂ ವಿಚಾರವಂತರು ಆರ್ಥಿಕವಾಗಿ ಸಧೃಢರಾದ ಯುವಕ ಯುವತಿಯರು ಇದಕ್ಕೆ ಹೆಚ್ಚು ಬಲ ತುಂಬಬಹುದು!
ಭಾರತದ ಧರ್ಮ, ಜಾತಿ, ಸಂಸ್ಕೃತಿ, ಸಂಪ್ರದಾಯ, ಆಚರಣೆ, ಅನೇಕ ಪದ್ದತಿಗಳು ಇಲ್ಲವಾಗುವುವು! ಇದ್ದರೂ ಆಚರಣೆಯಲ್ಲಿ ಗೊಂದಲಗಳಾಗಬಹುದು. ಹಬ್ಬ, ಹರಿ, ಹರ ದಿನಗಳು ಇಲ್ಲವಾಗಬಹುದು! ಅಥವಾ ಎಲ್ಲಾ ಆಚರಿಸಲು ಜನರೇ ಅಂದರೆ ಸಂಬಂಧ ಎಂಬ ಗುಂಪು ಇಲ್ಲವಾದಾಗ ಅವುಗಳ ಆಚರಣೆಯಲ್ಲಿ ಸೊಗಸು ಕಾಣದೆ ನೀರಸವಾಗಿ ಅವುಗಳ ಅಂತ್ಯವಾಗಬಹುದು. ಯಾರು ಯಾವುದನ್ನು ಆಚರಿಸಬೇಕು? ಯಾವುದನ್ನು ಆಚರಿಸಬಾರದು ಎಂಬ ಗೊಂದಲಗಳು ಮೂಡುವುವು. ಜನ್ಮದಿನಾಚರಣೆ, ಮದರ್ಸ್ ಡೇ, ಫಾದರ್ಸ್ ಡೇ, ಲವರ್ಸ್ ಢೇ, ರಾಷ್ಟ್ರೀಯ ಹಬ್ಬಗಳು ಬಿಟ್ಟು ಉಳಿದವುಗಳ ಆಚರಣೆಯಲ್ಲಿ ಗೊಂದಲವಾಗುವುದು. ಈಗ ಪಾಶ್ಚಿಮಾತ್ಯ ರಾಷ್ಟ್ರಗಳಂತಾಗಬಹುದು! ಮಠಗಳು ದೇವಸ್ಥಾನಗಳು ಹೆಚ್ಚದೆ ಇರುವವುಗಳೇ ಸರ್ವರಿಗೆ ಬಾಗಿಲು ತೆರೆಯಬಹುದು! ಇಂದಿನ ಯುವಕರೆ ಬಾರಿ ಭವಿಷ್ಯಗಳು! ಲಿವಿಂಗ್ ಟುಗೆದರ್ ಯುವಕರ ಒಪ್ಪಿತ ಸಂಬಂಧವಾಗುತ್ತಿರುವುದರಿಂದ ಅದೂ ಒಂದು ವ್ಯವಸ್ಥೆಯಾಗುವುದು!
-ಕೆ ಟಿ ಸೋಮಶೇಖರ ಹೊಳಲ್ಕೆರೆ