ಇಹದ ದುರ್ಗಂಧ- ಪರದ ಪರಿಮಳ: ಡಾ. ಹೆಚ್ ಎನ್ ಮಂಜುರಾಜ್

(ಹರಿದಾಸ ಪ್ರಸಿದ್ಧ ಶ್ರೀಪಾದರಾಜರ ಎರಡು ಕೀರ್ತನ ರಚನೆಗಳ ವಿಶ್ಲೇಷಣೆ)

ರಚನೆ : ಶ್ರೀ ಶ್ರೀಪಾದರಾಜರು
ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ || ಪ ||
ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ || ಅ.ಪ.||
ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ || ೧ ||
ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆ
ಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ || ೨ ||
ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸದೆ ಮುಂದೆ ಪರಮಗತಿ ದೊರಕೊಳ್ಳದಂತೆ || ೩ ||
|| ಶ್ರೀ ಕೃಷ್ಣಾರ್ಪಣಮಸ್ತು ||

*****

ಮೋಸ ಹೋದೆನಲ್ಲ, ಸಕಲವು ವಾಸುದೇವ ಬಲ್ಲ ||೨||
ಬಾಸುರಾಂಗ ಶ್ರೀ ವಾಸುಕಿ ಶಯನನ
ಸಾಸಿರ ನಾಮವ ಲೇಸಾಗಿ ಪಠಿಸದೆ||ಬಾಸುರಾಂಗ||
||ಮೋಸ||
ದುಷ್ಟ ಜನರ ಕೂಡಿ , ನಾ ಅತಿ ಭ್ರಷ್ಟನಾದೆ ನೋಡಿ||೨||
ಶ್ರೇಷ್ಠರೂಪ ಮುರ ಮುಷ್ಠಿಕ ವೈರಿಯ
ನಿಷ್ಠೆಯಿಂದ ನಾ ದ್ರಿಷ್ಟಿಸಿ ನೋಡದೆ||ಶ್ರೇಷ್ಠರೂಪ||
||ಮೋಸ||
ಕಾಯವು ಸ್ಥಿರವಲ್ಲ ಎನ್ನೊಲು ಮಾಯೆ ತುಂಬಿತಲ್ಲ||೨||
ಪ್ರಾಯ ಮದದಿ ಪರ ಸ್ತ್ರೀಯರ ಕೊಂಡಾಡಿ
ಕಾಯಜ ಜನಕನ ಗಾಯನ ಮಾಡದೆ||ಪ್ರಾಯ||
||ಮೋಸ||
ಕಂಗಳಿಂದಲಿ ನೋಡೋ ,ದೇವ ನಿನ್ನಂಗ ಸಂಘವ ನೀಡೋ||೨||
ಮಂಗಳ ಮಹಿಮ ಶ್ರೀ ರಂಗವಿಠ್ಠಲ
ಮುಂದಂಗ ಬಾರದಂತೆ ನೀ ದಯ ಮಾಡೊ||ಮಂಗಳ||

ದಾಸಕೂಟದ ಹರಿಕಾರರೂ ಹರಿದಾಸಪಂಥದ ಪ್ರಮುಖ ಕೀರ್ತನಕಾರರೂ ಆದ ಶ್ರೀಪಾದರಾಜರ ಕಾಲ ಕ್ರಿ. ಶ. ೧೩೮೯-೧೪೮೭. ದ್ವೈತಶಾಸ್ತ್ರದ ಪ್ರತಿಪಾದಕರಿವರು. ಚನ್ನಪಟ್ಟಣ ತಾಲೂಕಿನ ಅಬ್ಬೂರು ಇವರ ಪೂರ್ವಾಪರ. ತಂದೆ ಶೇಷಗಿರಿಯಪ್ಪ ಮತ್ತು ತಾಯಿ ಗಿರಿಯಮ್ಮ. ಮೂಲಹೆಸರು: ಲಕ್ಷ್ಮೀನಾರಾಯಣ. ವ್ಯಾಸತೀರ್ಥರು ಇವರ ಪ್ರಮುಖ ಶಿಷ್ಯರಲ್ಲೊಬ್ಬರು. ವ್ಯಾಸರಾಯರೆಂದೇ ಹೆಸರಾದ ಇವರು ಮುಂದೆ ಕನಕ-ಪುರಂದರರಿಗೆ ಗುರುವಾದರು.

ರಂಗವಿಠಲ ಎಂಬ ಅಂಕಿತದಲ್ಲಿ ಕೀರ್ತನೆ-ದೇವರನಾಮಗಳನ್ನು ರಚಿಸಿದ್ದಾರೆ. ಭ್ರಮರಗೀತ, ಗೋಪಿಗೀತ, ಮಧ್ವನಾಮ ಎಂಬಿತ್ಯಾದಿ ಕೃತಿಗಳು ಇವರ ಹೆಸರಿನಲ್ಲಿವೆ. ಇಂದಿಗೂ ಇವುಗಳನ್ನು ಪ್ರತಿನಿತ್ಯ ಪಾರಾಯಣ ಮಾಡುವವರಿದ್ದಾರೆ. ವಾಗ್ವಜ್ರ ಎಂಬ ಕೃತಿಯನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ‘ನೀ ಇಟ್ಟಂಗೆ ಇರುವೆನೊ ಹರಿಯೆ’, ‘ಭೂಷಣಕೆ ಭೂಷಣ ಇದು ಭೂಷಣ’, ‘ಕಂಗಳಿದ್ಯಾತಕೆ ಕಾವೇರಿರಂಗನ ನೋಡದ’ ಇವರ ಜನಪ್ರಿಯ ಗೀತೆಗಳು. ಸಂಗೀತಕೃತಿಗಳೂ ಆಗಿವೆ. ಇಲ್ಲಿ ಅವರ ಎರಡು ರಚನೆಗಳನ್ನು ಕುರಿತಂತೆ ವಿಶ್ಲೇಷಣೆ ನಡೆಸಲಾಗಿದೆ.

ಮರುದಂಶರ ಮತ ಪಿಡಿಯದೆ ಇಹ-ಪರದಲ್ಲಿ ಸುಖವಿಲ್ಲವಂತೆ
ಅರಿತು ವಿವೇಕದಿ ಮರೆಯದೆ ನಮ್ಮ ಗುರುರಾಯರ ನಂಬಿ ಬದುಕಿರೋ

ಎಂಬ ಹಾಡು ತನಗೆ ತಾನೇ ಸಾರ್ಥಕ-ನಿರರ್ಥಕಗಳ ಚರ್ಚೆಯನ್ನು ಮಾಡುತ್ತ, ಶ್ರೀರಂಗವಿಠಲನನ್ನು ಭಜಿಸುವ ಅನಿವರ್ಯತವನ್ನು ಹೇಳುತ್ತದೆ.
ಕಬ್ಬಿಣದಲ್ಲಿ ಹುಟ್ಟಿದ ತುಕ್ಕಿನಿಂದಲೇ ಅದು ಗುಣಮಟ್ಟವನ್ನು ಕಳೆದುಕೊಂಡು ದೋಷಪೂರಿತವಾಗುವಂತೆ ನಾವು ಮಾಡಿದ ಪಾಪಗಳಿಂದಲೇ ನಾಶ ಖಂಡಿತ. ದೇವರ ಗಿರಣಿಯಂತ್ರ ನಿಧಾನವಾದರೂ ಪ್ರಧಾನವಾಗಿ ಅರೆಯುವುದು ಖಚಿತ. ಇದನ್ನು ಅರಿತು ವಿವೇಕವ ಮರೆಯದೆ ಗುರುರಾಯರ ನಂಬಿ ಬದುಕಿದರೆ ಸದ್ಗತಿ ಸಾಧ್ಯವೆಂಬ ಆಲೋಚನೆ ಶ್ರೀಪಾದರಾಜರದು.

ಇಲ್ಲಿ ಮಾತ್ರವಲ್ಲ ಪರಲೋಕದಲ್ಲೂ ಸುಖನೆಮ್ಮದಿಗಳಿಂದ ಇರಲು ಗುರುರಾಯರನ್ನು ನಂಬುವುದು ಅಗತ್ಯ. ಇಲ್ಲಿ ಗುರುರಾಯರನ್ನು ಅಂದರೆ, ಗುರುಗಳೂ ದೇವರೂ ಆಗಿರುವ ನಮಗಿಂತ ಎಲ್ಲದರಲ್ಲೂ ಹಿರಿಯರಾಗಿರುವ ಮಾರ್ಗದರ್ಶಕ ಪ್ರೇರಣಾಶಕ್ತಿಯಲ್ಲಿ ಮೊದಲು ನಂಬಿಕೆ ಇಡಬೇಕು ಎಂದು ಕೀರ್ತನೆ ಒತ್ತಾಯಿಸುತ್ತದೆ. ಅದನ್ನು ಮುಂದಿನ ಮೂರು ಚರಣಗಳ ಆರುಪಾದಗಳು ನಿದರ್ಶನ ಸಮೇತ ನಮ್ಮೆದುರಿಗಿಟ್ಟು ಮನವರಿಕೆ ಮಾಡುತ್ತವೆ.

ಪರಮಾತ್ಮನೆಡೆಗೆ ನಾವು ಒಂದು ಹೆಜ್ಜೆಯಿಟ್ಟರೆ ಆತ ನಮ್ಮೆಡೆಗೆ ಸಾವಿರ ಹೆಜ್ಜೆಗಳನ್ನಿಡಲು ಮನಸ್ಸು ಮಾಡುವನು ಎಂಬರ್ಥದ ಸೂಫಿ ಹೇಳಿಕೆಯೊಂದಿದೆ. ‘ನಿದ್ರೆ ಹತ್ತದವರಿಗೆ ರಾತ್ರಿ ದೀರ್ಘ, ಬಳಲಿರುವವರಿಗೆ ದಾರಿಯೇ ದೀರ್ಘ, ಅಂತೆಯೇ ಜ್ಞಾನೋದಯಗೊಳ್ಳದವರಿಗೆ ಜೀವನದ ಲೌಕಿಕಚಕ್ರವೇ ದೀರ್ಘ ಎಂದಿದ್ದಾರೆ ಗೌತಮಬುದ್ಧರು. ಹಾಗಾಗಿ, ಇಂಥ ಅರಿವಿನ ವಿವೇಕದೊಂದಿಗೆ ಗುರುದೇವರಲ್ಲಿ ನಂಬಿಕೆಯಿಟ್ಟು ಬದುಕಬೇಕು. ಅಂದರೆ ಧಾರ್ಮಿಕರಾದರೆ, ಸಜ್ಜನ-ಸಂಭಾವಿತತನ ಮೈಗೂಡಿಸಿಕೊಂಡರೆ, ಇಹಪರಗಳಲ್ಲಿ ನೆಮ್ಮದಿಯನ್ನೂ ಮೋಕ್ಷಗಾಮಿಯಾಗುವುದನ್ನು ಯಾರಿಂದಲೂ ತಪ್ಪಿಸಲಾಗದು.

ಹಾಲು ಅಮೂಲ್ಯ ಮತ್ತು ಅಮೃತ. ಆದರದು ಹೆಚ್ಚು ಹೊತ್ತು ಇಟ್ಟರೆ ಕೆಡುತ್ತದೆ. ಹೊರಗಿನ ಮತ್ತು ತನ್ನೊಳಗಿನ ಅವಗುಣಗಳಿಂದ ಹಾಳಾಗುತ್ತದೆ. ಹಾಲನ್ನು ಕಾಪಾಡಲು ಮೊಸರನ್ನು ಮಾಡಿಕೊಳ್ಳಬೇಕು. ಅಂತೆಯೇ ಮೊಸರನ್ನು ಕಾಪಾಡಲು ಬೆಣ್ಣೆ ತೆಗೆಯಬೇಕು. ಇಲ್ಲಿ ಹಾಲು ಮತ್ತು ಮೊಸರುಗಳು ಸೇರಿ ಬೆಣ್ಣೆಯಾಗಿದೆ. ಅಂತೆಯೇ ಜೀವಾತ್ಮವು ತನಗಿಂತ ಬೇರೆಯದೇ ಆದ ಪರಮಾತ್ಮನೆಡೆಗೆ ಸಾಗಿ ಪರಮಾತ್ಮನಾದಂತೆ ಊಹಿಸಿಕೊಳ್ಳಬೇಕು. ಆದರೆ ಹಾಲು ಮೊಸರಾಯಿತೆಂಬುದನ್ನು ಮರೆಯದಿರಬೇಕು. ಅದಾದ ನಂತರ ಬೆಣ್ಣೆಯು ಹಾಳಾಗದಂತಿರಲು ಕಾಯಿಸಿ ತುಪ್ಪವಾಗಿಸಬೇಕು. ಹಾಲು ಕೆಡದಂತಾಗಲು ಘೃತರೂಪವನ್ನು ಆಯ್ದುಕೊಳ್ಳಬೇಕು. ಇದಕ್ಕೆ ಸಂಸ್ಕಾರ ಬೇಕು ಅಂದರೆ ನಿರ್ದಿಷ್ಟವಾದ ಒಪ್ಪಿತವಾದ ಚೌಕಟ್ಟು ಮತ್ತದನ್ನು ಮುಟ್ಟಲು ಬೇಕಾದ ಮೈ-ಕಟ್ಟು. ಈ ಒಳ ಹೊರ ವಿನ್ಯಾಸವೇ ಪರಮಾತ್ಮನನ್ನರಿತ ಹಣೆಬೊಟ್ಟು. ಹಾಲು ಘೃತವಾದರೂ ಎರಡೂ ಬೇರೆ ಬೇರೆಯೇ. ಇದೇ ದ್ವೈತ.

ಶ್ರೀಪಾದರಾಜರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ: ಕ್ಷೀರವ ಕರೆದಿಟ್ಟ ಮಾತ್ರಕೆ ಘೃತವಾಗುವುದಿಲ್ಲ. ದೇವರು ಕೊಟ್ಟ ಜೋಳಿಗೆಯೆಂದು ಮೊಳೆಗೆ ನೇತು ಹಾಕಿದರೆ ಹೊಟ್ಟೆ ತುಂಬುವುದಿಲ್ಲ! ಹಾಲು ನಮ್ಮ ಪ್ರಯತ್ನ-ಪರಿಶ್ರಮ-ಸಂಸ್ಕಾರಗಳಿಂದ ತುಪ್ಪವಾಗುತ್ತದಲ್ಲ ಅಂತೆಯೇ ನಾವು ಪರಮಾತ್ಮನನ್ನು ಅರಿಯದೇ ಸಾರ್ಥಕವಾಗುವುದಿಲ್ಲ.

ಈ ಪಥವನರಿತು ಪ್ರಯೋಗಿಸಲು ಸೂರಿಜನರ ಸಂಗಬೇಕು. ಪಂಡಿತರು-ವಿದ್ವಾಂಸರು-ಜ್ಞಾನಿಗಳಾದ ಇವರು ಲೋಕದ ಆಮಿಷಗಳನ್ನು ಅರ್ಥೈಸಿ ನಮ್ಮಲ್ಲಿ ವಿರಾಗ ಬರುವಂತೆ ಮಾಡುವವರು. ಅನುರಾಗವು ವಿರಾಗವಾಗಬೇಕು. ಕತ್ತಲನರ್ಥೈಸಲು ಬೆಳಕನ್ನು ಬಳಸುವಂತೆ. ಕತ್ತಲು ಹೋದಾಗ ಬೆಳಕು ಲಭ್ಯ. ಅದು ಮತ್ತೆ ಆವರಿಸದಂತೆ ನಿರಂತರವಾಗಿ ಬೆಳಕು ಬೀರುವ ಕೆಲಸವಾಗಬೇಕು.

ಪ್ರತಿ ಮಂತ್ರವೂ ಮಾತೇ, ಆದರೆ ಮಾತೆಲ್ಲ ಮಂತ್ರವಲ್ಲ. ಮಂತ್ರವೆಂಬುದು ಸಾಮಾನ್ಯವು ಅಸಾಮಾನ್ಯವಾದ ಶಕ್ತಿಸಂಚಯ; ಯುಕ್ತಿಪರ್ಯಾ ಯ. ಮಂತ್ರವು ಮಹಾತ್ಮರ ಮೂಲಕ ಬಂದದ್ದು. ತೀರ್ಥವೆಲ್ಲವೂ ನೀರೆ, ಆದರೆ ನೀರೆಲ್ಲ ತೀರ್ಥವಲ್ಲ! ಇಂಥ ಪೂಜನೀಯತೆ ದೊರೆಕೊಂಡದ್ದು ಗುರುವಿನ ಉಪದೇಶದಿಂದ. ಹಾಗಾಗಿ ಉಪದೇಶವಿಲ್ಲದ ಮಂತ್ರವನ್ನು ಎಷ್ಟು ಜಪಿಸಿದರೂ ಫಲ ನೀಡದು. ಗುರುಮುಖೇನ ಬಂದ ವಿದ್ಯೆಗೆ ಮಾತ್ರ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳು ಅಮೂಲ್ಯ ಎಂದು ಪರಿಗಣಿಸುತ್ತವೆಂಬುದನ್ನು ಇಲ್ಲಿ ನೆನೆಯಬೇಕು. ಅಂದರೆ ಸಾಧಕರು ತಮ್ಮ ಗುರುಗಳ ಮೂಲಕವೇ ದಾರಿ ಕಂಡುಕೊಳ್ಳಬೇಕು.

ಮೋಕ್ಷಗಾಮಿಯಾದ ಧಾರ್ಮಿಕನು ಕ್ರಿಯಾವಿಧಿ ನಿರತನಾಗಿರಬೇಕು. ಉಪವಾಸ-ವ್ರತ-ನೇಮ-ನಿಷ್ಠೆಗಳು ನಮ್ಮ ದೇಹ ಮತ್ತು ಮನಸ್ಸುಗಳನ್ನು ಹದ ಹಾಕಿ, ದೇವಮನೆಯ ಕದ ತೆರೆಸುತ್ತದೆ. ಧ್ಯಾನಿಯಾಗದೆ, ತಪಸ್ವಿಯಾಗದೆ ಈ ವಿಶ್ವಶಕ್ತಿಯ ಒಡೆಯನನ್ನು ಕಂಡುಕೊಳ್ಳಲಾಗದು.

ಇವೆಲ್ಲ ಕರ್ಮಮಾರ್ಗ ಮತ್ತು ಭಕ್ತಿಮಾರ್ಗದಿಂದ ಸಾಧ್ಯವಾಗುವುದಾದರೂ ಇನ್ನೊಂದು ಮಾರ್ಗವೂ ಇದೆ. ಅದೇ ಜ್ಞಾನಮಾರ್ಗ. ಅದೇ ಮಧ್ವಶಾಸ್ತ್ರ. ಶ್ರೀ ಮಧ್ವಾಚಾರ್ಯಾ ಪ್ರಣೀತ ದ್ವೈತ ಸಿದ್ಧಾಂತದಿಂದ ಇಂಥದು ಸಾಧ್ಯವಾಗುತ್ತದೆ ಎನ್ನುತ್ತಾರೆ ಶ್ರೀಪಾದರಾಜರು.

ಅಂತಿಮವಾಗಿ ಶ್ರೀರಂಗವಿಠಲನ ರೂಪದಲ್ಲಿರುವ ದಯಾಮಯ ಭಗವಂತನನ್ನು ಭಜಿಸದೆ ಇವಾವುವೂ ದಕ್ಕುವುದಿಲ್ಲ; ಪರಮಗತಿ ಅರ್ಥಾತ್ ಸದ್ಗತಿ ದೊರೆಕೊಳ್ಳುವುದಿಲ್ಲ.

ಈ ಕೀರ್ತನೆಯ ವಿಶೇಷವೆಂದರೆ ಒಂದೇ ಸಾಲಿನ ಪಲ್ಲವಿ ಮತ್ತು ಅನುಪಲ್ಲವಿಗಳು. ಎರಡು ಸಾಲಿನ ಚರಣಗಳಲ್ಲಿ ಮೊದಲೆರಡು ಪಾದಗಳ ವಿಸ್ತರಣೆಯಿದೆ. ಆದಿಪ್ರಾಸ ಮತ್ತು ಅಂತ್ಯಪ್ರಾಸಗಳೆರಡನ್ನೂ ನಿರ್ವಹಿಸಲಾಗಿದೆ. ನಿರ್ಲಿಪ್ತ ಧಾಟಿಯಲ್ಲೂ ವಿಷಾದಛಾಯೆಯನ್ನು ಯಶಸ್ವಿಯಾಗಿ ತರಲಾಗಿದೆ. ಇಹವು ಪರಿಮಳದಂತೆ ತೋರುವ ಆಭಾಸ; ಪರಿಮಳವಲ್ಲವದು ದುರ್ಗಂಧ. ಅದು ಸತ್ಯವಲ್ಲ. ಪರದ ಪರಮಗತಿಯನ್ನು ಹೊಂದುವುದೇ ಸತ್ಯ ಸಾಕ್ಷಾತ್ಕಾರವೆಂಬ ಪ್ರಮಾಣೀಭೂತ ಪ್ರತಿಪಾದನೆಯನ್ನು ಕೀರ್ತನೆ ಸಮರ್ಥವಾಗಿ ನಿಭಾಯಿಸಿದೆ.

*****

ಶ್ರೀಪಾದರಾಜರ ಇನ್ನೊಂದು ಕೀರ್ತನೆ ‘ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ…….’ ಇದು ಲೋಕದ ಸೆಳೆತಕ್ಕೆ ಸಿಕ್ಕಿಕೊಂಡು ಅರಿಷಡ್ವರ್ಗಗಳಲ್ಲೇ ಹೊರಳಿಕೊಂಡು ಇಹವನ್ನೇ ಆಹಾ! ಎಂದು ಚಪ್ಪರಿಸಿ ನಾ ಮೋಸ ಹೋದೆ ಎಂಬ ಅಪರಾಧೀಭಾವವನ್ನು ನಿಸ್ಸಂಕೋಚವಾಗಿ ತೆರೆದಿಡುತ್ತದೆ.

ಪಲ್ಲವಿಯಲ್ಲಿ ಒಡಮೂಡಿರುವ ಇಂಥ ಕೀಳರಿಮೆ ಸಹಿತ ತಪ್ಪೊಪ್ಪಿಗೆಯನ್ನು ಮುಂದಿನ ಮೂರು ಚರಣಗಳಲ್ಲಿ ವಿಸ್ತರಿಸಲಾಗಿದೆ; ಯಾವ ರೀತಿಯ ಅಪರಾಧಗಳು ತನ್ನಿಂದ ಜರುಗಿದವು? ಎಂಬ ವಿವರಣೆಯ ಸಮೇತ.

ಈ ಕೀರ್ತನೆಯೆ ವಿಶೇಷವೆಂದರೆ, ಭಗವಂತನಾದ ಶ್ರೀಮನ್ನಾರಾಯಣನನ್ನು ಸ್ತುತಿಸುತ್ತಲೇ ತನ್ನ ಪಶ್ಚಾತ್ತಾಪವನ್ನು ತೋಡಿಕೊಳ್ಳುವ ವಿಧಾನ. ವಿಷಯ ನಿರೂಪಣೆ ಮತ್ತು ಮಂಡಿಸುವ ವಿಚಾರಸರಣಿಗಳ ನಡುವೆ ಅಪ್ರತಿಮ ಹೊಂದಾಣಿಕೆಯಿದೆ; ನನ್ನಿಂದ ಆದ ತಪ್ಪು ಹೇಗೆ ನನ್ನೊಳಗಿದ್ದು ಕಾಡುತ್ತಿದೆಯೋ ಹಾಗೆ! ಮನಸ್ಸಿನ ವಿಕಲ್ಪಗಳಲ್ಲಿ ಹುದುಗಿರುವ ವಿಷಯ ವೈವಿಧ್ಯದಂತೆಯೇ ಭಗವಂತನನ್ನು ನೆನೆಯುವ ನಾಮಗಳೂ ಹಲವು ಇವೆ. ಇದನ್ನು ಶ್ರೀಪಾದರಾಯರು ತುಂಬ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ಕೀರ್ತನೆಯು ದೇವರನಾಮವೂ ಆಗಿರುವ ಚೋದ್ಯವನ್ನು ಇಂಥಲ್ಲಿ ಗಮನಿಸಬೇಕು.

ವಾಸುದೇವನಿಗೆ ಚೆನ್ನಾಗಿ ಗೊತ್ತಿದೆ. ನಾನು ಮೋಸ ಹೋಗಿರುವ ಪರಿ. ನನಗೆ ಗೊತ್ತಿರುವಾಗ ಇನ್ನು ಜಗದೊಡೆಯನೂ ಸರ್ವಜ್ಞನೂ ಆದ ಶ್ರೀಹರಿಗೆ ತಿಳಿಯದೇ ಇರುತ್ತದೆಯೇ? ರಕ್ಕಸರು ಇವನ ವೈರಿಗಳಲ್ಲವೇ? ಅಂತಹುದರಲ್ಲಿ ನನ್ನ ಮನಸ್ಸಿನ ದೌಷ್ಟ್ಯ ಅರಿಯದೇ ಹೋಗುವುದೇ? ಸಾವಿರ ನಾಲಗೆಯುಳ್ಳ ಸಾವಿರ ಹೆಡೆಗಳ ಆದಿಶೇಷನ ಮೇಲೆ ಶಯನಿಸಿರುವ ನಾರಾಯಣನ ಸಾವಿರನಾಮಗಳನ್ನು ಒಳ್ಳೆಯ ರೀತಿಯಲ್ಲಿ ಪಠಿಸದೆ ಇದ್ದುದರ ಪ್ರತಿ-ಫಲವಿದು!

ತಪ್ಪುಗಳು ಒಂದೆರಡಲ್ಲ! ಭಗವಂತನನ್ನು ಧ್ಯಾನಿಸುವ, ಪೂಜಿಸುವ, ನೆನೆಯುವ ಹೊತ್ತಲ್ಲಿ ಮಾಡಿದ್ದಾದರೂ ಏನು? ದುಷ್ಟಜನರೊಂದಿಗೆ ಸೇರಿ ಭ್ರಷ್ಟನಾಗಿಬಿಟ್ಟೆ; ಕಾಯ ಅಂದರೆ ದೇಹವು ಶಾಶ್ವತವೆಂದು ಭ್ರಮಿಸಿದೆ; ಪ್ರಾಯವು ನಿತ್ಯ, ಅದೇ ಸತ್ಯವೆಂದು ಸಂಭ್ರಮಿಸಿದೆ. ಲೌಕಿಕನಾದೆ-ಐಹಿಕ ಸುಖಲೋಲುಪತೆಯಲ್ಲೇ ಮುಳುಗಿ ಮುಗ್ಗರಿಸಿಬಿಟ್ಟೆ. ಮಾಯೆಯನ್ನು ಅರಿಯಲಾಗದೆ ಶೀಲಚಾರಿತ್ರ್ಯವನ್ನು ಚೆಂಡಾಡಿದೆ. ಕಳೆದೆ-ಕಳೆದುಕೊಂಡೆ!!

ಅದರಲ್ಲೂ ಪರಸ್ತ್ರೀಯರನ್ನು ಕೂಡಾಡಿ ಬಹು ದೊಡ್ಡ ಪಾಪವನ್ನು ಹೆಗಲೇರಿಸಿಕೊಂಡೆ. ತನ್ನ ಸ್ತ್ರೀಯನ್ನೇ ಮಾಯೆಯೆಂದು ತಿಳಿದು ವಿರಾಗವ ಧರಿಸುವ ಹೊತ್ತಲ್ಲಿ ಇಂಥ ಅಪಚಾರ-ಅನಾಚಾರ-ವ್ಯಭಿಚಾರಗಳು ಸಂಭವಿಸಿದೆಯಲ್ಲ, ಇದೀಗ ತಿಳಿವಿನ ಕದ ತೆರೆದು ಯಾವುದು ಸತ್ಯವೆಂಬ ವಿವೇಕ ಉದಯಿಸಿದೆಯಲ್ಲ! ಇಷ್ಟು ಕಾಲ ಒಳಗಿದ್ದುದೆಲ್ಲ ಕ್ಷಣಿಕ, ಕೃತಕ ಎಂಬ ವಿವೇಚನೆ ಆಗುತ್ತಿದೆಯಲ್ಲ!!

ಹಾಗಾಗಿ ಯಾವ ಇಂದ್ರಿಯಗಳು ಮಾಯೆಯನ್ನು ಸತ್ಯವೆಂದು ಬಿಂಬಿಸಿದವೋ ಅವೇ ಇಂದ್ರಿಯಗಳ ಮೂಲಕ ಅವು ಸತ್ಯವಲ್ಲ; ಸತ್ಯದಂತೆ ತೋರುವ ಆಭಾಸ ಎಂಬುದು ಇದೀಗ ಮನದಟ್ಟಾಗಿದೆ.

ಕಂಗಳಿಂದ ನೋಡಬೇಕಾದುದು ದೇವನನ್ನು. ಮಾಡಬೇಕಾದುದು ಆತನ ಸಂಗವನ್ನು. ಅಂತಿಮವಾಗಿ ಇಂಥ ಜ್ಞಾನ ಉದಯಿಸಲು ಕಾರಣೀಭೂತನಾದ ಶ್ರೀರಂಗವಿಠಲನ ಮಹಿಮೆಯನ್ನು ಮೊದಲು ತಿಳಿಯಬೇಕು. ಲೋಕಸತ್ಯಗಳು ಲೌಕಿಕಕ್ಕೆ ಸರಿ. ಲೋಕೋತ್ತರಕ್ಕೆ ಅವು ಕೆಲಸಕ್ಕೆ ಬಾರದವು! ಪಾರಲೌಕಿಕತೆಯ ಮಹತ್ತನ್ನು ಮನಗಾಣಿಸಲು ಲೌಕಿಕದ ವ್ಯರ್ಥಛಾಯೆಯನ್ನು ತರತಮಿಸಿ, ಮನ ಮುಟ್ಟುವಂತೆ ತಾಗಿಸಲಾಗಿದೆ ಈ ಹಾಡಿನಲ್ಲಿ.

ಅದರಲ್ಲೂ ಸ್ಪಷ್ಟವಾಗಿ ರಂಗವಿಠಲನನ್ನು ಗಾಯನದ ಮೂಲಕ ಒಲಿಸಿಕೊಳ್ಳುವ ಮಾರ್ಗವನ್ನು ದರ್ಶಿಸಿ ಕೊಡಲಾಗಿದೆ.

ಕತ್ತಲಲ್ಲಿ ತೆವಳುತ್ತಿರುವುದರ ಅರಿವು ಆಗಿರುವುದರಿಂದ ಅದನ್ನು ಬಿಟ್ಟು ಬರಲು ಭಗವಂತನ ನಾಮಸ್ಮರಣೆ ಬೇಕು. ಅದುವೇ ಬಾಳಿನ ಬೆಳಕು. ಕತ್ತಲಿನಲ್ಲಿರುವ ಬದುಕನ್ನು ಬೆಳಕಿನತ್ತ ಕೊಂಡೊಯ್ಯಬೇಕು. ಅದಕ್ಕಿರುವ ದಾರಿ ಎರಡೇ: ಪಶ್ಚಾತ್ತಾಪ ಮತ್ತು ಸರಿಯಾಗುವ ರೂಪ.

ಪರಿತಾಪ ಪಡುತ್ತಲೇ ಸರಿರೂಪವನ್ನಾಯ್ದುಕೊಳ್ಳುವ ಪ್ರಕ್ರಿಯೆಯನ್ನು ಇಲ್ಲಿ ಗುರುತಿಸಬಹುದು. ಶ್ರೀಪಾದರಾಜರ ಭಕ್ತಿವೈವಿಧ್ಯವನ್ನು ಇದರಲ್ಲಿ ಕಾಣಬಹುದು. ಆ ಮೂಲಕ ಅವರ ರಚನಾಶಕ್ತಿ ಎಂಥದೆಂಬ ಪ್ರತಿಭಾ ಪರಿಚಯ ಕಂಡು ವಿಸ್ಮಿತರಾಗಬಹುದು. ಸೈದ್ಧಾಂತಿಕ ಇಕ್ಕಟ್ಟಿನಲ್ಲೂ ತಮ್ಮ ಅತ್ಮಾವಲೋಕನ ಮಾಡಿಕೊಳ್ಳುತ್ತಾ, ಆ ಮಟ್ಟಿಗೆ ಮಂದಿಗೆ ಮಾದರಿಯಾಗುತ್ತಾ, ಭಕ್ತಿ ಸುಧಾರಣೆಯಲ್ಲಿ ನೇರ ಪಾಲುಗೊಳ್ಳುತ್ತಾ ಹೋದ ಹರಿದಾಸರು ತಮ್ಮ ರಚನೆಗಳ ಮೂಲಕ ಇಕ್ಕಟ್ಟು-ಬಿಕ್ಕಟ್ಟುಗಳನ್ನು ಸೃಜನಶೀಲವಾಗಿ ಬಿಚ್ಚಿಟ್ಟರು. ಹರಿಯ ಮೂಲಕವೇ ಅರಿಯುವ ಪ್ರಯತ್ನವನ್ನು ಯಶಸ್ವಿಯಾಗಿ ನಡೆಸಿದರು.

‘ಮನಸ್ಸೆಂಬ ನ್ಯಾಯಾಲಯದಲ್ಲಿ ಅಪರಾಧಿಗೆ ಬಿಡುಗಡೆಯೇ ಇಲ್ಲ’ವೆಂಬ ಮಾತೊಂದಿದೆ. ಅದನ್ನು ಸುಳ್ಳಾಗಿಸಿ, ಪಾಪಗಳನ್ನು ಕ್ಷಮಿಸುವ, ಪಾಪಿಗಳಿಗೆ ಭಗವಂತನನ್ನು ಅರಿಯುವ ಅವಕಾಶ ಇದೆಯೆಂಬುದನ್ನು ಈ ಕೀರ್ತನೆ ಶ್ರುತಪಡಿಸುತ್ತದೆ. ಈ ಯುಗಮಾನದ ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್’ ಎಂಬ ಮಹಾಕವಿ ಕುವೆಂಪು ಅವರ ಮಾತು ಸುಮಾರು ಐದುನೂರು ವರುಷಗಳ ಹಿಂದೆಯೇ ಶ್ರೀಪಾದರಾಜರ ರಚನೆಯಲ್ಲಿ ಕಾಣಿಸಿಕೊಂಡಿತ್ತೆಂಬುದು ಸೋಜಿಗದ ಸಂಗತಿ. ಭಗವನ್ನಿಯಾಮಕ- ಶ್ರೀರಂಗವಿಠಲನೇ ಏಕೈಕ ಎಂಬುದು ಇವರ ಈ ಎರಡು ಹಾಡುಗಳಲ್ಲಿ ಸ್ಪಷ್ಟವಾಗಿದೆ.

-ಡಾ. ಹೆಚ್ ಎನ್ ಮಂಜುರಾಜ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x