''ಭಾರತದ ಶೇಖಡಾ ೮೦% ಮಕ್ಕಳು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿನ ಮಕ್ಕಳ ಮೇಲಾಗುವ ದೌರ್ಜನ್ಯ, ಶೋಷಣೆಗೆ ವಿರುದ್ದವಾಗಿ ಕಠಿಣ ಕಾನೂನು ಇರುವುದರಿಂದ ಮಕ್ಕಳ ಮೇಲಾಗುವ ಅಪರಾಧಗಳು, ಕಿರುಕುಳಗಳು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ, ಕಡ್ಡಾಯ ಹಾಗು ಉಚಿತ ಶಿಕ್ಷಣ ಜಾರಿ ಮಾಡಿರುವುದರಿಂದ ೬ ರಿಂದ ೧೪ ವರುಷದೊಳಗಿನ ಮಕ್ಕಳೆಲ್ಲರೂ ಶಾಲೆಯಲ್ಲೇ ಇರುವುದರಿಂದ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ ಕಮ್ಮಿಯಾಗಿದೆ" ಈ ಎಲ್ಲಾ ಅದ್ಬುತ ವಿಚಾರಗಳು ನಮ್ಮ ದೇಶ ವಿಶ್ವ ಸಂಸ್ಥೆಗೆ ೨೦೧೧ರಲ್ಲಿ ಕಳುಹಿಸಿದ ವರದಿಯಲ್ಲಿ ಇದೆ ! ಸರ್ಕಾರದ ವರದಿಗಳನ್ನು ಓದುತ್ತಿದ್ದರೆ "ಭಾರತ ಮಕ್ಕಳ ಪಾಲಿನ ಸ್ವರ್ಗ " ಎಂದೆನಿಸುತ್ತದೆ ! ಮಕ್ಕಳಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳು, ಕಾನೂನುಗಳು, ಮಕ್ಕಳ ಹಕ್ಕುಗಳು ಮಕ್ಕಳನ್ನು ತಲುಪಿದೆಯೇ ? ವಾಸ್ತವದ ಪರಿಸ್ಥಿತಿ ಹೇಗಿದೆ?
ವಿಶ್ವ ಸಂಸ್ಥೆಯು ವಿಶ್ವದ ಮುಂದಿರಿಸಿದ "ಮಕ್ಕಳ ಹಕ್ಕುಗಳ ಒಡಂಬಡಿಕೆಗೆ" ಈಗ ೨೫ ವರುಷಗಳ ಸಂಭ್ರಮ, ಈ ಒಡಂಬಡಿಕೆಗೆ, ಅಂತರಾಷ್ಟ್ರೀಯ ಕಾನೂನಿಗೆ ಸಹಿ ಮಾಡಿರುವ ನಮ್ಮ ದೇಶ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ದಿ ಹಾಗು ಭಾಗವಹಿಸುವ ಹಕ್ಕುಗಳನ್ನು ಎತ್ತಿ ಹಿಡಿಯುವುದಾಗಿ ಇಡೀ ವಿಶ್ವದೆದುರು ಒಪ್ಪಿಕೊಂಡಿದೆ. ವಿಶ್ವ ಸಂಸ್ಥೆಯ ಭದ್ರತಾಸಮಿತಿಯ ಸದಸ್ಯ ಸ್ಥಾನಕ್ಕೆ ಕಾತರಿಸುತ್ತಿರುವ ನಮ್ಮ ದೇಶ ಅಭಿವೃದ್ದಿ ಸೂಚ್ಯಾಂಕಗಳ ಬಗ್ಗೆ ಧನಾತ್ಮಕ ವರದಿ ಕಳಿಸಬೇಕಿರುವ ಅನಿವಾರ್ಯತೆಗೆ ಸಿಲುಕಿ ವರದಿಗಳಲ್ಲಿ ಮಕ್ಕಳಿಗೆ, ಹಿರಿಯರಿಗೆ ಸ್ವರ್ಗ ಸೃಷ್ಟಿಮಾಡಿದೆ, ಸರ್ಕಾರದ ಅನೇಕ ಯೋಜನೆಗಳು ವರದಿಯಲ್ಲಿದೆ, ಮಕ್ಕಳನ್ನು ತಲುಪುತ್ತಲೇ ಇಲ್ಲಾ ! ಶಿಶು ಮರಣ ಪ್ರಮಾಣ, ಮಾತೆಯರ ಮರಣ ಪ್ರಮಾಣಗಳನ್ನು ಕಮ್ಮಿ ಮಾಡುವ ಪ್ರಯತ್ನ ದಶಕಗಳಿಂದ ನಡೆಯುತ್ತಿದ್ದರೂ ಯಾವುದೇ ಫಲಿತಾಂಶ ಕಾಣುತ್ತಿಲ್ಲ. ೨೦೦೧ರ ಜನಗಣತಿಯ ಪ್ರಕಾರ ನಮ್ಮದೇಶದಲ್ಲಿನ ಮಕ್ಕಳ ಸಂಖ್ಯೆ ಶೇಖಡಾ ೪೪% ಅಂದರೆ ಬಹುತೇಕ ದೇಶದ ಅರ್ಧ ಜನಸಂಖ್ಯೆ ಮಕ್ಕಳು ! ಅತೀ ಹೆಚ್ಚಿನ ಸಂಖ್ಯೆಯಲ್ಲಿ ದೇಶದಲ್ಲಿ ಮಕ್ಕಳಿದ್ದರೂ ನಮ್ಮ ಸರ್ಕಾರ ಮಕ್ಕಳ ರಕ್ಷಣೆಗೆ ಆಯವ್ಯಯದಲ್ಲಿ ಮೀಸಲಿಡುವ ಹಣ ಬಹಳ ಕಮ್ಮಿ, ಆಯವ್ಯಯದಲ್ಲಿ ಮಕ್ಕಳಿಗೆ ಕೇವಲ ೩೦% ಹಣ ಮಾತ್ರ, ಈ ೩೦% ನಲ್ಲಿ ಮಕ್ಕಳ ರಕ್ಷಣೆಗೆ ಶೇಖಡಾ ೦.೦೩% ಮಾತ್ರ ! ಮಕ್ಕಳ ಸಮಸ್ಯೆ ಗಳು ಎಂದರೆ ನಮ್ಮ ರಾಜಕಾರಣಿಗಳಿಗೆ, ಸರ್ಕಾರಕ್ಕೆ ತಿಳಿದಿರುವುದು ಮೂರೇ ವಿಚಾರಗಳು ೧.ಬಾಲಕಾರ್ಮಿಕ ಪದ್ದತಿ, ೨. ಶಿಕ್ಷಣ, ೩. ಹೆಣ್ಣುಮಕ್ಕಳು. ಆದರೆ, ಕಾಣೆಯಾದ ಮಕ್ಕಳು, ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳು, ವಲಸೆ ಮಕ್ಕಳು, ವೇಶ್ಯಾವೃತ್ತಿಯಲ್ಲಿರುವ ಮಕ್ಕಳು, ಹೀಗೆ ಮುಂತಾದ ಹಲವು ವಿಚಾರಗಳ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲದಿರುವುದು ನಮ್ಮ ಮಕ್ಕಳ ದುರಂತ ! ಇಲ್ಲಿ ನಾವು ಗಮನಿಸ ಬೇಕಾದ ಪ್ರಮುಖ ಅಂಶವೆಂದರೆ ಮಕ್ಕಳ ಹಕ್ಕುಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳ ಬೇಕಾದವರು ಮಕ್ಕಳಲ್ಲ, ಹಿರಿಯರು ! ಏಕೆಂದರೆ ಮಕ್ಕಳಿಗೆ ಹಕ್ಕುಗಳನ್ನು ಒದಗಿಸಿ ಕೊಡ ಬೇಕಾದವರು, ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯ ಬೇಕಾದವರು ನಾವುಗಳು. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳನ್ನು ತನ್ನ ದೇಶದ ಕಾನುನುಗಳಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ರಕ್ಷಿಸ ಬೇಕಾದ ಪ್ರತಿಯೊಬ್ಬರಿಗೂ ಮಾಹಿತಿನೀಡಿ ದೇಶದಲ್ಲಿ ಮಕ್ಕಳ ಹಕ್ಕುಗಳ ವ್ಯಾಪಕ ಪ್ರಚಾರ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ, ಈ ವಿಚಾರವನ್ನು ಒಡಂಬಡಿಕೆ ವಿವರವಾಗಿ ತಿಳಿಸಿದೆ, ನಮ್ಮ ದೇಶ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿ ೨೩ ವರುಷವಾದರೂ ಇನ್ನೂ ಸೂಕ್ತವಾಗಿ ಪ್ರಚಾರವನ್ನೇ ಮಾಡಿಲ್ಲ,!
ಯಾಕೆ ಹೀಗೆ? ಮಕ್ಕಳು ದೇವರ ಸಮಾನ ಅನ್ನುವ ನಾವು ಮಕ್ಕಳ ವಿಚಾರದಲ್ಲಿ ಯಾಕೆ ಹಿಂದುಳಿದಿದ್ದೇವೆ? ಸೂಕ್ತ ಉತ್ತರ ದೊರಕುವುದು ಕಷ್ಟ, ಆದರೆ ನಾವು ಗಮನಿಸ ಬೇಕಾದ ಮುಖ್ಯ ಅಂಶ ವೆಂದರೆ ನಾವುಗಳು ಮಕ್ಕಳ ಪರ ಮಾತಾಡುತ್ತಿಲ್ಲ, ಕೇವಲ ‘ನಮ್ಮ ಮಕ್ಕಳು ಮಾತ್ರ ಮಕ್ಕಳು’ ಎನ್ನುವ ಸ್ವಾರ್ಥ ದಲ್ಲಿದ್ದೇವೆ, ಮಕ್ಕಳು ಸಮುದಾಯದ ಆಸ್ತಿ, ಪ್ರತಿ ಮಕ್ಕಳೂ ಸಮುದಾಯಕ್ಕೆ, ಸಮಾಜಕ್ಕೆ ಕೊಡುಗೆ ನೀಡಬಲ್ಲರು ಈ ವಿಚಾರವನ್ನು ಅರಿತುಕೊಳ್ಳದೆ " ಇಂದಿನ ಮಕ್ಕಳು ನಾಳಿನ ಪ್ರಜೆಗಳು " ಎಂಬ ಅರ್ಥವಿಲ್ಲದ ವಾಕ್ಯಕ್ಕೆ ಜೋತು ಬಿದ್ದಿದೇವೆ. ಮಕ್ಕಳು ಎಂದರೆ ಇಂದು ಎಂಬುದನ್ನು ನಾವು ಅರ್ಥ ಮಾಡಿಕೊಂಡಿಲ್ಲ, ಮಕ್ಕಳು ನಾಳಿನ ಪ್ರಜೆಗಳು ಎಂದು ಯೋಚಿಸುವ ಸರ್ಕಾರ ಮಕ್ಕಳಿಂದ ಲಾಭವಿಲ್ಲ ಎಂದುಕೊಂಡಿದೆ. ಮಕ್ಕಳು ಮತ ನೀಡದ ಕಾರಣ ನಮ್ಮ ರಾಜಕಾರಣಿಗಳಿಗೆ ಮಕ್ಕಳ ಸಮಸ್ಯೆ ಬೇಕಾಗಿಲ್ಲ, ಮೂಲಭೂತ ಅವಶ್ಯಕತೆಗಳನ್ನು ಒದಗಿಸ ಬೇಕಿರುವುದು ಸರ್ಕಾರ ಎಂದು ಪೋಷಕರು ಮಕ್ಕಳನ್ನು ಗಮನಿಸುತ್ತಿಲ್ಲ. ಹೀಗಾಗಿ ನಮ್ಮ ಮಕ್ಕಳು ಅತಂತ್ರರಾಗಿದ್ದಾರೆ. ಶೋಷಣೆಗೆ ತುತ್ತಾಗುತ್ತಿದ್ದಾರೆ, ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ.
ಮಕ್ಕಳ ಬಗ್ಗೆ ನಮಗಿರುವ ಮನೋಭಾವ ಬದಲಾಗ ಬೇಕಿರುವುದು ತೀರಾ ಅವಶ್ಯವಾಗಿದೆ. " ಇಂದಿನ ಮಕ್ಕಳು ಇಂದಿನದೇ ಪ್ರಜೆಗಳು " ಎಂಬುದಾಗಿ ನಮ್ಮ ಚಿಂತನೆಯನ್ನು ನಾವೆಲ್ಲರೂ ಬದಲಿಸಿ ಕೊಳ್ಳಲೇ ಬೇಕು. ಹಾಗೂ ಮಕ್ಕಳ ಪರವಾಗಿ ಮಾತಾಡಲು ಪ್ರಾರಂಭಿಸ ಬೇಕು, ಮಕ್ಕಳ ಮಾತಿಗೆ ಬೆಲೆ ನೀಡಿ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದನ್ನು ಅಬ್ಯಾಸ ಮಾಡಿಕೊಳ್ಳ ಬೇಕು.. ಮಕ್ಕಳು ತಾನೇ..! ಎಂಬ ಅನಿಸಿಕೆ ನಮ್ಮಲ್ಲಿರುವುದು ಸರಿಯಲ್ಲ.
ಮಕ್ಕಳ ಹಕ್ಕುಗಳನ್ನು ಪ್ರಚಾರಮಾಡಲು, ರಕ್ಷಣೆ ಮಾಡಲು ಸರ್ಕಾರಕ್ಕೆ ಮಾತ್ರ ಹೊಣೆಗಾರಿಕೆ ಇಲ್ಲ, ಸಮುದಾಯದ ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಅರಿತು ಮಕ್ಕಳ ರಕ್ಷಣೆಗೆ ಮುಂದಾದರೆ ಮಾತ್ರ ' ಭಾರತ ಮಕ್ಕಳಿಗೆ ಸ್ವರ್ಗವಾಗಲು ಸಾದ್ಯ.
*****