ಟಿ.ವಿ. ಶೋಗಳಲ್ಲಿ ನಮ್ಮ ಮಕ್ಕಳು: ಅಸ್ತಿತ್ವ ಲೀಗಲ್ ಟ್ರಸ್ಟ್


ಒಂಭತ್ತು ವರ್ಷದ ಆ ಮಗು ಆಫೀಸಿನೊಳಗೆ ಬಂದಾಗ ವಿದ್ಯುತ್ ಸಂಚಾರವಾದಂತೆ ಪಟ ಪಟ ಮಾತಾಡುತ್ತಾ ಸುತ್ತ ತಿರುಗುತ್ತಿದ್ದಳು. ಆ ಹುಡುಗಿ ಸಿನಿಮಾ ನಟನೆಗಾಗಿ ರಾಜ್ಯಪ್ರಶಸ್ತಿ ಪಡೆದ ಪುಟಾಣಿ ಪ್ರತಿಭೆ ಅದು ‘ನಾಳೆ ಶೂಟಿಂಗ್ ಇದೆ. ನನ್ನದೇ ಮೇನ್ ರೋಲ್. ಐದು ಕಾಸ್ಟ್ಯೂಂ ಬದಲಾಯಿಸಬೇಕು. ಅಪ್ಪಾ ಸಾಕಾಗ್ಹೋಗತ್ತೆ. ಪರವಾಗಿಲ್ಲ, ಮೇನ್ ರೋಲ್ ಅಂದ್ರೆ ಇದೆಲ್ಲ ಇದ್ದೇ ಇರುತ್ತಲ್ವಾ?.. ಹೀಗೆ ಆ ಮಗು ಏನೇನೋ ಮಾತಾಡ್ತಿತ್ತು. ಆ ವಯಸ್ಸಿಗೆ ಏನನಿಸುತ್ತೆ ಮತ್ತು ಏನು ಮಾತಾಡಬೇಕು ಅನ್ನೋ ಅರಿವೂ ಇಲ್ಲದ ವಯಸ್ಸು. ಸೂತ್ರಧಾರ ಇಟ್ಟ ಪಾತ್ರಧಾರಿಗಳಂತೆ ಇರೋ ಇಂತಹ ಪುಟಾಣಿಗಳನ್ನು ದಿನನಿತ್ಯ ರಿಯಾಲಿಟಿ ಶೋಗಳಲ್ಲಿ ನೋಡ್ತಾನೆ ಇರ್ತೀವಿ. ತೆರೆ ಮೇಲಿನ ಪ್ರತಿಭೆ ನೋಡಿ ಹಿಗ್ಗುತ್ತೇವೆ. ಸುಮ್ಮನಾಗುತ್ತೇವೆ. ಆದರೆ ತೆರೆ ಹಿಂದಿನ ಅವರುಗಳು ತುಮುಲಗಳನ್ನು ನೋಡಿದರೆ ಒಂದು ಜನರೇಷನ್ ಅನ್ನೇ ನಾವು ಕೊಲ್ಲುತ್ತಿರುವುದು ಸ್ಪಷ್ಟವಾಗುತ್ತೆ.

ಮುಗ್ಧ ಮಕ್ಕಳನ್ನು ಯಾವುದೇ ಕಾರಣಕ್ಕೂ ಅತಿಯಾದ ಸ್ಪರ್ಧೆ ಮತ್ತು ಆಮಿಷಕ್ಕೆ ಒಡ್ಡುತ್ತಿರುವುದು ನಮ್ಮದೇ ನಾಳೆಗಳಿಗೆ ವಿಷ ಉಣಿಸಿದಂತೆಯೇ ಸರಿ. ಚಪ್ಪಾಳೆ ಗಿಟ್ಟಿಸುವುದು ಮತ್ತು ಹೊಗಳಿಕೆಗೆ ತೆರೆದುಕೊಳ್ಳುವುದು ಜೀವನದ ಉದ್ದೇಶ ಅಂತ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಕ್ಕಳನ್ನು ಸಜ್ಜುಗೊಳಿಸುತ್ತಿದ್ದೇವೆಯೇ ಹೊರತು ಸೋತುಗೆಲ್ಲುವ ಪರಮಾರ್ಥವನ್ನರಿಯುವೆಡೆಗೆ ಅವರನ್ನು ಕಿಂಚಿತ್ತೂ ತಯಾರು ಮಾಡದಿರುವುದು ನಮ್ಮ ಬೇಜಬಾಬ್ದಾರಿಗೆ ಮತ್ತು ಸ್ವಾರ್ಥದ ಪರಮಾವಧಿ ಎನಿಸಿದೆ. ಹೆಚ್ಚುತ್ತಿರುವ ಮಕ್ಕಳ ಮತ್ತು ಯುವ ಜನರ ಆತ್ಮಹತ್ಯೆ ಪ್ರಸಂಗಗಳು. ಅದರಲ್ಲೂ ರಿಯಾಲಿಟಿ ಷೋಗಳಲ್ಲಿ ಮಕ್ಕಳ ಜೊತೆ ತೀರ್ಪುಗಾರರು ನಡೆದುಕೊಳ್ಳುವ ರೀತಿ ನಿಜಕ್ಕೂ ಭಯಾನಕ. ಸ್ಟಾರ್ ಸಿಂಗರ್, ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್, ಹೀಗೇ ಇನ್ನೂ ಹಲವು ಮಕ್ಕಳ ಕಾರ್ಯಕ್ರಮಗಳು ಟಿವಿಯಲ್ಲಿ ಪ್ರಸಾರವಾಗುತ್ತವೆ. ಬೇರೆ ಭಾಷೆಗಳಿಗೆ ಹೊಲಿಸಿದರೆ ಕನ್ನಡದ ಕಾರ್ಯಕ್ರಮಗಳು ಸಾಕಷ್ಟು ಮೃದು ಧೋರಣೆಯನ್ನೇ ಹೊಂದಿವೆ. ಅದರಲ್ಲೂ ಎದೆತುಂಬಿ ಹಾಡಿದೆನು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಹಂಸಲೇಖ ಮತ್ತು ಜಯಂತ್ ಕಾಯ್ಕಿಣಿಯವರಗಳಂತೂ ತಮಾಷೆಗೂ ಮಕ್ಕಳೊಡನೆ ಒರಟು ಮಾತುಗಳನ್ನು ಆಡರು. ನಿಜಕ್ಕೂ ರಾಷ್ಟ್ರ ಮಟ್ಟದ ಯಾವುದೇ ಸ್ಪರ್ಧಾ ತೀರ್ಪುಗಾರರಿಗೂ ಇವರುಗಳು ಆದರ್ಶವೇ ಸರಿ. ಆದರೂ ಅಲ್ಲೊಂದು ಇಲ್ಲೊಂದು ದುರದೃಷ್ಟಕರ ಪ್ರಕರಣಗಳು ನಡೆದೇ ಹೋಗುತ್ತವೆ.

ನಮ್ಮ ಸಂವಿಧಾನ ಮತ್ತು ಅಂತಾರಾಷ್ಟೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳ ಪ್ರಕಾರ ಪ್ರತೀ ಮಗುವಿನ (೧೮ ವರ್ಷ ಕೆಳಗಿನ ಎಲ್ಲರೂ) ದೈಹಿಕ ಅವಶ್ಯಕತೆಗಳನ್ನು ಪೂರೈಸುವುದು ಮಾತ್ರವಲ್ಲ ಮಾನಸಿಕ ಆರೋಗ್ಯ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿಕೊಡುವುದು ಪ್ರತೀ ವಯಸ್ಕನ ಕರ್ತವ್ಯವಾಗಿದೆ. ಮನೋರಂಜನೆಗಾಗಿ ಸಿನಿಮಾಗಳಲ್ಲಿ, ದೂರದರ್ಶನದ ಧಾರಾವಾಹಿಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದೇ ಆದರೆ ಪೋಷಕರು ಮತ್ತು ನಿರ್ಮಾಪಕರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೀಡಿರುವ ಒಂದಷ್ಟು ಸ್ಪಷ್ಟ ನಿರ್ದೇಶನಗಳನ್ನು ಪಾಲಿಸಲೇಬೇಕಿರುತ್ತೆ.

ಆಯೋಗವು ನೀಡಿರುವ ಸೂತ್ರಗಳ ಪ್ರಕಾರ ಮಕ್ಕಳನ್ನು ಬಳಸಿಕೊಂಡು ಮಾಡುವ ಯಾವುದೇ ರಿಯಾಲಿಟಿ ಶೋಗಳು ಸ್ಪರ್ಧೆಯಂತಿರಬಾರದು. ಅದು ಕೇವಲ ಮಕ್ಕಳ ಭಾಗವಹಿಸುವಿಕೆಗೆ ಒಂದು ವೇದಿಕೆಯಾಗಿರಬೇಕು. ಅತಿಥಿಗಳು ಮಕ್ಕಳ ಮನೋಸ್ಥೈರ್ಯವನ್ನು ಕುಗ್ಗಿಸುವಂಥ ಯಾವುದೇ ಮಾತುಗಳನ್ನು ಸಾರ್ವಜನಿಕವಾಗಿ ಆಡಬಾರದಾಗಿರುತ್ತೆ. ಬದಲಿಗೆ ಎಲ್ಲಾ ಮಕ್ಕಳಿಗೂ ಪ್ರೊತ್ಸಾಹ ನೀಡುವಂಥ ಅಭಿಪ್ರಾಯಗಳನ್ನೇ ನೀಡಬೇಕಿರುತ್ತದೆ. ಶೂಟಿಂಗ್ ವೇಳೆಯಲ್ಲಿ ಮಕ್ಕಳ ಜೊತೆ ಪೋಷಕರೊಬ್ಬರು ಕಡ್ಡಾಯವಾಗಿ ಇರಬೇಕಿರುತ್ತದೆ. ನಿರ್ಮಾಪಕರು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆಯಾಗಿ ಬದಲಾವಣೆ ಮತ್ತು ಆರಾಮ ಕೊಠಡಿಗಳ ವ್ಯವಸ್ಥೆ  ಮಾಡಬೇಕಿರುತ್ತೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ, ರಜಾ ದಿನಗಳಲ್ಲಿ ಮಾತ್ರ ಶೂಟಿಂಗ್ ಇಟ್ಟುಕೊಳ್ಳಬೇಕಿರುತ್ತದೆ. ಮಧ್ಯಂತರಗಳನ್ನು ನೀಡುತ್ತಾ, ಹಗಲಿನಲ್ಲಿ ಮಾತ್ರ ಗರಿಷ್ಠ ೬ ಗಂಟೆಗಳ ಸಮಯ ಮಕ್ಕಳಿಂದ ದುಡಿಸಿಕೊಳ್ಳಬಾರದಾಗಿರುತ್ತದೆ. ಅವರಿಗೆ ಅವಶ್ಯವಿರುವಂಥ ಪೌಷ್ಟಿಕ ಮತ್ತು ಸ್ವಚ್ಛ ಆಹಾರದ ವ್ಯವಸ್ಥೆ ಮಾಡುವುದು ಕಡ್ಡಾಯವಾಗಿದೆ. ಶೂಟಿಂಗ್ ಸ್ಥಳದಲ್ಲಿ ಅವರುಗಳ ಸುರಕ್ಷತೆಯ ಜವಾಬ್ದಾರಿಯನ್ನು ಮಾತ್ರವಲ್ಲ ಮಕ್ಕಳ ಮನೋತಜ್ಞರುಗಳ ಸಲಹೆ ಮತ್ತು ಸಹಕಾರಕ್ಕೆ ಅನುಕೂಲ ಮಾಡಿಕೊಡಬೇಕಿರುತ್ತೆ. ನುರಿತ ಮಕ್ಕಳ ಆಪ್ತ ಸಲಹೆಗಾರರನ್ನು ನೇಮಿಸಿಕೊಳ್ಳಬೇಕಿರುತ್ತೆ. ಅಲ್ಲದೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಬಲ್ಲ ವೈದ್ಯಕೀಯ ಸೇವಾ ಸೌಲಭ್ಯವನ್ನೂ ನೀಡಬೇಕಿರುತ್ತದೆ.  ವಯಸ್ಸಿಗೆ  ತಕ್ಕುದ್ದಲ್ಲದ ಸಂಭಾಷಣೆಗಳನ್ನು ಮಕ್ಕಳಿಂದ ಹೇಳಿಸುವುದು ಅಪರಾಧ ಎಂದು ಹೇಳಲಾಗಿದೆ. ಹಾನಿಯುಂಟು ಮಾಡುವ ಲೈಟ್‌ಗಳು ಮತ್ತು ಮೇಕಪ್ ಅನ್ನು ಮಕ್ಕಳ ಜೊತೆ ಬಳಸುವ ಹಾಗಿಲ್ಲ. ಅಂಗಾಂಗ ಪ್ರದರ್ಶನದಂಥ ಬಟ್ಟೆಗಳಲ್ಲಿ ಮಕ್ಕಳನ್ನು ಚಿತ್ರೀಕರಿಸುವುದು ನಿಷಿದ್ದ. ೩ ತಿಂಗಳ ಮಕ್ಕಳನ್ನು ಕೇವಲ ತಾಯಿ ಹಾಲು ಬಳಕೆಯ ಅನುಕೂಲಗಳನ್ನು ಮತ್ತು ಚುಚ್ಚು ಮದ್ದಿನ ಅರಿವು ನೀಡಲು ಮಾತ್ರ ಬಳಸಿಕೊಳ್ಳಬೇಕಿರುತ್ತೆ. ಹಾಗೆಯೇ ಐದು ವರ್ಷದೊಳಗಿನ ಮಕ್ಕಳನ್ನು ಅವರಿಗಿಂತ ದೊಡ್ಡ ವಯಸ್ಸಿನ ಮಕ್ಕಳುಗಳೊಡನೆ ಯಾವ ಉದ್ದೇಶಕ್ಕೂ ಬಳಸಿಕೊಳ್ಳಬಾರದಿರುತ್ತೆ.

ಮೇಲ್ನೋಟಕ್ಕೆ ಆಯೋಗ ನೀಡಿರುವ ಎಲ್ಲಾ ನಿರ್ದೇಶನಗಳೂ ಮಕ್ಕಳ ಸರ್ವತೋಮುಖ ಸುರಕ್ಷೆಗಾಗಿ ಎನಿಸಿದರೂ ಮಕ್ಕಳ ಮೇಲೆ ಒತ್ತಡ ತರುವ ಪೋಷಕರ ಹಾಗೂ ವಯಸ್ಕರ ಮನೋಬದಲಾವಣೆ ಆಗದೆ ಮಕ್ಕಳ ಭವಿಷ್ಯ ಗಟ್ಟಿಯಾಗಲಾರದು. ಮೊದಲು ಪೋಷಕರಿಗೆ ಹಾಗೂ ಮಕ್ಕಳಿಗೆ ಸೋಲನ್ನು ಒಪ್ಪಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳುವ ತರಬೇತಿಯನ್ನು ನೀಡಬೇಕಿದೆ. ಸ್ಪರ್ಧೆ ಅಂತಃಸತ್ವವನ್ನು ಬೆಳೆಸುವಷ್ಟಕ್ಕೆ ಮಾತ್ರ ಸೀಮಿತಗೊಳ್ಳಬೇಕಿದೆ. ಹಾಗಿಲ್ಲದಿದ್ದಲ್ಲಿ ಯಾವ ಕಾನೂನು ಮತ್ತು ನಿರ್ದೇಶನಗಳು ಸಮಾಜಮುಖಿ ಉದ್ದೇಶವನ್ನು ಮುಟ್ಟಲಾರದು.
ಲೇಖನ ಕೃಪೆ : ಅಸ್ತಿತ್ವ ಲೀಗಲ್ ಟ್ರಸ್ಟ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವಿನೋದ್ ಕುಮಾರ್ ವಿ.ಕೆ.

ಅತ್ಯಂತ ಅವಶ್ಯವಾದ ಮತ್ತು ಉತ್ತಮವಾದ ಲೇಖನ.. ರಿಯಾಲಿಟಿ ಶೋನಲ್ಲಿ ನಮ್ಮ ಮಕ್ಕಳು ಕಾಣುವುದೇ ಒಂದು ಸಾಧನೆ ಅನ್ನುಂವತೆ ತಂದೆ ತಾಯಿಗಳು ವಿಪರೀತ ಅನ್ನುವಷ್ಟು ಮಕ್ಕಳನ್ನು ಟೀ.ವಿ. ಶೋಗಳಿಗೆ ಪ್ರಚೋದಿಸ್ತಾರೆ.. ದೀಢೀರ್ ಹೆಸರು ಮತ್ತು ಹಣ ಮಾಡುವ ಆಸೆ ಕೂಡಾ ಇದರಲ್ಲಿ ಸೇರಿದೆ. ಆದರೆ ಅದರಿಂದ ಮಕ್ಕಳ ಮೇಲೆ ಆಗುವ ಪರಿಣಾಮದ ಬಗ್ಗೆ ಯಾರೂ ಯೋಚಿಸುವಿದಿಲ್ಲ. ಲೇಖನ ಅಂಥ ಪರಿಸ್ಥಿತಿ ಬಗ್ಗೆ ಉತ್ತಮ ಬೆಳಕು ತೋರಿದೆ.

ವಿನೋದ್ ಕುಮಾರ್ ವಿ.ಕೆ.

1
0
Would love your thoughts, please comment.x
()
x