ವರ್ಕ್ ಫ್ರಂ ಹೋಂ ಮತ್ತದರ ಸಮಸ್ಯೆಗಳು: ಪ್ರಶಸ್ತಿ ಪಿ.

ಪೇಟೆಯಲ್ಲಿನ ಸಾಫ್ಟವೇರ್ ಕಂಪೆನಿಗಳಲ್ಲಿ ಕೆಲಸ ಮಾಡ್ತಿದ್ದ ಹುಡುಗರೆಲ್ಲಾ ಈಗ ಹಳ್ಳಿ ಸೇರಿದ್ದಾರೆ. ಮನೇಲೇ ಕೂತ್ಕೊಂಡು ಅದೇನೋ ವರ್ಕ್ ಫ್ರಂ ಹೋಂ ಮಾಡ್ತಿದ್ದಾರೆ ಅನ್ನೋ ಮಾತನ್ನ ಸುಮಾರು ಕಡೆ ಕೇಳಿರ್ತೀರ . ಮುಂಚೆಯೆಲ್ಲಾ ಆಫೀಸಿಗೆ ಅಂತ ಬೆಂಗಳೂರಿಗೆ ಹೋಗ್ತಿದ್ದೆ. ಈಗ ಇಲ್ಲೇ ಇದ್ದೀಯಲ್ಲ. ರಜೆಯೇನಪ್ಪ ನಿಂಗೆ ಅಂತಾರೆ ನಮ್ಮಜ್ಜಿ. ಇಲ್ಲಜ್ಜಿ ಮನೆಯಿಂದ್ಲೇ ಕೆಲಸ ಮಾಡ್ಬೋದು ಲ್ಯಾಪ್ಟಾಪಲ್ಲಿ, ಕಂಪ್ಯೂಟರಲ್ಲಿ ಅಂದ್ರೆ ಏನ್ಮಾಡ್ತೀಯ ಅದ್ರಲ್ಲಿ ? ಲೆಕ್ಕ ಮಾಡೋದಿರುತ್ತಾ ಅಂತಾರೆ. ನಾವು ಏನ್ಮಾಡ್ತೀವಿ ಅಂತ ಹೊರಗೆ ಹೇಳದ ಹಾಗೆ ನಮ್ಮ ಅನ್ನದಾತರಾದ ಕಂಪೆನಿಗಳ ಜೊತೆಗೆ ಒಪ್ಪಂದವಿರೋದು ಒಂದ್ಕಡೆ. ಹೇಳಿದ್ರೂ ಅಜ್ಜಿಗೆ ಅರ್ಥ ಆಗೋಲ್ಲ ಅನ್ನೋದು ಮತ್ತೊಂದ್ಕಡೆ. ಈಗ ಶಾಲಾ ಹುಡುಗ್ರಿಗೆಲ್ಲಾ ಆನ್ ಲೈನು ಪಾಠ ಅಂತ ಮಾಡ್ತಾರಲ್ಲ, ಹಾಗೆ ನಾವು ಆನ್ ಲೈನಲ್ಲಿ ಕೆಲಸ ಮಾಡ್ತೀವಿ ಅಂದ್ರೆ ಅಜ್ಜಿಗೆ ಸ್ವಲ್ಪ ಅರ್ಥ ಆಗುತ್ತೆ !

ಈ ವರ್ಕ್ ಫ್ರಂ ಹೋಂ ಅನ್ನೋದು ಅಷ್ಟು ಸುಲಭವಾ ?
ಈ ವರ್ಕ್ ಫ್ರಂ ಹೋಂ ಅನ್ನೋದು ಹೊರಗಿನವರಿಗೆ ಕಾಣುವಷ್ಟು ಸುಲಭವಲ್ಲ. ಅಂದ್ರೆ ಕಂಪೆನಿಯಲ್ಲಿ ಅಂತರ್ಜಾಲ ಸಂಪರ್ಕ ಕೊಡೋ ತನ್ನದೇ ಬೇರೆ ಲ್ಯಾನ್ ಇರುತ್ತೆ. ಅವರು ಇಂಟರ್ನೆಟ್ ಸೇವೆ ಕೊಡೋ ಸಂಸ್ಥೆಗಳಾದ ಏರ್ಟೆಲ್, ಬಿ.ಎಸ್.ಎನ್ ಎಲ್ ಮುಂತಾದವರೊಂದಿಗೆ ಒಪ್ಪಂದ ಮಾಡ್ಕೊಂಡು ಇಂದಿಷ್ಟು ಜನ ಇಂಟರ್ನೆಟ್ ಬಳಸ್ತಾರೆ , ಇಂತಿಷ್ಟು ವೇಗದ ಇಂತಿಷ್ಟು ಡೇಟಾ ಬೇಕಾಗುತ್ತೆ ಅಂತ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡ್ಕೊಂಡಿರ್ತಾರೆ. ಅವ್ರು ಇಂಟರ್ನೆಟ್ ಸರ್ವೀಸ್ ಪ್ರೊವೈಡರ್(ISP) ಎಂಬ ಒಕ್ಕೂಟದೊಂದಿಗೆ ಸೇರಿ ಕೆಲಸಕ್ಕೆ ಬೇಕಾಗೋ ಅಂತರ್ಜಾಲವನ್ನು ಒದಗಿಸುತ್ತಾರೆ. ಸುಮಾರಷ್ಟು ಕಂಪೆನಿಗಳಲ್ಲಿ ಶಿಫ್ಟುಗಳಲ್ಲಿ ಕೆಲಸ ನಿರ್ವಹಿಸುವುದರಿಂದ ಒಂದೇ ಕಂಪ್ಯೂಟರನ್ನು ಎರಡಕ್ಕೂ ಹೆಚ್ಚು ಮಂದಿ ಬಳಸೋ ಸಾಧ್ಯತೆಯೂ ಇರುತ್ತೆ. ಮತ್ತೆ ಅವರಿಗೆಲ್ಲಾ ಬೇಕಾಗೋ ಕರೆಂಟು, ಕರೆಂಟು ಹೋದರೆ ಬೇಕಾಗೋ ಇನ್ವರ್ಟರ್ರು ಮುಂತಾದ ಸೌಕರ್ಯಗಳೂ ಇರುತ್ತೆ. ಮತ್ತೆ ಆಫೀಸಿನ ಕೆಲಸಕ್ಕೆ ಸಂಬಂಧಪಟ್ಟ ಮಾಹಿತಿ ಹೊರಗೆ ಸೋರದಂತೆ ತಡೆಯೋ ಹಲವು ಸುರಕ್ಷತಾ ಕ್ರಮಗಳೂ ಇರುತ್ತವೆ. ಈಗ ಒಂದು ಆಫೀಸಿಗೆ ೨೦೦ ಜನ ಬರ್ತಿದ್ದಾರೆ ಅಂತ ಇಟ್ಕೊಳ್ಳಿ. ಅವರೆಲ್ಲಾ ಮನೆಯಿಂದ ಕೆಲಸ ಮಾಡೋಕೆ ಶುರು ಮಾಡಿದರೆ ಅವರೆಲ್ಲರಿಗೂ ಒಂದೊಂದು ಲ್ಯಾಪ್ಟಾಪು, ಕಂಪ್ಯೂಟರ್ ಬೇಕು, ವಿದ್ಯುತ್ ಸೌಲಭ್ಯ ಸರಿಯಿರಬೇಕು. ಯಾವಾಗ ಬೇಕಾದರೆ ಆವಾಗ ಹೋಗೋ ವಿದ್ಯುತ್ತಿನಿಂದ ಕೆಲಸ, ಮೀಟಿಂಗುಗಳು ಹಾಳಾಗದಂತೆ ರಕ್ಷಿಸಲು ಎಲ್ಲರ ಮನೆಯಲ್ಲೂ ಇನ್ವರ್ಟರ್ಗಳು ಇರಬೇಕು, ಎಲ್ಲರಿಗೂ ವೇಗದ ಇಂಟರ್ನೆಟ್ ಸೌಲಭ್ಯ ದಕ್ಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟೆಲ್ಲಾ ಜನ ತಮ್ಮ ಮನೆಯಿಂದಲೇ ಕೆಲಸ ಮಾಡಿದರೂ ಒಂದೇ ಕಂಪೆನಿಯ ಕೆಲಸವನ್ನು ಮಾಹಿತಿಯ ಸುರಕ್ಷೆಯನ್ನು ಕಾಪಾಡಿಕೊಳ್ಳುತ್ತಾ ಮಾಡಬೇಕಲ್ಲಾ ? ಹಾಗಾಗಿ ಅವರನ್ನು ಆ ಕಂಪೆನಿಗೆ ಜಾಲದ ಒಳಗೆ ತರಲು ಇರೋ ಸುರಕ್ಷಿತ ವ್ಯವಸ್ಥೆಯೇ ವಿ.ಪಿಎನ್(ವರ್ಚುಯಲ್ ಪ್ರೈವೇಟ್ ನೆಟ್ವರ್ಕ್). ಆಫೀಸಿನಲ್ಲಾದರೆ ಆಫೀಸಿನ ಜಾಲದೊಳಗೇ ಲ್ಯಾನ್ ಬಳಸೋ ಮೂಲಕ ಕೆಲಸ ಮಾಡುತ್ತಿರುತ್ತೀರ. ಈ ವಿ.ಪಿ.ಎನ್ನಿನ ಅಗತ್ಯ ಇರೋದಿಲ್ಲ. ಆದರೆ ಹೊರಗಿನಿಂದ ಆಫೀಸಿನ ನೆಟ್ವರ್ಕನ್ನು ಪ್ರವೇಶಿಸೋಕೆ ಈ ವಿ.ಪಿ.ಎನ್ ಅಗತ್ಯ. ಹೆಚ್ಚೆಚ್ಚು ಜನ ಹೊರಗಿನಿಂದ ಕೆಲಸ ಮಾಡಿದಂತೆಯೂ ಈ ವಿ.ಪಿ.ಎನ್ನಿನ ಮೇಲಿನ ಭಾರ ಹೆಚ್ಚುತ್ತಾ ಹೋಗುತ್ತೆ. ಹಾಗಾಗಿ ಕಂಪೆನಿಯವರು ಅದನ್ನೂ ಉನ್ನತೀಕರಿಸುತ್ತಾ ಸಾಗಬೇಕು.

ಸಿಗದ ನೆಟ್ವರ್ಕು:
ಪೇಟೆಯಲ್ಲಿರೋರಿಗೆ ಮಾತಾಡೋಕೆ, ಕಂಪೆನಿಯ ಕೆಲಸ ಮಾಡೋಕೂ ಮೊಬೈಲಿನ ಅಂತರ್ಜಾಲದ ಸ್ಪೀಡೇ ಸಾಕಾಗಬಹುದು. ಪೇಟೆಯಲ್ಲಿರೋರಿಗೆ ಒಮ್ಮೆ ಮಾತಾಡೋಕೆ ನೆಟ್ವರ್ಕು ಸರಿಯಾಗಿ ಸಿಗದಿದ್ರೂ ಕೆಲಸ ಮಾಡೋಕೆ ಬೇಕಾದ ಈ ಇಂಟರ್ನೆಟ್ ಸೇವೆ ಅನ್ನೋದು ಅಷ್ಟು ಸಮಸ್ಯೆಯಲ್ಲ. ಬೆಂಗಳೂರಂತ ಮಹಾನಗರಗಳಲ್ಲಿ ಆಕ್ಟ್, ಹ್ಯಾಥ್ ವೇ ಮುಂತಾದ ವೇಗದ ಅಂತರ್ಜಾಲ ಸೇವೆ ನೀಡೋ ಕಂಪೆನಿಗಳಿವೆ. ಸಣ್ಣ ಸಣ್ಣ ನಗರಗಳಲ್ಲೂ ಏರ್ಟೆಲ್, ಬಿ.ಬಿ.ಎನ್, ಸಹ್ಯಾದ್ರಿ ನೆಟ್ವರ್ಕ್ ಮುಂತಾದ ಕಂಪೆನಿಗಳಿವೆ. ಆದರೆ ಸಮಸ್ಯೆ ಶುರುವಾಗೋದು ಹಳ್ಳಿಗಳತ್ತ ಸಾಗಿದಾಗ. ತೀರಾ ಗುಡ್ಡಗಾಡು ಬಿಡಿ. ಪೇಟೆಗಳಿಂದ ಐದಾರು ಕಿ.ಮೀ ದೂರದಲ್ಲಿರೋ ಹಳ್ಳಿಗಳಲ್ಲೇ ನೆಟ್ವರ್ಕ್ ಸಮಸ್ಯೆ ಕಾಡ್ತಾ ಇದೆ. ಇದು ಈಗಿಂದಲ್ಲ. ಮುಂಚಿಂದಲೂ ಇರೋ ಸಮಸ್ಯೆಯೇ. ಮೆನೆಯೊಳಗೆ ಒಂದೋ ಎರಡೋ ಕಡ್ಡಿ ನೆಟ್ವರ್ಕ್ ಸಿಕ್ಕಿದರೆ ಪುಣ್ಯ. ಕೆಲವು ಕಡೆಯಂತೂ ಒಂದು ಕಡ್ಡಿ ನೆಟ್ವರ್ಕ್ ಸಿಗೋಕೆ ಮನೆಯ ಅಂಗಳಕ್ಕೋ, ಮೇಲ್ಮೆತ್ತಿಗೋ , ಹತ್ತಿರದ ಗುಡ್ಡಕ್ಕೋ ಹತ್ತಬೇಕಾದ ಪರಿಸ್ಥಿತಿ ಇದೆ. ಮುಂಚೆಯೆಲ್ಲಾ ಹಲವು ನೆಟ್ವರ್ಕುಗಳಿದ್ದವು. ಒಂದಿಲ್ಲದಿದ್ದರೆ ಮತ್ತೊಂದು ಸಿಗಬಹುದು ನೋಡು ಅಂತಿದ್ರು. ಈಗಿರೋ ನಾಲ್ಕೇ ನೆಟ್ವರ್ಕುಗಳಾದ ಜಿಯೋ, ಏರ್ಟೆಲ್, ವಿ, ಬಿ.ಎಸ್.ಎನ್ನೆಲ್ಗಳಲ್ಲಿ ಯಾವುದನ್ನು ಆರಿಸಿದರೂ ಇದೇ ಪರಿಸ್ಥಿತಿ. ಮುಂಚೆಯೆಲ್ಲಾ ಬಿ.ಎಸ್.ಎನ್ನೆಲ್ ಲ್ಯಾಂಡ್ ಲೈನಾದ್ರೂ ಇರ್ತಿತ್ತು ಹಳ್ಳಿಗಳ ಕಡೆ. ಅದರಿಂದ ಡೈಲ್ ಅಪ್ ಇಂಟರ್ನೆಟ್ , ಬ್ರಾಡ್ ಬ್ಯಾಂಡ್ ಸೇವೆ ಕೊಡುತ್ತಿದ್ರು. ಈಗ ಸುಮಾರು ಹಳ್ಳಿಗಳಲ್ಲಿ ಇದ್ದ ಲ್ಯಾಂಡ್ ಲೈನುಗಳನ್ನೇ ತೆಗಿಸಿರೋದ್ರಿಂದ ಮತ್ತು ಬಿಎಸ್ಎನ್ಎಲ್ಲಿನ ಸದ್ಯದ ಸಂಕಷ್ಟಗಳಿಂದ ಹಳ್ಳಿಗಳ ಕಡೆ ಹೊಸ ಬ್ರಾಡ್ ಬ್ಯಾಂಡ್ ಕನೆಕ್ಷನ್ ಪಡೆಯೋದು ಅಸಾಧ್ಯದಂತೇ ಸರಿ. ಯಾವಾಗ ಫೋನ್ ಮಾಡಿದ್ದ್ರೂ ಇವತ್ತು ಬರ್ತೀವಿ , ನಾಳೆ ಬರ್ತೀವಿ ಅಂತಾರೆ. ಇಲ್ಲಾ ನಿಮ್ಮ ಮನೆಯೊಂದಕ್ಕೇ ಎರಡ್ಮೂರು ಕಿ.ಮೀ ನೆಲ ಅಗೆದು ಕನೆಕ್ಷನ್ ಕೊಡ್ಬೇಕು ಸರ್, ಆಗಲ್ಲ ಅಂತಲೋ ಉತ್ತರ ಶತಃಸಿದ್ಧ ! ಪೇಟೆಯಲ್ಲಿರೋ ಬೇರೆ ಇಂಟರ್ನೆಟ್ ಸೇವೆ ಕೊಡುವವರದ್ದೂ ಇದೇ ವರಾತ !

ಬೂಸ್ಟರ್ ಬೇಕಾ ?
ಸ್ವಲ್ಪ ದಿನದ ಮುಂಚೆ ನೆಟ್ವರ್ಕ್ ಸಿಗ್ತಿಲ್ವಾ ? ಬೂಸ್ಟರ್ ಹಾಕ್ಸಿ . ಒಂದು ಕಡ್ಡಿ ಸಿಗೋ ಕಡೆಯೆಲ್ಲಾ ನಾಲ್ಕು ಕಡ್ಡಿ ಸಿಗುತ್ತೆ. ೩೦ ಎಂಬಿಪಿಎಸ್ ಗಿಂತ ಜಾಸ್ತಿ ಸ್ಪೀಡ್ ಬರುತ್ತೆ ಅಂತಿದ್ರು. ಮನೆಯ ಹತ್ರ ಎಷ್ಟೇ ಎತ್ತರದ ಜಾಗ ಹತ್ತಿ ತಿಣುಕಾಡಿದ್ರೂ ೨ ಎಂಬಿಪಿಎಸ್ಗಿಂತ ಜಾಸ್ತಿ ಸಿಗಲ್ಲ. ಅದು ಮೂವತ್ತಾಗೋದು ಹೇಗೆ ಅಂತ ಯೋಚನೆ ಬರ್ತಿತ್ತು. ಕೆಲವು ಕಡೆ ನೋಡೂ ಆಯ್ತು. ಹಳ್ಳಿಗಳ ಕಡೆ ಈಗ ಜಾಸ್ತಿ ಜನ ಬಳಸ್ತಿರೋದು ಜಿಯೋ ಜಿಯೋಫೈನ ಡೋಂಗಲ್, ಏರ್ಟೆಲ್ಲಿನ ಮಾಡೆಮ್ಮಿಗೆ ಬೇರೆ ಸಿಮ್ ಕಾರ್ಡ್ ಹಾಕುವಂತೆ ಅನ್ಲಾಕ್ ಮಾಡಿ ಅದರ ಆಂಟೆನದ ಬದಲಿಗೆ ಹೊರಗಿನ ಆಂಟೆನಾಕ್ಕೆ ಕನೆಕ್ಷನ್ ಕೊಟ್ಟು ಬಳಸೋ ವ್ಯವಸ್ಥೆ ಮತ್ತು ಟಿವಿ ಸ್ಟೇಷನ್ನುಗಳ ನೆಟ್ವರ್ಕನ್ನು ಮರುಪ್ರಸಾರ ಮಾಡಲು ಇರೋ ಆಂಟೆನಾಗಳ ಮಿನಿ ರೂಪಾಂತರಗಳಾಗಿರೋ ನೆಟ್ವರ್ಕನ್ನು ಜಾಸ್ತಿ ಎಳೆಯೋ ನೆಟ್ವರ್ಕ್ ಬೂಸ್ಟರುಗಳು. ಈ ಬೂಸ್ಟರ್ ಅಥವಾ ರಿಪೀಟರ್ ಅಥವಾ ಸಿಗ್ನಲ್ ಎಕ್ಸ್ಟೆಂಡರುಗಳು ಹೊರಗಿನ ದುರ್ಬಲ ಸಿಗ್ನಲುಗಳನ್ನು ಹಿಡಿದು , ಅದನ್ನು ಆಂಪ್ಲಿಫೈ ಅಥವಾ ಬೂಸ್ಟ್ ಮಾಡಿ ಮತ್ತೆ ಬ್ರಾಡ್ ಕಾಸ್ಟ್ ಮಾಡುತ್ತೆ. ಹಾಗಾಗಿ ನೀವು ಮೊಬೈಲ್ ಟವರಿಗೆ ಸ್ವಲ್ಪ ಹತ್ತಿರವಾದಂತೆ ಭಾಸವಾಗಿ ಜಾಸ್ತಿ ಇಂಟರ್ನೆಟ್ ಸ್ಪೀಡ್ ಸಿಗುತ್ತೆ. ಆದ್ರೆ ಮುಂಚೆಯೆಲ್ಲಾ ಐದಾರು ಸಾವಿರಕ್ಕೆ ಸಿಗುತ್ತಿದ್ದ ಈ ಬೂಸ್ಟರುಗಳಿಗೆ ಈಗ ೨೫-೩೦ ಸಾವಿರದ ಮೇಲೆ ಹೇಳುತ್ತಾರೆ !

ಮಾಡೆಮ್ಮು ಮತ್ತದರ ಬ್ಯಾಂಡುಗಳು:
ಮಾಡೆಮ್ಮಿಗೆ ಸಂಪರ್ಕ ಕೊಡೋ ಆಂಟೆನಾಗಳದ್ದೂ ಇದೇ ಕತೆ. ಚೈನಾದಿಂದ ಮಾಲ್ ಬರ್ತಿಲ್ಲ, ಇರೋ ಸ್ಟಾಕಿಗೇ ವಿಪರೀತ ಬೇಡಿಕೆ ಅಂತ ತಲೆಗೊಂದು ಕತೆ ಕಟ್ಟೋ ಇವರು ಹದಿನೆಂಟರಿಂದ ಇಪ್ಪತ್ತು ಸಾವಿರದವರೆಗೆ ದಿನಕ್ಕೊಂದು ಬೆಲೆ ಹೇಳುತ್ತಾ ಹೋಗುತ್ತಾರೆ. ಆದ್ರೆ ಇದರಿಂದ ಎಲ್ಲಾ ಜಾಗದಲ್ಲೂ ಮೂವತ್ತು ಎಂಬಿಪಿಎಸ್ ಹತ್ತಿರ ಸಿಗುತ್ತೆ ಅಂತ ಹೇಳೋಕಾಗಲ್ಲ. ಇಲ್ಲಿ ಸಿಗೋ ಮಾಡೆಮ್ಮಲ್ಲಿ ಎಂಟತ್ತು ಫ್ರೀಕ್ವೆನ್ಸಿ ಬ್ಯಾಂಡುಗಳಿರುತ್ತೆ. ರೇಡಿಯೋ, ಎಫ್ ಎಂ ನಲ್ಲಿ ೯೨.೫ , ೯೯.೯ ಅಂತೆಲ್ಲಾ ಚಾನೆಲ್ಲುಗಳಿರುತ್ತಲ್ಲಾ ಹಾಗೇ ಇಲ್ಲಿ ೨೧೦೦ ಮೆಗಾ ಹರ್ಟ್ ಅಂತ ಸುಮಾರು ಚಾನೆಲ್ಗಳಿರುತ್ತೆ. ಅದರಲ್ಲಿ ನಿಮ್ಮ ಮನೆಯ ಬಳಿ ಚಾನೆಲ್ ಐದೋ, ಆರರಲ್ಲೋ ಹೆಚ್ಚಿನ ವೇಗ ಸಿಗಬಹುದು. ಅದು ಯಾವ ದಿಕ್ಕಿಗೆ, ಯಾವ ಬ್ಯಾಂಡಿನಲ್ಲಿ , ಯಾವ ಕಂಪೆನಿಯ ನೆಟ್ವರ್ಕಿನಲ್ಲಿ ಸಿಗುತ್ತೆ ಅಂತ ನೋಡಿ ಆ ಬ್ಯಾಂಡಿನ ಸಿಗ್ನಲ್ಲುಗಳನ್ನೇ ಹಿಡಿಯುವಂತೆ ಸೆಟ್ ಮಾಡಿಡಬಹುದು.ಕೆಲ ಜಾಗಗಳಲ್ಲಿ ಯಾವುದೇ ಜಾಗದಲ್ಲಿ ಆಂಟೆನಾ ಇಟ್ಟರೂ, ಯಾವ ದಿಕ್ಕಿಗೆ, ಬ್ಯಾಂಡಿಗೆ ತಿರುಗಿಸಿದರೂ, ಯಾವ ಕಂಪೆನಿಯ ಸಿಎಮ್ ಉಪಯೋಗಿಸಿದ್ರೂ ಐದಾರು ಎಂಬಿಪಿಎಸ್ ಗಿಂತ ಹೆಚ್ಚಿಗೆ ಸ್ಪೀಡ್ ಸಿಗದ ಉದಾಹರಣೆಗಳಿವೆ. ಸ್ಪೀಡ್, ಇಷ್ಟು ದುಡ್ಡು ಕೊಡೋಕೆ ರೆಡಿಯಿದ್ದರೆ ಹುಟ್ಟೂರಲ್ಲೇ ಆರಾಮಾಗಿ ಕೆಲಸ ಮಾಡೋ ಸ್ವರ್ಗ ಸುಖ.

ಇನ್ನು ಇಷ್ಟು ದುಡ್ಡು ಕೊಡೋಕಾಗಲ್ಲ. ಕೊಟ್ರೂ ಕಂಪೆನಿಯವ್ರು ಯಾವಾಗ ಕರೀತಾರೆ ಅಂತ ಗೊತ್ತಿಲ್ಲ, ಸ್ವಲ್ಪ ಕಮ್ಮಿಗೆ ಸಿಗೋವಂತದ್ದು ಯಾವಾದಾದ್ರೂ ಇದ್ಯಾ ಅಂತ ನೋಡೋರ ಆಯ್ಕೆ ಜಿಯೋ ಫೈ. ಜಿಯೋ ಸಿಗ್ನಲ್ ಎರಡೋ ಮೂರೋ ಕಡ್ಡಿ ಸಿಗುವಲ್ಲಿ ಸ್ವಲ್ಪ ಜೇಬಿಗೆ ಹೊರೆಯಾಗದ ಆಯ್ಕೆಯೆಂದರೆ ಜಿಯೋಫೈ. ಮೊಬೈಲಲ್ಲಿ ಎರಡ್ಮೂರು ಎಂಬಿ ಸ್ಪೀಡಲ್ಲಿ ಸಿಗೋ ಅಂತರ್ಜಾಲವನ್ನು ಈ ಡಾಂಗಲುಗಳ ಮೂಲಕ ಮೇಲೆ ತಿಳಿಸಿದಂತೆ ಸರಿಯಾದ ಬ್ಯಾಂಡ್ ಆಯ್ಕೆ ಮಾಡಿ ಎಂಟತ್ತು ಎಂಬಿಪಿಎಸ್ಗಳಷ್ಟು ಹೆಚ್ಚಿಗೆ ಪಡೆಯಬಹುದು.

ಇಷ್ಟೆಲ್ಲಾ ಇದ್ರೂ ಸಮಸ್ಯೆಯಾ ?
ಬ್ರಾಡ್ ಬ್ಯಾಂಡ್ ಇಲ್ಲದಿದ್ದರೂ, ಮೊಬೈಲಲ್ಲಿ ಸರಿ ನೆಟ್ವರ್ಕು ಸಿಗದಿದ್ರೂ ಮೇಲಿನ ಮೂರು ಆಯ್ಕೆಗಳಲ್ಲಿ ಯಾರು ಹಿತವರು ನಿನಗೆ ಅಂತ ಒಂದನ್ನು ಆಯ್ಕೆ ಮಾಡ್ಕೊಂಡು ಕೆಲಸ ಮಾಡ್ಬೋದಲ್ವಾ ಅಂತೀರಾ ? ಸಮಸ್ಯೆ ಇರೋದು ಅಲ್ಲೇ. ಈ ಬೂಸ್ಟರ್, ಆಂಟೆನಾ, ಡಾಂಗಲುಗಳೆಲ್ಲಾ ಮೂಲದಲ್ಲಿ ಮೊಬೈಲ್ ನೆಟ್ವರ್ಕನ್ನೇ ಅವಲಂಭಿಸುತ್ತೆ. ಹಳ್ಳಿಗಳ ಕಡೆ ಕರೆಂಟಿಲ್ಲ ಅಂದ್ರೆ ಮೊಬೈಲ್ ಟವರುಗಳೂ ಜನರೇಟರಿಲ್ಲದೇ ಆಫಾಗುತ್ತೆ! ಮೊಬೈಲ್ ಸಿಗ್ನಲ್ಲೇ ಇಲ್ಲದಿದ್ದರೆ ಕೆಲಸ ಮಾಡೋದೆಲ್ಲಿಂದ ? ಇನ್ನು ಏನೋ ತಾಂತ್ರಿಕ ತೊಂದರೆ ಆಯ್ತು ಅಂತ ಮೊಬೈಲ್ ಸಿಗ್ನಲ್ ವೀಕಾದ್ರೆ ಕೆಲಸಕ್ಕೆ ಬೇಕಾದ ಅಂತರ್ಜಾಲದ ಸ್ಪೀಡೂ ಕಮ್ಮಿಯಾಗುತ್ತೆ. ಸ್ಪೀಡ್ ತೀರಾ ಕಮ್ಮಿಯಾದ್ರೆ ಆಫೀಸಿಗೆ ಬೇಕಾದ ವಿಪಿಎನ್ ಜೊತೆಗೆ ಸಂಪರ್ಕವೇ ಆಗೋಲ್ಲ. ಆದರೂ ಆಫೀಸಿನ ಮೀಟಿಂಗುಗಳಲ್ಲಿ ಮಾತು ಕೇಳೋಲ್ಲ. ಮಾತು ಕಂಡರೆ ವೀಡೀಯೋ ಕಾಣೋಲ್ಲ, ನಾವು ಮಾತಾಡಿದ್ದು, ತೋರಿಸ್ತಿರೋದು ಅವರಿಗೆ ಸ್ಪಷ್ಟವಾಗಿ ಕಾಣೋಲ್ಲ, ಕೇಳೋಲ್ಲ ಮುಂತಾದ ಸಮಸ್ಯೆಗಳಾಗೋಕೆ ಶುರುವಾಗುತ್ತೆ. ಆಫೀಸಲ್ಲಿದ್ದಾಗ ಕೆಲಸದ ಬಗ್ಗೆಯೊಂದೇ ತಲೆಬಿಸಿ. ಆದರೆ ಊರಿಗೆ ಬಂದ್ರೆ ಯಾವಾಗ ಕರೆಂಟ್ ಹೋಗತ್ತಪ್ಪಾ, ಬರುತ್ತಪ್ಪಾ , ಕಮ್ಮಿಯಾದ ನೆಟ್ ಸ್ಪೀಡ್ ಯಾವಾಗ ಸರಿಯಾಗುತ್ತಪ್ಪಾ, ಮೊಬೈಲ್ ಡಾಟಾ ಖಾಲಿಯಾಗುತ್ತಾ ಬಂತಲ್ಲ, ಉಳಿದ ಕೆಲಸ ಹೇಗೆ ಮುಗಿಸೋದಪ್ಪಾ ಅಂತೆಲ್ಲಾ ನೂರೆಂಟು ತಲೆನೋವುಗಳು. ಆಫೀಸಲ್ಲಿದ್ರೆ ಪಕ್ಕ ಪಕ್ಕನೇ ಕೂತಿರ್ತೀವಿ. ಏನು ಬೇಕಾದ್ರೂ ತಕ್ಷಣವೇ ಕೇಳಿ ಮುಗಿಯುತ್ತೆ. ಈಗ ಪ್ರತಿಯೊಂದಕ್ಕೂ ಕಾಲ್ ಮಾಡ್ಬೇಕು, ರಾತ್ರಿಯಾದ್ರೂ ಕೆಲಸವೇ ಮುಗಿಯೋಲ್ಲ. ಮುಂಚೆಯೆಲ್ಲಾ ಏಳೆಂಟು ಘಂಟೆಯಾದ್ರೆ ರಾತ್ರಿಯಾಯ್ತು ಅಂತ ಮನೆಗೆ ಬರ್ತಿದ್ವಿ. ಈಗ ಘಂಟೆ ಹತ್ತಾದ್ರೂ ಕೆಲಸ ಮುಗಿಯೋಲ್ಲ, ಹೇಗಿದ್ರೂ ಮನೇಲೇ ಇದ್ದೀವಲ್ಲ ಅಂತ ಉದಾಸೀನ ಬಂದು ಹಗಲು ರಾತ್ರಿಯಾಗೋದು, ರಾತ್ರಿ ಹಗಲಾಗೋದು ಗೊತ್ತೇ ಆಗ್ತಿಲ್ಲ ಅನ್ನೋದು ಸುಮಾರು ಜನ ವರ್ಕ್ ಫ್ರಂ ಹೋಮಿಗರ ಗೊಣಗಾಟ. ಇನ್ನು ಆಫೀಸಿಗೆ ಹೋಗೋಕೆ ಅಂತ ಬೆಳಗ್ಗೆನೇ ತಿಂಡಿ , ಊಟ ರೆಡಿ ಮಾಡ್ಕೊಂಡು ಹೋಗ್ತಿದ್ವಿ. ಈಗ ಮನೇಲೇ ಇದ್ದೀವಲ್ಲ, ನಿಧಾನ ತಿಂದ್ರಾಯ್ತು ಅಂದುಕೊಳ್ಳುತ್ತಲೇ ಒಂದು ದಿನವೂ ಸರಿಯಾದ ಹೊತ್ತಿಗೆ ಊಟ ತಿಂಡಿಗಳಾಗ್ತಿಲ್ಲ ಅನ್ನೋದು ಮತ್ತೊಂದು ಗಂಭೀರ ಸಮಸ್ಯೆಯೇ. ಎಷ್ಟು ದಿನ, ಎಷ್ಟು ತಿಂಗಳು ಎಂಬ ಯಾವ ನಿಶ್ಚಿತತೆಗಳೂ ಇಲ್ಲದ ಈ ಕರೋನಾ ಕಾಟದೆದರೂ ವರ್ಕ್ ಫ್ರಂ ಹೋಂ ಮುಂಚೆಯೆನಿಸಿದಷ್ಟು ಆಕರ್ಷಕವಾಗಿ ಉಳಿದಿಲ್ಲ ಎಂಬುದಕ್ಕೆ ಮೇಲಿನ ಸಂಗತಿಗಳು ಕಾರಣವಾಗ್ತಿವೆ. ಹೆಂಗೋ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ರಿ ಎಂಬ ನಮ್ಮ ಜನರ ಸ್ವಭಾವವೇ ಈ ವರ್ಕ್ ಫ್ರಂ ಹೋಮಿನ ಸಂಕಷ್ಟಗಳನ್ನೂ ದಾಟಲು ಸಹಾಯಕವಾಗ್ತಿವೆ.

ಮುಗಿಸೋ ಮುನ್ನ: ಎಲ್ಲಾದರೂ ಇರಿ, ಹೇಗಾದರೂ ಇರಿ. ನೆಟ್ವರ್ಕ್ ಚೆನ್ನಾಗಿ ಸಿಗುವಲ್ಲಿರಿ ಎಂಬೋದೆ ಈಗಿನ ವರ್ಕ್ ಫ್ರಂ ಹೋಂ ಸಂಕಷ್ಟಿಗರ ಸದ್ಯದ ಗಾದೆ

-ಪ್ರಶಸ್ತಿ ಪಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x