ರೈಲು ಸಿಳ್ಳೆ ಹೊಡೆಯುತ್ತ ಹೊರಟಿದೆ. ಲೇಡೀಸ್ ಬೋಗಿ ತುಂಬಿ ತುಳುಕುತ್ತಿದೆ. ಮುಚ್ಚಿದ ಕಿಟಕಿ ಗಾಜಿನಮೇಲೆ ಮಳೆನೀರು ಧಾರೆಯಾಗಿ ಹರಿಯುತ್ತಿದೆ. ಒಳಗೆ ಬದುಕಿನ ಕಥೆಗಳು ಮಾತುಗಳಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನಷ್ಟು ಕಥೆಗಳು ಸರದಿಯಲ್ಲಿವೆ. ಅವಳು ಕಸ್ತೂರಿ. ಕಾವೇರಿಯಂತೆ ತಂಪಿನ ಹುಡುಗಿ. ಅವಳ ನಗು ರೇಶಿಮೆಯಷ್ಟು ನವಿರು. ಜುಳುಗುಡುವ ನೀರ ಮೈಮೇಲೆ ಮೂಡುವ ಸುಳಿಯಂಥ ಕೆನ್ನೆಗುಳಿ. ಕಸ್ತೂರಿ ಏಳನೇ ತರಗತಿ ಮುಟ್ಟುವದರೊಳಗೆ ಅಮ್ಮ ಮತ್ತೆ ನಾಲ್ಕು ಹೆತ್ತಿದ್ದಳು. ನಿತ್ಯದ ಗಂಜಿಗೆ ಅಮ್ಮ ಅಪ್ಪನಿಗೆ ನೆರಳಾಗಿ ನಡೆಯಬೇಕು ಹೊರಗಿನ ದುಡಿತಕ್ಕೆ. ತಮ್ಮ ತಂಗಿಯರು ಇವಳ ಸೊಂಟವೇರಿ ಕೂತರು. ಇವಳು ಶಾಲೆಗೆ ಗೊಜ್ಜು ತೋಕಿ ಬೆನ್ನಿಗೆ ಬಿದ್ದವರ ಲಾಲನೆಗೆ ನಿಂತಳು. ಬವಣೆಯ ಬದುಕಲ್ಲಿ ಕಕ್ಕುಲಾತಿ ಅಕ್ಕರೆಯ ಜೊತೆಯಲ್ಲಿ ಬೈಗಳು, ಹೊಡೆತ, ಅರೆಹೊಟ್ಟೆ, ಬಯಸಿದ್ದಕ್ಕೆಲ್ಲ ಕೊರತೆ ಎಲ್ಲವೂ ಇದ್ದವು. ಎಲ್ಲದಕ್ಕೂ ಕಸ್ತೂರಿಯದು ಒಂದೇ ಪ್ರತಿಕ್ರಿಯೆ ಮಂದ ನಗು. ನಿನ್ನ ಬೆಂಬಿಡೆನೆಂಬಂತೆ ನಗುವ ಬೆನ್ನೇರುವ ಕೆನ್ನೆಗುಳಿ. ಮದುವೆಗೆ ನೆರೆದಳು ಹುಡುಗಿ. ಹುಡುಗನ ಹುಡುಕಾಟ ಶುರುವಾಯ್ತು. ನಿನ್ನ ಸಂಗಾತಿ ಹೇಗಿರಬೇಕೆಂದು ಇವಳನ್ನಾರೂ ಕೇಳಲಿಲ್ಲ. ಇವಳು ಹೇಳಲಿಲ್ಲ. ಎದುರಿಗೆ ನಿಲ್ಲಿಸಿದವನನ್ನು ಎವೆಯಂಚಿನಿಂದ ನೋಡಿದಳೋ ಇಲ್ಲವೋ ಗೊತ್ತಿಲ್ಲ "ನಿಮಗೆಲ್ಲ ಹೂಂ ಆದ್ರೆ ನಂಗೂ ಹೂಂ" ಎಂದಳು. ನನ್ನ ಸಂಗಾತಿಯಾಗುವವ ಹೀಗೇ ಇರಬೇಕು ಎನ್ನುವ ಕನಸಿಲ್ಲದಷ್ಟು ಭಾವರಹಿತಳೇನಲ್ಲ ಹುಡುಗಿ. ಹೆತ್ತವರಿಗೆ, ಒಡಹುಟ್ಟಿದವರಿಗೆ ತಾನು ಸಮಸ್ಯೆಯಾಗಬಾರದೆನ್ನುವ ಹೊಣೆಗಾರಿಕೆ. ಎದೆಯ ಭಾವಗಳನ್ನು ಬಾಗಿದ ರೆಪ್ಪೆಗಳೊಳಗೆ ಮುಚ್ಚಿಟ್ಟುಕೊಂಡಳು. ಚಿನ್ನಬೇಕು ಬಣ್ಣ ಬೇಕೆಂದು ತಕರಾರು ತೆಗೆದವಳಲ್ಲ. ಮಡಿಲಿಗೆ ಏನು ತುಂಬಿಕೊಟ್ಟರೋ ಅದನ್ನ ಕಟ್ಟಿಕೊಂಡು ಬಂದು ಬದುಕ ಆರಂಭಿಸಿದಳು. ಹಸಿಹಸಿ ಮದುಮಗಳೆದೆಯಲ್ಲಿ ಅದೆಷ್ಟು ಕನಸುಗಳಿದ್ದವೋ? ಎಲ್ಲವನ್ನೂ ಬಳಿದು ಬದುಕಿನ ಗುಡಿಯ ಅಡಿಗಲ್ಲಿನಡಿಗೆ ಅಡವಿಟ್ಟಳು. ತಂದೆ ತಾಯಿಯರನ್ನ ನೋಡಿದ ನೆನಪಿಲ್ಲದೇ ಯಾರುಯಾರದೋ ನೆರಳಲ್ಲಿ ಅಡ್ಡಾದಿಡ್ಡಿ ಬೆಳೆದವನನ್ನು ಬದುಕಿಗೆ ಬಗ್ಗಿಸಿಕೊಳ್ಳುವದಕ್ಕೆ ಅದೆಷ್ಟು ಕಷ್ಟ ಪಟ್ಡಿದ್ದಳು ಹುಡುಗಿ. ಯಾರಲ್ಲಿಯೂ ತನ್ನ ಕಷ್ಟ ತೋಡಿಕೊಳ್ಳಲಿಲ್ಲ. ಯಾರನ್ನೂ ದೂರಲಿಲ್ಲ. ತನ್ನ ನಸೀಬಕ್ಕೆ ಹಳಹಳಿಸಿ ಹಳಿಯಲಿಲ್ಲ. ಕೊರಗಲಿಲ್ಲ. ತಲೆತುಂಬ ಬಳಗವಿದ್ದರೂ ತನ್ನೊಡಲ ಉರಿ ಅವರ ತಟ್ಟದಂತೆ ತಾನೇ ನುಂಗಿಕೊಂಡು ನಕ್ಕಳು ಹುಡುಗಿ.
ಹತ್ತಾರು ವರ್ಷಗಳು ಒಪ್ಪವಿಲ್ಲದಿದ್ದರೂ ಒಪ್ಪಿಕೊಂಡು ಬಾಳುವ ತಪಸ್ಸು. ಇವಳ ದಾರಿಗೆ ಜೊತೆಜೊತೆಯಾಗಿ ಹೆಜ್ಜೆಯಿಕ್ಕಲು ಹದವಾಗಿದ್ದ ಸಂಗಾತಿ. ಎಲ್ಲ ದುಷ್ಚಟಗಳ ಬಲೆ ಹರಿದುಕೊಂಡು ಪಕ್ಕಾಗಿದ್ದ. ಈಗ ಕಸ್ತೂರಿಯದು ನೆಮ್ಮದಿಯ ಬದುಕು. ಕಣ್ಮುಂದೆ ಆಡುವ ಮಗ ಮಗಳನ್ನು ಓದಿಸಿ ಅವರಿಗೆ ಸುಂದರ ಬದುಕು ಕಟ್ಟಿಕೊಡುವದೊಂದೇ ಎದುರಿನ ಗುರಿ. ಅವಳ ನೋವಿನ ದಿನಗಳು ನಿಧಾನಕ್ಕೆ ಮಗ್ಗಲು ಹೊರಳತೊಡಗಿದ್ದವು. ನಾಲ್ಕಕ್ಕೆ ಎದ್ದು ಮಕ್ಕಳಿಗೊಂದಿಷ್ಟು ಬೇಯಿಸಿಟ್ಟು ತಾನೇ ಮುಂದಾಗಿ ಸಂಗಾತಿಯ ಹಿಂದಿಟ್ಟುಕೊಂಡು ಆರುಗಂಟೆಗೆ ಫೆಕ್ಟರಿ ಕೆಲಸಕ್ಕೆ ಹೋಗುತ್ತಾಳೆ. ಸಂಜೆ ಆರಕ್ಕೆ ಮತ್ತೆ ಮನೆಯತ್ತ ದಾಪುಗಾಲಿಡುತ್ತಾಳೆ. ಅನ್ನಕ್ಕೆ ಎಸರಿಟ್ಟು ಚಾ ಕಾಸಿಕೊಂಡು ಗಂಡ ಮಕ್ಕಳನ್ನು ಮುಂದೆ ಕೂರಿಸಿಕೊಂಡು ಗಂಡ ತಂದ ಕುರುಕಲು ತಿಂಡಿ ಹಂಚಿ ಅವರ ಲೋಟಗಳಿಗೆ ಬಿಸಿಬಿಸಿ ಚಾ ಬಸಿಯುತ್ತಾಳೆ. ತಾನೊಂದು ಲೋಟ ಹೀರುತ್ತ ಎದುರಿನ ಕಂಬಕ್ಕೊರಗಿ ಕೂರುತ್ತಾಳೆ. ಅಪ್ಪ ಮಕ್ಕಳು ಬಳಸಿ ಕೂತು ಲಲ್ಲೆಗರೆವ ಆ ಕ್ಷಣಗಳು ಅವಳ ಬದುಕಿನ ಪರಮ ಸಂತಸದ ಕ್ಷಣಗಳು.
ಕಾಲ ಮತ್ತೊಮ್ಮೆ ಮಗುಚಿಕೊಂಡಿದೆ. ಕಸ್ತೂರಿಯ ಹೊಂಗನಸುಗಳನ್ನೆಲ್ಲ ಅವಳ ಗಂಡನ ಕೆನ್ಸರ್ ಎಂಬ ಮಹಾಮಾರಿ ನುಂಗಿ ನೀರು ಕುಡಿದಿದೆ. ಮತ್ತೆ ಮೂರು ತಿಂಗಳಿಂದ ದೂರದೂರಿನ ಆಸ್ಪತ್ರೆಯ 'ಐಸಿಯು' ದ ಹೊರಜಗುಲಿಯ ಮೇಲೆ ಮುಳ್ಳಿನ ಮೇಲೆ ನಡೆದಂತೆ ನಡೆದಾಡುತ್ತ, ಮೆಡಿಸಿನ್ ಕೌಂಟರ್ ನ ಎದುರು ಚೀಟಿ ಹಿಡಿದು ನಿಲ್ಲುತ್ತ, ಜನರಲ್ ವಾರ್ಡನ ಮಂಚದ ಮೂಲೆಯಲ್ಲಿ ಮುದುಡಿ ಕೂಡ್ರುತ್ತ, ಇರುಳೆಲ್ಲ ಕನವರಿಸಿ ಏಳುತ್ತ ಕಳೆಯುತ್ತಿದ್ದಾಳೆ ಹೆಣ್ಣು. ಹೆಣಗಾಡಿ ಕಟ್ಟಿಕೊಂಡ ಪುಟ್ಟ ಮನೆಯ ಕೈಸಾಲದ ಕಂತು ಕಟ್ಟಲು ಹರೆಯದ ಮಕ್ಕಳ ಬಟ್ಟೆ ಹೊಟ್ಟೆ ಶಾಲಾಶುಲ್ಕಗಳಿಗೆಲ್ಲ ಇರುವದು ದುಡಿಮೆಯೊಂದೇ ದಾರಿ. ಅವಳು ಆಸ್ಪತ್ರೆಯಲ್ಲಿ ಕೂತಿದ್ದಾಳೆ. ಸಧ್ಯಕ್ಕೆ ದಮಡಿಯ ಆದಾಯವೂ ಇಲ್ಲ. ಮತ್ತೆ ಅವುಡುಗಚ್ಚಿ ಗಟ್ಟಯಾಗಿದ್ದಾಳೆ ಹುಡುಗಿ. ಮೈಮೇಲಿನ ಚಿನ್ನದ ಚೂರುಗಳನ್ನೆಲ್ಲ ಬೆಂಕಿನ ಬಾಯಿಗೆ ಸುರಿದು ಹಣ ಹೊಂದಿಸಿಕೊಂಡಿದ್ದಾಳೆ. ನಿತ್ಯ ಒಂದೇ ಪ್ರಾರ್ಥನೆ ದೇವರೆ ನನ್ನ ಗಂಡನಿಗೆ ಗುಣವಾಗಿ ನನ್ನ ಕಣ್ಣೆದುರು ಆರಾಮಾಗಿ ನಗ್ತಾ ಕೂತಿದ್ದರೆ ಸಾಕು. ನಾನು ದುಡಿದು ಸಾಕುತ್ತೇನೆ. ಇನ್ನೇನು ನಾಲ್ಕಾರು ವರ್ಷ. ನನ್ನ ಮಕ್ಕಳು ನನ್ನ ನೆರವಿಗೆ ಬರುತ್ತಾರೆ. ತನಗೆ ತಾನೆ ಧೃತಿ ತುಂಬಿಕೊಳ್ಳುತ್ತಾಳೆ.– ಮಗಳು ಅಳಿಯನ್ನ ನೋಡಿಕೊಂಡು ಬರಬೇಕೆಂದು ಲೇಡಿಸ್ ಭೋಗಿಯಲ್ಲಿ ಕೂತ ಕಸ್ತೂರಿಯ ಹೆತ್ತಮ್ಮ ಕಥೆ ಮುಗಿಸಿದಳು. "ಕಿಸ್ ಮಿಟ್ಟಿ ಸೇ ಬನೀ ಹೈ ಯೇ
ಔರತ್ ನಾಮ್ ಕಿ ಚೀಜ್. ಮತ್ತೆ ದೇವರೇ ಒಮ್ಮೊಮ್ಮೆ ನೀನೇಕೆ ಇಷ್ಟೊಂದು ನಿಷ್ಕರುಣಿಯಾಗುತ್ತೀಯಾ?" ಅಂದುಕೊಳ್ಳುತ್ತ ಈಚೆ ತಿರುಗಿದರೆ…..
ಆಚೆ ಸೀಟಿನಮೇಲೆ ಕೂತ ಐವತ್ತರ ಆಚೆಈಚಿನ ನಗುವಿನ ಮುದ್ದೆಯನ್ನೇ ನುಲಿದ ಮಾಡಿದಂತಿರುವ ಮುದ್ದುಮುದ್ದಾದ ಮುಖದ ಕೆಥೊಲಿಕ್ ಮತದ ಹೆಣ್ಣು ಹರಿವ ತೊರೆಯಂತೆ ಬಳಬಳ ಮಾತಾಡುತ್ತಿದ್ದಳು. ಅತ್ತ ಕಿವಿಬಿಟ್ಟೆ. "ತನ್ನದೇ ಧರ್ಮದ ಲೋಪ ದೋಷಗಳನ್ನು ಪಟ್ಟಿಮಾಡುತ್ತ ದೇವರು ಧರ್ಮಗಳನ್ನೆಲ್ಲ ಗುತ್ತಿಗೆ ಪಡೆದು ತಲೆಮೇಲೆ ಹೊತ್ತುಕೊಂಡವರೆಲ್ಲ ನಮ್ಮನಮ್ಮಲ್ಲಿ ಭೇದವ ಬಿತ್ತಿ ಸುಖಿಸುವವರೇ ಹೊರತು ನಮ್ಮ ಉದ್ಧಾರಕ್ಕೆ ಬಂದವರಲ್ಲ. ನನ್ನ ಮಕ್ಕಳನ್ನ ಮಾನವೀಯತೆಯೊಂದೇ ಧರ್ಮ, ಹೆಣ್ಣು ಗಂಡು ಎರಡೇ ಜಾತಿ ಎಂಬ ತಿಳುವಳಿಕೆ ತುಂಬಿಯೇ ಬೆಳಸಿದ್ದೇನೆ. ನನ್ನ ಮಕ್ಕಳು ನಮ್ಮ ನೆರೆಹೊರೆಯ ಎಲ್ಲ ಧರ್ಮಗಳ ಹಬ್ಬಗಳ ಆಚರಣೆಯಲ್ಲಿ ಭಾಗಿಯಾಗ್ತಾರೆ. ಎಲ್ಲರ ಕಷ್ಟಸುಖಗಳಿಗೆ ಸ್ಪಂಧಿಸುತ್ತಾರೆ.
ಹೊರಗಿನ ಯಾವುದೇ ಗಾಳಿಗೂ ನನ್ನ ಮಕ್ಕಳ ಆಂತರ್ಯವನ್ನು ಬದಲಿಸೋಕೆ ಆಗದು. ಹಾಗೆ ಬೆಳಸಿದ್ದೇನೆ. ಎಂದು ಎದೆಯುಬ್ಬಿಸಿ ನುಡಿಯುತ್ತಿದ್ದಳು. ಸುತ್ತಲಿನವರು ತಲೆಯಾಡಿಸಿ ಮಗ್ನವಾಗಿ ಕೇಳುತ್ತ ಕೂತಿದ್ದರು. ತೀರಾ ಸಾಮಾನ್ಯ ಹೆಣ್ಣು. ಎಷ್ಟೊಂದು ಉನ್ನತ ವಿಚಾರಗಳು. ಲೋಪಗಳು ದೋಷಗಳು ಎಲ್ಲ ಧರ್ಮಗಳ ದೌರ್ಬಲ್ಯ. ಜಗತ್ತಿನ ಎಲ್ಲ ಹೆಣ್ಣುಗಳು ಅದನ್ನು ಎತ್ತಿ ಹೇಳುವ ಗಟ್ಟಿಗಿತ್ತಿಯರಾದಾಗ ಜಗತ್ತಿನ ಎಲ್ಲ ಧರ್ಮಗಳು ಮಾನವೀಯತೆಯೆಂಬ ಹೊಸ ಧರ್ಮದಲ್ಲಿ ಲೀನವಾಗುವ ಅದ್ಭುತವನ್ನು ಜಗತ್ತು ಕಂಡೀತು. ಆ ಕಾಲ ಬರಬಹುದೇ? ಬೇಗಬರಲಿ ದೇವರೇ ಎಂದುಕೊಳ್ಳುತ್ತೇನೆ. ನನ್ನ ಗಮ್ಯ ಬಂತು. "ನಿಜಕ್ಕೂ ಅಮ್ಮಂದಿರೇ, ಒಂದಾಗಿ ಬಾಳಬೇಕೆನ್ನುವ ನಮ್ಮ ನಿರೀಕ್ಷೆಗಳೆಲ್ಲ ನಿಮ್ಮಲ್ಲೇ ನೆಟ್ಟಿವೆ." ಎಂದುಕೊಳ್ಳುತ್ತ ಅಲ್ಲಿ ಕೂತ ಹೆಣ್ಣುಗಳೆಡೆಗೆ ಕೈಬೀಸಿ ಕೆಳಗಿಳಿದೆ.
ಪ್ಲಾಟಫಾರ್ಮ ಮೇಲೆ ಯಾರೋ ಬಿಟ್ಟುಹೋದ ಅಗಷ್ಟೇ ಕಣ್ತೆರೆದ ಪುಟ್ಟ ತೀರಾ ಪುಟ್ಟ ಬೆಕ್ಕಿನಮರಿ, ಮುರುಟಿ ಮಲಗಿದ ಹೆಣ್ಣು ನಾಯಿಯ ಸುತ್ತ ನುಲಿಯುತ್ತ ಉಲಿಯುತ್ತ ಮೈ ಹೊಸೆಯುತ್ತ ಅದರ ಹೊಟ್ಟೆಯೊಳಗೆ ಬೆಚ್ಚಗೆ ಹೊಕ್ಕಿಕೊಳ್ಳುವ ಕಾಯಕದಲ್ಲಿ ಮಗ್ನವಾಗಿತ್ತು. ಹೆಣ್ಣುನಾಯಿ ತನ್ನೆರಡೂ ಮುಂಗಾಲುಗಳಲ್ಲಿ ತನ್ನದಲ್ಲದ ಕಂದಮ್ಮನ ಬಾಚಿ ಎದೆಗೆ ಅವುಚಿಕೊಳ್ಳುತಿತ್ತು. ನಾನು ಭೂತ ಭವಿಷ್ಯ ವರ್ತಮಾನಗಳ ಮರೆತು ನೋಡುತ್ತ ನಿಂತೆ. ಹಿಂದಿನ ಪ್ರಯಾಣಿಕರು ಮೈಹೊಸೆದುಕೊಂಡು ಹೋದಾಗ ಎಚ್ಚತ್ತುಕೊಂಡೆ. ಕಿಟಕಿಯ ಪಕ್ಕ ಕೂತ ಕೆಥೊಲಿಕ್ ಹೆಣ್ಣಿನ ಕೈತಟ್ಟಿ ಆ ದೃಶ್ಯ ತೋರಿಸಿದೆ. ಎಲ್ಲ ಹೆಣ್ಣುಗಳು ಕಿಡಕಿಯಿಂದ ಇಣುಕಿ ಮತ್ತೆಮತ್ತೆ ನೋಡಿದರು. ನಾವು ತಾಯಂದಿರು, ನಮಗೆ ಅ ದೃಶ್ಯ ಇಷ್ಟದೇವರ ಮೆರವಣಿಗೆಗಿಂತ ಹಿತವಾದದ್ದು. ಟ್ರೇನು ಸರಿದು ಹೋಯಿತು. ನಾನು ನೋಡುತ್ತಲೇ ಇದ್ದೆ. ಹಸುಕೂಸನ್ನು ಬಿಟ್ಟುಹೋದ ನನ್ನಂಥ ಮನುಷ್ಯರನ್ನೂ ಸಹಜ ವೈರವ ಮರೆತು ಒಲವೂಡಿದ ತಾಯಿನಾಯಿಯನ್ನೂ ತೂಗಿನೋಡುತ್ತಿತ್ತು ಮನಸ್ಸು. ಪಕ್ಕದ ಟಿ ಸ್ಟಾಲ್ ಒಳಗಿನ ಎಫಎಮ್ ರೇಡಿಯೋದಿಂದ ಮಾನವ ಶ್ರೇಷ್ಠ ಕನಕದಾಸರ ಹಾಡು–
ಕುಲಕುಲಕುಲ ಎಂದು ಹೊಡೆದಾಡದಿರು ಮನುಜ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಬಲ್ಲಿರಾ ? ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ.. ತೂರಿಬರುತ್ತಿತ್ತು.
ಪೂರ್ತಿ ಕೇಳಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ರಿಕ್ಷಾಸ್ಟೆಂಡಿನ ದಿಕ್ಕಿಗೆ ಮುಖಮಾಡಿ ಓಡುತ್ತೇನೆ.
-ಪ್ರೇಮಾ ಟಿ ಎಮ್ ಆರ್
ಒಬ್ಬ ಹೆಣ್ಣುಮಗಳ ದೃಷ್ಠಿಯ ಜಗತ್ತಿಗೂ ಗಂಡಸಿನ ಜಗತ್ತಿಗೂ ಎಷ್ಟೊಂದು ವ್ಯತ್ಯಾಸ….!