(ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು)
ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ ಪಾಪನಾಶಿನಿಯಾದ ಕಾವೇರಿಯಲ್ಲಿ ಮಿಂದು, ಗೋಜನನದ ಮೂಲಕ ಶಿಲೆಯ ರೂಪದಲ್ಲಿದ್ದ ಕಾಮಧೇನುವಿಗೆ ಶಾಪವಿಮೋಚನೆ ಮಾಡಿ, ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಎಂಬ ಐತಿಹ್ಯವಿರುವ ಈಗಿನ ರಾಮನಾಥಪುರವು, ಪೌರಾಣಿಕ, ಐತಿಹಾಸಿಕ ಮಹತ್ವವನ್ನು ಹೊಂದಿದ ಪುಣ್ಯಕ್ಷೇತ್ರವಾಗಿದೆ. ವಿಶೇಷ ದಿನ ಮಾಸಗಳಲ್ಲಿ, ವಿಶೇಷ ಪೂಜೆ, ಜಾತ್ರಾ ಮಹೋತ್ಸವಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಭಕ್ತರಿಂದ "ದಕ್ಷಿಣ ಕಾಶಿ" ಎಂದೇ ಜನಜನಿತವಾಗಿದೆ. ಜೀವ ನದಿ ಕಾವೇರಿಯ ಋಷಿ ಪತಿಯಾದ ಅಗಸ್ತ್ಯೇಶ್ವರನ ನೆಲೆವೀಡಾಗಿರುವ ಈ ಸುಕ್ಷೇತ್ರವು ಇಂದಿಗೂ ತನ್ನ ಭಕ್ತ ಜನಾಕರ್ಷಣೆಯನ್ನು ಹಾಗೇ ವೃದ್ಧಿಸಿಕೊಳ್ಳುತ್ತಾ ಕ್ಷೇತ್ರ ಮಹಿಮೆಯ ಮಹತ್ವವನ್ನು ಕಾಯ್ದುಕೊಂಡಿದೆ. ರೈತಾಪಿ ಬಂಧುಗಳಿಗೆ ಜಾನುವಾರುಗಳನ್ನು ವಿಕ್ರಯಿಸಿಕೊಳ್ಳಲು ವೇದಿಕೆಯಾಗುವ "ದನಗಳ ಜಾತ್ರೆ"ಯು ಬಹಳ ಪ್ರಸಿದ್ಧವಾಗಿದೆ. ಕಾರ್ತೀಕ ಮಾಸ ಕಳೆದು ಮಾರ್ಗಶಿರ ಮಾಸ ಹತ್ತಿರವಾಗುತ್ತಿದ್ದಂತೆ ಈ ಕ್ಷೇತ್ರದ ಜಾತ್ರಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗಿ ಷಷ್ಠಿಯ ದಿನದಂದು ಅದ್ದೂರಿಯಾಗಿ ಸಾವಿರಾರು ಭಕ್ತರ ಭಕ್ತಿ ಸಂಗಮದಲ್ಲಿ "ವೈಭವದ ರಥೋತ್ಸವ" ಜರುಗುತ್ತದೆ. ಈ ದಿನದ ಹೊತ್ತಿಗೆ ನೂರಾರು ಜಾತ್ರಾ ಸಿಹಿ ತಿನಿಸುಗಳ ಅಂಗಡಿ ಮಳಿಗೆಗಳು, ಹೆಂಗಸರು ಮಕ್ಕಳನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಬ್ಯಾಂಗಲ್ ಸ್ಟೋರ್ಸ್, ಬಗೆ ಬಗೆಯ ಆಟಿಕೆಗಳ ಅಂಗಡಿಗಳು, ಅದೃಷ್ಟ ಪರೀಕ್ಷೆಯ ಆಟದ ಅಂಕಣಗಳು, ತಂಪು ಪಾನೀಯ, ಕಬ್ಬಿನ ಹಾಲು, ಐಸ್ ಕ್ರೀಮ್ ಶಾಪ್ ಗಳು ತಮ್ಮ ವಿವಿಧ ತಂತ್ರಗಾರಿಕೆಯ ಮೂಲಕ ಭಕ್ತ ಗ್ರಾಹಕರನ್ನು ಸೆಳೆಯಲು ಸನ್ನದ್ಧವಾಗುತ್ತವೆ. ಪ್ರಸನ್ನ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲದ ಅಕ್ಕ ಪಕ್ಕದಲ್ಲಿ ಹೂವು, ಹಣ್ಣು,ಕಾಯಿ, ಜವನ, ಕಜ್ಜಿ ತುರಿಕೆ ಮತ್ತು ನಾಗರ ಸೆಡೆಯಂತಹ ಹರಕೆ ಪರಿಕರಗಳನ್ನು ಮಾರುವ ವರ್ತಕರು ತುಂಬಾ ಬ್ಯುಸಿಯಾಗುತ್ತಾರೆ. ಒಂದೆಡೆ ವ್ಯಾಸರಾಯ ಪ್ರತಿಷ್ಠಾಪಿತ ಶ್ರೀವೀರಾಂಜನೇಯ ಸ್ವಾಮಿ(ವ್ಯಾಸಾಂಜನೇಯ) ಹಾಗೂ ಮತ್ತೊಂದೆಡೆ ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ಸ್ವಾಮಿ, ರಾಮಲಿಂಗಶ್ವರ, ಪಟ್ಟಾಭಿರಾಮ, ಅಗಸ್ತ್ಯೇಶ್ವರ ಮುಂತಾದ ದೇಗುಲಗಳು ತಾಲ್ಲೂಕು ಆಡಳಿತ ಮತ್ತು ಸ್ಥಳೀಯ ಪ್ರಸನ್ನ ಸುಬ್ರಹ್ಮಣ್ಯೇಶ್ವರ ಸೇವಾ ಸಮಿತಿಗಳ ಮೂಲಕ ಸುಣ್ಣ ಬಣ್ಣ ,ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತವೆ. ಜೊತೆಗೆ ಭಕ್ತರಿಗೆ ಬೇಕಾದ ಮೂಲಭೂತ ಅಗತ್ಯಗಳಾದ ಶುದ್ಧ ಕುಡಿಯುವ ನೀರು, ವಾಹನ ನಿಲುಗಡೆ ವ್ಯವಸ್ಥೆ, ಪಾದರಕ್ಷೆ ಕೌಂಟರ್, ಸೇವಾಸಕ್ತರಿಂದ ಅನ್ನದಾಸೋಹ, ಪ್ರಸಾದ ಮುಂತಾದವುಗಳನ್ನು ಪೂರೈಸಲು ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತಜನ ಸಾಗರವನ್ನು ನಿಯಂತ್ರಿಸಿ ನಿರ್ವಹಿಸಲು ಸೂಕ್ತ ಆರಕ್ಷಕ ಸಿಬ್ಫಂದಿಯನ್ನೂ ನಿಯೋಜಿಸಲಾಗುತ್ತದೆ. ಅವರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳೀಯ ಸಾರಿಗೆ ಘಟಕವು ವಿಶೇಷ ಬಸ್ ಗಳನ್ನು ವ್ಯವಸ್ಥೆ ಮಾಡುತ್ತದೆ. ಅರಕಲಗೂಡು ಹಾಗೂ ಸುತ್ತಮುತ್ತಲ ತಾಲ್ಲೂಕುಗಳ ಮತ್ತು ಸ್ಥಳೀಯ ಊರುಗಳ ಭಕ್ತರೇ ಹೆಚ್ಚಾಗಿ ಆಗಮಿಸುವ ಈ ಜಾತ್ರೆಯ ಮಹಾವೈಭವವನ್ನು ಕಣ್ತುಂಬಿಸಿಕೊಳ್ಳುವುದೇ ದಿವ್ಯವಾದ ಸಂಭ್ರಮ ಉಂಟು ಮಾಡುತ್ತದೆ. ನವ ವಧು-ವರರು ತೇರಿನ ಮೇಲೆ ಹಣ್ಣು ಕಾಯಿ ಜವನಗಳನ್ನು ಎಸೆಯುತ್ತಾ ದೇವರಿಗೆ ಅರ್ಪಿಸಿದ ತೃಪ್ತ ಭಾವ ಹೊಂದುತ್ತಾರೆ.
ಅನ್ನದಾತರಿಗೆ ಆನಂದ ನೀಡುವ ಜಾತ್ರೆ
ಸುತ್ತ ಮುತ್ತಲ ಇಪ್ಪತ್ತಕ್ಕೂ ಹೆಚ್ಚು ಕಿ.ಮೀ.ದೂರದ ಊರುಗಳಿಂದ ರೈತಾಪಿ ಬಂಧುಗಳು ಎತ್ತಿನಗಾಡಿಯಲ್ಲಿ ಕುಟುಂಬಸ್ಥರು ಹಾಗೂ ನೆಂಟರಿಷ್ಟರೊಂದಿಗೆ ಬಂದು, ತಾಯಿ ಕಾವೇರಿಯ ಮಡಿಲಲ್ಲಿ ಮಿಂದು, ಗೋಗಲ್ಲಿನಲ್ಲಿ (ಗೋಗರ್ಭ ಶಿಲೆ) ಮುಳುಗು ಹಾಕಿ ಪಾಪ ನಾಶದ ಪುನೀತ ಭಾವ ಪಡೆಯುತ್ತಾರೆ. ಆನಂತರ ದೇವರ ದರ್ಶನ ಪಡೆದು, ಹರಕೆ ಕಾಣಿಕೆಗಳನ್ನು ಸಮರ್ಪಿಸಿದ ನಂತರ, ಒಂದೆಡೆ ಸೇರಿ ತಾವೇ ತಂದ ಮೊಸರನ್ನ, ಪುಳಿಯೊಗರೆ, ಅಕ್ಕಿರೊಟ್ಟಿ-ಕಾಯಿ ಚೆಟ್ನಿ ಸವಿಯುವ ಮೂಲಕ 'ಸಹ ಭೋಜನ'ದ ಸಾಮರಸ್ಯತೆಯನ್ನು ಸಾರುವ ಭೂತಾಯಿ ಮಕ್ಕಳ ಉತ್ಸಾಹ ಉಲ್ಲಾಸ ನೋಡುವುದೇ ವಿಶೇಷ ಆನಂದ ನೀಡುತ್ತದೆ. ಸದಾ ಭೂತಾಯಿಯ ಮಡಿಲಲ್ಲಿ ದುಡಿದು ಹೈರಾಣಾಗುವ ಅನ್ನದಾನೀ ಕುಟುಂಬಗಳಿಗೆ ಈ ಜಾತ್ರೆಯು 'ಹೊರ ಸಂಚಾರ'ದ ದಿವ್ಯಾನಂದಾನುಭವವನ್ನು ತುಂಬಿಕೊಡುತ್ತದೆ. ತಿಂಗಳು ಪೂರ್ತಿ ನಡೆಯುವ ಜಾತ್ರೆಯ ಭಕ್ತಿ ಸವಿಯನ್ನು ನಿತ್ಯವೂ ಆಸ್ವಾದಿಸುವ ಭಕ್ತರ ದಂಡು ಇಡೀ ಕ್ಷೇತ್ರವನ್ನು ಪೂಜೆ ಸೇವೆಗಳ ಚಟುವಟಿಕಾ ತಾಣವಾಗಿ ಮಾರ್ಪಡಿಸುತ್ತದೆ. ಆದರೆ ರಥೋತ್ಸವ ದಿನದಂದೇ ಹೆಚ್ಚಾಗಿ ಭಕ್ತರು ಪಾಲ್ಗೊಳ್ಳುವುದರಿಂದ ಆ ದಿನವನ್ನು ಯಶಸ್ವಿಯಾಗಿ ನಿಭಾಯಿಸಲು ದೇವಸ್ಥಾನ ಸಮಿತಿ ಹಾಗು ತಾಲ್ಲೂಕು ಆಡಳಿತವು ಹರಸಾಹಸ ಪಡುತ್ತದೆ.
ಬೆರಗು ಮೂಡಿಸುವ ಮೀನಿನ ತಟ:(ವಹ್ನಿ ಪುಷ್ಕರಣಿ)
ರಾಮಲಿಂಗೇಶ್ವರ ದೇಗುಲದ ಬದಿಯಲ್ಲಿರುವ ಕಾವೇರಿ ತೀರದಲ್ಲಿ ಸದಾ ತುಂಬಿ ಶುಭ್ರ ನೀರಿನಲ್ಲಿ ಆಟವಾಡುವ ದೊಡ್ಡ ಗಾತ್ರದ ಮತ್ಸ್ಯ ಸಂಕುಲವನ್ನು ನೋಡುವ ಸೊಬಗು ಮಕ್ಕಳ ಪಾಲಿಗೆ ಆಕರ್ಷಣೆಯಾಗಿದೆ. ಆ ಅಪಾರ ಸಂಖ್ಯೆಯ ಮೀನುಗಳಿಗೆ ಕಡ್ಲೆಕಾಯಿ, ಜೋಳದ ಪುರಿ, ಬಿಸ್ಕತ್, ಕಡ್ಲೆಪುರಿ ಮುಂತಾದ ತಿನಿಸುಗಳನ್ನು ಪೋಷಕರೊಂದಿಗೆ ಹಾಕುತ್ತಾ, ಆಹಾರದೆಡೆಗೆ ನುಗ್ಗುವ ಮೀನುಗಳ ಆಟವನ್ನು ನೋಡುತ್ತ ರಂಜನೆ ಮತ್ತು ಕುತೂಹಲ ಹೊಂದುವ ಪುಟ್ಟ ಮಕ್ಕಳು ತನ್ಮಯರಾಗಿ ನೋಡುತ್ತಾ ಬೆರಗುಗೊಳ್ಳುತ್ತಾರೆ. ಇಲ್ಲಿ ಮೀನುಗಳನ್ನು ನೋಯಿಸುವುದು, ಹಿಡಿಯುವುದು, ಹಾಗೂ ಕೊಲ್ಲುವುದನ್ನು ಶಾಸನ ಬದ್ಧವಾಗಿ ನಿಷೇಧಿಸಿರುವುದರಿಂದ ಇಂದಿಗೂ ಆ ಅಪಾರ ಮತ್ಸ್ಯ ಸಂಪತ್ತು ಉಳಿದುಕೊಂಡಿರುವುದು ಇಲ್ಲಿನ ವಿಶೇಷವಾಗಿದೆ. ಮೈಸೂರು ಒಡೆಯರ ಆಳ್ವಿಕೆಯ ಕಾಲದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಇಲ್ಲಿನ ಕೆಲವು ಮೀನುಗಳಿಗೆ ಮುತ್ತಿನ ಮೂಗುತಿಗಳನ್ನು ತೊಡಿಸಿದ್ದರೆಂಬ ಪ್ರತೀತಿ ಇದ್ದು, ದೈವಾನುಗ್ರಹದಿಂದ ಆ ಮೀನುಗಳು ಈಗಲೂ ಸದ್ಭಕ್ತರಿಗೆ ದರ್ಶನ ನೀಡುತ್ತವೆ ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಕಣ್ಮರೆಯಾಗಿರುವ ಟೆಂಟ್ ಸಿನೆಮಾ ರಂಜನೆ
ಎಂಭತ್ತರ ದಶಕದ ಆಸುಪಾಸಿನಲ್ಲಿ ರಾಮನಾಥಪುರ ಜಾತ್ರೆ ಸಮೀಪಿಸುತ್ತಿದ್ದಂತೆ ಟೆಂಟ್ ಸಿನೆಮಾ ಪ್ರದರ್ಶನವು ಎರಡು ಮೂರು ಕಡೆ ತಿಂಗಳಾನುಗಟ್ಟಲೆ ಏರ್ಪಾಡಾಗುತ್ತಿತ್ತು. ದನಗಳ ಜಾತ್ರೆ, ಷಷ್ಠಿ ತೇರು, ತಿಂಗಳ ಪೂರ್ತಿ ಜಾತ್ರೆ, ಕೊನೆಗೆ ತಿಂಗಳ ತೇರು ಮುಗಿಯುವವರೆಗೂ ಗ್ರಾಮೀಣ ಜನರು ನೂಕು ನುಗ್ಗಲಿನಲ್ಲಿ ಟಿಕೇಟ್ ಪಡೆದು ಸಾಕಾದರೂ ಬಿಡದೆ ಮನೆ ಮಂದಿಯೆಲ್ಲ ಬಬ್ರುವಾಹನ, ಕರುಣಾಮಯಿ, ಮಯೂರ, ಹುಲಿಯ ಹಾಲಿನ ಮೇವು ಮುಂತಾದ ಮೌಲಿಕ ಸಿನೆಮಾಗಳನ್ನು ನೋಡಿಕೊಂಡೇ ಸರಿ ರಾತ್ರಿಯಾದರೂ ಬೇಸರವಿಲ್ಲದೆ ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದರು. ಆಗಿನ ಕಾಲಕ್ಕೆ ಈಗಿರುವ ತಂತ್ರಜ್ಜಾನದ ಅನುಕೂಲತೆಗಳು ಇರಲಿಲ್ಲವಾದ್ದರಿಂದ ಜಾತ್ರೆಯನ್ನು ಬಹಳ ಸಂತೋಷದಾಯಕವಾಗಿ ಅನುಭವಿಸುತ್ತಿದ್ದರು. ಮನೆ ಮನೆಗೂ ಟಿವಿ, ಪ್ರತಿಯೊಬ್ಬರ ಕೈಗೂ ಮೊಬೈಲ್ ಗಳು ಬಂದಿರುವ ಈ ಕಾಲಘಟ್ಟದಲ್ಲಿ ನಡೆಯುತ್ತಿರುವ ಜಾತ್ರೆಯ ಸ್ವರೂಪವು ಬಹುತೇಕ ಬದಲಾಗಿರುವುದು ಸುಳ್ಳಲ್ಲ.
ಕಣ್ಮರೆಯಾಗಿರುವ ಜಾತ್ರೆಯ ಸೊಬಗಿನ ಪ್ರಮುಖ ಅಂಶಗಳು
➡ಕಾದು ಕುಳಿತು ಸಿನೆಮಾ ನೋಡುವ ಸಹನೆ ಯಾರಿಗೂ ಇಲ್ಲವಾಗಿದೆ.
➡ಯಂತ್ರೋಪಕರಣಗಳಿಂದ ಬೇಸಾಯ ಮಾಡುವ ಸುಲಭೋಪಾಯ ಬಂದಮೇಲೆ ಎತ್ತು ದನಕರುಗಳನ್ನು ಶ್ರದ್ಧೆ ಆಸಕ್ತಿಯಿಂದ ಪಾಲನೆ ಮಾಡುವ ವ್ಯವಧಾನ ರೈತಾಪಿ ಬಂಧುಗಳಲ್ಲಿ ತೀವ್ರವಾಗಿ ಕ್ಷೀಣಿಸಿದೆ.
➡ಟ್ರ್ಯಾಕ್ಟರ್, ಜೀಪು ಬಸ್ ಗಳ ಸಂಚಾರ ಹೆಚ್ಚಾಗಿರುವುದರಿಂದ ಎತ್ತಿನ ಗಾಡಿಗಳಲ್ಲಿ ನಿದ್ರೆಗೆಟ್ಟು, ಮೈಕೈ ನೋಯಿಸಿಕೊಂಡು, ಕಾಲ ಹರಣ ಮಾಡಿ ಜಾತ್ರೆಗೆ ಬರುವ ಸಹನಾಶೀಲ ಮನಸ್ಥಿತಿ, ಅನಿವಾರ್ಯತೆ ಈಗಿನ ಜಮಾನದ ಪೀಳಿಗೆಯವರಲ್ಲಿ ಇಲ್ಲವಾಗಿದೆ.
➡ದೇವರು, ಭಕ್ತಿ ಜಾತ್ರೆ,ಆಚರಣೆಯಂತಹ ವಿಷಯಗಳಲ್ಲಿ ಜನರಿಗೆ ಆಸಕ್ತಿ ಶ್ರದ್ಧೆ ಕಡಿಮೆಯಾಗಿ ಅನುಕೂಲಕ್ಕೆ ತಕ್ಕ ಆಡಂಬರ ಆಚರಣೆಗಳು ಮಾತ್ರ ಮೇಳೈಸುತ್ತಿವೆ.
➡ನಾಟಕ, ಸಿನೆಮಾ, ಹರಿಕಥೆಯಂತಹ ಮನೋರಂಜನಾ ಚಟುವಟಿಕೆಗಳಲ್ಲಿ ಜನರ ಆಸಕ್ತಿ ಪ್ರಪಾತಕ್ಕೆ ಕುಸಿದಿದೆ.
ಹೀಗೆ "ರಾಮನಾಥಪುರ ಜಾತ್ರೆ" ಎಂದರೆ ಗರಿಗೆದರುತ್ತಿದ್ದ ಉತ್ಸಾಹ ಆನಂದ ಶ್ರದ್ಧೆ ಆಸಕ್ತಿಯ ಭಾವಗಳಿಗೆ ಈಗ ಅಭಾವ ಬಂದಿದೆ. ಕಾಲ ಗರ್ಭದಲ್ಲಿ ಆಗಿ ಹೋಗುವ ಸ್ಥಿತ್ಯಂತರಗಳಿಗೆ ತಕ್ಕಂತೆ ಬದಲಾಗಬೇಕಾದ ಅಗತ್ಯವಿದ್ದರೂ, ಕೆಲವು ವಿಚಾರಗಳಲ್ಲಿ ಅನಿವಾರ್ಯವೇನಲ್ಲ ಎಂದು ಹಿರಿಯ ತಲೆಮಾರಿನವರು ವ್ಯಥೆ ಪಡುತ್ತ ಆಗಿನ ಜಾತ್ರಾ ವೈಭವವನ್ನು ಈಗಲೂ ನಿನೆಯುತ್ತ ಮುದಗೊಳ್ಳುತ್ತಾರೆ.
ಏನೇ ಆಗಿರಲಿ, ರಾಮನಾಥಪುರ ಜಾತ್ರೆಯ ಮೂಲ ವೈಭವ ಕಡಿಮೆಯಾಗಿದ್ದರೂ, ಆಧುನಿಕ ಸೌಲಭ್ಯಗಳ ಸ್ಪರ್ಶದೊಂದಿಗೆ ನಡೆಯುವ ಅದ್ದೂರಿತನಕ್ಕೇನೂ ಕೊರತೆ ಉಂಟಾಗಿಲ್ಲವೆಂಬುದೇ ಸಮಾಧಾನಕರ ಅಂಶವಾಗಿದೆ.
ಜಾತ್ರೆ ಮತ್ತದರ ಸೊಗಡಿನ ಪರಿಚಯ ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದೀರ. ಹಳ್ಳಿ ಹಳ್ಳಿಗಳ ಬಾಂಧವ್ಯ, ಜನರ ಆ ದಿನಗಳಲ್ಲಿನ ಸಂಭ್ರಮ, ಅ ಮುಗ್ಧತೆಯ ಮನರಂಜನೆಗಳೆಲ್ಲ ವೇಗವಾಗಿ ಕಳೆದುಹೋಗುತ್ತಿರುವುದು ನಿಜ. ಮತ್ತೆ ಈ ಆಧುನಿಕತೆಯ ಭ್ರಮೆಯಲ್ಲಿ ನಮ್ಮ ಸಂಸ್ಕ್ರುತಿಯ ಈ ಒಂದು ಕೊಂಡಿ ಕಳಚಿಹೋಗುತ್ತಿರುವುದು ವಾಸ್ತವ. ಹಳೆಯ ವೈಭವವನ್ನು ನೆನೆದ ಲೇಖನ. ಲೇಖಕರಿಗೆ ಧನ್ಯವಾದಗಳು.