ರಾಮಕುಂಜದಿಂದ ರಾಷ್ಟ್ರ ಪ್ರಶಸ್ತಿಯವರೆಗೆ: ಹೊರಾ.ಪರಮೇಶ್ ಹೊಡೇನೂರು

(ನಾರಾಯಣ ಭಟ್ ಶಿಕ್ಷಕರ ಯಶೋಗಾಥೆ)
*************************
ಪ್ರತಿಯೊಬ್ಬರ ಬದುಕಿನಲ್ಲಿ ಪ್ರಭಾವ ಬೀರುವ ವ್ಯಕ್ತಿಗಳಲ್ಲಿ ತಾಯಿ ತಂದೆಯರದ್ದು ಒಂದು ರೀತಿಯದಾದರೆ, ಗುರುವಿನದ್ದು ಮತ್ತೊಂದು ಬಗೆಯದ್ದಾಗಿರುತ್ತದೆ. ಹೆತ್ತವರು ದೈಹಿಕ ಮತಾತು ಮಾನಸಿಕ ಸದೃಢತೆ ಸುರಕ್ಷತೆ ಮತ್ತು ಪೋಷಣೆಯ ಹೊಣೆ ನಿರ್ವಹಿಸಿದರೆ ಗುರುವು ಬೌದ್ಧಿಕ ಜ್ಞಾನ, ಅಕ್ಷರಾಭ್ಯಾಸದ ಜೊತೆಗೆ ಬದುಕಿಗೆ ಬೇಖಾದ ಮಾರ್ಗದರ್ಶನವನ್ನು ಒದಗಿಸುತ್ತಾರೆ. ಹಾಗಾಗಿಯೇ ಗುರುವಿನ ಸ್ಥಾನವು ಸಹಜವಾಗಿ ಸಮಾಜದಿಂದ ಗೌರವಕ್ಕೆ ಪಾತ್ರವಾಗುತ್ತದೆ. ಸ್ಥಾನ ಮಾತ್ರದಿಂದಲೇ ಗೌರವ ಪಡೆಯುವುದು ಒಂದು ರೀತಿಯದಾದರೆ, ವೃತ್ತಿ ನಿರ್ವಹಣಿಯ ವೈಖರಿಯಿಂದಲೂ ನಿಸ್ಪೃಹ ನಡತೆಯಿಂದಲೂ ಗುರುವಿಗೆ ಗೌರವ ಘನತೆ ಪ್ರಾಪ್ತವಾಗುತ್ತವೆ. ಆರಂಭದ ಗುರುಕುಲ ಪದ್ಧತಿಯ ಶಿಕ್ಷಣ ಕ್ರಮದಿಂದ ಈಗಿನ ಆಧುನಿಕ ಶಿಕ್ಷಣ ಪದ್ಧತಿಯವರೆಗೂ ಆಯಾ ಕಾಲ ಘಟ್ಟದ ಸ್ಥಿತ್ಯಂತರಗಳಿಗೆ ತಕ್ಕಂತೆ ಶಿಕ್ಷಣದ ಸ್ವರೂಪದ ಜೊತೆಗೆ ಗುರುವಿನ ಸ್ವರೂಪವೂ ಬದಲಾಗುತ್ತ ಬಂದಿದೆ. ಇಂತಹ ಮಹತ್ತರ ಬದಲಾವಣೆಯ ನಡುವೆಯೂ ತಮ್ಮ ಘನವಾದ ವ್ಯಕ್ತಿತ್ವ, ಅನನ್ಯ ಆಸಕ್ತಿ, ಅಚಲ ವಿಶ್ವಾಸ, ಸಾಮಾಜಿಕ ಕಳಕಳಿ ಮತ್ತು ಅದಮ್ಯವಾದ ಶೈಕ್ಷಣಿಕ ಕಾಳಜಿಯಿಂದ ಶಿಕ್ಷಕ ವೃತ್ತಿ ನಿರ್ವಹಿಸುತ್ತ ಸಾಧನೆ ಮಾಡುತ್ತಿರುವ ಗುರುಗಳು ಪ್ರಾತಃಸ್ಮರಣೀಯರಾಗಿ ಶಿಷ್ಯಕೋಟಿಗೆ ಸ್ಫೂರ್ತಿಯಾಗಿದ್ದಾರೆ. ಅಂಥವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜದ ನಾರಾಯಣ ಭಟ್ಟರು ಮುಂಚೂಣಿಯಲ್ಲಿ ನಿಲ್ಲುವ ಸಾಧಕರಲ್ಲಿ ಒಬ್ಬರಾಗಿದ್ದಾರೆ. ಒಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಯಶಸ್ಸು ಸಾಧಿಸಿರುವ ಅವರಿಗೆ ರಾಷ್ಟ್ರ ಪ್ರಶಸ್ತಿಯು ಪ್ರಾಪ್ತವಾಗಿರುವುದು ಅವರ ಸೇವಾ ನಿರ್ವಹಣೆಗೆ ಸಂದ ಗೌರವವಾಗಿದೆ.

ಶೈಕ್ಷಣಿಕ ನಾಯಕತ್ವ
———————
ಉಡುಪಿಯ ಪೇಜಾವರ ಶ್ರೀಗಳು ಬಾಲ್ಯದಲ್ಲಿ ವ್ಯಾಸಂಗ ಮಾಡಿದ ರಾಮಕುಂಜ ಎಂಬ ಪುಟ್ಟ ಹಳ್ಳಿಯ ಶ್ರೀರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಜೀರ್ಣೋದ್ಧಾರದ ಹೊಣೆಗಾರಿಕೆಯನ್ನು ತಮ್ಮ ಹದಿನೆಂಟನೇ ಪ್ರಾಯದಲ್ಲಿಯೇ ಶ್ರೀಗಳ ಆಶೀರ್ವಾದ ಹಾಗೂ ಒತ್ತಾಸೆಯಿಂದ ವಹಿಸಿಕೊಂಡ ನಾರಾಯಣ ಭಟ್ಟರು ಆ ಸಂಸ್ಥೆಯ ಉದ್ಧಾರವಷ್ಟೇ ಅಲ್ಲದೆ ಸುತ್ತ ಮುತ್ತಲ ಗ್ರಾಮಗಳ ಪಾಲಕರು ಶಿಕ್ಷಣಾಸಕ್ತರ ಮನಗೆಲ್ಲುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಆರಂಭದಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತ ಇನ್ನೇನು ಆ ಸಂಸ್ಥೆಯೂ ಮುಚ್ಚಿಹೋಗುವುದು ಅನಿವಾರ್ಯ ಎಂಬ ಸಂಕಷ್ಟ ಸ್ಥಿತಿಯಲ್ಲಿ ಭಟ್ಟರು ತಮ್ಮದೇ ವಿಶಿಷ್ಟ ತಂತ್ರೋಪಾಯಗಳನ್ನು ಅಳವಡಿಸಿ ಸಮುದಾಯದ ಆಕರ್ಷಣೆ ಪಡೆಯುವುದರೊಂದಿಗೆ ಸಂಸ್ಥೆಯನ್ನು ವಿದ್ಯಾಲಯವಾಗಿ ಮರುಜೀವ ನೀಡುವ ಮಹತ್ಕಾರ್ಯ ಮಾಡಿರುವುದು ಅವರ ಶೈಕ್ಷಣಿಕ ಕಾಳಜಿ ಮತ್ತು ಸಮರ್ಥ ನಾಯಕತ್ವವನ್ನು ಶ್ರುತಪಡಿಸಿದೆ. ಇಂದು ಅವರ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಗೆ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದ್ದು ರಾಜ್ಯದಾದ್ಯಂತ ಇರುವ ಎಲ್ಲ ಶಾಲಾ ಕಾಲೇಜುಗಳಿಗೂ ಸ್ಫೂರ್ತಿ ಚೇತನವಾಗುವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ಒಂದು ಉತ್ತಮ ಶಾಲೆಯು ಹೇಗಿರಬೇಕೆಂಬ ಬಗ್ಗೆ ತಮ್ಮದೇ ಕನಸು ಹೊಂದಿದ್ದ ನಾರಾಯಣ ಭಟ್ಟರು ಆ ನಿಟ್ಟಿನ ತಮ್ಮ ಪರಿಕಲ್ಪನೆಗಳೆಲ್ಲವನ್ನೂ ಶಾಲೆಯಲ್ಲಿ ಜೀವಂತಗೊಳಿಸಿದ್ದಾರೆ. ಶಾಲಾ ಕೊಠಡಿಗಳ ಗೋಡೆಗಳೆಲ್ಲವೂ ಶೈಕ್ಷಣಿಕ ಸಾಮರ್ಥ್ಯಗಳನ್ನು ಬಿಂಬಿಸುವ ಭಿತ್ತಿಗಳಾಗಿವೆ. "ಒಂದು ಊರಿನ ಬಗ್ಗೆ ತಿಳಿಯಬೇಕಾದರೆ ಆ ಊರಿನ ಶಾಲೆ ಮತ್ತು ದೇವಾಲಯ ನೋಡಿದರೆ ಸಾಕು" ಎಂಬ ಮಾತಿನಂತೆ ಈ ಸಂಸ್ಥೆಯನ್ನು ಬೆಳೆಸುವಲ್ಲಿ ಅಲ್ಲಿನ ಎಲ್ಲ ವರ್ಗದ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾರೆ. ಹಾಗಾಗಿಯೇ ಶಾಲೆ ಮತ್ತು ಸಮುದಾಯ ನಾಣ್ಯದ ಎರಡು ಮುಖಗಳಂತೆ ಅವಿನಾಭಾವ ಸಂಬಂಧವಿಟ್ಟುಕೊಳ್ಳುವಂತೆ ಮಾಡುವಲ್ಲಿ ಭಟ್ಟರು ಚಾಣಾಕ್ಷತೆ ಮೆರೆದಿದ್ದಾರೆ. ಸಮುದಾಯದೊಂದಿಗೆ ವಿಶ್ವಾಸಗಳಿಸಲು ಇತ್ತೀಚೆಗೆ ಹೆಚ್ಚು ಆಸಕ್ತಿ ವಹಿಸುತ್ತಿರುವ ಇಲಾಖೆಯ ಆಶೋತ್ತರವನ್ನು ಈ ಸಂಸ್ಥೆಯಲ್ಲಿ ಬಹಳ ಹಿಂದೆಯೇ ನಿರ್ವಹಿಸಿ ಯಶ ಕಂಡಿರುವುದನ್ನು ಗಮನಿಸಿದರೆ ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಇವರ ಶೈಕ್ಷಣಿಕ ಸಾಧನೆಗೆ ಉಡುಪಿಯ ಪೇಜಾವರ ಶ್ರೀಗಳಿಂದ "ಶ್ರೀರಾಮ ವಿಠಲಾನುಗ್ರಹ" ಪ್ರಶಸ್ತಿಯೂ ಸೇರಿದಂತೆ 2005 ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಮತ್ತು 2009ರಲ್ಲಿ ರಾಷ್ಟ್ರ ಮಟ್ಟದ ಉತ್ತಮ ಪ್ರಶಸ್ತಿಯೂ ಲಭಿಸಿರುವುದು ಅವರ ಸೇವೆಗೆ ಸಂದ ಮಹಾಗೌರವದ ಗರಿಮೆಗಳಾಗಿವೆ.

ಶೈಕ್ಷಣಿಕ ಸಾಹಿತಿಯಾಗಿ ಭಟ್ಟರ ಸಾಧನೆ
———————–
ತಮ್ಮ ವಿನೂತನ ಚಿಂತನೆಗಳ ಮೂಲಕ "ಕನಸಿನ ಆದರ್ಶ ಶಾಲೆ" ರೂಪಿಸಿದ ನಾರಾಯಣ ಭಟ್ಟರ ಲೇಖನಿಯು ಅನೇಕ ಶೈಕ್ಷಣಿಕ ಕೃತಿಗಳಿಗೆ ನಾಂದಿ ಹಾಡಿದೆ. ಕತೆ ಕವಿತೆಗಳಿಗೆ ಮರುಳಾಗದೆ ಮಕ್ಕಳ ಭವ್ಯ ಭವಿಷ್ಯ ರೂಪಿಸುವ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಕೈಪಿಡಿ/ಮಾರ್ಗದರ್ಶಿಯಾಗಬಲ್ಲ ಸಾಹಿತ್ಯವನ್ನು ತಮ್ಮ ಯಶೋಗಾಥೆಯಲ್ಲಿ ಪಡೆದ ಅಮೂಲ್ಯ ಅನುಭವಗಳ ಎರಕ ಹೊಯ್ದು ಕೃತಿಗಳಾಗಿ ಲೋಕಾರ್ಪಣೆ ಮಾಡಿದ್ದಾರೆ. ಇವರು ಬರೆದ ಅನೇಕ ಪುಸ್ತಕಗಳು ಮರುಮುದ್ರಣದ ಭಾಗ್ಯ ಪಡೆದಿರುವುದು ಅವುಗಳ ಮೌಲಿಕತೆಗೆ ಹಿಡಿದ ಕನ್ನಡಿಯಾಗಿವೆ. ಅವರ ಮೊದಲ ಶೈಕ್ಷಣಿಕ ಕೃತಿ 'ಜೀವನ ಶಿಕ್ಷಣ'ವು 2010 ರಲ್ಲಿ ಪ್ರಕಟವಾಗಿದ್ದು ಕಳೆದ ಐದು ವರ್ಷಗಳಲ್ಲಿ ಸುಮಾರು ಹದಿನೈದು ಕೃತಿಗಳನ್ನು ಪ್ರಕಟಿಸಿದ್ದಾರೆ. ವೃತ್ತಿ ಆರಂಭದ ವರ್ಷಗಳಲ್ಲಿ ಯಾವುದೇ ಪುಸ್ತಕ ಬರೆಯುವ ಸಾಹಸಕ್ಕೆ ಮುಂದಾಗದೆ ತಮ್ಮ ಸಾಧನೆಯ ಹಾದಿಯಲ್ಲೇ ಸಾಗಿದ ಇವರಿಗೆ ರಾಷ್ಟ್ರ ಪ್ರಶಸ್ತಿ ಬಂದ ಮೇಲಷ್ಟೇ ತಮ್ಮ ಸಾಹಿತ್ಯ ಕೃಷಿಗೆ ಮುಂದಾಗಿರುವುದು ಅವರ ವಿಶೇಷ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಸುಮಾರು ಮೂವತ್ತಾರು ವರ್ಷಗಳ ಸೇವಾ ಅನುಭವ ಹೊಂದಿರುವ ಇವರು ತಮ್ಮ ಹಿತೈಶಿಗಳು, ಅಧಿಕಾರಿಗಳು, ಶಿಕ್ಷಣ ಪ್ರಿಯರ ಒತ್ತಾಸೆಯಂತೆ ಅವರ ವಿಚಾರ ಧಾರೆಗಳು ನಾಡಿನೆಲ್ಲೆಡೆ ಪಸರಿಸಲಿ, ಆಸಕ್ತರಿಗೆಲ್ಲ ಮಾರ್ಗದರ್ಶಿಯಾಗಲಿ ಎಂಬ ಘನ ಉದ್ಧೇಶದಿಂದ ತಮ್ಮ ವೃತ್ತಿ ಜೀವನಾನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವೃತ್ತಿಯ ನಿವೃತ್ತಿಯ ಸಂಧ್ಯಾ ಸಮಯದಲ್ಲಿರುವ ಅವರ ಅನನ್ಯ ಅನುಭವಾಮೃತದಿಂದ ಹೊರ ಹೊಮ್ಮುತ್ತಿರುವ ಕೃತಿ ಕುಸುಮಗಳು ನಾಡಿನೆಲ್ಲೆಡೆ ತಮ್ಮ ಅಗಾಧವಾದ ಪರಿಮಳವನ್ನು ಸೂಸುತ್ತ ಶೈಕ್ಷಣಿಕ ವಲಯದಲ್ಲಿ ಸಚೇತನ ಒದಗಿಸುತ್ತಿವೆ. ಅವರು ತಮ್ಮ ಕೃತಿಗಳ ತಿರುಳಾಗಿ ಬಳಸುತ್ತಿರುವ ವಸ್ತುವು ಶಿಕ್ಷಣ, ಸಂಸ್ಕೃತಿ, ಸದಾಚಾರ, ಸಚ್ಛಿಂತನೆಗಳ ಜೊತೆಗೆ ಮಕ್ಕಳಿಗೆ ಬೇಕಾದ ನೈತಿಕ ಮಾರ್ಗದರ್ಶನ, ಪೋಷಕರಲ್ಲಿ ಇರಬೇಕಾದ ಮಕ್ಕಳೊಂದಿಗಿನ ಸ್ನೇಹಮಯಿ ಬಾಂಧವ್ಯ, ಶಿಕ್ಷಕರಲ್ಲಿ ಇರಬೇಕಾದ ವಿಷಯ ಸಂಪನ್ನತೆ ಮತ್ತು ಸಮುದಾಯದೊಂದಿಗಿನ ವಿಶ್ವಾಸಪೂರ್ವಕ ಒಡನಾಟ , ವಿದ್ಯಾಲಯಗಳಲ್ಲಿ ಇರಬೇಕಾದ ಮೂಲಭೂತ ಶೈಕ್ಷಣಿಕ ಸುವ್ಯವಸ್ಥೆ…..ಇವೇ ಮುಂತಾದ ಅನೇಕ ಉಪಯುಕ್ತ ವಿಷಯಗಳ ಮೇಲೆ ಬೆಳಕು ಚೆಲ್ಲಿ ಜ್ಞಾನವಲಯದ ವ್ಯಾಪ್ತಿಯ ಚೌಕಟ್ಟಿನಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಅವರು ಬರೆದ ಒಂದೊಂದು ಕೃತಿಯೂ ಅಮೂಲ್ಯ ರತ್ನದಂತೆ ಜತನ ಮಾಡುವಷ್ಟು ಪ್ರಬುದ್ಧತೆಯಿಂದ ಕೂಡಿದ್ದು, ಅಕ್ಷರಗಳ ವಿನ್ಯಾಸ, ದೋಷಮುಕ್ತ ಮುದ್ರಣ, ಅರ್ಥಪೂರ್ಣ ಮುಖಪುಟ, ಚಿಂತಕರ ಮುನ್ನುಡಿ ಹಾಗೂ ಅತೀ ಸುಲಭ ಬೆಲೆಯನ್ನು ಹೊಂದಿವೆ. ಧಾವಂತದಲ್ಲಿ ಪ್ರಚಾರ ಬಯಸುವವರೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಬಹಳ ತಡವಾಗಿ ಕೃತಿ ರಚನೆಗೆ ತೊಡಗಿದ್ದು ಏಕೆಂಬ ಪ್ರಶ್ನೆಗೆ ನಾರಾಯಣ ಭಟ್ಟರು ನೀಡುವ ಉತ್ತರ ಆಶ್ಚರ್ಯ ಮೂಡಿಸುತ್ತದೆ. "ನನ್ನ ಸೇವಾ ನಿರ್ವಹಣೆಯಲ್ಲಿ ಕಂಡುಂಡ ಸಾಧನೆ ಸವಾಲುಗಳನ್ನು ಬೇರೆಯವರಲ್ಲಿ ಹಂಚಿಕೊಳ್ಳಬೇಕೆಂಬ ಲವಲೇಶದಷ್ಟು ಆಸಕ್ತಿಯೂ ಇರಲಿಲ್ಲ ಮತ್ತು ಪುಸ್ತಕವಾಗಿ ಪ್ರಕಟಿಸಬಹುದಾದ ಅರ್ಹತೆ ಇದೆ ಎಂಬ ನಂಬಿಕೆಯೂ ಇರಲಿಲ್ಲ. ಪೇಜಾವರ ಶ್ರೀಗಳು, ಹಿತೈಶಿಗಳು ಮತ್ತು ಶಿಕ್ಷಣ ಇಲಾಖೆಯ ಮೇಲಧಿಖಾರಿಗಳು ಒತ್ತಾಯ ಮಾಡಿ ಕೃತಿರೂಪದ ಉಪಯುಕ್ತತೆಯನ್ನು ತಿಳಿಸಿದುದರಿಂದ ಈ ಕಾರ್ಯಕ್ಕೆ ಮುಂದಾದೆಯಷ್ಟೆ!" ಎಂದು ವಿನೀತರಾಗಿ ನುಡಿಯುತ್ತಾರೆ.

ಆಯ್ದ ಕೃತಿಗಳ ಸಂಕ್ಷಿಪ್ತ ಪರಿಚಯ
——————-
*ಮಕ್ಕಳ ನೀತಿ ಸುಭಾಷಿತ:
ಇಂದಿನ ಆಧುನಿಕ ಬದುಕಿನ ಧಾವಂತದಲ್ಲಿ ಮರೆಯಾಗುತ್ತಿರುವ ಮೌಲ್ಯಗಳು, ಸಂಸ್ಕಾರವನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಬಿತ್ತಲು ಸಮರ್ಥವಾದ ಈ ಕೃತಿಯು ಮಕ್ಕಳ ಬದುಕಿಗೆ ಸುಂದರ ಹಂದರ ನಿರ್ಮಿಸಲು ಸಹಕಾರಿಯಾಗುತ್ತದೆ.

*ಮಕ್ಕಳ ಸಂಸ್ಕಾರ ಜ್ಯೋತಿ:
ಇದೂ ಕೂಡ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸನ್ನಡತೆ, ಸತ್ಪರಂಪರೆ, ಸಂಸ್ಕೃತಿಯನ್ನು ತುಂಬುವಟತಹ ವಿಚಾರಗಳನ್ನು ಒಳಗೊಂಡಿದೆ.

*ನಂಬಿಕೆಗಳಲ್ಲೇನಿದೆ:
ನಮ್ಮ ಪೂರ್ವಿಕರು ನಮಗೆ ನೀಡಿರುವ ನೂರಾರು ನಂಬಿಕೆಗಳಲ್ಲಿ ಇರುವ ಅಂತಃಸತ್ವವನ್ನು ಶ್ರುತಪಡಿಸಿ ಸರಿ ತಪ್ಪುಗಳೊಂದಿಗೆ ಅವುಗಳನ್ನು ವಿಶ್ಲೇಷಿಸಿ ಒಪ್ಪಿಕೊಳ್ಳುವ ಇಲ್ಲವೇ ಕೈಬಿಡುವ ಬಗ್ಗೆ ನಿರ್ಣಯಿಸುವ ಹೂರಣವನ್ನು ಒಳಗೊಂಡಿದೆ.

*ಬದುಕು ಬದಲಾಯಿಸಬಲ್ಲ ಮಕ್ಕಳ ಕತೆಗಳು:
ಇಂದಿನ ದಿನಮಾನದಲ್ಲಿ ಮರೆಯಾಗಿರುವ ಅಜ್ಜಿಯ ಕತೆಗಳನ್ನು ತಾಯಿ ತಂದೆಯರು ಓದಿ ತಮ್ಮ ಮಕ್ಕಳಿಗೆ ಪ್ರೀತಿಯಿಂದ ಹೇಳಿ ಸತ್ಯ ಪ್ರಾಮಾಣಿಕತೆ ತ್ಯಾಗ ಸೇವೆ ಮಮತೆಯಂತಹ ಗುಣಗಳು ಮೈಗೂಡಿಸಲು ಪ್ರೇರಣೆ ನೀಡಬಲ್ಲ ಕತೆಗಳ ಸಮೃದ್ಧ ಸಂಕಲನ ಇದಾಗಿದೆ.

*ನಮ್ಮ ಮಕ್ಕಳ ಯಶಸ್ಸು ಹೇಗೆ ಸಾಧ್ಯ?:
ಜೀವನದಲ್ಲಿ ಯಶಸ್ಸು ಎಂದರೇನು!? ಅದನ್ನು ಪಡೆಯುವ ಬಗೆ ಹೇಗೆ? ಅದರಿಂದ ಸಿಗುವ ಪ್ರಯೋಜನವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ತರ್ಕಬದ್ಧವಾದ ಉತ್ತರಗಳನ್ನು ನೀಡುತ್ತಾ ಸಾಧಪೆಯ ಹಾದಿಯನ್ನು ಕ್ರಮಿಸುವ ಕ್ರಮವನ್ನು ಕುರಿತು ಈ ಕೃತಿಯಲ್ಲಿ ವಿವರಿಸಿದ್ದಾರೆ.

*ಬದುಕಲ್ಲಿ ಗೆಲ್ಲುವುದು ಹೇಗೆ?:
ಸಂಕೀರ್ಣವಾದ ಬದುಕಿನಲ್ಲಿ ಸವಾಲು ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಗಳಿಸುವ ಮಾರ್ಗೋಪಾಯಗಳನ್ನು ಈ ಪುಸ್ತಕದಲ್ಲಿ ಪಡೆಯಬಹುದಾಗಿದೆ.

*ನಮ್ಮ ಮಕ್ಕಳು ಹೇಗಿರಬೇಕು?
ಪ್ರತಿಯೊಬ್ಬ ತಂದೆ ತಾಯಿಯರು ತಮ್ಮ ಮಕ್ಕಳು ಹಾಗಿರಬೇಕು ಹೀಗಿರಬೇಕೆಂದು ಕನಸು ಕಾಣುವುದು ಸಹಜವೇ. ಆದರೆ ನಿಜವಾಗಿ ಹೇಗಿರಬೇಕು ಎಂಬ ಅಭಿಪ್ರಾಯಾಧಾರಿತವಾದ, ಜೀವನ ಮೌಲ್ಯ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಿರು ಲೇಖನಗಳನ್ನು ಹೊಂದಿದೆ.

*ಮಕ್ಕಳು ಎಲ್ಲಿ ಹೇಗಿರಬೇಕು?
ದೈನಂದಿನ ಬದುಕಿನಲ್ಲಿ ಕುಟುಂಬದ ಸದಸ್ಯರು, ನೆರೆಹೊರೆಯವರು, ಸ್ನೇಹಿತರು, ಗುರು ಹಿರಿಯರೊಂದಿಗೆ ಹೇಗೆ ವರ್ತಿಸಬೇಕು, ತಮ್ಮ ಕೆಲಸ ಕಾರ್ಯಗಳಲ್ಲಿ ಹೇಗೆ ತೊಡಗಿಕೊಳ್ಳಬೇಕು ಮತ್ತು ವಿವಿಧ ಸಂದರ್ಭಗಳಲ್ಲಿ ಪಾಲ್ಗೊಳ್ಳುವಾಗ ಮಕ್ಕಳ ಸದ್ವರ್ತನೆಯ ಅಗತ್ಯ ಮುಂತಾದ ಅನೇಕ ಅಂಶಗಳ ಬಗ್ಗೆ ತಮ್ಮ ಅನುಭವಾಧಾರಿತವಾದ ಹಿತೋಕ್ತಿಗಳನ್ನು ಈ ಅಮೂಲ್ಯ ಕೃತಿಯಲ್ಲಿ ವಿವರಿಸಿದ್ದಾರೆ.

*ಉತ್ತಮ ಶಿಕ್ಷಕರಾಗುವುದು ಹೇಗೆ?:
ಮಕ್ಕಳ ಭವ್ಯ ಭವಿಷ್ಯಕ್ಕೆ ಭಾಷ್ಯ ಬರೆಯುವ ಶಿಕ್ಷಕರು "ಉತ್ತಮ ಶಿಕ್ಷಕರಾಗುವುದು ಹೇಗೆ" ಎಂದು ತಿಳಿಸಲು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪುರಸ್ಕಾರ ಪಡೆದ ಶಿಕ್ಷಕರ ಸಾಧನೆಯ ಪಕ್ಷಿನೋಟವನ್ನು ಚಿತ್ತಿಸಿದ್ದು ಎಲ್ಲ ಶಿಕ್ಷಕ ಬಂಧುಗಳಿಗೂ ಸ್ಫೂರ್ತಿಯಾಗಬಲ್ಲ ಕೃತಿಯನ್ನಾಗಿ ಹೊರತಂದಿದ್ದಾರೆ.

*ಉತ್ತಮ ಶಾಲೆಗೊಂದು ಮಾರ್ಗದರ್ಶಿ:
ಮಕ್ಕಳ ಬದುಕಿಗೆ ಬೆಳಕು ಚೆಲ್ಲುವ ಶಾಲೆಗಳ ಕಾರ್ಯಚಟುವಟಿಕೆಗಳು, ಶಾಲೆಯಲ್ಲಿರಬೇಕಾದ ಅತ್ಯಗತ್ಯ ಪೂರಕ ವಾತಾವರಣ, ಆಡಳಿತಾತ್ಮಕ ಹಾಗೂ ಸಮುದಾಯದೊಂದಿಗಿನ ಸಾಮರಸ್ಯ, ಶಿಕ್ಷಕರು ಮುಖ್ಯೋಪಾಧ್ಯಾಯರೊಂದಿಗಿನ ಸೌಹಾರ್ದಯುತ ಸಹಕಾರಯುಕ್ತ ಸಂಬಂಧ, ಮುಂತಾದವುಗಳಲ್ಲದೆ ಪಠ್ಯಪೂರಕವಾದ ಸಾಮಾನ್ಯ ಮಾಹಿತಿಗಳ ಮೇಲೆ ಈ ಕೃತಿಯಲ್ಲಿ ವಿವರಗಳನ್ನು ನೀಡಲಾಗಿದ್ದು ಯಶಸ್ವಿ ಹಾಗೂ ಆದರ್ಶ ಶಾಲೆ ರೂಪಿಸಲು ಬೇಕಾದ ಮಾರ್ಗದರ್ಶಿ ಸೂತ್ರಗಳು ಇದರಲ್ಲಿವೆ.

ಕೇವಲ ಐದು ವರ್ಷಗಳಲ್ಲಿ ಸುಮಾರು ಹದಿನೈದು ಶೈಕ್ಷಣಿಕ ಸಾಮಾಜಿಕ ಅಂಶಗಳ ಕೃತಿಗಳನ್ನು ಪ್ರಕಟಿಸಿರುವ ನಾರಾಯಣ ಭಟ್ಟರ ಅಗಾಧ ಪ್ರತಿಭೆಯು ಅಕ್ಷಯವಾದಂತಿದ್ದು ಇನ್ನೂ ಮೂರ್ನಾಲ್ಕು ಕೃತಿಗಳು ಮುದ್ರಣದ ಹಂತದಲ್ಲಿವೆ. ನಿಜಕ್ಕೂ ರಾಮಕುಂಜದ ಈ ಸಾಮಾನ್ಯ ಶಿಕ್ಷಕರು ಅಸಾಮಾನ್ಯ ಕ್ರಿಯಾಶೀಲತೆ ಹಾಗು ಶೈಕ್ಷಣಿಕ ಕಾರ್ಯತತ್ಪರತೆಯಿಂದ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವುದು ಎಲ್ಲ ಶಿಕ್ಷಕರಿಗೂ ಪ್ರೇರಣೆಯಾಗಿದೆ.

ಅಂದಹಾಗೆ ಇವರ ಪುಸ್ತಕಗಳನ್ನು ಇವರದೇ ಆದ "ಮೌಲಿಕಾ ಪ್ರಕಾಶನ"ದಿಂದ ಆಸಕ್ತರು, ಪುಸ್ತಕ ದಾನಿಗಳು ಇವರನ್ನು ಸಂಪರ್ಕಿಸಿ ಭಾರೀ ರಿಯಾಯಿತಿಯಲ್ಲೂ ಪಡೆಯಬಹುದಾಗಿದೆ. ಇವರ ಚರವಾಣಿ-9845766534
ಮಿಂಚಂಚೆ: narayanramakunja@gmail.com


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x