ಇತ್ತೀಚಿನ ವರ್ಷಗಳಲ್ಲಿ ಸಂತೆಗೆ ಹೋಗುವುದೇ ತೀರ ಕಡಿಮೆ ಆಗಿದೆ. ದಿನಬೆಳಗಾದರೆ ತಾಜಾ ತಾಜಾ ತರಕಾರಿಗಳನ್ನು ತರಕಾರಿ ತಮ್ಮಣ್ಣ ತನ್ನ ತಳ್ಳುವ ಗಾಡಿಯಲ್ಲಿ ಮನೆ ಮುಂದೆ ತಂದು ನಿಲ್ಲಿಸ್ತಾನೆ. ಇನ್ನು ಕಿರಾಣಿ ಸಾಮಾನು ಬೇಕಾದ್ರೆ ರಸ್ತೆಯ ಕೊನೆಯಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ಬೇಕಾದಾಗ ತಂದು ಬಿಡುತ್ತೇವೆ. ಡ್ಯೂಟಿಗೆ ಹೋದಾಗ ಹೆಂಡತಿ ಪೋನ್ ಮಾಡಿ “ರೀ , ವಾಟ್ಸ್ಯಾಪ್ ಲಿ ಲಿಸ್ಟ್ ಹಾಕಿದೀನಿ. ಕೆಲಸ ಮುಗಿಸಿ ಬರುವಾಗ ಅದರಲ್ಲಿನ ಸಾಮಾನೆಲ್ಲಾ ತಂದು ಬಿಡಿ.” ಎಂದು ಆದೇಶ ಮಾಡಿಬಿಡುತ್ತಾಳೆ. ಮನೆ ಯಜಮಾನಿ ಮಾತು ಮೀರುವಹಾಗಿಲ್ಲ. ಕೆಲಸ ಮುಗಿಸಿ ಸಂಜೆ ಬರುವಾಗ ಎಲ್ಲಾ ಸಾಮಾನುಗಳನ್ನು ನೆನಪಿನಿಂದ ತರಬೇಕು. ಆಕಸ್ಮಿಕವಾಗಿ ಮರೆವು ಆದರೆ ಮನೆಯಲ್ಲಿ ದೊಡ್ಡ ರಾದ್ದಾಂತವೇ ನಡೆಯುವುದಂತೂ ಖಂಡಿತ. ಕೆಲ ಸಾರಿ ಇಂತಹ ರಾದ್ದಾಂತಗಳು ಆಗಿದ್ದು ಉಂಟು. ಎಲ್ಲಾ ಸಾಮಾಗ್ರಿಗಳು ಮನೆಯ ಆಸುಪಾಸು ದೊರೆಯುವುದರಿಂದ ಸಂತೆ ಕಲ್ಪನೆಯನ್ನೇ ಮರೆತಂತಾಗಿದೆ.
ಸಂತೆ ಎಂದೊಡನೆ ನಾವು ಚಿಕ್ಕವರಿದ್ದಾಗ ಅಪ್ಪ ರವಿವಾರದಂದು ಸಂತೆಗಾಗಿ ಪೇಟೆಗೆ ಮನೆಯವರನೆಲ್ಲಾ ಕರೆದುಕೊಂಡು ಹೋಗುತ್ತಿದ್ದ ಸಂಗತಿಗಳು ನೆನಪಾಗುತ್ತವೆ. ನಾವು ಚಿಕ್ಕವರಿದ್ದಾಗ ಅಪ್ಪ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ರವಿವಾರ ಸಂತೆಗೆ ಹೋಗುವುದು ತಪ್ಪುತ್ತಿದ್ದಿಲ್ಲ. ಏಕೆಂದರೆ ಆ ಹಳ್ಳಿಯಲ್ಲಿ ಎಲೆ ಅಡಿಕೆ ಬಿಟ್ಟರೆ ಮತ್ತೆನೂ ಸಿಗುತ್ತಿದ್ದಿಲ್ಲ. ಒಂದು ವಾರಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸಂತೆಯ ದಿನ ಖರೀದಿಸಿ ಮನಗೆ ತರುತ್ತಿದ್ದರು. ಅಪ್ಪ ಒಬ್ಬರೇ ಸಂತೆಗೆ ಹೋಗುವುದಾದರೆ ಮನೆಯಲ್ಲಿ ನಾವೆಲ್ಲಾ ನಮಗೆ ಬೇಕಾದ ಸಾಮಗ್ರಿಗಳನ್ನು ಒಂದು ಚೀಟಿಯಲ್ಲಿ ಬರೆದುಕೊಡುತ್ತಿದ್ದೆವು.ಸಂತೆಗೆ ಹೋಗಿ ಸಂಜೆಯ ಬಸ್ಸಿನಲ್ಲಿ ಅಪ್ಪ ಮರಳುತ್ತಿದ್ದರು. ಸಂಜೆ ಸರಕಾರಿ ಕೆಂಪು ಬಸ್ಸು ಬರುವುದನ್ನೇ ಎದುರು ನೋಡುತ್ತಾ ಕುಳಿತುಕೊಳ್ಳುತ್ತಿದ್ದುದು ನನಗೆ ಈಗಲೂ ನೆನಪಿದೆ. ಎರಡು ಅಥವಾ ಮೂರು ವಾರಕ್ಕೊಮ್ಮೆ ಕುಟುಂಬದವರೆಲ್ಲಾ ಸೇರಿ ಸಂತೆಗೆ ಹೋಗುತ್ತಿದ್ದುದು ಊಂಟು. ಎಲ್ಲರೂ ಸೇರಿ ಸಂತೆಗೆ ಹೋಗುವ ಸಂದರ್ಭದಲ್ಲಿ ಯವುದೋ ಮದುವೆ ಕಾರ್ಯಕ್ರಮಕ್ಕೆ ಹೋಗುವಂತೆ ಅಂದು ಬೆಳಿಗ್ಗೆ ಒಂಭತ್ತು ಗಂಟೆಯೊಳಗೆ ಸ್ನಾನ, ಉಪಹಾರ ಮುಗಿಸಿ ಹೊರಡಲು ಸಿದ್ದಗೊಳ್ಳುವುದು ತುಂಬಾ ಮಜಾ ತರುತ್ತಿತ್ತು. ಹತ್ತು ಹದಿನೈದು ನಿಮಿಷ ತಡವಾಗಿಯೇ ಕೆಂಪು ಬಸ್ಸು ಪಕ್ಷದ ರಸ್ತೆಯಲ್ಲಿ ಬಂದು ನಿಲ್ಲುತ್ತಿತ್ತು.ಆಗ ದಿನಕ್ಕೆ ಎರಡೇ ಸಮಯ ನಮ್ಮ ಊರಿಗೆ ಬಸ್ಸು ಬಂದು ಹೋಗುತ್ತಿತ್ತು. ಬೆಳಿಗ್ಗೆ ಹಾಗೂ ಸಾಯಂಕಾಲ ಅಷ್ಟೇ. ಆಕಸ್ಮಿಕವಾಗಿ ಎಮರ್ಜೆನ್ಸಿ ಇದ್ದರೆ ಅಥವಾ ಬಸ್ ಮಿಸ್ ಆದರೆ ಸುಮಾರು ಎರಡು ಮೂರು ಕಿಲೋಮೀಟರ್ ನಡೆದು ಹೋದರೆ ಮುಖ್ಯ ರಸ್ತೆಯಲ್ಲಿ ಬೇರೆ ಬಸ್ಸುಗಳ ಮೂಲಕ ಪ್ರಯಾಣಿಸಬಹುದಿತ್ತು.
ಕುಟುಂಬವೆಲ್ಲಾ ಪೇಟೆಗೆ ಹೋದಮೇಲೆ ನಮ್ಮ ತಾಯಿಯ ಮಹದಾಸೆಯಂತೆ ( ಒಳಗೊಳಗೆ ನಮ್ಮ ಆಸೆ ಕೂಡಾ) ಸಿನಿಮಾ ಥಿಯೇಟರ್ ಗೆ ಹೋಗುವುದು ಸಾಮಾನ್ಯವಾಗಿತ್ತು. ಹೆಂಗಳೆಯರ ಸಿನಿಮಾ ಇದ್ದರೆ ಮೊದಲ ಪ್ರಾಶಸ್ತ್ಯ. ಜನಜಂಗುಳಿಯ ನಡುವೆ ಹೋರಾಟ ಮಾಡಿ ಟಿಕೆಟ್ ಪಡೆದು ಎಲ್ಲರೂ ಒಟ್ಟಿಗೆ ಕುಳಿತು ಸಿನಿಮಾ ನೋಡುತ್ತಿದ್ದೆವು. ಸ್ವಲ್ಪ ಕಣ್ಣೀರು ಹಾಕಿ ಸಿನಿಮಾ ಥಿಯೇಟರ್ ನಿಂದ ಹೊರಬಂದರೆ ಅರ್ಧ ಸಂತೆ ಮುಗಿದಂತೆ. ಕೆಲವೇ ಹೆಜ್ಜೆಗಳ ದೂರದಲ್ಲಿದ್ದ ದೊಡ್ಡ ಬಯಲಿನಲ್ಲಿ ನಡೆಯುತ್ತಿದ್ದ ಸಂತೆಯಲ್ಲಿ ಮನೆಯವರೆಲ್ಲಾ ಸೇರಿ ಸಂತೆ ಮಾಡುತ್ತಿದ್ದೆವು. ಒಮ್ಮೆ ನಾನು ಕಳೆದುಕೊಂಡದ್ದೂ ಉಂಟು. ಆಮೇಲೆ ಸಿಕ್ಕೆ ಅದು ಬೇರೆ ವಿಷಯ. ಸಂತೆಯಲ್ಲೇ ಇದ್ದ ಒಂದು ಹೋಟೆಲ್ ನಲ್ಲಿ ಉಪಹಾರ. ಆಗಾಗ ಕಬ್ಬಿನ ಜ್ಯೂಸ್ ಗಾಗಿ ನಮ್ಮಿಂದ ಬೇಡಿಕೆ ಬರುತ್ತಿತ್ತು. ಅಪ್ಪ ಮಾತ್ರ ಆಗಾಗ ದುಡ್ಡಿನ ಲೆಕ್ಕ ಹಾಕುತ್ತಿದ್ದರು. ಸಂಜೆ ಐದು ಗಂಟೆಯೊಳಗಾಗಿ ಬೇಕಾದ ಎಲ್ಲ ಸಾಮಗ್ರಿಗಳನ್ನು ಖರೀದಿಸಿ, ಎಲ್ಲರ ಕೈಯಲ್ಲಿ ಒಂದೊಂದು ಸಂತೆ ಚೀಲ ಹಿಡಿದು ಕೊಂಡು ಬಸ್ ನಿಲ್ದಾಣಕ್ಕೆ ಬಂದು ಬಸ್ ಗಾಗಿ ಕಾಯುತ್ತಿದ್ದೆವು.
ರವಿವಾರದ ಸಂತೆ ಅಂದಮೇಲೆ ಬಸ್ ಗಾಗಿ ಜನವೋಜನ. ಅಪ್ಪ , ಕರ್ಚೀಪು ಅಥವಾ ಟವೆಲ್ ಏನಾದರೂ ಕೈಯಲ್ಲಿ ಹಿಡಿದುಕೊಂಡು ನಿಲ್ಲುತ್ತಿದ್ದರು. ಬಸ್ ಬರುತ್ತಿದ್ದಂತೆಯೇ ಕಿಟಕಿಯಲ್ಲಿದ್ದವರಿಗೆ ಸೀಟನ್ನು ಹಿಡಿಯಲು ಹೇಳುತ್ತಿದ್ದರು.ಸೀಟ್ ಸಿಕ್ಕರೆ ಅದು ನಮ್ಮ ಪುಣ್ಯ. ಇಲ್ಲದಿದ್ದರೆ ನಿಂತುಕೊಂಡೋ ಅಥವಾ ಬಸ್ ನ ಟಾಪ್ ಮೇಲೆ ಕುಳಿತುಕೊಂಡೋ ಹೋಗಬೇಕಾಗುತ್ತಿತ್ತು. ಅಂತೂ ಇಂತೂ ಬಸ್ಸು ಊರನ್ನು ತಲುಪಿದಾಗ ಅಲ್ಲಿಗೆ ನಮ್ಮ ರವಿವಾರದ ಸಂತೆ ಮುಕ್ತಾಯವಾದಂತೆ. ಸಂತೆ ಮುಗಿಸಿ ಮನೆಗೆ ಮರಳುವಾಗ ಬೀದಿಯ ಹೆಂಗಸರು “ಸಂತೆ ಜೋರಾ” ಎಂದು ನಮ್ಮ ತಾಯಿಯನ್ನು ರೇಗಿಸುತ್ತಿದ್ದುದು ನನಗೆ ಈಗಲೂ ನೆನಪಿದೆ.
ಹೊಸ ಹೊಸ ಅನುಭವಗಳನ್ನು, ಖುಷಿಗಳನ್ನು ನೀಡುತ್ತಿದ್ದ ರವಿವಾರ ಸಂತೆಯ ಮಜಾ ಈಗಿಲ್ಲ.ಆಧುನಿಕತೆಯ ಗಾಳಿಯಲ್ಲಿ ಅಥವಾ ಸಂದರ್ಭದ ಅನಿವಾರ್ಯತೆಯಂತೆ ಸಂತೆಯಿಂದ ನಾವು ದೂರವಾಗಿದ್ದೇವೆ. ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದ ರವಿವಾರದ ಸಂತೆಯ ಅನುಭವಗಳನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ.
–ವೆಂಕಟೇಶ ಚಾಗಿ