ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆಯಿದೆ . . ?: ಜಯಶ್ರೀ.ಜೆ. ಅಬ್ಬಿಗೇರಿ

ಬಾಳ ದಾರಿಯಲ್ಲಿ ಕೈ ಹಿಡಿದು ನಡೆಸುವ ಬಂಧಗಳ ಶಕ್ತಿ ಅಪರಮಿತವಾದದ್ದು. ಮಗ್ಗಲು ಮುಳ್ಳುಗಳಂತೆ ಚುಚ್ಚುವ ಸಮಸ್ಯೆಗಳು ಹಣಿಯುತ್ತಿರುವಾಗಲಂತೂ ಇವುಗಳು ಸಲುಹುವ ರೀತಿ ಪದಗಳಲ್ಲಿ ಹಿಡಿದಿಡಲಾಗದು. ಇತ್ತಿತ್ತಲಾಗಿ ಸಂಬಂಧಗಳೇ ಮಾಯವಾಗುತ್ತಿವೆ. ಅನ್ನುವ ಮಟ್ಟಿಗೆ ಬದುಕಿನ ಸವಾರಿ ನಡೆಸುತ್ತಿದ್ದೇವೆ. ದೂರ ದೂರ ಸರಿದು ನಿಂತು ಒಂದೊಂದು ಗೂಡಿನಲ್ಲಿ ಜೀವಿಸುತ್ತಿದ್ದೇವೆ. ಸಂಬಂಧಗಳ ಸವಿರುಚಿಯನ್ನು ಸವಿಯುವುದು ಕ್ವಚ್ಚಿತ್ತಾಗಿ ಬಿಟ್ಟಿದೆ. ಈ ಹಿಂದೆ ಸಂಬಂಧಗಳು ನಮ್ಮನ್ನು ಕೂಡು ಕುಟುಂಬದಲ್ಲಿ ಹತ್ತು ಹಲವು ರೀತಿಯಲ್ಲಿ ಆವರಿಸುತ್ತಿದ್ದವು. ಇನ್ನಿಲ್ಲದಂತೆ ಪೋಷಿಸುತ್ತಿದ್ದವು. ಅಜ್ಜ ಅಜ್ಜಿಯರಿಂದ ನೀತಿ ಕಥೆಗಳು ಹೇಳಲ್ಪಡುತ್ತಿದ್ದವು. ಕೇಳಿರುವ ಕತೆಗಳನ್ನು ಹೇಳಿ ಹೇಳಿ ಅರಿವಿನ ವಿಸ್ತಾರವನ್ನು ವಿಸ್ತರಿಸಿ ಬಿಡುತ್ತಿದ್ದರು ಅವ್ವನಿಂದ ಲಾಲಿ ಹಾಡುಗಳು ಕೇಳಲು ಸಿಗುತ್ತಿದ್ದವು. ಸುತ್ತಲೂ ಆವರಿಸಿದ್ದ ಬಂಧಗಳು ನಮ್ಮ ನಡೆ ನುಡಿಗಳನ್ನು ತಿದ್ದಲು ಕಾದು ಕುಳಿತಂತೆ ಕಾಣುತ್ತಿದ್ದವು. ತಿದ್ದಿಸಿಕೊಳ್ಳಲು ಬೇಸರಿಸದ ಮನಗಳು ಅಲ್ಲಿದ್ದವು. ಗೊತ್ತಿದ್ದೋ ಗೊತ್ತಿಲ್ಲದೆಯೋ ಮೈ ಸಂಸ್ಕಾರ ಮೈಗೂಡಿಕೊಂಡು ಬಿಡುತ್ತಿತ್ತು. ಅದೊಂದು ಪರಿವೀಕ್ಷಣೆಯ ಪರಿಮಾಣವಾಗಿರಲಿಲ್ಲ. ಸಹಜ ಸಂಸ್ಕೃತಿಯ ಪ್ರಕೃತಿ ಆಗಿತ್ತು. ‘ಸಂಭ್ರಮದ ಹಿಂದೆ ವ್ಯಥೆ ಕಾದಿರುತ್ತದೆ.’ ಎನ್ನುತ್ತಾರೆ ಆದರೆ ಅಲ್ಲಿ ಸಂಭ್ರಮವೇ ಜೀವನವಾಗಿತ್ತು. ಬಿಸಿಗೆ ಬೆಣ್ಣೆ ಕರಗಿದಂತೆ ಹಿರಿಯರ ಮಾತಿಗೆ ಕಿರಿಯರು ಕಿರಿಕಿರಿ ಮಾಡಿಕೊಳ್ಳದೇ ಕರಗಿಬಿಡುತ್ತಿದ್ದರು. ಕಾಲ ಬದಲಾದಂತೆ ಬಂಧಗಳು ಬಣ್ಣ ಕಳೆದುಕೊಳ್ಳುತ್ತಿವೆ. ಬೇಡದ ವಸ್ತುಗಳಂತೆ ಮೂಲೆ ಸೇರುತ್ತಿವೆ. ‘ತಪ್ಪಿಸಿಕೊಂಡ ಕರ್ತವ್ಯವು ವಾಪಸು ಮಾಡದ ಸಾಲದಂತೆ.’ ಎನ್ನುತ್ತಾರೆ ಪ್ರಾಜ್ಞರು.ಹಾಗಿದ್ದರೆ ಬಂಧಗಳ ಸಾಲ ತೀರಿಸುವುದು ಹೇಗೆ? ನೋಡೋಣ ಬನ್ನಿ

ಮರೆತಿದ್ದೇವೆ ಕೃತಜ್ಞರಾಗಲು

ಮೊದಲೆಲ್ಲ ಊರಿನಲ್ಲಿರುವ ಎಲ್ಲ ಅಂದರೆ ಎಲ್ಲ ಜಾತಿ ಜನಾಂಗ ಧರ್ಮದವರು ಒಬ್ಬರಿಗೊಬ್ಬರು ಅಣ್ಣ ತಮ್ಮಂದಿರಂತೆ ಅಕ್ಕ ತಂಗಿಯರಂತೆ ಬಾಳಿ ಬದುಕುತ್ತಿದ್ದರು. ಅಕ್ಕ ಅಣ್ಣ ಮಾವ ಅತ್ತೆ ಅನ್ನದೇ ಮಾತನಾಡುತ್ತಿರಲಿಲ್ಲ. ಇಂದು ಆ ಪದಗಳನ್ನು ಮಕ್ಕಳಿಗೆ ತಿಳಿ ಹೇಳುವ ಪರಿಸ್ಥಿತಿ ಎದುರಾಗಿದೆ. ಹಿಂದೂ ಮುಸ್ಲಿಂ ಎನ್ನದೇ ಎಲ್ಲರೂ ಎಲ್ಲ ಹಬ್ಬ ಹರಿದಿನಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಸಡಗರದಿ ಕುಣಿದು ಕುಪ್ಪಳಿಸುತ್ತಿದ್ದರು. ನಾನೆಂಬ ಹಮ್ಮು ಬಿಮ್ಮು ತುಂಬ ಕಮ್ಮಿ. ಮನೆ ಯಜಮಾನನ ಮಾತು ದಾಟುವ ಧೈರ್ಯ ತುಂಬ ಕಮ್ಮಿ ಇತ್ತು. ಏಕೆಂದರೆ ಅದರಲ್ಲಿ ಅಷ್ಟು ತಾಕತ್ತಿತ್ತು. ನೈತಿಕ ಚೌಕಟ್ಟಿತ್ತು. ಮಿತಿ ಮೀರಿದ ಸ್ವಾರ್ಥಪರತೆಯೇ ಸಂಬಂಧಗಳ ಸೀಮಿತತೆಗೆ ಒಂದು ಪ್ರಮುಖ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇನ್ನುಳಿದ ಕಾರಣಗಳ ಪಟ್ಟಿ ಮಾಡಹೊರಟರೆ ಹನುಮನ ಬಾಲದಂತಾಗುತ್ತದೆ. ಬದುಕಿನ ವಿಭಿನ್ನ ಹಂತದಲ್ಲಿ ಎಲ್ಲವನ್ನೂ ಕಳೆದುಕೊಂಡು ದಿಕ್ಕೆಟ್ಟು ನಿಂತಾಗ ‘ಕಳೆದು ಹೋಗಿದ್ದಕ್ಕೆ ಚಿಂತಿಸದಿರು. ಇನ್ಮುಂದೆ ಪಡೆಯುವುದು ಸಾಕಷ್ಟಿದೆ.’ ಎಂದು ಬಂಧಗಳು ತುಂಬಿದ ಹುರುಪು ಕೋಟಿ ರೂಪಾಯಿ ನೀಡಿದರೂ ಸಿಗುವುದಿಲ್ಲ. ಚೆಲ್ಲಾಪಿಲ್ಲಿಯಾಗಿದೆ ಬದುಕು ಅನಿಸಿದರೆ ಅದಕ್ಕೆ ಭಯಗ್ರಸ್ಥ ಮನಸ್ಸೇ ಮೂಲ. ಬಂಧಗಳ ಸನಿಹ ಸರಿಯುವುದರಿಂದ ನೆಮ್ಮದಿಯ ನಾದವನ್ನು ಎತ್ತರಿಸಬಹುದು. ಇಷ್ಟು ಸರಿಯಾಗಿ ಬದುಕು ಕಟ್ಟಿಕೊಟ್ಟ ಬಂಧಗಳಿಗೆ ಮರೆಯದೇ ಕೃತಜ್ಞತೆ ತಿಳಿಸಬೇಕಿದೆ ಅವುಗಳೊಂದಿಗೇ ಜೀವನ ಕಳೆಯುವುದರಿಂದ.

ಬೇಡ ಕಟ್ಟಿದ್ದನ್ನು ಕೆಡುವುವುದು

ಪೂರ್ವಜರು ಕಟ್ಟಿದ್ದನ್ನು ಕೆಡುವುದರಲ್ಲಿ ನಿರತರಾಗಿದ್ದೇವೆ. ಸಂಪ್ರದಾಯ ನಂಬಿಕೆಗಳನ್ನು ಪರಿಶೀಲಿಸುತ್ತಿಲ್ಲ. ಸಾರಾ ಸಗಟಾಗಿ ಮೂಢ ನಂಬಿಕೆಗಳೆಂದು ಹಣೆ ಪಟ್ಟಿ ಹಚ್ಚಿ ಆಚೆ ಎಸೆಯುತ್ತಿದ್ದೇವೆ. ಸತ್ಸಂಪ್ರದಾಯಗಳನ್ನು ಸನ್ನಡತೆಗಳ ಭಾಗಗಳನ್ನು ಧಿಕ್ಕರಿಸುವುದು ಮೌಢ್ಯವಲ್ಲದೇ ಮತ್ತೇನು? ಹಳೆಯದೆಲ್ಲ ಹೊಳೆಯುವ ಬಂಗಾರವಲ್ಲ. ಬಂಧುಗಳ ಒಡನಾಟ ವೃದ್ಧಿಸುವ ಅವಕಾಶಗಳನ್ನೆಲ್ಲ ಅರೆಗಳಿಗೆಯೂ ಯೋಚಿಸದೇ ರದ್ದುಗೊಳಿಸುವುದು ಯಾವ ಜಾಣತನ? ‘ಒಂದು ಮಗು ಮೌನವಾಗಿರುವುದನ್ನು ಕಲಿಯುವುದಕ್ಕಿಂತ ಬೇಗ ಮಾತನಾಡುವುದನ್ನು ಕಲಿಯುತ್ತದೆ.’ ಇದರರ್ಥ ಸಂಬಂಧಗಳ ಪ್ರಭಾವ ಅಷ್ಟಿರುತ್ತದೆ. ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ ಮಾತು ಸರಿಯಾಗಿರದಿದ್ದರೆ ಬೀದಿಗೆ ಎಳೆದು ಮಾನ ಕಳೆದು ಬಿಡುವ ಪ್ರಸಂಗಗಳನ್ನು ಕಾಣುತ್ತೇವೆ. ಇವೆಲ್ಲ ಮರೆಯಾದ ಬಂಧಗಳ ಪ್ರಭಾವ. ವಿಶೇಷವಾಗಿ ಬಂಧಗಳಲ್ಲಿ ಒಬ್ಬರಿಗೊಬ್ಬರು ಕಾಲೆಳೆದು ಪರಿಪರಿಯಾಗಿ ನಗುವ ನಗಿಸುವ ಕಿಚಾಯಿಸುವ ಪರಿ ನೋಡ ತಕ್ಕದ್ದು. ಸವಿಯೂ ಅನುಭವಿಸತಕ್ಕದ್ದು. ಮುರಿಯದೇ ಇರುವಂತೆ ಕಾಪಿಡುವ, ಮುರಿದದ್ದನ್ನು ಮತ್ತೆ ಕಟ್ಟುವ ವಿಶೇಷ ತಾಕತ್ತು ಬಂಧಗಳಿಗೆ ಮಾತ್ರ ಉಂಟು. ಆದ್ದರಿಂದ ಕಳೆದುಕೊಂಡು ಮರುಗುವುದು ಬೇಡ.

ಗಂಡು ಹೆಣ್ಣಿನ ಬಂಧ

ಮನೆಯ ದೀಪ ಬೆಳಗುವ ಗೃಹಿಣಿಯಲ್ಲಿ ನಯ ಸಂಕೋಚ. ಅಷ್ಟೇ ಅಲ್ಲ ಸಂದರ್ಭ ಬಂದಾಗ ಮನೆಯೊಡತಿಯಾಗಿ ಪ್ರದರ್ಶಿಸಬೇಕಾದ ನಿಷ್ಟುರತೆಯನ್ನು ಎಗ್ಗಿಲ್ಲದೇ ಪ್ರದರ್ಶಿಸುವುದನ್ನು ನೋಡಿ ಕಲಿಯಲು ಕೂಡು ಕುಟುಂಬದಲ್ಲಿ ಮಾತ್ರ ಸಾಧ್ಯ. ಹಲವೊಮ್ಮೆ ಹೆಣ್ಣಿನ ನಾಜೂಕುತನಕ್ಕಿಂತ ಗಂಡಸರಂತೆ ಒರಟುತನ. ಶತಾಯ ಗತಾಯ ಆಗಲೇಬೇಕೆಂಬ ಹಟ ಇವೆಲ್ಲ ಗಂಡಿನ ದರ್ಪಕ್ಕೆ ಕಡಿವಾಣ ಹಾಕಿಸುತ್ತಿತ್ತು. ಪ್ರತಿಯೊಂದಕ್ಕೂ ಹೀಗೆ ಅಡ್ಡ ಬರಬೇಡ ಇದೊಂದು ಸಲ ಸರಿ ನಿನ್ನಂತೆ ಆಗಲಿ ಎಂದು ಮುನಿಸಿಕೊಂಡವಳನ್ನು ಒಪ್ಪಿಸುವ ಗಂಡಿನ ರಾಜಿ ಸೂತ್ರ ಬಂಧಗಳ ಘಮ ಹೆಚ್ಚಿಸುತ್ತಿತ್ತು. ಯಾವುದೇ ರೀತಿಯ ಸಮಸ್ಯೆಗಳು ಎದುರಾದಾಗ ಗಂಡು ದಯನೀಯ ಪರಿಸ್ಥಿತಿಯಲ್ಲಿರುವಾಗ ಮನೆಗೆಲಸ ಬೇಗ ಮುಗಿಸುತ್ತಾಳೆ. ಆತನ ಕೆಲಸದಲ್ಲಿ ಭಾಗಿಯಾಗುವ ನೆಪದಲ್ಲಿ ಮನೋಸ್ಥೈರ್ಯ ಹೆಚ್ಚಿಸುವುದಕ್ಕೆ ತನ್ನನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಾಳೆ. ಗಂಡ ಹೆಂಡತಿಯ ನಡುವೆ ವಿಚ್ಛೇದನದ ಮಾತು ಎಂದೂ ಹಣುಕಿ ಹಾಕುತ್ತಿರಲಿಲ್ಲ. ಮದುವೆ ಬಂಧದಲ್ಲಿ ಕೂಡಿದ ಎರಡು ಕೈಗಳಿಗೆ ಇನ್ನೆರಡು ಕೈಗಳನ್ನು ಕೂಡಿರುವಂತೆ ಹಿರಿಯರು ಉಪದೇಶಿಸುತ್ತಿದ್ದರು. ಇವೆಲ್ಲವೂ ಸಾಧ್ಯವಾಗುತ್ತಿದ್ದುದು ನವಿರಾದ ಬಂಧಗಳಿಂದ. ಈಗ ಮದುವೆಯಾದ ರಾತ್ರಿಯೇ ಏಳು ಜನುಮದ ಬಂಧ ಎಲೆಗಳಂತೆ ಉದುರಿ ಬೀಳುತ್ತಿದೆ. ವಿಭಕ್ತ ಕುಟುಂಬಗಳು ಮೇಲೆ ಹಾಲಿರುವ ಒಳಗೆ ವಿಷವಿರುವ ಮಡಕೆಯಂತಾಗಿವೆ. ಹಿರಿಯ ಜೀವಿಗಳ ಬಂಧವೊಂದೇ ಇದಕ್ಕೆ ಉತ್ತರ ದೊರಕಿಸಬಲ್ಲದು.
ಜೀವ ದ್ರವ್ಯ

ಸರ್ವಂ ಸ್ವಾರ್ಥಂ ಸಮೀಹತೇ(ಎಲ್ಲವನ್ನೂ ಸ್ವಾರ್ಥ ದೃಷ್ಟಿಯಿಂದಲೇ ಲೆಕ್ಕ ಹಾಕಿ) ಅಂಗಳದ ಗೇಟ್ ಹಾಕಿ ಮುಂಬಾಗಿಲನ್ನು ಕಿಟಕಿಗಳನ್ನು ಮುಚ್ಚಿ ಚಿಲಕ ಸಿಕ್ಕಿಸಿ ಎಲ್ಲ ಬಾಗಿಲು ಮುಚ್ಚಿ ಭದ್ರ ಮಾಡಿ ಬಂಧಗಳು ಬಂದು ನಮ್ಮನ್ನು ಹರಸಲಿ ಎಂದರೆ ಹೇಗೆ ಸಾಧ್ಯ? ಸುಂದರ ಸಂಸಾರ ನಮ್ಮದಾಗಲಿ ಎಂದರೆ ಹೇಗಾದೀತು? ನೋಡುವವನ ಕಣ್ಣಿಗೆ ಹಾಲು ಆಳಕ್ಕಿಳಿದರೆ ಹಾಲಾಹಲವೆಂದರೂ ಬಂಧಗಳು ಹೇಳ ಹೆಸರಿಲ್ಲದೇ ಹಾಳಾಗುತ್ತವೆ.ಹಲವು ರೀತಿಯ ಸಮಸ್ಯೆಗಳಿಗೆ ಉತ್ತರವಾಗಬಲ್ಲ ಜೀವ ದ್ರವ್ಯವನ್ನು ಹೊಂದಿವೆ. ಬಂಧಗಳು ನೀಡುವ ನೆಮ್ಮದಿ ಮಾರ್ಗದರ್ಶನ ಕಡಿಮೆಯದೇನಲ್ಲ. ಅದನ್ನು ಹಣದಿಂದ ಅಳೆಯಲಾಗುವುದಿಲ್ಲ.

ಕೈಗಂಟಿದ ತೈಲದಂತೆ

ನಿಜದಲ್ಲಿ ಬಂಧಗಳು ಕೈಗಂಟಿದ ತೈಲದಂತೆ. ಅದೆಷ್ಟು ತೊಳೆದರೂ ಸುಲಭದಲ್ಲಿ ಹೋಗದು ಬದುಕಿನ ಪ್ರಜ್ಞೆಯನ್ನು ಜೀವನ ದೃಷ್ಟಿಯನ್ನು ರೂಪಿಸುವ ಬಂಧಗಳ ಬಿಟ್ಟು ಎಷ್ಟು ಓಡಿದರೂ ನಿಷ್ಪ್ರಯೋಜಕ. ‘ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆಯಿದೆ?’ ಬಂಧಗಳ ಬಿಟ್ಟು ಆಗಸದೆತ್ತರಕ್ಕೆ ಹಾರಿದ ಹಕ್ಕಿ ಮರಳಿ ಗೂಡು ಸೇರಲೇ ಬೇಕು ಅದೇ ನೈಸರ್ಗಿಕ ನಿಯಮ. ಜೀವನ ಸೌಂದರ್ಯದ ರಹಸ್ಯವೂ ಅದೇ. ಆಲದ ಮರಕ್ಕೆ ಜೋತು ಬಿದ್ದ ಜಡೆ,ಬೇರುಗಳಂತೆ ಬಂಧಗಳು. ಅವುಗಳು ಬಾಳಿನ ಹೆಮ್ಮರದ ಬೇರುಗಳನ್ನು ಗಟ್ಟಿಗೊಳಿಸುತ್ತವೆ. ‘ಅತ್ತಿ ಮರವು ತಾ ಕಾಯ ಹೊತ್ತಿರ್ದ ತೆರನಂತೆ’ ಎನ್ನುವ ಸರ್ವಜ್ಞನ ನುಡಿಯಂತೆ ಅತ್ತಿಯ ಮರದಲ್ಲಿ ಕಾಯಿಗಳಿದ್ದರೂ ಆ ಕಾಯಿಗಳ ತತ್ವವನ್ನು ಅತ್ತಿ ಮರವು ಹೇಗೆ ತಿಳಿಯಲಾರದೋ ಹಾಗೆಯೇ ನಾವು ನಮ್ಮ ಕಾಲತೊಡರಿನಂತಿರುವ ಬಳ್ಳಿಯ ಬಂಧಗಳನ್ನು ಅರಿಯದೇ ಕುರುಡರಂತೆ ವರ್ತಿಸುತ್ತಿದ್ದೇವೆ. ನಮ್ಮ ಕಲ್ಪನೆಯನ್ನು ಸಂವೇದನೆಯನ್ನು ಜೀವನ ದರ್ಶನವನ್ನು ಶಾಂತಿಯನ್ನು ವಿಸ್ತರಿಸುವ ಬಂಧಗಳನ್ನು ತೊರೆಯುತ್ತಿದ್ದೇವೆ. ಸುಖದ ಭ್ರಮೆ ತೂರಿ ಘೋರ ವಿಪತ್ತಿಗೆ ದೂಡುವ ವ್ಯವಸ್ಥೆಗೆ ಅಂಟಿಕೊಳ್ಳುವುದನ್ನು ಬಿಟ್ಟು ಕೈ ಹಿಡಿದು ನಡೆಸುವ ಬಂಧಗಳ ಕೈ ಹಿಡಿದರೆ ಸುಖಮಯ ಜೀವನ ಕೈಗೆಟುಕುವ ಕೊಂಬೆಯಲ್ಲಿ ಸಿಗುವುದು.
ಜಯಶ್ರೀ.ಜೆ. ಅಬ್ಬಿಗೇರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಡಾ. ರಾಮಪ್ಪ ಜಿ

ಸ್ವಾರ್ಥ ತುಂಬಿದ ಜೀವನ.
ಬೆಲೆಯಿಲ್ಲದ ಮನಸ್ಥಿತಿ.
ಆಹಾಂಕಾರ ತುಂಬಿದ ಶರೀರ.
ಹೊಂದಾಣಿಕೆಯ ಕೊರತೆ.
ಇವೆಲ್ಲಾದರೂ ಮಧ್ಯೆ ಬದುಕುವ ಬದುಕು ಬಲು ದುಸ್ತರ,ಮತ್ತು
ಯಾತನಾಮಯಾ……
ಲೇಖನ ತುಂಬಾ ಚೆನ್ನಾಗಿದೆ.

1
0
Would love your thoughts, please comment.x
()
x