ಯೋಗ ಸಂಜೀವಿನಿ: ಪೂರ್ಣಿಮಾ ಗಿರೀಶ್

ಯೋಗ ಅನ್ನುವುದು ಎಲ್ಲರಿಗೂ ಎಟುಕುವ ವಿದ್ಯೆ. ನಿರಂತರ ಅಭ್ಯಾಸದಿಂದ ಯೋಗವನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ದಿನದ ೨೪ ಘಂಟೆಗಳಲ್ಲಿ ನಮ್ಮ ದೇಹ ಮತ್ತು ಮನಸ್ಸು ವಿವಿಧ ಕೆಲಸಗಳಲ್ಲಿ, ಯೋಚನೆಗಳಲ್ಲಿ ಲೀನವಾಗಿರುತ್ತದೆ. ಅಗತ್ಯವಾಗಿರುವ ವಿಶ್ರಾಂತಿ ದೊರೆಯದಿದ್ದಾಗ ನಾವು ಮಾಡುವ ಕೆಲಸಗಳು ಪರಿಪೂರ್ಣವಾಗಿರುವುದಿಲ್ಲ ಮತ್ತು ದೇಹ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳು ಬಹಳ. ಯೋಗಭ್ಯಾಸದಲ್ಲಿ ದೀರ್ಘ ಉಸಿರಾಟಕ್ಕೆ ಬಹಳ ಪ್ರಮುಖವಾದ ಸ್ಥಾನವಿದೆ. ದೀರ್ಘ ಉಸಿರಾಟದೊಡನೆ ಮಾಡುವ ಆಸನಗಳಿಂದ ಚಿತ್ತಕ್ಕೆ ಶಾಂತಿ ಮತ್ತು ಸಂಯಮ ದೊರಕಿ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡಬಹುದಾಗಿದೆ.

ಯಾವ ವಯಸ್ಸಿನಲ್ಲಿ ಯೋಗಾಭ್ಯಾಸ ಶುರುಮಾಡಬೇಕು?? ಚಿಕ್ಕವಯಸ್ಸಿನಲ್ಲಿ ಅಂದರೆ ಸುಮಾರು ೮ ವರ್ಷದ ನಂತರ ಯೋಗಾಭ್ಯಾಸವನ್ನು ನುರಿತ ಗುರುವಿನ ಮೂಲಕ ಶುರು ಮಾಡಬಹುದು. ಚಿಕ್ಕವಯಸ್ಸಿನಲ್ಲಿ ಆಗದಿದ್ದ ಪಕ್ಷದಲ್ಲಿ ಯಾವುದೇ ವಯಸ್ಸಿನಲ್ಲಿ ಯೋಗವನ್ನು ಕಲಿಯಲು ಶುರುಮಾಡಬಹುದು.  

ನಮ್ಮ ಈಗಿನ ರಾಕೆಟ್ ವೇಗದ ಜೀವನದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದಾಳತ್ವ ವಹಿಸಿ, ಬೇಕಾದಷ್ಟು ಸಾಧನೆಯನ್ನು ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಷಯ. ಮನೆಯಿಂದ ಹೊರಗಡೆ ಸಾಧಿಸುವ ಸಾಧನೆಯ ಜೊತೆಗೆ ಅವಳಿಗೆ ಮನೆಮಂದಿಯ, ಸಂಸಾರದ ಜವಾಬ್ದಾರಿ. ಇದನ್ನೆಲ್ಲ ನಮ್ಮ ಮಹಿಳೆಯರು ಬಹಳ ಹಿಂದಿನಿಂದಲೂ ಬಹಳ ಚೆನ್ನಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕೆಲವು ಮಹಿಳೆಯರು ಎಷ್ಟರಮಟ್ಟಿಗೆ ಎಲ್ಲ ಜವಾಬ್ದಾರಿಯನ್ನು ತಲೆಯಲ್ಲಿ ಹೊತ್ತಿರುತ್ತಾರೆ ಎಂದರೆ ತಮಗೋಸ್ಕರ, ತಮ್ಮ ಆರೋಗ್ಯಕ್ಕೋಸ್ಕರ ಸರಿಯಾದ ರೀತಿಯಲ್ಲಿ ಒಂದು ದಿನನಿತ್ಯ ವ್ಯಾಯಾಮ, ಸಮತೋಲನ ಆಹಾರ ಇದರ ಬಗ್ಗೆ ಗಮನ ಕೊಡದೆ ಸುಮಾರು ೪೦ ವರ್ಷ ವಯಸ್ಸಾಗುವ ಹೊತ್ತಿಗೆ ಒಂದಷ್ಟು ರೋಗ, ರುಜಿನಗಳಿಗೆ ತಮ್ಮ ದೇಹದಲ್ಲಿ ಜಾಗ ಮಾಡಿಕೊಟ್ಟಿರುತ್ತಾರೆ. ಇದೆಲ್ಲವನ್ನು ಗಮನಿಸಿದಾಗ ಮಹಿಳೆ ತನಗಾಗಿ ಸ್ವಲ್ಪ ಸಮಯ ಮಾಡಿಕೊಂಡು ದಿನದಲ್ಲಿ ಒಂದೇ ಒಂದು ಘಂಟೆ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ  ನಾನಾ ತರಹದ ರೋಗದ ತೊಂದರೆಗಳಿಂದ ಸುಲಭವಾಗಿ ಹೊರಬರಬಹುದು.

ಒಂದು ಹೆಣ್ಣು ಬಾಲ್ಯದಿಂದ ಪ್ರೌಡಾವಸ್ಥೆ, ನಂತರ ತಾಯಿ, ತದನಂತರ ಮುಟ್ಟು ನಿಲ್ಲುವ ಸಮಯ ಕೊನೆಯಲ್ಲಿ ಅವಳನ್ನು ಕಾಡುವ ಮುಪ್ಪು  ಹೀಗೆ ಜೀವನವನ್ನು ಹಂತ ಹಂತವಾಗಿ ನಡೆಸುತ್ತಾಳೆ. ಈ ಪ್ರತಿಯೊಂದು ಹಂತದಲ್ಲೂ ಅವಳ ದೇಹ ಮತ್ತು ಮಾನಸಿಕ ಸ್ಥಿತಿಯ ಆರೋಗ್ಯ ಬಹಳ ಮುಖ್ಯ. ಯೋಗದಿಂದ ಈ ಎಲ್ಲ ಹಂತದಲ್ಲೂ ಹೆಣ್ಣು ತನ್ನ ದೇಹ ಮತ್ತು ಮನಸ್ಸಿನ ಆರೋಗ್ಯದಲ್ಲಿ ಒಂದು ಸಮತೋಲನ ಕಾಪಾಡಿಕೊಳ್ಳಬಹುದು. 

ಬಾಲ್ಯಾವಸ್ಥೆಯಲ್ಲಿ ಯೋಗ ಒಂದು ಆಟದ ತರಹ ಕಲಿಯಬಹುದು. ಪ್ರೌಢಾವಸ್ಥೆಯಲ್ಲಿ ಹೆಣ್ಣಿನ ದೇಹದಲ್ಲಿ ನಾನಾ ಬದಲಾವಣೆಗಳಾಗುತ್ತದೆ, ಯೋಗ ದೇಹದ ಸುಂದರತೆ ಕಾಪಾಡುತ್ತದೆ, ಋತುಚಕ್ರವನ್ನು ನಿಯಂತ್ರಿಸುತ್ತದೆ, ದೇಹದಲ್ಲಿ ಬೊಜ್ಜು ಸೇರಿಕೊಳ್ಳದಂತೆ ತಡೆಯುತ್ತದೆ ಮತ್ತು ಮುಖ್ಯವಾಗಿ ದೇಹದಲ್ಲಿ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.  ಈ ಪ್ರೌಡಾವಸ್ಥೆ ಸರಿಯಾದ ಸಮಯ ಯೋಗಾಭ್ಯಾಸ ಶುರುಮಾಡಲು. 

ವಿದ್ಯಾಭ್ಯಾಸ ಮುಗಿಸಿ ತನ್ನ ಜೀವನ ಸ್ವತಂತ್ರವಾಗಿ ನಡೆಸಬೇಕೆಂಬ ಆಸೆ ಹೊತ್ತ ಮಹಿಳೆ ಉದ್ಯೋಗಕ್ಕೆ ಸೇರಿದಾಗ, ಅಲ್ಲಿ ಕೆಲಸದ ಒತ್ತಡ, ಒಂದೇ ಕಡೆ ಗಂಟೆಗಟ್ಟಲೆ ಕುಳಿತು ತನ್ನ ಕೆಲಸ ಮುಂದುವರೆಸುತ್ತಾಳೆ. ಸ್ವತಂತ್ರ ಜೀವನವೇನೋ ದೊರಕಿತು, ಒಂದೇ ಕಡೆ ಕುಳಿತು ದೇಹಕ್ಕೆ ಬೇಕಾದಂತ ವ್ಯಾಯಾಮ ದೊರೆಯದೆ ಬೆನ್ನು / ಸೊಂಟ ನೋವಿಂದ ಒದ್ದಾಡುತ್ತಿರುವ ನೂರಾರು ಮಹಿಳೆಯರಿದ್ದಾರೆ. ಇವರಿಗೆ ಯೋಗಾಭ್ಯಾಸವು ಖಂಡಿತವಾಗಿಯು ಒಂದು ವರದಾನ. ಯೋಗ ಶುರು ಮಾಡಿದ ಕೆಲವೇ ದಿನಗಳಲ್ಲಿ ಅನುಭವಿಸುತ್ತಿರುವ ನೋವಿಗೆ ಪರಿಹಾರ ಸುಲಭದಲ್ಲಿ ಸಿಗುತ್ತದೆ.

ನಂತರ ಬರುವ ಹಂತ ಮಗುವಿನ ತಾಯಿಯ ಪಾತ್ರ. ಈ ಸಮಯದಲ್ಲೂ ಕೂಡ ಯೋಗ ಮುಖ್ಯ ಪಾತ್ರ ವಹಿಸುತ್ತದೆ. ಮದುವೆಯಾಗಿ ಎಷ್ಟೋ ವರ್ಷಗಳಾಗಿ ಮಕ್ಕಳು ಆಗಿರದ ಹೆಣ್ಣು ಮಕ್ಕಳಿಗೆ ಯೋಗ ಮಾಡಲು ವೈದ್ಯರು ಸಲಹೆ ನೀಡುತ್ತಿದ್ದಾರೆ. "ಯೋಗಾ ಫ಼್ರಮ್ ಕನ್ಸೆಪ್ಶನ್ ಟು ಮದರ್-ಹುಡ್" ಅಂತಾನೆ  ಕೆಲವು ಸೂಕ್ಷ್ಮ ವ್ಯಾಯಾಮ, ಆಸನಗಳು, ಪ್ರಾಣಾಯಾಮ, ಧ್ಯಾನ ಅಂತ ಅವರಿಗೆ ತಕ್ಕ ಒಂದು ಘಂಟೆಯಲ್ಲಿ ಮಾಡುವ ಯೋಗಾಭ್ಯಾಸವಿದೆ. ಮಗು ಹುಟ್ಟಿದ ಮೇಲೂ ಕೂಡ ಅವಳು ಆರೋಗ್ಯವಾಗಿರಲು ಮತ್ತು ದೇಹದ ತೂಕ ಕಾಪಾಡಿಕೊಳ್ಳಲು ಯೋಗ ಸಹಾಯ ಮಾಡುತ್ತದೆ.

ಮಧ್ಯವಯಸ್ಸಿನಲ್ಲಿ ಅಂದರೆ ೪೫-೫೦ ವರ್ಷ ವಯಸ್ಸಿನಲ್ಲಿ ಕಾಡುವ ಮೆನೋಪಾಸ್ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಇದು ಅವಳ ಮನಸ್ಸಿನ ಮೇಲೆ ಬಹಳ ಪರಿಣಾಮವನ್ನುಂಟುಮಾಡುತ್ತದೆ. ಬಿಪಿ, ತಲೆನೋವು, ಸ್ಥೂಲಕಾಯ, ಏಕಾಂಗಿತನ, ನಿದ್ರಾಹೀನತೆ ಇನ್ನೂ ಅನೇಕ ತೊಂದರೆಗೆ ಒಳಗಾಗುತ್ತಾಳೆ. ೫-೬ ವರ್ಷದ ಹಿಂದೆ ನೀರು ಕುಡಿದ ಹಾಗೆ ಮಾಡುತ್ತಿದ್ದ ಕೆಲಸ ಈಗ ಇವಳಿಗೆ ಕಷ್ಟವಾಗುತ್ತದೆ, ಮುಖದಲ್ಲಿ ನಗು ಮಾಸಿ ಹೋಗುತ್ತದೆ, ಮೈಯಲ್ಲಿ ಶಕ್ತಿ ಕುಗ್ಗುತ್ತದೆ. ತಾನಾಯಿತು ತನ್ನ ಮನೆಕೆಲಸವಾಯಿತು ಅನ್ನುವ ಹಾಗೆ ಯಾಂತ್ರಿಕ ಜೀವನ ನಡೆಸಲು ಶುರುಮಾಡುತ್ತಾಳೆ. ಅನಾರೋಗ್ಯ ಎಲ್ಲರನ್ನೂ ಕಾಡುತ್ತದೆ ಆದರೆ ಅದನ್ನ ಅನುಭವಿಸುವುದೋ ಅಥವಾ ಹೊಡೆದು ಓಡಿಸುವುದೋ ನಮಗೆ ಬಿಟ್ಟಿದ್ದು. ಇಂತಹ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ಸಂಜೀವಿನಯ ಹಾಗೆ "ಯೋಗ" ಕೆಲಸ ಮಾಡುತ್ತದೆ. ಯೋಗಾಭ್ಯಾಸ ಅಂದರೆ ವಿವಿಧ ಆಸನಗಳನ್ನು ಮಾಡುವುದರಿಂದ ಬರಿಯ ದೇಹ ಮಾತ್ರ ಆರೋಗ್ಯಕರವಾಗಿರದೆ ಮನಸ್ಸು ಕೂಡ ಶಾಂತತೆಯನ್ನು ಹೊಂದುತ್ತದೆ. ದಿನನಿತ್ಯ ಒಂದು ಘಂಟೆಗಳ ಕಾಲ ನುರಿತ ಗುರುವಿನ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದಲ್ಲಿ ಮೇಲೆ ಹೇಳಿದಂತಹ ತೊಂದರೆಗಳಿಂದ ಕೆಲವೇ ತಿಂಗಳಲ್ಲಿ ನಿವಾರಣೆ ಪಡೆದುಕೊಳ್ಳಬಹುದು. 

ಜೀವನದ ಕೊನೆಯ ಹಂತ ಮುಪ್ಪು. ಮೈಯಲ್ಲಿ ಶಕ್ತಿಯಿಲ್ಲ, ಮನೆಯಲ್ಲಿ ಯಾರಿಗೂ ಬೇಡದ ಜೀವ. ತಮ್ಮ ಕೆಲಸ ತಾವು ಮಾಡಿಕೊಂಡು ಇನ್ನೊಬ್ಬರಿಗೆ ಭಾರವಾಗಿರದೆ ಜೀವನ ನಡೆಸಬೇಕಾದರೆ ಆರೋಗ್ಯ ಇಲ್ಲಿ ತುಂಬಾನೇ ಮುಖ್ಯ. ಈ ಇಳಿವಯಸ್ಸಿನಲ್ಲೂ ಕೂಡ ಅವರಿಗಾದಷ್ಟು ಆಸನಗಳನ್ನು ಪ್ರಾಪ್ಸ್ ಉಪಯೋಗಿಸಿ ಮಾಡಬಹುದು, ಪ್ರಾಣಾಯಾಮ, ಧ್ಯಾನಗಳಿಂದ ಮನಸ್ಸಿಗೆ ಶಾಂತಿ ತಂದುಕೊಂಡು ಜೀವನವನ್ನು ಆರೋಗ್ಯಕರವಾಗಿ ನಡೆಸಬಹುದು.

ಒಟ್ಟಾಗಿ ಹೆಣ್ಣುಮಕ್ಕಳಿಗೆ ಜೀವನವಿಡೀ ಕಾಡುವ ಬೆನ್ನು ನೋವು, ಸ್ಥೂಲಕಾಯ, ಬಿಪಿ, ಥೈರಾಯ್ಡ್, ವೇರಿಕೋಸ್, ಸಿಯಾಟಿಕ, ಮೈಗ್ರೇನ್, ಋತುಚಕ್ರದಲ್ಲಿ ಏರುಪೇರು, ಅಜೀರ್ಣ, ಕೀಲುನೋವು, ಡಯಾಬಿಟೀಸ್, ಖಿನ್ನತೆ ಮತ್ತು ಹೃದಯಕ್ಕೆ ಸಂಬಂಧಿಸಿದ  ಖಾಯಿಲೆಯನ್ನು ತಡೆಗಟ್ಟಲು ಮತ್ತು ನಿವಾರಿಸಲು ಯೋಗ ಸಹಾಯ ಮಾಡುತ್ತದೆ. 

ಬೇರೆಯ ರೀತಿಯ ವ್ಯಾಯಾಮಗಳಿಗೆ ಹೋಲಿಸಿದಾಗ ಯೋಗ ಮಹಿಳೆಯರಿಗೆ ಸೂಕ್ತ. ಕೆಲವು ಮಹಿಳೆಯರಿಗೂ ಜಿಮ್, ಏರೋಬಿಕ್ಸ್, ಸ್ವಿಮ್ಮಿಂಗ್ ಇತ್ಯಾದಿ ವ್ಯಾಯಾಮ ಮುಜುಗರ ಆಗಬಹುದು ಮತ್ತು ಅದಕ್ಕೆಲ್ಲ ಕೆಲವು ಉಪಕರಣಗಳ ಅಗತ್ಯವೂ ಇರುತ್ತದೆ. ಯೋಗದಲ್ಲಿ ಯಾವುದೇ ಯಂತ್ರೋಪಕರಣವಿಲ್ಲದೆ, ತಮ್ಮ ಪಾಡಿಗೆ ತಾವು, ತಮಗೆ ಸೂಕ್ತವಾದ ಗತಿಯಲ್ಲಿ, ಅನುಕೂಲವಾದ ರೀತಿಯಲ್ಲಿ ಮಾಡಿಕೊಳ್ಳಬಹುದು. ಮತ್ತೊಂದು ಮುಖ್ಯವಾದ ಅಂಶವೆಂದರೆ ಯೋಗ ಒಂದು ಸುರಕ್ಷಿತವಾದ, ಹೆಚ್ಚು ಅಪಾಯವಿಲ್ಲದ ವ್ಯಾಯಾಮ. ಇದೆಲ್ಲವನ್ನು ನೋಡಿದಾಗ ನಮ್ಮ ಪುರಾತನ ಕಾಲದಿಂದ ನಮಗೆ ಬಳುವಳಿಯಾಗಿ ಬಂದಿರುವ ಯೋಗ ಸಂಜೀವಿನಿಯಲ್ಲದೆ ಮತ್ತೇನು. ಬನ್ನಿ, ಇಂದೇ ನಿಮ್ಮಲ್ಲಿಗೆ ಹತ್ತಿರವಿರುವ ಯೋಗ ತರಗತಿಗಳಿಗೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ. ಜೀವನವನ್ನು ಸಂತೋಷದಿಂದ ಕಳೆಯಿರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
amardeep.ps
amardeep.ps
10 years ago

ಮಹಿಳೆಯರ ಆರೋಗ್ಯಕ್ಕೆ ಯೋಗ ಮಾಹಿತಿ ಚೆನ್ನಾಗಿದೆ….ಅಭಿನಂದನೆಗಳು

ವಿನೋದ್ ಕುಮಾರ್ ಬೆಂಗಳೂರು
ವಿನೋದ್ ಕುಮಾರ್ ಬೆಂಗಳೂರು
10 years ago

ಬಹಳ ಉಪಯುಕ್ತವಾದ ಲೇಖನ. ಅಭಿನಂದನೆಗಳು !
ವಿನೋದ್ ಕುಮಾರ್ ಬೆಂಗಳೂರು

Veena Bhat
Veena Bhat
10 years ago

ಚೆನ್ನಾಗಿದೆ ಪೂರ್ಣಿಮಾ….:)

ಜಯಲಕ್ಷ್ಮಿ ಪಾಟೀಲ್
ಜಯಲಕ್ಷ್ಮಿ ಪಾಟೀಲ್
1 year ago

ಮಾಹಿತಿಪೂರ್ಣ ಲೇಖನ.

4
0
Would love your thoughts, please comment.x
()
x