ಒಂದು ಸ್ನೇಹದ ಸುತ್ತ: ಪ್ರಶಸ್ತಿ ಅಂಕಣ

ತೊಳೆಯಬೇಕೆಂದು ನೆನೆಸಿದರೂ ತೊಳೆಯಲಾಗದ ಸೋಮಾರಿತನಕ್ಕೆ ಬಕೆಟ್ಟಲ್ಲೇ ಕೊಳೆಯುತ್ತಿರುವ ಬಟ್ಟೆ, ಉತ್ತರ ದಕ್ಷಿಣಕ್ಕೆ ಮುಖಮಾಡಿರೋ ತನ್ನ ಮೂಲ ಬಣ್ಣ ಬಿಳಿಯೋ, ಹಳದಿಯೋ,  ಸಿಮೆಂಟೋ ಎಂದು ತನಗೇ ಮರೆತು ಹೋದಂತಾಗಿರೋ ಬೂದು ಶೂಗಳಿಂದ ಹೊರಬಿದ್ದು ತನ್ನ ಅಸ್ತಿತ್ವ ಸಾರುತ್ತಿರೋ ಸಾಕ್ಸುಗಳು, ನಾಯಿ ನಾಲಗೆಯಾದಂತಾಗಿ ಕೆಲವೆಡೆ ತಳ ಕಂಡರೂ ಇನ್ನೂ ಮುಕ್ತಿ ಕಾಣದ ಚಪ್ಪಲಿ, ಹೊರಗೆ ಒಣಗಿಸಿ ವಾರವಾದರೂ ತೆಗೆಯದಿದ್ದ ನನ್ನ ಬಟ್ಟೆಗಳಿಂದ ತನ್ನ ಬಟ್ಟೆಗೆ ಜಾಗವಿಲ್ಲವೆಂದು ಸಿಟ್ಟಿಗೆದ್ದ ಗೆಳೆಯ ತಂದು ಒಗೆದಿರೋ ಗುಪ್ಪೆ ಗುಪ್ಪೆ ಬಟ್ಟೆಗಳು, ತರಿಸಿದರೂ ಓದುವುದಿರಲಿ ಮಡಚಿಡಲೂ ಸೋಮಾರಿತನವಾಗಿ ಅಲ್ಲಲ್ಲೇ ಬಿದ್ದಿರೋ ನ್ಯೂಸ್ ಪೇಪರ್ಗಳು, ಓದಬೇಕೆಂದು ತಂದಿದ್ದ ಬುಕ್ಕುಗಳ ಬೈಂಡಿಗೇ ಕಾಣದಷ್ಟು ದಟ್ಟವಾಗಿ ಕೂತಿರೋ ಧೂಳು… ಹೀಗೆ ರೂಮಲ್ಲಿ ಕಣ್ಣ ಹಾಯಿಸಿದತ್ತೆಲ್ಲಾ ಅಸ್ತವ್ಯಸ್ಥ. ಕಸಗುಡಿಸೋ ಆಂಟಿ ಮೂರು ದಿನಕ್ಕೊಮ್ಮೆ ಆಸ್ಥೆಯಿಂದ ಗುಡಿಸಿ, ಒರೆಸದಿದ್ದರೆ ಎದುರಿಗೆ ಕಂಡದ್ದಷ್ಟು ಬಲೆ ಹೊಡೆಯದಿದ್ದರೆ ಆ ರೂಮಿಗೆ ಭೂತ ಬಂಗಲೆಯ ಕಳೆಯೇ. 

ಮುಂಚೆ ಹೀಗಿದ್ದವನಲ್ಲ ಪಾಪು. ಪಾಪುವೆಂದರೆ ಹಾಲು ಕುಡಿಯೋ ಪಾಪುವಲ್ಲ. ವಯಸ್ಸು ಬಾಲ್ಯ, ಕೌಮಾರ್ಯ ದಾಟಿ ಯೌವನಕ್ಕೆ ಕಾಲಿಟ್ಟಾಗಿತ್ತು, ಪ್ರಮಿಳಾತನಯ ಅನ್ನೋ ಇವನ ಹೆಸರು ಬರೆಯಲು, ಕರೆಯಲು ಕಷ್ಟವಾಗಿ ಎಲ್ಲರ ಬಾಯಲ್ಲಿ ಪಾಪುವಾಗಿಬಿಟ್ಟಿದ್ದ. ಸ್ವಭಾವದಲ್ಲೂ ಹಾಗೆಯೇ ಅವ. ಭೋಲೇನಾಥನಂತೆ. ಹೇಳಿದ್ದೆಲ್ಲಕ್ಕೂ ಹೌದೌದು ಅಂದುಬಿಡುವವ. ಕಂಡದ್ದೆಲ್ಲಾ ಸತ್ಯವೆಂದು, ಸಿಕ್ಕವರೆಲ್ಲಾ ಸಜ್ಜನರೆಂದು ನಂಬಿ ಬಿಡುವವ. ಇಂತಹ ಪಾಪುಗೆ ಸಿಟಿಯ ಕಾಲೇಜಿಗೆ ಕಾಲಿಟ್ಟು ಹಲ ತಿಂಗಳಾದರೂ ಅಲ್ಲಿನ ಫ್ಯಾಷನ್ ಹುಡುಗಿಯರೊಂದಿಗೆ ಮಾತನಾಡಲು ಭಯ. ಆ ಜೀನ್ಸಿಣಿ,ಸ್ಕರ್ಟಿಣಿಗಳ ಮಧ್ಯೆ ಕಣ್ಣಿಗೆ ಬಿದ್ದು ಹೇಗೋ ಪರಿಚಯವಾದ ಚೂಡಿದಾರ ಖುಷಿ. ಸುಮ್ಮನೇ ಕ್ಲಾಸ ಡೌಟು, ಲೆಕ್ಚರ ನೋಟ್ಸು ವಿನಿಮಯದಲ್ಲಿ ಶುರುವಾದ ಸ್ನೇಹ ಇವನ ಪುಸ್ತಕದ ಮೂಲೆಯ ಗೀಚುಗಳ ಫೇಸ್ಬುಕ್ಕಿಗೆ ದಾಟಿಸಿ ಲೈಕು, ಉದ್ದುದ್ದ ಕಾಮೆಂಟ್ ಕೊಡೋವರೆಗೆ , ಅವಳ ಫೇಸ್ಬುಕ್ ಪೋಟೋಗಳಿಗೆ ಎಲ್ಲರೆದರು ಲೈಕಿಸಲು ಭಯವಾಗಿ ಮೆಸೇಜ್ ಮಾಡಿ ಮೆಚ್ಚುಗೆ ಕೊಡೋವರೆಗೆ ಮುಂದುವರೆದಿತ್ತು.

ಅಂತೂ ಮೊದಲ ವರ್ಷದ ಎರಡು ಸೆಮಿಸ್ಟರುಗಳೂ ಮುಗಿದು ರಜಾ ಶುರುವಾಗಿತ್ತು. ರಜಾದಲ್ಲೇನೋ ಬಣ್ಣಬಣ್ಣದ ಕನಸುಗಳು. ರಜಾ ಮುಗಿದು ಯಾವಾಗ ಕಾಲೇಜು ಶುರುವಾಗುತ್ತೋ ಎಂಬ ಕಾತರ. ಒಮ್ಮೆ ಫೋನ್ ಮಾಡಿಬಿಡಲಾ ಅಂತ ಅದೆಷ್ಟೋ ರಾತ್ರಿ ಯೋಚಿಸಿದ್ದ. ಆದ್ರೆ ಅವಳ ಬದ್ಲು ಇನ್ಯಾರಾದ್ರೂ ಎತ್ತಿದ್ರೆ ಏನು ಕೇಳೋದು ? ಅದು ಹೋಗ್ಲಿ ನಮ್ಮ ಮನೇಲೇ ಯಾರಾದ್ರೂ ಕೇಳಿದ್ರೆ ಏನು ಹೇಳೋದು ? ಯಪ್ಪಾ. ಬೇಡವೇ ಬೇಡ ಅನಿಸಿಬಿಟ್ಟಿತ್ತು. ಥೋ, ಅಷ್ಟೆಲ್ಲಾ ಯಾಕೆ ಯೋಚನೆ ಮಾಡೋದು , ರಿಸಲ್ಟ್ ಬಂತಾ ಅಂತನೋ, ಸೆಮ್ ಯಾವಾಗ್ಲಿಂದ ಶುರು ಅಂತನೋ ಕೇಳಿದ್ರಾಯ್ತು ಅಂತ ಅನೇಕ ಸಲ ಅಂದ್ಕೊಂಡಿದ್ರೂ ಧೈರ್ಯ ಸಾಕಾಗಿರ್ಲಿಲ್ಲ. ಕೊನೆಗೂ ಒಮ್ಮೆ ಧೈರ್ಯ ಮಾಡಿ ಕಾಲು ಮಾಡಿದ್ದ . ಆದ್ರೆ ಆ ಕಡೆ ಫುಲ್ ರಿಂಗಾಗಿದ್ದೇ ಬಂತು. ಯಾರೂ ಎತ್ತಿರಲಿಲ್ಲ. ಒಮ್ಮೆ ಬೇಜಾರಾದರೂ ಆಮೇಲೆ ಫೋನಲ್ಲಿ ಬ್ಯಾಟ್ರಿ ಇತ್ತೋ ಇಲ್ವೋ, ಫೋನಿಟ್ಟು ಬೇರೆ ಎಲ್ಲಾದ್ರೂ ಹೋಗಿದ್ಲೋ ಏನೋ ಅಥವಾ ಇನ್ನೇನೋ ಆಗಿರಬಹುದೇನೋ ಹೇಗಿದ್ರೂ ಆಮೇಲೆ ಮಿಸ್ಕಾಲ್ ನೋಡಿ ಕಾಲ್ ಮಾಡ್ತಾಳೆ ಬಿಡು ಅಂತ ಸಮಾಧಾನ ಮಾಡ್ಕೊಂಡ. ಒಂದು ಘಂಟೆಯಾಯ್ತು. ಎರಡಾಯ್ತು. ಊಹೂಂ. ನಿರೀಕ್ಷೆಯಲ್ಲೇ ಒಂದು ದಿನ ಕಳೆಯಿತು. ಊಹೂಂ. ಹಿಂಗೇ ಎರಡು ದಿನ ಕಳೆದ ಮೇಲೆ ಆಕೆಯ ಫೋನೇ ಕಳೆದುಹೋಗಿರ್ಬೋದು. ಹೇಗಿದ್ರೂ ಇನ್ನು ಕಾಲೇಜು ಶುರು ಆಗೋಕೆ ಕೆಲವೇ ದಿನ ಉಳಿದಿದೆ. ಸಿಕ್ಕಾಗ ಕೇಳಿದ್ರಾಯ್ತು ಅಂತ ಸಮಾಧಾನ ಮಾಡ್ಕೊಂಡ. 

ಅಂತೂ ಕಾಲೇಜು ಶುರುವಾಯ್ತು. ಮೊದಲ ಪೀರಿಯಡ್ಡಿಗಿಂತ ಕಾಲು ಘಂಟೆ ಮುಂಚೆಯೇ ಬಂದು ಅವಳ ನಿರೀಕ್ಷೆಯಲ್ಲಿದ್ದ. ಲೆಕ್ಚರ್ ಕ್ಲಾಸಿಗೆ ಕಾಲಿಟ್ಟರೂ ಅವಳ ಸುಳಿವಿಲ್ಲ. ಎರಡನೆಯ ಕ್ಲಾಸಿಗಾದರೂ ಬರುತ್ತಾಳೇನೋ ಎಂಬ ನಿರೀಕ್ಷೆ. ಊಹೂಂ. ಎರಡನೇ ಕ್ಲಾಸಿನ ಲೆಕ್ಚರ್ರು ಪಾಟ ಪ್ರಾರಂಭಿಸೋ ಮೊದ್ಲೇ ಎಲ್ಲಾ ಸಾರ್… ಅಂತ ಕೂಗಕ್ಕೆ ಶುರು ಮಾಡಿದ್ರು. ಲೆಕ್ಚರಿಗೂ ಹುಡುಗರ ಮನಸ್ಥಿತಿ ಅರ್ಥವಾಗಿತ್ತು. ಹೆ.ಹೆ. ಜಾಸ್ತಿ ಗಲಾಟೆ ಮಾಡ್ಬೇಡಿ. ಇನ್ನು ಅರ್ಧ ಘಂಟೆ ಆದ್ರೂ ಕ್ಲಾಸಲ್ಲೇ ಇರಿ ಅಂತೇಳಿ ಹೊರನಡೆದ್ರು. ಮೊದ್ಲ ಪೀರಿಯಡಲ್ಲೂ ಇದೇ ಆಗಿತ್ತನ್ನೋದು ವಿಷ್ಯ ಬೇರೆ! ಕ್ಲಾಸಿಗೆ ಹೆಚ್ಗೆ ಯಾರೂ ಬಂದಿಲ್ಲ. ಸೋ. ಇವತ್ತು ಮನೆಗೆ ಹೋಗ್ತಿವಿ ಬಿಡಿ ಮಿಸ್ ಅಂತ ಮೂರನೇ ಪೀರಿಯಡ್ ಮಿಸ್ಸಿಗೆ ಬೆಣ್ಣೆ ಹಚ್ಚಿ ಒಪ್ಪಿಸಿಬಂದ ಕ್ಲಾಸ್ ರೆಪ್ರಸೆಂಟೇಟಿವ್. ಎಲ್ಲಾ ಎದ್ದು ಮನೆಗೆ ಹೊರಡಲು ರೆಡಿಯಾದ್ರೂ ಪಾಪುಗೆ ಖುಷಿಯನ್ನು ಕಾಣದೇ ಖುಷಿಯಿಲ್ಲ. ಏನೋ ಒಂತರ. 

ಮಾರನೇ ದಿನವೂ ಇದೇ ಕತೆ. ಹೀಗೆ ಮೂರು ದಿನ ಕಾದು ಬೇಸತ್ತು ಕೊನೆಗೆ ಹುಡುಗಿ ಕ್ಲಾಸ್ ರೆಪ್ರಸೆಂಟೇಟಿವ್ ಹತ್ರ ಹೋಗಿ ಕೇಳಿದ್ದ. ಖುಷಿ ಎಲ್ಲಿ ಅಂತ. ಅವಳಿಗೆ ಇವನ ಕಾಡೋ ಮನಸ್ಸಿದ್ದರೂ ಮೂರು ದಿನದಿಂದ ಇವನ ಬಾಡಿದ ಮುಖ ನೋಡಿ ಇನ್ನಷ್ಟು ಕಾಡೋ ಮನಸ್ಸಾಗದೇ ಹೇಳೇಬಿಟ್ಲು. ಅವಳ ಮ್ಯೂಚ್ಯುಯಲ್ ಟ್ರಾನ್ಸಫರ್ ತಗೊಂಡು ಬೇರೆ ಕಾಲೇಜಿಗೆ ಹೋದ್ಲಲ್ಲ. ನಿನಗೆ ಹೇಳಿರ್ಲಿಲ್ವಾ ಅಂತ ಕೊಂಚ ಆಶ್ಚರ್ಯದಿಂದ್ಲೇ ಪ್ರಶ್ನಿಸ್ತಿದ್ರೆ ಇವ್ನ ಮನಸ್ಸಲ್ಲಿ ನೂರು ಕುದುರೆಗಳು ಓಡಿದಂತೆ. ಒಂದು ಮಾತಾದ್ರೂ ಹೇಳಬಹುದಿತ್ತಲ್ಲ. ಯಾಕೆ ಹಿಂಗೆ ಮಾಡಿದ್ಲು. ಅವ್ರ ಮನೇಲೇನಾದ್ರೂ ಪ್ರಾಬ್ಲಂ ಆಗಿರಬಹುದಾ ? ನಾನವತ್ತು ಫೋನ್ ಮಾಡಿದ್ರಿಂದೇನಾದ್ರೂ ? ಛೇ ಛೇ ಹಾಗೆಲ್ಲಾ ಆಗಿರಲಾದ್ರು. ಯಾಕಾಗಿರಬಾದ್ರು ? ನನ್ನ ಫೋನಿಂದ್ಲೇ ಏನಾದ್ರೂ ಮಾತುಕತೆ ಬೆಳೆದು.. ಹೀಗೆ ಅವಳ ಕಾಲೇಜು ಬದಲಾವಣೆಗೆ ತಾನೇ ಕಾರಣ ಅನ್ನೋ ಅಪರಾಧಿ ಪ್ರಜ್ಞೆ ಬೆಳೆಯೋಕೆ ಶುರು ಆಯ್ತು.

ಹಿಂಗೇ ಒಂದೆರಡು ವಾರ ಕಳೆಯೋ ಹೊತ್ತಿಗೆ ಫುಲ್ ದೇವದಾಸ್ ಗೆಟಪ್ಪಿಗೆ ಬಂದು ಬಿಟ್ಟಿದ್ದ ಪಾಪು. ಕ್ಲಾಸಲ್ಲೆಲ್ಲಾ ಅರೆಮಗ್ನನಾಗಿ ಏನೋ ಆಲೋಚನೆ ಮಾಡುತ್ತಿರುವಂತೆ ಕೂತು ಬಿಡುತ್ತಿದ್ದ. ಅವಳಿಲ್ಲದ ಜೀವನವೇ ನಶ್ವರ ಎಂದೂ ಹಲಬಾರಿ ಅನಿಸಿದ್ದುಂಟು. ಸರ್ಪ್ರೈಸು ಟೆಸ್ಟಿನಲ್ಲಿ ಸೊನ್ನೆ ಸುತ್ತಿದ್ದ ಇವನನ್ನು ನೋಡಿ ಲೆಕ್ಚರರುಗಳಿಗೆಲ್ಲಾ ಶಾಕು. ಹಿಂದಿನ ಸೆಮ್ಮಿನಲ್ಲಿ ಟಾಪ್ ಐದರಲ್ಲಿರುತ್ತಿದ್ದ ಪಾಪು ಇವನೇನಾ ಅಂತ. ಆದರೆ ಪಾಪು-ಖುಷಿಯ ಬಗ್ಗೆ ಗೊತ್ತಿದ್ದ ಒಂದಿಷ್ಟು ಖಾಸ್ ಗೆಳೆಯರು ಮಾತ್ರ ಅಯ್ಯೋ ಪಾಪು ಅಂತಿದ್ರು. ಇನ್ನೊಂದು ವಾರದಲ್ಲಿ ಮೊದಲ ಇಂಟರ್ನಲ್ಲು. ಹೀಗಾದ್ರೆ ಹೇಗಪ್ಪಾ ಅಂತ ಪಾಪುವಿಗಿಂತ ಅವನ ಗೆಳೆಯರಿಗೇ ಚಿಂತೆ ಶುರುವಾಗಿತ್ತು. ಶನಿವಾರ ತಡ ರಾತ್ರೆ ಲ್ಯಾಪ್ ಟಾಪಿನಲ್ಲಿ ಯಾವುದೋ ಸಿನಿಮಾ ನೋಡುತ್ತಿದ್ದ ಪಾಪುಗೆ ಯಾವಾಗ ಕಣ್ಣು ಹತ್ತಿತೋ ಗೊತ್ತಿಲ್ಲ. ಕಣ್ಣು ಬಿಡುತ್ತಾನೆ. ತಾನು ಯಾವುದೋ ಪ್ರಪಾತದ ಅಂಚಲ್ಲಿ ನಿಂತಂತೆ. ಅಲ್ಲೇ ಐದು ಅಡಿ ದೂರದಲ್ಲಿ ನಿಂತಿರೋ ಯಮನ ಭಟರು ತಮ್ಮ ಪಾಶದೊಂದಿಗೆ ಕಾಯ್ತಾ ಇದಾರೆ. ಹಾರಿಬಿಡು ನೀನು ಕೆಳಕ್ಕೆ. ನಿನ್ನನ್ನು ಸೀದಾ ಕುಂಭಿಪಾಕ ನರಕಕ್ಕೆ ಕರೆದೊಯ್ಯುತ್ತೇವೆ. ವೈತರಣಿ ನದಿಯನ್ನು ಬಿಟ್ಟು ಎಂಭತ್ತಾರು ಸಾವಿರ ಯೋಜನ ಹಾದಿಯನ್ನು ನಡೆಸಿ ನಿನ್ನ ಯಮನ ಪಟ್ಟಣಕ್ಕೆ ತಲುಪಿಸುತ್ತೇವೆ. ಸೌಮ್ಯ, ಸೌರಿಪುರ, ನಾಗೇಂದ್ರಭವನ, ಗಂಧವ್ರ, ಶೈಲಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ.. ಗಳೆಂಬ  ಗರುಡಪುರಾಣದಲ್ಲಿರೋ ಹದಿನಾರು ಪಟ್ಟಣಗಳನ್ನು ದಾಟಿಸಿ ತರತರದ ನರಕಗಳ ಶಿಕ್ಷೆಯನ್ನನುಭವಿಸೋಕೆ ಸಿದ್ದನಾಗು ಅಂತ ಅವರು ಗಹಗಹಿಸಿದಂತೆ. ಯಾರಿಗಾದ್ರೂ ವಿದ್ಯಾದಾನ ಮಾಡಿದ್ಯಾ ? ಇಲ್ಲ. ಹಸಿದ ಗೆಳೆಯರಿಗೆ, ಒಂದು ಯಕಶ್ಚಿತ್ ನಾಯಿಗಾದರೂ ಒಂದು ತುತ್ತು ಅನ್ನ ಕೊಟ್ಟಿದ್ಯಾ ಯಾವತ್ತಾದ್ರೂ ? ಜೀವನದಲ್ಲಿರೋ ನೂರು ಜವಾಬ್ದಾರಿಗಳಿಗೆ ಅಭಿಮುಖನಾಗಿ ಯಾರೋ ಸಿಗಲಿಲ್ಲವೆಂಬ ಕ್ಷುಲಕ ಕಾರಣಕ್ಕೆ ದುರ್ಲಭ ಮಾನವ ಜನ್ಮವನ್ನು ತ್ಯಜಿಸಹೊರಟಿರೋ ನಿನಗೆ ಘೋರಾತಿಘೋರ ನರಕ ಕಾದಿದೆ ಮಗನೆ. ಬಾ. ಹಾರು ಇಲ್ಲಿಂದ. ಬೇಗ ಹಾರು ಎಂದು ಅವರು ಗಹಗಹಿಸಿದಂತೆ. ಇಲ್ಲ. ಇಲ್ಲ. ಇದೇ ಜೀವನವಲ್ಲ. ಬಿಟ್ಟು ಬಿಡಿ ನನ್ನ. ಬದಲಾಗುತ್ತೇನೆ ನಾನು. ಮುಂಚಿನ ಪಾಪುವಾಗಿ. ಬಿಟ್ಟು ಬಿಡಿ ನನ್ನ ಅಂತ ಕೂಗೋದ್ರಲ್ಲಿ ಕಣ್ಣು ಬಿಟ್ಟಿತ್ತು. ನೋಡಿದ್ರೆ ಅವನು ಅವನ ರೂಮಿನಲ್ಲೇ ಇದ್ದ. ಕಣ್ಣುಜ್ಜುತ್ತಾ ಎದ್ದರೆ ಹಾಸಿಗೆಯ ಕೊಳೆ ಕೊಳೆ ಬೆಡ್ ಶೀಟುಗಳು, ಇನ್ನೊಂದೇ ದಿನಕ್ಕೆ ಬರುವಂತಿರೋ ಪೇಸ್ಟು, ನೋಡೋ ಕನ್ನಡಿಗೇ ಅಸಹ್ಯವಾಗುವಂತೆ ಬೆಳೆದಿರೋ ಪೊದೆ ಗಡ್ಡ, ಕಂಡಲ್ಲಿ ಕಣ್ಣಿಗೆ ಬೀಳೋ ಧೂಳು ಅಣಕಿಸಿದಂತಾಯ್ತು. 

ಛೇ. ಎಷ್ಟು ದಿನ ಆಯ್ತು ಇದನ್ನೆಲ್ಲಾ ಗಮನಿಸಿಯೇ ಇಲ್ಲವಲ್ಲ. ಇವುಗಳ ನಡುವೆಯೇ ನನ್ನ ಗೆಳೆಯರು ನನ್ನ ಹೇಗೆ ಸಹಿಸಿಕೊಂಡರೋ ಎಂದು ನಾಚಿಕೆಯಾಯ್ತು. ಹಿಂದಿನ ದಿನವೇ ನೆನೆಸಿಟ್ಟ ಬಕೆಟ್ ಬಟ್ಟೆಯನ್ನ ತೊಳೆಯೋದ್ರೊಳಗೆ ಏದುಸಿರು ಬಂದತಾಯ್ತು. ಕೆಲಸ ಮಾಡೋ ಅಭ್ಯಾಸವೇ ಬಿಟ್ಟು ಹೋಗಿತ್ತಲ್ಲ. ಅದೊಂದೇ ಅಲ್ಲ. ಮುಂಚಿನ ಯೋಗ ಪ್ರಾಣಾಯಾಮಗಳನ್ನೆಲ್ಲಾ ಆಲಸ್ಯ ನುಂಗಿ ಹಾಕಿದ್ದೂ ಇನ್ನೊಂದು ಕಾರಣವಾಗಿರಬಹುದು. ಘಂಟೆ ಹನ್ನೊಂದಾಯ್ತೆಂದು ಹಸಿಯುತ್ತಿರೋ ಹೊಟ್ಟೆ ನೆನಪಿಸಿತ್ತು. ದಿನಾ ಗಬ್ಬೆಂದು ಬಯ್ಯುತ್ತಿದ್ದ ಎದುರಿನ ಭಟ್ಟರ ಕ್ಯಾಂಟೀನಿನ ತಣ್ಣನೆಯ ಇಡ್ಲಿ ಸಾಂಬಾರಿಗೆ ಇವತ್ತೇಕೋ ಅಮೃತ ಸಮಾನ ರುಚಿ ! ಆ ಸಕ್ಕರೆ ಕಮ್ಮಿ ಕಾಫಿಗೂ ಹಿಂದಿನ ಯಾವ ಪೆಪ್ಸಿ ಮಿರಿಂಡಾಗಳಿಗಿಲ್ಲದ ಸವಿ. ರುಚಿಯಿದ್ದದ್ದು ಅಲ್ಲಲ್ಲವೋ ಮೂಢ ಬದಗಾಗುತ್ತಿರೋ ನಿನ್ನ ಮನಸ್ಸಲ್ಲಿ ಅಂತ ಯಾರೋ ನಗುತ್ತಿದ್ದಂತೆ ಅನಿಸುತ್ತಿತ್ತು. ಕೊಳೆ ಕೂತು ಹಳದಿಯಾಗಿದ್ದ ಉಗುರುಗಳಿಗೆಲ್ಲಾ ಮುಕ್ತಿ ಸಿಕ್ಕಿತ್ತು.  ತಿಂಗಳ ನಂತರ ನಾಪಿತನ ನೆನಪಾಗಿತ್ತು. ಕೊಳೆ ಬೆಡಶೀಟ್ಗಳು ವಾಷಿಂಗ್ ಮೆಷೀನು ಹೊಕ್ಕು ಬಿಸಿಲಲ್ಲಿ ಒಣಗುತ್ತಿದ್ದರೆ , ಹಾಸಿಗೆ ಹೊಕ್ಕಿದ್ದ ತಿಗಣೆಗಳೆಲ್ಲಾ ಬಿಸಿಲ ಬಾಣಲೆಯಲ್ಲಿ ಒಣಗಿಸಿದ್ದ ಹಾಸಿಗೆಯಲ್ಲಿ ಫ್ರೈ ಆಗುತ್ತಿದ್ದವು.  ಶೂವಲ್ಲಿದ್ದ ಮಣ ಮಣ್ಣು ಅರ್ಧ ಬಕೆಟ್ ಸೋಪ್ ನೀರಲ್ಲಿ ಕರಗಿ ಅದಕ್ಕೊಂದು ಹಬ್ಬದ ಕಳೆ ಬಂದಿತ್ತು. ಭಾನುವಾರ ಸಂಜೆಯ ಹೊತ್ತಿಗೆ ಹೊರಗೆ ಹೋಗಿದ್ದ ಪಾಪುವಿನ ರೂಂ ಮೇಟ್ಸು ರೂಮಿಗೆ ಬಂದ್ರೆ ಆ ರೂಮು ಗುರ್ತೇ ಸಿಗದಂತೆ ಬದಲಾಗಿ ಹೋಗಿತ್ತು. ಶೂಗಳೆಲ್ಲಾ ನೀಟಾಗಿ ಜೋಡಿಸಿಟ್ಟಿರೋದಲ್ದೇ  ರೂಮೆಲ್ಲಾ ಕ್ಲೀನೋ ಕ್ಲೀನು. ದೇವದಾಸನಂತಾಗಿದ್ದ ಪಾಪುನ ಏನೋ ಇದು ಸ್ಪೆಷಲ್ಲು ಅಂತ ಕೇಳೋಣ ಅಂದ್ರೆ ಆ ದೇವದಾಸ ಮಾಯವಾಗಿದ್ದ. ಮುಂಚಿನ ಪಾಪು ಪುಸ್ತಕಗಳ ಲೋಕದಲ್ಲಿ ಮುಳುಗಿಹೋಗಿದ್ದ.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಫಿನಿಕ್ಸ್ ನಂತೆ ಎದ್ದು ಬಂದ ಪಾಪು. ಚೆನ್ನಾಗಿದೆ

Badarinath Palavalli
10 years ago

ಮೊದಲು ಗಮನ ಸೆಳೆದದ್ದು ಪಾಪುವಿನ ವಾಸ ಸ್ಥಾನ. ಇದು ನನ್ನ ಬ್ರಹ್ಮಚರ್ಯ ಆಶ್ರಮದ ಗುಬ್ಬಚ್ಚಿ ಗೂಡಿನ ನೆನಪು ತರಿಸಿತು.

ಊರ್ಧ್ವ ಪಯಣದ ವಿವರ ಮಾಹಿತಿಪೂರ್ಣ.

ಪಾಪುವಿನ ಜ್ಞಾನೋದಯ ಮತ್ತು ಮನೋ ಜೀರ್ಣೋದ್ಧಾರ ರೋಚಕವಾಗಿತ್ತು!

Anil Talikoti
Anil Talikoti
10 years ago

ಪಾಪುವಿನ ಪುನಶ್ಚೇತನ -ಇಷ್ಟವಾಯಿತು

prashasti
10 years ago

ಧಬ್ಯವಾದಗಳು ಅಖ್ಖಿ ಭಾಯ, ಬದರಿ ಭಾಯ್ ಮತ್ತು ಅನಿಲ್ ಅವ್ರೆ 🙂

4
0
Would love your thoughts, please comment.x
()
x