ಪಂಜು-ವಿಶೇಷ

ಯಾರ್ ಮನ ಮುರ್ದ್ ಬುಟ್ಟು ಬಂದ ಬಡ್ಡೈದ ಇವತ್ತು: ಡಾ. ಗವಿ ಸ್ವಾಮಿ


ವಾರದ ಹಿಂದೆ ಒಬ್ಬ ರೈತ ಬಂದಿದ್ದ.

”ನೆನ್ನ ರಾತ್ರ ಅಸು ಈಯ್ತು.. ಇನ್ನೂ ಮ್ಯಾಲ್ಕೇ ಎದ್ದಿಲ್ಲ.. ತಲ ಇಟ್ಬುಟ್ಟದ ಒಂಚೂರ್ ಬಿರ್ರನ್  ಬನ್ನಿ ಸಾ , ಮನಲಿ ಎಮ್ಕ ಬಾಯ್  ಬಡ್ಕಂಡು ಅಳತ್ ಕೂತರ”

ಅವನನ್ನು ಬೈಕಿನಲ್ಲಿ ಕೂರಿಸಿಕೊಂಡು ಅವನ ಊರಿಗೆ ಹೊರಟೆ.

ಪೂರ್ತಿ ತೆಂಗಿನ ಗರಿಯಲ್ಲಿ ಕಟ್ಟಿದ ಕೊಟ್ಟಿಗೆ ಅದು.

ಹಸು ತಲೆಯನ್ನು ಹೊಟ್ಟೆಯ ಮೇಲೆ ನುಲಿದುಕೊಂಡು ಮಲಗಿತ್ತು.
ಮೈ ತಣ್ಣಗಿತ್ತು.

ಕರು ಹಾಕಿದ ನಂತರ, ಹಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ  ‘ಮಿಲ್ಕ್ ಫೀವರ್’ ನ ಲಕ್ಷಣಗಳು ಕಾಣುತ್ತಿದ್ದವು .
ಇದು ಸುಲಭವಾಗಿ ಗುಣಪಡಿಸಬಹುದಾದ  ಖಾಯಿಲೆ.

ಕಪ್ಪು ಫ್ರೇಮಿನ ಹಳೇ ಕನ್ನಡಕ ಹಾಕಿದ್ದ  ಅಜ್ಜಿ ಹಸುವಿನ ತಲೆಯನ್ನು ತಬ್ಬಿಕೊಂಡು ಅಳುತ್ತಿದ್ದಳು.

ಇನ್ನೊಬ್ಬ ಹೆಂಗಸು ನೆರಕೆಯನ್ನು ಒರಗಿಕೊಂಡು ತಲೆ ಮೇಲೆ ಕೈ ಹೊತ್ತು ಕೂತಿದ್ದಳು.

”ಯಾಕೆ ಅಜ್ಜಿ ಅಳ್ತಾ ಇದಾರೆ?” ಎಂದು ಅವನನ್ನು ಕೇಳಿದೆ.

‘ನಮ್ಮವ್ವ ಸಾ..
ಇದು ಉಟ್ಟುದ್ತಪ್ನಿಂದ್ಲು  ಅವಳಿಯಾ ಸಾ ಸಾಕ್ದವಾ ..
ಇದು ಯೋಳ್ನೇ ಸೂಲು  ಸಾ. ”

‘ಏನೂ ಆಗಲ್ಲ , ಅಳ್ಬೇಡಿ ಅಜ್ಜಿ’ ಅಂದೆ.

‘ಸಾ ಅವ್ಳ್ಗ ಕಿಂವಿ ಮಂದ , ಕ್ಯಾಳ್ಸಲ್ಲ’

”ಅವ್ವೈ , ಅಳ್ಬ್ಯಾಡ  ಸುಮ್ ಕೂತ್ಗ… ಯಾನು ಆಗಲ್ಲ ವಾಸಿಯಾಯ್ತದ ಅಂತರ ಡಾಕ್ಟ್ರು ”
ಕಿವಿಯ ಬಳಿ ಹೋಗಿ ಜೋರಾಗಿ ಹೇಳಿದ.

ಅಜ್ಜಿಗೆ ಅದೇನು ಅರ್ಥವಾಯಿತೋ ಗೊತ್ತಿಲ್ಲ,ಹಿಂದೆ ಸರಿದು ನೆರಕೆಗೆ ಒರಗಿಕೊಂಡು ಕಣ್ಣು ಮುಚ್ಚಿ  ಧ್ಯಾನಿಸತೊಡಗಿದಳು.

ಕ್ಯಾಲ್ಸಿಯಂ ಡ್ರಿಪ್ ಹಾಕಲು ತಯಾರಿ ಮಾಡಿಕೊಳ್ಳುತ್ತಿದ್ದೆ.

ಅಷ್ಟರಲ್ಲಿ ಇಬ್ಬರು ಒಳಗೆ ಬಂದರು.
ಒಬ್ಬ ನಲವತ್ತರಿಂದ ನಲವತ್ತೈದು ವಯಸ್ಸಿನವ.
ಇನ್ನೊಬ್ಬ ಸುಮಾರು ಇಪ್ಪತ್ತೈದರಿಂದ  ಮೂವತ್ತರ ಒಳಗಿನ  ಯುವಕ.

ಮೊದಲನೆಯವ ನೆರಕೆಗೆ ಒರಗಿ ಕುಕ್ಕರಗಾಲಿನಲ್ಲಿ ಕೂತು ಬೀಡಿ ಹಚ್ಚಿದ.

ಮರದ ತುಂಡೊಂದರ  ಮೇಲೆ ಯುವಕ ಕುಳಿತುಕೊಂಡ.

ಕ್ಯಾಲ್ಸಿಯಂ ಡ್ರಿಪ್ connect ಮಾಡಿದ ನಂತರ
ಕುಳಿತುಕೊಳ್ಳಲು ಜಾಗ ತಡಕಾಡುತ್ತಿದ್ದೆ.

‘ಸಾ ಕುರ್ಚಿಗಿರ್ಚಿ ಯಾನು ಇಲ್ಲ, ಚಾಪ ತತ್ತಿನಿ ತಡರಿ’
ಎಂದು ಹೋಗಿ ಒಂದು ಚಾಪೆಯನ್ನು ತಂದು ಚಿಕ್ಕದಾಗಿ ಮಡಚಿ ಹಾಸಿದ.

ಒಂದು ಚಿಕ್ಕ ಹುಡುಗಿ , ”ಅವ್ವ ಅವ್ವ ನಾಳ್ಗ ಇಸ್ಗೂಲ್ ಬಾಕ್ಲ್ ತಗತರ ”
ಎನ್ನುತ್ತಾ ಓಡಿ ಬಂದು ಆ ಹೆಂಗಸಿನ ಬಳಿ ಕುಳಿತುಕೊಂಡಿತು.

‘ಸದ್ಯ ಸುಮ್ಮಿರು ತಾಯ್ ನಿಮ್ ರೂಟಿ ಸಾಕಾಗೋಗಿತ್ತು’

‘ ಬಾಎಂಡ್ ಬೇಕು ಕವ್ವಾ’

‘ಅದ್ಯಾನ ನಿಮ್ಮಪ್ಪನ್ ಕ್ಯೋಳು’

‘ಅಪ್ಪ ಅಪ್ಪ ಐದ್ ಬಎಂಡ್ ಬೇಕು”

”ಸಂದ ಒತ್ಗ ತಕ್ಕೊಟ್ಟನು ಸುಮ್ಮಿರು ಕಂದ”
ಅಂದ ಅವರಪ್ಪ,ಹಸು ಓನರ್.

ಬೀಡಿ ಸೇದುತ್ತಿದ್ದವ ಹುಡುಗಿಯನ್ನು ಕೇಳಿದ, ‘ಎಷ್ಟ ಕೂಸು ನೀನು?’

‘ನಾಕ್ ಪಾಸಾಯ್ತು ಐದು’
ಅಂತು ಹುಡುಗಿ.

‘ನಮ್ಮಾಳು ಆರು, ಅವನ್ಗುವ ಬಎಂಡು ಬ್ಯಾಗು ಎಲ್ಲಾ ಬೇಕಂತ ಕವ್ವ , ಇಲ್ಲಾಂದ್ರ ವಾಗಾದೇಯಿಲ್ಲ ಅಂತ್ ಕೂತನ’

ಆ ಹುಡುಗಿ ಕೊಟ್ಟಿಗೆ ಮೂಲೆಯಲ್ಲಿ  ನಿದ್ರಿಸುತ್ತಿದ್ದ ನಾಯಿಯನ್ನು ತಬ್ಬಿಕೊಳ್ಳಲು ಹೋಯ್ತು.

ಅವರಪ್ಪ ತಡೆದ.

‘ಬುಡು ಕಂದಾ ಮನ್ಗಿರ್ಲಿ, ರಾತ್ರೆಲ್ಲಾ ಒಲನ್ ಕಾದದ ಪಾಯ್’
ಅಂದ.

ಹುಡುಗಿ ಹಿಂದೆ ಸರಿದು ಅವ್ವನ ಬಳಿ ಕುಳಿತುಕೊಂಡಿತು.

ಬೀಡಿ ಸೇದುತ್ತಿವ ಅಂದ, ‘ಗಟ್ಟಿ ಕಣ್ ಬುಡ್ಡಾ ನಿನ್ ನಾಯಿ, ಅಪಪಾಟಿ ಹಂದೆವ್ನೇ ಅಂಜಸ್ತದ’

‘ಅದಿದ್ದಕಿಯಾ ಅಷ್ಟ ಇಷ್ಟ ಜ್ವಾಳ ಆದದು, ಇಲ್ಲಾಂದ್ರ ಹಂದೆವ್ ಬುಡ್ತಿದ್ವಾ, ಕಟ್ಣ ಮಾಡ್ಬುಡ್ತಿದ್ದ’

ಅಷ್ಟರಲ್ಲಿ ಕೊಟ್ಟಿಗೆಯ ಹೊರಗೆ ಒಂದು ಬೈಕು ಬಂದು ನಿಂತಿತು.

ಬೈಕಿನಲ್ಲಿದ್ದವರು ಒಂದು ಊರಿಗೆ ಹೆಣ್ಣು ನೋಡಲು ಹೋಗುತ್ತಿದ್ದರು.

ಆ ಊರಿನ ದಾರಿಯನ್ನು ಕೇಳಲು ಬೈಕನ್ನು ನಿಲ್ಲಿಸಿದ್ದರು.

ಬೀಡಿ ಸೇದುತ್ತಿದ್ದ  ಪಾರ್ಟಿ  ದಾರಿಯನ್ನು ವಿವರಿಸಿದ.

ನಂತರ ಯುವಕನನ್ನು ತಮಾಷೆಯಿಂದ ಕೆಣಕಿದ, ”ಎಣ್ ಗಿಣ್ ನ್ವಾಡಲ್ವುಡ?”

” ನ್ವಾಡದು ತಕಣೈ , ನಂಗ್ಯಾನ್ ವಯಸ್ಸಾಬುಟ್ಟಿದ್ದು ಈಗ.”

”ಎಣ್ ತರದು ಅಂದ್ರ ಸಂತ್ಗೋಗಿ ದನ ತಂದಾಗ ಅಂದ್ಕಬುಟ್ಟಿದಯುಡ.. ಈಗ್  ನ್ವಾಡಕ್ ಸುರು  ಮಾಡದ್ರ ಮೂರ್ ವರ್ಷ ಆದ್ಮೇಲ ಎಣ್ ಸಿಗದು.”

ಕೆಲವು ಕ್ಷಣಗಳ ಕಾಲ ಸುಮ್ಮನಿದ್ದು ಮತ್ತೆ ಮಾತು ಮುಂದುವರಿಸಿದ,
”ಯಾವಳುಡ ಯವ್ಸಾಯ್ಗಾರನ್ಗಾಯ್ತಿನಿ  ಅಂತ್  ನಿಂತಿರವ,  ಆ ಕಾಲ ಒಂಟೋಯ್ತು”

”ಹಿಂದ್ಲ್ ಕಾಲ್ದಲ್ಲಿ  ನೀ ಎಸ್ಟ್  ಹೊಲನ್ ಮಡಗಿದ್ದೈ, ಎಸ್ಟಗಲ ಇತ್ಲ್ ಮಡ್ಗಿದ್ದೈ, ಎಸ್ಟ್ ಮೆದ ಇದ್ದವು , ಎಸ್ಟ್ ರಾಸ್ ದನ ಮಡ್ಗಿದ್ದೈ, ಎಸ್ಟ್ ಕಂಡ್ಗ ಜ್ವಾಳ  ಬೆಳದಿದ್ದೈ ಅನ್ನದ್ ಲೆಕ್ಕ ಹಾಕ್ತಿದ್ರು.
ಈಗ ಅವ್ನೆಲ್ಲಾ  ನ್ವಾಡಲ್ಲಕುಡ. ”

ಹಸು ಓನರ್ ದನಿಗೂಡಿಸಿದ,
”ಹೂಂಮತ್ತ, ಈಗ್ಯಾನಿದ್ರುವ ಉಡ್ಗ ಯಾನ್ಮಾಡಿನು ಅಂತ್ ಕೇಳ್ತರ , ಯವ್ಸಾಯ ಅಂದ್ರ ನಡ ಆಚ್ಗ ಅಂತರ, ಕೆಲಸ ಕ್ಯೋಳ್ತರಕಪ್ಪೋ ಕೆಲ್ಸ್ಯಾ, ಗೌರ್ಮೆಂಟ್ ಕೆಲ್ಸೇ ಆಗ್ಬೇಕು, ಇಲ್ಲ ಇಂಜ್ನೇರು ಡಾಕ್ಟರಾಗಿರ್ಬೇಕು”

ಬೀಡಿ ಪಾರ್ಟಿ ಮತ್ತೆ ಮುಂದುವುರಿಸಿದ.
”ಡೇ ಅವೆಲ್ಲಾ ಬ್ಯಾಡ, ಮಏಸನ್ನೇ ತಕ್ಕಾ .. ಅವನ್ಗ ಮೋವತ್ತೈದ್ರ್  ಮ್ಯಾಲಾಗದ ಈಗ ..  ಅವರಪ್ಪನಿಗಿಂತ್ಲೂ ಮಡಗಿದ್ದನುಡ ನಿಮ್ಮಪ್ಪ   .. ಅಂವ ಇನ್ನೂ ಎಣ್ ನ್ವಾಡದ್ರಲ್ಲೇ ಅವ್ನ .. ಆ ಬಡ್ಡೈದ್ನಿಗ ಏಳೆಂಟ್ ವರ್ಸ್ದ್ ಹಿಂದ ಚೆಂದ್ ಚೆಂದುಳ್ ಎಣ್ನವು ಸಿಕ್ಕಿದ್ದ, ಡೇ ಒಪ್ಗುಡಾ ಒಪ್ಗುಡಾ ಅಂದ್ರ ಎಣ್ಗ್ ಅದ್ ಚೆಂದಿಲ್ಲಾ ಇದ್ ಚೆಂದಿಲ್ಲಾ ಮನ ಕಿರ್ದು ಕ್ವಾಣ ಕಿರ್ದು ಅಂದ್ಕಂಡು ತಳ್ಕಂಡ್ ಬಂದ, ಈಗ್ ಅನ್ಬೋಗ್ಸದ್ ನ್ವಾಡಲ್ವ”

”ಮಲ್ಕಾರ್ನಿನೆ ತಕಾ.. ಆ ಗಂಡು  ಕುಡಿಯಲ್ಲ ಜೂಜಾಡಲ್ಲ ಬೀಡಿನು ಸ್ಯಾದಲ್ಲ..�. ನಾಕಾಳ್ನ್ ಕೆಲ್ಸ ಒಬ್ನೇ ಮಾಡ್ತನ.. ಯಾರು ಬೆಟ್ ಮಡ್ಚ ಅಸ್ಟೇ ಇಲ್ಲ.. ಆದ್ರುವ ಯಾಕುಡ ಅಂವ ಇನ್ನೂ ಎಣ್ಗ್ ಪರ್ದಾಡ್ತ ಇದ್ದನು.. ಅಂವ ಎಣ್ಗ್ ತಿರ್ಗ್ದೆ ಇರ ದೇಸ್ವೇ ಇಲ್ಲ”

ಇನ್ನೊಬ್ಬ ಎಂಟ್ರಿಯಾದ.
ಬಿಳಿ ಷರ್ಟು ಬಿಳಿ ಪಂಚೆ ಹಾಕಿಕೊಂಡು ಮಿರಮಿರ ಮಿಂಚುತ್ತಿದ್ದ. ವಯಸ್ಸು ಸುಮಾರು ನಲವತ್ತರಿಂದ ನಲವತ್ತೈದಿರಬಹುದು.

ಅವನನ್ನು ನೋಡಿದ ಬೀಡಿ ಪಾರ್ಟಿ ,”ಯಾರ್ ಮನ ಮುರ್ದ್ ಬುಟ್ಟು ಬಂದ ಬಡ್ಡೈದ ಇವತ್ತು”  ಅಂದ .

”ಮನ ಮುರಿಯಲ್ಲ ಕುಡ ನಾವು, ಮನೆಯವ್ ಜಂಟಸ್ತಿಂವಿ”

ಹಸು ಓನರ್ ತನ್ನ ಹೆಂಡತಿಗೆ ಟೀ ಮಾಡಿಕೊಂಡುಬರಲು ಹೇಳಿದ.
ಆಕೆ ಹೊರಟು ಹೋದಳು.

ಬಿಳಿ ಷರ್ಟು ಬಿಳಿ ಪಂಚೆಯ ಪಾರ್ಟಿ ಕುಳಿತುಕೊಳ್ಳಲು ಜಾಗ ತಡಕುತ್ತಿದ್ದ. ಹೊಸ ಬಟ್ಟೆ ಬೇರೆ!

ಅವನು ತೊಳಲಾಡುತ್ತಿದ್ದುದನ್ನು ಗಮನಿಸಿದ ಬೀಡಿ ಪಾರ್ಟಿ ,
”ಮೆಡ್ಕ್ ನೋಡು ಬಡ್ಡೈದನ ಮೆಡ್ಕ, ಕೂತ್ಗ ಬಡ್ಡೈದ ನಿನ್ ಪಂಚ್ಗ ಯಾನು ಸಾವ್ ಬರಲ್ಲ, ಅದ್ಯಾಕ್ ಕೊಳನೇ ಮೆತ್ಗದೆವ್ನ್  ಕಂಡಾಗಾಡಿಯಾ”

ಹೊಸ ಬಟ್ಟೆ ಪಾರ್ಟಿ ಸುಮ್ಮನೆ ನಕ್ಕು ಕುಳಿತುಕೊಂಡ.

ಬೀಡಿ ಪಾರ್ಟಿ ಮಾತು ಮುಂದುವರೆಸಿದ.
”ಎಲ್ಗ್ ದಯ್ಮಾಡ್ಸಿದ್ರಿ ಇವತ್ತು”

”ಮದ್ವ ಇತ್ತುಕುಡ ಒಂದು”

”ಓಹೋ ಆಗ್ ಬಾ ದಾರಿಗ…   ಒಸ್ಬಟ್ಟಾ  ಗಂಡಿನ್  ಕಡೆಯದಾ ಎಣ್ನ್  ಕಡೆಯದಾ?”

”ಗಂಡಿನ್ ಕಡೆಯದು.
ಮ್ಯಾಲ್ ಏಡ್ಸಾವ್ರ ಕಿತ್ತಾಕ್ದಿ. ಕ್ವಡ್ಲಿ ಬುಡು.
ಅದ್ಯಾಕ್ ಪುಕ್ಸಟ್ಟಿ  ಕೊಟ್ಟನಾ  ಬಡ್ಡೈದ. ಅಂಥಾ ಒಳ್ಳಿ ಜಾಗ್ದಲ್ಲಿ ಕಪ್ಪೋ ಎಣ್ ತೋರ್ಸಿರದು.’

”ಯಾನೆ ಆಗ್ಲಿ ನಿಂದೆ ಸರಿಕುಡ. ಬ್ಯಳಿಗಂದ್ ಸಂದ್ಗಂಟ ನಾವ್ ತಿಕತರ್ಕಂಡ್ ಗ್ಯಾದ್ರುವ ಮೂರ್  ಕಾಸ್ನ್ ಉತ್ಪತ್ತಿ ಇಲ್ಲ. ಯಾಗಿದ್ವುಂ ಆಗೇ ಅಂವಿ..
ನಿನ್ನೋಡು, ಕತ್ನ್ ಚೇನ್ಯಾನಾ, ಬೆಟ್ನ್ ಉಂಗ್ರ್ಯಾನ.. ಉತ್ಪತ್ತಿ ಅದಕಪ್ಪಾ ಅದ್ಕೇ
ಉಗರ್ಕಣ್ಣ್  ಕೊಳೆಯಾಗ್ಬಾರ್ದಾಗ್ ಇದ್ದೈ. ”

ಹಸು ಓನರ್ ಬಾಯಿ ಹಾಕಿದ.
”ಪಡ್ಕಬಂದಿರ್ಬೇಕು ಕಣ್ ಬುಡ್ಡ  ಅದ್ನೆಲ್ಲವ . ಈ ಬಡ್ಡೈದ್ನಗ ಯೋಗ ಅದ”

”ಅದ್ ಬುಟ್ಟಾಕು . ಈಗೊಂದ್ವಾರ್ದಲ್ಲಿ  ಸುಬ್ಬಣ್ಣನ್ ಮಗನ್ಗ ಎಣ್ ತ್ವೋರ್ಸಿದ್ದೆಂತಲ್ಲಾ  ಅದ್ಯಾನಾಯ್ತು ಕತ. ”  ಅಂದ ಬೀಡಿಪಾರ್ಟಿ.

‘ಅಯ್ಯ ಅದೊಂದ್ ದೊಡ್ ಕತ’

‘ಅದ್ಯಾನ ಏಳುಡ’

‘ಎಣ್ಣನ್ ಮನೆಯವ್ರು ನೆಗನಾಡ್ತ ಎಚ್ಚಾಡ್ತ  ಕಾಪಿ ತಿಂಡಿನೆಲ್ಲಾ ಕ್ವಟ್ರು . ವಾತವರ್ಣ ನೋಡ್ತಿದ್ರ ಅವರ್ಗ ಗಂಡು ಇಷ್ಟ ಆಗದ ಅನಿಸ್ತಿತ್ತು..  ಗಂಡಿನ್ ಮನ ನೋಡಕ್ ಬತ್ತಿಂವಿ .. ಬರಕು ಮುಂಚೆ ಪೋನ್ ಮಾಡ್ ತಿಳುಸ್ತಿಂವಿ ಅಂದಿದ್ರು”

‘ಸರಿ ಈಗ ಯಾನಾಯ್ತು?’

‘ಈಗ್ ಯಾನಾ ಆಗದು. ನಮ್ಗ ಈ ಸಂಬಂಧ ಇಡಸ್ನಿಲ್ಲ ಬ್ಯಾರೆತಂವು ನೋಡ್ಡಳ್ಳಿ ಅಂತ ಪೋನ್ ಮಾಡ್ ಏಳದ್ರಂತ”

‘ಅದ್ಯಾಕ ಏಕ್ದಂ ಉರ್ಟಾ ವೊಡುದ್ರು?”

‘ಯಾವನಾ ಸೂಳಮಗ ಪೋನ್ ಮಾಡ್ಬುಟ್ಟು, ಹುಡಗ್ನ್ ಅಪ್ಪ ಇರಬರ ಹೊಲನೆಲ್ಲವಾ ಮಿಂಡ್ಗಾತಿ ಎಸರ್ಗ ಮಾಡ್ಬುಟ್ಟನಾ, ನಿಮ್ಮ ಮಗಳ್ನೇನಾದ್ರು ಕೊಟ್ರ ಅವ ಇಲ್ಲಿ ಗೇಯ್ಕಂಡ್ ತಿನ್ಬೇಕಾಯಿತ್ತಾ  ಅಂತ ಹೆದರ್ಸ್ಬುಟ್ಟಿದ್ದನಂತ”

‘ಯಾವನುಡ ಅಂವ ?’

‘ಇದ್ದೇ ಇರ್ತರಲ್ಲ ಮನಾಳ್ ಸೂಳಮಕ್ಕ . ಅವರ್ಗ ಇನ್ನ್ಯಾನ್ ಕೆಲ್ಸ ಯೋಳು?”

”ಸರಿ ಜಿಟಲುವ ಸುಬ್ಬಣ್ಣ ಈಗ್ಲೂ ವಾದನುಡ ಅವಳ್ತಂವ್ಕ??  ಹೊಲನ್ ಬರ್ದಿರದ್ ನಿಜ್ವಾ??”

”ಮದ್ಲು ಓಯ್ತಿದದ್ ನಿಜ, ಕಾಸು ಕರಿಮಣಿ ಸಪ್ಲೈ ಮಾಡ್ತಿದ್ದದ್ ನಿಜ…ಈಗ್ಯಾನ್ ನಡದ್ದು ವಾಗಕ,ಮುದಿನಾಗನ…ಹೊಲನ್ ಬರ್ದಿರದೆಲ್ಲಾ ಸುಳ್ಳು, ಉಟ್ಟುಸ್ಕಂಡ್ ಏಳಿರದು ಸೂಳಮಕ್ಕ.”

”ಅದ್ ಬುಟ್ಟಾಕು,  ನಮ್ ಗಂಡ್ಗೊಂದ್ ಎಣ್ ತೋರ್ಸುಡ”
ಯುವಕನ ಕಡೆಗೆ ಕಣ್ಣು ಹೊರಳಿಸುತ್ತ ಹೇಳಿದ.

ಅದಕ್ಕೆ ಹೊಸ ಬಟ್ಟೆ ಪಾರ್ಟಿ , ” ಇವರಪ್ನೊಂದ್ಗೇ  ಮಾತಾಡಿನಿ..  ಇವ್ನೂ ಇದ್ದ.. ಬರ್ಬುಡು ಮಾರಾಯ ನಾಳ್ಗಿಯಾ” ಅಂದ.

ಬೀಡಿ ಪಾರ್ಟಿ , ” ಸರಿ ಮತ್ತ.. ನಿಂದ್ಯಾನಪ್ಪ” ಅಂತ ಯುವಕನನ್ನು ಕೇಳಿದ.

ಯುವಕ ಸುಮ್ಮನೆ ನಗುತ್ತಿದ್ದ.

ಹೊಸ ಬಟ್ಟೆ ಪಾರ್ಟಿ, ” ಇವ್ನೂ ಯಾವ್ದ ಗಾಡಿ ಓಡುಸ್ತಾ ಅವ್ನ ಅನ್ನಗದಾ ಅದ್ಕೇ ಇಂದ್ಲೇಟಾಕ್ತನ!”
ಅಂದ.

ಬೀಡಿ ಪಾರ್ಟಿ ”ಯಾನುಡ ಅಂವ್ಯಾಳದ್ ನಿಜ್ವಾ”
ಅಂದ.

ಯುವಕ , ”ಯಾನುವಿಲ್ಲಕಣ್ಣೈ ,  ಅವ್ನ್ ಮಾತ್ ಕಟ್ಗ” ಅಂದ.

ಅಷ್ಟರಲ್ಲಿ ಟೀ ಬಂತು.

ಏತನ್ಮಧ್ಯೆ ,ಹಸು ಚಿಕಿತ್ಸೆಗೆ ಸ್ಪಂದಿಸುತ್ತಿರುವ ಹಾಗೆ ಕಂಡು ಬಂತು.
ಕ್ಯಾಲ್ಸಿಯಂ ಡ್ರಿಪ್ ಮುಗಿಯುವ ಹೊತ್ತಿಗೆ ತಲೆ ಎತ್ತಿಕೊಂಡಿತು .  ಮೆಲುಕು ಹಾಕಲು ಶುರುಮಾಡಿತು.ಮೇಲೆ ಏಳುವ ಪ್ರಯತ್ನ ಮಾಡಿತು.

ಧ್ಯಾನಿಸುತ್ತಿದ್ದ ಅಜ್ಜಿ ಕಣ್ಣು ಬಿಟ್ಟಳು.

ಹಸು ಸುಧಾರಿಸಿರುವುದನ್ನು ನೋಡಿ ಅಜ್ಜಿಗೆ ಖುಷಿಯಾಯಿತು .

‘ದೇವ್ರು ಒಳ್ಳೇದ್ ಮಾಡ್ಲಿಕಪ್ಪ ನಿನಗ’ ಎಂದು ಹರಸಿದಳು.

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಯಾರ್ ಮನ ಮುರ್ದ್ ಬುಟ್ಟು ಬಂದ ಬಡ್ಡೈದ ಇವತ್ತು: ಡಾ. ಗವಿ ಸ್ವಾಮಿ

  1. ಚೆನ್ನಾಗಿದೆ…ಗ್ರಾಮೀಣ ಭಾರತದ ದರ್ಶನದಂತಿದೆ….ಒಂದು ಸಂದೇಹ…ಈ ಭಾಷಾಶೈಲಿ ಯಾವ ಊರಿನದು? ಆಸಕ್ತಿ ಮತ್ತು ಕುತೂಹಲದೊಂದಿಗೆ ಮುಗ್ದ ಜನರ ಮಾತುಗಳು ಮನಮುಟ್ಟುತ್ತವೆ….ಅವರ ಜೀವನ ಪ್ರೀತಿ ಗಮನಸೆಳೆಯುತ್ತದೆ….ಲೇಖಕರಿಗೆ ಧನ್ಯವಾದಗಳು !

  2. ಬಹಳ ಚೆನ್ನಾಗಿದೆ ಕಥೆ! ತುಂಬಾ ಮನಮುಟ್ಟುವಂತೆ ನಿರೂಪಿಸಿದ್ದೀರಿ. ಬರೆಯುವುದನ್ನು ಬಿಡಬೇಡಿ. ನಿಮಗೆ ಕಲೆ ಸಿದ್ಧಿಸಿದೆ!

  3. ಲೇಖನವನ್ನು ಓದಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply

Your email address will not be published. Required fields are marked *