ಇಲ್ಲಿಯವರೆಗೆ
ಪೌಲ್ ಬರ್ನಾರ್ಡೊನಂತೆಯೇ ಕಾರ್ಲಾಳ ಬಾಲ್ಯದ ದಿನಗಳೂ ವಿಕ್ಷಿಪ್ತವಾಗಿದ್ದಿದು ಸತ್ಯ. ಕಾರ್ಲಾಳ ತಂದೆ, ತಾಯಿ ಇಬ್ಬರೂ ಉದ್ಯೋಗದಲ್ಲಿದ್ದು ಕುಟುಂಬವು ಆರ್ಥಿಕವಾಗಿ ಸದೃಢವಾಗಿದ್ದರೂ, ತನ್ನದೇ ಆದ ಚಿಕ್ಕಪುಟ್ಟ ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದವು. ಸ್ವಾಭಾವಿಕವಾಗಿಯೇ ಮಕ್ಕಳಾದ ಕಾರ್ಲಾ, ಲೋರಿ ಮತ್ತು ಟ್ಯಾಮಿ ಗೆ ಉತ್ತಮವಾದ ಜೀವನಶೈಲಿಯ ಪರಿಚಯವಿತ್ತು. ಕಾರ್ಲಾಳ ತಂದೆ ಕರೇಲ್ ಕುಡುಕನಾಗಿದ್ದು, ಲಿಂಡಾ ವೋಲಿಸ್ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಕಾರ್ಲಾಳ ತಾಯಿ ಡೊರೋಥಿಗೂ ಈ ವಿಷಯ ತಿಳಿದಿತ್ತು. ಕರೇಲ್ ಹೊಮೋಲ್ಕಾ ಮಿತಿಮೀರಿ ಕುಡಿಯುತ್ತಿದ್ದ ಸಮಯಗಳಲ್ಲಿ ಕೆಟ್ಟ ಬೈಗುಳಗಳು, ವಿನಾಕಾರಣದ ಜಗಳಗಳು ಸಾಮಾನ್ಯವಾಗಿದ್ದವು. ಕಾರ್ಲಾ ಮತ್ತು ಲೋರಿ ತಂದೆಯ ಮಾತುಗಳಿಗೆ ಎದುರು ಮಾತನಾಡುತ್ತಾ ಶರಂಪರ ಜಗಳವಾಡುತ್ತಿದ್ದರು. `ರೆಬೆಲ್' ಮನೋಭಾವವಲ್ಲದೆ, ತನ್ನಿಷ್ಟದಂತೆಯೇ ಎಲ್ಲವೂ ನಡೆಯಬೇಕೆಂಬ ಅಧಿಕಾರಯುತ ವರ್ತನೆಯೂ ಅವಳಿಗಿತ್ತು. ಮಾಟ-ಮಂತ್ರ, ಹಿಂಸೆ ಮತ್ತು ಸಾವಿನ ಬಗೆಗೆ ಕಾರ್ಲಾಗಿದ್ದ ವಿಚಿತ್ರ ಆಕರ್ಷಣೆಯನ್ನು ಆಕೆಯ ಕೆಲವು ಬಾಲ್ಯದ ಗೆಳತಿಯರು ಉಲ್ಲೇಖಿಸುತ್ತಾರೆ.
ಕಾರ್ಲಾ ಹೊಮೋಲ್ಕಾ ತನ್ನನ್ನು ತಾನು ರಕ್ಷಿಸಿಕೊಳ್ಳಲು, ತನ್ನ ಪತಿಯಿಂದ ದೌರ್ಜನ್ಯಕ್ಕೊಳಗಾದ ಒಂದು ಮುಗ್ಧ ಹೆಣ್ಣು ಎಂದು ತೋರಿಸಲು ಪ್ರಯತ್ನಿಸಿದಳಾದಳೂ ತನಿಖಾಧಿಕಾರಿಗಳು ಕಲೆ ಹಾಕಿದ ಮಾಹಿತಿಗಳು ಮತ್ತು ವೀಡಿಯೋ ಟೇಪುಗಳು ಬೇರೆಯದನ್ನೇ ಹೇಳುತ್ತಿದ್ದವು. ಪೌಲ್ ಬರ್ನಾರ್ಡೊ ಪರ ವಕೀಲರಾದ ಜಾನ್ ಕೂಡ ಇದನ್ನೇ ವಿವರಿಸುತ್ತಾ, ನ್ಯಾಯಾಧೀಶರು ಮತ್ತು ಜ್ಯೂರಿ ಸಮೂಹಕ್ಕೆ, ನಡೆದ ಘಟನೆಗಳ ಇನ್ನಷ್ಟು ವಿವರಣೆಗಳನ್ನು ಸಾಕ್ಷ್ಯಾಧಾರಗಳ ಸಮೇತ ಪ್ರಸ್ತುತ ಪಡಿಸುತ್ತಿದ್ದರು. ಉದಾಹರಣೆಗೆ ತನ್ನ ತಂಗಿಯನ್ನು ಮೂರ್ಛಾವಸ್ಥೆಯಲ್ಲಿರಿಸಲು ಆಕೆ ತನ್ನ ಕ್ಲಿನಿಕಿನಿಂದ ಕದ್ದು ತಂದ ಹ್ಯಾಲೋಥೇನಿನ ಬಗ್ಗೆ ಆಕೆಗೆ ಸಂಪೂರ್ಣವಾದ ಮಾಹಿತಿಯಿತ್ತು. ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುವ ಮುನ್ನ ಅವುಗಳ ಪ್ರಜ್ಞೆ ತಪ್ಪಿಸಲು ಹ್ಯಾಲೋಥೇನ್ ಅನ್ನು ಬಳಸಲಾಗುತ್ತದೆ. ಅಲ್ಲದೆ ಹ್ಯಾಲೋಥೇನಿನಲ್ಲಿ ಅದ್ದಿದ ಬಟ್ಟೆಯೊಂದನ್ನು ಬೇಕಾಬಿಟ್ಟಿ ತನ್ನ ತಂಗಿಯ ಮುಖದ ಮೇಲೆ ಒತ್ತಿ ಹಿಡಿದ ಕಾರ್ಲಾ, ಆಕೆಯ ಮೂಗು ಮತ್ತು ಬಾಯಿಯನ್ನು ಸ್ವಲ್ಪ ಸ್ವಲ್ಪವೇ ಉಸಿರಾಡಲು ಅನುವಾಗುವಂತೆ ಆಗಾಗ ತೆರೆಯುತ್ತಿದ್ದರೂ ಆಕೆಯ ಪ್ರಾಣಪಕ್ಷಿಯು ಹಾರಿಹೋಗಿತ್ತು. ತಿಂದ ಆಹಾರ, ಕುಡಿದ ಮದ್ಯ, ಹ್ಯಾಲ್ಸಿಯನ್ ಮಾತ್ರೆಗಳು ಮತ್ತು ಹ್ಯಾಲೋಥೇನಿನ ರಾಸಾಯನಿಕ ಪರಿಣಾಮದಿಂದ ಒಮ್ಮೆಲೇ ಉಮ್ಮಳಿಸಿ ಬಂದ ವಾಂತಿಯು ತನ್ನಲ್ಲಿ ತಕ್ಕಮಟ್ಟಿನ ಅಸಿಡಿಕ್ ಅಂಶವನ್ನು ಹೊಂದಿತ್ತು. ಅಷ್ಟೇ ಅಲ್ಲದೆ ಕಾರ್ಲಾ ಹ್ಯಾಲೋಥೇನಿನಲ್ಲಿ ಅದ್ದಿದ ಬಟ್ಟೆಯನ್ನು ಟ್ಯಾಮಿಯ ಮುಖದ ಒಂದು ಭಾಗಕ್ಕೆ ಒತ್ತಿ ಹಿಡಿದ ಪರಿಣಾಮವಾಗಿ, ಸುಟ್ಟಂತೆ ಕಾಣುವ ಗಾಢಬಣ್ಣದ ರಕ್ತಕೆಂಪುಕಲೆಗಳು ಟ್ಯಾಮಿಯ ಮುಖದ ಆ ಭಾಗದಲ್ಲಿ ದಟ್ಟವಾಗಿ ಟ್ಯಾಟೂವಿನಂತೆ ಮೂಡಿಬಂದಿದ್ದವು. ಈ ಚಿತ್ರವನ್ನು ಶವಾಗಾರದಿಂದ ಪಡೆಯಲಾದ ಟ್ಯಾಮಿಯ ಚಿತ್ರದಲ್ಲೂ ಸ್ಪಷ್ಟವಾಗಿ ನೋಡಬಹುದಿತ್ತು.
ಆಂಬ್ಯುಲೆನ್ಸ್ ಗೆ ಕರೆಮಾಡಿದ ಕಾರ್ಲಾ ತನ್ನ ಪ್ರಿಯಕರ ಪೌಲ್ ಬರ್ನಾರ್ಡೊನ ಸಹಾಯದೊಂದಿಗೆ ಲಗುಬಗೆಯಲ್ಲಿ ವಿವಸ್ತ್ರಳಾಗಿ ಮಲಗಿದ್ದ ತನ್ನ ತಂಗಿಗೆ ಬಟ್ಟೆತೊಡಿಸಿ, ವೀಡಿಯೋ-ಕ್ಯಾಮೆರಾ ಮತ್ತು ಹ್ಯಾಲೋಥೇನಿನ ಪೊಟ್ಟಣಗಳನ್ನು ಅಡಗಿಸಿಟ್ಟಿದ್ದಳು. ಮುಂದೆ ಪ್ರತೀಬಾರಿಯೂ ಪೋಲೀಸರು ಈ ಆಕಸ್ಮಿಕ ಸಾವಿನ ಬಗ್ಗೆ, ಸಂದರ್ಭದ ಬಗ್ಗೆ ವಿಚಾರಣೆ ನಡೆಸಿದಾಗಲೆಲ್ಲಾ ಸತತವಾಗಿ ಸುಳ್ಳನ್ನೇ ಹೇಳುತ್ತಾ ಬಂದಿದ್ದಳು. ಒಟ್ಟಾರೆಯಾಗಿ ಕಾರ್ಲಾ ಹೊಮೋಲ್ಕಾ ತನ್ನ ತಂಗಿ ಟ್ಯಾಮಿಯನ್ನು ಕೊಲೆ ಮಾಡಲೆಂದೇ ಇವೆಲ್ಲವನ್ನು ಮಾಡದಿದ್ದರೂ, ಹದಿನೈದರ ತನ್ನ ತಂಗಿಯ ಮೇಲೆ ಮಾಡಿದ ಎಲ್ಲಾ ಅಪಾಯಕಾರಿ ಪ್ರಯೋಗಗಳೂ ಅಮಾನವೀಯ ಮತ್ತು ಖಂಡನೀಯವಾಗಿದ್ದವು. ಇವೆಲ್ಲದಕ್ಕಿಂತಲೂ ಆಘಾತಕಾರಿ ಸತ್ಯವೆಂದರೆ, ಇತ್ತ ಮನೆಯ ಬೇಸ್-ಮೆಂಟಿನಲ್ಲಿ ಮೂವರು ಮೋಜುಮಾಡುತ್ತಾ ಆಡುತ್ತಿದ್ದ ಆಟಗಳು ಸಾವಿನಲ್ಲಿ ಅಂತ್ಯವಾದರೆ, ಮನೆಯ ಮೇಲ್ಭಾಗದ ಕೋಣೆಯಲ್ಲಿ ಕಾರ್ಲಾಳ ಹೆತ್ತವರು ಸುಖನಿದ್ರೆಯಲ್ಲಿದ್ದರು. ತಮ್ಮ ಮನೆಯಂಗಳದಲ್ಲಿ ಆಂಬ್ಯುಲೆನ್ಸ್ ಸೈರನ್ ಗಳ ಅರಚಾಟದ ಬಳಿಕವೇ `ಏನೋ ಆಗಬಾರದ್ದು ಆಗಿದೆ' ಎಂದು ಅವರಿಗೆ ತಿಳಿದಿದ್ದು.
ಕಾರ್ಲಾಳ ಪೈಶಾಚಿಕತೆಯನ್ನು ಮತ್ತೊಂದು, ಮಗದೊಂದು ದೃಷ್ಟಿಕೋನಗಳಲ್ಲಿ ಹೀಗೂ ನೋಡಬಹುದು. ಪೌಲ್ ಬರ್ನಾರ್ಡೊ ಕಡೆಗೆ `ಅಡಿಕ್ಷನ್' ಎಂಬ ಮಟ್ಟಿಗಿದ್ದ ಕಾರ್ಲಾಳ ವ್ಯಾಮೋಹ ಆಕೆಯನ್ನು ಎಂಥಾ ಕೀಳುಮಟ್ಟಕ್ಕಾದರೂ ಇಳಿಯುವಂತೆ ಮಾಡುತ್ತಿತ್ತು ಎಂಬುದು ಹಲವು ಬಾರಿ ಸಾಬೀತಾಯಿತು. ಪೌಲ್ ಬರ್ನಾರ್ಡೊ ಜೊತೆ ತನ್ನ ವಿವಾಹವಾಗುವ ಸಮಯದಲ್ಲಿ, ಆತ ತನ್ನ ಹೆಚ್ಚಿನ ಸಮಯವನ್ನು ಸೈಂಟ್ ಕ್ಯಾಥರಿನ್ ಮನೆಯಲ್ಲಿ ಟ್ಯಾಮಿಯನ್ನು ಪುಸಲಾಯಿಸುತ್ತಾ ಕಳೆಯುತ್ತಿದ್ದುದು ಗೊತ್ತಿದ್ದ ಸಂಗತಿಯೇ. ಆದರೆ ಮುಂದೆ ಟ್ಯಾಮಿಯ ಮರಣಾನಂತರ ಪೌಲ್ ಗೆ ತನ್ನಲ್ಲಿ ಆಸಕ್ತಿಯು ಬತ್ತಿಹೋಗಿರುವುದನ್ನು ಕಾರ್ಲಾ ಕಂಡುಕೊಂಡಿದ್ದಳು. ಪೌಲ್ ನ `ವರ್ಜಿನ್' ಹೆಣ್ಣುಗಳ ಆಸೆ ದಿನೇ ದಿನೇ ಹೆಚ್ಚಾಗುತ್ತಿತ್ತು. ಪೌಲ್ ತನ್ನನ್ನು ದೂರವಿಡುವ ಪ್ರಯತ್ನಿಸುತ್ತಿರುವ ಮನಗಂಡ ಕಾರ್ಲಾ, ಮರಳಿ ಆತನನ್ನು ಸೆಳೆಯುವುದು ಹೇಗೆ ಎಂದು ಯೋಚಿಸತೊಡಗಿದ್ದಳು. ಪೌಲ್ ತನ್ನನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವಂತೆ ಅವಳಿಗೆ ಭಾಸವಾಗುತ್ತದೆ. ಆಗ ಅವಳ ನೆನಪಿಗೆ ಬರುವುದೇ ಜೇನ್ ಡೋ ಎಂಬ ಹದಿನೈದರ ಬಾಲಕಿ.
ಅಸಲಿಗೆ ಜೇನ್ ಯಾರೆಂಬುದೂ ಪೌಲ್ ಬರ್ನಾರ್ಡೊ ಗೆ ತಿಳಿದಿರುವುದಿಲ್ಲ. ಜೇನ್ ಡೋ ಮೃತ ಟ್ಯಾಮಿ ಹೊಮೋಲ್ಕಾಳ ಗೆಳತಿಯಾಗಿದ್ದಳು ಮತ್ತು ಈ ಮೂಲಕ ಅವಳಿಗೆ ಕಾರ್ಲಾ ಹೊಮೋಲ್ಕಾಳ ಒಡನಾಟವಿತ್ತು. ಗಲ್ರ್ಸ್ ನೈಟ್ ಔಟ್ ಪಾರ್ಟಿಯ ನೆಪದಲ್ಲಿ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಳ್ಳುವ ಕಾರ್ಲಾ ಆಕೆಗೆ ತಿಂಡಿ, ಊಟ ಮತ್ತು ಕಾಕ್-ಟೇಲ್ ಕೊಡಿಸಿ, ಸ್ವಲ್ಪ ಹೊತ್ತು ಹರಟಿ, ಪೌಲ್ ಗೆ ಫೋನ್ ಮಾಡಿ ಬರಹೇಳುತ್ತಾಳೆ. ಮನೆಗೆ ಬಂದ ಪೌಲ್ ಬರ್ನಾರ್ಡೊ ಸತ್ತ ಟ್ಯಾಮಿಯಂತೆಯೇ ಕಾಣುವ, ಹದಿನೈದರ `ವರ್ಜಿನ್' ಜೇನ್ ಳನ್ನು ನೋಡಿ ಖುಷಿಯಾಗುತ್ತಾನೆ. ಕೆಲವೇ ತಿಂಗಳುಗಳ ಹಿಂದೆ ಮದ್ಯ, ಅಮಲು ಪದಾರ್ಥಗಳನ್ನು ಬಳಸಿ ತನ್ನ ತಂಗಿ ಟ್ಯಾಮಿಯನ್ನು ಕಳೆದುಕೊಂಡಿದ್ದರೂ ಅದೇ ವಿಧಾನವನ್ನು ಕಾರ್ಲಾ, ಜೇನ್ ಮೇಲೂ ಹುಚ್ಚು ಧೈರ್ಯದಿಂದ ಪ್ರಯೋಗಿಸುತ್ತಾಳೆ. ಮದ್ಯದಲ್ಲಿ ಹಾಲ್ಸಿಯನ್ ಮಾತ್ರೆಗಳನ್ನು ಬೆರೆಸಿ ಕುಡಿಸುವ ಕಾರ್ಲಾ ಪ್ರತೀಬಾರಿಯೂ ಪರಿಚಿತ ಬಾಲಕಿಯ ಮುಗ್ಧತೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಾಳೆ. ಮುಗ್ಧ ಹುಡುಗಿ ಜೇನ್ ಜೊತೆ ಇವರಿಬ್ಬರ ಈ ದೌರ್ಜನ್ಯ ಹೀಗೇ ಎರಡನೇ ಬಾರಿಯೂ ಮುಂದುವರೆಯುತ್ತದೆ.
ಒಮ್ಮೆಯಂತೂ ಅಚಾನಕ್ಕಾಗಿ ಜೇನ್ ಳ ಉಸಿರು ನಿಂತುಹೋದಂತಾದಾಗ ಇಬ್ಬರು ಪ್ರೇಮಿಗಳೂ ನಡುಗಿಹೋಗುತ್ತಾರೆ. ಗಾಬರಿಗೊಂಡ ಪೌಲ್, “ಹ್ಯಾಲೋಥೇನ್ ಅನ್ನು ಬಳಸಲು ಬರದಿದ್ದರೆ ಅದನ್ನು ಪ್ರಯೋಗಿಸುವ ಅವಶ್ಯಕತೆಯಾದರೂ ಏನು?'' ಎಂದು ಸಿಟ್ಟಿನಲ್ಲಿ ಅರಚಾಡುತ್ತಾನೆ. ಆದರೂ ತನಗಾಗಿ ಕಾರ್ಲಾ ಏನೂ ಮಾಡಬಲ್ಲಳು ಎಂಬುದು ಅವನಿಗೆ ಸಂತಸವನ್ನು ತರುತ್ತದೆ. ತನ್ನ ಮುದ್ದಿನ ತಂಗಿ ಟ್ಯಾಮಿಯ `ಕನ್ಯತ್ವ' ವನ್ನು `ಕ್ರಿಸ್-ಮಸ್ ಗಿಫ್ಟ್' ಆಗಿ ಕೊಡುವ ಕಾರ್ಲಾ ಹೊಮೋಲ್ಕಾ, ಜೇನ್ ಳ `ಕನ್ಯತ್ವ'ವನ್ನು `ವೆಡ್ಡಿಂಗ್ ಗಿಫ್ಟ್' ಆಗಿ ಪೌಲ್ ಗೆ ಕೊಟ್ಟಿರುತ್ತಾಳೆ.
ಇನ್ನು ಸ್ಕಾರ್-ಬೋರೋದಲ್ಲಿ ನಡೆದ ಸರಣಿ ಅತ್ಯಾಚಾರಗಳ ಪ್ರಕರಣಗಳಿಗೆ ಕಣ್ಣಾಡಿಸಿದರೆ, ಪೌಲ್ ನ ಜೀವನದಲ್ಲಿ ತನ್ನ ಆಗಮನದ ನಂತರ ಆತ ನಡೆಸುವ ಬಹುತೇಕ ಅತ್ಯಾಚಾರಗಳ ಬಗ್ಗೆ ಆಕೆಗೆ ಮಾಹಿತಿಯಿರುತ್ತದೆ. ಪೋಲೀಸರು ನಂತರ ಸತ್ಯಕ್ಕೆ ದೂರವೆಂದು ಕೈಬಿಟ್ಟ ಓರ್ವ ಅತ್ಯಾಚಾರಕ್ಕೊಳಗಾದ ಯುವತಿಯೊಬ್ಬಳು ಕೊಟ್ಟ ಮಾಹಿತಿಯೊಂದರ ಪ್ರಕಾರ, ದಾಳಿ ನಡೆಸಿದ ಯುವಕನ ಜೊತೆ ಆಕೆ ಓರ್ವ ಎತ್ತರದ ನಿಲುವಿನ ಹೆಣ್ಣನ್ನೂ ನೋಡಿದ್ದಳು ಮತ್ತು ಆಕೆಯ ಕೈಯಲ್ಲಿ ಕ್ಯಾಮೆರಾದಂತೆ ಕಾಣುವ ವಸ್ತುವೊಂದಿತ್ತು. ವಿವಾಹದ ಮೊದಲೂ, ನಂತರವೂ ತನ್ನೊಂದಿಗಲ್ಲದೆ ಇತರರೊಂದಿಗೂ ಆತ ದೈಹಿಕ ಸಂಬಂಧಗಳನ್ನಿಟ್ಟುಕೊಳ್ಳುತ್ತಿರುವ ವಿಚಾರ ತಿಳಿದಿದ್ದರೂ ಕಾರ್ಲಾ ಅವನನ್ನು ಬದಲಾಯಿಸುವ ಗೋಜಿಗೆ ಹೋಗುವುದಿಲ್ಲ. ಪೌಲ್ ಬರ್ನಾರ್ಡೊ ತಾನು ಮನೆಯಿಂದ ಹೊರಹೋದ ಮೇಲೆ ನಡೆಸಿದ ರಂಗುರಂಗಿನ ಕಥೆಗಳನ್ನು ಕೇಳಿ ತಲೆಯಾಡಿಸುತ್ತಾ, ಆತನಲ್ಲಿ ಹೊತ್ತಿ ಉರಿಯುತ್ತಿರುವ ವಿಕೃತಕಾಮದ ಬೆಂಕಿಗೆ ತುಪ್ಪ ಸುರಿಯುತ್ತಾಳೆಯೇ ಹೊರತು ಅವನನ್ನು ತಡೆಯುವ ಪ್ರಯತ್ನವನ್ನೂ ಮಾಡುವುದಿಲ್ಲ. ತನ್ನಲ್ಲಿದ್ದ ಪೌಲ್ ನ ಆಸಕ್ತಿ ಕಮ್ಮಿಯಾಗುತ್ತಿರುವ ಸುಳಿವು ಸಿಗುತ್ತಲೇ, ತಾನೇ ಅಪ್ರಾಪ್ತ ಬಾಲಕಿಯರನ್ನು ಕರೆತಂದು ಈಕೆ ಅವನಿಗೊಪ್ಪಿಸುತ್ತಿದ್ದಳು. ತನ್ನ ವ್ಯಾಮೋಹದ ಹುಚ್ಚಿನಲ್ಲಿ ಹೆಣ್ಣೊಬ್ಬಳು ಮಾಡಬೇಕಾಗಿರುವ ಸಾಮಾಜಿಕ ಜವಾಬ್ದಾರಿಯೂ ಅವಳಿಗೆ ಮರೆತುಹೋಗಿರುತ್ತದೆ.
ಕ್ರಿಸ್ಟನ್ ಫ್ರೆಂಚ್ ಳ ಅಪಹರಣ ಮತ್ತು ಕೊಲೆಯಲ್ಲಿಯೂ ಕಾರ್ಲಾಳ ಇರುವಿಕೆ ಸ್ಪಷ್ಟವಾಗಿತ್ತು. ಈಸ್ಟರ್ ಭಾನುವಾರದಂದು ಕಾರ್ಲಾಳ ತಂಗಿ ಲೋರಿ ಮತ್ತು ಆಕೆಯ ಹೆತ್ತವರು ರಾತ್ರಿಯ ಊಟಕ್ಕೆ ಜೊತೆಯಾಗುತ್ತಾರೆ ಎಂಬ ಅರಿವಿದ್ದೂ ಆಕೆಯ ಮೇಲೆ ದಾಳಿಯನ್ನು ನಡೆಸಿ, ವೀಡಿಯೋ ಚಿತ್ರೀಕರಣವನ್ನು ನಡೆಸಲಾಗುತ್ತದೆ ಮತ್ತು ಗಡಿಬಿಡಿಯಲ್ಲಿ ಬಾಲಕಿಯನ್ನು ಕೊಲೆ ಮಾಡಲಾಗುತ್ತದೆ. ಕ್ರಿಸ್ಟನ್ ಳ ಕೊಲೆಯಾದ ಕೆಲವೇ ಕ್ಷಣಗಳಲ್ಲಿ ಬಾತ್ ರೂಮಿಗೆ ತೆರಳುವ ಕಾರ್ಲಾ ಏನೂ ಆಗಿಲ್ಲವೆಂಬಂತೆ ತನ್ನ ನೀಳವಾದ ಕೂದಲನ್ನು ಸರಿಪಡಿಸಿಕೊಳ್ಳುವುದರಲ್ಲಿ ಮಗ್ನಳಾಗುತ್ತಾಳೆ. ಕ್ರಿಸ್ಟನ್ ಫ್ರೆಂಚ್ ಧರಿಸುತ್ತಿದ್ದ ಮಿಕ್ಕಿ-ಮೌಸ್ ಶೈಲಿಯ ಕೈಗಡಿಯಾರ ಕಾರ್ಲಾಳ ಸಂಗ್ರಹದಲ್ಲಿ ಪತ್ತೆಯಾಗುತ್ತದೆ.
ಇದೇ ಪ್ರಕರಣದಲ್ಲಿ ಕ್ರಿಸ್ಟನ್ ಳ ಮೃತ ದೇಹವನ್ನು ಕೊಳಚೆಗುಂಡಿಯಲ್ಲಿ ಎಸೆಯುವ ಮೊದಲು ಬಾಲಕಿಯ ಕೂದಲನ್ನು ತೆಗೆಯುವ ಉಪಾಯ ಕಾರ್ಲಾ ಹೊಮೋಲ್ಕಾದ್ದಾಗಿರುತ್ತದೆ. “ಅಕಸ್ಮಾತ್ ಯಾರಾದರೂ ಈ ಮೃತದೇಹವನ್ನು ನೋಡಿದರೆ ಗುರುತು ಸಿಗಬಾರದೆಂಬ ಕಾರಣಕ್ಕೆ ಕೂದಲನ್ನು ಕತ್ತರಿಸಿ ತೆಗೆದಿದ್ದೆ'' ಎಂದು ಕಾರ್ಲಾ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿರುತ್ತಾಳೆ. ಕ್ರಿಸ್ಟನ್ ಫ್ರೆಂಚ್ ಳ ಮೃತದೇಹವನ್ನು ಕೊಳಚೆಗುಂಡಿಯಲ್ಲಿ ಎಸೆಯುವ ಮುನ್ನ ಮನೆಯ ಬಾತ್-ಟಬ್ ನಲ್ಲಿ ಚೆನ್ನಾಗಿ ತೊಳೆದು, ಸ್ವಚ್ಛಗೊಳಿಸಿ ಬೆರಳಚ್ಚುಗಳನ್ನು ನಾಶಪಡಿಸುವ ಕರಾಮತ್ತೂ ನಡೆದಿತ್ತು. ಅಲ್ಲದೆ ಪೌಲ್ ಬರ್ನಾರ್ಡೊ ಬಳಿಯಲ್ಲಿ ಇರದಿದ್ದಾಗ, ಕಾರ್ಲಾ ತನ್ನ ಕೋಣೆಯಲ್ಲಿ ಕೂಡಿಟ್ಟಿದ್ದ ಲೆಸ್ಲಿ ಮಹಾಫಿಯನ್ನು ಉರಿಯುತ್ತಿರುವ ಸಿಗರೇಟಿನಿಂದ ಹಿಂಸಿಸುತ್ತಿರುವ ದೃಶ್ಯವೂ ವೀಡಿಯೋದಲ್ಲಿ ಸೆರೆಯಾಗಿರುತ್ತದೆ.
ಕೊನೆಯ ಎರಡು ಕೊಲೆ ಪ್ರಕರಣಗಳ ಸ್ವಾರಸ್ಯಕರ ವಿಷಯಗಳನ್ನು ಇಲ್ಲಿ ಉಲ್ಲೇಖಿಸಲೇ ಬೇಕಾಗುತ್ತದೆ. ಹಾಲ್ಟನ್ ಪ್ರದೇಶದಲ್ಲಿ ಅಪಹರಣಕ್ಕೊಳಗಾಗಿದ್ದ ಲೆಸ್ಲಿ ಮಹಾಫಿಯ ಮೃತದೇಹದ ಭಾಗಗಳು ಸಿಮೆಂಟಿನ ಡಬ್ಬಗಳಲ್ಲಿ ನಯಾಗರಾ ಪ್ರದೇಶದಲ್ಲಿ ಪತ್ತೆಯಾಗಿದ್ದರೆ, ನಯಾಗರಾ ಪ್ರದೇಶದಲ್ಲಿ ಅಪಹರಣಕ್ಕೊಳಗಾಗಿದ್ದ ಕ್ರಿಸ್ಟನ್ ಫ್ರೆಂಚ್ ಳ ಮೃತದೇಹವು ಹಾಲ್ಟನ್ ಪ್ರದೇಶದಲ್ಲಿ ಬರಾಮತ್ತಾಗಿತ್ತು. “ಇದು ಪೋಲೀಸ್ ಇಲಾಖೆಗಳ ತನಿಖಾ ಪ್ರಕ್ರಿಯೆಯ ದಿಕ್ಕುತಪ್ಪಿಸಲು ಉದ್ದೇಶಪೂರ್ವಕವಾಗಿಯೇ ಆಡಿದ ಆಟ'', ಎಂದು ಕಾರ್ಲಾ ಹೊಮೋಲ್ಕಾ ಒಪ್ಪಿಕೊಳ್ಳುತ್ತಾಳೆ. ಇದರಿಂದ ಎರಡೂ ಪ್ರದೇಶಗಳ ಪೋಲೀಸ್ ಇಲಾಖೆಗಳು ನಿಜಕ್ಕೂ ದಿಕ್ಕುತಪ್ಪಿದ್ದವು. ತನಿಖಾ ಪ್ರಕ್ರಿಯೆಯ ಕೊನೆಯ ಹಂತಗಳಲ್ಲಂತೂ ಎರಡೂ ಪ್ರದೇಶದ ಇಲಾಖೆಗಳು ಗುಪ್ತ ಮಾಹಿತಿಗಳನ್ನು ಒಬ್ಬರನ್ನೊಬ್ಬರಿಂದ ಬಚ್ಚಿಡುತ್ತಾ, ಪರಸ್ಪರ ಸಹಕಾರವನ್ನು ನೀಡದೆ ಬಹಳಷ್ಟು ವಿಳಂಬವಾಗಿತ್ತು.
“ನಿನಗೆ ಬೇಕಾದಾಗಲೆಲ್ಲಾ ನಾನು ನಿನ್ನೊಂದಿಗೆ ಕಾರಿನಲ್ಲಿ ಬಂದು ಬಾಲಕಿಯರನ್ನು ಅಪಹರಿಸಲು ತಯಾರಿದ್ದೇನೆ. ಅದು ತಿಂಗಳಿಗೊಮ್ಮೆಯೋ, ವಾರಕ್ಕೊಮ್ಮೆಯೋ ಅಥವಾ ದಿನನಿತ್ಯವೋ… ನಿನ್ನಿಷ್ಟ… ನಾನು ನಿನ್ನೊಂದಿಗೆ ಬರುವುದು ನಿನಗಿಷ್ಟವಿಲ್ಲದಿದ್ದರೆ ಅದೂ ಸರೀನೇ… ನೀನು ಹೋಗಿ ಬಾಲಕಿಯರನ್ನು ಎತ್ತಿ ಹಾಕಿಕೊಂಡು ಬಂದುಬಿಡು… ನಾನು ಮನೆಯಲ್ಲೇ ಕುಳಿತು ನಿನಗಾಗಿ ಎಲ್ಲವನ್ನೂ ಸಿದ್ಧಪಡಿಸುತ್ತೇನೆ… ನೀನು ಅವರನ್ನು ಕೊಂದರೂ ಆ ಕೊಳಕನ್ನು ನಾನು ಶುಚಿಗೊಳಿಸುತ್ತೇನೆ… ನೀನು ಖುಷಿಯಿಂದಿರಬೇಕು ಅಷ್ಟೇ… ಅಪ್ಪಣೆಯನ್ನು ಕೊಡುವುದಷ್ಟೇ ನಿನ್ನ ಕೆಲಸ… ನಿನ್ನ ಗುಲಾಮಳು ನಾನು'', ಎಂದು ಕಾರ್ಲಾ ಹೊಮೋಲ್ಕಾ ವೀಡಿಯೋ ಟೇಪ್ ಗಳಲ್ಲಿ ಯಾವ ಒತ್ತಡವೂ ಇಲ್ಲದೆ, ತನ್ನ ಪತಿಯನ್ನು ಸಂತೋಷಪಡಿಸುತ್ತಾ ಹೇಳುತ್ತಿರುತ್ತಾಳೆ. ಈಗಾಗಲೇ ನಡೆಸಿದ ಅತ್ಯಾಚಾರ ಮತ್ತು ಕೊಲೆಗಳನ್ನು ಸವಿನೆನಪಿನಂತೆ ನೆನಪಿಸಿಕೊಂಡು ಅವುಗಳ ಬಗ್ಗೆ ಕನವರಿಸುವುದಲ್ಲದೆ, ಮುಂದೆ ನಡೆಯಲಿರುವ ದಾಳಿಗಳ ಬಗ್ಗೆಯೂ ತಮ್ಮ ಖಾಸಗಿ ರಾತ್ರಿಗಳಲ್ಲಿ ಈ ದಂಪತಿಗಳು ಚರ್ಚಿಸುತ್ತಿರುವುದು ಈ ವೀಡಿಯೋಗಳಲ್ಲಿ ಕಂಡುಬರುತ್ತದೆ.
ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಲಾದ ವಿವಾದಿತ ವೀಡಿಯೋ ಟೇಪ್ಗಳ ಬಗ್ಗೆ ಪತ್ರಕರ್ತ, ಲೇಖಕ ನಿಕ್ ಪ್ರಾನ್ ತನ್ನ ಪುಸ್ತಕ `ಲೀಥಲ್ ಮ್ಯಾರೇಜ್' ನಲ್ಲಿ ಕೆಳಕಂಡಂತೆ ವಿವರಿಸುತ್ತಾರೆ:
“ಆಶ್ಚರ್ಯದ, ಆಘಾತದ ಮತ್ತು ಹೇವರಿಕೆಯ ಭಾವನೆಗಳನ್ನು ಆ ವೀಡಿಯೋಗಳು ನ್ಯಾಯಾಲಯದ ಆ ಕೋಣೆಯಲ್ಲಿ ಹುಟ್ಟುಹಾಕುತ್ತಿದ್ದವು. ಪೌಲ್ ನತ್ತ ನೋಡುತ್ತಾ ಮಾಡುತ್ತಿರುವ ನಗ್ನ ಕಾರ್ಲಾಳ ವಿಚಿತ್ರ ಭಾವಭಂಗಿಗಳು ನ್ಯಾಯಾಲಯದ ಹಾಲ್ ನಲ್ಲಿ ಆಗಾಗ ಕ್ಷೀಣ ನಗೆಯನ್ನುಂಟುಮಾಡುತ್ತಿದ್ದರೂ, ತೀರಾ ಖಾಸಗಿ ಕ್ಷಣಗಳಾದ ಅವುಗಳನ್ನು ನೋಡುವುದು ನೆರೆದ ಜನರಲ್ಲಿ ತೀವ್ರ ಮುಜುಗರವನ್ನುಂಟುಮಾಡುತ್ತಿದ್ದವು. ಕಳೆದೆರಡು ವರ್ಷಗಳಿಂದ ಆಗಾಗ ಮಾಧ್ಯಮಗಳಲ್ಲಿ ಕಾಣುತ್ತಿದ್ದ ಕಾರ್ಲಾ ಹೊಮೋಲ್ಕಾಳ ಮುಖ ರಾಷ್ಟ್ರದ ಅಧ್ಯಕ್ಷನೊಬ್ಬನ ಮುಖದಂತೆ ಚಿರಪರಿಚಿತವಾಗಿ ಹೋಗಿತ್ತು. ಅವಳ ಮದುವೆಯ ಕೆಲ ವೀಡಿಯೋಗಳು, ಸ್ನೇಹಿತರ ಜೊತೆ ಕಳೆದ ವೀಡಿಯೋಗಳು, ಅವಳು ವಿಚಾರಣೆಗೆಂದು ಕೋರ್ಟುಗಳಿಗೆ ಹೋಗಿಬರುತ್ತಿದ್ದಾಗ ಮಾಧ್ಯಮಗಳು ತೆಗೆದ ವೀಡಿಯೋಗಳು… ಹೀಗೆ ಆಕೆಯ ಹಲವು ಸಾಮಾನ್ಯ ವೀಡಿಯೋಗಳನ್ನು ಈಗಾಗಲೇ ಜನರು ನೋಡಿಯಾಗಿತ್ತು. ಆದರೆ ಆ ದಿನಗಳಲ್ಲಿ ಬಿತ್ತರವಾಗುತ್ತಿದ್ದುದು ಚಿರಪರಿಚಿತ ಸುಂದರ ಮುಖದ, ಕೆನಡಾ ದೇಶದ ಕುಖ್ಯಾತ ಯುವತಿಯೊಬ್ಬಳ ಅತೀ ಅಶ್ಲೀಲವಾದ ಹಾವಭಾವಗಳನ್ನೊಳಗೊಂಡ ಖಾಸಗಿ ವೀಡಿಯೋಗಳು… ಅವುಗಳನ್ನು ನೋಡುವುದೇ ಒಂದು ಹಿಂಸೆ''.
ಕೊನೆಯ ಬಾರಿ ಪೋರ್ಟ್ ಡಾಲ್-ಹೌಸಿಯ ಮನೆಯಲ್ಲಿ ಪೌಲ್ ನಿಂದ ಭೀಕರ ಹಲ್ಲೆಗೊಳಗಾಗಿದ್ದ ಕಾರ್ಲಾ ಹೊಮೋಲ್ಕಾ, ಆ ಮನೆಯನ್ನು ಕೊನೆಯ ಬಾರಿ ಬಿಡುವ ಮುನ್ನ ಬಚ್ಚಿಟ್ಟ ವೀಡಿಯೋ ಟೇಪ್ ಗಳಿಗಾಗಿ ತಡಕಾಡಿದ್ದಳು. ಪೌಲ್ ಬರ್ನಾರ್ಡೊ ಮನೆಯ ಒಂದು ಚಿಕ್ಕ ಮೂಲೆಗಳಲ್ಲಿ ಅತ್ಯಾಚಾರಗಳನ್ನು ಚಿತ್ರೀಕರಿಸಲ್ಪಟ್ಟಿದ್ದ ಈ ವೀಡಿಯೋ ಟೇಪ್ ಗಳನ್ನು ಬಚ್ಚಿಟ್ಟಿದ್ದ ಮತ್ತು ಪೋಲೀಸರೇನಾದರೂ ಸಾಕ್ಷಿಗಳ ಸಮೇತ ಬಂದು ಬಂಧಿಸುವ ಪರಿಸ್ಥಿತಿಯೇನಾದರೂ ಬಂದರೆ ಈ ವೀಡಿಯೋ ಟೇಪುಗಳನ್ನು ನಾಶಪಡಿಸಬೇಕೆಂದೂ ಕಾರ್ಲಾಳಲ್ಲಿ ಒಮ್ಮೆ ಸೂಚಿಸಿದ್ದ. ಆದರೆ ಆ ದಿನ ಅವಳಿಗೆ ಆ ಪುಟ್ಟ ಜಾಗದಲ್ಲಿ ಯಾವ ಟೇಪ್ ಗಳೂ ಸಿಗಲಿಲ್ಲ. ಪೌಲ್ ತನ್ನ ಅಪಹರಣಗಳಲ್ಲಿ ಬಾಲಕಿಯರನ್ನು ಹೆದರಿಸಲು, ಹಲ್ಲೆ ನಡೆಸಲು ಬಳಸುತ್ತಿದ್ದ ಚಾಕುವಷ್ಟೇ ಅಲ್ಲಿತ್ತು. ಆ ಚಾಕುವನ್ನು ಅಲ್ಲೇ ಬಿಟ್ಟು ಅಸಮಾಧಾನದಿಂದ ಬುಸುಗುಡುತ್ತಾ ಕಾರ್ಲಾ ಮನೆಬಿಟ್ಟಿದ್ದಳು. ಪೌಲ್ ಬರ್ನಾರ್ಡೊ ಆ ವೀಡಿಯೋ ಟೇಪ್ ಗಳನ್ನು ಇನ್ನೆಲ್ಲೋ ಬಚ್ಚಿಟ್ಟಿದ್ದ ಮತ್ತು ಕೊನೆಗೂ ಅವುಗಳು ಕಾರ್ಲಾಳ ಕೈಗೆ ದಕ್ಕಲಿಲ್ಲ.
ಹೀಗೆ ಪ್ಲೀ ಬಾರ್ಗೈನ್ ಡೀಲ್ ಮಾಡಿ ಕಾನೂನಿನ ಕುಣಿಕೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡು ಹನ್ನೆರಡು ವರ್ಷಗಳ ಜೈಲು ಶಿಕ್ಷೆಯನ್ನಷ್ಟೇ ಪಡೆದ ಕಾರ್ಲಾ ಹೊಮೋಲ್ಕಾ ತನ್ನ ಅದೃಷ್ಟವನ್ನು ನೆನೆಯಬೇಕೇ ಹೊರತು ತಾನು ನಿರಪರಾಧಿಯೆಂಬ ವಾದವನ್ನಲ್ಲ. ತಪ್ಪುಗಳೆಲ್ಲವನ್ನೂ ತನ್ನ ಪತಿಯ ಮೇಲೆ ಹಾಕಿದರೂ, ಸ್ವಾಭಾವಿಕವಾಗಿಯೇ ಆಕೆಗೆ ಕಿಂಚಿತ್ತು ಅನುಕಂಪದ ಅಲೆಯೂ ಜನತೆಯಿಂದ ಸಿಗಲಿಲ್ಲ. ನ್ಯಾಯಾಲಯದ ವಿಚಾರಣೆಗೆ ಜನಸಾಮಾನ್ಯರಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವನ್ನು ನಿಷೇಧಿಸಿದ್ದರಿಂದ ಸ್ವಾಭಾವಿಕವಾಗಿಯೇ ಜನರು ನ್ಯಾಯಾಲಯಕ್ಕೆ ಹಿಡಿಶಾಪ ಹಾಕಿದ್ದರು. ನಂತರ ವಿಳಂಬವಾಗಿಯಾದರೂ, ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಲಾದ ವೀಡಿಯೋದ ಕಂಟೆಂಟ್ ಗಳು ಮಾಧ್ಯಮಗಳ ಮೂಲಕ ಸುದ್ದಿಯ ರೂಪದಲ್ಲಿ ಜನಸಾಮಾನ್ಯರಿಗೆ ತಲುಪುತ್ತಿದ್ದಂತೆಯೇ ಕೆನಡಾ ಮತ್ತು ಅಮೇರಿಕಾದ ಮೂಲೆಮೂಲೆಗಳಿಂದಲೂ ಕಾರ್ಲಾ ಹೊಮೋಲ್ಕಾಳ ರಹಸ್ಯ ಪ್ಲೀ ಬಾರ್ಗೈನ್ ಗೆ ವಿರೋಧಗಳು ವ್ಯಕ್ತವಾದವು. ಸ್ಥಳೀಯ ಪತ್ರಿಕೆಗಳು ಇದನ್ನು “ಡೀಲ್ ವಿದ್ ದ ಡೆವಿಲ್'' (ಸೈತಾನನೊಂದಿಗಿನ ಸಂಧಾನ) ಎಂದು ಬರೆದು ನ್ಯಾಯಾಂಗವನ್ನು ಜರೆದವು. “ವೀಡಿಯೋ ಟೇಪ್ ಗಳು ಮೊದಲೇ ಕೈಸೇರಿದ್ದರೆ ಯಾವ ಕಾರಣಕ್ಕೂ ಪ್ಲೀ ಬಾರ್ಗೈನ್ ಮಾಡುವ ಪ್ರಶ್ನೆಯೇ ಉದ್ಭವವಾಗುತ್ತಿರಲಿಲ್ಲ'', ಎಂದು ಹಳಹಳಿಸುತ್ತಾ ಪ್ರಾಸಿಕ್ಯೂಷನ್ ನ ತಂಡ ನ್ಯಾಯಮೂರ್ತಿ ಪ್ಯಾಟ್ರಿಕ್ ಗಲ್ಲಿಗನ್ ವರದಿಯಲ್ಲಿ ತನ್ನ ಅಸಹಾಯಕತೆಯನ್ನು ಒಪ್ಪಿಕೊಂಡಿತು. ಆದರೆ ಒಪ್ಪಂದವನ್ನು ಮುರಿಯುವಂತಿರಲಿಲ್ಲ. ಅಪವಾದದ ಪ್ರಕರಣವೆಂದು ಪರಿಗಣಿಸಿಕೊಂಡರೂ ಸಂದರ್ಭಗಳು ಕೈಗೂಡಲಿಲ್ಲ. ಕಾಲ ಮಿಂಚಿ ಹೋಗಿತ್ತು.
1993 ರ ಜುಲೈ ಆರರಂದು ನ್ಯಾಯಾಲಯವು ಲಿಖಿತ ಒಪ್ಪಂದದಂತೆ ಹನ್ನೆರಡು ವರ್ಷಗಳ ಜೈಲುವಾಸವನ್ನು (ಟ್ಯಾಮಿ ಹೊಮೋಲ್ಕಾಳ ಕೊಲೆ ಆಪಾದನೆಯ ಸಂಬಂಧ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸೇರಿಸಿ) ಕಾರ್ಲಾ ಹೊಮೋಲ್ಕಾಳಿಗೆ ವಿಧಿಸಿತು.
(ಮುಂದುವರೆಯುವುದು)
******************