ಕನ್ನಡ ರಂಗಭೂಮಿಯ ಇಳಯರಾಜ: ಪ್ರದೀಪ್ ಮಾಲ್ಗುಡಿ

pradeep malgudi
ಇಸ್ಮಾಯಿಲ್ ಗೋನಾಳ್ ಕಾಲದ ಕರೆಗೆ ಓಗೊಟ್ಟಿದ್ದಾರೆ. ಆದ್ರೆ, ಅವರು ನಮ್ಮಂತವರೊಡನೆ ಬಿಟ್ಟು ಹೋಗಿರುವ ನೆನಪುಗಳು ಚಿರಂತನವಾಗಿರುತ್ತವೆ. ಅಲ್ದೇ, ಅವರು ನೀಡಿರುವ ರಂಗಸಂಗೀತ ಮತ್ತು ಕ್ಯಾಸೆಟ್ ಸಂಗೀತ ನಮ್ಮೊಡನೆ ಯಾವಾಗಲೂ ಇರುತ್ತವೆ. ಬಹುತೇಕ ಎಲ್ಲ ಸಂಗೀತ ಪರಿಕರಗಳನ್ನೂ ನುಡಿಸಬಲ್ಲವರಾಗಿದ್ದ ಇಸ್ಮಾಯಿಲ್, ಎಂದೂ ನನಗೆ ಇಷ್ಟು ಸಾಮಥ್ರ್ಯವಿದೆ ಅಂತ ಹೇಳಿಕೊಳ್ತಿರಲಿಲ್ಲ. ಕ್ಯಾಸೆಟ್ ಸಂಗೀತದ ಉತ್ತುಂಗದ ಶಿಖರದಲ್ಲಿದ್ದ ಅವಧಿಯಲ್ಲೇ ಅಲ್ಲಿಂದ ದಿಡೀರ್ ಅಂತ ಮಾಯವಾಗಿಬಿಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದ್ರು. ಉತ್ತರ ಕರ್ನಾಟಕದ ಜಾನಪದ ಶೈಲಿಯ ಹಾಡುಗಳಿಂದ ಇವ್ರು ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರಾಗಿದ್ದ ಸಮಯದಲ್ಲೇ ಕ್ಯಾಸೆಟ್ ಸಂಗೀತದಿಂದ ದೂರವಾಗಿಬಿಟ್ಟಿದ್ದರು. ಕಳೆದ ತಿಂಗಳು ಕೂಡ ಯಾರಿಗೂ ಹೇಳದೆ, ಯಾರಿಗೂ ಯಾವ ತೊಂದರೆಯನ್ನೂ ಕೊಡದೆ ಈ ಲೋಕದಿಂದಲೇ ದೂರಾಗಿಬಿಟ್ಟಿದ್ದಾರೆ.

ಸಜ್ಜನ ಅನ್ನುವ ಪದಗಳು ವಿಶ್ವದ ಯಾವೆಲ್ಲ ಭಾಷೆಗಳಲ್ಲಿವೆಯೋ ಅಷ್ಟು ಪದಗಳನ್ನ ಧಾರಾಳವಾಗಿ ಇಸ್ಮಾಯಿಲ್ ಗೋನಾಳ್ ಅವ್ರಿಗೆ ಬಳಸಬಹುದಾದಷ್ಟು ಅವ್ರು ಒಳ್ಳೆಯವರಾಗಿದ್ರು. ಇಂತಹ ವ್ಯಕ್ತಿತ್ವ ಅವರದಾಗಿತ್ತು. ಯಾರೊಂದಿಗೂ ನೆಪಮಾತ್ರಕ್ಕೂ ಜಗಳ ಆಡೋಕೆ ಅವರಿಗೆ ಇಷ್ಟ ಇರಲಿಲ್ಲ. ಕನಸಲ್ಲೂ ಜಗಳ ಆಡೋದನ್ನ ಪ್ರಾಯಶಃ ಅವರು ಕಲ್ಪಿಸಿಕೊಳ್ಳೋಕೂ ಸಾಧ್ಯವಿರಲಿಲ್ಲ. ಅವರಂತ ಉಗ್ರ ಪ್ರಾಮಾಣಿಕ ವ್ಯಕ್ತಿ ಸಿಕ್ಕೋದು ತುಂಬ ಕಷ್ಟ. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾದಲ್ಲಿ ಅವರು ಅತಿಥಿ ಉಪನ್ಯಾಸಕರಾಗಿ  ಕೆಲಸ  ಮಾಡ್ತಿದ್ದರು. ಆಗ ವಿಭಾಗದಲ್ಲಿ ತಾವು ಎಷ್ಟು ಗಂಟೆ ಅವಧಿಯ ತರಗತಿಗಳನ್ನು ನಡೆಸಿದ್ದರೋ ಅಷ್ಟಕ್ಕೆ ಮಾತ್ರ ಹಣ ಪಡೀತಿದ್ರು. ಒಂದೇ ಒಂದು ಪೈಸೆಯನ್ನೂ ಹೆಚ್ಚಾಗಿ ಪಡೆದ ಉದಾಹರಣೆಯೇ ಇಲ್ಲ.

Ismail Gonal

ಇಸ್ಮಾಯಿಲ್ ಗೋನಾಳ್

 
2008ರಲ್ಲಿ ನನಗೆ ಗೋನಾಳ್ ಅವರನ್ನು ಮುಖಾಮುಖಿಯಾಗಿ ಪರಿಚಯಿಸಿದ್ದು ಪ್ರೊ.ರಾಜಪ್ಪ ದಳವಾಯಿ. ಇದಕ್ಕಿಂತ ಮೊದಲೇ ಅವರ ಕ್ಯಾಸೆಟ್ ಸಂಗೀತ ಕೇಳಿ ನಾನು ಅವರ ಅಭಿಮಾನಿಯಾಗಿದ್ದೆ. ದಳವಾಯಿ ಡಜನ್ ನಾಟಕೋತ್ಸವ ಬೆಂಗಳೂರು ವಿಶ್ವವಿದ್ಯಾಲಯದ ಎಚ್.ಎನ್. ಸಭಾಂಗಣದಲ್ಲಿ ನಡೀತಿತ್ತು. ಆಗ  ನಾಟಕಗಳಿಗೆ ಸಂಗೀತ ನೀಡೋ ಸಲುವಾಗಿ ಬೆಂಗಳೂರು ವಿ.ವಿ.ಯ ಅತಿಥಿಗೃಹದಲ್ಲೇ ಅವರು ರಾಜಪ್ಪ ದಳವಾಯಿಯವರೊಂದಿಗೆ ಉಳಿದುಕೊಂಡಿದ್ರು. ಆಗ ಅವರ ಮತ್ತು ನನ್ನ ನಡುವೆ ಆತ್ಮೀಯತೆ ಬೆಳೆಯೋದಕ್ಕೆ ಅವಕಾಶ ಆಯ್ತು. ಇಡೀ ದಿವಸ ಅವರು ದುಡಿದರೂ ಎಳ್ಳಷ್ಟೂ ಅವರಲ್ಲಿ ಆಯಾಸ ಕಾಣಿಸ್ತಿರಲಿಲ್ಲ. ರಾಜ್ಯದ ಅತ್ಯಂತ ಹಿರಿಯ ರಂಗಕರ್ಮಿಗಳಿಂದ ಅತ್ಯಂತ ಕಿರಿಯ ರಂಗಕರ್ಮಿಗಳ ಜೊತೆಗೆ ಕೂಡ ಅವರ ಒಡನಾಟ ಇತ್ತು.

ಇತ್ತೀಚೆಗೆ ದೊಡ್ಡವರ ಸಹವಾಸದಿಂದ ಸಂಪೂರ್ಣ ದೂರವಾಗಿ ಕಿರಿಯರ ಜೊತೆಗೆ ಇರಬೇಕು ಅಂತ ನಿರ್ಧರಿಸಿದ್ರು. ಆಗಸ್ಟ್ 7, 2010ರಂದು ಸುಚಿತ್ರ ಕಲಾಕೇಂದ್ರದಲ್ಲಿ ಬೇಂದ್ರೆ ಕುರಿತು ಉಪನ್ಯಾಸ ನೀಡಿದ ನಂತರ, ಪ್ರೊ.ಕಿ.ರಂ. ನಾಗರಾಜ ಅವರಿಗೆ ಹೃದಯಾಘಾತವಾಗಿತ್ತು. ಅವರ ಜೊತೆ ಮನೆಗೆ ಬಂದು, ಸಾಕಷ್ಟು ಬಲವಂತ ಮಾಡಿದ ನಂತರ ಟ್ರಿನಿಟಿ ಆಸ್ಪತ್ರೆಗೆ ಬರೋದಕ್ಕೆ ಕಿ.ರಂ. ಒಪ್ಕೊಂಡಿದ್ರು. ಅಲ್ಲಿ ಚೆಕ್ ಮಾಡಿದ ನಂತರ ಕೂಡ ನಮಗೆ ಸಮಾಧಾನವಾಗಿರಲಿಲ್ಲ. ಸತತ ಒಂದು ಗಂಟೆಗಳ ಕಾಲ ಬಲವಂತ ಮಾಡಿದ ಮೇಲೆ ಕೂಡ ಕಿ.ರಂ. ಜಯದೇವಕ್ಕೆ ಬರೋಕೆ ಒಪ್ಪಿಕೊಂಡಿರಲಿಲ್ಲ. ಕಡೆಗೆ ಗಾಂಧಿ ಬಜಾರ್‍ನಲ್ಲಿರೋ ಫ್ಯಾಮಿಲಿ ಡಾಕ್ಟರ್ ಹತ್ರ ಹೋಗೋಣ ಅಂತ ಹೇಳಿದ್ರು. ಆಟೋ ಹಿಡಿದು ಅಪ್ಪು ಮತ್ತು ನಾನು ಗಾಂಧಿ ಬಜಾರ್‍ಗೆ ಬಂದಾಗ ಅಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಅಲ್ದೇ ಆ ಹೊತ್ತಿಗೆ ಡಾಕ್ಟರ್ ಕೂಡ ಮನೆಗೆ ಹೋಗಿಯಾಗಿತ್ತು. ನಾನು ಅವರ ನಂಬರ್ ಇದೆಯಾ ಸರ್? ಅಂತ ಕೇಳಿದಾಗ ಕಿ.ರಂ. ಇಲ್ಲ ಅಂದ್ರು. ಆ ಬಿಲ್ಡಿಂಗ್ ಓನರ್ ಹತ್ರ ನಂಬರ್ ತಗೊಂಡು ಬರ್ತೀನಿ ಅಂತ ನಾನು ಹೋದೆ. ಆದರೆ ವಿದ್ಯುತ್ ಇಲ್ಲದ ಕಾರಣ ಡಾಕ್ಟರ್ ನಂಬರ್ ಕೂಡ ಸಿಗಲಿಲ್ಲ. ಕೆಳಗೆ ಬಂದು ನೋಡಿದ್ರೆ ಕಿ.ರಂ. ಮತ್ತು ಅಪ್ಪು ಇಬ್ಬರೂ ಇರಲಿಲ್ಲ. ಕಾಲ್ ಮಾಡೋದಕ್ಕೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದ್ರಿಂದ ಇಡೀ ಗಾಂಧಿ ಬಜಾರಿನ ಗಲ್ಲಿಗಲ್ಲಿಗಳನ್ನೆಲ್ಲ ಹುಡುಕಿದ್ದೆ. ಮೇಷ್ಟ್ರಾಗಲಿ, ಅಪ್ಪು ಆಗಲಿ ಸಿಗಲಿಲ್ಲ. ಕಡೆಗೆ ಅಚಾನಕ್ಕಾಗಿ ಇಸ್ಮಾಯಿಲ್ ಗೋನಾಳ್ ಕಾಫಿ ಕುಡೀತ ನಿಂತಿದ್ರು.  ರಂಗಭೂಮಿಯಲ್ಲಿ ನಡೀತಿರೋ ರಾಜಕಾರಣ, ಪ್ರಾಜೆಕ್ಟ್‍ಗಳ ಮೂಲಕ ರಂಗಭೂಮಿಯನ್ನು ದುರ್ಬಳಕೆ ಮಾಡ್ಕೊಳ್ತಿರೋ ವಿಷಯದಲ್ಲಿ ತೀವ್ರವಾಗಿ ಗೋನಾಳ್ ಅವ್ರಿಗೆ ಸಿಟ್ಟು ಬಂದಿತ್ತು. ಆಗ ಸುಮಾರು ಎರಡು ಗಂಟೆಗಳ ಕಾಲ ಸದ್ಯದ ರಂಗಭೂಮಿಯ ದಿಗ್ಗಜರ ಜೊತೆಗಿನ ಒಡನಾಟ, ಅವರ ಸಣ್ಣತನಗಳ ಕುರಿತು ತುಂಬಾ ಸಮಾಧಾನದಿಂದ ಮಾತನಾಡಿದ ಗೋನಾಳ್, ಕೋಟಿಗಟ್ಟಲೆ ಪ್ರಾಜೆಕ್ಟ್ ಗಳ ವಿರುದ್ಧ ತಮಗಿರುವ ಅಸಮಾಧಾನವನ್ನು ನನ್ನ ಬಳಿ ತೋಡಿಕೊಂಡಿದ್ರು.

ಕನ್ನಡ ಬೀದಿ ರಂಗಭೂಮಿಯ ಸಂಗೀತಕ್ಕೆ ಅವರು ಸಲ್ಲಿರುವಷ್ಟು ಸೇವೆಯನ್ನ ಪ್ರಾಯಶಃ ಮತ್ತೊಬ್ಬ ಸಂಗೀತ ನಿರ್ದೇಶಕ ಸಲ್ಲಿಸಿರೋಕೆ ಸಾಧ್ಯವಿಲ್ಲ. ಜನಾಧಿಕಾರ, ನೈರ್ಮಲ್ಯ ಮೊದಲಾದ ಯೋಜನೆಗಳಿಗೆ ಅವರು ನೀಡಿರುವ ಸಂಗೀತ ಬೀದಿ ರಂಗಭೂಮಿಯನ್ನೂ ಮೀರಿ ಇಂದು ಕ್ರಾಂತಿಗೀತೆಗಳ ರೂಪದಲ್ಲಿ ಜನಜನಿತವಾಗಿವೆ. ಇನ್ನು ಕನ್ನಡ ರಂಗಭೂಮಿಗೆ ಅವರ ಕೊಡುಗೆ ಅಪಾರ. ತಾವು ಸಂಗೀತ ನಿರ್ದೇಶಿಸಿದ ನಾಟಕಗಳಲ್ಲಿ ಬಿ.ವಿ.ಕಾರಂತರಷ್ಟೇ ಯಶಸ್ವಿಯಾಗಿರುವ ಕೆಲವೇ ಕೆಲವು ಸಂಗೀತ ನಿರ್ದೇಶಕರಲ್ಲಿ ಗೋನಾಳ್ ಅವರೂ ಒಬ್ಬರು.

ಅವರು ಕನ್ನಡ ರಂಗಭೂಮಿಯ ಇಳಯರಾಜ. ಅವರ ಕೈಯಲ್ಲಿ ಕೊಳಲು ಸಿಕ್ಕರೆ ಅವರೊಬ್ಬ ಕೃಷ್ಣನಾಗಿಬಿಡ್ತಿದ್ದರು. ಉಳಿದವರೆಲ್ಲ ಗೋಪಿಕೆಯರಾಗಿ ಬದಲಾಗಲೇಬೇಕಾದ ಅನಿವಾರ್ಯತೆ ಎದುರಾಗ್ತಿತ್ತು. ರಾಜಪ್ಪ ದಳವಾಯಿಯವರ ಎಲ್ಲ ನಾಟಕಗಳಿಗೆ ಅವರು ಸಂಗೀತ ನೀಡಿದ್ದಾರೆ. ಒಟ್ಟು ನೂರಾರು ಬೀದಿನಾಟಕಗಳು, ನಾಟಕಗಳಿಗೂ ಸಂಗೀತ ನೀಡಿ, ಸದಾ ತೆರೆಮರೆಯಲ್ಲೇ ಉಳಿದುಬಿಡ್ತಿದ್ರು. ಕನ್ನಡ ರಂಗಭೂಮಿಗೆ ಅವರು ಸಲ್ಲಿಸಿರುವ ಕೊಡುಗೆಯನ್ನು ಕನ್ನಡದ ಸಾಂಸ್ಕøತಿಕ ಲೋಕ ಗುರುತಿಸಲೇ ಇಲ್ಲ. ಇಷ್ಟೇ ಅಲ್ಲದೇ, ಕೋಟಿಗಟ್ಟಲೆ ಪ್ರಾಜೆಕ್ಟ್‍ಗಳು ಬಂದಾಗ ಮಾತ್ರ ಇಸ್ಮಾಯಿಲ್ ಗೋನಾಳ್ ಅವ್ರನ್ನು ಕನ್ನಡ ರಂಗ ದಿಗ್ಗಜರು ಮರೆತೇ ಬಿಡ್ತಿದ್ರು. ಆದರೆ, ಈ ಕುರಿತು ಎಳ್ಳಷ್ಟೂ ಗೋನಾಳ್ ಅವ್ರಿಗೆ ಅಸಮಾಧಾನ ಕೂಡ ಇರಲಿಲ್ಲ. ಸರ್ಕಾರ, ಅಕಾಡೆಮಿಗಳು ಕೂಡ ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮರೆತುಬಿಟ್ಟವು. ದಾರಾಶಿಕೋ, ಕುಲಂ, ಅಗ್ನಿ ಮತ್ತು ಮಳೆ, ಮೊದಲಾದ ನಾಟಕಗಳಿಗೆ ಅವರು ನೀಡಿರುವ ಸಂಗೀತ ಅನುಪಮವಾದುದು. ಇಸ್ಮಾಯಿಲ್ ಗೋನಾಳ್ ಅವರಿಗೆ ಸ್ಪರ್ಶ ಮಕ್ಕಳ ರಂಗ ಕೇಂದ್ರದಿಂದ ‘ಸ್ಪರ್ಶ ಮಕ್ಕಳ ಪುರಸ್ಕಾರ’ ನೀಡಲು ಮುಂದಾದಾಗ, ಮೊದಲ ವರ್ಷ ಶಾಂತ ಕುಲಕರ್ಣಿ ಮತ್ತು ಎರಡನೇ ವರ್ಷ ರಾಮಕೃಷ್ಣ ಬೆಳ್ತೂರು ಅವರಿಗೆ ಕೊಡಿಸಿದರು. ಪ್ರಶಸ್ತಿ ಮತ್ತು ಪುರಸ್ಕಾರಗಳಿಂದ ಸದಾ ದೂರವಾಗಿದ್ರು. 
ಮಂಜು ನಾರಾಯಣ್, ಸಂಪತ್ ಕುಮಾರ್ ನಾ, ಗೋವಿಂದರಾಜ್ ಬೈಚಕುಪ್ಪೆ, ರಮೇಶ್ ಪಾಲಸಂದ್ರ ಮೊದಲಾದವರು ಅವರ ಸಾಧನೆ ಕುರಿತು ಮಾತನಾಡಿಕೊಳ್ಳದ ದಿನಗಳೇ ಇರಲಿಲ್ಲ. ನಮಗೆ ಅವರೇ ಹೀರೋ ಆಗಿದ್ರು. ನನಗೆ ಕೂಡ ಅವರು ಒಂದು ಹಾಡು ಹಾಡೋಕೆ ಅವಕಾಶ ಕೊಟ್ಟಿದ್ರು. ಕುಂಟ ಕುರುಡ ಕೆಪ್ಪ ಇವ್ರಾಟ ನೋಡ್ರಪ್ಪಾ ಅನ್ನೋ ಹಾಡನ್ನು ನನ್ನಿಂದ ಹಾಡಿಸಿದ್ರು.
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x