ಆಕಾಶದಿಂದ ೮೦ ಕಿ.ಮಿ. ವೇಗದಲ್ಲಿ ಇಳಿದು ತನ್ನ ಬಲಿಷ್ಟವಾದ ಕೊಕ್ಕಿನಿಂದ ಹದಿನೈದಡಿ ಎತ್ತರದ ಗಿಡದ ಎಲೆಗಳನ್ನು ಮೇಯುತ್ತಿದ್ದ ೧೨ ಅಡಿ ಎತ್ತರದ ದೈತ್ಯ ಪಕ್ಷಿಯ ಹಿಂಭಾಗಕ್ಕೆ ಬಲವಾಗಿ ಕುಕ್ಕುತ್ತದೆ. ೮ನೇ ಮಹಡಿಯಿಂದ ಬೀಳುವ ಬೂದಿಯ ಇಟ್ಟಿಗೆಯಷ್ಟು ವೇಗವಾಗಿ ಅಪ್ಪಳಿಸಿದ ಹೊಡೆದಕ್ಕೆ ದೈತ್ಯ ಪಕ್ಷಿ ಧರಾಶಾಯಿಯಾಗುತ್ತದೆ. ಮಾರಣಾಂತಿಕವಾದ ಗಾಯದಿಂದ ರಕ್ತ ಬಸಿದು, ಬಲಿ ಅಸುನೀಗುತ್ತದೆ. ಬಲಿಗಿಂತ ಸುಮಾರು ೧೫-೨೦ ಪಟ್ಟು ಚಿಕ್ಕದಿರುವ ಹಾಸ್ತಸ್ ಎಂಬ ಹೆಸರಿನ ಗಿಡುಗಕ್ಕೆ ಮುಂದಿನ ಒಂದು ವಾರ ಬೇರೆ ಬೇಟೆ ಬೇಕಿಲ್ಲ. ಬಲಿಯಾದ ಪಕ್ಷಿಯ ಹೆಸರು ಮೋವ. ಇದೇನು ಹಾಲಿವುಡ್ ಸಿನಿಮಾದಂತಿದೆಯಲ್ಲ ಅನಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ಈಗಿನ ನ್ಯೂಜಿಲ್ಯಾಂಡ್ ಎಂಬ ದೇಶದಲ್ಲಿ ಬರೀ ಸಾವಿರ ವರ್ಷಗಳ ಹಿಂದೆ ಈ ತರಹದ ಘಟನೆ ಸಹಜವಾಗಿ ನಡೆಯುತ್ತಿತ್ತು. ಮನುಷ್ಯ ಸಂಪರ್ಕವಿಲ್ಲದ ದ್ವೀಪ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮೋವ ಪಕ್ಷಿಗಳಿದ್ದವು. ದೈತ್ಯದೇಹಿಯಾದ ಈ ಪಕ್ಷಿಗಳಿಗೆ ಹಾರುವ ಸಾಮರ್ಥ್ಯವಿರಲಿಲ್ಲ, ಈಗ ಜೀವಿಸಿರುವ, ಆಸ್ಟ್ರಿಜ್, ಎಮುನಂತಹ ದೈತ್ಯದೇಹಿಯಾದ ಮೋವ ಸಂಕುಲ ಇತಿಹಾಸದ ಬುಟ್ಟಿಗೆ ಸೇರಿ ಹತ್ತಿರ ೭೦೦ ವರುಷಗಳೇ ಸಂದವು. ಇದರ ಹಿಂದೆಯೇ ಇವುಗಳನ್ನು ಬೇಟೆಯಾಡಿ ಬದುಕುತ್ತಿದ್ದ ಹಾಸ್ತಸ್ ಗಿಡುಗಗಳೂ ನಾಮಾವಷೇಶವಾದವು.
ಜೀವಶಾಸ್ತ್ರಜ್ಞರು ಬೃಹತ್ ದೇಹದ ಮೋವ ಸಂತತಿ ಅಳಿಯಲು ನೈಸರ್ಗಿಕ ವಿಕೋಪಗಳು (ಮಿಲಿಯಾಂತರ ವರ್ಷಗಳ ಹಿಂದೆ ಡೈನೋಸಾರಸ್‌ನಂತಹ ಮಹೋರಗಗಳು ಅಳಿಯಲು ನೈಸರ್ಗಿಕ ವಿಕೋಪಗಳು ಕಾರಣವಾಗಿದ್ದವು) ಕಾರಣವಾಗಿರಬೇಕು ಎಂದು ಇಷ್ಟು ವರ್ಷ ಅಂದಾಜಿಸಿದ್ದರು. ಇತ್ತೀಚಿನ ಸಂಶೋಧನೆಯ ಪ್ರಕಾರ ಲಕ್ಷಗಟ್ಟಲೆ ಸಂಖ್ಯೆಯಲ್ಲಿದ್ದ ಮೋವ ಸಂತತಿಯ ಅಳಿವಿಗೆ ನೇರವಾಗಿ ಮನುಷ್ಯನೇ ಕಾರಣ ಎಂದು ದೃಡಪಡಿಸಿದ್ದಾರೆ. ನ್ಯೂಜಿಲೆಂಡ್ ದ್ವೀಪ ಸಮೂಹಕ್ಕೆ ಮನುಷ್ಯನ ಆಗಮನಕ್ಕೂ ಮುಂಚಿತವಾಗಿ ಮೋವ ಪಕ್ಷಿಯ ಒಟ್ಟು ೧೧ ಪ್ರಭೇದಗಳು ಆ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದವು, ವಿಕಾಸದ ಹಾದಿಯಲ್ಲಿ ಅದು ಹೇಗೋ ಈ ಬೃಹತ್ ಗಾತ್ರದ ಪಕ್ಷಿಗಳು ಹಾರುತ್ತಿರಲಿಲ್ಲ ಹಾಗೂ ಇವುಗಳಿಗಿದ್ದ ಏಕಮೇವ ನೈಸರ್ಗಿಕ ಶತ್ರುವೆಂದರೆ, ಅದೇ ಹಾಸ್ತಸ್ ಗಿಡುಗ. ಹಾಗೂ ಒಂದು ಜಾತಿಯ ಬಾವಲಿಗಳನ್ನು ಬಿಟ್ಟರೆ ಈ ದ್ವೀಪ ಸಮೂಹದಲ್ಲಿ ಇನ್ನೊಂದು ಸ್ತನಿ ಪ್ರಾಣಿಯ ಕುರುಹೂ ಇರಲಿಲ್ಲ. ಯಾವಾಗ ಪಾಲಿನೇಷ್ಯನ್ನರು ಈ ದ್ವೀಪ ಸಮೂಹಕ್ಕೆ ಲಗ್ಗೆ ಹಾಕಿ, ಅತಿ ಸುಲಭವಾಗಿ ಬೇಟೆಗೆ ಲಭ್ಯವಾಗಿದ್ದರಿಂದ ಇವುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಮನುಷ್ಯ ಹೊಕ್ಕಲ್ಲಿ ಸುಸ್ಥಿರ ಎಂಬುದಕ್ಕೆ ಅರ್ಥವೆಲ್ಲಿದೆ? ಪಾಲಿನೇಷ್ಯನ್ನರು ಮೋವ ಸಂತತಿಯ ಮೊಟ್ಟೆ-ಮರಿಯನ್ನು ಬಿಡದೇ ಕೊಂದು ತಿಂದರು. ಮೋವ ಪಕ್ಷಿಗಳಿಗೆ ಸಂತತಿ ಮುಂದುವರೆಸುವ ಯಾವ ಅವಕಾಶವನ್ನು ಇವರು ನೀಡಲಿಲ್ಲ. ಅಂದರೆ ೧೨ ಕೆ.ಜಿ ತೂಗುವ ಹಕ್ಕಿಯಿಂದ ಹಿಡಿದು ೨೫೦ ಕೆ.ಜಿ ತೂಗುವ ಬೃಹತ್ ಹಕ್ಕಿಯನ್ನು ಬಿಡಲಿಲ್ಲ. ನಮ್ಮಲ್ಲಿ ಲಭ್ಯವಿರುವ ಅತ್ಯಂತ ದೊಡ್ಡದಾದ ಎಳನೀರಿನ ಗಾತ್ರಕ್ಕಿಂತಲೂ ದೊಡ್ಡದಾದ ಇವುಗಳ ಮೊಟ್ಟೆಯನ್ನು ಸುಟ್ಟು ತಿಂದು ಹಾಕಿದರು. ಮೋವಗಳ ಅಳಿವಿನ ಕುರಿತು ಸಂಶೋಧನೆ ನಡೆಸಲು ಹೋದ ಜೀವವಿಜ್ಞಾನಿಗಳಿಗೆ ಪಾಲಿನೇಷ್ಯನ್ನರು ಕೆಲಸಕ್ಕೆ ಬಾರದ್ದು ಎಂದು ಎಸೆದ ಮೋವ ಪಕ್ಷಿಗಳ ಮೂಳೆಗಳ ಗುಡ್ಡಗಳೇ ಸಿಕ್ಕಿದವು. ಕೋಪೆನ್‌ಹೇಗನ್‌ನ ಮಾರ್ಟಿನ್ ಅಲೆನ್ ಎಂಬ ಜೀವವಿಕಾಸ ವಿಜ್ಞಾನಿಯು ನ್ಯೂಜಿಲೆಂಡಿನ ದಕ್ಷಿಣ ದ್ವೀಪ ಸಮೂಹದಿಂದ ೨೮೧ ಬಗೆಯ ಮೋವ ಪಕ್ಷಿಯ ಅವಶೇಷಗಳ ಮಾದರಿಯನ್ನು ಸಂಗ್ರಹಿಸಿ ಅವುಗಳ ಅನುವಂಶಿಕ ವೈವಿಧ್ಯಗಳನ್ನು ಪರೀಕ್ಷಿಸುತ್ತಾನೆ. ಮಾರ್ಟಿನ್ ಸಂಗ್ರಹಿಸಿದ ಮಾದರಿಗಳಲ್ಲಿ ೬೧೨ ವರ್ಷ ಹಳೆಯದರಿಂದ ಹಿಡಿದು ೧೩ ಸಾವಿರ ವರ್ಷಗಳ ಹಳೆಯ ಮಾದರಿಗಳು ಇದ್ದವು. ಇವುಗಳನ್ನು ಮೈಟ್ರೋಕಾಂಡ್ರಿಯಲ್ ಹಾಗೂ ನ್ಯೂಕ್ಲಿಯರ್ ಡಿಎನ್‌ಎ ವಿಧಾನದಿಂದ ಮೋವದ ನಾಲ್ಕು ಪ್ರಭೇದಗಳ ಅನುವಂಶಿಕ ವೈವಿಧ್ಯಗಳನ್ನು ವಿಶ್ಲೇಷಣೆ ನಡೆಸಿದರು. ಈ ವಿಧಾನದಿಂದ ಒಂದು ಪ್ರಭೇದದ ಸಂಪೂರ್ಣ ಅಳಿವು ಅಥವಾ ಪತನದ ಕಾರಣಗಳನ್ನು ತಿಳಿಯಬಹುದಾಗಿದೆ. ಈ ಅನುವಂಶೀಯ ಇತಿಹಾಸದಿಂದ ತಿಳಿದುಬಂದ್ದಿದ್ದೇನೆಂದರೆ, ಮೋವ ಸಂತತಿಯು ಯಾವುದೇ ತರಹದ ಸಾಮೂಹಿಕ ಕಾಯಿಲೆಗಳಿಗೆ ಈಡಾಗಿರಲಿಲ್ಲ ಅಥವಾ ಯಾವುದೋ ನೈಸರ್ಗಿಕ ವಿಪತ್ತು ಸಂಭವಿಸಿರಲಿಲ್ಲ, ಎಲ್ಲಾ ಮಾದರಿಗಳೂ ಆ ಕಾಲದ ಮೋವ ಸಂತತಿಯ ಆರೋಗ್ಯವು ಸಂಪೂರ್ಣ ಸುಸ್ಥಿತಿಯಲ್ಲಿತ್ತು ಎಂಬ ಅಚ್ಚರಿಯ ಫಲಿತಾಂಶ ನೀಡಿದವು. ಅಲ್ಲದೇ ಈ ಪ್ರಭೇದದ ಅಳಿವಿಗೂ ಕೊಂಚ ಮುಂಚಿತವಾಗಿ ಇವುಗಳ ಸಂಖ್ಯೆ ಏರುಗತಿಯಲ್ಲಿತ್ತು ಎಂಬುದನ್ನು ಕಂಡುಕೊಂಡಿದ್ದಾರೆ.
ಆರಡಿ ಮನುಷ್ಯನ ಎರೆಡುಪಟ್ಟು ಎತ್ತರದ ೨೫೦ ಕೆ.ಜಿ. ತೂಗುವ ಪಕ್ಷಿಯನ್ನು ಊಹಿಸಿಕೊಳ್ಳಿ, ಈಗ ಭೂಮಿಯ ಮೇಲೆ ಇರುವ ಅತಿದೊಡ್ಡ ಪಕ್ಷಿಗಳೆಂದರೆ, ಆಸ್ಟ್ರಿಜ್, ಎಮು, ಕಿವಿ ಇತ್ಯಾದಿಗಳು ಇದರಲ್ಲೂ ಆಸ್ಟ್ರಿಜ್ ಪಕ್ಷಿಯ ಗರಿಷ್ಟ ಎತ್ತರ ೯ ಅಡಿಗಳು ಹಾಗೂ ಇವುಗಳು ಮೋವ ಪಕ್ಷಿಗಿಂತ ಭಿನ್ನವಾಗಿವೆ. ೨೦೦೩ರವರೆಗೂ ಮೋವ ಸಂತತಿ ಆಸ್ಟ್ರಿಜ್-ಕಿವಿ ಪ್ರಬೇಧಗಳಿಗೆ ಸೇರಿದ್ದವೆಂದು ಭಾವಿಸಲಾಗಿತ್ತು. ಮೋವದ ಪಳೆಯುಳಿಕೆ ಮಾದರಿಗಳನ್ನು ವಿಸೃತ ಸಂಶೋಧನೆಗೆ ಒಡ್ಡಿದಾಗ ಇವು ದಕ್ಷಿಣ ಅಮೇರಿಕಾದ ಟಿನಾಮಸ್ ಎಂಬ ಪಕ್ಷಿಯ ಪ್ರಭೇದಕ್ಕೆ ಸೇರಿದ್ದು ಎಂದು ತಿಳಿದು ಬಂತು. ಟಿನಾಮಸ್ ಪ್ರಭೇದಗಳ ಪಕ್ಷಿಗಳು ಹಾರಲು ಶಕ್ತವಾದರೆ, ಮೋವದ ೧೧ ಪ್ರಭೇದಗಳಲ್ಲಿ ಯಾವುದಕ್ಕೂ ಹಾರುವುದಕ್ಕೆ ಬೇಕಾದ ರೆಕ್ಕೆಯೇ ಇರಲಿಲ್ಲ. ಅಲ್ಲದೇ, ಇತರೆ ಪಕ್ಷಿಗಳಿಗಿದ್ದಂತೆ ಬಾಲವೂ ಇರಲಿಲ್ಲ. ಚಳಿಯಿಂದ ರಕ್ಷಣೆ ಪಡೆಯಲು ಮೈಮೇಲೆ ಒರಟಾದ ಹಾಗೂ ಒತ್ತಾದ ಪುಕ್ಕಗಳು ಮಾತ್ರ ಇದ್ದವು. ಸಂಪೂರ್ಣ ಸಸ್ಯಹಾರಿಗಳಾದ ಈ ಪಕ್ಷಿಗಳು ಅತೀ ನಾರಿನಿಂದ ಕೂಡಿದ ಸಸ್ಯಗಳ ಎಲೆಗಳನ್ನು ತಿನ್ನುತ್ತಿದ್ದವು. ಹಾಗೂ ತಿಂದ ನಾರಿನ ಅಂಶ ಜೀರ್ಣವಾಗಲು ದೊಡ್ಡ-ದೊಡ್ಡ ಕಲ್ಲುಗಳನ್ನು ನುಂಗುತ್ತಿದ್ದವು. ಅದರಲ್ಲೂ ಮೋವ ಸಂತತಿಯಲ್ಲಿ ಹೆಣ್ಣು ಪಕ್ಷಿಯದ್ದೆ ದೈತ್ಯ ಗಾತ್ರ, ಹೆಣ್ಣು ಪಕ್ಷಿಗಳಿಗೆ ಹೋಲಿಸಿದರೆ, ಗಂಡುಗಳ ಗಾತ್ರ ನಗಣ್ಯವಾಗಿದ್ದವು. ಆಗಿನ ಕಾಲದಲ್ಲಿ ಮೋವ ಗಂಡು ಪಕ್ಷಿಗಳನ್ನು ಬೇರೆಯದೇ ಆದ ಪ್ರಭೇದವೆಂದು ತಿಳಿದಿದ್ದರು.
ಹದಿಮೂರನೇ ಶತಮಾನದ ಅಂತ್ಯದಲ್ಲಿ ಪಾಲಿನೇಷ್ಯರು ಈ ದ್ವೀಪ ಸಮೂಹಕ್ಕೆ ಆಗಮಿಸಿದ ಬರೀ ನೂರು ವರ್ಷಗಳಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಈ ಅಗಾಧ ಗಾತ್ರದ ಮೋವ ಸಂತತಿಯು ಸಂಪೂರ್ಣವಾಗಿ ನಾಶವಾಯಿತು. ಹಾರಲಾರದ ಈ ಪಕ್ಷಿಯನ್ನು ಬೇಕಾಬಿಟ್ಟಿ ಬೇಟೆಯಾಡಲಾಯಿತು. ಮಾಂಸವನ್ನು ತಿನ್ನಲು ಉಪಯೋಗಿಸಿದರೆ, ಮೂಳೆಗಳಿಂದ ಆಭರಣಗಳನ್ನು ಮತ್ತು ವಿವಿಧ ರೀತಿಯ ಬೇಟೆಯ ಅಸ್ತ್ರಗಳನ್ನು ತಯಾರಿಸಲಾಯಿತು. ಮೋವದ ಎಲುಬಿನಿಂದಲೇ ತಯಾರಿಸಿದ ಬಾಣದಿಂದ ಅವುಗಳನ್ನೇ ಬೇಟೆಯಾಡಲಾಗುತ್ತಿತ್ತು. ಮೀನು ಹಿಡಿಯುವ ಕೊಕ್ಕೆಯನ್ನು ಮಾಡಿದರು, ಮೊಟ್ಟೆಯ ಗಟ್ಟಿಯಾದ ಕವಚವನ್ನು ನೀರು ತುಂಬಿಕೊಂಡು ಹೋಗಲು ಬಳಸಿದರು. ರಾಶಿ-ರಾಶಿ ಗುಡ್ಡೆಗಳ ಮೂಳೆಗಳನ್ನು ನಂತರದಲ್ಲಿ ಗೊಬ್ಬರವಾಗಿ ಉಪಯೋಗಿಸಲಾಯಿತು. ಪ್ರಪಂಚದ ಬೇರೆಲ್ಲೂ ಕಂಡುಬರದ ಮೋವ ಬರೀ ನ್ಯೂಜಿಲೆಂಡ್‌ಗೆ ಮಾತ್ರ ಸೀಮಿತವಾಗಿತ್ತು. ಈ ಬೃಹತ್ ಗಾತ್ರದ ಪಕ್ಷಿಗಳು ಇಲ್ಲಿಗೆ ಹೇಗೆ ಬಂದವು ಎಂಬುದಕ್ಕೆ ಹಲವಾರು ಕಾರಣಗಳನ್ನು ಹಲವರು ನೀಡಿದ್ದಾರೆ. ಆದರೆ, ವಾಸ್ತವಕ್ಕೆ ತೀರ ಹತ್ತಿರವಾದ ಸಿದ್ಧಾಂತವೆಂದರೆ, ೭೦ ಮಿಲಿಯನ್ ವರ್ಷಗಳ ಹಿಂದೆ ಅಂಟಾರ್ಟಿಕದಿಂದ ಒಂದು ಭಾಗ ಬೇರೆಯಾಗಿ ನ್ಯೂಜಿಲೆಂಡ್ ನಿರ್ಮಾಣಗೊಳ್ಳುವಾಗಲೇ ಮೋವ ಸಂತತಿ ಈ ಪ್ರದೇಶಕ್ಕೆ ಆಗಮಿಸಿತ್ತು. ನಮ್ಮ ಅರಣ್ಯದಲ್ಲಿ ಬೇಟೆ ಪ್ರಾಣಿಗಳಾದ ಹುಲಿ-ಸಿಂಹ-ಚಿರತೆಗಳ ಸ್ಥಾನವನ್ನು ಹಾಸ್ತಸ್ ಗಿಡುಗಗಳು ನಿರ್ವಹಿಸಿದರೆ, ಬರೀ ಸಸ್ಯಹಾರಿಯಾದ ಮೋವಗಳು ಜಿಂಕೆ-ಸಾರಂಗಗಳಂತೆ ಬಲಿ ಪ್ರಾಣಿಯಾಗಿದ್ದವು. ಮೋವ ಪಕ್ಷಿಗಳು ಇಷ್ಟು ಬೃಹತ್ತಾಗಿ ಬೆಳೆಯಲು ಕಾರಣವೇನು ಎಂಬುದಕ್ಕೂ ಒಂದು ಸಿದ್ಧಾಂತವನ್ನು ವಿಜ್ಞಾನಿಗಳು ಮುಂದಿಟ್ಟಿದ್ದಾರೆ. ನೈಸರ್ಗಿಕವಾದ ಶತ್ರುಗಳ ಸಂಖ್ಯೆ ಕಡಿಮೆಯಿರುವುದರಿಂದಾಗಿ, ಅವುಗಳಿಗೆ ಬದುಕುವುದು ಕಷ್ಟಕರವಾಗಿರಲಿಲ್ಲ, ಬದುಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿರಲಿಲ್ಲ. ಇರುವ ಒಂದೇ ಒಂದು ನೈಸರ್ಗಿಕ ಶತ್ರುವೆಂದರೆ, ಹಾಸ್ತಸ್ ಗಿಡುಗಗಳು. ಒಂದು ಮೋವ ಪಕ್ಷಿಯ ದೇಹ ಹಾಸ್ತಸ್ ಗಿಡುಗಗಳ ಒಂದು ಕುಟುಂಬಕ್ಕೆ ಇಡೀ ವಾರಕ್ಕೆ ಸಾಕಾಗುವಷ್ಟು ಆಹಾರವನ್ನು ನೀಡುತ್ತಿತ್ತು.
ಅನನ್ಯವಾದ ಮೋವ ಪಕ್ಷಿಯು ಜಗತ್ತಿನ ಅತ್ಯಂತ ಎತ್ತರದ ಪಕ್ಷಿಯಾಗಿದ್ದು, ೧೩ ಅಡಿಗಳವರೆಗೂ ಬೆಳೆಯುತ್ತಿತ್ತು ಎಂಬುದನ್ನು ವಿಜ್ಞಾನಿಗಳು ಪಳೆಯುಳಕೆ ತಂತ್ರಜ್ಞಾನದಿಂದ ಕಂಡು ಹಿಡಿದಿದ್ದಾರೆ. ಈ ಹಕ್ಕಿಗಳಿಗೆ ರೆಕ್ಕೆಗಳೇ ಇರಲಿಲ್ಲ. ಒಂದೊಮ್ಮೆ ರೆಕ್ಕೆಗಳು ಇದ್ದರೂ ಇವುಗಳ ಬೃಹತ್ ದೇಹ ರಚನೆಯಿಂದಾಗಿ ಹಾರಲಾಗುತ್ತಿರಲಿಲ್ಲ. ಈ ಪಕ್ಷಿಗಳ ಪಳೆಯುಳಿಕೆ ಹಿಕ್ಕೆಗಳಿಂದ ಇವುಗಳು ಮುಳ್ಳಿನ ಗಿಡಗಳನ್ನು, ನಾರಿನ ಗಿಡಗಳನ್ನು ಹಾಗೂ ಹುಲ್ಲಿನ ಬೀಜಗಳನ್ನು ತಿನ್ನುತ್ತಿದ್ದವು ಎಂದು ತಿಳಿದುಬಂದಿದೆ. ಇವುಗಳ ಕತ್ತಿನ ಭಾಗವೇ ೩ ಅಡಿಗಳಿಷ್ಟಿದ್ದು, ಶ್ವಾಸನಾಳದಲ್ಲಿರುವ ಉಂಗುರಗಳ ಸಹಾಯದಿಂದ ಇವು ತುತ್ತೂರಿ ಊದಿದಂತೆ ಅತಿ ದೊಡ್ಡ ಶಬ್ಧ ಹೊರಡಿಸುತ್ತಿದ್ದವು. ತಿಂದ ಆಹಾರವನ್ನು ಜೀರ್ಣಗೊಳಿಸಲು ಕಲ್ಲನ್ನು ನುಂಗುತ್ತಿದ್ದವು. ಒಂದೇ ಮೊಟ್ಟೆಯನ್ನಿಡುವ ಈ ಪಕ್ಷಿಗಳು ಮೊಟ್ಟೆ-ಮರಿಗಳಿಗಾಗಿ ಪ್ರತ್ಯೇಕ ಗೂಡುಗಳನ್ನು ನಿರ್ಮಿಸುತ್ತಿರಲಿಲ್ಲ, ನೆಲದಲ್ಲಿರುವ ನೈಸರ್ಗಿಕ ಹೊಂಡಗಳನ್ನೇ ಗೂಡುಗಳನ್ನಾಗಿ ಮಾಡಿಕೊಳ್ಳುತ್ತಿದ್ದವು. ಇವುಗಳ ಈ ಅಭ್ಯಾಸವೂ ಕೂಡ ಇವುಗಳ ಸಂತತಿ ನಿರ್ನಾಮವಾಗಲು ಒಂದು ಕಾರಣ. ಇವುಗಳಿಗೆ ಬಾಲವೂ ಇರಲಿಲ್ಲ. ೨೫೦ ಕಿ.ಲೋ ಗಳ ವರೆಗೂ ತೂಗುತ್ತಿದ್ದ ಇವುಗಳ ಮೈಮೇಲೆ ರೆಕ್ಕೆಗಳಿಗೆ ಬದಲಾಗಿ ಒರಟಾದ ಪುಕ್ಕಗಳು ಇದ್ದವು.
ಕಳೆದ ಒಂದೇ ತಲೆಮಾರಿನಲ್ಲಿ ಈ ಪ್ರಪಂಚದ ಶೇಕಡಾ ೫೨ರಷ್ಟು ವನ್ಯಜೀವಿಗಳು ಕಣ್ಮರೆಯಾಗಿವೆ ಎಂದು ವಿಶ್ವ ವನ್ಯನಿಧಿಯ ತಜ್ಞರು ವರದಿ ಮಾಡಿದ ಈ ಹೊತ್ತಿನಲ್ಲಿ, ಈ ಭೂಮಿಯ ಮೇಲೆ ಅತ್ಯಂತ ತ್ವರಿತವಾಗಿ ನಾಮಾವಶೇಷವಾದ ಸಾಲಿನಲ್ಲಿ ಮೋವ ಸಂತತಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂಬುದು ನಾಗರೀಕ ಪ್ರಪಂಚ ತಲೆ ತಗ್ಗಿಸುವ ದಾರುಣ ದುರಂತವಾಗಿದೆ.
*****
ಪ್ರಿಯ ಅಖಿಲೇಶ್, ಮಾನವನಾಸೆಗೆ ಕೊನೆಯೆಲ್ಲಿ? ಬಹುಶಃ ಮಾನವನ ಅಳಿವಾದ ಮೇಲೆಯೇ ಅದಕ್ಕೆ ಕೊನೆಯೇನೋ! ಒಳ್ಳೆಯ ಲೇಖನ!