ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 63 & 64): ಎಂ. ಜವರಾಜ್

-೬೩-
ದಿನ ಕಳಿತಾ ಊರು ಬಣ್ಗೆಡ್ತಿತ್ತು
ಚೇರ್ಮನ್ ಗಿರಿನು ಮುಗಿತಾ ಇತ್ತು
ಬರವ್ರು ನಿಂತ್ರು ಹೋಗವ್ರು ಹೋದ್ರು
ಮೈನೆರಿದೆ ಇರ ಆ ದೊಡ್ಡವ್ವುನ್ ಮೊಮ್ಮೆಣ್ಣು
ಮದ್ವ ಆಗಿ ಗಂಡುನ್ ಮನ ಸೇರ್ತು
ಆದ್ರ ಆ ಆಳ್ ಮಾತ್ರ ಹಂಗೆ ನಗ್ತಾ ನಗ್ತಾ
ಈ ಅಯ್ನೋರ್ ತಿಕುದ್ ಸಂದಿ ಬುಟ್ಟದು ಕಾಣಿ
ಈಗಿರ ಅರ್ಧ ತ್ವಾಟ ಅವ್ನೆಸ್ರುಗ ಖಾತನು ಆಗಿತ್ತು
ಅನ್ನದು ಗುಟ್ಟಾಗಿ ಉಳಿಯದೇನ್ ಬಂತು…


ರಾತ್ರ ಸ್ಯಾನೆ ಹೊತ್ತಾಗಿತ್ತು
ಆ ಆಳು ಅದ್ಯಾತಿಕ್ಯಾ ಏನಾ
ಈ ಅಯ್ನೋರ್ ಜಗುಲಿ ಮ್ಯಾಲ
ಹೆಡ್ತಿನ ಕುಂಡ್ಸಿ ತ್ವಾಟ್ಕ ಹೋದಂಗಿತ್ತು
ಆ ಆಳ್ನ ಹೆಡ್ತಿ ಅಯ್ನೊರ್ ಮಾತ್ಗ ನಗ್ತ
ಸೆರುಗು ಜಾರಿ ಬಿದ್ರು ಗ್ಯಾನ ಮಡ್ಗಿರ್ನಿಲ್ಲ

‘ಮಗಿ ಬಾಣ್ತನ ಅಯ್ನೋರ’ ಅನ್ತ
ಆ ಆಳು ತಲ ಕೆರಿತಾ ಮಾತಾಡಿದ್ದು ನೆಪ್ಪು
ಅದ್ಕು ಮೊದುಲ್ಗ
ಈ ಅಯ್ನೋರು ಅವತ್ತೊಂಜಿನ
ಕಾಗ್ಜ ಪತ್ರುಕ್ಕ ರುಜು ಹಾಕಿದ್ದು ನೆಪ್ಪದ
ಆ ಆಳು ಆ ರುಜು ಪತ್ರನ ಹಿಡ್ಕಂಡು ನಕ್ಕಿದ್ದ

ಹುಚ್ಚೊಳ ಬಂದು ಹಳ ಕೇರಿ ಬುಟ್ಟು
ಹೊಸ ಕೇರಿಗ ಜನ ಗುಳೆದ್ದಿದ್ರು
ಈ ಅಯ್ನೋರು ಒಬ್ರೆ,
ಈ ಹಳ ಊರ ಬುಟ್ಟು ಹೋಗ್ದೆ
ಗೂಟ ಹೊಡ್ಕಂಡು ವಾಸಿದ್ರು

ಈ ಅಯ್ನೋರು ಲೈಟ ಕೆಡ್ಸಿ
ಬೀಡಿ ಹಸ್ಸಿ ಬಾಯ್ಗ ಇಟ್ಗಂಡು
ಕತ್ಲೊಳ್ಗ ಎಳಿಯ ದಮ್ಮಿಗೆ
ಬೀಡಿ ಮೊನೆಲಿ ಕಿಡಿ ಬೆಳುಗ್ತ
ಆ ಬೆಳ್ಗಿದ್ ಬೆಳುಕ್ಲಿ ಆ ಆಳ್ನ ಹೆಡ್ತಿ
ಎದ್ದು ಒಳ ಹೋದ್ದು ಮಂಕಾಗಿ ಕಾಣ್ತು


ಆ ಮದ್ಯಾನ ಎನ್ತ ಬಿಸ್ಲು ಅಂದ್ರ ರಣ್ಬಿಸ್ಲು
ಕಲ್ಬುಟ್ರ ಓಣಿ ಬೀಸ ಗಾಳಿ ಗುಂಯ್ಗುಟ್ಟ ಸದ್ಗ
ಸಲಿರೆಲ್ಲ ಬೆವ್ರಿ ಒದ್ರುದಂಗ ಆಗದು
ಇನ್ತ ಹೊತ್ಲಿ ಇನ್ತ ಓಣಿಲಿ ಈ ಅಯ್ನೋರು
ಬೀಡಿಮ್ಯಾಲ ಬೀಡಿ ಹಚ್ತ ಸೇದ್ತ ಇದ್ರು
ಆಗ ಅಂವ ಒಬ್ನೆ ಬಂದು ನೆಳ್ಗ ತಿಕ ಕೊಟ್ಟು
‘ಅಯ್ನೋರಾ ಏನಾರ ಮಾಡಕ ಆದ್ದ..’ ಅಂದ
ಈ ಅಯ್ನೋರು ದಮ್ಮೆಳಿತಾ,
‘ನಿಂಗ ಏನಾದ್ದು..
ಆ ಮಾತ ಬುಡು
ಒಂದ್ ಕಂಟ್ಕ ಕಳಿತು
ಸುತ್ಮುತ್ತ ಊರೂ ನೆಮ್ದಿ ಕಾಣ್ತ ಅದ
ಈ ಪುಂಡು ಉರಿತಾ ಮೆರಿತಾ ಇದ್ದು
ಈಗ ಮೆರಿಯಕಾದ್ದ…’ ಅನ್ತ ಸುಮ್ನಾದ್ರು.
ಅಂವ,
‘ನಿಮ್ ವರಸ ನೋಡ್ತಿದ್ರ ಮುಂದುಕ್ಕು
ಚೇರ್ಮನ್ ಗಿರಿಗ ಕಣ್ಣಾಕ ತರ ಅದ ಅನ್ಸುತ್ತ’
ಅನ್ತ ಅಂದ.
‘ಹಂಗೇನಾರ ಆದ್ರ ನಿಮ್ಮ ಬುಟ್ಟು ಆಗಗಿದ್ದಾ’
‘ಅನ್ತು ಈ ಮಾತ್ಲೆ ಗೊತ್ತಾಯ್ತ ಅದ
ಅದು ನಿಮ್ಮೊಳ್ಗದ ಅನ್ತ’

ಈ ಅಯ್ನೋರೂ
ಆ ಅಂವ್ನೂ
ಹಿಂಗೆ ಮಾತಾಡ್ತ
ಆ ಅಂವ ತಿರುಗಿ ನೋಡ್ದಂಗೆ
ಈ ಅಯ್ನೋರು ಮೀಸೆ ಒಳಗೆ ನಕ್ತಂಗಿ ಕಾಣ್ತು

ಏನಾ ಇವ್ರು ಮಾತಾಡ್ಕಂಡದು…
ಏನಾ ಇವ್ರು ಒಳೊಳ್ಗೆ ನಗ್ತ ಕಿಸಿತ ಇರದು…

ಅಯ್ಯೊ ನನ್ ಒಡಿಯಾ ಕಾಲಯ್ಯೊ
ನಿನ್ನು ನಿನ್ ಚೆಲ್ವಿನು
ಬಿಂಕಿ ಹಾಕಿ ಸುಟ್ರಲ್ಲೊ..
ಆ ಸುಡೊ ಬೆಂಕಿಯಿಂದ
ಇರದೊಂದ್ ನಿನ್ ರಕ್ತುದ್ ಕುಡಿ
ಪಾರಾಗಿತ್ತಲ್ಲೊ..
ಆ ಪಾರಾಗಿದ್ ನಿನ್ ಆ ಕುಡಿ
ನಿನ್ನ ಕಳಕಂಡು ಕೊತಕೊತ ಕುದಿತಿತ್ತಲ್ಲೊ..
ಕುದಿತಾ ಕುದಿತಾ ಸುತ್ಲು ಕಣ್ಣಿಡ್ತಾ
ಕತ್ಲೊಳ್ಗೇ ಒಂದ್ಸಾಮ್ರಾಜ್ಯ ಕಟ್ತಿತ್ತಲ್ಲೊ
ಅನ್ತ ಸಾಮ್ರಾಜ್ಯನ ಕಂಡ ಕಣ್ಗಳು
ಕರುಬುತ್ತ ಬೆವುರುತ್ತ ಆ ನಿನ್ ಹೈದುನ್ನ
ಆ ಒಂದ್ಸಾಮ್ರಾಜ್ಯದೊಳ್ಗೇ
ಉಫ್ ಅನ್ತ ಉರುಬಿದರಲ್ಲೊ..

ಅಯ್ಯೋ ನನ ಕಾಲಯ್ಯೋ
ನನ್ನ ಕೂದು ಕ್ವರುದು ಹದ ಮಾಡ್ದೆಲ್ಲೊ
ತಿದ್ದಿ ಗುದ್ದಿ ತೀಡಿ ರೂಪುಸ್ದೆಲ್ಲೊ
ಆ ಸಂತ ಸಾಮ್ರಾಜ್ಯದೊಳಗ ಮೀಸ ತಿರಿತಿರ
ಈ ಅಯ್ನೋರ್ ಪಾದ್ಕ ಮೆಟ್ಸಿ
ಈ ಭೂಮ್ತಾಯಿ ಸುತ್ತತರ ಮಾಡ್ದೆಲ್ಲೊ…
ನನ್ ಹುಟ್ಗ ಕಾರುಣ್ವಾದ ಕಾಲಯ್ಯೋ
ನಿನ್ನ ಕಳಕಂಡು ನಿನ್ ವಂಶುವ ಕಳಕಂಡು
ನಾ ಅನಾತುನ್ತರ ಬೇವರ್ಸಿ ಆಗಿ
ಊರು ಕಾಡು ಅಲಿತ
ಈ ಕಣ್ಣಿಂದ ಇನ್ನೇನ್ ನೋಡ್ಲಯ್ಯೋ..
ಇಸ್ಟುಕ್ಕು ನೀನೇನ್ ಪಾಪ ಮಾಡಿದ್ಯೋ,
ಸವ್ವಿ..
ಸವ್ವಿ..
ಆ ಸವ್ವ್ಯಾದ್ರು ಎಲ್ಲ್ಯೋ..
ಆ ನಿನ ಕಂದ ಬೆಗಟಾನ್ ಬೆಳ್ಗಿದ್ದ
ಆ ಸವ್ವಿ ಎಲ್ಲ್ಯೋ..
ಆ ಪಂಚ ಅಂಚು ಹೇಳುದ್ ಕತ್ಗು
ಆಗ್ಗಿಂದ ಈಗ್ಗಂಟು
ಈ ಅಯ್ನೋರು ಹಾಕ್ತಿರ ಪಟ್ಗು
ಹೊಂದಾವಣಿ ಕಾಣ್ತದಲ್ಲೊ…

ಬಿಸ್ಲು ಇಳಿತಾ ಇತ್ತು
ಅಂವ ಮ್ಯಾಕ್ಕೆದ್ದ
ಈ ಅಯ್ನೋರು ಮ್ಯಾಕ್ಕೆದ್ರು
ಮೈಕೈ ನಿಗುರ್ಸಿ ನಟ್ಕಿ ಮುರಿತಾ
ಅಂವ ಅತ್ತಗ ಈ ಅಯ್ನೋರು ಇತ್ತಗ
ಪಾದ ಬೆಳ್ಸುವಾಗ
ಆ ಆಳು ರಮ್ಮರುಮ್ನ
ಕಾಲೆಸ್ಗ ಬರದು ಕಾಣ್ತಲ್ಲೊ..


೬೪-
ಗವ್ವನ್ನ ಕತ್ಲಲಿ ಜನ ಸೇರಿದ್ರು
ಎಂದ್ಗೂ ಇಲ್ದೆದ್ ಜನ ಇಂದ್ಯಾಕ ಅನ್ಕಂಡಿ
ಮನ ಲೈಟ ಹಾಕವ್ರಿಲ್ದೆ ಈಚ ಗವ್ವನ್ನದು
ಕಡ್ಡಿಗೀರಿ ಬೀಡಿ ಸೇದವ್ರ ಬೆಳುಕ್ಲಿ ಬೀದಿ ಕಾಣದು
ಕಸಪಾಡ್ಗ ಕಸ ಬಿದ್ದಿತ್ತು

ಈ ಅಯ್ನೋರು ಈಚೀಚ್ಗ ನನ್ನ ಮೆಟ್ಟದ ಬುಟ್ಟಿದ್ರು

ನನ್ ಮೈ ಕೈ ಕಿತ್ತು ಜೋತ್ಗಂಡು
ಕಿಬ್ರೆಲ್ಲ ನೋಯ್ತ ಸಾಕ್ಮಾಡ್ತಿತ್ತು
ಜೊತ್ಗ ಆ ಬೀದಿ ನಾಯ್ಗಳು ಗಳ್ಳಾಕಂಡು
ನಾ ಇರ ಜಗುಲಿ ಕಡನೆ ಬಂದು
ನನ್ ಮ್ಯಾಲೆ ಮನಿಕಂಡು ಒದ್ದಾಡ್ಕಂಡು
ಹೇತು ಉಚ್ಚ ಉಯ್ಯವು
ಒಂದೊಂದ್ಸಲ ಅವವೆ ಕಚ್ಚಾಡ್ತ
ಆ ಕ್ಯಾಣ್ಕ ನನ್ನು ಕಚ್ಗಂಡು ಈಜಾಡವು
ಈ ಕ್ವಾಟ್ಲ ನಂಗ ತಡಿಯಕಾಗ್ದೆ ಅಳದ್ಬುಟ್ರ
ನಾ ಏನ್ಮಾಡಗಿದ್ದದು..
ಆ ಆಳು ಆ ಆಳ್ನೆಡ್ತಿ ಯಂದ್ಗ್ಯಾ ಒಂದ್ಜಿನ ಬರರು
ಕಸಗಿಸ ಕುಡ್ಸಿ ರಂಗೋಲ ಹಾಕಿ ಹೋಗರು
ಆ ರಂಗೋಲ ಹಾಕಿರ ಜಿನ
ಈ ಅಯ್ನೋರು ಬರೋರು ನೋಡೋರು
ಈ ಅಯ್ನೋರು ಯಾವತ್ತು ಬತ್ತರ
ಯಾವತ್ತು ಬರಲ್ಲ ಅನ್ತ ತಿಳ್ಕಂಡೇ
ಆ ಆಳುವ ಆ ಆಳ್ನೆಡ್ತುವ
ಬಂದು ಹೋಗರು ಅನ್ಸುತ್ತ

ಈತರ ಬೆಳುಗ್ಗ ಬೆಳುಕ್ಲಿ
ರಾತ್ರುನಾಗ ಕತ್ಲಲಿ ಜಿನ ಕಳಿತಿದ್ದಿ
ಆದ್ರ ಈತರ ಜನ ಈಚ್ಗ ಸೇರ್ದಂಗ ಕಾಣಿ
‘ಬಂದ್ರು ಕಣ ಅಯ್ನೋರು’ ಅನ್ತ
ಕತ್ಲೊಳ್ಗ ಜನ ಮಾತಾಡ್ಕಂಡ್ರು
ನಂಗ ಇದೇನ ಇದ್ಯಾಕ ಅನ್ನಂಗಾಗಿ
ಎತ್ತುನ್ ಗಾಡಿಲಿ ಬಂದು ನಿಂತಂಗಾಗಿ
ಈ ಅಯ್ನೋರು ಕಾಲೆಳಿತ ಮುಕ್ಕರಿತಾ
ಆ ಎತ್ತುನ್ ಗಾಡಿ ಹಿಂಬದಿಲಿ ಇಣುಕುದ್ರು
ಜನ ತಳ್ಳಾಡ್ಕಂಡು ಇಳಿಸ್ಕಂಡ್ರು.

ಆ ಆಳುವ ಆ ಆಳ್ನೆಡ್ತುವ
ಮನ ಬೀಗ ತಗ್ದು ಲೈಟಾಕುದ್ಮೇಲ
ಬೇಳ್ಕು ಬೆಳುಗ್ತ ಬಂದವ್ರ್ ಮೊಖ ಕಾಣ್ತು
‘ಇದ್ಯಾಕ ಎಲ್ಲ ಇಂಗ ಸೇರಿದರಿ..
ನಂಗೇನಾಗಿದ್ದು ಅನ್ತ ಈತರ ಸೇರಿದರಿ..
ಸಂತ ಮುಗಿಸ್ಕಂಡು ರೋಡ್ಗ ಬಂದಿ
ಅತ್ತಿಂದ ಅಡ್ಲಾಗಿ
ಬಡಬಡಾಂತ ಬಡ್ಗುಟ್ಕಂಡು
ಬುಲಟ್ನವ ಬಂದ ನೋಡೂ..
ಬ್ರೇಕ ಹಿಡಿದೆದ್ ರೀತಿಗ ಗುದ್ಕಂಡು ಕಡ್ದೋದ್ನ
ನಾನು ಬಾಯ್ಬಡ್ದು ಬಿದ್ದದ್ದೆ ನೆಪ್ಪು
ಕಣ್ಬುಟ್ಟು ನೋಡ್ದಾಗ
ಆಸ್ಪತ್ರ ಮನಲಿ ಮನ್ಗಿದ್ದು ಗೊತ್ತಾದ್ದು..
ಮೂಳ ಮುರುದ್ದ ವಾರ ವಪ್ಪತ್ತು ಇರಿ ಅಂದ್ರು
ನಾ ಇರಕ ಗಿರಕ ಆಗಲ್ಲ ಅನ್ತ ಬಂದಿ’ ಅನ್ತ
ಈ ಅಯ್ನೋರು ಒಂದೇ ಸಮ್ಕ ಹೇಳ್ತ ಹೋದ್ರು.

ಈ ಅಯ್ನೋರು ಕಂಬ ಒರಿಕಂಡು
ಅತ್ತಗು ಇತ್ತಗು ಮುಲ್ಕಾಡ್ತ ಇದ್ರು
ನಿಂತಿದ್ ಕುಂತಿದ್ ಜನ
ಮೈತಡ್ವಿ ಮಾತಾಡ್ಸಿ ಹುಸಾರಾಗಿ ಅನ್ತ
ಒಬ್ಬೊಬ್ಬರಾಗಿ ಕಾಲ್ಕಿತ್ಮೇಲ ಉಳುದ್ದು
ಆ ಆಳು ಆ ಆಳ್ನೆಡ್ತಿ.

ಈ ಅಯ್ನೋರು ಆ ಆಳ್ನ ಕರುದು
‘ಮೈಬಾರ ಆಗದ ಕಣ
ಕಾಲು ಪಣ್ಗುಟ್ತ ನೋಯ್ತದ ಕಣ
ಕಣ್ಲಿ ನಿದ್ದ ತುಂಬ್ಕಂಡದ ಕಣ
ಆದ್ರ ನೋವ್ಗ ನಿದ್ದನು ಬಂದದ ಏನ ಕಣ’
ಅನ್ತ ಸನ್ನ ಮಾಡುದ್ರು
ಆ ಆಳು ಈ ಅಯ್ನೋರ್ ಸನ್ಗ ಕಾಲ್ಕಿತ್ತು ಓಡ್ದ
ಆ ಆಳ್ನೆಡ್ತಿ ಈ ಅಯ್ನೋರ್ ಹೆಗುಲ್ಗ ಹೆಗಲಾಗಿ
ಕಾಲೆಳ್ಕಂಡು ಒಳಕ್ಕೋದ್ದು ಆಯ್ತು.

ಅಲಲೇ ಇದೇನ ಇದು….
ದೂರ ಅಂದ್ರ ದೂರನೆ
ನಾಯ್ಗಳಂತು ಗಳ್ಳಾಕದು ಕೇಳ್ತಿತ್ತು

ಆ ಆಳು ಆಗೋದಂವ ಈಗ್ಬಂದ್ನ
ಕಂಕುಳ್ಳಿ ಎರುಡು ಹೆಂಡದ ಬಾಟ್ಲಿ ಇದ್ದು
ಒಳಗ ಆ ಆಳ್ನೆಡ್ತಿ ನಗಾಡದು ಕೇಳ್ತಿತ್ತು
ಆ ಆಳು ಬಾಟ್ಲಿ ಹಿಡ್ದು ಬಾಗುಲ್ ತಗ್ದು
ಒಳಕ್ಕೋದ್ದೇ ತಡ ಲೈಟು ಆಪಾಯ್ತು


ಸೂರ್ಯ ಮೂಡಿ ಗಂಟ್ಯಾಗಿತ್ತು
ಹಾಕ್ದ ಬಾಗ್ಲು ಹಾಕ್ದಾಗೆ ಇತ್ತು
ಆ ಆಳ್ನೆಡ್ತಿ ಓಡೋಡ್ ಬಂದು
ಕಸ ಗುಡ್ಸಿ ರಂಗೋಲ ಹಾಕಿ ಬಾಗ್ಲ ತಳ್ಳಕು
ಈ ಅಯ್ನೋರು ಕೆಮ್ತ ಕ್ಯಾಕುರುಸ್ತ
ಕುಂಟ್ತ ನಡುಗ್ತ ಈಚ್ಗ ಬರಕು ಸಮಾಯ್ತು.
ಆ ಆಳ್ನೆಡ್ತಿ
ಈ ಅಯ್ನೋರ ಕೈಹಿಡ್ದು ಮೆಲ್ಗ ಕುಂಡುಸ್ದ
ಆಗ ಈ ಅಯ್ನೋರು ಅವುಳ್ನೆ ನೋಡ್ತ
‘ರಾತ್ರಯೆಲ್ಲ ಜುಗುಡ್ತ ಅಂದ್ರ ಜುಗುಡ್ತ
ಪಣಗುಡ್ತಿತ್ತು ಈಗ್ಲೂ ಜುಗುಡ್ತ ಜಾಸ್ತಿನೆ ಆಗದ’
ಅನ್ತ ಗೊಣಗುಡ್ತ ಇದ್ರ ಅವುಳು
‘ಅಯ್ನೋರ ಇನ್ನು ಜುಲ್ಮ ಜಾಸ್ತಿ ಆಯುತ್ತ
ಒನ್ತಂವ ಮನಿಕಳಿ ಅದೆ ವಾಸಿ ಆಯ್ತುದ’ ಅಂದ್ಲು
‘ಅದ್ಕೆಲ್ಲ ಎದರಾಗಿದ್ರ ಈ ಜೀವ ಬದ್ಕಿರ್ತಿತ್ತಾ…
ಮನಿಕಂಡ್ರ ಕೆಲ್ಸ ಕಾರಿ ಆದವ..’ ಅನ್ತ ಅಂದ್ರು.
ಅದ್ಕ ಆ ಆಳ್ನೆಡ್ತಿ ಮಾತ್ಗ ಮಾತು ಸೇರುಸ್ತ,
‘ಕರ್ಮ ಯಾರುನ್ ಬುಟ್ಟುದು ಅಯ್ನೋರಾ..
ಯಾರುನ್ನೂ ಬುಡದಿಲ್ಲ ಈ ಕರ್ಮ ಅನ್ನದು
ಕರ್ಮ ಕರ್ಮನೆ ಹೆಂಗಿದ್ ಕಾಲು ಹೆಂಗದ..’ ಅನ್ತ
ಈ ಅಯ್ನೋರ್ ಕಾಲ್ನೆ ನೋಡ್ತ,
‘ಜೋಡೊಲಿದ್ನಲ್ಲ ಅಂವ
ಅದೆ ಕಾಲ್ನುಂವ ಕಾಲ್ನೆಡ್ತುವ
ಅವ್ನೈದ್ನುವ ಅವ್ನೆಣ್ಣುವ
ಕಣ್ಮುಂದೆ ಏನಾದ್ರು ಅದೂ ಕರ್ಮನೆ ಅಯ್ನೋರಾ..
ಅಯ್ನೋರಾ ಅವ್ನೆಣ್ಣು ಸವ್ವಿ ನೋಡಿದ್ರೆಲ್ಲ
ಅದು ಚದುಳ್ಳಿ ಹೆಣ್ಣು
ಅದರ ಮೊಖ ಮುಸುಡಿ ನೋಡಿದ್ರ್ಯ..
ಆ ಕಾಲುನ್ಗ ಹುಟ್ಟಿರದು ಅನ್ನುಸ್ತಿತ್ತಾ..’
ಅನ್ತ ಆ ಆಳ್ನೆಡ್ತಿ ಬಿದ್ದಿರ ಕಸ್ಬಳ್ ತಗ್ದು
ಮೋರಿಗ ಮೊಖ ಮಾಡಿ
ನೀರ ಬುಟ್ಟು ಎಸ್ದೇಟ್ಗೆ
ನನ್ಮೇಲ ರಪ್ಪಂತ ಬಿತ್ತು
ಈ ಅಯ್ನೋರು ಅವುಳುನ್ನೆ ನೋಡ್ತ
‘ಅದೆಲ್ಲ ಈಗ್ಯಾಕ..’ ಅನ್ತ
ಮೊಖ ಸಪ್ಪ ಮಾಡ್ಕಂಡು
ಮ್ಯಾಕ್ಕೇಳಕ ಅನ್ತ ಜಗುಲಿ ಕಂಬ ಹಿಡ್ಕಂಡು
ಹಂಗೆ ಜಗುಲಿ ಅಂಚ್ಗ ಕೈಯ ಜಾರುಸ್ತ
ಕಾಲ ಅಗುಲುಸ್ಕಂಡು ಏಳ್ತ ಏಳ್ತ ಏಳ್ತನೆ
ಅದೇನಾಯ್ತ ಏನಾ ಕಾಣಿ
ಬೀದಿಲಿ ನಿಂತಿರ ನಾಯಿ ಬೊವ್ವ್..ಅನ್ತ
ಬೊಗಳಾ ಸದ್ದು ಕೇಳ್ತಿದ್ದಂಗೆ
ಈ ಅಯ್ನೋರು ಆ ಸದ್ಗ್ಯಾ ಏನಾ ಕಾಣಿ
ಮೊಕಣ್ಣಾಗಿ ಮೋರಿ ಒಳಕ ಬಿದ್ರೂ ನೋಡು..
ಆ ಬೊಗುಳ್ತಿದ್ ನಾಯಿ ದಿದುಗುಟ್ಕ ಓಡ್ತು.
ಇತ್ತಗ ದುಬುಕ್ಕಂತ ಬಿದ್ದ ಅಯ್ನೋರ ನೋಡ್ದ
ಆ ಆಳ್ನೆಡ್ತಿ ಸೀರನ ಮ್ಯಾಕ್ಕೆತ್ಕಂಡು
‘ಅಯ್ನೋರಾ ಅಯ್ನೋರಾ ಇದ್ಯಾಕ ಅಯ್ನೋರಾ’
ಅನ್ತ ಕೈಹಿಡ್ದು ಮುಕ್ಕರಿತಾ
ಬದಿ ಮೆರ್ಕಂಡಿದ್ ಅಯ್ನೋರಾ ಎಳಿತಾ
ಹಂಗ ಎಳ್ದ ರಬ್ಸುಕ್ಕ
ಈ ಅಯ್ನೋರು ಮ್ಯಾಕ್ಕ ಬಂದು
ಆ ಆಳ್ನೆಡ್ತಿ ತೊಡ ಮ್ಯಾಲೆ
ತಲ ಕೊಟ್ಕಂಡು ಮನ್ಗಿರಗ
ಆ ಆಳೂ ಓಡೋಡ್ ಬತ್ತ ಇರದು ಕಾಣ್ತಿತ್ತು..

ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x