ರಾಷ್ಟ್ರೀಯ ‘ ಹುತಾತ್ಮರ ದಿನ ‘: ಡಾ.ಅವರೆಕಾಡು ವಿಜಯ ಕುಮಾರ್

ಜನವರಿ 30 ಈ ವಿಶೇಷ ದಿನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ದೇಶದ ಬೆಳವಣಿಗೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ಹೋರಾಡಿ ಮಡಿದ ರಾಷ್ಟ್ರೀಯ ವೀರ ನಾಯಕರುಗಳನ್ನು ನೆನೆಯುವ ದಿನ. ಭಾರತವು ಸೇರಿದಂತೆ ಜಗತ್ತಿನ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ರಾಷ್ಟ್ರೀಯ ದಿನವನ್ನು’ ಹುತಾತ್ಮರ ದಿನ’ ಅಥವಾ ‘ಸರ್ವೋದಯ ದಿನ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.ಭಾರತ ಸರ್ಕಾರದ ಆದೇಶದನ್ವಯ ದೇಶದಾದ್ಯಂತ ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಹುತಾತ್ಮರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಾಗಿ ಪ್ರಾಣತೆತ್ತವರ ತ್ಯಾಗಕ್ಕೆ ಎಂದೆಂದಿಗೂ ಬೆಲೆಕಟ್ಟಲಾಗದು. ಈ ನಾಯಕರು ರಾಷ್ಟ್ರದ ಹೆಮ್ಮೆ. ನಾವು ಅವರಿಗೆ ಎಷ್ಟು ಗೌರವ ಸಲ್ಲಿಸಿದರು ಅತಿ ಕಡಿಮೆ ಎಂದೆನಿಸುತ್ತದೆ. ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಮ್ಮನ್ನಗಲಿದ ದಿನ. ಸಾಂಕೇತಿಕವಾಗಿ ಅವರ ಸ್ಮರಣೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಸ್ವಾತಂತ್ರ್ಯಪೂರ್ವದಲ್ಲಿ ಅಲ್ಲದೆ ನಂತರವೂ ಸಾವಿರಾರು ಯೋಧರು ನಮ್ಮ ದೇಶದ ರಕ್ಷಣೆಗಾಗಿ ಬಲಿದಾನ ಮಾಡಿದ್ದಾರೆ. ಇವರನ್ನು ಸ್ಮರಿಸಲು ಕೂಡ ಒಂದು ವಿಶೇಷ ದಿನವಿದೆ. ಪ್ರಸ್ತುತ ಜನವರಿ 30 ಅಂತಹ ಸ್ವಾತಂತ್ರ್ಯ ವೀರ ಹೋರಾಟಗಾರರಿಗೆ ಮತ್ತು ರಾಷ್ಟ್ರಕ್ಕಾಗಿ ಹುತಾತ್ಮರಾದ ಯೋಧರಿಗೆ ಗೌರವ ಸೂಚಿಸುವ ದಿನ.

ದೇಶಕ್ಕಾಗಿ ಹುತಾತ್ಮರಾದ ನಾಯಕರುಗಳ ಸಮರ್ಪಣಾ ಭಾವ, ಧೈರ್ಯ, ಸಾಹಸಗಳು ಇತಿಹಾಸ ಪುಟಗಳಲ್ಲಿ ದಾಖಲೆಯಾಗಿದೆ. ಅಹಿಂಸೆ ಮತ್ತು ಶಾಂತಿ ಎಂಬ ಸಾಮಾಜಿಕ ಅಸ್ತ್ರದಿಂದ ಭಾರತಕ್ಕೆ ಸ್ವಾತಂತ್ರ್ಯ. ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಹಾತ್ಮ ಗಾಂಧೀಜಿ ಅಕ್ಟೋಬರ್ 02, 1869 ರಂದು ಗುಜರಾತಿನ ಪೋರ್ ಬಂದರನಲ್ಲಿ ಜನಿಸಿದರು.ತಂದೆ ಕರಮಚಂದ ಗಾಂಧಿ, ತಾಯಿ ಪುತಲೀಬಾಯಿ. ಇವರ ಪೂರ್ತಿ ಹೆಸರು ಮೋಹನದಾಸ್ ಕರಮಚಂದ ಗಾಂಧಿ.ಆದರೆ ಸತ್ಯಕ್ಕಾಗಿ ತನ್ನ ಜೀವನವನ್ನೇ ಪ್ರಯೋಗಕ್ಕೆ ಒಳ ಪಡಿಸಿದ ಇವರು ‘ರಾಷ್ಟ್ರಪಿತ’ ಎಂದು ಕರೆಸಿಕೊಂಡರು. ತನ್ನ ಬದುಕೇ ತನ್ನ ಸಂದೇಶ ಎಂಬ ಅವರ ಆತ್ಮವಿಶ್ವಾಸದ ನುಡಿಗಳು ಅವರನ್ನು ಬಲು ಎತ್ತರಕ್ಕೆ ಕೊಂಡೊಯ್ದವು. ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದರು. ಬಾಪೂಜಿ ಅವರನ್ನು ಪ್ರಥಮ ಬಾರಿಗೆ ನೇತಾಜಿ ಸುಭಾಷ್ ಚಂದ್ರ ಬೋಸರು ‘ರಾಷ್ಟ್ರಪಿತ’ ಎಂದು ಸಂಬೋಧಿಸಿದರು.ನಂತರ 02 ಅಕ್ಟೋಬರ್ ಜನ್ಮದಿನದಂದು ಅಧಿಕೃತವಾಗಿ ‘ ರಾಷ್ಟ್ರಪಿತ’ ಎಂಬ ನಾಮಾಂಕಿತದಿಂದ ಗೌರವಿಸಲಾಯಿತು.

ಹೋರಾಟದ ಜೊತೆಗೆ ‘ರಾಷ್ಟ್ರಪಿತ’ರು ಒಬ್ಬರು ಸಮೃದ್ಧ ಬರಹಗಾರರಾಗಿದ್ದರು.ಅವರ ಬರಹಗಳು, ಭಾಷಣಗಳು, ಜೀವನ ಚರಿತ್ರೆ ನವಭಾರತದ ನಿರ್ಮಾಣಕ್ಕೆ ಇಂದಿಗೂ ದಾರಿ ದೀಪವಾಗಿವೆ.ಇವರ ನಾಗರಿಕ ಹಕ್ಕುಗಳಿಗಾಗಿ ಹೋರಾಟ ಇತಿಹಾಸವನ್ನೇ ಸೃಷ್ಟಿ ಮಾಡಿತ್ತು.1892 – 1914 ದಕ್ಷಿಣ ಆಫ್ರಿಕದಲ್ಲಿ ನಾಗರಿಕ ಹಕ್ಕುಗಳ ಆಂದೋಲನ,1906 ಜುಲು ಸಮರದಲ್ಲಿ ಹೋರಾಟ,1916 -1945 ಭಾರತದ ಸ್ವಾತಂತ್ರ್ಯಕ್ಕಾಗಿ ಅಸಹಕಾರ ಆಂದೋಲನ, ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ, ಇತ್ಯಾದಿ,ಭಾರತದ ಸ್ವಾತಂತ್ರ್ಯದ ಹೋರಾಟ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಮೈಲಿಗಲ್ಲುಗಳಾಗಿವೆ.ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ ಮಾರ್ಗಗಳು ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಪ್ರಮುಖ ಪಾತ್ರವಹಿಸಿದವು.ಇವರ ಸರಳತೆ,ಸಸ್ಯಾಹಾರ ತತ್ವ, ಸತ್ಯಾನ್ವೇಷಣೆ, ಇತ್ಯಾದಿ ಸಾಮಾಜಿಕ ಕಳಕಳಿಯ ಜವಾಬ್ದಾರಿಗಳು ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಪೂರಕವಾದವು.

ಜನವರಿ 30, 1948 ರಂದು ದಿಲ್ಲಿಯ ಬಿರ್ಲಾ ಹೌಸನಲ್ಲಿ ಪ್ರಾರ್ಥನೆಗೆಂದು ತೆರಳಿದ ಗಾಂಧೀಜಿ ಪ್ರಾರ್ಥನೆ ಮಂದಿರದಿಂದ ಹೊರ ಬಂದ ತಕ್ಷಣ ಅಂದಾಜು ಸಂಜೆ 5: 40ರ ಸಮಯದಲ್ಲಿ ನಾಥುರಾಮ್ ಗೂಡ್ಸೆ ಗಾಂಧೀಜಿಯವರನ್ನು ಗುಂಡುಹಾರಿಸಿ ಹತ್ಯೆಗೈದಿದ್ದ. ಈ ಸುದ್ದಿ ಆಲ್ ಇಂಡಿಯಾ ರೇಡಿಯೋ ಮೂಲಕ ಏಕಕಾಲದಲ್ಲಿ ಪ್ರಸಾರವಾಯಿತು. ಈ ಸುದ್ದಿ ಕಾಡ್ಗಿಚ್ಚಿನಂತೆ ದೇಶ ವ್ಯಾಪಿಸಿತು. ಕೋಟ್ಯಂತರ ಭಾರತೀಯರ ಮನದಲ್ಲಿ ಮನೆ ಮಾಡಿದ ರಾಷ್ಟ್ರನಾಯಕರ ಸಾವು ದೇಶಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ತನ್ನ 78 ನೇ ವಯಸ್ಸಿನಲ್ಲಿ ದೇಶಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸತ್ಯಶೋಧಕ ಗಾಂಧೀಜಿ ಭಾರತದ ಇತಿಹಾಸದ ಪುಟಗಳಲ್ಲಿ ಸದಾ ಅಜರಾಮರರಾಗಿದ್ದಾರೆ. ಇಂತಹ ಅಪ್ರತಿಮ ಸಾಧಕರನ್ನು ಪಡೆದ ನಮ್ಮ ದೇಶ ಹಾಗೂ ನಾವು ಪುಣ್ಯವಂತರು.ಇಂತಹ ಇತಿಹಾಸ ಪುರುಷರ ಹುತಾತ್ಮ ದಿನವನ್ನು ಆಚರಿಸುವುದು ಮೂಲಕ ಇವರ ಮೌಲ್ಯಗಳು, ಆಲೋಚನೆಗಳು,ಆದರ್ಶಗಳು, ಹೋರಾಟದ ಹಾದಿಗಳು ಯುವ ಸಮಾಜಕ್ಕೆ ಸ್ಫೂರ್ತಿ ನೀಡಲಿ ಎಂಬ ಆಶಯದೊಂದಿಗೆ ಈ ರಾಷ್ಟ್ರೀಯ ನಾಯಕರಿಗೆ ನನ್ನದೊಂದು ಸಲಾಂ.

ಡಾ.ಅವರೆಕಾಡು ವಿಜಯ ಕುಮಾರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x