-೬೧-
ಈ ಅಯ್ನೋರ್ ಪಾದ
ಬೀದ್ಬೀದಿಲಿ ತಿರ್ಗಾಡ್ತಿತ್ತು
ಆ ಪಾದ ತಿರ್ಗಾಡ ಬಿರುಸ್ಗ
ಬೀದ್ಬೀದಿಲಿ ಲಾರಿಗಳು ತಿರುಗ್ತಿದ್ದು
ಆ ತಿರುಗ್ತಿದ್ದ ಲಾರಿಗಳು ಮಣ್ಸುರ್ಸ್ದು
ಬರ್ಗುಟ್ಗ ಮೊರ್ಗುಟ್ಗ ಹೋಯ್ತಿದ್ದು
ಚೇರ್ಮನ್ನಾಗಿ ವರ್ಸಾಗಿತ್ತು
ಊರೊಳ್ಗ ಮೋರಿಗಳು ದಿಕ್ಕಾಪಾಲು ಹರಿತಾ
ಬೀದಿ ಯಾವ್ದ ಮೋರಿ ಯಾವ್ದ ಅನ್ನದೇ ತಿಳಿದೆ
ಪುಂಡೆಲ್ಲ ಸೇರಿ ಪಂಚಾಯ್ತಿಲಿ ಗುಲ್ಲೆಬ್ಬಿತ್ತು
ಆ ಆಳು ಇದ ಮೊದುಲ್ಗೆ ಹೇಳಿದ್ದ
ಆದ್ರ ಈ ಅಯ್ನೋರು
ಆ ಆಳ್ ಮಾತ್ನ ಬೀದಿ ಪಾಲ್ ಮಾಡಿ
ನಗಾಡ್ತ ಇದ್ದದ ನಾ ಕಂಡಿದ್ದಿ
ಈಗ ಈ ಅಯ್ನೋರ್ ಪಾದ್ಗಳು
ಬೀದಿ ಬುಟ್ಟು ದೂರಸ್ಟ ನಡ್ದು
ಜೊತ್ಗ ಆ ಆಳೂ
ಹಿಂದಿಂದ ನಡಿತಾ ಬತ್ತಿದ್ನ
ಸಂದ ಆಯ್ತ ಬಂತು
ಆಗ
ಆ ಹುಣ್ಸ ಮರ ಕಾಣ್ತು
ಆ ಹುಣ್ಸ ಮರ
ಇದ್ದಕ್ಕಿದ್ದಂಗೆ ವಸಿ ಅದುರ್ದಂಗಾಯ್ತು
ಆ ಹುಣ್ಸ ಮರುತ್ತವೆ ಅಲ್ವ
ಈ ಅಯ್ನೋರ್ ನಿಂತ್ಕತಿದ್ದು
ಆ ಚೆಲ್ವಿ ಓಡೋಡ್ ಬತ್ತಿದ್ದು
ಆ ಸವ್ವಿ ಚಲ್ಗ ತಕ್ಕಂಡು
ನೀರ್ತರಕ ಹೋಯ್ತಿರದು ಕಾಣ್ತಿದ್ದು
ಆ ನನ್ ಒಡಿಯ ಕಾಲಯ್ಯ
ಕುಂತವೇ ಹಲ್ಲ ಕಿರಿತಿದ್ದು
ಆ ಐದ ಪರ್ಶು
ಈ ಅಯ್ನೋರ ಕೆಕ್ಕುರ್ಸಿ ನೋಡ್ತಿದ್ದು..
ಈಗ ನೋಡು
ಸುಟ್ಟು ಬೆಂದು
ಕರುಕ್ಲಾಗಿರ ಆ ನನ್ ಕಾಲಯ್ನ
ಮನ ಬೂದಿನೂ ಕಾಣ್ದು
ಆ ಆಳು ‘ಅಯ್ನೋರಾ..’ ಅನ್ತ ಬೆಚ್ಚಿ
ಹಿಂದ ಸರುದು
ಅಯ್ನೋರ್ ಕೈಹಿಡ್ದು ಎಳ್ದ
ಈ ಅಯ್ನೋರೂ ಅಳ್ಕಿ
ಅವ್ರ್ ಪಾದ್ಗಳು ಅಳ್ಕತರ ಆಗಿ
ನನ್ ಮೈಕೈಯೂ
ವಸಿ ಅಳುಕ್ದಂಗಾಯ್ತು.
ಆ ಆಳು,
‘ಅಯ್ನೋರಾ ಬನ್ನಿ ಇಲ್ಲಿ’ ಅನ್ತ
ಸರಸರನೆ ನಡಿತಾ
ಇನ್ನೂ ವಸಿ ದೂರ ನಡಸ್ಕಂಡು ನಡಿತಾ
‘ಅಯ್ನೋರಾ ಇನ್ಮೇಲ ಇತ್ತಗ
ಬರದ ಕಮ್ಮಿ ಮಾಡಿ..
ಒಬ್ರಲ್ಲ ಇಬ್ರು ಬೆಂದು ಬೂದಿ ಆಗಿರದು
ಊರ್ಲಿ ಪುಂಡು ಪುಂಡೆದ್ದವ
ಅದ್ಕು ಮುಂಚ ಹಿಂಗ ಎದ್ದಿದ್ವ..
ಗಾಳಿ ಗಾಚಾರ
ಊರ್ಗ ಒಕ್ಕುರ್ಸ್ಕಂಡದ’
ಅನ್ತ ಅಂದ
ಈ ಅಯ್ನೋರು
ಸುಮ್ನ ಯೋಚ್ನ ಮಾಡ್ತ ನಿಂತ್ರು
ಕತ್ಲು ಕವುಸ್ಕತಾ ಇತ್ತು
ಹಂಗೆ ನಡಿತಾ ದಾರಿ ಸಾಗುಸ್ತ
ಹೆಂಡದ ಗುಳ್ ಕಡ ಬಂದು
ಮಡ್ಡಿ ಮರದ ಕೆಳ್ಗ ನಿಂತ್ರು
ಆ ಆಳು ಅಯ್ನೋರ್ ಸನ್ಗ ಓಡ್ದ
ಈ ಅಯ್ನೋರು
ಆ ಆಳು ಓಡದ್ನೆ ನೋಡ್ತ
ಬೀಡಿ ಕಚ್ಚುದ್ರು
ಆ ಹೆಂಡದ ಗುಳ್ಳಿ
ಲಾಟಿನ್ ಬೆಳ್ಕು ಚೆಲ್ಕಂಡಿತ್ತು
ಆ ಆಳು ಆ ಚೆಲ್ಕಂಡಿರ
ಲಾಟಿನ್ ಬೆಳ್ಕೊಳ್ಗ
ಹೆಂಡದ ಗುಳ್ಳೊಳಕ ನಡ್ದ
ಈ ಅಯ್ನೋರು ಬೀಡಿನ
ಎಡಗೈ ಬೆಳ್ಳಿ ಹಿಡ್ದು ದಮ್ಮೆಳಿತಾ
ಆ ದಮ್ಗ ಬೀಡಿ ಮೊನೆಲಿ ಬಿಂಕಿ ಕಿಡಿ ಕಾಣ್ತ
ಆ ಬಿಂಕಿ ಕಿಡಿ ಬೆಳುಕ್ಲಿ
ಆ ಬೀಡಿ ಹೊಗ ಮ್ಯಾಲುಕ್ಕೊಯ್ತ ಇತ್ತು
ಆಗ ಆ ಮಡ್ಡಿ ಮರದ ಮ್ಯಾಗಿಂದ
ಮಡ್ಡಿ ಕಾಯಿ ಉದುರ್ದು
ಈ ಅಯ್ನೋರು ಬೆಚ್ಚಿ ಬೆರಗಾಗಿ
ಆ ಮರ ಬುಟ್ಟು ಮುಂದುಕ್ಕೋಗಿ
ಮರಕ್ಕು ಹೆಂಡದ ಗುಳ್ ಸಮುಕ್ಕ ನಿಂತ್ರು
ಆಗ ಆ ಆಳು ಲಾಟಿನ್ ಬೆಳ್ಕೊಳಗ
ನಾಕು ಹೆಂಡದ ಬಾಟ್ಲಿ ತಬ್ಕಂಡು
ಇಸ್ತ್ರಿಲಿ ಕಾಳು ಹಿಡ್ಕಂಡು
ಕತ್ಲೊಳಕ ದುಮುಕಿ
ದಾಪುಗಾಲಾಕಿ ಬರದು ಕಾಣ್ತು
ಈ ಅಯ್ನೋರು ಆ ಆಳ್ನೇ ನೋಡ್ತಾ
ಅತ್ತಗೇ ಪಾದ ಬೆಳ್ಸಿ
‘ಏ ಏನಾ ಇಸ್ಟೊತ್ತು
ಇಲ್ಲಿ ಮಡ್ಡಿ ಕಾಯೆಲ್ಲ
ದಬುಗುಟ್ಕ ಉದುರ್ದು’ ಅಂದ್ರು
‘ಅಯ್ನೋರಾ ಮಡ್ಡಿ ಕಾಯಿ
ಹಂಗ ಉದ್ರದಿಲ್ವಲ್ಲ
ಅದ್ಕ ತೊಟ್ಟು ದಪ್ಪಗದ
ಬನ್ನಿ ಇಲ್ಲಿ’
ಅನ್ತ ಜಬರ್ದಸ್ತ್ ಮಾಡಿ ಕರ್ದ
ಆ ಆಳ್ನ ಧೈರ್ಯ ನೋಡಿ
ಈ ಅಯ್ನೋರು ಆ ಆಳ್ನ ಹಿಂದ ನಡ್ದು
ಕಡ್ಡಿ ಗೀರಿ ನೋಡುದ್ರು
ಕಾಯ್ಗಳು ಚೆಲ್ಕಂಡಿದ್ದು
ಮ್ಯಾಕ್ಕು ನೋಡುದ್ರು
ಮ್ಯಾಲ ಏನ್ಕಂಡದು
ಏನೂ ಕಾಣ್ದು ಕತ್ಲು ಕವುಸ್ಕಂಡಿತ್ತು
ಆಗ ಆ ಆಳು ಅಯ್ನೋರ್ ಕೈಗ
ಬಾಟ್ಲಿ ಕೊಟ್ಟು ‘ಎತ್ತಿ ಅಯ್ನೋರಾ’ ಅಂದ
ಹಂಗೆ ಅಗ್ರಣಿ ಹಾಕಿರ ಅಲ್ಸಂದ ಕಾಳ
ಇಸ್ತ್ರಿಲಿ ಬಿಚ್ಚಿ ಕೆಳಕ ಮಡುಗ್ದ
ಈ ಅಯ್ನೋರು ಗಟಗಟನೆ ಹೆಂಡ ಹೀರಿ
ಅಲ್ಸಂದ ಕಾಳ ಮುಕ್ಕುದ್ರು
ಈ ಅಯ್ನೋರ್ ಸನ್ಗ
ಆ ಆಳೂ ಅರ್ಧ ಬಾಟ್ಲಿ ಎತ್ತಿ
‘ಅಯ್ನೋರಾ ನಾ ಹೇಳ್ದಂಗಿ
ಆ ಇಬ್ರು ಗಾಳಿ ಆಗರ’ ಅಂದ.
ಈ ಅಯ್ನೋರು ತಲ ಒದರಿ
‘ಏಯ್ ಏನಾ ನೀ ಮಾತಾಡದು
ಕಂಡಾಯ ಸ್ಯಾವ ಮಾಡ್ಸಿಲ್ವ’ ಅನ್ತ
ಇನ್ನೊಂದ್ ಬಾಟ್ಲಿ ಎತ್ತಿ
ಬೀಡಿ ಕಚ್ಚಿ ಕಡ್ಡಿ ಗೀರುದ್ರು.
‘ಆಯ್ನೋರಾ ಈ ಗಾಳಿ ಗಾಚಾರ
ಕಂಡಾಯ ಪಂಡಾಯ್ಕ ಹೋಗದಿಲ್ಲ
ಆದ್ರ ಅಯ್ನೋರಾ ಈ ಕಾಲಯ್ನು ಆ ಚೆಲ್ವಿನು
ಬಿಂಕಿ ಎಟ್ಟಿರವ್ರ ಬುಡದಿಲ್ಲ..’ ಅನ್ತ ಕುಡಿತಾ
ತೊದುಲ್ತ ಕಾಳು ಮುಕ್ತ ಹೇಳ್ತನೇ ಹೋದ.
ಈ ಅಯ್ನೋರು ಮ್ಯಾಕ್ಕೆದ್ದು
ಪಂಚ ಎತ್ತಿ ಉಚ್ಚ ಉಯ್ಯಕ ನಿಂತ್ಕಂಡ್ರು
ಉಚ್ಚ ಉಯ್ತ ಉಯ್ತನೆ
‘ಅವ್ರು ನನ್ ಸ್ಯಾಟನು ಕೀಳಕಾಗಲ್ಲ’ ಅಂದ್ರು
ಆ ಆಳು ಮ್ಯಾಕ್ಜೆದ್ದು ತೂರಾಡ್ತ
ಅವ್ನೂ ಚಡ್ಡಿ ಎತ್ತಿ ಉಚ್ಚ ಉಯ್ತ
‘ಅಯ್ನೋರಾ ನಿಮ್ ಸ್ಯಾಟ ಕೀಳಕ
ಅವ್ಕೇನ್ ಮೊಲ್ಲಾಗ್ರ್ಯಾ..
ಬಿಂಕಿ ಎಟ್ಟಿರವ್ರು ಅನ್ಬೊಸ್ತರ ಬುಡಿ’
ಅನ್ತ ಅಂದ್ಮ್ಯಾಲ ಈ ಅಯ್ನೋರು
ಆ ಆಳ್ನ ಹೆಗುಲ್ ಮ್ಯಾಲ ಕೈ ಹಾಕಿ
ತೂರಾಡ್ತ ತೂರಾಡ್ತ ಮನ ಕಡ ನಡುದ್ರು..
-೬೨-
ಮೊಕ್ಕತ್ಲು ಕವುಸ್ಕಂಡಿತ್ತು
ಈಗ ಎಲ್ಲ ಮುಂದಾಳ್ಗಳು
ಈ ಅಯ್ನೋರು ಕರ್ದೇಟ್ಗೆ
ತ್ವಾಟುಕ್ಕ ಬಂದು ಸೇರಿದ್ರು
ಎಲಕ್ಷನಲಿ ಹಿಂಗ ಸೇರಿದ್ದು
ಅದಾದ್ಮೇಲ ಇಲ್ಲ
ಕುಡ್ತ ಇದ್ದೆ ಇತ್ತು
ಜೊತ್ಗ ಗಮ್ಗುಟ್ಟ ಬಾಡ್ನೆಸ್ರು
ಎಲ್ರು ಅಮುಲೇರುಸ್ಕಂಡು
‘ಪೊಲಿಸ್ರಿಂದ ತಪ್ಪುಸ್ಕಂಡು
ನಮ್ಗ ನಿದ್ರಗೆಡ್ಸನ
ಊರೂರ್ಲಿ ಐಕ ಪುಂಡೆದ್ದವ
ಚಪ್ಲಿ ಹೊಲಿದ್ದಂವ ಅವ್ರಪ್ಪ..
ಇನ್ತ ಆ ಐದ ಸುತ್ಮುತ್ತ ಊರೂರ್ಲಿ
ಇಸ್ಟು ಬಲೂರ್ಬೇಕಾದ್ರ
ಅಂವುತ್ತವು ದುಡ್ಡಿದ್ದ ಕಾಸಿದ್ದ
ಹೊಲ ಇದ್ದ ಮನ ಇದ್ದ
ಕಾರ್ಣ ಏನ ಅಯ್ನೋರಾ..
ನಾವೆಲ್ಲ ಸೇರಿ ತಾನೆ ನಿಮ್ಮುನ್ನ
ಚೇರ್ಮೆನ್ ಮಾಡುದ್ದು..
ನಿಮ್ಮ ಚೇರ್ಮನ್ ಮಾಡುದ್ ತಪ್ಗ
ನಿಮ್ಯಾಲ್ನ ಆ ಚಪ್ಲಿ ಹೊಲಿತಿದ್ದ
ಸೂಳೆ ಮಗನ ಹಗ ನಮ್ಯಾಲ..’
ಅನ್ತ ಏನೇನ ಮಾತು ಅಲ್ಲಲ್ಲೆ ಸುತ್ತಾಡ್ತು
ಹಂಗೆ ಹೆಂಡದ ಬಾಟ್ಲುಗಳು ಖಾಲಿ ಆಗ್ತ
‘ಅಯ್ನೋರಾ ಮುಂದ ಚೇರ್ಮೆನಾಗಿ
ಉಳ್ಕಳದು ನಿಮ್ಕೈಲದ..’ ಅನ್ತಾನು ಅಂದ್ರು
ಈ ಅಯ್ನೋರು ಆ ಆಳ್ನ ಮೊಖ ನೋಡುದ್ರು
ಆ ಆಳು ಈ ಅಯ್ನೋರ್ ಮೊಖನೆ ನೋಡ್ದ.
ರಾತ್ರ ಸ್ಯಾನೆ ಹೊತ್ತಾಗಿತ್ತು
ಕುಡ್ದವ್ರು ಮ್ಯಾಕ್ಕ ಎದ್ದೇಳ್ತಿಲ್ಲ
ಈ ಅಯ್ನೋರು ಆ ಆಳ್ಜೊತ್ಗ
‘ನನ್ ಚರ್ಮೆನ್ ಗಿರಿ
ಇನ್ನೂ ಒಂದೊರ್ಸ ಅದ ಕಣಲೆಯ್
ಅದ ಬುಟ್ಟು ನಾ ಇರಲ್ಲ’ ಅಂದ್ರು.
ಆ ಆಳು,
‘ಅಯ್ನೋರಾ ಇದರ ಉಸಾಬರಿ ನಂಗಿರ್ಲಿ’
ಅನ್ತ ಇನ್ನೊಂದ್ ಬಾಟ್ಲಿ ಕೊಟ್ಟು
‘ತಕ್ಕಳಿ ಎತ್ತಿ ಅಯ್ನೋರಾ..
ಅಯ್ನೋರಾ ಒಂದೆ ದಾರಿ
ಅಂವ ಬಂದ್ರ ಮಾತಾಡಿ’ ಅಂದ
ಆ ಆಳ್ನ ಮಾತು
ಅಯ್ನೋರ್ನ ಕದುಲ್ತು ಅನ್ಸುತ್ತ
ಆ ಆಳ್ನ ಹೆಗುಲ್ ಮುಟ್ಟಿ ತೊದುಲ್ತ
‘ನಿನ್ ತಲ ನಂಗಿನ್ತ ಚೆಂದಗದ ಕಲ’
ಅನ್ತ ಸುತ್ತ ನೋಡುದ್ರು
ಆಗ ಆ ಆಳು
ತಲ ಬಗ್ಗುಸ್ಕಂಡು ನಗಾಡ್ತ
ಎಲ್ಲ ಮುಂದಾಳ್ಗಳು ಕುಡ್ದು ಚಿತ್ತಾಗಿದ್ರು
ಈ ಅಯ್ನೋರು
ಆ ಚಿತ್ತಾಗಿರ ಮುಂದಾಳ್ಗಳ್ ಮುಂದ
‘ನಿಮ್ಗ ಅಂಜ್ಕ ಯಾಕ..
ಅಂಜ್ಕ ಅನ್ನದು ಇದ್ರ
ಆ ಅಂಜ್ಕ ಬುಡಿ’
ಅನ್ತ ಆ ಆಳ್ದಿಕ್ಕ ನೋಡುದ್ರು.
ಈ ಅಯ್ನೋರು ಎಲ್ಲು ಹೋಗ್ದೆ
ಜಗುಲಿ ಕಂಬ ಒರುಗಿ
ಚಿಂತ ಮಾಡ್ತ ಕುಂತ್ರು
ಆ ಚಿಂತ ಏನ ಅನ್ನದು ಕಾಣ್ದು
ಆದ್ರ ಮನ ಒಳ್ಗ
ಎರುಡು ಬ್ಯಾಂಡಿನ ರೇಡಿಯೊದಲ್ಲಿ
ಪಿಚ್ಚರ್ ರಿಕಾಡ್ ಹಾಡ್ತ ಮೊಳುಗ್ತ
ಹೋಗಬರ ಬೀದಿ ಜನ
ಕುಂತು ನಿಂತು ಕೇಳೋರು ಮಾಮೂಲಾಗಿತ್ತು
ಅಸ್ಟೊತ್ಗ ಆ ದೊಡ್ಡವ್ವನ ಮೊಮ್ಮೆಣ್ಣು ಬಂತು
ಆ ಮೊಮ್ಮೆಣ್ಣು ಆಗಾಗ
ಹೋಗಿ ಬಂದು ಮಾಡ್ತಿತ್ತು
ಮನ್ಗ ಲೈಟು ರೇಡಿಯೋ ಬಂದ್ಮೇಲಂತು
ಈ ಅಯ್ನೋರ್ ಮನ ಬುಟ್ಟು ಹೋಗ್ದು
ಟಿ ಕಾಯ್ಸಕು ಬರದು
ನೀರ್ ಕಾಯ್ಸಕು ಬರದು
ಕಸ ಗುಡ್ಸಕು ಬರದು
ಲೈಟಾಕಾಕು ಬರದು
ರೇಡಿಯೋ ಹಾಕಕು ಬರದು
ಹಿಂಗ ಎಲ್ಲುಕು ಬರದು.
ಈ ದೊಡ್ಡವ್ವನ ಮೊಮ್ಮೆಣ್ಣು
ಮೈಕೈ ತುಂಬ್ಕಂಡು ಚೆಂದ್ಗಾಂದಗಿತ್ತು
ಅವತ್ತು ಮುಸಂದವತ್ಲಿ
ರೇಡಿಯೊ ಸದ್ದ ಜೋರ್ ಮಾಡಿ
ರಿಕಾಡ್ ಹಾಕ್ಬುಟ್ಟು
ಜಗುಲಿಲಿ ಕುಂತಿದಾಗ
ಆ ಹೆಣ್ಣ ಅಮ್ಕಿ ಹಿಡ್ಕಂಡು
ಕೆನ್ನ ಕಚ್ತ
ತೊಡ ಅಮುಕ್ತ
ಎದ ಅಮುಕ್ತ
‘ರಿಕಾಡ್ ಚೆನ್ನಾಗಿದ್ದಾ..’
‘ಊ್ಞ..’
‘ಈ ಪಿಚ್ಚರ್ ನೋಡಿದಯ..’
‘ಇಲ್ಲ..’
‘ಯಾರ ಹೇಳ್ತ ಇರದು ಗೊತ್ತಾ..’
‘ಇಲ್ಲ..’
‘ರಾಜ್ಕುಮಾರ.. ಅವುನ್ದೆ..
ಈ ರಾಜ್ಕುಮಾರ್ ಗೊತ್ತಾ..’
‘ಇಲ್ಲ..’
‘ಏನು ಗೊತ್ತಿಲ್ಲ ಬುಡು ನಿಂಗ..’
ಅನ್ತ ಲಂಗ ಒಳಕ ಕೈಯಾಕುದ್ರು
ಆದು ಕೊಸ್ರಿ ಮ್ಯಾಕ್ಕೆದ್ದು ನಿಂತ್ಕತು
ಆಮ್ಯಾಲ ಈ ಅಯ್ನೋರು
ದುರುದುರು ನೋಡ್ತ
‘ಆಯ್ತು ಒಲ ಹಸ್ಸಿ ಅನ್ನ ಮಾಡ್ಬುಟ್ಟು
ನಿಮ್ಮೊವ್ವತವು ವಸಿ ಎಸ್ರಿದ್ರ ಬುಡುಸ್ಕ ಬಾ
ನಾಳ ಸಂತಗೋಗಿ ನಿಂಗ
ಹೊಸ್ದು ಲಂಗ ತತ್ತಿನಿ’ ಅಂದ್ರು.
ಆಗ ಆ ಮೊಮ್ಮೆಣ್ಣು
ಕುಣಿತಾ ನೆಗಿತಾ ನಲಿತಾ
ಮನ ಒಳಕ ಪಣ್ಣನ್ತ ಓಡ್ತು…
ಈಗ ಚಿಂತ ಮಾಡ್ತಿರ ಅಯ್ನೋರು
ಆ ಮೊಮ್ಮಣ್ಣ ನೋಡಿ
ಕಲಿ ಆದಂಗಾದ್ರು
ತಾಲ್ಲೊಕ್ಕಚೇರಿ ಪಡ್ಸಾಲಲಿ
ಈ ಅಯ್ನೋರ್ ಬಾಮೈದ
ಬಾಮೈದುನೆಡ್ತಿ ಕಂಡ್ರು
ಈ ಅಯ್ನೋರು ಅವ್ರ ನೋಡಿ
‘ಚೆನ್ನಗಿದ್ದಯ ಇದೇನ ಇಲ್ಲಿ ಈಗ’
ಅನ್ತ ಮಾತಾಡ್ಸಿ ಹೋಟ್ಲು ಕಡ ತಿರುಗುದ್ರು
ಹೋಟ್ಲಲಿ ದ್ವಾಸ ತಿಂತಾ
ವರ್ಸ ಆರ್ತಿಂಗ ಆಯ್ತು
ಇನ್ನು ಏನು ಇಲ್ವ ಅನ್ತ
ಬಾಮೈದುನ್ನ ನಕ್ಲಿ ಮಾಡುದ್ರು
ಆ ಬಾಮೈದ ನಗ್ತ ನಾಚ್ತ ತಲ ಆಡುಸ್ದ
ಆಗ ಈ ಅಯ್ನೋರು
ತಡ ಮಾಡ್ಬೇಡ ಬ್ಯಾಗ್ನೆ ಮಾಡ್ಕ
ಅನ್ತ ಮಾತಾಡ್ತ ಮಾತಾಡ್ತ
ಮದ್ಯಾನ ಬಿಸ್ಲು ಇಳಿತಾ
‘ಬಾವ ಅದ್ಯಾರ ಪರಶುರಾಮ ಅನ್ತ
ನಿಮ್ಮೂರವ್ನೆ ಅನ್ತ
ಮೈಸೂರ್ಲಿ ಸಿಕ್ಕಿ
ತ್ವಂದ್ರಿ ಅದ ಊಟುಕ್ಕಿಲ್ಲ
ನಾಳನಾಳಿದ್ದು ಕೊಡ್ತಿನಿ ಅನ್ತ
ನನ್ತವು ದುಡ್ಡೀಸ್ಕಂಡ್ನ..
ಆಮೇಲ ಗೋಳೋ ಅನ್ತ ಅಳ್ತ
ಅರ್ಜೆಂಟದ ಬತ್ತಿನಿ ಅನ್ತ ಓಡ್ದ’
ಅಂದ್ಮೇಲ ಈ ಅಯ್ನೋರು
ಯಾವತ್ತಾ ಎಲ್ಯಾ ಅನ್ತನ್ತ
ಕೇಳ್ತ ಕೇಳ್ತ ಚಿಂತ ಮಾಡ್ದಂಗ ಮಾಡ್ತ
ಹಂಗೆ
‘ನೀವ್ ನಡರಿ ಬಸ್ಗ ಟೇಮಾಯ್ತುದ’
ಅನ್ತ ಕಳಿಸಿ ಬೀಡಿ ಹಚ್ಗಂಡು ಸೇದ್ತಾ ಕುಂತ್ರು.
-ಎಂ.ಜವರಾಜ್
ಮುಂದುವರಿಯುವುದು..