“ಧಣೇರ ಬಾವಿ”ಪುಸ್ತಕದ ಕುರಿತ ನನ್ನ ಸಣ್ಣ ವಿಮಶೆ೯: ಸುರೇಶ್ ಮಲ್ಲಿಗೆ ಮನೆ

ಈ ಕಥೆಗಳೇ ಹಾಗೆ ಅನಿಸುತ್ತೆ, ನಮ್ಮ ಮುಖದಲ್ಲಿನ ನವರಸಗಳನ್ನು ಹೊರಹಾಕಲು ಕಥೆಗಾರರು ಕಾಯುತ್ತಿರುತ್ತಾರೆ..!!? ನಮ್ಮ ತುಟಿಯ ಪಿಸು ನಗುವಿನಿಂದ ಪ್ರಾರಂಭವಾದ ಕೆಲ ಕಥೆಗಳು ಕೊನೆಗೆ ಕೊನೆಗೊಳ್ಳುವುದು ದುರಂತ ಕಣ್ಣೀರಿನ ಹನಿಗಳಿಂದ..!! ಕೆಲವು ಮೂಕವಿಸ್ಮಿತನನ್ನಾಗಿ ಮಾಡುತ್ತವೆ, ಕೆಲವು ಒಂದು ಬಗೆಯ ಮ್ಲಾನತೆಯ ಭಾವನೆಯನ್ನು ಮೂಡಿಸುತ್ತದೆ, ಕೆಲವಂತೂ ನಮ್ಮದೇ ಕಥೆಯೇ ಎನ್ನಿಸುವಂತಿರುತ್ತವೆ, ಕೆಲವು ನಮ್ಮ ಗತಕಾಲವನ್ನು ನೆನಪಿಸುವಂತಿರುತ್ತವೆ. ಹೀಗೆ ನಾನಾ ಬಗೆಯವು.

ಕಥೆಗಳೇ ದಾರಿತಪ್ಪಿರುವ ಕಾಲದಲ್ಲಿ ಕಥೆಗಾರ ರಾಗುವುದು ಕಥೆಗಳಲ್ಲಿ ಮಾತ್ರ ನೋಡುವಂತಹ ಈ ಕಾಲದಲ್ಲಿ ಕಥೆಗಳು ಕಥೆಗಳಾಗಿ ಮಾತ್ರ ಉಳಿಸಿಕೊಳ್ಳದೆ ಸಮಾಜದ ಏರುಪೇರುಗಳನ್ನು ಸಿದ್ದುವಂತಿದ್ದರೆ ಆ ಕತೆ ಸಾರ್ಥಕವೆನಿಸಿಕೊಳ್ಳುತ್ತದೆ. ಅಂತಹದರಲ್ಲಿ ನನ್ನ ಸೋದರ ಸ್ವರೂಪನಾದ ಶರಣಬಸವ, ಕೆ ಗುಡದಿನ್ನಿ, ಅವರ ಪ್ರಯತ್ನ ,ಬರಹ , ಕಥಾ ನಿರೂಪಣಾ, ವರ್ಣನೆ, ಕಲ್ಪನೆ, ಆತನ ಭಾಷಾ ಸಂಪತ್ತು, ಪದಪ್ರಯೋಗ, ವ್ಯಾಕರಣ ಮೆಚ್ಚುವಂತದ್ದು.

“ಧಣೇರ ಭಾವಿ ” ಕಥಾ ಶೀರ್ಷಿಕೆಯ ಈ ಪುಸ್ತಕವನ್ನು ಬದುಕಿಡೀ ಬರಿಗೈಲಿ ಬದುಕಿಯೂ ಬದುಕಿಸಿದ ಈರಣ್ಣ ಮಾಸ್ತರನೆಂಬ ತನ್ನ ತಾತನಿಗೆ ಅರ್ಪಿಸಿ, ಮಹಾಂತೇಶ ನವಲಕಲ್ ರವರಿಂದ ಚಂದದ ಮುನ್ನುಡಿ ಬರೆಸಿ, ಬದುಕು ಇಲ್ಲಿಗೆ ಮುಗಿಯಿತು ಅನಿಸಿದಾಗ ತನ್ನಿಡೀ ಬದುಕನ್ನು ತನಗೆ ಬರೆದು ಕೊಟ್ಟಂತೆ ಬದುಕಿದ ಅಪ್ಪನ ನೆನೆಯುತ್ತ, ಧಣೇರ ಎಂಬ ಬಾವಿಯನ್ನು ಅಗೆಯಲು ಅಣೆಯಾಗಿ ಮೊದಲಿಗೆ ನೇತ್ರಾವತಿ ಎಂಬ ಇಪ್ಪತ್ತು ವರ್ಷದ ಮೈನೆರೆಯದ ಹುಡುಗಿಯ “ಉದುರಿದ ಹೂವೂಂದರ ಕಥೆ”ಯನ್ನು ಹೇಳುತ್ತಾ ಅವಳ ತೊಡೆಸಂದಿಯ ಒಂದು ಬೆವರಹನಿ ಬಂದರೂ ಕೂಡ ಪರೀಕ್ಷಿಸಿಕೊಳ್ಳುವ ಆಕೆಯ ತಳಮಳ, ಮನೋವೇದನೆ, ತಾಯಿಯ ಬೈಗಳು, ಊರ ಹಿರಿಯ-ಕಿರಿಯ ಯುವಕರ ಅಸಡ್ಡೆ ಮಾತುಗಳು, ಹೀಗೆ ನಾನಾ ಬಗ್ಗೆ ನೋವುಗಳನ್ನು ಅನುಭವಿಸುತ್ತಾ ಎಲ್ಲಾ ಪ್ರಯತ್ನದ ಕೊನೆಯಲ್ಲಿ ವೈದ್ಯೆಯ ಮಾತಿನಂತೆ ಮಗಳನ್ನು ದಾಯಮ್ಮ ಮಾಡಲು ಹೊರಟ ತಂದೆಯಲ್ಲಿ ದೇವರನ್ನು ಕಂಡುಕೊಳ್ಳುವ ಹುಡುಗಿ,, ಸಮಾಜದ ಎಂತಹವರಿಗೂ
ಗಂಡು-ಹೆಣ್ಣೆಂಬ ಭೇದಭಾವವಿಲ್ಲದೆ ಯಾವುದೇ ದೋಷಪೂರಿತ ರಾಗಿದ್ದರು ಬದುಕಲು ಬೇಕಾದಂತಹ ಆತ್ಮಸ್ಥೈರ್ಯವನ್ನು ಒದಗಿಸುವಲ್ಲಿ ಈ ಕಥೆ ಸಹಕಾರಿಯಾಗಿದೆಯೆಂದರೆ ತಪ್ಪಾಗಲಾರದು….

ನಂತರದಲ್ಲಿ ಇಬ್ಬರ ನಡುವಿನ ನಿಷ್ಕಲ್ಮಶ ಪ್ರೀತಿ ಕಣ್ಣುಗಳಿಂದ ಪ್ರಾರಂಭವಾಗಿ ಹೃದಯಕ್ಕೆ ನಾಟಿ, ಬಾಯಿಂದ ಹೊರಬೀಳುವ ವೇಳೆಗೆ ಎಲ್ಲವೂ ಮುಗಿದು ಹೋಗುವ “ನೀಲಿ ಕಣ್ಣಿನ ಹುಡುಗ”ನೆಂಬ ಬಸ್ ಕಂಡಕ್ಟರ್ ನಿಂದ ಎಲ್ಲವನ್ನು ಕಂಡರೂ ಕೊನೆಯಲ್ಲಿ ಯಾವುದನ್ನು ಯಾರಿಗೂ ಹೇಳಲಾಗದ, ನೋಡಲಾಗದ, ಬಯಸದ, ಬೆಳದಿಂಗಳ ಬಾಲೆ ಎಂಬಂತಹ ಹುಡುಗಿ ಮತ್ತು ನೀಲಿ ಕಣ್ಣಿನ ಹುಡುಗನ ನಿಷ್ಕಲ್ಮಶ ದುರಂತ ಪ್ರೇಮಕಥೆಯನ್ನು ಹೇಳುತ್ತಾ, ಮನಸ್ಸಿನಲ್ಲೇನೋ ಮ್ಲಾನತೆಯ ಭಾವನೆಯನ್ನು ಮೂಡಿಸಿ “ಖಂಡದ ಸಾರು” ಉಣಿಸಲು ಅಣಿಯಾಗುತ್ತಾರೆ ಕಥೆಗಾರ ಶರಣಬಸವರವರು.

ಮುಕ್ತಂಬೀಯ “ಖಂಡದ ಸಾರಿ”ನಂತೆ ಆಕೆ, ಆಕೆ ಮಗ ಅಕ್ಬರ್, ಆಕೆ ಸ್ವಾಭಿಮಾನ, ಆಕೆಗೆ ಮಗನ ಮೇಲಿದ್ದ ಪ್ರೀತಿ, ತಾಯಿಯ ಮೇಲಿನ ಮಗನ ಸಿಟ್ಟು, ಮಗ ತಾಯಿಯನ್ನು ಬಿಟ್ಟು ಹೋಗುವಾಗ ತಾಯಿಗಾಗುವ ನೋವು ಎಲ್ಲಕ್ಕಿಂತ ಮಿಗಿಲಾಗಿ ಸನ್ನಿವೇಶಗಳನ್ನು ವರ್ಣಿಸಲು ಗುಡದಿನ್ನಿ ಯವರು ಬಳಸಿದ ಭಾಷಾ ಸೌಂದರ್ಯ ಅದ್ಭುತವಾಗಿ ಮೂಡಿ ನಿಜವಾಗಿ ಎಳೆಯ ಟಗರಿನ ಖಂಡದ ಸಾರನ್ನು ಮುಕ್ತುಂಬೀಯ ಕೈಯಲ್ಲಿಯೇ ಮಾಡಿಸಿ ಉಣಬಡಿಸಿದಂತಿತ್ತು….. ಕೊನೆಯಲ್ಲಿ ಅಳಾ ಕೋಸನ್ನು ಅಲ್ಲೇ ಬಿಡಲು ಮನಸಾಗದೆ ಅವನಲ್ಲಿ ತನ್ನ ಮಗ ಅಕ್ಬರನನ್ನು ಕಂಡು ಕೈಹಿಡಿದು ಮನೆಕಡೆ ನಡೆಯುತ್ತಿದ್ದರೆ ಜಗತ್ತಿನಲ್ಲಿ ತಾಯಿ ಪ್ರೀತಿ ಗಿಂತ ಮಿಗಿಲಾದದ್ದು ಯಾವುದೂ ಇಲ್ಲವೆಂಬ ಭಾವನೆ ಮೂಡುವುದರಲ್ಲಿ ಸಂಶಯವಿಲ್ಲ..

“ದೇವರೇ ನಿನ್ನ ಹೆಸರನ್ನು ಬದಲಿಸಿಕೊ” ಎಂಬ ಶೀರ್ಷಿಕೆಯೊಂದಿಗೆ ಮಟ್ಕಾ ಬೀರಪ್ಪನ ಕಥೆಯನ್ನು ಹೇಳುತ್ತಾ ಅವನಿಂದಾಗಿ ತನ್ನ ಕುಟುಂಬ ಬೀದಿಗೆ ಬೀಳುವ, ಊರ ಜನರ ಶಾಪ, ತಂದೆಯಿಂದಾಗಿ ತನಗೆ ಬಂದ ಉಪನಾಮ, ಅಪಮಾನ, ಎಲ್ಲವನ್ನು ಸಹಿಸಿಕೊಂಡು ಹೇಗಾದರೂ ಮಾಡಿ ಅಪ್ಪನ ಸಾಲ ತೀರಿಸಿ ಮುಂದಿನ ಸಲ ಬರೋ ಹೊತ್ತಿಗೆ ಅಪ್ಪನ ಹೆಸರಿನ ಜೊತೆ ಉಪಮಾನ ಇರಕೂಡದೆಂದು ಯೋಚಿಸಿ, ತಾನು ಬದಲಾಗಿ ಬದಲಾಯಿಸಲು ಮುನ್ನಡೆಯುವ ಕಥೆ ನಿಜವಾಗಿಯೂ ನನ್ನ ಕಣ್ಣೆದುರಿಗೆ ನನ್ನ ಸ್ನೇಹಿತನೊಬ್ಬ ಕಷ್ಟಪಡುವ ಕಥೆ ವ್ಯಥೆಯನ್ನು ಮತ್ತೆ ಕಣ್ತೆರೆಸಿ ತೋರಿಸಿದಂತೆ ಅನಿಸಿತ್ತು, ಭವಿಷ್ಯ ಅವನೇನಾದರೂ ಈ ಕತೆಯನ್ನು ಓದಿದರೆ ಬದಲಾಗಬಹುದೇನೋ….!!!?????

“ತಬ್ಬಲಿ ಮರ” ಎಂಬ ಅದ್ಭುತವಾದ ಕಥಾಹಂದರವನ್ನು ಬೊಂಬಾಯಿ ಸಾಂತವ್ವನೆಂಬ ಗಟ್ಟಿಗಿತ್ತಿ, ಸ್ವಾಭಿಮಾನಿ, ತನ್ನ ಮಕ್ಕಳಿಗೋಸ್ಕರ ಕಷ್ಟಪಡುವ ವೈಖರಿ, ಸೊಸೆಯಿಂದರಿಂದ, ಜನರ ಬಾಯಿಂದ ಬರುವ ನಿಜವಲ್ಲದ ನೋವಿನ ಚುಚ್ಚು ಮಾತುಗಳನ್ನು ಅನುಭವಿಸುತ್ತಾ, ಕೊನೆಯವರೆಗೂ ನನ್ನ ಮಕ್ಕಳ ಮುಖ ನೋಡುವುದಕ್ಕಾಗಿಯಾದರೂ ಬದುಕಿದ್ದು, ಗಂಡನನ್ನು ಕಳಕೊಂಡು, ಯಾರ ಹಂಗೂ ಇಲ್ಲದೆ ವಿಷ ಕುಡಿದು ಸತ್ತ, ಓಡಿ ಹೋದ ಮಗಳನ್ನೂ ನೆನೆಯುತ್ತಿರುವ ಹೊತ್ತಲ್ಲೇ ಹಸಿವೆಯನ್ನು ತಾಳಲಾರೆ ಸಕ್ಕರೆಯೆಂದು ತಿಳಿದು ಯೂರಿಯಾವನ್ನು ತಿಂದು ಕೊನೆಯ ಮಗನನ್ನೂ ಕಳೆದುಕೊಳ್ಳುವಾಗ ಉಟ್ಟ ಸೀರೆಯ ಸೆರಗು ದಾಟಿ ಭೂಮಿಗೆ ಬಿದ್ದು, ಬರಿಗಾಲಿನಲ್ಲಿ ಹುಚ್ಚಿಯಂತೆ ಕಣ್ಣ ನೀರು ತುಂಬಿಕೊಂಡು ಓಡೋಡಿ ಬಂದು ಮಗನ ಹೆಣವನ್ನು ಉಡಿಯಲ್ಲಿ ಹಿಡಿದು ಸುಡುಗಾಡ ಕಡೆ ನಡೆಯುವಾಗ ದೇವರೇ ಏನದು ನಿನ್ನ ಆಟ, ಗಟ್ಟಿಗಿತ್ತಿ, ಸ್ವಾಭಿಮಾನಿ, ಅಮಾಯಕ ಸಾಂತವ್ವನಿಗೆ ಹೀಗೆಲ್ಲಾ ಆಗಬೇಕಾಗಿತ್ತಾ .. ಅಯ್ಯೋ ದುರ್ವಿಧಿಯೇ… ಎಂದು ಸಾಂತವ್ವನ ನೆನೆಯುತ್ತ ನಮ್ಮ ಕಣ್ಣಿಣಿಂದ ಹನಿಯೊಂದು ಜಾರುವುದು ನಮಗೆ ಅರಿವಾಗುವುದಿಲ್ಲ….

“ಲೂಯಿ ಪಾಶ್ಚರ್”ನೆಂಬ ಅನೈತಿಕತೆ ರಕ್ತದಲ್ಲಿ ಬರುತ್ತಿದ್ದ ಒಂಟಿ ಎಂಬುದನ್ನು ಮರೆಯಲು ಯಾವಾಗಲೂ ಯಾರಾದ್ರೂ ಪ್ರೀತಿಸಲಿ, ಹಾರೈಸಲಿ ಎಂದು ಅನುಕಂಪ ಹುಟ್ಟಿಸಿ, ಹಸಿ ಸುಳ್ಳು ಹೇಳುತ್ತ, ಸಿಕ್ಕಸಿಕ್ಕ ಇಲ್ಲ ಹೆಂಗಸರೊಂದಿಗೆ ಬಿಡುವಿಲ್ಲದೆ ವೀರ್ಯ ಹಂಚಿಕೊಂಡು ವಿಮಳ ನಿಂದಾಗಿ ತನ್ನ ಅರ್ಧ ಇಂಚಿನ ವರ್ಜಿನಿಟಿ ಕಳಕೊಂಡು, ಹೊರಬಿದ್ದ ಗರ್ಭಕೋಶವನ್ನು ಒಳ ಹಾಕಿ ಅನುವು ಮಾಡಿಕೊಟ್ಟ ಗೌಡಸಾನಿ ಸಾಂತವ್ವನಿಂದಾಗಿ ಏಡ್ಸ್ ಎಂಬ ಕಾಯಿಲೆಗೆ ತುತ್ತಾಗಿ, ತನ್ನ ತಪ್ಪಿನ ಅರಿವಾಗಿ ನನ್ನ ಹೆಂಡತಿ ಮಕ್ಕಳಿಗಾಗಿ ಪರಿತಪಿಸುವ, ಕೊನೆಯಲ್ಲಿ ಎಲ್ಲವನ್ನು ಹೆಂಡತಿ ಮಕ್ಕಳಿಗಾಗಿ ತ್ಯಾಗ ಮಾಡಿ ಶಿಲುಬೆಗೆ ಏರಲು ಹೊರಟವನಂತೆ ನಿಧಾನ ನಡೆಯುತ್ತಿದ್ದರೆ ಬಂಗಾರದ ಮನುಷ್ಯ ರಾಜಕುಮಾರ ರವರನ್ನು ಚಿತ್ರದಲ್ಲಿ ಎಲ್ಲರನ್ನೂ ಬಿಟ್ಟು ಹೋಗುತ್ತಿರುವ ಭಾವನೆಯುಂಟಾಗಿ ಕೊನೆಯಲ್ಲಿ ಲೂಯಿ ಪಾಶ್ಚರ್ ಬಂಗಾರದ ಮನುಷ್ಯ ನಾಗಿಬಿಡುವನು…..!!!!?????

“ಒಂದು ಚಹಾ ಮತ್ತೇನಿಲ್ಲ”… ಎಂಬ ಶೀರ್ಷಿಕೆಯೇ ಹೇಳುವಂತೆ ಒಬ್ಬನ ಪ್ರೀತಿಗೆ ಬಲಿಯಾದ ಮುಸ್ಲಿಂ ಹೆಣ್ಣು ಮಗಳೊಬ್ಬಳ ಅಮರ ಪ್ರೇಮ ಕಥೆ ಮುಂದುವರೆಯುತ್ತಾ ಕೊನೆಯಲ್ಲಿ ಬಿಟ್ಟುಹೋದ ಹುಡುಗನ ನೋಡಲು ಬಂದಾಗ ಅವನ ರೂಪುರೇಷ, ಆಗಿನ ಅವನ ಸ್ಥಿತಿಗತಿಯನ್ನು ಕಂಡು , ಅವನೊಂದಿಗೆ ಕಳೆದ ಗತಕಾಲವನ್ನು ನೆನೆಸಿಕೊಂಡು, ಅವನಿಂದ ಬಂದಂತಹ ಕೆಲ ಚುಚ್ಚ ಮಾತುಗಳನ್ನು ಅರಗಿಸಿಕೊಳ್ಳುತ್ತ ಚಹಾ ಕುಡಿಯುತ್ತಲೇ ಅಂಗಡಿಯೊಂದರಲ್ಲೇ ಕೊನೆಗೊಳ್ಳುವ ಪ್ರೇಯಸಿಯ ಅಮರ ಪ್ರೇಮಕಥೆ ಅದ್ಭುತವಾಗಿ ಮೂಡಿ ಬಂದಿದೆ….

ಕೊನೆಯದಾಗಿ ಪುಸ್ತಕದ ಶೀರ್ಷಿಕೆ “ಧಣೇರ ಬಾವಿ ” ಶ್ರೀಧರನೆಂಬುವನು ಪ್ರಗತಿಪರ ಕೃಷಿಯನ್ನು ಮಾಡಲು ಪ್ರಯತ್ನಿಸಿ, ಎಲ್ಲಾ ಪ್ರಯತ್ನವ ಮಾಡಿ ಕೈಸುಟ್ಟುಕೊಂಡು,ಅಪ್ಪನಿಂದಲೂ ಬೇಡವೆನಿಸಿಕೊಂಡು, ಬೈಸಿಕೊಂಡು, ಅಪ್ಪನ ಆಸೆಯಂತೆ ನಡೆದುದುಕೊಳ್ಳದೆ, ಎರಡಕ್ಷರ ಓದಿದ್ದು, ಸ್ವಾಭಿಮಾನಿಯಾಗಿ ಬದುಕಲು ಪ್ರಯತ್ನಿಸಿ, ಅಪ್ಪನನ್ನು ಕಳೆದುಕೊಂಡು, ಕೊನೆಯಲ್ಲಿ ಅಪ್ಪನ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ, ಅಪ್ಪನಿಗಾಗಿ ಸಾಲದ ಗುಟ್ಟನ್ನು ಬಿಟ್ಟುಕೊಡದೆ , ಬಾಲ್ಯದಲ್ಲಿ ತನ್ನ ಬಗ್ಗೆ ಪ್ರೀತಿಯಿಂದ ನಡೆದುಕೊಂಡು ಅಪ್ಪನನ್ನು ನೆನೆಯುತ್ತ, ಅಪ್ಪನ ಸಾಲ ತೀರಿಸುವ ಸೋದರಮಾವನ ಮಾತನ್ನೂ ಕೇಳದೆ, ಅಪ್ಪನ ಸುಟ್ಟ ಬೂದಿಯನ್ನು ತಂದಿಟ್ಟು ಪೂಜೆ ಮಾಡಿ, ಅಪ್ಪ ಮಾಡಿಕೊಂಡ ಸಾಲ ತಿರೋವರೆಗೂ ಬೇರೆಯವರ ಹೊಲದಲ್ಲಿ ಕೃಷಿ ಕೆಲಸ ಮಾಡಲು ತೀರ್ಮಾನಿಸಿ ಎಲ್ಲವನ್ನೂ ಕಳಕೊಂಡ ಭಾವ ಮೂಡಿಸಿಕೊಂಡು, ಅಳುವುದಕ್ಕೂ ಆಗದೆ ಭಾರದ ಮನಸ್ಸಿನಿಂದ ಹರಿದ ಚಪ್ಪಲಿಯನ್ನು ಎಳಕೊಂಡು ಮನೆಕಡೆ ಹೊರಟಾಗ ಅವನ ಜೋರು ನಡಿಗೆಯಿಂದೆದ್ದ ಧೂಳು ಗಾಳಿಯಲ್ಲಿ ತೇಲುವ ಚಿತ್ತಾರ ನನ್ನ ಕಣ್ಣೆದುರಿಗೆ ಮೂಡಿ ಹೋದಂತಾಯಿತು….. ಅಪ್ಪ ಧಣಿಯನ್ನು ಕಳೆದುಕೊಂಡ ಶ್ರೀಧರ ಅಕ್ಷರಸಹ ಅನಾಥ ಶಿಶುವಿನಂತಾಗಿದ್ದ…..

ಒಟ್ಟಿನಲ್ಲಿ “ಧಣೇರ ಬಾವಿ” ಅದ್ಭುತ ಕಥಾಲೋಕವನ್ನೇ ಸೃಷ್ಟಿಸಿ ನಮ್ಮನ್ನು ಬೇರೆಯದೆ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಭಾಷಾಪ್ರೌಢಿಮೆ ಅದ್ಭುತವಾಗಿ ಮೂಡಿ ಬಂದಿದೆ. ಇಷ್ಟಾದರೂ ಭಾವಿಯ ಆಳವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಓದಲೇಬೇಕಾದ ಅತ್ಯದ್ಭುತ ಅಪರೂಪದ ಕಥಾ ಪುಸ್ತಕ……

-ಸುರೇಶ್ ಮಲ್ಲಿಗೆ ಮನೆ…..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x