ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 53 & 54): ಎಂ. ಜವರಾಜ್

-೫೩-
ಮದ್ಯಾನ ಕಳಿತಾ ಕಳಿತಾ ಬಿಸ್ಲು ಇಳಿತಿತ್ತು

ತಾಲ್ಲೊಕ್ಕಚೇರಿ ಕಾಂಪೋಡೊತ್ಲಿ
ಚೆಲ್ಲಿಚಪ್ರ ಮರ್ದಲ್ಲಿ
ಹೂವು ಕೆಂಪ್ ಕೆಂಪ್ಗ ತ್ವನ್ಯಾಡ್ತಿತ್ತು
ಮರುದ್ ಸುತ್ತ ನೆಳ್ಳು ಚೆಲ್ಕಂಡಿತ್ತು.
ಮದ್ವ ಮನಲಿ ಚಪ್ರ ಹಾಕ್ಬುಟ್ಟು
ಚೆಲ್ಲಿಚಪ್ರ ಹೂವ್ನ ಕಟ್ಬುಟ್ಟು
ನಾಕ್ಮೂಲ್ಗು ಬಾಳಕಂಬ ಕಟ್ಬುಟ್ರ
ಐಕ ಕುಣಿತ ಇರದ ನೋಡಕೆ ಚೆಂದ.

ಈ ಅಯ್ನೋರು
ಆ ಆಳು
ಇಬ್ರೂ ಬಂದು
ಒಂದ್ ಒಂದೂವರ ಗಂಟ್ಯಾಗಿತ್ತು
ಚೆಲ್ಲಿಚಪ್ರ ಮರುದ್ ನೆಳ್ಳಿ
ಇಬ್ರೂ ಕುಂತಿದ್ರು

ಆಗ ಸುತ್ಮುತ್ನ
ಹುಣ್ಸೂರು ಕಿರುಗ್ಸೂರು ಆಲ್ಗೂಡ್ನ
ಊರ್ ಮುಂದಾಳ್ಗಳು ಬಂದ್ರು
ಪೋಲಿಸ್ ವ್ಯಾನ್ಗಳು ಜೀಪ್ಗಳು
ಎಲಕ್ಷನ್ನು ಅನ್ತ ಊರೂರ್ ಕಡ
ಬರ್ಗುಟ್ಕಂಡು ಹೋಗವು ಹೋಯ್ತಿದ್ದು

ಈ ಅಯ್ನೋರು ಎಲ್ರುನು ಬನ್ನಿ ಬನ್ನಿ ಅನ್ತ
ನಗ್ತ ಕರುದು ಕುಂಡ್ರುಂಸ್ಕಂಡು
ಆ ಆಳ್ಗ ಸನ್ನ ಮಾಡುದ್ರು
ಆ ಆಳು ಪೆಟ್ಗ ಅಂಗ್ಡಿಗ ಸನ್ನ ಮಾಡುದ್ನ
ಆ‌ ಪೆಟ್ಗ ಅಂಗ್ಡಿಯಂವ
ಆ ಆಳ್ನ ಸನ್ನುಕ್ಕ
ಟೀನೂ ಬೊಂಡಾನು ತಂದು ಕೊಟ್ನ
ಅಸ್ಟೊತ್ಗ ಗ್ರೂಪ್ ಪಂಚಾಯ್ತಿನೆಲ್ಲ ಗುಣುಗ್ಸಿ
ಯಾವ್ದ್ಯಾದು ಎಸ್ಟೆಸ್ಟ ಅನ್ತೆಲ್ಲ ಆಯ್ತು
ಚೇರ್ಮನ್ ಗಿರಿದೂ ಬಾಳ ಚರ್ಚ ಆಯ್ತು.

ಆಗ ಶಿವ್ಲಿಂಗಪ್ಪೋರು
ತಾಲ್ಲೊಕ್ಕಚೇರಿ ಒಳ್ಗಿಂದ ಬಂದಂಗಿತ್ತು
ಅಲ್ಲೆ ತಾಲ್ಲೊಕ್ಕಚೇರಿ ಒಳ್ಗೆ ಪೋಲಿಟೇಸನ್ನು ಅದ
ಆ ಶಿವ್ಲಿಂಗಪ್ಪೋರ ಹಿಂದ್ಗುಂಟ
ನನ್ನ ಒಡಿಯ ಕಾಲಯ್ನು‌
ಅವ್ನ ಹೆಂಡ್ರು ಚೆಲ್ವಿನು ಓಡಿ ಓಡಿ ಬತ್ತಿದ್ರಲ್ಲೊ
ಆತರ ಬತ್ತಿರದ ಈ ಅಯ್ನೋರು ನೋಡುದ್ರಲ್ಲೊ
ಆ ಶಿವ್ಲಿಂಗಪ್ಪೋರು ಈ ಅಯ್ನೋರ
ವಾರಗಣ್ಲಿ ನೋಡ್ತ ಹೋದ್ರಲ್ಲೊ
ಈ ನನ್ ಒಡಿಯ ಕಾಯ್ನು
ಅವ್ನ ಹೆಂಡ್ರು ಚೆಲ್ವಿನು
ಈ ಅಯ್ನೋರ ನೋಡಿ ಇತ್ತಗ ಬಂದು
ಗೋಳೋ ಅನ್ತ ಅಳ್ತ ನಿಂತ್ಕಂಡು
‘ಅಯ್ನೋರಾ
ಆ ನನೈದ ಆ ಚೆಂಗುಲಿನ
ಕೊಲ ಮಾಡಿದನಂತಲ್ಲಾ.. ಇದು ನಿಜ್ವಾ..
ಅಂವ ಅಂವ್ನಲ್ಲ ಅವ್ರ್ ಸ್ವಾದುರ್ಮಾವನು
ಅವ್ರೊವ್ವನು ಸೇರ್ಕಂಡು ಕಂಪ್ಲೆಂಟ ಕೊಟ್ಟರ
ನಿಮ್ಗ ಗೊತ್ತೇ ಅದ..’ ಅಂದೇಟ್ಗೆ
ಈ ಅಯ್ನೋರು ಕಣ್ಣ ಕೆಂಪ್ಗ ಮಾಡ್ಕಂಡು
‘ನಡರಿ ನಡರಿ ಆಯ್ತು
ನಾಳ ಎಲಕ್ಷನು’
ಅನ್ತ ಸಾಗಾಕಿ ಮಾತಾಡ್ತ ಕುಂತ್ರಲ್ಲೊ..
ಇದ ನೋಡಿ ನಂಗ ಸಂಕ್ಟ ಆಯ್ತಲ್ಲೊ..
ಅಯ್ಯೊ ನನ್ ಒಡಿಯಾ ಕಾಲಯ್ಯೋ…
ನಿನಗ್ಯಾಕ ಈ ರೀತಿ ಆಯ್ತೋ ಶಿವ್ನೇ…


ಸೂರ್ಯ ಮುಳ್ಗಿ ಸಂದ ಆಗಿತ್ತು

ಈ ಅಯ್ನೋರು
ಆ ಆಳು
ಆ ಆಳ್ಜೊತ ಒಂದಸ್ಟು ಐಕ
ಮಾತುಕತ ಆಡ್ದೆದ್ ರೀತಿಲಿ
ಗುಟ್ಗುಟ್ಟಾಗಿ ಎಲ್ಲ ಕೇರಿನು
ಒಂದು ಬಳ್ಸು ಬಳ್ಸಕ ಅನ್ತ ಮಾತಾಯ್ತು
ಊರೊಳ್ಗ ಪೋಲಿಸ್ರು
ಗಸ್ತು ತಿರುಗ್ತ ಇದ್ರು

ಈ ಅಯ್ನೋರು ಎಲ್ಲ ಸಿದ್ದ ಮಾಡ್ಕಂಡು
ತ್ವಾಟ ಬುಟ್ಟು ಈಚ್ಗ ಬರಕು
ಚೆಂಗುಲಿ ಅವ್ವನು
ಅವ್ನ್ ಸ್ವಾದುರ್ಮಾವ್ನು ಬಂದ್ರು
ಈ ಅಯ್ನೋರು
‘ಊ್ಞ ಏನ ಇವ್ಳೆ’ ಅಂದ್ರು
‘ಅಯ್ನೋರಾ… ಅಯ್ನೋರಾ..
ಆ ಹೆಣ್ಣ ಮಡಿಕಂಡು ಸಂಪನ್ನ ಮಾಡ್ತಿದ್ರು
ಗಂಡಹೆಡ್ತಿ,
ಅವ ಅದೆಲ್ಯ ಹೋದವ ಹೋದ
ಅದ್ಯಾರ್ನ ಕಟ್ಕಂಡು ಅವ ಹೋದ್ರ
ನನ್ ಚೆಂಗುಲಿನೆ ಕರ್ಕ ಹೋಗನ ಅನ್ತ
ನನ್ ಚೆಂಗುಲಿ ಗಂಡ್ನ ಅವ್ನ್ ಮಗ ಸಾಯ್ಸನ..
ನಂಗ ಸಂಕ್ಟ ಅದ ಅದ್ಕ ಕಂಪ್ಲೆಂಟ ಕೊಟ್ಟಿ
ಅವ್ನ ಬುಡದಿಲ್ಲ ನೋಡಿ ಸಟ್ಗ ನ್ಯಾಣ ಹಾಕುಸ್ತಿನಿ
ಅದ್ಕಾಗಿ ಹೊಲಮನ ಕಳುದ್ರು ಚಿಂತಿಲ್ಲ
ಈಗ
ಆ ಕಾಲ್ನೂ ಅವ್ನೆಡ್ತಿನು ತಾರಾಮಾರ್ನ ಬೋದು
ಮನ ಒಳಕ ನುಗ್ಗಿ ಜಾತ್ಗೆಡ್ಸದು ಅಲ್ದೆ
ಕಂಪ್ಲೆಂಟ್ ಕೊಟ್ಟು ನನೈದುನ್ನ ಎಳಿಸಿದ್ದಯ
ಅನ್ತ ನನ್ಗು ನನ್ನೆಣ್ಗು
ಮುಂದಲ ಹಿಡ್ಕ ಹೊಡ್ದು ಹೋಗರ..
ನೀವ್ಯಾಕ ಇರದು ದೊಡ್ಡವ್ರು ಅನ್ತ..’
ಅನ್ತ ಬುಡ್ತಿ ಕೊಡ್ದೆ ಮಾತಾಡಿ
ಅತ್ತ ಅತ್ತ ಅತ್ತ ಅದ್ಯಾಕೇಳಿರಿ..
ಚೆಚ್ಗ ಬಡ್ಕ ಅತ್ತು ಬಿದ್ದು ಒದ್ದಾಡಗ
ಈ ಅಯ್ನೋರು,
‘ಈಗ ಸುಮ್ಬಿದ್ಬುಡು ಎಲಕ್ಷನ್ ಮುಗಿಲಿ
ನಾ ಅವತ್ತೆ ಹೇಳ್ನಿಲ್ವ ಈಗ್ಬ್ಯಾಡ ಅನ್ತ
ಪುಸುಕ್ ಅನ್ತ ಕಂಪ್ಲೆಂಟ ಕೊಟ್ಟಿದೈ..
ನಡ ಈಗ ನನ್ಗ ಊರ್ ಬಳ್ಸದದ..
ಎಲ್ಲ ಕಳಿಲಿ
ನೋಡು, ಪೋಲಿಸ್ರೂ ಇತ್ತಗೆ ಬತ್ತವ್ರ
ಅವ್ರು ಬಂದು ಏನೇನ ಕೇಳ್ತರ ನಡ’
ಅನ್ತ ಕಳಿಸಿ
ಈ ಅಯ್ನೋರು
ಆ ಆಳು
ಆ ಆಳುನ್ ಜೊತ್ಗಿರ ಐಕ
ಎಲ್ರೂ ಊರೊಳ ನಡುದ್ರು ಸದ್ದ ಮಾಡ್ದೆ.


-೫೪-
‘ನೀಲವ್ವೋರ ಈಚ್ಗ ಹಾಕಂಡರ
ಬ್ಯಾಗ್ನ ಹೋಗಿ ಅಯ್ನೋರಾ’
ಯಾರ ಸುದ್ದಿ ತಂದ್ರು
ಆ ಸುದ್ದಿನ ಕೇಳಿ ನಂಗ ದಂಗಾಗ ತರ ಆಗಿ
ಅಯ್ನೋರ್ ಮೊಖ ನೋಡ್ದಿ

ಈ ಅಯ್ನೋರು ಈಚೀಚ್ಗ
ಈ ಎಲಕ್ಷನ್ ಕೆಲುಸ್ದಲ್ಲಿ
ಮನ್ಗ ಹೋದ್ರ ಹೋದ್ರು ಇಲ್ದೆದ್ರ ಇಲ್ಲ
ಹೋದಾಗ ಒಂದೇಡ್ ಮಾತು
ಅದೂ ಮೊಖ ಕೊಟ್ಟನ್ತು ಇಲ್ಲ
ಇದ್ದಾಗ್ಲೊ ಮನ ಬುಡಗ್ಲೊ
ಇದ್ರ
ಕಾಪಿ ಟಿ ಕುಡ್ಕಂಡು ಬರದು
ಇಲ್ದಿದ್ರ ಇಲ್ಲ
ಊಟಗೀಟ ಮಾಡದು ಇಲ್ವೆ ಇಲ್ಲ
ಎಲ್ಲ ತ್ವಾಟ್ದಲ್ಲೆ ಮುಗಿಯದು.

ಟೇಮು ಹನ್ನೊಂದ್ಗಂಟ ಆಗಿತ್ತು

ಜನ ಓಟಾಕಕ ಅನ್ತ ಹಂಗೆ
ಅಯ್ನೋರ ಮಾತಾಡ್ಸಿ
ತ್ವಾಟ್ದ ತೆವ್ರಿ ಸುತ್ತ ತಿರ್ಗಾಡಿ
ಗಮ್ಗುಡ್ತಿದ್ದ ಬಾಡ್ನಸ್ರು ಜೊತ್ಗ ಕಾಯನ್ನ
ಉಂಡ್ಕಂಡು
ದುಡ್ಡೀಸ್ಕಂಡು
ಹಲ್ಕಿರಿತಾ ಹೋಗೋರು

ಈಗ ದಿಢೀರನ್ತ
ನೀಲವ್ವೋರ ಈಚ್ಗ ಹಾಕಂಡಿರ ಸುದ್ದಿ
ಈ ಅಯ್ನೋರ ಕಂಗೆಡುಸ್ತು.

ಈ ಅಯ್ನೋರು ಆ ಆಳ್ನ ಕರುದು
ಅವ್ನೊಂದ್ಗ ಇನ್ನೊಂದಿಬ್ರ ಜೊತ ಮಾಡಿ
ಮನ ಕಡ ಮೊಖ ಹಾಕುದ್ರು


ಬೀದಿಲಿ ಜನ ತುಂಬಿದ್ರು
ಈ ಅಯ್ನೋರ್ ನಡ್ಗ ಜೋರಾಯ್ತು
ನಂಗು ಅಳತರ ಆಯ್ತಿತ್ತು
ಬೀದಿ ಉದ್ಕು ಜನ
ತಲಗೊಂದೊಂದ್ ಮಾತು
ಈ ಅಯ್ನೋರು ಎತ್ತಗು ದಿಗ್ಲಾಗ್ದೆ
ಮನತವ್ ತುಂಬಿರ ಜನಾನೇ ನೋಡ್ತ
ಸೂರಿಡ್ಕಂಡು ನೋಡುದ್ರು
ನೀಲವ್ವೋರು ತಣ್ಣುಗ್ ಮನಿಗಿದ್ರು

ಈ ದೊಡ್ಡವ್ವ
ಲಬಲಬ ಅನ್ತ ಬಾಯ್ಬಡಿತಿದ್ದವ
ಈ ಅಯ್ನೋರ ನೋಡಿ
ಇನ್ನೂ ಜೋರಾಗಿ ಬಾಯ ಬಡ್ಕತಾ
‘ನಾ ಅವತ್ತೆ ಹೇಳ್ದಿ ನೀ ನನ್ಮಾತ ಕೇಳ್ನಿಲ್ಲ
ನೀ ಬೇಕಾಬಿಟ್ಟಿ ಮಾಡ್ದ
ನಾ ಹೇಳ್ದಾಗ ನೀ ಕೇಳಿದ್ರ
ನೀ ಇವತ್ತು ಈತರ ನೋಡ್ತಿರ್ನಿಲ್ಲ”
ಆಡಾಡ್ಕಂಡು ಗೋಳಾಡ್ಕಂಡು ಅಳ್ತಿದ್ಲಲ್ಲೊ..

ಈ ಅಯ್ನೋರು
ಬುಟ್ಕಣ್ಣು ಬುಟ್ಟಂಗೆ ನೋಡ್ತ
ತಣ್ಣುಗ್ ಮನ್ಗಿರ ನೀಲವ್ವೋರ ಹೊತ್ಲಿ
ತಿಕ ಊರಿ ಕುಂತ್ರಲ್ಲೊ…


ಸಂದ ಆರಾಗಿರತರ ಇತ್ತು
ಸೂರ್ಯ ಮುಳುಗ್ತ ಕೆಂದೂಳೆದ್ದು
ರಂಗುಳುಸ್ತಿದ್ದ.

ನೀಲವ್ವೋರ್ ಸಮಾಧಿಗ
ಈ ಅಯ್ನೋರು ಪೂಜ ಸಲ್ಸುದ್ರು
ಕುಲೊಸ್ತ್ರು ಹಿರೀರು ಜೊತ್ಗಿದ್ರು


ಮನ ಈಚ ಜಗುಲಿ ಮ್ಯಾಲ
ಈ ಅಯ್ನೋರು ನನ್ನ ಬುಡ್ತಿದ್ ಜಾಗ್ದಲ್ಲಿ
ಮಣ್ಸೊಳ್ಳು ಉರಿತಿತ್ತು
ಆ ಮಣ್ಸೊಳ್ಳಿಂದ ಒಂದ್ ಕನ್ನಡಿ ಇತ್ತು
ವಪ್ಪ ಮುಗಿಸಿ ಬಂದೊರೆಲ್ಲ
ಕೈಮುಕ್ಕಂಡು ಗಳ್ಗ ಕುಂತಿದ್ದು ಹೋಯ್ತಿದ್ರು.

ಎಲ್ಲ ಆಯ್ತು
ಉಳುದ್ ಕಾರ್ಯ ಅದ
ಕುಲೊಸ್ತ್ರು ಹಿರೀರು ಅಲ್ಲೆ ಇದ್ರು
ಈ ದೊಡ್ಡವ್ವ ಏನೇನ ಹೇಳ್ತ ಇದ್ಲು
ಅವ ಹೇಳದೆಲ್ಲ ಸರಿನೆ ಅನ್ತ
ಎಲ್ಲ ಗೆಪ್ತಿ ಮಡಿಕಂಡ್ರು..

ಆ ಗೆಪ್ತಿ ಅಂದ್ರ-
ರಾತ್ರುಕ ನೀರ್ ಮಡುಗ್ಬೇಕು
ಸತ್ತವ ಬಂದು ನೀರ್ ಮುಟ್ಬೇಕು
ಆ ನೀರ್ ಮಡ್ಗಕ
ಹೊಳಯಿಂದ ಮರುಳ್ ತರ್ಬೇಕು
ಆ ಮರುಳ ವಂದ್ರ್ಯಾಡಿ
ನುಣ್ಗಿರ ಮರುಳ ಗೋಪ್ರತರ ಗುಡ್ಡ ಮಾಡಿ
ಆ ಗುಡ್ದ ಮ್ಯಾಲ ಕಳಸ ಚೆಂಬ್ಲಿ ನೀರಿಡ್ಬೇಕು
ಆ ನುಣ್ಗಿರ ಮರುಳ್ ಗುಡ್ಡ ಏರ್ಕಂಡು
ಅವ ನೀರ್ಕುಡಿಬೇಕು
ಅವ ನೀರ್ಕುಡ್ದಿದಳ ಇಲ್ವ ಅನ್ನದು
ಆ ನುಣ್ಗಿರ ಮರುಳ್ ಗುಡ್ಡ ಮ್ಯಾಲ
ಅವ ನಡ್ಕಂಡು ಹತ್ಕಂಡು ಹೋಗಿರ ಗುರ್ತಿರ್ಬೇಕು
ವತ್ನಂತೆ ಸೂರ್ಯ ಮೂಡಕು ಮುಂಚ್ಗ
ಎದ್ದು ನೋಡುದ್ರ
ಆ ಗುರ್ತು ಮರುಳ್ ಗುಡ್ಡ ಉದ್ದುಕ್ಕು
ಎರಿನ್ ಸಾಲ್ತರ ಕಾಣುತ್ತ
ಆಗ ಈ ಮನ್ಗ ಕಂಟ್ಕ ಅನ್ನದು ಇರಲ್ಲ-
ಅನ್ತ ದೊಡ್ಡವ್ವನ ಗೆಪ್ತಿ ಮಾತು
ಆ ಮಣ್ಸೊಳ್ಮುಂದ ಸುತ್ತಾಡ್ತು


ಆ ಆಳು
ಆ ಆಳ್ಜೊತ ಐಕ ಎಲ್ಲ
ಮನ ಹಿತ್ತುಲ್ಲಿ
ಆಲ್ದ ಮರ ಬುಡ್ದಲ್ಲಿ ಕುಂತಿದ್ರು
ಆ ಆಳು
ಈ ಅಯ್ನೋರ್ ಮುಂದ
ಎಲಕ್ಷನ್ ವರದಿ ಕೊಟ್ಟ.
ಆ ಆಳ್ ನಿಯತ್ಗ
ಈ ಅಯ್ನೋರು ಮಾತೇ ಆಡ್ನಿಲ್ಲ
ಹಂಗೆ ಹಿತ್ತುಲ್ ಬಾಗ್ಲ ತಗ್ದು
ಒಳಕ್ಕೋಗಿ ಬಂದು
ಅವ್ರ ಬೆನ್ತಟ್ಟಿ ಕಳಿಸಿ
ಹಂಗೆ ಅಲ್ಲೆ
ಆಲ್ದ ಮರುದ್ ಬುಡ್ದಲ್ಲೆ ಕುಂತಾಗ
ಕತ್ಲು ಗವ್ವರಾಕಂಡು
ಊರೊಳಗ ಬೀದ್ಬೀದಿಲಿ
ನಾಯ್ಗಳು ಗಳ್ಳಾಕ ಸದ್ದು ಕೇಳ್ತಿತ್ತು

-ಎಂ.ಜವರಾಜ್


ಮುಂದುವರಿಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x