ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 47 & 48): ಎಂ. ಜವರಾಜ್

-೪೭-
ಈ ಅಯ್ನೋರು
ಈ ಆಳುನ್ ಗುಟ್ಟ ಕಂಡಿರ್ನಿಲ್ಲ
ಸಂದಲಿ
ಈ ಆಳಾಡ್ದ ಮಾತ್ಗ
ಅಯ್ನೋರ್ ತಿಕುದ್ ಸಂದಿಲೆ
ಇರಂಗಾಯ್ತು

‘ಏ ಬಲ ಇಲ್ಲಿ’
ತಲ ಕೆರಿತಾ
‘ಅಯ್ನೋರಾ’ ಅನ್ತ ಬಂದ
ರಾತ್ರ ಎಂಟೆಂಟುವರೆ ಗಂಟ್ಯಾಗಿತ್ತು.
‘ಅದೇನ್ಲ ನಾ ಅನ್ಕಂಡಂಗೆ
ಕಡ್ಡಿ ಮುರ್ದಾಗಿ ಅನ್ಕಡಾ’
‘ಆ ಕಾಲುನ್ ಮಗಂವ್ನಲ್ಲ
ಪರ್ಶು
ರಾಗಿ ಮಿಲ್ತವ್
ಶಿವ್ಲಿಂಗಪ್ಪೋರ್ ಜೊತ್ಗ ನಿಂತಿದ್ನ
ಆ ಶಿವ್ಲಿಂಗಪ್ಪೋರು,
‘ಏ ಕಾಲುನ್ ಮಗ್ನೆ
ನಿಮ್ಮಯ್ನೋರು ಗೆದ್ದರಾ’ ಅಂದ್ರು
ಅದ್ಕ ಪರ್ಶು
‘ನಾ ಮಾತಾಡಗಿದ್ದ ಬುದ್ದಿ
ಸೋಲ್ಲಿ ಅಂತಾನೆ ನಾನು
ಅದ್ರ ಗೆಲ್ಲದೆ ಆವಯ್ಯ
ಬುದ್ದಿ ನೀವೆಲ್ಲ ಕೈಕಟ್ಟುದ್ರ
ಏನಾರ ಮಾಡ್ಬೇದು’
ಅಂದ ಅಯ್ನೋರಾ
ಅದ್ಕ ಆ ಶಿವ್ಲಿಂಗಪ್ಪೋರು
‘ಎಲಕ್ಷನು ಕಸ್ಟ ಕಣ
ಆದ್ರ ಒಂದ್ ಕೆಲ್ಸ ಮಾಡು’
ಅಂದ್ರು ಅದ್ಕ ಈ ಪರ್ಶು
‘ಹೇಳ್ಬದ್ದಿ ನೀವು ಕಾಲ್ಲಿ
ತೋರುದ್ದ ಕಣ್ಗೊತ್ತಿ ಮಾಡ್ತಿನಿ’
ಅಂದ್ಮೇಲ
‘ಏನೀ ಇಲ್ಲ
ಶಿವ್ಲಿಂಗಪ್ಪೋರು ನಿಲ್ತರ
ಅನ್ತೇಳುದ್ರ ಸಾಕು’
‘ಕೇರಿ ಬೇರೆ ಅಲ್ವ ಬುದ್ದಿ
ಆ ಕೇರಿಗು ನಿಮ್ ಕೇರಿಗು
ಏನಾ ಸಂಬಂದ
ನೀವಿಲ್ನಿಂತು ಅವುರಲ್ನಿಂತು
ಸೋಲ್ಸದ್ಯಾಗ್ಯಾ’
‘ಏ ಸೋಲದಲ್ಲ ಕಣ
ನಂಗ್ಬೇಕಿರದು
ಅಯ್ನೋರ್ತವ್
ಖರ್ಚು ಖರ್ಚ್ ಮಾಡ್ಸದು ಅಸ್ಟೆ
ಈಗ್ಲೆ ಎಲ್ಲ ಖಾಲಿ ಆದ್ರ
ಚರ್ಮನ್ ಸೀಟ್ಗ
ಎಲ್ಲಿ ಖರ್ಚ್ ಮಾಡಿನು’
ಅಂದ್ರು.
ಅದ್ಕ ಈ ಪರ್ಶು
‘ಬಾಳ ಬುದ್ದಿ ಅಳಿ ನಿಮ್ಗ
ಈಗ್ಲೆ ಅಯ್ನೋರು
ಖರ್ಚ್ ಮಾಡಿ ಮಾಡಿ
ಸಾಕಾಗಿದ್ದಾರಂತ’
‘ಊ್ಞ ಮಾಡ್ಲಿ ಮಾಡ್ಲಿ
ಅದೆಂಗ್ ಚರ್ಮನ್ನಾದನು
ನಾನು ನೋಡ್ತಿನಿ’ ಅಂದಾಗ
‘ಬುದ್ಧಿ ನಾ ನಿಮ್ಜೊತ ಅವ್ನಿ’
ಅನ್ತ ಕೈ ಕಟ್ಟಿ ನಿಂತ ಅಯ್ನೋರಾ’
ಅನ್ತ
ಆ ಆಳು ಹೇಳ್ತಾ
‘ಅದ್ಕ ಅಯ್ನೋರಾ ನಾ ಹೇಳುದ್ದು
ನಿಮ್ಮೆದುರ್ಗ ನಿಲ್ಲಕಾದ್ದ…
ಆದ್ರ ಅಯ್ನೋರಾ
ಆ ಪರ್ಶುನೆ ಇಟಗಂಡು
ಆ ಪರ್ಶು
ಜೊತಲಿ
ಪಡ್ಡ ಅವ
ಆ ಪಡ್ವ ಹೊಡುದ್ರ
ಮುಗಿತು
ಅಂದ್ರ ಅಯ್ನೋರಾ
ನಿಮ್ ಸೋಲ್ಸ ನೆವ್ದಲ್ಲಿ
ಶಿವ್ಲಿಂಗಪ್ಪೋರು ಅವ್ರ
ಆದ್ರ
ಆ ಶಿವ್ಲಿಂಗಪ್ಪೋರ
ಖಜಾನನೆ
ಬರ್ದ್ ಮಾಡುದ್ರಾ..’
ಅನ್ತಂದ‌ ಆ ಆಳ್ನ
ರಾಜ್ಕೀಯ ಮಾತ್ಗ
ಬೆರಗಾದ
ಈ ಅಯ್ನೋರು
‘ಏ..
ಈ ಇದ್ಕ
ನೀನೆ ಸರಿ
ಈಗ
ನೀ ಹೋಗು’
ಅನ್ತ ಬೆನ್ತಟ್ಟಿ ಕಳಿಸಿ
ಆ ಆಳು
ಹೋದ ತೆವರಿ ದಾರಿನೆ
ನೋಡ್ತ ಮ್ಯಾಕ್ಕೆದ್ದು
ಅದೇನೋ ಲೆಕ್ಕಾಚಾರದಲ್ಲಿ
ಮಾಡ್ತಿದ್ದಂಗಾಯ್ತು.


ಗಾಳಿ ಬೀಸ್ತು
ಈ ಅಯ್ನೋರು
ಅಂಗಿ ಬಿಚ್ಚಿ
ಕಲ್ಲಾಸ್ಮೇಲ ಕುಂತ್ರು.
ಅಸ್ಟೊತ್ಗ
ಅಂವ
ಬೇಲಿ ನ್ಯಕ್ಕಂಡು ಬಂದ.

ಈ ಅಯ್ನೋರು
ಅಂವ ಬಂದದ ನೋಡಿ
‘ಇಂವ್ನೆ ಬಾ,
ನಿನ್ನೆ ನೋಡ್ತಾ ಇದ್ದಿ
ಅದೆ ಆ ಆಳಿದ್ನಲ್ಲ
ನೋಡಿದೆಲ್ಲ ಆ ಆಳ್ನ
ಅವ್ನೊಂದ್ಗ ಮಾತಾಡ್ತ ಇದ್ದಿ
ಈ ರಾಜ್ಕೀಯ ಆಳ್ವಾಗದ
ಇಲ್ಲಿ ಬ್ಯಾಡ
ಬಾ ಒಳಕ’ ಅನ್ತ
ಕಲ್ಲಾಸ್ ಬುಟ್ಟು
ತ್ವಾಟ್ದ ನಡ್ಮದ್ಯಕ್ಕ ಬಂದ್ರು.

ಆ ಆಳು
ರಾತ್ರಿಗೇನೇನ್ಬೇಕು
ಎಲ್ಲ ತಂದಿಟ್ಟಿದ್ದ.
ಆ ಆಳು
ಅನ್ತಾ.. ಆಳು
ಐನಾತಿ‌ ಆಳು
ಈ ಅಯ್ನೋರು
ಇಲ್ಲಿಗಂಟ
ಅರಿದೇ ಇರ ಆಳು

‘ಇವತ್ತು
ನಿನ್ನ ಕಾಣ್ತಿನಿ
ಅನ್ಕಂಡಿರ್ನಿಲ್ಲ
ಆದ್ರ ನೋಡು
ಜೊತ ಅಂದ್ರ ಜೊತ
ಸರಿ ಸುಮಾರು
ವಯ್ಸು ಒಂದೆ
ನಿ ಹಂಗೆ ಇದ್ದಯ್
ನಾನು
ಕಾಡು ಮೇಡು ಅಲ್ದಿ’
ಅನ್ತ ಬಾಟ್ಲಿಯ ಮುಂದ
ಮಡಿಕಂಡ್ರು
ಕಳ್ಳಪುರಿ
ಕಾರಸ್ಯಾವ್ಗ
ಗುಡ್ಡ ಹಿಡ್ದಿತ್ತು
ಒಂದೊಂದ್ ಸೆರ
ಬಾಯ್ಗ ಎರುಚ್ಕಂಡ್ರು

ಈಗ ಅಯ್ನೋರು
ಬಾಟ್ಲಿಯ ಎತ್ತಿ
ಗಟಗಟ ಹಿಗ್ಗುದ್ರು
ಅಂವ- ಅಂವ್ನೂ ಅಸ್ಟೆ
ಗಟಗಟ ಹಿಗ್ದ

‘ಅಯ್ನೋರಾ ನೀವೂ
ನನ್ನಂಗೆ ಇದ್ರಾ..’
‘ಇದ್ರ ಏನಾ..
ಊರಾಳಕಾಯ್ತಿತ್ತಾ
ನಿನ್ತರನೆ
ಕದ್ದುಮುಚ್ಚಿ ತಿರುಗ್ತಾ
ಟೇಸನ್ನು ಪೋಲೀಸು
ಅನ್ತ ಅಲಿತಾ
ನಿಂತ್ಕಳತರ ಆಗದು’
‘ಆದ್ರ..’ ಅನ್ತ
ಅಂವ ಬಾಟ್ಲಿ ಖಾಲಿ ಮಾಡಿ
ಇನ್ನೊಂದ್ ಬಾಟ್ಲಿ ಎತ್ಕಂಡ
‘ಆದ್ರ..
ಆ ದೇವಿಗಿಂತ
ಆ ಚಂದ್ರಿನೆ ಜೋಡಿ ಅಯ್ನೋರಾ
ಚಂದ್ರಿ ಅಂದ್ರ ತಿಂಗ್ಳು ತರಾನೆ ಇದ್ದ’
‘ಅದಾ..
ಅದು
ನಮ್ಮೊವ್ವ ಮಾಡುದ್ದು
ಮುಳ್ಳೂರ್ ನಂಟು
ನಮ್ಮೊವ್ವುಂದು
ಕಲ್ಲೂರು ಇಂವ್ನೆ.
ಶೇಕ್ದಾರ ಗೊತ್ತಿದ್ನ ನಿಂಗ
ಅಂವ ಮುಳ್ಳೂರ್ಗ
ಹೊಲ ತೋರ್ಸಕ ಕರ್ದಿದ್ನ
ಆ ಹೊಲ್ದಲ್ಲಿ
ಇವ ಅವರಕಾಯಿ ಬುಡುಸ್ತಿದ್ದ
ನಂಗ ತಡಿಯಕಾಗ್ದೆ
ಶೇಕ್ದಾರಿ ಕೇಳ್ದಿ
ಶೇಕ್ದಾರಿ ಬೆಚ್ದ
ಅದಾದ್ಮೇಲ
ನಿಂಗ ಹೇಳುದ್ದು ಅಲ್ವ’
ಅನ್ತ ಅಯ್ನೋರು ಬಾಟ್ಲಿಲಿ
ಉಳಿದ ಅರ್ಧವ ಎತ್ತಿ ಹಿಗ್ಗಿ
ಕಣ್ಣ ಅರುಳ್ಸಿ ನೋಡುದ್ರು

ಈ ಅಂವ,
‘ಆಯ್ನೊರಾ
ಅವತ್ತು ಅವ
ಅವರಕಾಯಿ ಸಾಲ್ಮ್ಯಾಲ
ನಿಮ್ಜೊತ
ತೊಡ ಮ್ಯಾಲ ತೊಡ ಹಾಕಂಡು..’
ಅನ್ತ ನಗಾಡ್ದ
ಈ ಅಯ್ನೋರು,
‘ಎಲ್ಲ ಆಯ್ತು
ನಂಗ ಮದ್ವ ಮಾಡಕ
ನಮ್ಮೊವ್ವ ಕಲ್ಲೂರ್ಗ ಕರ್ದ
ನಾನು ಮುಳ್ಳೂರ್ಗ ಅಂದಿ
ಅದ್ಕ ನಮ್ಮೊವ್ವ ಕಿರಿಕಿರಿ ಎಟ್ಟಿ
ಹಳಾ ಎಕ್ಡಲಿ ಹೊಡ್ದ ಇವ್ನೆ’
ಅನ್ತ ಅಯ್ನೋರು
ಕಣ್ಣೀರ್ಕಚ್ಕಂಡ್ರು

ಈ ಅಂವ
ಇನ್ನೊಂದ್ ಬಾಟ್ಲಿ ಹೆಂಡನ
ಕೊಟ್ಟು
‘ಅಯ್ನೋರಾ ತಡ್ಕಳಿ
ಆದ್ರ ನಿಮ್ಗೆ ಗೊತ್ತಿಲ್ದೆ
ನೀವ್ ನೋಡಿರ ಮನ್ಗೆ ಹೋದ್ರಿ’
ಅಂದ ಅಂವ.

ಈ ಅಯ್ನೋರು,
‘ಚಂದ್ರಿ
ಮುಳ್ಳೂರೆ ಆದ್ರು
ಅವ ಕಲ್ಲೂರೇ..
ನಮ್ಮೊವ್ವ ದಾಯ್ದಿ
ಅಣ್ಣನೇ..
ಅಣ್ಣನ ಮಗಳೇ…
ಆಗ
ಅವ್ವುನ್ಗ ಹೇಳ್ದಿ
ಅವ್ವ,
‘ಅಂವ
ಮುಳ್ಳೂರಲ್ಲ ಕಣ
ನಮ್ ಕಲ್ಲೂರೇ
ದೇವ್ತಿತರ ಅವ್ಳ ದೇವಿ’
ಅಂದ್ಲು.
‘ಅವ್ವೊವ್ ದೇವಿ ಅಲ್ಲ
ಚಂದ್ರಿ ಚಂದ್ರಿ’
‘ಏಯ್ ಬಂಚೊತ್
ಸುಮ್ಕಿರು’
ಅನ್ತ ಮೆಲ್ಗ ಕಿರಿ ಎಟ್ಟುದ್ಲು
ದೇವಿ ನೀರ್ಕೊಟ್ಲು
ಚಂದ್ರಿ ಇಣ್ಕಿ ನೋಡ್ತಿದ್ಲು.
‘ಅವ್ವವ್ ಅವ್ಳೆ’
‘ಏಯ್ ಮಗಾ
ಇವ ಮನ್ಗ ದೊಡ್ಡವ
ಅವ ಮನ್ಗ ಚಿಕ್ಕವ
ಅವ್ಳಲ್ಲ ಇವ’
ಗುಸುಗುಸು ಅಂದ.
ಗುಸುಗುಸು ಮಾತಾಡ್ತಿದ್ದವ್ರ
ಅವರಪ್ಪ ಗುರಪ್ಪ
‘ಏನ ಶಂಕ್ರಿ ಏನಾ ಹೇಳು’
‘ಏ ಅಣ್ಣ ಏನು ಇಲ್ಲ’
‘ಏನು ಇಲ್ದೆ ಏನಾ..’
ಅನ್ತ ನನ್ ಕಡ ತಿರುಗಿ
‘ಏನಾ ಹೇಳಿ’ ಅಂದ್ರು
‘ನಾನು ಚಂದ್ರಿನೆ ಇಸ್ಟ’ ಅಂದಿ
ಅದ್ಕ ಅವರಪ್ಪ
‘ದೊಡ್ಡವ್ಳ ಬುಟ್ಟು
ಚಿಕ್ಕವ್ಳ ಮಾಡಕಾದ್ದ’
‘ನಂಗ ಅವ್ಳೆ ಇಸ್ಟ’
‘ಚಿಕ್ಕವ, ಅವ ಓದಳ
ಚಿಕ್ಕವ್ಳ, ಓದಿರವ್ಳ
ಕ್ಯಾಮಿ ಮಾಡಂವ್ನಗ
ಮಾಡಕಾದ್ದ’ ಅನ್ತ
ಕಡ್ಡಿ ತುಂಡಾಗತರ ಮಾತಾಡ್ದ
ಅವ್ವ
ನನ್ನ ಕಿರಿಕಿರಿ ಎಟ್ಟಿ
ದೇವಿ ಎದುರ್ಗು
ಚಂದ್ರಿ ಎದುರ್ಗು
ಉಗುತ್ಲು.
ಆಗ
ಚಂದ್ರಿ
ಇಣ್ಕಿ ನೋಡ್ತಿದ್ದವ
ಕಾಣ್ಯಾದ್ಲು’
ಅನ್ತ ಹೇಳ್ತ
ಅಯ್ನೋರು ಬಾಟ್ಲ ತೂದಿ
ಎಸುದ್ರು.

ಆ ಅಂವ
‘ಅಯ್ನೋರಾ
ದೇವಿ ಜೊತ್ಗ ಮದ್ವ
ಅಂತಾದ್ಮೇಲ
ದೇವಿ ನೋಡ ನೆವ್ದಲಿ
ಚಂದ್ರಿ ನೋಡ್ಕ ಬತ್ತಿದ್ರಿ’
ಅಂದ.
ಈ ಅಯ್ನೋರು
‘ಆದ್ರ ಒಂಜಿನ
ಚಂದ್ರಿನು ನಾನು
ಚೀರ್ಗೊಬ್ಳಿ ಓಣಿಲಿ
ನಿಂತಿರಗ ನೋಡ್ಬುಟ್ಟು
ಅಳಿಯ ಆಗಂವ ಅನ್ನದ್ನು ಕಾಣ್ದೆ
ಕ್ಯಾಕುರ್ಸಿ ಉಗ್ತು
ಅವ್ಳ್ ಮುಂದಲ ಹಿಡ್ದು
ಎಳ್ಕ ಹೋದ್ನಲ್ಲಾ…
ಅವತ್ತೆ ಅವತ್ತೇ
ಮಚ್ರ ಮಡಿಕಂಡಿ
ಚಂದ್ರಿನೇ ಮಾಡ್ಕಳದು ಅನ್ತ’

ಈ ಅಂವ,
‘ಅಯ್ನೋರಾ,
ಆದ್ದೆಲ್ಲ ಆಯ್ತು
ಆಮೇಲೇನಾಯ್ತು
ಗೊತ್ತು ಬುಡಿ
ಚಂದ್ರಿದು ಹೇಳುದ್ರ ನಂಗ ಸಂಕ್ಟ’
‘ಊ್ಞ ಸಂಕ್ಟ ನಿಜ.
ಆದ್ರ ಅದಾದ್ಮೇಲ
ಚಂದ್ರಿಗ
ಮನನು ಮಾಡಿದ್ದಿ
ಕೂಸು ಚೆನ್ನಗಿತ್ತು
ನಿ ಇರು ಬತ್ತಿನಿ ಅನ್ತನು ಹೇಳಿದ್ದಿ
ಕಾಸುಕರಿಮಣಿ ಬೇಕಲ್ಲ
ಅವ್ವ ಇವ್ಳ ಕರ್ಕ ಬಂದಿರದು
ನಾ ಕಣಿ
ನಾ ಇತ್ತಗ ಬಂದಿ
ಬಂದೇಟ್ಗೆ ವಸ್ಗನು ಆಗೋಯ್ತು
ಏನಾ ಆಯ್ತು
ಅಸ್ಟೊತ್ಗ ಅವರಪ್ಪ
ಅಲ್ಲಿ ಚಂದ್ರಿನ
ನಾ ಇರ್ಸಿದ್ದ
ಆ ಮನ್ಗ ಬಂದು
ಆ ಊರವ್ರ್ ಗ
ಆ ಮನ್ಯವ್ರ್ ಗ
ದಂಡು ದಾಳಿ ತಂದು
ಗಲಾಟಿ ಮಾಡ್ಸಿ
ಕೂಸು ಅನ್ನದು ಕಾಣ್ದೆ
ಬೀದಿಗ ಎಸ್ದು
ದೇವಿಗನ್ನಾಯ ಆಗಕ ಬುಡದಿಲ್ಲ
ನಿನ್ನ ಕೊಚ್ಚಾಕಿ ಟೇಸನ್ಗೊಯ್ತಿನಿ
ಅನ್ತ ರಂಪ ಮಾಡ್ದಾಗ
ಇವ ದಾರಿ ಕಾಣ್ದೆ
ಅಲ್ಲಿ ಇಲ್ಲಿ ತಿರಿಕಂಡು
ಕೊನ್ಗ
ಆ ಅರ್ಧರಾತ್ರಲಿ
ಮಿಂಚು ಗುಡ್ಗು ಮಳಲಿ
ಓಡ್ಬಂದು ಬಾಗ್ಲು ಕುಟ್ದಾಗ
ಬೆಮ್ಮನ್ಸಿ ಆಗಿದ್ದ ದೇವಿ
ಅವ್ಳ ನೋಡ್ಬುಟ್ಟು
ಹಂಗೇ
ಹಿತ್ಲು ಬಾಗ್ಲಿಂದ
ಕಳಿಸಿ
ನನ್ ಚಂದ್ರಿ ಸಾವ್ಗ
ಕಾರ್ಣ ಆದ್ಲಲ್ಲೊ….

ಆ ನನ್ ಚಂದ್ರಿ
ಆ ಕೂಸ ಎಲ್ಲೊ ಬುಟ್ಟು
ಆ ಕಪಲ ಬಾವಿಲಿ
ತೇಲ್ತ ಇದ್ಲಲ್ಲೊ….
ಆ ತೇಲ್ತ ಇದ್ದ
ಚಂದ್ರಿನ
ಆ ಕಾಲ ಗುಟ್ ಗುಟ್ಟಾಗಿ
ಮಣ್ಣ ಮಾಡುದ್ನಲ್ಲೊ…
ಆ ಮಣ್ ಮಾಡ್ದ ಗೋಳ
ನನ್ಕೈಲಿ ತಡಿಯಕಾಗ್ದೆ
ನಾ ದೂರ ಹೋದ್ನಲ್ಲೊ…
ನಾ ಹೋದ್ದೇ ನೆಪ್ಪಾಗಿ
ಆ ಕಾಲುನ್ ಜಗುಲಿಲಿ
ಆ ನನ ಕಂದ
ಕಿಲಕಿಲ ಆಡ್ತ ನಗ್ತ ಅಳ್ತ
ಕಾಲಾಡುಸ್ತ ಮಲ್ಗಿತಂತಲ್ಲೊ….
ಆ ಕಾಲ ಚೆಲ್ವಿ
ಮೋಸ ವಂಚ್ನ
ಮಾಡುದ್ದು ನಂಗಿಂಕ್ರು
ತಿಳನಿಲ್ವಲ್ಲೊ…..’
ಅನ್ತ ಹೇಳೇಳ್ತ ಬೆವರಿ
ಆ ಬೆವರು ಇಳಿವಾಗ
ಗಾಳಿ
ತಿಸ್ಸನೆ ಬೀಸ್ತು

ಆಗ
ಈ ಅಯ್ನೋರು ಮ್ಯಾಕ್ಕೆದ್ದು ನಿಂತ್ರು
ಅಂವ
ಅಯ್ನೋರ್ನೇ ನೋಡ್ತಾ
ಮಾತಾಡ್ಬೇಕಾ ಬ್ಯಾಡ್ವ ಅನ್ತ
ಮ್ಯಾಕ್ಕೆದ್ದ ಅಯ್ನೋರ್ ತರಾನೆ
ತಾನೂ ಮ್ಯಾಕ್ಕೆದ್ದು
ಅಯ್ನೋರ್ ಮೊಖನೆ
ನೋಡ್ತ
ನಿಂತ್ಕಂಡೊತ್ತು ಸರೊತ್ತು.


-೪೮-
ನೀರು ದೊದ್ಗುಟ್ಗ
ಹರಿತಿತ್ತು
ಮೋಟ್ರು ದಡ್ಗುಟ್ಗ
ಸದ್ಮಾಡ್ತಿತ್ತು
ಆ ಆಳು
ಎಲ್ಕೋಟ್ಲಿ ಇಕ್ಲಿ ಮಾಡಿ
ನೀರೋಗ ದಾರಿ ಮಾಡ್ತಿದ್ದ
ನಾ ಸುತ್ತ ನೋಡ್ದಿ
ತ್ವಾಟವೇ ಕಾಣ್ತು
ನಾನ್ಯಾಕ ತ್ವಾಟ್ದಲಿದ್ದನು
ಇಸ್ಟೊತ್ಗೆ..
ಅನ್ತ ಅನ್ನುಸ್ತು

ಈ ಅಯ್ನೋರು
ರಾತ್ರ ಕುಡ್ದು ಚಿತ್ತಾಗಿ
ನನ್ನ ಇಲ್ಲೆ ಬುಟ್ಟೋಗರಲ್ಲಾ..
ಅದು ಯಾರಾ
ನನ್ತರನೇ ಅವ್ನಲ್ಲ
ಇದ್ಯಾಕ ಇಲ್ಲಿ ಬಿದ್ದಿದನು
ಅನ್ನುಸ್ತು
ಅಸ್ಟೊತ್ಗ
‘ಇದ್ಯಾಕ ನನ್ನೆ ನೋಡ್ದಯ್
ನಾ ಏನ್ ಮಾಡ್ದಿ’
‘ಅಲ್ಲಕನಪಾ
ನಿ ಯಾರ ಅನ್ತ ನೋಡ್ದಿ’
‘ನಾನಾ
ರಾತ್ರ ಅಂವ ಬಂದಿದ್ನಲ್ಲ
ಅವ್ನ ಕಾಲ್ಲೆ ಇದ್ದಂವ’
‘ಹ್ಞ ನೀನಾ..
ಇದ್ಯಾಕ ಇಲ್ಲಿದೈ’
‘ಅಂವ ನಿಮ್ ಅಯ್ನೋರ್ ಜೊತ್ಗ
ಕುಡ್ದು ಚಿತ್ತಾಗಿ
ನನ್ನೂ ಬುಟ್ಟು ಹೋಗನ’
‘ಈ ಕುಡುಕ್ರೆ ಹಿಂಗ’
‘ಊ್ಞಂಕನಪೊ..’
‘ನಿ ಯಾವೂರ ಹೇಳಿಯಾ
ನಿನ್ ಯಜಮಾನ ಏನ್ ಮಾಡಿನು’
‘ಅಂವೇನ್ ಮಾಡಿನು
ಕಳದು ಕೊಲದು..
ಹೊಡೆದು ಬಡ್ಯಾದು..’
‘ಅಂವ್ನ ಇದೇನ ಈ ಮಾತು’
‘ಅಪ್ಪೊ ಉಂಕನಪ್ಪೊ
ಹೆಡ್ತಿ ಮಕ್ಕ ಇಲ್ಲ
ಜಬದಾರಿನೇ ಇಲ್ಲ
ರಾತ್ರಾತ್ರ ಅಲ್ಲಿ ಇಲ್ಲಿ ನುಗ್ಗಿ
ಲೂಟಿ ಮಾಡದು
ಈ ಸುತ್ಮುತ್ತೂ ಊರೂರ್ ಮುಖಂಡ್ರೂ ನೆಪ್ಪು
ನಿಮ್ ಅಯ್ನೋರ್ ಸಂಗ್ಡ
ನಾ ಬರಕು ಮುಂಚಿಂದ ಅದ’
‘ಅಂದ್ರ ಕಳ್ಳ ಅನ್ನು’
‘ಕಳ್ಳಾ..
ಕೊಲ್ಪಾತ್ಕ ಕೊಲ್ಪಾತ್ಕ’
‘ಅಂದ್ರ ನಿಂಗ್ಯಲ್ಲ ಗೊತ್ತಾ’
‘ಇಂದ್ಗ ಐದಾರ್ ತಿಂಗ್ಳ ಮಾತು
ಬಿಲಗೆರಹುಂಡಿ ಓಣಿತವು
ಮೆದ ಬೆಂದು ಬಸ್ಮ ಆಯ್ತು’
‘ಊ್ಞ ನೋಡಿದ್ದಿ
ಅಸ್ಟೊತ್ಗೆ ಅಲ್ಲಿ ಅಯ್ನೊರಿದ್ರು
ನೀರ್ಕಡ ಹೋಗಿ
ಒಂದ್ ಬಳ್ಸು ಬಳ್ಸಿದ್ದು ನೆಪ್ಪು’
‘ಊ್ಞ ಆ ಮೆದ ಕಸ್ದಂವ
ಇಂವ್ನೆ ನನ್ ಮೆಟ್ಟಂವ್ನೆ’
‘ಮೆದ ಕಸ್ಸುದ್ರ ಏನ್ ಸಿಕ್ಕಿದು
ಇದ್ರ ಹಸ್ಗಾದ್ರು ಮೇವಾಯ್ತ’
‘ನಿಂಗ ಇದರ್ ಮರ್ಮ ಗೊತ್ತಿಲ್ಲ
ಆ ಮೆದ ಕಸ್ಸುದ್ಮೇಲ
ಅಂವ್ನ್ ಕೈಲಿ
ಚಿಂದುಂಗ್ರ ಇದ್ದು
ಮೆದ ಬೆಂದು ಬೂದಿಯಾಗಿ
ಏಳೆಂಟ್ ಜಿನ ಆದ್ಮೇಲ
ಯಣ್ದ ಬೆಂದಿರ ವಾಸ್ನ ವಡಿತಿತ್ತು
ಅದಾದ್ಮೇಲ ಪೋಲಿಸವ್ರು
ಬಂದ್ರು ಹೋದ್ರು
ಯಣ ತಕ್ಕಂಡೋಗಿ ಸುಟ್ರು
ಇದಾದ್ನೇಲ
ನಿಮ್ ಅಯ್ನೋರು
ನಮ್ಮಿಂವ
ಇಬ್ರೂ ಜಿನಾ ರಾತ್ರ
ಕಲ್ಬುಟ್ರ ಓಣಿಲಿ ಸೇರದು…
ಮೆದ ಬೇಯದು
ವಾರ ಅದ ಅನ್ನಾಗ್ಲು
ಅದೆ ಓಣಿ ಸೇರಿದ್ರು’
‘ಊ್ಞ ನೆಪ್ಪಾಯ್ತು ಬುಡು’
ಅನ್ಕಳ ಹೊತ್ಲಿ
ಆ ಆಳು
ಎಲ್ಕೋಟ್ಲಿ ನಮ್ಮಿಬ್ರುನು
ಎಳ್ದು ಬಿಸಾಕಿ
ಕಡ ಪಾತಿಗ ನೀರ್ ಕಟ್ಟಿ
ಕಟ್ಟ ಮ್ಯಾಲ ಕುಂತು
ಬೀಡಿ ಕಚ್ದ.


ಬಿಸ್ಲು ಏರ್ತಿತ್ತು
ಈ ಅಯ್ನೋರು
ಬಂದಂಗ ಆಗ್ನಿಲ್ಲ
ಆದ್ರ ತಡಿ ಒದ್ದು
ಶಂಕ್ರಪ್ಪೋರು ದಸ್ಸಬುಸ್ಸಂತ
ನಗುರ್ತ ನಗುರ್ತ
ಓಡ್ಬಂದಂಗಾಯ್ತು

ಆಗ ನಂಗ ದಿಗ್ಲಾಯ್ತು
ಈ ಶಂಕ್ರಪ್ಪೋರು ಯಾಕ ಇಂಗಾಡಿರು..
ಈಗ ಎಲಕ್ಷನಲ್ವ
ಈ ಅಯ್ನೋರು
ಈ ಶಂಕ್ರಪ್ಪೋರ್ ಮಾತ
ಲೆಕ್ಕುಕ್ಕೆ ಇಟ್ಟಿಲ್ಲ
ಈ ಶಂಕ್ರಪ್ಪೋರ್ಗ
ಈ ಅಯ್ನೋರು
ಆಸ್ತಿ ಕೊಟ್ಟರಾ…
ಜೊತ್ಗ ಜಾತ್ಯಲ್ಲದ ಜಾತಿ ಹೆಣ್ಣ
ಮದ್ವ ಆಗಿ
ಇಲ್ಲು ಇಲ್ಲ ಅಲ್ಲು ಇಲ್ಲ
ಎಲ್ಲು ಇಲ್ಲ ಕೆಲ್ಸ ಎಲ್ಲಿದ್ದು ಕೆಲ್ಸ
ಅಲ್ಲೂ ಯಾರೂ ಸೇರ್ಸಲ್ರು
ಈಗ ಈತರ ಆಗಿ
ಈ ಶಂಕ್ರಪ್ಪೊರ್ಗ ಬುದ್ದಿನೇ ಕಳ್ಕಂಡಗದ

ಈ ಆಳು
ಈ ಶಂಕ್ರಪ್ಪೋರ್ ಓಡ್ಬಂದ್ ದೆಸ್ಗ
ಸೇದ್ತಿದ್ ಬೀಡ್ಯಾ ಉಗ್ತು
ಕೈಕಟ್ಟಿ ನಿಂತು
‘ಬುದ್ಯಾರ’ ಅಂದ.
ಈ ಶಂಕ್ರಪ್ಪೋರು ಆ ಆಳ್ ಮಾತ್ನ
ಕೇಳುಸ್ಕಂಡ್ರೊ ಕೇಳುಸ್ಕಳ್ನಿಲ್ವೊ
ತ್ವಾಟ್ದೊಳಕ ಓಡೋಗಿ
ಮಾಯ್ವಾದ್ರು
ಆಗ
ಇನ್ನೊಂದ್ ಗುಂಪು ಓಡ್ಬಂತು
ಗುಂಪಂದ್ರ ಗುಂಪು
ಹತ್ತಾರ್ ಜನಾನೆ ಇದ್ರು
ವಸಿ ನೆಪ್ಪಿದ್ದಗಿತ್ತು
ಸ್ವಾಸ್ಲಿ ಕಡ ಜನ ತರ ಇದ್ರು
‘ಹಿಡ್ಕಳ ಸೂಳ ಮಗುನ್ನ’
ಅನ್ತ ಓಡುದ್ರು
ಆ ಆಳು ದಂಗಾಗಿ
ಅಲ್ಲೆ ಬಿದ್ಕಂಡ.


ಮದ್ಯಾನ ಕಳಿತು
ಬಿಸ್ಲು ರವ ಕಮ್ಮಿ
ಆದಂಗಾಯ್ತಿತ್ತು

ನಾಕಾಯ್ತು
ಐದಾಯ್ತು
ಆರಾಯ್ತು
ಏಳಾಯ್ತು
ಎಂಟಾಯ್ತು

ಈ ಅಯ್ನೋರು ಪತ್ತೆನೆ ಇಲ್ಲ
ನಂಗು
ನೋಡಿ ನೋಡಿ ಸುಸ್ತಾಯ್ತು
ಈ ಆಳು ನಮ್ಮಿಬ್ರುನು
ದಿಕ್ಕಾಪಾಲ ಎಸ್ದು
ಇಕ್ಲಿ ಮಣ್ಣು ಮ್ಯರ್ಕಂಡು
ಬಿಗಿತಿತ್ತು

ಆಗ
ಲೈಟ್ಕಂಬ ಬೆಳುಕ್ಲಿ
ಆ ಆಳು ಕಂಡ್ನ
ಆ ಆಳುನ್ ಜೊತ್ಗ
ಆ ನನ್ ಒಡಿಯ ಕಾಲಯ್ನು ಕಂಡ್ನ
ಆ ಆಳು
ಬ್ಯಾಟ್ರಿನ ಬುಟ್ಗಂಡು ಬಂದಿದ್ನ
ಆ ಬ್ಯಾಟ್ರಿ ಬೆಳ್ಕು
ನನ್ತವ್ಕ ಬಂದು ನನ್ ಮೊಖುಕ್ಕ ಬಿಳ್ತು
‘ಆ ಇಲ್ಲವ ಕಯ್ಯವ್
ಅಯ್ಯಯ್ಯೊ ಮಣ್ಣಾಗದ
ತಕ್ಕ ಇಲ್ಲಿ ತೊಟ್ಡಿಗಾಕಿ ತೊಳಿ
ಈ ಅಯ್ನೊರು ಉಗಿತರ’
ಅನ್ತ ನನ್ನ ಎತ್ಕಂಡು
ಕಾಲಯ್ನ ಕೈಗ ಕೊಟ್ನ
ಕಾಲಯ್ಯ ನನ್ನ ತೊಳ್ದು
ಅಲ್ಲೆ ಒರುಗ್ಸುದ್ನ.

ಈಗ ನನ್ ಒಡಿಯ ಕಾಲಯ್ನು
ಆ ಆಳೂ
ಬೀಡಿ ಸೇದ್ತ ಕುಂತ್ರು
ಇಬ್ರು ಬಾಟ್ಲಿ
ಏರ್ಸಿರತರ ಕಾಣ್ತು
ಮಾತುಕತ ಹಂಗಿತ್ತು

ಆ ಆಳು
‘ಶಂಕ್ರಪ್ಪೋರು ಒಳಕೋದವ್ರು
ಬರ್ನೆ ಇಲ್ಲ ಕಾಲ’
‘ಹಂಗಾದ್ರ ಎಲ್ಲಿಗೋದ್ರು’
‘ನಂಗ ಗ್ಯಾನನೇ ತಪ್ಪೋದಗಾಯ್ತು’
‘ಸುನಿತವ್ವೋರು ಆ ಮಗೂ
ಸತ್ತು ಮನ್ಗಿರದ ಈ ಕಣ್ಲಿ ನೋಡಕಾಗ್ನಿಲ್ಲ’
‘ಇವ್ರೆ ಸೇತ್ವ ಇಂದ ತಳ್ಳಿ ಸಾಯ್ಸಿದರಾ’
‘ಶಿವ್ನೆ ಬಲ್ಲ’
‘ಆದ್ರ ಇಂಜದಲಿ ಸುನಿತವ್ವೋರು ಕಡೇವ್ರು
ಓಡುಸ್ಕ ಬಂದದ ನೀ ನೋಡಿದ್ರ
ಉಚ್ಚ ಉಯ್ಕಳೈ
ಅಯ್ಯವ್ ಅವ್ರು
ನಮ್ ಶಂಕ್ರಪ್ಪೋರ ಉಳಿಸಿರಾ’
‘ಅಯ್ನೋರು ಅವ್ರ ಸರಿ ಮಾಡ್ತ ಬುಡು’
‘ಅದೇನ್ ಸರಿ ಮಾಡಿರ ನಾ ಕಾಣಿ ಶಿವ್ನೆ’
‘ಅಯ್ನೋರ್ಗ ಗೊತ್ತಾಗಿದ್ದಾ..’
‘ಅವ್ರು ಶೇಕ್ದಾರ್ನ ನೋಡಕ ಅನ್ತ
ಹೋಗಿದ್ದರನ್ತ ಅವ್ರ್ ಗ ಗೊತ್ತಾ ಏನಾ
ಅಲ್ಲಿ ನೀಲವ್ಯಾರ ಸ್ವಾಕ ನೋಡಕಾಯ್ತಿಲ್ಲ’

ಎನ್ತ ಕೆಲ್ಸ ಆಯ್ತು

ಯಾಕ ಸುನಿತವ್ವೋರ್ನು
ಅವ್ರ್ ಮಗೂನು
ಸೇತ್ವ ಮ್ಯಾಗಿಂದ ತಳ್ಳಿ ಸಾಯ್ಸುದ್ರು
ಇದು ನಿಜ್ವಾ…

ಆ ಆಳು
ಆ ನನ್ ಒಡಿಯ ಕಾಲಯ್ಯ
ಆಡ ಮಾತು
ಈ ಕತ್ಲೊಳಗ ತರಾವರಿ ಕಾಣ್ತಿತ್ತಲ್ಲ ಶಿವ್ನೇ…

ಅ ಆಳು
ಆ ನನ್ ಒಡಿಯ ಕಾಲಯ್ಯ
ಮಾತು ಮಾತು ಇನ್ನು ಏನೇನಾ ಮಾತು
ಗಂಟ್ಯಾದ್ರು ಮುಗಿದು

ಒಂಭತ್ತಾಯ್ತು
ಹತ್ತಾಯ್ತು
ಆಗ
ಅಲ್ಲಿ
ತಡಿ ಸದ್ದಾದಗಾಯ್ತು
ಇಲ್ಲಿ
ಆ ಆಳು ನನ್ ಒಡಿಯ ಕಾಲಯ್ಯ
ದಡಕ್ಕಂತ ಮ್ಯಾಕ್ಕೆದ್ದು
ಬ್ಯಾಟ್ರಿ ಬುಡ್ತ ಅತ್ತ ಕಡ ನಡುದ್ರು….

-ಎಂ.ಜವರಾಜ್


ಮುಂದುವರಿಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x