‘ಪಾಠವೂ ಮುಖ್ಯ, ಪ್ರಾಣವೂ ಮುಖ್ಯ’: ಬೀರೇಶ್ ಎನ್ ಗುಂಡೂರ್

ಈ ವಯಸ್ಸಿಗೆನೇ ಮೊಬೈಲ್ ಅಬ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆಲ್ಲಾ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು ಹೊಡ್ಡು ಬಡ್ಡು ಕೂರಿಸುತಿದ್ದಾರೆ. ಪರದೆಯ ಮೇಲೆ ಇಟ್ಟ ದೃಷ್ಟಿ ಸ್ವಲ್ಪ ಕದಲಿದರೆ ಸಾಕು, ನೀನು ಸರಿಯಾಗಿ ಕಲಿಯುತ್ತಿಲ್ಲ. ಫೀಸ್ ಕಟ್ಟಿದಿವಿ. ಕಲಿಲಿಲ್ಲ ಅಂದ್ರೆ ಅಷ್ಟೇ ಈ ವರ್ಷ, ಅಂತ ರಾಗ ಹಾಡುತಿದ್ದಾರೆ. ಮಕ್ಕಳಿಗೆ ಇದೊಂತರ ವಿಚಿತ್ರ ಅನಿಸುತಿದ್ದೆ. ಇಷ್ಟು ದಿವಸ ಮೊಬೈಲ್ ಕೇಳಿದರೆ ಕಣ್ಣು ಬಿಡುತಿದ್ದವರು…ಈಗ ಅದೇ ಮೊಬೈಲ್ ಕೊಟ್ಟು ದಿಟವಾಗಿ ನೋಡು, ಕೇಳಿಸಿಕೊ ಅಂತಿದ್ದಾರಲ್ಲ ಅಂತ ಕನ್ಫ್ಯೂಷನ್ ಆದಂತಿರಬೇಕು. ಅದು ಬಿಡಿ. ಪಾಲಕರೆಲ್ಲಾ, ಈ ಆನ್ಲೈನ್ ಕ್ಲಾಸ್ಸಸ್ ಅರ್ಥನೆ ಆಗ್ತಿಲ್ಲ ಮಕ್ಳಿಗೆ, ಸುಮ್ನೆ ದುಡ್ಡು ಹಾಳು ಅಂತ ಮುಖ ಮುರಿಯುತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಶಾಲೆ ಆರಂಭಿಸುವ ಬಗ್ಗೆ ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು ಅಂತ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಿದೆ. ಕೋರೋನಾ ಸಂಖ್ಯೆಯಂತೂ ಕೇಳಲೇಬೇಡಿ. ಹುಚ್ಚು ಕುದುರೆಯಾಗಿ ಓಡುತ್ತಿದೆ. ಈಗ ಪಾಲಕರದ್ದು ಶಾಲೆಗೆ ಕಳುಹಿಸುವ ಭಯ. ಏನಾದರೂ ಹೆಚ್ಚು ಕಮ್ಮಿಯಾದರೆ ಜವಾದ್ಬಾರರು ಯಾರು ಎನ್ನುವುದು. ಇದೊಂದು ವಿಷಯದಲ್ಲಿ, ಪ್ರೈವೇಟ್ ಮತ್ತು ಗವರ್ಮೆಂಟ್ ಸ್ಕೂಲ್ ಒಟ್ಟಿಗಿಟ್ಟು ಅನುಮಾನಿಸುತಿದ್ದಾರೆ. ಇನ್ನೊಂದು ಬೆಳವಣಿಗೆ ಪತ್ರಿಕೆಯಲ್ಲಿ ಓದಿದ್ದು…, ಈಗೀಗ ಈ ಪ್ರೈವೇಟ್ ಫೀಸ್ ಹಾವಳಿ ಮತ್ತು ಬೆಲೆಬಾಳದ ಆನ್ಲೈನ್ ಕ್ಲಾಸ್ಸಸ್ ಅಂತ ಬೇಸತ್ತು ಈ ಮಂದಿಯೆಲ್ಲಾ.. ಸರಕಾರಿ ಶಾಲೆಗಳ ಕಡೆಗೆ ಮುಖ ಮಾಡಿದ್ದಾರೆ ಎನ್ನುವುದು.

ಅದೇನೇ ಇರಲಿ, ಇಷ್ಟು ದಿನ ಎಲ್ಲಾ ಮಕ್ಕಳಿಗಂತು ಹೆಣ ಭಾರದಂತಹ ಬ್ಯಾಗ್ ಹೊರುವುದು ತಪ್ಪಿದ್ದು ಹಾಗೂ ಅಂಗಳದಲ್ಲಿ ಕುಣಿದು ಕುಪ್ಪಳಿಸಲು ಸಮಯ ಒದಗಿ ಬಂದದ್ದು ಮಾತ್ರ ಅನೋನ್ಯ. ಮಕ್ಕಳು ಒಳಗೊಳಗೆ ಖುಷಿ, ಇದು ಹೀಗೆಯೇ ಮುಂದುವರೆಯಲಿ ಅಂತ. ಬಾಲ ಸುಟ್ಟ ಬೆಕ್ಕಿನ ಹಾಗೆ ಓಡುವ ಈ ಮಂದಿಯ ಮಧ್ಯೆ ಬಾಲ್ಯವೆನ್ನುವುದು ಎಷ್ಟು ಅದ್ಭುತ ಅಂತ ಈ ಕರೋನ ತಿಳಿಸಿರಬೇಕು. ಸರಕಾರಿ ಶಾಲೆಯ ಮಕ್ಕಳಿಗೆ ಬಹಳ ವ್ಯತ್ಯಾಸ ಆಗಿರಲಿಕ್ಕಿಲ್ಲ, ಏಕೆಂದರೆ ಅಂಗಳದಲ್ಲಿ ಆಟ ಎನ್ನುವ ಪರಿಪಾಠ ಸರಕಾರಿ ಶಾಲೆಯಲ್ಲಿ ಇನ್ನೂ ಮಾಸಿಲ್ಲ. ಇದೆಲ್ಲದರ ಮಧ್ಯೆ ಪಾಠ, ಕಲಿಕೆಗಳನ್ನು ಮರೆಯುವಂತಿಲ್ಲ. ಹಾಗಂತ ಈ ಸಂಧರ್ಭದಲ್ಲಿ ತೆರೆಯುವುದು ಎಷ್ಟು ಸರಿ ಎನ್ನುವುದು ಎಲ್ಲರ ವಿರೋಧ. ದೊಡ್ಡವರಾದ ನಾವೇ ಸಾಮಾಜಿಕ ಅಂತರವನ್ನು, ಮಾಸ್ಕ್ ಅಂತ ಎಷ್ಟರ ಮಟ್ಟಿಗೆ ಪಾಲಿಸುತಿದ್ದೇವೆ. ಅಂತದ್ದರಲ್ಲಿ ಶಾಲೆಗಳ ಪ್ರಾರಂಭ ಎಷ್ಟು ಸಮಂಜಸ ಅನ್ನುವುದು ದೊಡ್ಡ ಪ್ರಶ್ನೆ. ಮಕ್ಕಳು ಏನೇ ಮಾಡಿದರು ಗುಂಪು ಸೇರುತ್ತಾರೆ. ಅದರಲ್ಲೂ ಈ ವೈರಸ್ ವೇಗ ತುಂಬಾನೇ ಜೋರಿದೆ. ನಿಯಂತ್ರಣ ಕಷ್ಟ ಸಾದ್ಯ ಎನ್ನುವುದು ಸಾಂಧರ್ಭಿಕ. ಒಂದು ವೇಳೆ ಸರಕಾರ ಶಾಲೆಗಳನ್ನು ತೆರೆಯುವುದೇ ಆದರೆ ಅದೊಂದು ಅದ್ಭುತ ಚಾಲೆಂಜ್ ಮತ್ತು ಅವಕಾಶ ಎಂದರೆ ತಪ್ಪಾಗಲಿಕ್ಕಿಲ್ಲ. ಅವಕಾಶ ಏಕೆಂದರೆ, ಮಕ್ಕಳಿಗೆ ಶುಚಿತ್ವ, ಸಾಂಕ್ರಾಮಿಕ ರೋಗದ ಹರಡುವಿಕೆ, ನಿಯಂತ್ರಣ ಮುಂತಾದ ವಿಷಯಗಳ ಬಗ್ಗೆ ಬರೀ ಪುಸ್ತಕಗಳಲ್ಲದೆ ಪ್ರಾಯೋಗಿಕವಾಗಿ ದಿನನಿತ್ಯ ಜೀವನದಲ್ಲಿ ಕಲಿಸಿಕೊಡುವ ಹಾಗೂ ಪಾಲಿಸುವ ಅವಕಾಶ ಮಾಡಿಕೊಳ್ಳುವುದು. ಮುಖ್ಯವಾಗಿ ಈ ಶಿಸ್ತು ಪಾಲಿಸುವುದಿದೆಯಲ್ಲ, ಅದು ಮಕ್ಕಳಿಗೆ ಕರಗತ ಮಾಡಿಸುವುದು.

ಒಳ್ಳೆಯ ಶಿಸ್ತು, ಸರಿಯಾದ ಸುಂದರ ಜೀವನಕ್ಕೆ ಹಾದಿ ಎನ್ನುವುದನ್ನ ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಇದೊಂದು ಅವಕಾಶ ಎಂದದ್ದು. ಇದೊಂದು ಚಾಲೆಂಜ್ ಎನ್ನುವವರಿಗೆ ಲೋಕ್ಕ್ದೌನ್ , ಮಾಸ್ಕ್, ಆಗಾಗ ಕೈ ತೊಳೆಯಿರಿ ಅಂತ ಹೇಳಿದಾಗಲೂ ಅದೇ ಚಾಲೆಂಜ್ ಅಂತ ಅನಿಸಿತ್ತು. ಈಗ ನೋಡಿ, ಒಗ್ಗಿಕೊಂಡಿದ್ದೇವೆ. ಹಾಗೆಯೇ ಇದು. ಆದರೆ, ಪರಿಪಾಲನೆ ಎಂಬುದು ಇಲ್ಲಿ ತುಂಬಾ ಮುಖ್ಯವಾದ ಅಂಶ. ಅದೇನೇ ಇರಲಿ, ತೆರೆಯುವುದೇ ಆದರೆ, ಬಹಳ ದಿನಗಳ ನಂತರ ಶಾಲೆಯ ಸಮವಸ್ತ್ರದಲ್ಲಿ ಅಂದವಾಗಿ ಸಿಂಗರಿಸಿ ಓಡೋಡಿ ಬರುವ ಮಕ್ಕಳಿಗೆ ಶಾಲೆ ಭಯದಂತೆ ಕಾಣದಿರಲಿ. ಆ ಮಕ್ಕಳ ಮುಗ್ದ ಸ್ನೇಹ ಮತ್ತೆ ಜೊತೆಯಾಗಲಿ. ಸಂಭ್ರಮಿಸಲಿ. ವಿಶೇಷವಾಗಿ ಸರಕಾರಿ ಶಾಲೆಗಳು ಯಾವುದೇ ರಾಜಿಯಿಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಮೈಗೂಡಿಸಿಕೊಂಡು ಅಭಯ ನೀಡಲಿ ಎನ್ನುವುದು ಆಶಯ. ಮೇಷ್ಟ್ರುಗಳಿಗೆ ಆ ನಿಷ್ಕಲ್ಮಶ ‘ಪ್ರೀತಿ ಮತ್ತು ಕಾಳಜಿ’ ಅಷ್ಟೇ ಇಲ್ಲಿ ಬಹುಮುಖ್ಯ.

ಈ ನಿಟ್ಟಿನಲ್ಲಿ, ಒಂದಷ್ಟು ಅನಿಸಿಕೆಗಳು;
-ಶಾಲೆ ಆರಂಭವಾಗುವ ಮುನ್ನವೇ ಎಲ್ಲಾ ಕೊಠಡಿಗಳು ಸ್ಯಾನಿಟೈಸರ್ ನಿಂದ ಒದ್ದೆಯಾಗಲಿ.
-ಧೂಳು ಹಿಡಿದ ಕೊಠಡಿಗಳು ಪೊರಕೆಯ ಸನಿಹ ಬಳಸಿ ಸ್ವಚ್ಚ ಭಾರತ್ ಅನುಭವಿಸಲಿ. ಶಾಲೆಯ ಆವರಣವೆಲ್ಲ ಚಂದವಾಗಿ ಸಿದ್ದವಾಗಲಿ, ಮಕ್ಕಳನ್ನು ಕೈ ಬೀಸಿ ಕರೆಯಲಿ.
-ಪ್ರತಿದಿನ ಶಾಲಾ ಪ್ರವೇಶಕ್ಕೆ ಮುನ್ನವೇ ದೇಹದ ಉಷ್ಣಾಂಶ ಖಚಿತ ಪಡಿಸಿಕೊಂಡು ಒಳಗೆ ಬಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವುದು.
-ಪ್ರತಿ ಕೊಠಡಿಯಲ್ಲಿ ನಿಗದಿತ ಅಂತರ ಕಾಪಾಡಿಕೊಳ್ಳುವ ಹಾಗೆ ಕುಳಿತುಕೊಳ್ಳುವ ಗುರುತು ಹಾಕಿದ್ದರೆ ಮಕ್ಕಳನ್ನು ಮ್ಯಾನೇಜ್ ಮಾಡುವುದು ಇನ್ನೂ ಸುಲಭ. ಆ ದೆಸೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು.
-ಪಾಲಕರಿಗೆ ಸಭೆ ಕರೆದು, ಮೊದಲು ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿಕೊಟ್ಟು, ಮಕ್ಕಳಿಗೆ ಖಾತ್ರಿಪಡಿಸುವ ಹಾಗೆ ತಲೆಗೆ ತುಂಬುವುದು.
-ಶಾಲೆಯ ಆವರಣಗಳಲ್ಲಿ ಸ್ಯಾನಿಟೈಸರ್ ಸ್ಟ್ಯಾಂಡ್ ಗಳನ್ನು ಅಳವಡಿಸುವುದು ಮತ್ತು ಆಗಾಗ ಅದರ ಉಪಯೋಗ ಮಕ್ಕಳಿಗೆ ಕರಗತ ಮಾಡಿಸುವುದು. ಈ ನಿಟ್ಟಿನಲ್ಲಿ ಆಯಾ ಊರಿನ ಸಂಘ ಸಂಸ್ಥೆಗಳು ಕೃಪೆ ತೋರಿದರೆ ಸರಕಾರಿ ಶಾಲೆಗಳಿಗೆ ಇನ್ನೂ ಉತ್ತಮ. ಆದಷ್ಟು ತರಗತಿಯ ಅವಧಿಗಳನ್ನು ಕಡಿಮೆಗೊಳಿಸಿ ಶನಿವಾರವು ಕೂಡ ಪೂರ್ತಿ ದಿನ ಶಾಲೆ ನಡೆಸುವುದು. ಹಾಗಾದರೆ ಮಾತ್ರ ಈ ವರ್ಷದ ಶೈಕ್ಷಣಿಕ ಕಲಿಕೆ ಪೂರ್ತಿಗೊಳಿಸಲು ಸಾದ್ಯ ಎನ್ನುವುದು.
-ಶಿಕ್ಷಕರು ಕಡಿಮೆ ಇರುವ ಕಡೆಗೆ ಅಥವಾ ಅವಧಿಗಳ ಕೊರತೆ ಕಂಡು ಬಂದಲ್ಲಿ ಆನ್ಲೈನ್ ಸೌಲಭ್ಯವನ್ನ ನಿರ್ದಿಷ್ಟ ಮಾದರಿಯಲ್ಲಿ ಆರೋಗ್ಯಪೂರ್ಣವಾಗಿ ನಿಗದಿತ ಸಮಯಕ್ಕೆ ಮಾತ್ರ ಬಳಸಿಕೊಳ್ಳುವುದು.
-ವೈಯಕ್ತಿಕ ಆಟೋಟಗಳಿಗೆ (ಅಥ್ಲೆಟಿಕ್ಸ್) ಹೆಚ್ಚು ಪ್ರಾಮುಖ್ಯತೆ ಕೊಡುವುದು ಮತ್ತು ಆ ಮೂಲಕ ಅಂತರ ಕಾಯ್ದುಕೊಂಡು ಪಾಲಕರಿಗೆ ಅಭಯ ಮೂಡಿಸುವುದು. ಮಕ್ಕಳಿಗೆ ಆಟೋಟಗಳ ಅವಕಾಶದ ಕೊರತೆಯೂ ಬಾರದು.
-ಸರಿಯಾಗಿ ಮಾಸ್ಕ್ ಧರಿಸುವುದನ್ನು ಮಕ್ಕಳಿಗೆ ಕಡ್ಡಾಯ ಮಾಡುವುದು ಮತ್ತು ಅದರ ಮಹತ್ವವನ್ನು ಮಕ್ಕಳಿಗೆ ಅರ್ಥ ಮಾಡಿಸುವುದು.
-ರೋಗದ ಲಕ್ಷಣಗಳ ಬಗ್ಗೆ ಅರಿವು ಮೂಡಿಸಿ ಯಾವುದೇ ಭಯ ಇಲ್ಲದೆ ಗಮನಕ್ಕೆ ತರುವ ವಾತಾವರಣ ನಿರ್ಮಿಸುವುದು.
-ಹತ್ತಿರದ ಆರೋಗ್ಯ ಕೇಂದ್ರಗಳ ಸಂಪರ್ಕದಲ್ಲಿದ್ದು ಸಾಂಧರ್ಭಿಕ ವ್ಯವಸ್ಥೆ ಕಲ್ಪಿಸಿಕೊಡುವ ಬಗ್ಗೆ ಖಚಿತ ಪಡಿಸುವುದು
-ಬಿಸಿಯೂಟದ ತಯಾರಿ ಮತ್ತು ಹಂಚಿಕೆಯಲ್ಲಿ ಕ್ರಮಬದ್ದ ಶಿಸ್ತು ರೂಪಿಸಿಕೊಳ್ಳುವುದು ಮತ್ತು ಜಾರಿಗೊಳಿಸುವುದು. ಇತ್ಯಾದಿ…,
ಇಲ್ಲೆಲ್ಲಾ, ಶಿಕ್ಷಕರಿಗೆ ಗೋಳು ಎನಿಸಬಹುದು. ಆದರೆ ಅತ್ಯಂತ ಗೌರವ ಹೊತ್ತ ಆ ವೃತ್ತಿ ಮಕ್ಕಳನ್ನು ಪ್ರೀತಿಸುತ್ತದೆ. ನಿಸ್ಸಾಹಕವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಈಗ ಎಲ್ಲರಿಗಿರುವ ಅದಮ್ಯ ನಂಬಿಕೆ. ಎಲ್ಲಾ ಉಡಾಫೆ ದೂರ ಮಾಡಿ, ಸಂದರ್ಭಕ್ಕೆ ತಕ್ಕ ಸೇವೆ ಕೊಡುತ್ತದೆಯಾ ವ್ಯವಸ್ಥೆ? ಕಾದು ನೋಡಬೇಕು.

-ಬೀರೇಶ್ ಎನ್ ಗುಂಡೂರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x