-೪೩-
ಮದ್ಯಾನ ಮೂರಾಗಿ
ಬಿಸುಲ್ಲಿದ್ರ ಚುರ್ ಅನ್ತ
ನೆಳ್ಗೋದ್ರ ಸಳಿಡ್ಯತರ ಆಗದು
ಈ ದನುರ್ಮಾಸ್ವೆ ಹಿಂಗೆಲ್ವ
ಈ ಅಯ್ನೋರು
ತ್ವಾಟುದ್ ಮನಲಿ
ಬಿಸುಲ್ಗೊಸಿ ನೆಳ್ಗೊಸಿ
ಎದ್ದು ಬಂದು ಕುಂತ್ಗಳದು
ಹಿಂಗೆ ಎಡ್ತಾಕರು
ಸುಗ್ಗಿ ಈಗ
ಅರ್ಧ ಒಕ್ಣ ಆಗಿ
ಇನ್ನರ್ಧ ಇತ್ತು
ಕಾಯಮ್ಮಾಗಿ ಚೆಲ್ವಿ ಬರವ
ಹಿಂಗ
ಬಿಸುಲ್ಗು ನೆಳ್ಗು ಎಡ್ತಾಕ
ಅಯ್ನೋರ್ ಕಾಲ್ದೆಸಲಿ
ಚೆಲ್ವಿ ಕುಂತ್ಕಂಡು,
‘ಅಯ್ನೋರಾ ಸವ್ವಿ ಹೆಂಗಿದಳು
ಅಂವ ಚೆಂಗುಲಿ ನೋಡಿನಾ..’
‘ನೋಡು ಸುಮ್ಗ ಇದ್ಬುಡು
ಮಾತಾಡಿ ಮಾತಾಡಿ
ಊರ್ಗ ಆರ ಯಾಕಾದೈ’
‘ಆರ್ತಿಂಗ ಆಗದ ಮಗಿಗ
ನಂಗ ಜೀವ ಬಡ್ಕತ್ತ ಅಯ್ನೋರಾ’
‘ಜೀವ ಬಡ್ಕಂಡುದಾ..
ಹೆತ್ಕರ್ಳು ಬಡ್ಕಳ್ದೆ ಇದ್ದಾ..’
‘ಅಯ್ನೋರಾ ಒಗ್ಟಾಗಿ ಆಡ್ಬೇಡಿ
ಕರ್ಳು ಕರ್ಳೇ..’
‘ಆ ಕರ್ಳ ನಿ ಹೆಂಗ್ ನೋಡ್ಕಬೇಕು,
ಕರ್ಳನ್ತ ಕರ್ಳು..
ಅವ್ಳ್ ಬಗ್ಗ ಸೊಲ್ಲತ್ಬೇಡ
ಅಂವ ಇಲ್ವ ಗಂಡ್ಸು. ಗೊತ್ತಿಲ್ವ..’
ಅನ್ತ
ಈ ಅಯ್ನೋರು ಮ್ಯಾಕ್ಕೆದ್ದು
ನನ್ನ ಅಲ್ಲೆ ಬುಟ್ಟು ನೆಳ್ಗ ಸರಿಸಿ
ತಿಗುನ್ ಮರ ಬಳ್ಸಿ ಒಳಕ್ಕೋದ್ರು.
ಆಗ
‘ಏ ಚೆಲ್ವಿ..
ಏ ಚೆಲ್ವಿ..
ಏಯ್..ಬಾಬಾ
ಬಾಯಿಲ್ಲಿ’
ಕಾಲಯ್ಯ ಕೂಗ್ದ
ಚೆಲ್ವಿ,
‘ಏ.. ಬಾ’ ಅನ್ತ ಕಾಲುನ್ನೆ ಕರುದ್ಲು
ಚೆಲ್ವಿಯ ಮಾತ್ಗ
ಹೆಗ್ಲಲಿರ ಚೀಲನ
ಅಲ್ಲೆ ಇಟ್ಟು
ತಡಿನ ತಗ್ದು
ಪಣ್ಣಂತ ನೆಗ್ದು
ತೆವರಿ ಮ್ಯಾಲ
ಉಂಟಾಡ್ಕಂಡು ಬಂದ.
ಈ ನನ್ ಕಾಲಯ್ಯ ಹಿಂಗೆ
ಸುಮ್ನ ಅಂಗ್ಡಿಲಿ ಕುಂತ್ಕಂಡು
ಮೆಟ್ಟೊಲ್ದು
ನಾಕ್ಕಾಸ್ ಸಂಪನ್ನ ಮಾಡದ್ಬುಟ್ಟು
ಚರ್ಮುದ್ ನೆವ್ದಲ್ಲಿ
ಊರೂರ್ ತಿರ್ಗದು
ಬಿಸುಲ್ಗ ಬೆಂಕಿಗ ಸುಸ್ತಾಗಿ
ಸಿಕ್ಕುತ್ತವ್ ಮನಿಕಳದು
ಒಂದ್ಜೊತ ಏಡ್ಜೊತ ಕರ್ಚಾದ್ರ
ಅದೆ ಸುಗ್ಗಿ.
ಅಸ್ಟೊತ್ಗ ಸಂದ ಆಗಿ
ಹೆಂಡ್ದಂಗ್ಡಿತವ್ ಜಮ ಆಗಿ
ಚೆಲ್ವಿತವ್ ಕಿರಿಕಿರಿ ಎಟ್ಟುಸ್ಗಳದು
ಬರಿ ಇದೆ ಆಯ್ತು.
‘ಏಯ್ ಇಲ್ಯಾಕ ಬಂದ
ಬಾ
ಮೂರ್ಜೊತ ಕರ್ಚಾದು
ಬಾ
ಹಂಗೆ ತಾಯೂರೋಣಿಲಿ
ಎಮ್ಮ ಸುಲಿತಿದ್ರು..’
ಅಂದೇಟ್ಗೆ ಚೆಲ್ವಿ ಬಾಯ್ಮೇಲ
ಬೆಳ್ಳಿಟ್ಲು
ನನ್ ಒಡಿಯಾ ಕಾಲಯ್ಯ
ಬೆಚ್ಚಿ ಬೆರಗಾಗಿ ಪಿಸ್ಗುಟ್ತ
‘ಚರ್ಮನ ಅಲ್ಲೆ ಕಲ್ಮೇಲ
ಒಣಾಕ್ಬುಟ್ಟು ಬಂದಿನಿ
ವಸಿ ಬಾಡೂ ತಂದಿನಿ
ಅಲ್ಲಿ ತಡಿ ಬಾಗುಲ್ತವ್ ಇಟ್ಟಿನಿ
ಬಾ’
ಅನ್ತ ಪೀಡುಸ್ದ.
‘ಅಲ್ಲ ನಿಂಗ ಗ್ಯಾನ ಬ್ಯಾಡ್ವ
ಸವ್ವಿ ಬಗ್ಗ ಏನ್ಯಾರ ಗ್ಯಾನ ಮಡ್ಗಿದಯ
ಇಂದ್ಗ ಆರ್ತಿಂಗ
ಕಳ್ಳು ಕರ್ಕನ್ತುದ’
ಅನ್ತ ಕಣ್ಣಲ್ಲಿ ಕಣ್ಣೀರ್ ಕಚ್ಕಂಡ್ಲು.
‘ಏ ಅದ್ಯಾಕ ಅತೈ
ನಂಗು ಹಂಗೆ ಕಣ
ಅವ ಮನ ಬೆಳ್ಕು ಕಣ
ಅವ ಬಂದ್ಮೇಲೆ ಅಲ್ವ
ಪರ್ಶು ಹುಟ್ಟುದ್ದು..
ಆ ಮನ ಬೆಳ್ಕ ನೋಡ್ದೆ ಇರಕಾದ್ದ
ಈ ಅಯ್ನೋರ್ ಕೇಳ್ಕಂಡು
ನೋಡಿ ಬರ್ಬೇದ’
‘ಊ್ಞಂಕನ ಹಂಗೆ ಅನ್ಕಂಡಿ’
ಅನ್ತ ಮಾತಾಡ್ಕತ ಇರಾಗ
ಈ ಅಯ್ನೋರು
ಕೆಮ್ತ ಕ್ಯಾಕುರುಸ್ತ ಬಂದ್ರು.
‘ಏಯ್ ಏನಾ ಹುಡಿಕಂಡು
ಇಲ್ಲಿಗಂಟ ಬಂದಿದೈ
ಅಂಗ್ಡಿ ತಗದಿಲ್ವೊ ಬಂಚೊತ್’
‘ಅಯ್ನೋರಾ,
ತಾಯೂರ್ ಕಡಲಿ ಚರ್ಮಿತ್ತು
ಹಂಗೆ ವಸಿ ಮಾಡಿರವಿತ್ತು ಕರ್ಚಾಗ್ದೆ
ಹಿಂಗೆ ಬರ್ವಾಗ ತಡಿ ಸಂದಿಲಿ ನೋಡ್ದಿ
ಇವಿರದು ಕಾಣ್ತು ಬಂದಿ’
‘ಊ್ಞ ನೋಡಿಲ್ಲಿ ವಸಿ ಕೀಳಂಗದ
ಒಂಚೂರು ಗುದ್ದಾಕು
ಸಾಮಾನೆಲ್ಲ ಇದ್ದವ’
‘ಅಯ್ನೋರಾ ಇರಿ ಬಂದಿ’
ಅನ್ತ ಓಡ್ದ
ಹಾಗೆ ಓಡ್ತ ಚೀಲ ತಂದ
ತಡಿ ಬಾಗುಲ್ಲಿ ಚೀಲ ಮಡ್ಗಿ ಬಂದಿದ್ನಲ್ಲ..
ಈ ಕಾಲಯ್ಯ
ಅದೇನ್
ಜಬದಾರಿಲಿ ಕೆಲ್ಸ ಮಾಡಿನಾ..
ನನ್ನ ಎತ್ಕಂಡು
ಮೊಖ ಮುಸುಡಿನೆಲ್ಲ
ಉಜ್ಜಿ
ಮೂಲ್ ಮೂಲನು
ಅಮ್ಕಿ ಚಿಮ್ಕಿ
ಗಟ್ಟಿ ಚರ್ಮನ ಹಾಕಿ
ದಾರಲಿ ಹೊಲ್ದು
ಅಚ್ಕಟ್ಟಾಗಿ
ಅಯ್ನೊರ್ ಕಾಲ್ಗ ಇಟ್ಟ.
ಈ ಅಯ್ನೋರು
ನನ್ನ ಮೆಟ್ಟಿ
‘ಅಲಲಲ ಏನ್ಲಾ
ಜಬರ್ದಸ್ತ್ ಕಲ
ಮೆಟ್ಟ ಹೊಲಿಯಾಕ
ನೀನೆ ಸರಿ ಕಲ’
ಅನ್ತ ಪಂಚ ಎತ್ತಿ
ಚೆಡ್ಡಿ ಜೋಬ್ಗ
ಕೈಯಾಕಾಗ್ದಾಗ
ಎಲ್ಲ ಕಾಣ್ತು.
ಈ ಚೆಲ್ವಿ
ನೋಡುದ್ರೂ ನೋಡ್ನೇ ಇಲ್ವೇನೋ
ಅನ್ ತರ
ಈ ಅಯ್ನೋರು
ಇದುರ್ ಬಗ್ಗ ಗ್ಯಾನ್ವೆ ಇಲ್ವೆನೊ
ಅನ್ನ ತರ
ಈ ಕಾಲಯ್ಯ
ಅಯ್ನೋರ್ ಮಾತ್ಗ ನೋಡ್ತ ನಗಾಡ್ತ
ಅದೆ ಹೊತ್ಗ ಅಯ್ನೋರ್ ಕೈಲಿಂದ
ಕಾಲಯ್ನ್ ಕೈ ತುಂಬಿ ತುಳುಕಾಡ್ತಲ್ಲೊ….
ಈಗ
ಕೈ ತುಂಬಿ ತುಳಕಾಡೊ ಹೊತ್ತಲ್ಲಿ
ಎಮ್ಮ ಬಾಡುನ್ ಗಮಲು ಹೊತ್ತು
ಸವ್ವಿ ಗ್ಯಾನ ಅಲ್ಲೆ ಬುಟ್ಟು
ನಗಾಡ್ತ ಮಾತಾಡ್ತ ಬಿರಬಿರ ನಡುದ್ರಲ್ಲೋ…..
-೪೪-
ಈಚೀಚ್ಗ
ಪಂಚಾಯ್ತಿ ಎಲೆಕ್ಷನ್ದೆ ಮಾತು
ಈ ಅಯ್ನೋರು
ತ್ವಾಟುತ್ತವ್ ಕುಂತ್ಕಂಡು
ಬಂದೋರಿಗೆಲ್ಲ
ಕುಡಿಸದು ತಿನ್ಸದು ಇದೆ ಆಯ್ತು.
ಈ ನೀಲವ್ವೋರು
ತಲಬಾದಿ ನಗ್ಡಿ ಅನ್ತ
ಮನ್ಗಿ
ಮೂರ್ಜಿನ ಆಯ್ತು
ಈ ದೊಡ್ಡವ್ವ
ಬರದು ಹೋಗದು
ಮೆಣ್ಸ್ ನೀರು
ಜೀರ್ಗ ನೀರು
ಕೊತ್ಮುರಿ ನೀರು
ಶುಂಟಿ ನೀರು
ಕಾಯ್ಸಿ
ಮಳ್ಸಿ
ಕುಡಿಸದೆ ಆಯ್ತು.
ಈ ಅಯ್ನೋರು
ಜಿನಾ ಒಂದೊಂದ್
ಹೊಸೊಸ್ದು
ಬೆಳಿ ಪಂಚ
ಬೆಳಿ ಅಂಗಿ ಇಕ್ಕಂಡು
ಟರ್ಕಿ ಟವಲ್ಲ ಹೆಗುಲ್ಗ ಹಾಕಂಡು
ಈಚ ಬಂದು
ನನ್ನ ಎತ್ತಿ ಚೆನ್ನಾಗಿ ಒರ್ಸಿ
ಕಾಲ್ಗ ಮೆಟ್ಟಿ ನಿಲ್ಬೇಕಾರ
‘ಕುಸೈ,
ಗೂಡುನ್ ಪ್ಯಾಟ್ರಿ ಡಾಕುಟ್ರ ಬರೇಳು
ಇವ ಸ್ಯಾನೆ ಬಿದ್ದೊಗಳ’
‘ಏ ಏನಾಗಿದ್ದು ಅನ್ತ ಇಂಗಾಡಿಯೇ
ನೀರೇನ ಎತ್ಯಾಸ ಆಗದ
ಎಲಕ್ಷನ್ ಹೊತ್ಲಿ
ಬುಡ್ತಿ ಎಲ್ಲಿದ್ದು ನಂಗ’
‘ಅವ್ಳ್ ಸಂಕ್ಟುಂಕ್ಕಿನ್ತ
ನಿನ್ ಎಲಕ್ಷನ್ನೇ ಹೆಚ್ಚಾಯ್ತ..’
‘ನೋಡು ನಿಂಗ ಇದೆಲ್ಲ
ಅರ್ತ ಆಗಲ್ಲ ಬತ್ತಿನಿ ಇರು’
ಅನ್ತ ಪುರಪುರನೆ ನಡಿತಿರಗ
ದಾರಿಲಿ ಶಂಕ್ರಪ್ಪೋರು ನಿಂತಿರದು
ಕಾಣ್ತು.
ಈಗ
ತ್ವಾಟ್ವೆ ಮನ್ವಾಗಿ
ಈ ಮನ್ಯಾಗಿದ್ ಮನೆಲ್ಲ
ಕೇರ್ ಕೇರಿ ಜನ್ವೆ ಜನ
ಯಾವ್ಯಾವ್ ಕೇರಿಲಿ
ಯರ್ಯಾರ್ ನಿಂತ್ಕತಿದ್ದರು
ಅನ್ತ ನೋಡ್ಕಬಂದು ಹೇಳಕೊಬ್ಬ.
‘ಅಯ್ನೋರಾ..’
ಅಳ್ತಿರ ದನಿ ಕೇಳ್ತು.
ಈ ಅಯ್ನೋರು
ಅದ್ಯಾರ ಅನ್ತ
ತಲ ಎತ್ತುದ್ರು
‘ಅಯ್ನೋರಾ ನನೈದ ಚೆಂಗುಲಿ
ಇಂದ್ಗ ಊರ್ ಬುಟ್ಟು
ಏಳೆಂಟ್ ತಿಂಗ್ಳೆ ಆಯ್ತು
ಅಂವ ಕಾಸ್ನು ಕಳಿಸ್ತಿದ್ನ
ಅದೂ ಅಮಾಸ್ಗು ಹುಣ್ಣುಮ್ಗು
ಈಗೀಗ ಅದೂ ಇಲ್ಲ
ಅಂವ ಎಲ್ಲಿದ್ದನು ಏನ್ಮಾಡ್ತಿದ್ದನು
ಇಂಕ್ರೂ ತಿಳಿದು
ವಸಿ ನೋಡೇಳಿ’ ಅನ್ತ
ಕಾಲ್ನ ಮುಟ್ತ ಚೆಂಗುಲಿ ಅವ್ವ
ಗಳಗಳನೆ ಅಳಕ
ಶುರುಮಾಡುದ್ಲು.
ಈ ಅಯ್ನೋರು
ಅಳ್ತಿರ
ಚೆಂಗುಲಿರೊವ್ವುನ್ನ
ಮೆಲ್ಗ ಏಳ್ಸಿ
‘ಅಂವ ನನ್ತವ ಇದ್ದಂವ
ಸುಮ್ನ ನನ್ತವೆ ಇದ್ದಿದ್ರ
ರಾಜ ರಾಜುನ್ತರ ಇರ್ತಿದ್ನ
ನಂಗು ಹೇಳ್ದೆ
ಅದೆಲ್ಲಿಗೋದ್ನ ಅನ್ನದೇ ಕಾಣಿ.
ಕಾಸು ಕರಿಮಣಿ
ಸಂಪನ್ನ ಜೋರಾಗ್ಬುಟ್ಟು
ಮೈಮರ್ತನ ಅನ್ಸುತ್ತ
ಬತ್ತನ ಬುಡು.
ಈಗ ನಿಂಗು ಗೊತ್ತಿರಗ
ಎಲಕ್ಷನ್ ಹೊತ್ತು
ನಂಗು ಬುಡ್ತಿ ಇಲ್ಲ
ನಿ ಹೋಗು
ನಾ ನೋಡ್ತಿನಿ’
ರಾತ್ರ ಸ್ಯಾನೆ ಹೊತ್ತೆ
ಆಗಿತ್ತು
ಅವತ್ತು ಬಂದಿದ್ನಲ್ಲ
ಹಬ್ಬದೊತ್ಲಿ
ಏಳೆಂಟ್ ತಿಂಗ್ಳೆ ಆಯ್ತಲ್ವ
ಅದೆ ಅಂವ ಬಂದ.
ಅಂವ ಬರದೆ ಹಿಂಗ
ರಾತ್ರನಾಗ.
ಇಡಿ ತ್ವಾಟ್ವೆ ಗಕುಂ ಅನ್ನದು
ಅಂವ ಬಂದದ ನೋಡ್ಬುಟ್ಟು
‘ಏ ಇವ್ನೆ ಬಾ
ಇಲ್ಲಿಗಂಟ ಬರಿ ಜನ್ವೆ’
‘ಅಯ್ನೋರಾ ನಾ ಬಂದೇ
ಗಂಟ ಮೇಲಾಯ್ತು
ಜನ ನೋಡ್ದಿ
ಹುಣ್ಸ ಮರ ಹತ್ತಿ ಕುಂತ್ಗಳಗಾಯ್ತು’
‘ಎಲಕ್ಷನ್ನು ಅಂದ್ರ ಸುಮ್ನೆಯಾ..
ನಿನ್ನ ನಂಬಿನಿ
ಈ ಸಲ ಪಂಚಾಯ್ತಿ..’
‘ಬುಡಿ ಅಯ್ನೋರಾ
ತಲ ಬಿಸಿ ಯಾಕ..’
ಅನ್ನಕು ಈ ಅಯ್ನೋರು
ಹೆಂಡದ ಬಾಟ್ಲಿ
ಕೊಡಕು ಒಂದಾಯ್ತು.
ಅಂವ ಅಯ್ನೋರ್ ಕೊಟ್ಟ
ಹೆಂಡದ ಬಾಟ್ಲಿ ಈಸ್ಕಂಡು
ಗಟಗಟ ಕುಡ್ದ
ಈ ಅಯ್ನೋರೂ
ಅಂವ ಕುಡ್ದ ಗಳುಗ್ಗೆ
ತಾವೂ ಕುಡುದ್ರು
ಕುಡಿತಾ ಕುಡಿತಾ
ಆ ಮಾತು ಈ ಮಾತು ಆಡ್ತ
ಕಳ್ಳಪುರಿ ಕಾರಸ್ಯಾವ್ಗ ಮುಕ್ತ
ಇಬ್ರೂ ಒಂದ್ ಹದ್ಕ ಬಂದಗಿತ್ತು.
ಅಂವ ಬಾಟ್ಲೆತ್ತಿ ಇಳ್ಸಿ
ತೊದುಲ್ತ ತೊದುಲ್ತ
‘ಇಲ್ಲಿಗಂಟ ನೀವೇಳಿದ್ನೆಲ್ಲ
ಮಾಡಿಲ್ವ ಅಯ್ನೋರಾ..’ ಅಂದ
ಈ ಅಯ್ನೋರು
ಅಂವ್ನ ಮಾತ್ಗ ತಲದೂಗ್ತ
‘ಏ ಇಂವ್ನೆ ನಾ ಇಲ್ಲ ಅನ್ನಾ…
ನನ್ಜೊತನೆ ಇದ್ಕಂಡು
ಬೋಳಿಮಗ ನಂಗೆ ಚೂರಿನಾ..
ನನೈದ ಶಂಕ್ರ ಕುಲ ಸೇರ್ಸಿ
ಹೇಳ್ದಾಗ್ಲೆ ಗೊತ್ತಾದ್ದು ಇಂವ್ನೆ…
ಕಂತಕಟ್ಟ ಮಾಳುಕ್ಕೇ ಕೈಯಾಕನಲ್ಲ…
ಎಸ್ಟಾ ಪೊಗ್ರು..
ನನೈದುನ್ಗ ಉತ್ರುಸ್ಸಕಾಗ್ದೆ
ಏನೇನ ಆಯ್ತು ಇವ್ನೆ’
ಅನ್ತ ಮ್ಯಾಕ್ಕೆದ್ದು ತೂರಾಡ್ತ
ಅಲ್ಲೆ ಪಂಚ ಎತ್ಗಂಡು
ಉಚ್ಚ ಉಯ್ತ ನಿಂತ್ರು.
ಅಂವ ಊ್ಞಂಕಂಡು
‘ಅಯ್ನೋರಾ ನಿಮ್ಮ ನಂಬಿನಿ
ನಿಮ್ ಪಾದ್ದಾಣು ನಂಬಿನಿ’
ಅನ್ತಂದ ಮಾತ್ಗ
ಈ ಅಯ್ನೋರು
ಉಚ್ಚ ಉಯ್ತನೆ ತಿರಿಕಂಡು
‘ಏ ಇಂವ್ನೆ
ನಾನಿರಗಂಟ ನಂದೆ
ಇದ ಈ ಮಾತ್ನ ನಿ ಬುಡು
ಈ ಊರಾಳದು
ಹೆಂಗ್ಯ ಅನ್ತ ನಂಗ ಗೊತ್ತದ’
ಅನ್ತ ಹಂಗೇ ಪಂಚ ಬುಟ್ಟು
ತಿರಿಕ ಬಂದು
ಅಂವ್ನ ಹೆಗುಲ್ಗ ಕೈಯಾಕಿ
ನಗುದ್ರು
ಅದ್ಯಾಕ ಏನ
ಅಂವ್ನೂ ನಗಾಡ್ದ..
–ಎಂ.ಜವರಾಜ್
ಮುಂದುವರಿಯುವುದು…