ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 41 & 42): ಎಂ. ಜವರಾಜ್

-೪೧-
ಮೊಕ್ಕತ್ತಲ ಬೆನ್ನು
ನಾ
ಇಂಜದಿಂದ ಹಿಂಗೆ
ಬೇವರ್ಸಿ ತರ ಆಗಿ
ಜಾಗ ಬುಟ್ಟು ಕದ್ಲಿಲ್ಲ
ಈ ಅಯ್ನೋರು
ಯಾವ್ದೇಶುಕ್ಕೋದ್ರು
ಅನ್ನದೆ ಗೊತ್ತಾಯ್ತಿಲ್ಲ

ಈ ಕತ್ಲೊಳ್ಗ
ಈ ದೊಡ್ಡವ್ವ
ಮೆಲ್ ಮೆಲ್ಗ ತಡಕಾಡ್ತ
ಬಾಗ್ಲ ತಳ್ಳಿ
‘ಕುಸೈ..’ ಅನ್ತ ಕೂಗ್ದ
ನೀಲವ್ವೋರು ಬಂದ್ರು ಅನ್ಸುತ್ತ
ಲಾಟೀನ್ ಬೆಳ್ಕು
ಈಚ್ಗಂಟ ಕಾಣ್ತು.

‘ಕುಸೈ..
ನಿನ್ಗಂಡ ಬದ್ನಾ’
‘ಇಲ್ಲ ಕಮ್ಮಾ..’
‘ನಿಂಗೊತ್ತಾ…
ಆ ಕಾಲ್ನೆಣ್ಣು ಸವ್ವಿ
ಓಡಗಿದ್ದಂತ’

ಲಾಟೀನ್ ಬೆಳ್ಕು
ಒಳಕ್ಕೇ ಹೋದಂಗಾಯ್ತು.


ಸರೊತ್ತು.
ಊರು ಗಕುಂ ಅನ್ತಿತ್ತು
ನಾಯ್ಗಳು ಗಳ್ಳಾಕ್ತಿದ್ದು

ನಾ ಇರ ಜಾಗುತ್ತವು
ಏನ ಓಡಾಡತರ ಆಯ್ತು.
ನನ್ ಮೈಮ್ಯಾಲು ಸುದಾ
ಓಡಾಡಂಗಾಗದು
ಬೀದಿ ಕಂಬ್ದಲಿ
ಲೈಟು ಪಿಣ್ಗುಟ್ಟದು

ಈ ಅಯ್ನೋರು
ಈಪಾಟಿ ಯವರ ಇಟ್ಗಂಡು
ಊರು ಕೇರಿ
ಸೀಮ ಸಮಾಚಾರನೆಲ್ಲ
ಮಾತಾಡ್ತ
ಈ ಮನ್ಗ
ಬೆಳ್ಗತರ ಒಂದ್ ಲೈಟಾಕುಸ್ಬೇಕು
ಅನ್ನ ಗ್ಯಾನ ಬ್ಯಾಡ್ವ..
ಈ ಕತ್ಲಲಿ
ನಾ ಏನಂತ ನೋಡ್ಲಿ
ನನ್ ಮ್ಯಾಲ ಓಡಾಡದೇನ…
ಈ ನಾಯ್ಗಳಂತು
ಓಡಾಡ್ತ ಗಳ್ಳಾಕ್ತ
ತಲ ಚಿಟ್ಟಿಡಿಸ್ತವ

ಅದೇನ ಸದ್ದು..
ಅವತ್ನಾಗೆ ಆಲ್ದೆಲ ತರಗು
ನೊರಕ ನೊರಕ ಅನ್ನತರ ಸದ್ದು

ಸಂದಿಲಿ ಗ್ವಾಡ ಹೊತ್ಗ
ಬೆಳ್ಕು ಬಿದ್ದಾಗಾಯ್ತು
ಅದೂ ಲಾಟೀನ್ ಬೆಳ್ಕಂಗೆ

ನಂಗ
ಆ ನಾಯ್ಗಳು
ಓಡಾಡದು ಗಳ್ಳಾಕದು
ಇಲ್ಲೇನ ನನ್ ಮೈಮ್ಯಾಲ ಓಡಾಡದು
ಇದರ ಸಂದಿಲಿ
ಆಲ್ದೆಲ ಸದ್ದು

ಬಾಗ್ಲು ಸದ್ದಾದಗಾಯ್ತು
ನೋಡ್ದಿ
ಕತ್ಲು ಕಾಣ್ದು
ಆದ್ರ ಸದ್ದಾದದು ಇದಲ್ಲ
ಹಿಂದ್ಲಿಂದ ಅನ್ನತರ ಆಯ್ತು.

ನನ್ ಮೈಮಾರನ
ಕಚ್ಚತರ ಆಯ್ತು
ನಾ ಏನ್ಮಾಡಗಿದ್ದದೂ..
ಅಳತರ ಆಯ್ತ ಅದ
ಕಚ್ಚದು ಕಿಚ್ಗುಟ್ಟದು
ಕಚ್ಚದು ಕಿಚ್ಗುಟ್ಟದು
ಓಡದು ಬರದು
ನಾನೂ ಅಂದಾಜಾಕ್ದಿ
ಅಲಲಲೇ..
ಈ ಅಯ್ನೋರೊಂಜಿನ
ರಾತ್ರನಾಗೇ
ಕುಡುದ್ ಗ್ಯಾನ್ದಲ್ಲಿ
ಓಡಾಡ್ಸಿ ಹೊಡುದ್ರೂ ಸಿಕ್ದೆ
ಆಟ ಆಡಿದೆಲ್ವ ಹೆಗ್ಗುಣುವೇ..

ಈಗ
ಜೋರಾಗಿ ಓಡ್ದಗಾಯ್ತು
ಆಲ್ದೆಲ ನೊರಕ ನೊರಕ ಅನ್ನೊ
ಸದ್ದೂ ಜೋರಾಗಿತ್ತು
ಈ ಹೆಗ್ಗುಣ್ವು
ಸರಗುಟ್ಕಂಡು ಓಡ್ದಗಾಯ್ತು
ಸಂದಿಲಿ ಕಾಣ್ತಿದ್ದ
ಲಾಟೀನ್ ಬೆಳ್ಕೂ ಕಾಣ್ದಗಾಯ್ತು


ನನ್ಗ ಒನ್ತರ ದಿಗಿಲು

ಈ ಸರೊತ್ಲಿ
ಈ ದೊಡ್ಡವ್ವನ ಸದ್ದು

ಈ ದೊಡ್ಡವ್ವ
ಹಿಂಗೆ
ಗಂಟಿಲ್ಲ ಗಳ್ಗಿಲ್ಲ
ಎದ್ದು ಎದ್ದು ಬರದು ಕೂಗದು

‘ಕುಸೈ ನೀಲ
ಮ್ಯಾವ್ ನೀಲ
ಅದೇನ ಸದ್ದು’

ಈ ದೊಡ್ಡವ್ವನ ಮಾತು
ಈ ಸರೊತ್ನ ಕತ್ಲಲ್ಲಿ
ಯಾರ್ ಕೇಳಿರೂ..

ಈ ದೊಡ್ಡವ್ವ
ಮೋರಿ ಮುಂದ ಕುಂತು
ಮೂತ್ರುಸ್ಬುಟ್ಟು
ನ್ಯಟ್ಗೋಗಿ ಮನಿಕಂಡಗಾಯ್ತು.

ನನ್ಗ ಇನ್ನೂ ದಿಗಿಲಾಗಿ
ಈ ಸರೊತ್ಲಿ
ದಬಗುಟ್ಗಂಡು ಓಡುದ್ಯಾರಾ…
ಈ ಆಲ್ದೆಲನು ಸದ್ದಾದಗಾಯ್ತಲ್ಲಾ….


-೪೨-
‘ನೀಲವ್ಯಾರ
ಅವ್ವೊವ್ ನೀಲವ್ಯಾರ..’

ಕೂಗ್ತಿರದು ಕೇಳ್ತು
ಈ ದನಿಯ ಕೇಳ್ದಗದಲ
ಅನ್ತನ್ತ ಮಂಪ್ರ ಕಣ್ಣ
ಮೆಲ್ಗ ಬುಟ್ಟು ನೋಡುದ್ರಾ
ತಲ ಕೆರಿತಾ ನಿಂತಿರಂವ
ಒಡಿಯಾ ಕಾಲಯ್ಯ..

ಇನ್ನು ಬೆಳ್ಕರಿದೇ ಇಲ್ಲ
ಇದೇನ ಮೊಬ್ಗೆ ಬಂದಿದನು..
ಈ ಅಯ್ನೋರು ಬರೇಳಿರ್ಬೇಕು
ಅವ್ರ್ ಹೇಳ್ದೆ ಬಂದನಾ..

ಹೀಗ್ಯಾಕ ಇವ್ನ ಬರೇಳಿದರೂ..

‘ಅವ್ವೊವ್ ನೀಲವ್ಯಾರ..’
ಹಂಗೇ ಕೂಗ್ತನೇ ಅವ್ನ
ಕೂಗಗಂಟ ಕೂಗಿ
ಲೈಟ್ಕಂಬ ಒರಿಕಂಡು
ಬೀಡಿ ಹಚ್ಗಂಡು ಸೇದ್ತ ಕುಂತ

ಅಂವ ಬಾಗುಲ್ದಿಕ್ಕೇ ನೋಡ್ತಾ
ಬೆಳ್ಕರಿತಾ
ಸೂರ್ ಮ್ಯಾಲ
ಬಿಸುಲ್ ಕೊನ ಬೀಳ್ತಾ
ಈಗ
ಈ ನೀಲವ್ವೋರು
ಕಿರುಗುಟ್ಟ ಬಾಗ್ಲ ತಗಿತಾ
ಕೆಮ್ತ ಆಕುಳುಸ್ತ ಇಣುಕುದ್ರು.
ಅದ ನೋಡ್ದ ಒಡಿಯ ಕಾಲಯ್ಯ
‘ಅವ್ವೊ ಈಗೆದ್ರ್ಯಾ..’
‘ಇದೇನಯ್ಯ ಯಾಳವತ್ಗೆ’
ಅನ್ನಕು
ಈ ದೊಡ್ಡವ್ವ
‘ಕುಸೈ’ ಅನ್ತ ಕೂಗಕು ಒಂದಾಯ್ತು.

ಈ ದೊಡ್ಡವ್ವ
ಕುಸೈ ಅನ್ತ ನೀಲವ್ವೋರ ಕೂಗ್ಬುಟ್ಟು
ಅದೆ ಕಾಲುಕ್ಕ
ಈ ಕಾಲಯ್ಯ
ಲೈಟ್ಕಂಬ ಒರಿಕಂಡು
ಕುಂತದ ನೋಡ್ಬುಟ್ಟು
‘ಏ ಕಾಲ ಏನ ಸಮಾಚಾರ
ಏನ ಕೇಳ್ಪಟ್ಟಿ ಅದೇನ ಅದು ನಿಜ್ವ’
‘ಅವ್ವೊ ಅದೇನವ್ವ ಅದು
ಅದೇನ್ ಕೇಳ್ಪಟ್ರಿ’
‘ನಿನ್ನೆಣ್ಣು ಕಲ
ಅದೇನ ಸಟ್ಗ ಹೇಳು’
‘ಅದೇನವ್ವ ನೀವಾಡ ಮಾತು
ನನ್ ಸವ್ವಿನವ್ವ
ಅದೇನ್ ಮಾಡಿದಳವ್ವ
ಆವತ್ತು
ಈ ಅಯ್ನೋರು
ಆ ಹೆಂಡುದ್ ಗುಳ್ತವ್
ಚೆಂಗುಲಿ ಜೊತ್ಗ ಒಗೊಗುಟ್ಲಿ
ಗೇಲುಗನ್ನ ಆಡದ ಕಂಡಿದ್ದಿ
ಈಗ
ನೀಮ್ಬಾಯ್ಲಿ ಈ ಮಾತವ್ವಾ
ಅವ್ವಾ ಇದೇನವ್ವಾ’
ಅನ್ತ
ಸೆಯ್ತಿದ್ದ ಬೀಡಿನ ಮೋರಿಗಿಟ್ಟು
ಒರಿಕಂಡಿರ ಕಂಬನ ಬುಟ್ಟು ಮ್ಯಾಕ್ಕೆದ್ದು
‘ಅವ್ವಾ ನೀಲವ್ಯಾರ ಬತ್ತಿನಿಕವ್ವಾ’
ಅನ್ತ
ಪುರಪುರನೆ ನಡಿತಾ
ತಿರುಗು ನೋಡ್ದೆ ಹೋದ್ನಲ್ಲೋ..


ಈ ದೊಡ್ಡವ್ವ
ಜಗುಲಿ ಕಂಬ ಒರಿಕಳಕು
ಈ ಅಯ್ನೋರು
ಬೀದಿ ಕೊನಲಿ
ಕುಂಟ್ತ ಕುಂಟ್ತ
ಬತ್ತಿರಕು ಒಂದಾಯ್ತು.

ಈ ನೀಲವ್ವೋರು
‘ಅಮ್ಮೊ ನಿಂದು ಅದೇನನ್ತ ಮಾತಾ..’
‘ಕುಸೈ ಎನ್ತ ಮಾತಾ..
ಅದು ಬೆಮ್ಮನ್ಸಿ ಆಗಿದ್ದಂತ
ಬೀದಿಗೊನ್ತರ ಮಾತು
ಕೇರಿಗೊನ್ತರ ಮಾತು
ಪಡ್ಯವ್ ಒನ್ತರ ಮಾತು
ಕೋರಿರೊನ್ತರ ಮಾತು
ನನ್ನನ್ತೆವ್ರು ಒನ್ತರ ಮಾತು
ನಿನ್ನನ್ತೆವ್ರು ಒನ್ತರ ಮಾತು
ನಾನೆನ್ತ ಮಾತ ಆಡುದ್ದು
ಬ್ಯಾಡ ಬುಡು
ಮಾತಾಡದೇ ಬ್ಯಾಡ’ ಅನ್ತ
ಚೀಲ ತಗ್ದು
ಎಲ ಅಡ್ಕ ಎತ್ಕಂಡು
ಸುಣ್ಣ ಡಬ್ಬಿ ಎತ್ಕಂಡು
ಸುಣ್ಣನ ಬೆಂಟಿ ಬೆಂಟಿ
ಬಾಯ್ಗ ರಪ್ಪಂತ ಹಾಕಂಡು
ಉಂಡ ಅಡ್ಕನ
ಕಟುಂ ಅನ್ತ ಕಡ್ದು ಅಗಿತಾ
‘ಕುಸೈ ಅದೆಲ್ಲಿಗೋಗಿದ್ದಾ
ಕುಂಟ್ತ ಈಗ್ಬತ್ತಿದೈ
ರಾತ್ರು ಇಲ್ಲ ಬೆಳ್ಗು ಇಲ್ಲ’ ಅನ್ತ
ಈ ಅಯ್ನೋರ್ ಬಂದದ
ನೋಡ್ತ ಕೇಳ್ದ ಮಾತು
ಲೆಕ್ವಿಲ್ದೆ ಹೋಯ್ತಲ್ಲಾ..

-ಎಂ.ಜವರಾಜ್


ಮುಂದುವರಿಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x