ಮರೆಯಲಾಗದ ಮದುವೆ (ಭಾಗ 9): ನಾರಾಯಣ ಎಮ್ ಎಸ್

  

ಇಲ್ಲಿಯವರೆಗೆ     

-೯-

ಬೆಂಗಳೂರಿನಿಂದ ರೈಲಿನಲ್ಲಿ ಹೊರಟಿದ್ದ ಮುಕ್ತಾಳ ಕುಟುಂಬ ವಿಶಾಖಪಟ್ಟಣ ತಲುಪಿದಾಗ ಸಮಯ ಬೆಳಗ್ಗೆ ಹತ್ತೂವರೆಯಾಗಿತ್ತು. ರೈಲುನಿಲ್ದಾಣದಿಂದ ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿಗೆ ಹೊರಟ ಟ್ಯಾಕ್ಸಿಯ ಕಿಟಕಿಗಳ ಬಳಿ ಕುಳಿತಿದ್ದ ಯುಕ್ತಾ ಮತ್ತು ಶರತ್ ವಿಶಾಖಪಟ್ಟಣ ಸಿಟಿಯನ್ನು ಕುತೂಹಲದಿಂದ ನೋಡುತ್ತಿದ್ದರು. ಗ್ರ್ಯಾಂಡ್ ರೆಸಿಡೆನ್ಸಿ ಇನ್ನೂ ಸ್ವಲ್ಪದೂರವಿದ್ದಂತಯೇ ಬಹುಮಹಡಿ ಕಟ್ಟಡವನ್ನು ಗುರುತಿಸಿದ ಶರತ್ “ಅಮ್ಮಾ… ನೋಡಲ್ಲೀ… ಹೋಟ್ಲು ಬಂತು” ಎಂದು ಉತ್ಸಾಹದಿಂದ ಕೂಗಿದ. ಅಷ್ಟರಲ್ಲಿ ಹೋಟೆಲಿನ ಸೈನ್ಬೋರ್ಡಿದ್ದ ಸ್ವಾಗತಕಮಾನು ಪ್ರವೇಶಿಸಿ ಸುಮಾರು ನೂರುಮೀಟರಿದ್ದ ಪುಷ್ಪಾಲಂಕೃತ ಕಾರಿಡಾರನ್ನು ದಾಟಿದ ಟ್ಯಾಕ್ಸಿ ಸುಬ್ಬು ಮತ್ತು ವೈದೇಹಿ ಕಲ್ಯಾಣಕ್ಕಾಗಿ ವಿಶೇಷವಾಗಿ ಸಜ್ಜಾಗಿದ್ದ ಗ್ರ್ಯಾಂಡ್ ರೆಸಿಡೆನ್ಸಿ ಮುಂದೆ ನಿಂತಿತು. ಒಡನೆ ಟ್ಯಾಕ್ಸಿ ಬಳಿಬಂದ ವಿಶೇಷ ಸಮವಸ್ತ್ರ ಧರಿಸಿದ್ದ ಸಿಬ್ಬಂದಿಯೊಬ್ಬ ಸೆಲ್ಯೂಟ್ ಹೊಡೆದು ಟ್ಯಾಕ್ಸಿಯ ಬಾಗಿಲುತೆಗೆದು ಒಳಗಿದ್ದವರನ್ನು ಸ್ವಾಗತಿಸಿದ. ಹಿಂದೆಯೇ ಬಂದ ಸುಂದರವಾಗಿದ್ದ ಸ್ವಾಗತಕಾರಿಣಿಯೊಬ್ಬಳು ಮುಗುಳ್ನಕ್ಕು ಎಲ್ಲರಿಗೂ ಗುಲಾಬಿಹೂವನ್ನಿತ್ತು ಆತ್ಮೀಯವಾಗಿ ಬರಮಾಡಿಕೊಂಡಳು. ಅಷ್ಟರಲ್ಲಿ ಕೃಷ್ಣಯ್ಯರ್ ತಮ್ಮ ಸೋದರರು ಮಕ್ಕಳೊಂದಿಗೆ ಬಂದು ಅತಿಥಿಗಳಿಗೆ ಕೈಮುಗಿದು ಮುರಳೀಧರರ ಕೈಕುಲುಕಿ ಪ್ರೀತಿಯಿಂದ ಬೆನ್ನುತಟ್ಟಿ ಬಂದವರನ್ನು ಒಳಗೆ ಕರೆದುಕೊಂಡು ಹೋದರು.

ಮದುವೆ ಗೊತ್ತಾದಾಗಲೇ ಮುಂದಾಲೋಚನೆಯಿಂದ ಮದುವೆಯ ಮೂರುದಿನಗಳಲ್ಲಿ ಗ್ರಾಹಕರಿಂದ ಯಾವುದೇ  ಕೊಠಡಿಯ ಮುಂಗಡ ಬುಕಿಂಗ್ ಪಡೆಯದಂತೆ ಕೃಷ್ಣಯ್ಯರ್ ತಮ್ಮ ಸಿಬ್ಬಂದಿವರ್ಗಕ್ಕೆ ನಿರ್ದೇಶಿಸಿಬಿಟ್ಟಿದ್ದರು. ಹಾಗಾಗಿ ಇಡೀ ಹೋಟೆಲನ್ನು ಮದುವೆಗೆಂದು ಮೀಸಲಿರಿಸಲಾಗಿತ್ತು. ಹೋಟೆಲ್ಲಿನ ವಿಶಾಲವಾದ ಲಾಬಿಯಲ್ಲಿ ಶ್ರೇಷ್ಠ ಕಲಾಕೃತಿಗಳನ್ನು ಬಳಸಿ  ಪರಿಣಿತರಿಂದ ಮಾಡಿಸಿದ್ದ  ಒಳಾಂಗಣ ವಿನ್ಯಾಸ ಉತ್ತಮ ಅಭಿರುಚಿಯ ಪ್ರತೀಕವೆನ್ನುವಂತೆ ಅತ್ಯಾಕರ್ಷಕವಾಗಿತ್ತು. ರಿಸೆಪ್ಷನ್ ಕೌಂಟರಿನೆದುರು ಹಾಕಲಾಗಿದ್ದ  ಮೆತ್ತನೆಯ ಸೋಫಾಗಳ ಪಕ್ಕದಲ್ಲಿ ಜೋಡಿಸಿದ್ದ ಹೂಕುಂಡಗಳು ಪರಿಮಳ ಸೂಸುತ್ತಾ ಲಾಬಿಯ ಒಟ್ಟಂದವನ್ನು ಹೆಚ್ಚಿಸಿತ್ತು.  ನೆಲದಂತಸ್ತಿನಲ್ಲಿದ್ದ ವಿಶಾಲವಾದ ಹಾಲಿನಲ್ಲಿ ಮದುವೆ ಸಮಾರಂಭ ನಡೆಯುವುದಿತ್ತು. ಮೊದಲಂತಸ್ತಿನಲ್ಲಿದ್ದ ಬ್ಯಾಂಕ್ವೆಟ್ ಹಾಲಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಎರಡನೆ ಅಂತಸ್ತಿನಲ್ಲಿದ್ದ ಕೋಣೆಗಳು ಹೆಣ್ಣಿನ ಮನೆಯವರಿಗೆ ಮೀಸಲಿದ್ದರೆ ಮೂರನೆಯ ಅಂತಸ್ತಿನಲ್ಲಿ ಗಂಡಿನ ಮನೆಯವರ ವಾಸ್ತವ್ಯದ ವ್ಯವಸ್ಥೆ ಇತ್ತು. ಕೆಲವನ್ನು ಹೊರತುಪಡಿಸಿ ಬಹುತೇಕ ಕೊಠಡಿಗಳು ಹವಾನಿಯಂತ್ರಿತ ಕೊಠಡಿಗಳಾಗದ್ದುವು. ಮುರಳೀಧರ್ ಮನೆಯವರನ್ನು ರಿಸೆಪ್ಷನ್ ಲಾಂಜಿನಲ್ಲಿ ಕುಳ್ಳಿರಿಸಿ ಕಾಫಿ  ಆತಿಥ್ಯ ನೀಡಲಾಯಿತು. ಅವರು ಕಾಫಿಕುಡಿಯುವಷ್ಟರಲ್ಲಿ ಇಬ್ಬರು ಸಿಬ್ಬಂದಿಗಳು ಅವರ ಲಗೇಜನ್ನು ತೆಗೆದುಕೊಂಡು ಹೋಗಿ ಮೂರನೆ ಅಂತಸ್ತಿನಲ್ಲಿ ಅವರ ವಾಸ್ತವ್ಯಕ್ಕೆಂದು ಗೊತ್ತುಪಡಿಸಿದ ಕೊಠಡಿಗಳಲ್ಲಿರಿಸಿ ಬಂದರು. ಮದುವೆ ಹೆಣ್ಣಿನ ಅಣ್ಣ ಮುರಳೀಧರರ ಕುಟುಂಬವನ್ನು ಲಿಫ್ಟಿನಲ್ಲಿ ಕರೆದೊಯ್ದು ಅವರ ಕೊಠಡಿಗಳಿಗೆ ಬಿಟ್ಟರು. ಒಂದೆರೆಡು ಉಪಚಾರದ ಮಾತುಗಳನ್ನಾಡಿ ಬಾತ್ರೂಮಿನಲ್ಲಿ ಬಿಸಿನೀರು ಬರುತ್ತದೆಂದು ತಿಳಿಸಿ ನಿರ್ಗಮಿಸಿದರು. ಹೊರಡುವ ಮುನ್ನ ಏನಾದರೂ ಅಗತ್ಯವಿದ್ದರೆ ಇಂಟರ್ಕಾಮಿನಲ್ಲಿ ರಿಸಪ್ಷನ್ನನ್ನು ಸಂಪರ್ಕಿಸಬೇಕೆಂದು ಹೇಳಲು ಮರೆಯಲಿಲ್ಲ.

ಮುಕ್ತಾ, ಮುರಳೀಧರ್ ಮತ್ತು ಮಕ್ಕಳು ಸ್ನಾನ ಮುಗಿಸಿ ತಯಾರಾಗುವಷ್ಟರಲ್ಲಿ ಉಪಹಾರಕ್ಕೆ ಕರೆ ಬಂತು. ರೈಲಲ್ಲಿ ಬರುವಾಗಲೇ ಅವರೆಲ್ಲರ ತಿಂಡಿಯಾಗಿತ್ತೆಂದು ಹೇಳಿದರೂ ಹೆಣ್ಣಿನ ಮನೆಯವರು ಕಿವಿಗೊಡುವಂತೆ ಕಾಣಲಿಲ್ಲ. ಒತ್ತಾಯಕ್ಕೆ ಮಣಿದು ಮತ್ತೊಮ್ಮೆ ಲಘು ಉಪಹಾರ ಸೇವಿಸುವವರೆಗೆ ಬಿಡಲಿಲ್ಲ. ತಿಂಡಿ ಮುಗಿಸಿದ ಮುರಳಿ ಕುಟುಂಬದವರು ಹೆಣ್ಣಿನ ಮನೆಯವರು ಹಮ್ಮಿಕೊಂಡಿದ್ದ ದೇವರ ಸಮಾರಾಧನೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಸೀತಕ್ಕಳಿದ್ದ ತಿರುವಾರೂರಿನ ರೈಲು ಬರಲು ಇನ್ನೂ ಸಾಕಷ್ಟು ಸಮಯವಿದ್ದುದರಿಂದ ದೇವರ ಸಮಾರಾಧನೆಯ ನಂತರ ಮುಕ್ತಾ ಸ್ವಲ್ಪ ವಿಶ್ರಮಿಸಲೆಂದು ಕೊಠಡಿಗೆ ತೆರಳಿದಳು. ಮಕ್ಕಳು ತಮ್ಮ ಹಾಟ್-ಶಾಟ್ ಕ್ಯಾಮರಾ ಹಿಡಿದು ಭವ್ಯವಾದ ಹೋಟೆಲ್ಲಿನ ಹಲವು ಹಿನ್ನಲೆಗಳಲ್ಲಿ ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕ್ಕಿಸುವಲ್ಲಿ ವ್ಯಸ್ತರಾದರು. ಮುರಳೀಧರ್ ಹಾಗೇ ಅಡ್ಡಾಡುತ್ತಾ ಗ್ರ್ಯಾಂಡ್ ರೆಸಿಡೆನ್ಸಿಯ ಪರಿವೀಕ್ಷಣೆ ನಡೆಸುತ್ತಿದ್ದರು.

ರಿಸೆಪ್ಷನ್ ಕೌಂಟರಿನಲ್ಲಿ ಸಾಲಾಗಿ ಹಾಕಲಾಗಿದ್ದ ಏಳೆಂಟು ಗೋಡೆ ಗಡಿಯಾರಗಳ ಕೆಳಗೆ ಬೇರೆ ಬೇರೆ ದೇಶಗಳ ಹೆಸರು ಬರೆಯಲಾಗಿದ್ದು ಪ್ರತಿ ಗಡಿಯಾರವೂ ಆಯಾ ದೇಶದ ಪ್ರಸ್ತುತ ಸಮಯವನ್ನು ತೋರುತ್ತಿತ್ತು. ಮುರಳಿಯವರ ಗಮನ  ರಿಸೆಪ್ಷನ್ ಕೌಂಟರಿಗೆ ಹೊಂದಿಕೊಂಡಂತಿದ್ದ ಕೃಷ್ಣಯ್ಯರ್ ಛೇಂಬರಿನ ಹೊರಗೋಡೆಗೆ ಅಳವಡಿಸಿದ್ದ ದೊಡ್ಡ ಶೋಕೇಸಿನತ್ತ ಹರಿಯಿತು. ಕುತೂಹಲದಿಂದ ಹತ್ತಿರ ಹೋಗಿ ನೋಡಿದರು. ಶೋಕೇಸಿನ ತುಂಬಾ ಹೋಟೆಲ್ಲಿಗೆ ಸಂದಿದ್ದ ಕ್ವಾಲಿಟಿ ಸರ್ಕಲ್ಲಿನ ಪ್ರಶಸ್ತಿಗಳನ್ನೂ ಹೋಟೆಲ್ ಉದ್ಯಮದಲ್ಲಿ ಗ್ರ್ಯಾಂಡ್ ರೆಸಿಡೆನ್ಸಿ ಗಳಿಸಿದ್ದ ವಿವಿಧ ಪಾರಿತೋಷಕಗಳನ್ನೂ ಜೋಡಿಸಿಡಲಾಗಿತ್ತು. ಅವುಗಳ ಪಕ್ಕದಲ್ಲಿ ಸಮಾಜಕ್ಕೆ ಕೃಷ್ಣಯ್ಯರ್ ಮಾಡಿದ್ದ ವಿವಿಧ ರೀತಿಯ ಸೇವೆಗಳನ್ನು ಗುರುತಿಸಿ ಗೌರವಿಸಿ ರೋಟರಿ, ಲಯನ್ಸಿನಂಥ ಪ್ರತಿಷ್ಠಿತ ಸಂಸ್ಥೆಗಳು ನೀಡಿದ್ದ ಹತ್ತಾರು ಪ್ರಶಸ್ತಿಪತ್ರಗಳನ್ನೂ ಪಾರಿತೋಷಕಗಳನ್ನೂ ಪ್ರದರ್ಶಿಸಲಾಗಿತ್ತು. ಇಂತಹ ಸಮಾಜಮುಖಿ ಧೋರಣೆಯಿದ್ದಲ್ಲಿ ಮಾತ್ರ ಜೀವನದಲ್ಲಿ ಸಾಧಿಸಿದ ಸಿರಿವಂತಿಕೆಗೆ ಒಂದು ಸಾರ್ಥಕತೆ ಬರುತ್ತದೆ  ಎಂದಾಲೋಚಿಸತ್ತಾ ಮುರಳೀಧರ್ ಅಲ್ಲಿಂದ ಹೊರಡುವುದರಲ್ಲಿದ್ದರು. ಅಷ್ಟರಲ್ಲಿ ಛೇಂಬರಿನ ಗಾಜಿನ ಬಾಗಿಲ ಹಿಂದೆ ಕೃಷ್ಣಯ್ಯರ್ ಕುಳಿತಿದ್ದ ಸೀಟಿನಿಂದೆದ್ದು, ತಮ್ಮನ್ನು ಕಂಡು ನಗುತ್ತಾ ಒಳಗೆ ಬರುವಂತೆ ಸನ್ನೆಮಾಡುತ್ತಿದ್ದುದು ಕಂಡಿತು. ಮುರಳಿ ಬಾಗಿಲು ತೆಗೆದು ಒಳಗೆ ಪ್ರವೇಶಿಸಿದರು.

ಬಾಗಿಲು ತೆರೆಯುತ್ತಿದ್ದಂತೆ ಎದ್ದುಬಂದ ಕೃಷ್ಣಯ್ಯರ್ ಆತ್ಮೀಯತೆಯಿಂದ ಕೈಕುಲುಕಿ “ಬನ್ನೀ ಬನ್ನೀ ಕೂತ್ಕೋಳಿ, ನಿಮ್ಗೆ ಕೊಟ್ಟಿರೋ ರೂಮು ಸೌಕರ್ಯವಾಗಿದೆ ಅಂದ್ಕೋತೀನಿ, ನಿಮ್ಮನೇ ಅಂತ್ಲೇ ತಿಳ್ಕೋಳಿ… ಏನ್ತೊಂದ್ರೆ ಇದ್ರೂ ದಯ್ಮಾಡಿ ಸಂಕೋಚ್ವಿಲ್ದೆ ತಿಳುಸ್ಬೇಕು” ಉಪಚಾರ ಮಾಡುತ್ತಾ ಹೇಳಿದರು. ಅದಕ್ಕುತ್ತರವಾಗಿ ಮುರಳೀಧರ್ “ಚೆನ್ನಾಗ್ ಹೇಳುದ್ರಿ, ತೊಂದ್ರೆ ಏನ್ಬಂತು ಎಲ್ಲಾ ಫಸ್ಟ್ ಕ್ಲಾಸಾಗಿದೆ ಯಾವ ಪಂಚತಾರಾ ಹೋಟ್ಲಿಗೂ ಕಮ್ಮಿಇಲ್ದಂಗೆ…ಅಂದಹಾಗೆ ತಾವ್ಯಾಕೆ ಫೈವ್ ಸ್ಟಾರ್ ಸರ್ಟಿಫಿಕೇಷನ್ ತಗೊಂಡಿಲ್ಲಾಂತೀನಿ ಎಂತೆಂಥಾ ಹೋಟ್ಲಿಗೆಲ್ಲಾ ಸ್ಟಾರ್ ಸ್ಟೇಟಸ್ ಸಿಕ್ಕಿರೋವಾಗ ನಿಮ್ಹೋಟ್ಲಿಗೆ ಸಿಕ್ದೆ ಏನು? ತಾವ್ಯಾಕ್ ಮನಸ್ಮಾಡಿಲ್ವೋ!?” ಅಂದರು. ಅದಕ್ಕೆ ಕೃಷ್ಣಯ್ಯರ್ “ನೋಡಿ ಮುರಳೀಯವ್ರೇ ತಮಗೆ ತಿಳ್ದೇ ಇರತ್ತೆ, ಈ ಸ್ಟಾರ್ಹೋಟ್ಲು ಮಾಡ್ಬೇಕೂಂದ್ರೆ ಮದ್ಯ ಮಾಂಸದ ಸರಬರಾಜು ಅನಿವಾರ್ಯ. ಅವರ್ರೂಲ್ಸ್ ಪ್ರಕಾರ ಅದೆಲ್ಲಾ ಕಡ್ಡಾಯ್ವಂತೆ. ಅದೇನೋ ನಾನ್ಬೆಳ್ದು ಬಂದ್ರೀತಿ ಅವೆಲ್ಲಾ ನನ್ಮನಸ್ಗೊಪ್ಪಲ್ಲ. ಅದುಕ್ಕೇ ಈ ಸ್ಟಾರುಗಳ ಸವಾಸಾನೇ ಬೇಡಾಂತ್ಸುಮ್ನಿದೀನಿ. ನಾನಿರೋತಂಕಂತೂ ಗ್ರ್ಯಾಂಡ್ ರೆಸಿಡೆನ್ಸೀಲಿ ಮದ್ಯ ಮಾಂಸದ ಪ್ರವೇಶ ಬೇಡಾಂತ ನನ್ನ ನಿಲುವು, ಆಮೇಲೆ ನನ್ಮಕ್ಳು ಮೊಮ್ಮೊಕ್ಳೂ ಅದೇನಾರೂ ಮಾಡ್ಕಳ್ಳಿ ಅದು ನನಗ್ಸೇರಿದ್ದಲ್ಲ” ಅಂದರು. ಒಬ್ಬ ಯಶಸ್ವೀ ಉದ್ಯಮಿಯಾಗಿದ್ದರೂ ತನ್ನ ಮೌಲ್ಯಗಳಲ್ಲಿ ರಾಜಿಮಾಡಿಕೊಳ್ಳದ ಕೃಷ್ಣಯ್ಯರ್ ವ್ಯಕ್ತಿತ್ವದ ಬಗ್ಗೆ ಮುರಳೀಧರರಿಗೆ ಮೆಚ್ಚುಗೆ ಮೂಡಿತು. ಅಷ್ಟರಲ್ಲಿ ಒಳಬಂದ ವೆಯ್ಟರ್ ಎರಡು ಗಾಜಿನಲೋಟಗಳಲ್ಲಿ ತಣ್ಣಗಿನ ತಾಜಾಹಣ್ಣಿನ ಜ್ಯೂಸ್ ತಂದು ಮೇಜಿನಮೇಲಿಟ್ಟು ಹೋದ.

“ಜ್ಯೂಸ್ ತಗೋಳಿ ವಿಶಾಕ್ಪಟ್ನದ ಧಗೇಗೆ ಹಿತ್ವಾಗಿರತ್ತೆ” ಒಂದು ಲೋಟವನ್ನು ಮುರಳಿಯವರತ್ತ ಸರಿಸಿ ಹೇಳಿದರು ಕೃಷ್ಣಯ್ಯರ್. ಇಬ್ಬರೂ ನಿಧಾನಕ್ಕೆ ಜ್ಯೂಸ್ ಕುಡಿಯುತ್ತಿದ್ದಂತೆಯೇ ಮುರಳಿ ಮಾತುಮುಂದುವರೆಸಿ “ಮೆಚ್ಬೇಕು ಬಿಡಿ ನಿಮ್ನ. ಆ ಭಗವಂತ ಕೊಟ್ಟಿದ್ದನ್ನ ಧಾರಾಳವಾಗಿ ಇಲ್ದಿರೋರ್ಗೆ ದಾನಮಾಡೋ ಮನಸ್ಸಿದೆ ನಿಮ್ಗೆ, ಹೊರ್ಗಡೆ ಶೋಕೇಸಲ್ಲಿ ನೋಡ್ದೆ ನಿಮ್ಮ ಜನಪರ ಕಳಕಳಿ ನಿಜ್ವಾಗ್ಲೂ ಮೆಚ್ಬೇಕಾದ್ದು” ಅಂದರು. ಅದಕ್ಕೆ ಕೃಷ್ಣಯ್ಯರ್ ಎದುರಿಗಿದ್ದ ದೊಡ್ಡ ಫೋಟೋದಲ್ಲಿದ್ದ ಶ್ರೀಕೃಷ್ಣನಿಗೆ ಕೈಯೆತ್ತಿ ನಮಿಸುತ್ತಾ “ಎಲ್ಲಾ ದೈವೇಚ್ಛೆ ಮುರಳಿ… ನನ್ಗೆ ಇಂಥಾ ವಿಷಯಗಳ ಪ್ರಚಾರ ಪ್ರದರ್ಶನ ಸುತ್ರಾಂ ಇಷ್ಟಯಿಲ್ಲ ನೋಡಿ, ಆದ್ರೆ ಮಕ್ಳು ಕೇಳಲ್ಲ ಹೋಟೆಲ್ಲಿನ ಇಮೇಜಿಗೆ ಅದೆಲ್ಲಾ ಅನಿವಾರ್ಯ ಅಂತಾರೆ, ಮಾಡ್ತಿರೋದೇನೂ ಸುಳ್ಳಲ್ವಲ್ಲ ಹೇಳ್ಕೊಂಡ್ರೆ ತಪ್ಪೇನೂಂತಾರೆ, ನಾನೂ ಎಷ್ಟೂಂತ ಹೇಳ್ಲಿ, ಏನಾರ ಮಾಡ್ಕಳ್ಲೀ ಅಂತ್ಸುಮ್ನಿದೀನಿ. ಇಲ್ಲಿದೇ ನೋಡಿ ನನ್ನಿಜ್ವಾದ್ ಬಂಡ್ವಾಳ” ಎಂದರು ತಮ್ಮೆದುರಿನ ಗೋಡೆಯತ್ತ ಬೊಟ್ಟುಮಾಡಿ. ಮುರಳೀಧರ್ ಹಿಂದೆ ತಿರುಗಿ ತಮ್ಮ ಬೆನ್ನಿಗಿದ್ದ ಗೋಡೆಯತ್ತ ಕಣ್ಣು ಹಾಯಿಸಿದರು.

ಗೋಡೆಯಮೇಲೆ ಕ್ರಮವಾಗಿ ಮೂರು ಕಪ್ಪುಬಿಳುಪಿನ ಭಾವಚಿತ್ರಗಳು ಮತ್ತೆರಡು ಬಣ್ಣದ ಫೋಟೋ ಸೇರಿ ಒಟ್ಟು ಐದು ಛಾಯಾಚಿತ್ರಗಳಿದ್ದವು. ಎಲ್ಲಕ್ಕಿಂತ ಚಿಕ್ಕದಿದ್ದ ಮೊದಲ ಫೋಟೋ ಕೆಳಗೆ 1947 ಎಂದು ಬರೆದಿತ್ತು. ಅದರಲ್ಲಿ ಒಂದು ಪಂಚೆಯಟ್ಟು ಬರಿಮೈ ಮೇಲೊಂದು ಚೌಕ ಹಾಕಿಕೊಂಡಿದ್ದ ಮಧ್ಯವಯಸ್ಸಿನ ಕೃಷ್ಣಯ್ಯರ್ ತಳ್ಳುವ ಗಾಡಿಯ ಕ್ಯಾಂಟೀನಿನ ಮುಂದೆ ನಿಂತಿದ್ದರು. ಅದರ ಪಕ್ಕದಲ್ಲಿ ಕೆಳಗೆ 1952 ಎಂದು ಬರೆದಿದ್ದ ಎರಡನೇ ಫೋಟೋ ಮೊದಲದಕ್ಕಿಂತ ದೊಡ್ಡದಿತ್ತು. ಅದರಲ್ಲಿ ಅಯ್ಯರ್ಸ್ ಕ್ಯಾಂಟೀನ್ ಎಂದು ಕೈಯಲ್ಲಿ ಓರೆಕೋರೆಯಾಗಿ ಬರೆದಿದ್ದ ಬೋರ್ಡು ತಗಲಿಸಿಕೊಂಡಿದ್ದ ಸಣ್ಣ ಕ್ಯಾಂಟೀನಿನ ಮುಂದೆ ಪಂಚೆ ಶರ್ಟು ಧರಿಸಿದ್ದ ಕೃಷ್ಣಯ್ಯರ್ ನಿಂತಿದ್ದರು. ಅದಕ್ಕಿಂತಲೂ ದೊಡ್ಡ ಮೂರನೇ ಛಾಯಾಚಿತ್ರದಲ್ಲಿ ಕೃಷ್ಣಯ್ಯರ್ ’ಹೋಟೆಲ್ ಕೃಷ್ಣವಿಲಾಸ್’ ಎಂಬ ಬೋರ್ಡಿದ್ದ ಸ್ವಲ್ಪ ಪರಿಷ್ಕೃತವಾದ ಹೋಟೆಲ್ಲಿನ ಗಲ್ಲಾದಲ್ಲಿ ಕುಳಿತಿದ್ದರು. ಆ ಫೋಟೋ ಕೆಳಗೆ 1959 ಎಂದು ಬರೆದಿತ್ತು. ನಾಲ್ಕನೆಯ ಫೋಟೋದಲ್ಲಿ ’ಹೋಟೆಲ್ ನ್ಯೂ ಕೃಷ್ಣವಿಲಾಸ್’ ಎಂಬ ಬೋರ್ಡಿನೊಂದಿಗೆ ಇನ್ನಷ್ಟು ವಿಸ್ತೃತಗೊಂಡಂತಿದ್ದ ಹೋಟೆಲ್ಲಿನದುರು ಸಫಾರಿ ಧರಿಸಿದ ಕೃಷ್ಣಯ್ಯರ್ ಮುಗುಳ್ನಗುತ್ತಾ ನಿಂತಿದ್ದರು. ಈ ಕಲರ್ ಫೋಟೋದ ಕೆಳಗೆ 1971 ಎಂದು ಬರೆದಿತ್ತು. ಎಲ್ಲಕ್ಕಿಂತ ದೊಡ್ಡದಿದ್ದ 1978ರ ಇತ್ತೀಚಿನ ಫೋಟೋದಲ್ಲಿ ಗ್ರ್ಯಾಂಡ್ ರೆಸಿಡೆನ್ಸಿಯ ಭವ್ಯವಾದ ಕಟ್ಟಡದೆದುರು ಥಳಥಳ ಹೊಳೆವ ಐಷಾರಾಮಿ ಕಾರಿನ ಮುಂದೆ ಮಿರಿಮಿರಿ ಮಿಂಚುವ ಸೂಟುಧರಿಸಿದ ಕೃಷ್ಣಯ್ಯರ್ ನಿಂತಿದ್ದರು. ಕೆಲನಿಮಿಷ ಈ ಫೋಟೋಗಳನ್ನೇ ನೋಡುತ್ತಿದ್ದ ಮುರಳೀಧರ್ “ಬರೀ ಐದೇ ನಿಮಿಷ್ದಲ್ಲಿ ಒಬ್ಬ ಉದ್ಯಮಿಯ ಇಡೀ ಜೀವನದ ಸಾಧನೆ, ಪರಿಶ್ರಮಗಳ್ನ ಅನಾವರಣ ಮಾಡಿರೋ ರೀತಿ ನಿಜ್ವಾಗ್ಲೂ ಗ್ರೇಟ್” ಅವರಿಗರಿವಿಲ್ಲದೆ ಉದ್ಗರಿಸಿದ್ದರು.

“ಅಯ್ಯೋ ಇಡೀ ಜೀವ್ನ ಎಲ್ಲಿದೆ. ನನ್ನ ಯೌವ್ವನದ ಹೋರಾಟಗಳ ಕಾಲ್ದಲ್ಲಿ  ಫೋಟೋ ತೆಗಿಸ್ಕೊಳ್ಳೋ ಯೋಗ್ಯತೆ  ನನ್ಗೆಲ್ಲಿತ್ತು? ಜೋಬಲ್ಲಿ ಎರಡ್ರುಪಾಯಿಟ್ಕೊಂಡು ಊರ್ಬಿಟ್ಟಾಗ ನನ್ಗಿನ್ನೂ ಹದ್ನೆಂಟೋ ಇಪ್ಪತ್ತೋ. ಮೊದ್ಲುಮೊದ್ಲು ಮದ್ರಾಸಿಗ್ಬಂದು ಒಂದಷ್ಟ್ ವರ್ಷ ಸಣ್ಣ ಪುಟ್ಟ ಹೋಟ್ಲುಗಳಲ್ಲಿ ಸಪ್ಲೈಯರ್ ಕೆಲ್ಸಮಾಡ್ಕೊಂಡಿದ್ದೆ. ಆಮೇಲೆ ಸ್ವಲ್ಪ ವರ್ಷ ದೊಡ್ಡ ಹೋಟೆಲ್ಗಳಲ್ಲಿ ಆರ್ಡರ್ ತಗೋಳೋದು ಬಿಲ್ಬರ್ಯೋದು ಮಾಡ್ತಿದ್ದೆ. ಯಾಕೋ ಬೇರೆಯವರಿಗೆ ಮಾಡ್ತಿದ್ದ ಚಾಕ್ರಿ ಬೇಸರ ಬಂತು. ದೇಶ ಸ್ವತಂತ್ರ ಆದಾಗ್ಲೇ ನಾನೂ ಸ್ವತಂತ್ರವಾಗಿ ಆ ತಳ್ಳೋ ಗಾಡೀಲಿ ಕ್ಯಾಂಟೀನ್  ಶುರುಮಾಡಿದ್ದು” ಮೊದಲ ಫೋಟೋ ತೋರಿಸುತ್ತಾ ಹೇಳಿದರು ಕೃಷ್ಣಯ್ಯರ್. “ದೊಡ್ಡ ಜೀವನಾನುಭವ ನಿಮ್ದು, ಯುವ ಪೀಳಿಗೆಗೆ ಸ್ಫೂರ್ತಿಯಾಗಬಲ್ಲ ಮಹಾನ್ ಸಾಧಕರು ನೀವು”  ಕೃಷ್ಣಯ್ಯರಿಗೆ ಕೈಮುಗಿದು ಮುರಳೀಧರ್ ಹೇಳಿದಾಗ “ಛೇ ಹಾಗೇನಿಲ್ಲಪ್ಪಾ… ಹೊರ್ಗಡೆ ಗೋಡೇಲಿ ಮಕ್ಕಳ ಒತ್ತಾಯಕ್ಕೆ ನನ್ತುತ್ತೂರಿ ನಾನೇ ಊದ್ಕೊಂಡಿದೀನಾ, ಅದುಕ್ಕೆ ನಾನು ಬಂದ ಹಿನ್ನಲೆ, ನನ್ಕಷ್ಟದ ದಿನಗಳನ್ನ ನಾನ್ಯಾವತ್ಗೂ ಮರೀಕೂಡ್ದೂಂತ ಒಳ್ಗಡೆ ಈ ಫೋಟೋಗಳನ್ನ ಹಾಕಿಸ್ಕೊಂಡಿದೀನಷ್ಟೆ” ಅಂದ ಕೃಷ್ಣಯ್ಯರ್ “ಆವಾಗ್ಲಿಂದ ಬರೀ ನನ್ಪುರಾಣಾನೇ ಆಯ್ತು, ನಿಮ್ಮ ವಿಚಾರ ಏನೂ ಹೇಳಲ್ವೇ?” ಎಂದು ಕೇಳಿದರು.

“ನಿಮ್ಮ ಕಥೆ ಕೇಳಿದ್ಮೇಲೆ ನಂದೇನೂ ಸ್ವಾರಸ್ಯ ಇಲ್ಲ ಬಿಡಿ, ಹುಟ್ಟಿದ್ದು ನನ್ನಮ್ನೂರು ಪಲ್ಲಶ್ಯನಿ ಅನ್ನೋ ಹಳ್ಳೀಲಿ. ನನ್ನಮ್ಮ ನನ್ಹೆತ್ತು ಶಿವನ್ಪಾದ ಸೇರಿದ್ಲಂತೆ, ನನ್ನ ತಂದೆ ನನ್ನನ್ನ ಅವರೂರು ಒತ್ತಪ್ಪಾಲಕ್ಕೆ ಕರ್ಕೊಂಡ್ ಹೋದ್ರಂತೆ. ನನ್ದುರಾದೃಷ್ಟ ನನ್ಗೆ ನಾಕೋ ಐದೋ ಇದ್ದಿರಬೇಕು. ಒಂದಿನ ಬೆಳಗ್ಗೆ ಹೊರಹೋದ ನನ್ನಪ್ಪ ಮತ್ತೆ ತಿರುಗಿ ಬರಲಿಲ್ಲ.” ಎಂದ ಮುರಳಿ ತನ್ನಪ್ಪ ಮಲಯಾಳೀ ನರ್ಸೊಬ್ಬಳ ಜೊತೆ ಕೂಡಾವಳಿ ಮಾಡಿಕೊಂಡು ತಿರುವನಂತಪುರಕ್ಕೆ ಹೋಗಿ ನೆಲೆಸಿದ್ದರೆಂದು ಊರಿನವರು ಮಾತನಾಡಿಕೊಳ್ಳುತ್ತಿದ್ದ ನೆನಪಾಗಿ ನಿಡುಸುಯ್ದರು. “ಆಮೇಲೆ…” ಎಂದ ಕೃಷ್ಣಯ್ಯರ್ ಮಾತು ಕೇಳಿದ ಮುರಳಿ, “ಆಮೇಲೆ ನಂಗಿದ್ದ ಒಂದೇ ಆಸ್ರೆ ಅಂದ್ರೆ ಪಾಲ್ಘಾಟಿನಲ್ಲಿ ಪೌರೋಹಿತ್ಯ ಮಾಡಿಕೊಂಡಿದ್ದ ನನ್ನ ಸೋದರಮಾವ. ಪಾಪ ಚಿಕ್ವಯಸ್ಸಿಗೇ ಹೆಂಡ್ತಿಕಳ್ಕೊಂಡಿದ್ದ ಅವ್ರಿಗೂ ನನ್ಬಿಟ್ರೆ ಬೇರೆ ಹತ್ರದ ನಂಟಿರ್ಲಿಲ್ವಂತೆ. ನನ್ನನ್ನ ಪಾಲ್ಘಾಟಿಗೆ ಕರ್ಕೊಂಡ್ಹೋಗಿ ಸಾಕ್ಕೊಂಡ್ರು. ಎಂಟ್ನೇ ವಯಸ್ನಲ್ಲೋ ಏನೋ ಉಪ್ನಯ್ನಾನೂ ಮಾಡುದ್ರು. ಅಲ್ಲೇ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ನನ್ನನ್ನು  ರಜಾದಿನಗಳಲ್ಲಿ ಅವ್ರು ಮಾಡ್ಸಕ್ಕೆ ಹೋಗ್ತಿದ್ದ ಶಾಸ್ತಾಪ್ರೀತಿ, ಭಗವತ್ಸೇವೆ, ಗಣಪತಿ ಹೋಮಗಳಿಗೆ ಸಹಾಯಕನಾಗಿ ಕರ್ಕೊಂಡ್ ಹೋಗ್ತಿದ್ರು. ನನಗಾಗ ಹೆಚ್ಚಂದ್ರೆ ಹದ್ನಾರಿರ್ಬೇಕು…ಊರಲ್ಲೆಲ್ಲಾ ಹರಡಿದ ಪ್ಲೇಗು ನನ್ನ ಮಾವನ್ನ ಬಲೀ ತಗೋತು. ಅಷ್ಟೊತ್ತಿಗೆ ನಾನು ಹತ್ನೇ ಕ್ಲಾಸ್ಮುಗ್ಸಿದ್ದೆ. ನನ್ನ ನೆಚ್ಚಿನ ಮೇಷ್ಟರೊಬ್ರು ನನ್ಕರ್ಕೊಂಡ್ಹೋಗಿ ಕಾಲೇಜಿಗೆ ಸೇರ್ಸಿ ಊಟಕ್ಕೆ ಒಂದ್ನಾಲ್ಕೈದು ಮನೆಗಳಲ್ಲಿ ವಾರಾನ್ನ ಗೊತ್ಮಾಡ್ಕೊಟ್ರು. ಒಂದೆರಡು ಅಂಗಡಿಯವರಿಗೆ ಲೆಕ್ಕಬರೆದುಕೊಟ್ಟು ಸಣ್ಣ ಕ್ಲಾಸಿನಮಕ್ಕಳಿಗೆ ಟ್ಯೂಷನ್ ಹೇಳಿ ಹುಟ್ಟಿಸುತ್ತಿದ್ದ ದುಡ್ಡು ಕಾಲೇಜಿನ ಪುಸ್ತಕ, ಫೀಸಿನ ಖರ್ಚಿಗೆ ಸರಿಯಾಗುತ್ತಿತ್ತು. ಭಿಕ್ಷಾನ್ನ ವಾರಾನ್ನ ಮಾಡ್ಕೊಂಡು ಹಾಗೂ ಹೀಗೂ ಡಿಗ್ರೀ ಮುಗಿಸ್ದೆ. ದೇವ್ರು ದೊಡ್ಡೋನು. ಬ್ಯಾಂಕಿನಲ್ಲಿ ಉದ್ಯೋಗ ಸಿಕ್ತು. ನಿಧಾನಕ್ಕೆ ಒಂದೊಂದೇ ಡಿಪಾರ್ಟ್ಮೆಂಟ್ ಎಕ್ಸಾಂಸ್ ಮಾಡ್ಕೊಂಡು ದೇಶದ ನಾಲ್ಕಾರು ರಾಜ್ಯಗಳಲ್ಲಿ ಸೇವೆಸಲ್ಲಿಸಿ ಇವತ್ತು ಜನರಲ್ ಮ್ಯಾನೇಜರಾಗಿದೀನಿ.” ಎಂದು ಸಂಕ್ಷಿಪ್ತವಾಗಿ ತಮ್ಮ ಕಥೆ ಮುಗಿಸಿದರು.

ಹೀಗೆ ಕಷ್ಟಸುಖ ಹಂಚಿಕೊಂಡ ಕೃಷ್ಣಯ್ಯರ್ ಮತ್ತು ಮುರಳೀಧರ್ ಮಧ್ಯೆ ಪರಸ್ಪರ ಆತ್ಮೀಯತೆಯ ಬಾಂಧವ್ಯ ಬೆಳೆದಿತ್ತು. ಏನೋ ಯೋಚಿಸುತ್ತಿದ್ದಂತಿದ್ದ ಕೃಷ್ಣಯ್ಯರ್ “ಮುರಳೀ ನಿಮ್ತಂದೆ ಊರು ಒತ್ತಪ್ಪಾಲಂ ಅಂದ್ರಲ್ವಾ… ಅವರ ಹೆಸ್ರೇನೂಂದ್ರಿ?” ಎಂದು ಕೇಳಿ ತಿಳಿದುಕೊಂಡು ಇಂಟರ್ಕಾಮಿನಲ್ಲಿ ಫೋನು ಹಚ್ಚಿ ಸ್ವಲ್ಪ ಅಂಬೀನ ಬರ್ಹೇಳು ಎಂದು ಫೋನಿಟ್ಟರು. ಸ್ವಲ್ಪ ಹೊತ್ತಿನಲ್ಲೇ ಛೇಂಬರಿಗೆ ಬಂದ ವ್ಯಕ್ತಿಯನ್ನು ತಮ್ಮ ದಾಯಾದಿಯ ಮಗನೆಂದು ಪರಿಚಯಿಸಿ ಅವರೊಂದಿಗೆ ಅದೇನೇನೋ ನೆಂಟಸ್ತಿಕೆಗಳನ್ನು ಕೇಳಿತಿಳಿದರು. ಹಾಗೆಯೇ ಸ್ವಲ್ಪಹೊತ್ತು ಮಾತನಾಡಿದ ಕೃಷ್ಣಯ್ಯರ್ ತಮಗೂ ಮತ್ತು ಮುರಳೀಧರರಿಗೂ ಇದ್ದ ಯಾವುದೋ ಬಾದರಾಯಣ ಸಂಬಂಧವೊಂದನ್ನು ಹೆಕ್ಕಿತೆಗೆದಿದ್ದರು. ಈ ಸಂಬಂಧ ಪತ್ತೆಯಾದದ್ದರಿಂದ ಕೃಷ್ಣಯ್ಯರ್ ಬಹಳ ಉತ್ಸುಕರಾದಂತೆ ಕಂಡುಬಂತು. “ಅಪ್ಪಾ ಮುರಳೀ ವರಸೇಲಿ ನೀನು ನನಗೆ ಅಳಿಯ ಆಗ್ತೀಯ ಕಣಪ್ಪಾ…ಇನ್ಮೇಲೆ ಈ ಗಂಡಿನ್ಮನೆ ಕಡೆಯೋನು ಅನ್ನೋ ಬಿಗುಮಾನ ಎಲ್ಲಾ ಬಿಟ್ಬುಡು ಗೊತ್ತಾಯ್ತ… ನಿನಗಿನ್ನು ಸ್ಪೆಷಲ್ ಸತ್ಕಾರ ಏನೂ ಸಿಕ್ಕೋದಿಲ್ಲ ನೋಡು ಹಹ್ಹಹ್ಹ” ಎಂದು ನಗುತ್ತಾ ಹೇಳಿ ಅಕ್ಕರೆಯಿಂದ ತಬ್ಬಿಕೊಂಡರು. ಅದೇನು ಸಂಬಂಧವೆಂದು ಮುರಳಿಯವರಿಗೆ ತಿಳಿಯಲಿಲ್ಲವಾದರೂ “ಅಳಿಯಂಗೆ ಆಶೀರ್ವಾದ ಮಾಡಿ ಮಾವ” ಎಂದು ಬಗ್ಗಿ ಕೃಷ್ಣಯ್ಯರ್ ಕಾಲ್ಮುಟ್ಟಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ಕೃಷ್ಣಯ್ಯರ್ ಹಿರಿಮಗ ಅಲ್ಲಿದ್ದವರನ್ನು ಊಟಕ್ಕೇಳುವಂತೆ ಹೇಳಿದ. ಬ್ಯಾಂಕ್ವೆಟ್ ಹಾಲಿಗೆ ಹೋಗುವಷ್ಟರಲ್ಲಿ ಮಕ್ಕಳೊಂದಿಗೆ ಮುಕ್ತಳೂ ಅಲ್ಲಿಗೆ ಬಂದಿದ್ದುದು ಕಂಡಿತು. ಎಲ್ಲರೂ ಊಟ ಮುಗಿಸುವಷ್ಟರಲ್ಲಿ ಸಮಯ ಎರಡು ಘಂಟೆ ಸಮೀಪಿಸುತ್ತಿತ್ತು. ರಿಸೆಪ್ಷನ್ ಕೌಂಟರಿನಿಂದ ರೈಲ್ವೇಸ್ಟೇಷನ್ನಿಗೆ ಫೋನ್ಮಾಡಿದವರು ತಿರುವಾರೂರಿನ ರೈಲು ಒಂದು ಘಂಟೆ ತಡವಾಗಿ ಬರುತ್ತಿದೆಯೆಂದೂ ಸುಮಾರು ನಾಲ್ಕು ಘಂಟೆ ಹೊತ್ತಿಗೆ ವಿಶಾಖಪಟ್ಟಣ ತಲುಪುವ ನಿರೀಕ್ಷೆಯಿರುವುದಾಗಿ ತಿಳಿಸಿದರು. ವಿಷಯ ಕೇಳಿದ ಮುರಳಿ ಸ್ವಲ್ಪಹೊತ್ತು ವಿಶ್ರಮಿಸಲೆಂದು ತಮ್ಮ ಕೋಣೆಗೆ ತೆರಳಿದರು.

ನಾರಾಯಣ ಎಮ್ ಎಸ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x