ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 39 & 40): ಎಂ. ಜವರಾಜ್

-೩೯-
ಕುಲ ಸೇರಿತ್ತು

ಈ ಅಯ್ನೋರು ಕೆಂಡವಾಗಿದ್ರು
ಶಂಕ್ರಪ್ಪೋರು ಕೈಕಟ್ಟಿದ್ರು.

‘ಅಯ್ನೋರಾ,
ನೀವಿಲ್ಗ ಬರಂಗೇ ಇರ್ನಿಲ್ಲ
ನಾವು ಕುಲ ಸೇರ್ಬೇಕೇ ಇರ್ನಿಲ್ಲ
ಆದ್ರ ಕುಲ ಕುಲನೆ
ಈ ಕುಲ್ಕ ಬ್ಯಲ ಕೊಟ್ಟು ಬಂದಿದರಿ…

ಇಸ್ಟು ಜಿನ್ವು ನೀವೆ ನ್ಯಯ ಮಾಡ್ತಿದ್ರಿ
ಆದ್ರ ದೂರು ನಿಮ್ಮನ ಕಡಿಂದ ಅದ
ಕುಲ್ದ ನಿಯ್ಮ ಎಲ್ರುಗು ಒಂದೆ ಅನ್ತ
ಗೊತ್ತಿರದೆ ಅಲ್ವ.
ನಾವು ನಿಮ್ಬುಟ್ಟು ಕುಲ ಮಾಡ್ಬೇಕಾಗಿ
ಬಂದುದಾ.
ಈ ಕಾರ್ಣ ನಿಮ್ಮ ಕರೆಸ್ಬೇಕಾಯ್ತು,
ಕರಸ್ದು.. ನೀವು ಬಂದಿದರಿ
ಅದ್ಕ ಈ ಕುಲ ನಿಮ್ಗೂ ಬ್ಯಲ ಕೊಡುತ್ತಾ..

‘ಏಯ್ ಬಂಚೊತ್
ಈಗೀಗ ಅನ್ತ ಮನಲೆ ಹೇಳಿದ್ರ
ಅಲ್ಲೆ ಮಾಡ್ಬೋದಿತ್ತಲ್ಲ’

‘ನಂಗ ಪಾಲ್ಬೇಕು
ಅದ್ಕ ಕುಲುಕ್ ಬಂದಿ’

‘ಏಯ್, ಪಾಲ್ಬೇಕಂತ ಪಾಲು
ಎನ್ತ ಪಾಲ ಕೊಡದು
ಲೌಡೆ ಬಂಚೊತ್…
ಕುಲ್ಗೆಟ್ ಸೂಳೆರ್ನೆಲ್ಲ ಕಟ್ಗ ಬಾ
ಪಾಲ್ಕೊಡ್ತಿನಿ ನಿಂಗಾ..’

‘ನೀ ಸಾಚಾನಾ..
ಅಪ್ಪ ಅನ್ತ ಸುಮ್ನ ಅವ್ನಿ
ನಿನ್ನಾಟ ಈ ಕುಲ್ಕೆ ಗೊತ್ತು
ಬಾಯ್ಮುಚ್..’

‘ನೀ ಇಸ್ಟುಕ್ ಬಂದ್ಯಾ..’

ಈಗ ಕುಲ ಮಧ್ಯ ಬಂದು,
‘ಅಯ್ನೋರಾ ಸುಮ್ ಕುಂತ್ಕಳಿ
ಏಯ್ ಶಂಕ್ರ ಬಾಯ್ಮಚ್ಚು..
ಕುಲ್ದ ಇಚಾರ ಬುಟ್ಟು
ಇನ್ನೇನು ಮಾತಾಡ್ಬೇಡಿ’

ಕುಲ- ಶಂಕ್ರ ನಿಂದೇನ
ಶಂಕ್ರ- ನಂಗ ಪಾಲ್ಬೇಕು
ಕುಲ- ಪಾಲು ಅಂದ್ರ
ಶಂಕ್ರ- ತಾತುಂದು ಏನದ ಎಲ್ಲ ನಂಗೆ
ಕುಲ- ಉಳುದ್ದು
ಶಂಕ್ರ- ಬ್ಯಾಡ. ಇಂವ ಮಾಡಿರದು ಬ್ಯಾಡ
ಕುಲ- ಅಯ್ನೊರಾ
ಅಯ್ನೋರು- ಅದೆಂಗಾದ್ದು ನಾ ಇರಗಂಟ ಆಗದಿಲ್ಲ
ಕುಲ- ಶಂಕ್ರ..
ಶಂಕ್ರ- ಇಂವ ಈಗ್ಲೆ ಕಳ್ದನ ಮುಂದ ಉಳಿಸಿನ
ಕುಲ- ಅಂದ್ರ..
ಶಂಕ್ರ- ಚೆಂಗುಲಿಗು ಇವುನ್ಗು ಏನ
ಕುಲ- ಅಗುಸ್ರವ್ನ..
ಶಂಕ್ರ- ಊ್ಞ ಕಂತಕಟ್ಟ ಮಾಳುದ್ದು ಅವ್ನದಾಗದ
ಕುಲ- ಅಯ್ನೋರಾ ಇದೇನ ಈ ಮಾತು
ಅಯ್ನೋರು- ಯಾರಾ ಹೇಳಿದ್ದು
ಶಂಕ್ರ- ಶೇಕ್ದಾರ್ ಕೇಳಿ ಕುಲೊಸ್ತರೇ
ಕುಲ- ಅಯ್ನೋರಾ, ಇದ್ಯಾಕೊ ಸರಿ ಕಾಣ್ದು
ಅಯ್ನೋರು- ಅದು ಬುಡಿ
ಕುಲ- ಅಂದ್ರ ಹೇಳಿ
ಅಯ್ನೋರು- ಸದ್ಯಕ್ಕ ಮಲ್ಲನ್ಕೆರ ಗದ್ದ ಮಾಡ್ತಿರ್ಲಿ
ಶಂಕ್ರ- ಹಂಗಾಗದಿಲ್ಲ
ಅಯ್ನೋರು- ಹಂಗಾಗದಿಲ್ಲ ಅಂದ್ರ ಹೋಗಲೆಯ್
ಶಂಕ್ರ- ಎಲ್ಲಿಗ್ಯಾ ಹೋಗದು
ಅಯ್ನೋರು- ಸೂಳಮಗನ ಮಾತಾಡ್ಬ್ಯಾಡ
ಶಂಕ್ರ- ಏಯ್ ಸೂಳ್ಗಿಳಮಗ ಅನ್ಬೇಡ
ಅಯ್ನೋರು- ಸೂಳಮಗನೆ ನೀನು ನಿಮ್ಮೊವ್ವ ಸೂಳ
ಶಂಕ್ರ- ಸಾಯಿಸ್ಬುಡ್ತಿನಿ ಹಂಗಂದ್ರ
ಅಯ್ನೋರು- ಗಂಡ ಮುಟ್ದೆ ಬಸ್ರಾದವ ಏನಾದಳು
ಕುಲ- ಅಯ್ನೋರಾ ನಿಮ್ಬಾಯ್ಲಿ ಇದೆಲ್ಲ ಬ್ಯಾಡ

ಈ ಅಯ್ನೋರು
ಸೂಳ ಪದ ಬುಟ್ಟು
ಮುಂದುಕ್ಕ ಹೋಗ್ನೇ ಇಲ್ಲ
ಕುಲ ಸಮಾಧಾನ ಮಾಡ್ತನೇ ಇತ್ತು
ಶಂಕ್ರಪ್ಪೋರು ಎದ್ಬಂದವ್ರು
ಜಾಡ್ಸಿ ಯದ್ಗ ಒದ್ದೇ ಬುಟ್ರು

ಈ ಅಯ್ನೋರು
‘ಅಯ್ಯೊ ಸೂಳಮಗನೆ’
ಅನ್ತ ಅನ್ತ ಕಾಲಲಿರ ನನ್ನ ಕೈಗ ತಕ್ಕಂಡು
ರಪ್ಪ ರಪ್ಪಂತ ಹೊಡ್ದು ತಳ್ಳುದ್ರು
ಅಲಲೆ
ಶಂಕ್ರಪ್ಪೋರು ಕೆಳಕ ಬಿದ್ರು
ನಾ ದಿಕ್ಕಾಪಾಲಾಗಿ ಬಿದ್ದು
ನೋಡಂಗಾಯ್ತು
ಅಯ್ನೋರು ಗುಂಪ್ಲಿ ಅರುಚುದ್ರು
ಕುಲ ಮೇಲೇಳ್ತು
ನೀಲವ್ವೋರು ಬಂದ್ರು
ತಡಿಕ ಬಂದು ನನ್ನ ಎತ್ಕಂಡು
ಅಯ್ನೋರತ್ರ ಬಂದು ಕೆಳಕಿಟ್ರು
ಈ ಅಯ್ನೋರು
ನನ್ನ ಸಲೀಸಾಗಿ ಮೆಟ್ಗಂಡು
ನೀಲವ್ವೋರ ದರುಗುಟ್ಗ ನೋಡುದ್ರು

ಈಗ ಕುಲ ಮೂರು ಭಾಗವಾಗಿ
ಒಂದು ಗುಂಪು
ಅಯ್ನೋರಾ ಬಳಸಿತ್ತು
ಒಂದು ಗುಂಪು
ಶಂಕ್ರಪ್ಪೊರ ಬಳಸಿತ್ತು
ಒಂದು ಗುಂಪು
ನೀಲವ್ವೊರ ಬಳಸಿತ್ತು

ಕೊನ್ಗ
ಕುಲ- ಶಂಕ್ರ ಬಾಣ್ತನ ಮುಗಿಲಿ
ಶಂಕ್ರ- ಅಲ್ಲಿಗಂಟ ಒಂದ್ಕುಂಟನು ಇರಲ್ಲ
ಕುಲ- ನಿನ್ ರುಜು ಇಲ್ದೆ ಆದ್ದ
ಶಂಕ್ರ- ಚೆಂಗುಲಿಗ ಆಗಿಲ್ವ


ಈ ಅಯ್ನೋರು
ಮಲ್ಲನ ಕೆರ ಮಾಳ್ದತ್ರ
ಆಲ್ದ ಮರುತ್ತವ ಸುಮ್ನೆ ಕುಂತ್ರು
ಸಂದ ಆಗದ
ಚೆಂಗುಲಿ ಇದ್ದಿದ್ರ
ಇಸ್ಟೊತ್ಗ ಹೆಂಡದ ಬಾಟ್ಲಿ
ಸದ್ದು ಮಾಡ್ತಿದ್ದು
ಈ ಚೆಂಗುಲಿ
ಮೈಸೂರ್ ಬಸ್ಸತ್ತಿ ಹೋದಂವ
ಮೂರ್ ಜಿನೇ ಆಯ್ತು
ಇನ್ನೂ ಕಾಣಿ..

-೪೦-
ಇವತ್ಯಾಕೋ ಇಸ್ಟೊತ್ತಾದ್ರು
ಅಯ್ನೋರ್ ಕಾಣಿ.

ನೀಲವ್ವೋರು
ಸೀಗಕಡ್ಡಿ ತಕ್ಕಂಡು
ಕಸ ಗುಡ್ಸಿ
ನೀರಿಟ್ಟು ರಂಗೋಲಿ ಬುಟ್ರು

ಇಸ್ಟೊತ್ಗೆ ಬಿಸ್ಲು
ಚುರುಗುಟ್ತ ಅದ
ದೊಡ್ಡವ್ವ ಬಂದು
ಜಗುಲಿ ಏರುದ್ಲು
ಎಲಡ್ಕ
ಅಗಿತಾ ಉಗಿತಾ
ಲೊಚ್ಗುಟ್ಟುದ್ಲು

ಅದ್ಸರಿ
ಈ ಅಯ್ನೋರು
ನನ್ನ ಬುಟ್ಟು ಎಲ್ಲಿಗೋದ್ರು..
ನಾನಿಲ್ದೆ ಅದೆಂಗೋದ್ರು….

ಈಗ
ನೀಲವ್ವೋರು ಬಂದು ಕುಂತ್ರು

‘ಕುಸೈ
ಸುನಿ ಹೆತ್ತು
ತಿಂಗ್ಳಾಯ್ತು ಅಲ್ವ’
‘ಉಂಕಮ್ಮ ತಿಂಗ್ಳಾಯ್ತು’
‘ಈ ಮುರುಕ್ ಮುಸ್ಡಿಗ ಹೇಳ್ದಿ
ಸುನಿ ಹೆಸ್ರೆತ್ತಿದಂಗೆ ಉರುದು ಬೀಳುತ್ತ..’
‘ಇವ್ರು
ಉರುದು ಉರುದು
ಏನ್ ಮಾಡಿರು’
‘ನೋಡು ಆದ್ದಾಗ್ಲಿ
ನಿ ಬಂದ್ರ
ನೋಡ್ಕಂಡಾರು ಬರ್ಬೇದು’
‘ಗೊತ್ತಾದ್ರ ಬುಟ್ಟರ’
‘ಕುಸೈ,
ಅವ
ಮಾದ್ಗಿತ್ತಿನೆ ಇರ್ಬೇದು
ಆದ್ರ
ಶಂಕ್ರುನ್ ಗ್ಯರವಾ ದಾಟಿಲ್ಲ
ನಮ್ಮಂಗೆ
ನಮ್ ಕುಲ್ದಂಗೆ
ಜೀವ ಸವುಸ್ತಿಲ್ವ’
‘ನಿ ಹೇಳದು ಸರಿ ಕಮ್ಮ
ಅವತ್ತು ಆದ್ದು ಗೊತ್ತಿಲ್ವ’
‘ಗೊತ್ತುಕಾ ಕುಸೈ,
ಅವತ್ತು ಹಂಗಿತ್ತು
ಆದ್ರ,
ಕೋರ್ಟು ಕಚೇರಿ
ಯಾಕ ಇದೆಲ್ಲ
ಅನ್ತ ತಣ್ಗಾಯ್ತು’
‘ತೊಗ್ರಿ ಬುಡ್ಸಕ
ಹೆಣ್ಣಾಳ್ಬೇಕು ಅನ್ತ
ಕರಸ್ದವ್ರು ಇವ್ರೆ.
ಅವ್ರು ತೊಗ್ರಿ ಬುಡುಸ್ತಿದ್ರ
ತೆವ್ರಿ ಮ್ಯಾಲ
ತಿಕ ಊರಿ ಏಳ್ದೆ
ಕೆಲ್ಸ ಮಾಡ್ಸ ನೆವ್ದಲ್ಲಿ
ಕೆಳಕು ಮ್ಯಾಕ್ಕು
ನೋಡ್ತ ಕುಂತ್ಗಳವ್ರು.
ಹೋಗವತ್ಗ ಒಂದೊಂದ್ ಸೆರ
ತೊಗ್ರಿ ಕೊಟ್ಟು ಕಳಿಸವ್ರು
ನಾಕಂಡಗಿ ಆ ಸುನ್ಯಾ
ತೊಗ್ರಿ ಗಿಡುದ್ಸಂದಿಗ ಎಳ್ಕ ಹೋಗಿ
ಲಂಗ ಒಳಕ ಕೈಯಾಕಿ
ಕ್ಯಾಕುರ್ಸಿ ಉಗಿಸ್ಕಳ್ನಿಲ್ವ…
ನನ್ತವ್ ಕಿಸ್ಯಕಾದದ
ಅಲ್ಲೇನ್ ಕಿಸಿತಿದ್ರು…
ಆದ್ರ..ಆದ್ರ…
ಈ ಶಂಕ್ರ
ಅದ್ಯಾವ್ ಮಾಯ್ದಲ್ಲಿ
ಅದೆಂಗ್ಯ ಈ ಸುನ್ಯಾ
ಅನ್ಸರುಸ್ಕಂಡಾ ಅನ್ನದೆ ತಿಳಿದು’

ಎಂದೂ
ಮಾತಾಡದ ನೀಲವ್ವೋರು
ಮಾತಾಡ್ತನೆ ಇದ್ರು


ದೊಡ್ಡವ್ವ
ಬೆಂಟಿ ಬೆಂಟಿ ಪಿಸ್ಗುಟ್ತ
‘ಕುಸೈ
ನಿನ್ಗಂಡ ಸುನಿ ಮ್ಯಾಲ
ಕಣ್ಮಡ್ಗಿ
ತೊಗ್ರಿ ಬುಡ್ಸಕ ಹಾಕಂಡಿದ್ದ
ಅವ ಕೊಸ್ರಾಡವತ್ಗ
ಹಗ ಸಾದ್ಸವತ್ಲಿ
ಈ ಶಂಕ್ರ
ಕಣ್ಮಡ್ಗಿ ಕಟ್ಕಂಡದ ಸಯ್ಸಿನಾ..
ಈಗ ಭಾಗ ಕೇಳುದ್ರ ಕೊಟ್ಟನಾ..’
‘ಕೊಟ್ಟನಾ ಅಂದ್ರಾ..
ಕೊಡ್ಬೇಕು ಕಮ್ಮಾ…
ಅವುನ್ಗ ಕೊಡ್ದೆ
ಇನ್ಯಾರ್ಗ್ ಕೊಟ್ಟರು…
ಈ ಶಂಕ್ರ ನ್ಯಟ್ಗಿದ್ರ
ಆ ಚೆಂಗುಲಿ ಬತ್ತಿದ್ನಾ
ತ್ವಾಟ ಬುಟ್ಟೊಗ್ದೆ ಇದ್ರ
ಕಂತಕಟ್ಟ ಮಾಳ ಕಾಡ್ಪಾಲಾಯ್ತಿತ್ತಾ’


ದೊಡ್ಡವ್ವ
ಅದೇನ್ ಉಗ್ತಳೊ ಥೂ..
ಉಗ್ತು ಉಗ್ತು
ಮೋರಿಯೆಲ್ಲ ಕೆಂಪಿಡ್ದು
ಚಿತ್ರ ಬರದಂಗಿತ್ತು.
ಹಿಂಗ
ಉಗಿತಾ ಉಗಿತಾ
ಬೀದಿದಿಕ್ಕ ನೋಡ್ತ
‘ಕುಸೈ ಬತ್ತ ಇರದು
ಶಂಕ್ರನಾ’
‘ಉಂಕಮ್ಮ’
‘ಜಗಳ ಆಡಕೇನ
ಬತ್ತನ ಅನ್ಸುತ್ತ’
‘ಆಡ್ಲಿ ತಕ್ಕ’ ಅನ್ತ
ನೀಲವ್ವೊರು ಎದ್ದು ಒಳಕ್ಕೋದ್ರು.


ಶಂಕ್ರಪ್ಪೋರು ಬುಸುಗುಡ್ತ ಬಂದ್ರು

ದೊಡ್ಡವ್ವ
‘ಕುಸೈ ಶಂಕ್ರ
ಸಮಾಧಾನ್ವಾಗಿ ಕೇಳಿ ಈಸ್ಕಬಾರ್ದ’


ಶಂಕ್ರಪ್ಪೋರು

ದೊಡ್ಡವ್ವನ ಮಾತ
ತೂದು ಬಿಸಾಕಿ
‘ಅವ್ವೊ ಅವ್ವಾ..
ಅವ್ವೊ ಅವ್ವಾ..’
ಅನ್ತ ಸಾರಿ ಸಾರಿ ಕೂಗುದ್ರು


ನೀಲವ್ವೋರು
ಒಳಕ್ಕೋದವ್ರು ಈಚ್ಗ ಬಂದು
‘ಬಾ ಕುಂತ್ಗ’
‘ಅವ್ವವ್ ನಂದು ತಪ್ಪಾ’
‘ನಾ ಹೇಳಗಿದ್ದಾ..
ನೀ ತ್ವಾಟ ಬುಡಗ
ಈ ಅವ್ವ ಗ್ಯಾನ ಬರನಿಲ್ವ
ನೀ ಹೆಂಗಾರು ಬುಟ್ಟಾ..’
‘ಅವ್ವೊವ್ ನಂಗೇನ್ ಗೊತ್ತವ್ವೊವ್’
ಅನ್ತ ಅಳ್ತ ಕಣ್ಣೊರುಸ್ಕತಾ ಇರಗ
ಈ ದೊಡ್ಡವ್ವ
‘ಕುಸೈ ಅಳಬ್ಯಾಡ ಇರು
ನಿಂದು ಅನ್ನದು ಇದ್ದೇ ಅದ
ಕ್ಯಾಣುಕ್ಕ ಏನಾ ಆಗದ’
‘ನಂಗೆಲ್ಲ ಗೊತ್ತು
ಇಲ್ಲಿ ಏನೇನಾಯ್ತು
ಅನ್ನದು ಗೊತ್ತು’
‘ಅದ ಒಳ್ಗೇ ಮಡಿಕ
ಮುಂದಾಗದ ನೋಡು’
‘ನೋಡ್ತಿನಿ
ನೋಡ್ತನೇ ಅವ್ನಿ
ಬತ್ತಿನಿ
ನಾ ಬಂದದ ಹೇಳು ಗೊತ್ತಾಗ್ಲಿ’
ಅನ್ತ
ಬುಸುಗುಡ್ತ
ಮೋರಿ ದಾಟಿ
ಬೀದಿಗುಂಟ
ದಾಪುಗಾಲಾಕ್ತ ಹೋದ್ರು.

ಎಂ. ಜವರಾಜ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x