(9)
ಪ್ರೀತಿಯ ತಂದೆ ಬಂದು “ಅಳಿಯಂದ್ರೆ,
ಗೋಪಾಲಯ್ಯ ಎಂದರೆ ಯಾರು? ಒಂದೇ ಸಮನೆ ನಿಮ್ಮ ತಾಯಿಯವರು, ಗೋಪಾಲಯ್ಯ ಕೊಲೆ ಕೊಲೆ ಎನ್ನುತ್ತಿದ್ದಾರೆ. ಬೇಗ ಬನ್ನಿ” ಎನ್ನುತ್ತಾರೆ.
ಗೋಪಾಲಯ್ಯ ಹೋ ನನ್ನ ತಂದೆಯವರನ್ನು ಕೊಲ್ಲಿಸಿದವನು ಎಂದು ಆಗಾಗ ಅಮ್ಮ ಹೇಳುತ್ತಿದ್ದರು. ಈಗ್ಯಾಕೆ ಅವನ ಹೆಸರು ಹೇಳುತ್ತಿದ್ದಾರೆ. ಎಂದು ಆಶ್ಚರ್ಯದಿಂದ ಒಳ ಓಡುತ್ತಾನೆ.
ಕಮಲಮ್ಮಗೆಎಚ್ಚರವಾಗಿರುತ್ತೆ. ಅಮ್ಮಾ, ಏನಾಯಿತಮ್ಮ? ಎಂದಾಗ ಬೆಳಿಗ್ಗೆ ಗೋಪಾಲಯ್ಯನ ಹಾಗೆಯೇ ಇದ್ದವ ಯಾರೋ ನಮ್ಮ ಮನೆ ಮುಂದೆ ಬಂದಿದ್ದ, ನಿಮ್ಮಪ್ಪನನ್ನು
ಕೊಲ್ಲಿಸಿದ್ದು ಸಾಕಾಗಲಿಲ್ಲವೇನೋ, ಮತ್ಯಾರನ್ನು ಕೊಲ್ಲಲು ಇವನನ್ನು ಕಳಿಸಿದ್ದಾನೋ? ಅವನನ್ನು ನೋಡಿ ನನ್ನ ಹೃದಯವೇ ನಿಂತಂತಾಯಿತು. ಅವನ್ಯಾಕೆ ನಮ್ಮ ಮನೆಗೆ ಬಂದ ಎಂದು ಮತ್ತೆ ಎದೆಗುಂದುತ್ತಾರೆ ಕಮಲಮ್ಮ.
ಅಮ್ಮ ನೀವೇನು ಹೆದರಬೇಡಿ, ಏನು ಆಗೊಲ್ಲ ಅವರು ತುಂಬಾ ಒಳ್ಳೆಯವರು. ನಿಮ್ಮನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದರು. ನಿಮ್ಮನ್ನು ಆಸ್ಪತ್ರೆಗೆ ಅವರ ಕಾರಿನಲ್ಲೇ ಕರೆದುಕೊಂಡು ಬಂದರು. ಇಷ್ಟು ಹೊತ್ತು ಇಲ್ಲೇ ಇದ್ದು ಈಗ ಎಲ್ಲಿಗೋ ಹೋಗಿದ್ದಾರೆ. ಮತ್ತೆ ಬರಬಹುದೆಂದು ಹೇಳಿ ಸಮಾಧಾ ಮಾಡಿ ನೀವು ದಣಿಯಬೇಡಿ ಮಲಗಿಕೊಳ್ಳಿ ಎಂದು ಹೊರಬರುತ್ತಾರೆ.
ಪ್ರೀತಿ ಅತ್ತೆಗೆ, “ನಾವಿದ್ದೇವೆ, ನೀವು ಆರಾಮಾಗಿರಿ ಅತ್ತೆ” ಎಂದು ಧೈರ್ಯ ತುಂಬಿ ಪ್ರೀತಿಯಿಂದ ಮಾತನಾಡಿಸುತ್ತಾಳೆ. ನಿನ್ನೆ ಏನೋ ಆಗಿದೆ ಎಂಬಂತೆ ತವರಿಗೆ ಹೋದ ಸೊಸೆ ಈದಿನ ಬಂದಿದ್ದಾಳೆ. ಮುಖದಲ್ಲಿ ಕಾಂತಿ ಇಲ್ಲ. ಕಳೆಹೀನವಾಗಿದೆ, ಅತ್ತಂತೆ ಕಾಣುತ್ತಿದೆ ಮುಖ. ಕೃತಕ ನಗುವಿನೊಂದಿಗೆ ಮಾತನಾಡುತ್ತಿದ್ದುದು ಕಮಲಮ್ಮಗೆ ಸ್ಪಷ್ಟವಾಗಿ ಕಾಣುತ್ತಿತ್ತು.
ಅಷ್ಟರಲ್ಲಿ ಬೀಗರು, “ಕಮಲಮ್ಮನವರೇ ನಿಮಗೊಂದುಸಂತಸದ ವಿಷಯ. ನೀವು ಅಜ್ಜಿಯಾಗುತ್ತಿದ್ದೀರಿ, ನಿಮ್ಮ ಮನೆಗೆ ಪುಟ್ಟ ಕಂದ ಬರುವ ತಯಾರಿಯಲ್ಲಿದೆ, ನೀವು ಸಂತೋಷವಾಗಿರಬೇಕು ಈಗ”, ಎಂದೊಡನೆ ಕಮಲಮ್ಮನವರ ಮುಖ ಅರಳಿ,
“ಪ್ರೀತಿ ಇದಕ್ಕೇನಾ ನೀನು ಮನಿನ್ನೆ ಬೇಕು ಅಂತ ತವರಿಗೆ ಹೋಗಿ, ಅಲ್ಲಿಂದ ನಿನ್ನಗಂಡಂಗೆ ಸರ್ಪ್ರೈಸ್ ಕೊಡೋಣ ಅನ್ಕೊಂಡಿದ್ಯಾ, ನನ್ನ ಬಂಗಾರ ತುಂಬ ಖುಷೀನಮ್ಮ, ಇನ್ಮೇಲೆ ತುಂಬಾ ಹುಷಾರಾಗಿರಬೇಕು ನೀನು. ನೋಡು ನಿನ್ನ ಆರೈಕೆ ಮಾಡೋ ಸಮಯದಲ್ಲಿ ನಾ ಹೀಗಾಗಿಕೂತೀನಿ. ಆದ್ರೂ ನಂಗೇನು ಆಗೊಲ್ಲ ನನ್ ಮೊಮ್ಮಗುಗಾಗಿ ಬೇಗ ಗುಣವಾಗ್ತೀನಿ”
ಎಂದು ನಗುತ್ತಾ ಪ್ರೀತಿಯ ಕೈಹಿಡಿಯುತ್ತಾರೆ.
ಪ್ರೀತಿಗೆ ಮತ್ತಷ್ಟು ಕಸಿವಿಸಿ ಮೋಸ ಮಾಡುತ್ತಿರುವೆನೆಂಬಭಾವ ಮೂಡಿ, ಕಳೆಹೀನವಾಗುತ್ತಾಳೆ. ಆದರೆ ಗಂಡನ ಮಾತುನೆನಪಾಗಿ, ಅವರಲ್ಲಿ ಎಲ್ಲ ಸತ್ಯವನ್ನು ಹೇಳಬೇಕು. ನನ್ನಮನದಲ್ಲಿ ಕುದಿಯುತ್ತಿರುವ, ದಿನನಿತ್ಯ ನನ್ನನ್ನು ಸುಡುತ್ತಿರುವಆ ಘಟನೆಯನ್ನು ಹೇಳಿಬಿಡಬೇಕು; ಎಂದು ನಿರ್ಧರಿಸಿ ತನ್ನತಂದೆ ತಾಯಿಗೆ ಮನೆಗೆ ಹೋಗಿ, ತಾನಿಲ್ಲೇ ಇರುವುದಾಗಿತಿಳಿಸುತ್ತಾಳೆ. ಅವರು ಕಮಲಮ್ಮನವರಿಗೆ, ಅಳಿಯನಿಗೆ ಹೇಳಿಹೊರಡುತ್ತಾರೆ. ಪ್ರೀತಿ ಅತ್ತೆಗೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ, ನಾವಿಲ್ಲೇ ಹೊರಗಿರುವುದಾಗಿ ಹೇಳುತ್ತಾಳೆ. ಕಮಲಮ್ಮಸಂತೋಷದಿAದ ಮಲಗುತ್ತಾರೆ. ಪ್ರೀತಿ ಹೊರಗೆ ಗಂಡನ ಬಳಿಬರುತ್ತಾಳೆ.
ಸಂಪತ್‌ನ ಬಾಡಿದ ಮುಖ ಕಂಡು, ರೀ ನಾನು ನಿಮಗೆಮೋಸ ಮಾಡಿದೆ, ನಮ್ಮ ಮದುವೆಯ ಒಂದು ವಾರದಮುಂಚೆ ಒಂದು ದಿನ….. ಮುಂದುವರಿಸುವುದರಲ್ಲಿ ….. ಹಲೋ ಎಂದು ಯಾರೋ ಕೂಗಿದಂತಾಗಿ ತಿರುಗಿನೋಡುತ್ತಾರೆ.
ಸಂತೋಷ್!!!
ಪ್ರೀತಿ ಅವನನ್ನು ನೋಡಿದೊಡನೆ ಕುಗ್ಗಿ ಹೋಗುತ್ತಾಳೆ, ಸಂತೋಷ್ ಪ್ರೀತಿನ ನೋಡಿ ಬೆವರಲು ಪ್ರಾರಂಭಿಸುತ್ತಾನೆ, ಏನೂ ತಿಳಿಯದ ಸಂಪತ್, ಬನ್ನಿ ಎಲ್ಲಿ ಹೋಗಿದ್ದಿರಿ ನೀವು? ಪ್ರೀತಿ ಇವರೇ ಬೆಳಿಗ್ಗೆ ನಮ್ಮ ಮನೆಗೆ ಬಂದದ್ದು. ನಮಗೆ ಉಪಕಾರ ಮಾಡಿದವರು.
ನಿಮ್ಮ ಹೆಸರೂ…. ಎಂದು ಸಂಪತ್ ಕೇಳುವಾಗಲೇ….“ಸಂತೋಷ್….. ಸಂತೋಷ್ ನನ್ನ ಆಪ್ತ ಗೆಳೆಯ. ನನ್ನ ಜೀವನವನ್ನೇ ನಾಶ ಮಾಡಿದಂತ ಆತ್ಮೀಯ ಗೆಳೆಯ. ನಂಬಿದ ಗೆಳೆತನಕ್ಕೇ ಕಳಂಕ ತಂದ ನೆಚ್ಚಿನ ಗೆಳೆಯ, ಗಂಡು ಹೆಣ್ಣಿನ ಮಧ್ಯೆ
ನಿಷ್ಕಲ್ಮಷವಾದ ಸ್ನೇಹ ಇರುತ್ತದೆಂಬುದಕ್ಕೆ ಸಾಕ್ಷಿಯಂತಿದ್ದ ನಮ್ಮ ಬಾಂಧವ್ಯವನ್ನು ಒಂದೇ ಕ್ಷಣದ ಕಾಮತೃಷೆಗೆ ಬಲಿಕೊಟ್ಟವ.
ಹೂಂ ನನ್ನ… ಗೆಳೆಯ.. ಆಹ್ಹ ಹ್ಹ ಹ್ಹ…
(10)
ಕೋಟಿ ಜನರ ನಡುವೆ ನಮ್ಮ ಸ್ನೇಹ ದೊಡ್ಡದು ಎಂದು ಹೇಳಿಕೊಳ್ಳೋಣ ಎಂದು ಹೇಳಿ, ಆ ಸ್ನೇಹಕ್ಕೆ ಕಾಮದ ಬಣ್ಣಬಳಿದವ” ಎಂದು ಪ್ರೀತಿ ಜೋರಾಗಿ ಹೇಳಿಬಿಡುತ್ತಾಳೆ.
ಸಂತೋಷ್ ಗೆ ಮಾತೇ ಬರುತ್ತಿಲ್ಲವಾದರೆ, ಸಂಪತ್ಗೆ ನಿಂತ ಧರೆಯೇ ನಡುಗಿದಂತಾಗಿ, ತಲೆ ಸುತ್ತು ಬಂದಂತಾಗಿ ಕುಳಿತು ಬಿಡುತ್ತಾನೆ.
“ರೀ” ಎಂದು ಪ್ರೀತಿ ಗಂಡನ ಕೈ ಹಿಡಿದುಕುಳಿತು.
“ಮತ್ಯಾಕೆ ಬಂದೆ, ನೀನು ನನಗೆ ಮಾಡಿದ ಕೇಡುಸಾಕಾಗಿಲ್ಲವೆಂದು, ನನ್ನ ಅತ್ತೆಯವರನ್ನೂ ಬಲಿ ತೆಗೆದುಕೊಳ್ಳಲು ಬಂದಿರುವೆಯಾ?” ಎಂದು ಕೇಳುತ್ತಾಳೆ.
ತಕ್ಷಣವೇ ಜಾಗೃತನಾದ ಸಂಪತ್, “ಸಂತೋಷ್ ನೀವು ಯಾರು, ಗೋಪಾಲಯ್ಯ ಎಂಬುವವರು ನಿಮ್ಮ ತಂದೆಯೇ?” ಎಂದು ಕೇಳುತ್ತಾನೆ. ಅದಕ್ಕೆ “ಹೌದು, ಗೋಪಾಲಯ್ಯ ನನ್ನತಂದೆ, ಅವರು ನಿಮಗ್ಹೇಗೆ ಪರಿಚಯ?” ಎಂದು ಕೇಳುತ್ತಾನೆ.
“ಗೋಪಾಲಯ್ಯ, ಅವನು ಮನುಷ್ಯನೇ ಅಲ್ಲ. ಅವನಷವಿರುದ್ಧ ನ್ಯಾಯಾಲಯದಲ್ಲಿ ವಾದಿಸಿದ, ನ್ಯಾಯದ ಪರವಾಗಿ ನಿಂತಿದ್ದ ನನ್ನ ತಂದೆ ಆದರ್ಶ ಪುರುಷ, ವಕೀಲ ಅಶೋಕರನ್ನುಕರುಣೆ ಇಲ್ಲದೆ ಕೊಲ್ಲಿಸಿದವನು” ನೀವು ಅವನಂತೆಯೇ ಇದ್ದೀರಿ, ಅದಕ್ಕೆ ನಮ್ಮ ತಾಯಿ ನಿಮ್ಮನ್ನು ನೋಡಿದೊಡನೆ ಬಿದ್ದಿದ್ದಾರೆ. ಅವರ ಹೃದಯ ನಿಂತಂತಾಗಿ ಹೃದಯಾಘಾತಸಂಭವಿಸಿದೆ. ನಿಮ್ಮ ತಂದೆ ನಮ್ಮ ತಂದೆಯ ಜೀವವನ್ನುಕೊಂದರೆ, ನೀವು ನಮ್ಮ ಜೀವನವನ್ನೇ ಕೊಂದಿರಿ !!” ಎಂದು ಆಕ್ರೋಷಭರಿತನಾಗುತ್ತಾನೆ.
ಪ್ರೀತಿಗೆ ಸತ್ಯವನ್ನು ಹೊರಹಾಕಿದ ನಿರಾಳತೆ, ಸಂತೋಷ್ಗೆ ಬಾಯಿ ಬಿಡಲು ಆಗುತ್ತಿಲ್ಲ. ನೇರವಾಗಿ ಬಂದು ಸಂಪತ್‌ನ ಕಾಲಿಗೆರಗುತ್ತಾನೆ.
“ಪ್ರೀತಿ ನನ್ನ ಆತ್ಮೀಯ ಗೆಳತಿ. ನಾನು ನನ್ನ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾಗಲೇ, ಪ್ರೀತಿಗೆ ಮದುವೆ ಗೊತ್ತಾಗಿದೆ ಎಂದು ತಿಳಿಯಿತು. ಆ ಸಮಯಕ್ಕೆ ನಂಗೆ ಪ್ರೀತಿಯನ್ನು ಬಿಟ್ಟಿರಲಾಗಲಿಲ್ಲ. ಅವಳ ಸ್ನೇಹ ನಂಗೆ ಶಾಶ್ವತವಾಗಿರಬೇಂಕೆಂಬ ಆಸೆಯಾಯಿತು. ಆಕೆಯ ಮದುವೆ ಆದರೆ ಎಲ್ಲಿ ನನ್ನಿಂದ ದೂರವಾಗುತ್ತಾಳೋ ಎಂಬ ಭಯದಿಂದ ಪ್ರೀತಿಗೆ ಮನವೊಲಿಸಲು ಯತ್ನಿಸಿದೆ. ಆದರೆ ಆಕೆಯ ದೇಹಕ್ಕೆ ಎಂದು ನಾನು ಆಸೆ ಪಟ್ಟವನಲ್ಲ. ಆ ಕ್ಷಣ ಏನಾಯಿತೋ ನನ್ನ ಅರಿವಿಗೂ ಬಾರದಂತೆ ನಡೆದುಹೋಯಿತು. ನನ್ನ ಮನಸ್ಸು, ದೇಹ ಎರಡೂ ನನ್ನ ಸ್ಥಿಮಿತದಲ್ಲಿರಲಿಲ್ಲ. ಇದರಲ್ಲಿ ಪ್ರೀತಿಯದು ಏನು ತಪ್ಪಿಲ್ಲ. ಎಲ್ಲ ತಪ್ಪು ನನ್ನದೆ. ನಾ ಮಾಡಿದ ತಪ್ಪಿಗೆ ದೇವರು ನನಗೆ ಸರಿಯಾದ ಶಿಕ್ಷೆಯನ್ನೇ ನೀಡಿದ್ದಾನೆ. ಮಾಡಿದ ದೌರ್ಜನ್ಯಕ್ಕೆ ಬಲಿಯಾಗಿ ಆ ದಿನವೇ ಘಟನೆಯ ಬಳಿಕ ಪ್ರೀತಿಯನ್ನು ಭೇಟಿಯಾಗಲೆಂದು ಹೊರಟಾಗ ನಡೆದ ಕಾರು ಅಪಘಾತದಲ್ಲಿ ನಾನು… ನಾನು…. ನನ್ನ ಪುರುಷತ್ವವನ್ನೇ ಕಳೆದುಕೊಂಡೆ. ಬಿದ್ದ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಕೋಮಾಕ್ಕೆ ಹೋದವನು ನಾನು. ಎಚ್ಚರವಾದುದೇ ತಡ ಪ್ರೀತಿಯನ್ನು ಭೇಟಿ ಆಗಿ ಕ್ಷಮೆ ಕೇಳಬೇಕೆಂದುಕೊಂಡೆ. ನಿನ್ನೆ ಪ್ರೀತಿಯನ್ನು ಮಾತನಾಡಿಸಿ ಕ್ಷಮೆ ಕೇಳಿದೆ, ಆದರೆ ಅವಳಿಗೆ ನಾನು ಮಾಡಿದ ವಂಚನೆ ಚಿಕ್ಕದೇ? ಅದಕ್ಕೆ ಅವಳು ನಾ ಏನು ಹೇಳಿದರೂ ಕೇಳದೆ ಮನೆಗೆ ಹೋದಳು. ನಾನು ಮಾಡಿದ ತಪ್ಪನ್ನು ನಾನೇ ಸರಿಗೊಳಿಸಬೇಕು, ನಿಮ್ಮನ್ನು ಭೇಟಿ ಆಗಿ ನಡೆದ ಸಂಗತಿ ತಿಳಿಸಿ ಪ್ರೀತಿಯದು ಏನು ತಪ್ಪಿಲ್ಲ ನನ್ನದೇ ತಪ್ಪೆಂದು ಹೇಳಿ, ನಿಮ್ಮ ಸಂಸಾರ ಚೆನ್ನಾಗಿರುವಂತೆ ಮಾಡಬೇಕೆಂದುಕೊಂಡು ಈ ದಿನ ಬೆಳಿಗ್ಗೆ ನಿಮ್ಮ ಮನೆಯನ್ನು ಹುಡುಕಿಕೊಂಡು ಬಂದೆ. ನಂತರ ಇಷ್ಟೆಲ್ಲ ನಡೆದು ಹೋಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನ ಪ್ರಾಣ ಸ್ನೇಹಿತೆ ಪ್ರೀತಿ ಸಂತೋಷವಾಗಿರಬೇಕು. ಅವಳು ನಿಮ್ಮಜೊತೆ ಸುಖವಾಗಿ ಸಂಸಾರ ಮಾಡಬೇಕೆಂಬುದೇ ನನ್ನ ಆಸೆ” ಎಂದು ಗದ್ಗದಿತನಾಗುತ್ತಾನೆ.
ಸಾವರಿಸಿಕೊಂಡು “ಮತ್ತೊಂದು ವಿಷಯ, ನಮ್ಮ ತಂದೆ ನಿಮ್ಮ ತಂದೆಯನ್ನು ಕೊಲ್ಲಿಸಿರುವುದು ಅಪರಾಧ, ಆದರೆ ಅದಕ್ಕೆ ನಾನು ಕಾರಣವಲ್ಲವಾದರೂ ಅಂತಹ ಮನುಷ್ಯನ ಮಗನಾಗಿರುವುದಕ್ಕೆ, ನನಗೆ ದುರ್ಬುದ್ಧಿ ಬಂದು ಇಷ್ಟೆಲ್ಲ ಅವಘಡಕ್ಕೆ ಕಾರಣವಾಗಿರಬಹುದು. ದಯವಿಟ್ಟು ನೀವಿಬ್ಬರೂ ನನ್ನನ್ನು ಕ್ಷಮಿಸುತ್ತೀರಲ್ವಾ?” ಎಂದು ಬೇಡಿ ಬೇಡಿ ಅಳುತ್ತಾನೆ.
ನೆಚ್ಚಿನ ಗೆಳೆಯ ನಡೆದದ್ದಕ್ಕೆ ಇಷ್ಟೊಂದು ವ್ಯಥೆಪಡುತ್ತಿದ್ದಾನೆ ಅವನನ್ನು ಕ್ಷಮಿಸಿ ಸಂತೈಸಬೇಕೆಂದು ಪ್ರೀತಿಯ ಹೃದಯ ಮಿಡಿದರೂ, ಈ ಪರಿಸ್ಥಿತಿಯಲ್ಲಿ ಗಂಡನೆದುರಿಗೆ ಹೇಗೆ? ಎಂದು ಸುಮ್ಮನಾಗುತ್ತಾಳೆ. ಸಂಪತ್‌ನ ಹೃದಯವಿಶಾಲತೆ ಹೆಂಡತಿಯ ಮೇಲಿನ ಅಗಾಧ ಪ್ರೇಮ ಸಂತೋಷ್‌ನ ತಪ್ಪನ್ನು ಮನ್ನಿಸುವಂತೆ ಮಾಡುತ್ತದೆ.
–ವರದೇಂದ್ರ ಕೆ.
ಮುಂದುವರೆಯುವುದು…
[…] ಇಲ್ಲಿಯವರೆಗೆ […]